ಬುದ್ಧನಾಗಲು ಹೊರಟವನು..!

 

 

 

 

 

 

 

ಪುಟ್ಟಾರಾಧ್ಯ. ಎಸ್ 

 

ಮುನ್ನುಡಿ: ಕಾರಂತಜ್ಜಾರ ಬೆಟ್ಟದ ಜೀವ ಓದಿ ಮೂರ್ನಾಲ್ಕು ದಿನ ಬೆಟ್ಟದ ಜೀವವನ್ನು ನೆನೆಯುತ್ತಾ, ನಂತರ ಮರಳಿ ಮಣ್ಣಿಗೆ ಓದಿ ಅಜ್ಜಾರ ಬರಹದ ಸವಿಯನ್ನುಂಡಿದ್ದೆ. ಇಂತಹ ಕಡಲ ಜೀವಗಳು, ಬೆಟ್ಟದ ಜೀವಗಳು ನೂರಾರು ಇವೆ ಎಂದು ಅನಿಸಿದ್ದು ೨೦೧೦ ರ ಅಸುಪಾಸಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಬೈಫ್ ಸಂಸ್ಥೆಯ ವಾಲಂಟೀರ್ ಆಗಿ ಸೇರಿದ್ದಾಗ.

ಸುವರ್ಣ ಸಂಕಲ್ಪ ಯೋಜನೆಯ ಕುಟುಂಬಗಳನ್ನು ಭೇಟಿ ಮಾಡಿ ವರದಿ ಮಾಡುವ ಅವಕಾಶ ಸಿಕ್ಕಾಗ ಚಿತ್ರದುರ್ಗ, ತುಮಕೂರು, ಮೈಸೂರು, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳನ್ನು ಸುತ್ತಿ ನೂರಾರು ರೈತ ಕುಟುಂಬಗಳನ್ನು ಭೇಟಿ ಮಾಡಿದ್ದೆ. ಇಂತಹ ಅನೇಕ ರೈತ ಕುಟುಂಬಗಳು ತೋರಿದ ಪ್ರೀತಿ ಬಲು ಮಧುರ . ಹಾಗೆ ಅಲೆಯುತ್ತಿದ್ದಾಗ ಚಿತ್ರದುರ್ಗದ ಆಸುಪಾಸಿನಲ್ಲಿ ಭೇಟಿ ಮಾಡಿದ ಮಂಜಪ್ಪನವರು , ಪದ್ಮಕ್ಕಾ ಮತ್ತು ನಿಂಗಜ್ಜಿಯರನ್ನೆಲ್ಲ ಸೇರಿಸಿ ಬರೆದದ್ದೆ “ವಿಂಡ್ ಮಿಲ್ ಮೋಕ್ಷ” . ಇದು ಪೂರ್ತಿ ಸತ್ಯವೂ ಅಲ್ಲದ ಹಾಗೆಯೇ ಪೂರ್ತಿ ಕಥೆಯೂ ಅಲ್ಲದ ಒಂದು ಬರಹ.

—-

ಡಿಸೆಂಬರ್ ತಿಂಗಳು, ಮಧ್ಯಾಹ್ನ. ಬುದ್ಧನೇ ಮೈಮೇಲೆ ಬಂದಾಂತಾಗಿ ಎದ್ದ ಆನಂದ ತನ್ನ ಹಳೆಯ ಬುಲೆಟ್ ಎತ್ತಿಕೊಂಡು ಬ್ಯಾಕ್ ಪ್ಯಾಕ್ ಹಾಕಿ ಹೊರಟದ್ದು ಗೊತ್ತು ಗುರಿಯಿಲ್ಲದ ಊರ ಕಡೆಗೆ. ಬುದ್ದನಾಗಲು ಹೊರಟಿದ್ದವನಿಗೆ ಚಹಾದ ಹುಚ್ಚು ಇನ್ನೂ ಹೋಗಿರಲಿಲ್ಲ. ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಮುನ್ನೂರು ಕಿಲೋಮೀಟರ್ ಬಂದಿದ್ದಿರಬಹುದು, ಚಹಾ ಕುಡಿಯಲು ಗಾಡಿ ರಸ್ತೆ ಬದಿಗೊತ್ತಿಸಿದ, ಚಿತ್ರದುರ್ಗದ ಆಸುಪಾಸಿರಬೇಕು.

ಚಹಾ ಕುಡಿಯುತ್ತಾ ಎಡಕ್ಕೆ ತಿರುಗಿದವನಿಗೆ ದೂರದಲ್ಲಿ ಕಂಡದ್ದು ವಿಂಡ್ ಮಿಲ್‍ನ ಬೃಹತ್ ಗಾತ್ರದ ರೆಕ್ಕೆಗಳು. ದಾರಿ ಗೊತ್ತಿಲ್ಲದೆ ಬಂದವನಿಗೆ ಗುರಿಯೇನಿದೆ!?, ಸರಿ ಎಂದು ಗುಡ್ಡದ ಕಡೆ ಬೈಕ್ ಚಲಾಯಿಸಿದ. ಗಂಟೆ ಗಟ್ಟಲೆ ಸಾಗಿದರೂ ಹತ್ತಿರ ಬಂದಂತಾಗಲಿಲ್ಲ. ರಸ್ತೆಯಲ್ಲಿ ಒಂದು ನರಪಿಳ್ಳೆಯೂ ಕಾಣದೆ ಗಾಡಿ ಮುನ್ನಡೆಸಿದ.

ಸ್ವಲ್ಪ ದೂರವಾದ ಮೇಲೆ ಟಾರ್ ರಸ್ತೆ ಮುಗಿದು ಮಣ್ಣು ರಸ್ತೆ ಕಂಡಿತು. ಗುರಿಯಿಲ್ಲದೆ ಹೊರಟವನಿಗೆ ರಸ್ತೆಯಾದರೇನು ಮಣ್ಣಾದರೇನು! ಹಾಗೆಯೇ ಮುಂದೆ ಹೋಗುತ್ತಾ ವಿಂಡ್ ಮಿಲ್ ಹತ್ತಿರವಾಗತೊಡಗಿತು. ಮತ್ತೊಂದಿಷ್ಟು ದೂರ ಹೋದ ಮೇಲೆ ಕಂಡದ್ದು ಮಾಮೂಲಿ ರಸ್ತೆ ಹೋಗಿ ಕಲ್ಲಿನಿಂದ ತುಂಬಿ ಹೋಗಿದ್ದ ಸೀಳುದಾರಿ.

ಬುಲೆಟ್ ಆದ್ದರಿಂದ ಬೈಕ್ ಚಲಾಯಿಸಲು ಇವನಿಗೇನು ಕಷ್ಟವೆನಿಸಿರಲಿಲ್ಲ. ಸೂರ್ಯ ಪಶ್ಚಿಮಕ್ಕೆ ಮುಳುಗಿ ಬೆಟ್ಟದ ಹಿಂದೆ ಹೋದದ್ದರಿಂದ ಕತ್ತಲು ಆವರಿಸುತ್ತಿತ್ತು.

ಗಾಡಿಯ ಬೆಳಕು ಹೊತ್ತಿಸಿ ಮುನ್ನಡೆದವನಿಗೆ ಇನ್ನು ಮುಂದೆ ದಾರಿ ಕಾಣಿಸಲಿಲ್ಲ, ಬೈಕ್ ನಿಲ್ಲಿಸಿ ಸುತ್ತಲೂ ನೋಡಿದ. ಅಲ್ಲಿಯೇ ಬಲಕ್ಕೆ ಸ್ವಲ್ಪ ದೂರದಲ್ಲಿ ದೀಪ ಉರಿಯುತ್ತಿತ್ತು, ಇದ ಕಂಡು ಆನಂದನಿಗೆ ಸ್ವಲ್ಪ ನಿರಾಳವಾಗತೊಡಗಿತು.

ಅದೊಂದು ಸಣ್ಣ  ದೇವಸ್ಥಾನ, ಇವನು ಎಂದು ನೋಡಿರದ ದೇವರ ಮೂರ್ತಿ ಅಲ್ಲಿತ್ತು. ಜನ ತುಂಬಿರುವ ದೇವಸ್ಥಾನಗಳನ್ನು ಆನಂದ ಎಂದೂ ಇಷ್ಟಪಟ್ಟವನಲ್ಲ. ಆದರೆ ಅಲ್ಲೇಕೊ ಬಹಳ ಶಾಂತವೆನೆಸಿತು. ಬೈಕ್ ಇಳಿದು ಹತ್ತಿರ ಹೋದವನಿಗೆ ಕಂಡದ್ದು, ಬಾಳೆಹಣ್ಣಿನ ರಸಾಯನ, ಕಡುಬು ಮತ್ತು ಹಿಡಿ ಮೊಸರನ್ನ.

ಸುತ್ತಲೂ ನೋಡಿದ, ಸ್ವಲ್ಪ ದಣಿದಿದ್ದರಿಂದ ಹೊಟ್ಟೆ ಹಸಿವಾಗಿತ್ತು. ಆದ್ದರಿಂದ ಸುತ್ತಲೂ ನೋಡಿ ಯಾರು ಕಾಣದೆ ದೇವರ ಪ್ರಸಾದವೆಂದು ತಿಳಿದು ಹೊಟ್ಟೆ ತುಂಬಾ ತಿಂದು ಮುಗಿಸಿದ. ಅಲ್ಲಿಯೇ ನೀರಿನ ಸರ ಹರಿಯುತ್ತಿತ್ತು. ಚಂದಿರನ ಬೆಳಕಿಗೆ ನೀರು ಹೊಳೆಯುತ್ತಿದ್ದರಿಂದ ಸರಾಗವಾಗಿ ನೀರಿನಲ್ಲಿ ಕೈತೊಳೆದು ಬಾಯಿಗೆ ತುಂಬಿಕೊಂಡು ಚೆಂದವೆನಿಸಿ ಮನಸೋ ಇಚ್ಛೆ ನೀರು ಕುಡಿದ.

ನಂತರ ಎದ್ದವನೇ ದೇವಸ್ಥಾನದ ಹಿಂದೆ ನೋಡಿ, ಸುಮ್ಮನೆ ಯೋಚಿಸುತ್ತಾ ಮುನ್ನಡೆದ ಶಂಕರನಿಗೆ ದೂರದಲ್ಲೇನೋ ಎರಡು ಬೆಳಕು ಕಂಡು ಅಲ್ಲಿಯೇ ನಿಂತ. ಯಾರೋ ಮನುಷ್ಯ ಎಂದು ತಿಳಿದು ಹಾಗೆಯೇ ನಿಂತವನಿಗೆ ಕಂಡದ್ದು ಬೆಳಕು ಇವನ ಕಡೆ ಚಲಿಸುತ್ತಿರುವುದು. ಬರು ಬರುತ್ತಾ ಬೆಳಕು ವೇಗವಾಗಿ ಚಲಿಸತೊಡಗಿತ್ತು, ಗೊತ್ತಾಗದೆ ನಿಂತಿದ್ದವನಿಗೆ ಅದೇ ಬೆಳಕು ಬಂದು ಹಠಾತ್ತನೆ ಗುದ್ದಿತ್ತು. ನೋವಿಗೆ ಆನಂದ ಜೋರಾಗಿ ಅರಚಿದ್ದ. ಆಗ ಅಲ್ಲಿಯೇ ಎಲ್ಲೋ ಇದ್ದ ವ್ಯಕ್ತಿಯೋರ್ವರು ಓಡಿ ಆನಂದನ ಕಡೆಗೆ ಬಂದಿದ್ದರು.

ದೇವಸ್ಥಾನದ ಪೂಜೆ ಮುಗಿಸಿ, ತೋಟ ಸುತ್ತುತ್ತಿದ್ದ ಮಂಜಪ್ಪನವರು ಆನಂದನನ್ನು ಮೇಲಕ್ಕೆತ್ತಿ ನೋಡಿ ಮಾತನಾಡಿಸಿದಾಗ ತಿಳಿದಿದ್ದು ಅದು ಕಾಡ ಹಂದಿಯೆಂದು. ಅಷ್ಟೇನೂ ಪೆಟ್ಟು ಬೀಳದ ಕಾರಣ ಆನಂದ ಸ್ವಲ್ಪ ಸುಧಾರಿಸಿಕೊಂಡು ಮಂಜಪ್ಪನವರ ಜೊತೆ ನಡೆಯತೊಡಗಿದ. ಹಾಗೆ ಹೋದವನಿಗೆ ಹತ್ತಾರು ಮನೆಗಳು ಕಂಡು ಯಾವುದೋ ಹಳ್ಳಿಯೊಳಗೆ ಬಂದಿರುವುದು ಖಚಿತವಾಯಿತು. ಆದದ್ದೆಲ್ಲ ಆಯಿತು, ಬೈಕ್ ದೇವಸ್ಥಾನದ ಬಳಿಯೇ ಇರಲಿ ಎಂದು ತಿಳಿಸಿ ಆನಂದನಿಗೆ ಅಲ್ಲಿಯೇ ತಂಗಿದ್ದು ಬೆಳಗ್ಗೆ ಹೊರಡಲು ಮಂಜಪ್ಪನವರು ಕೇಳಿಕೊಂಡಾಗ ಆನಂದನ ಬಳಿ ದಾರಿಯೇ ಉಳಿದಿರಲಿಲ್ಲ. ಮನೆ ತಲುಪಿ ಮಂಜಪ್ಪನವರ ಪತ್ನಿ ಪದ್ಮಕ್ಕನವರ ಪರಿಚಯವಾಗಿ ಹಠಾತ್ತನೆ ಬಂದ ಅತಿಥಿಯ ಜೊತೆ ತಡರಾತ್ರಿಯವರೆಗೆ ಮಾತುಕತೆ ಮುಂದುವರೆದಿತ್ತು.

ಬೆಚ್ಚನೆ ಹೊದಿಕೆಯಲಿ ಕಣ್ಮುಚ್ಚಿ ಕಣ್ತೆಗೆದು ಕೊರೆವ ಚಳಿಯೊಂದಿಗೆ ಕಣ್ಣಮುಚ್ಚಾಲೆ ಆಡುತ್ತಿದ್ದ ಆನಂದನಿಗೆ ಪೂರ್ಣ ಎಚ್ಚರವಾದದ್ದು ಪದ್ಮಕ್ಕ ಮನೆಯಲ್ಲೆ ತಡ ಹೊತ್ತಿನವರೆಗೂ ಮಲಗಿದ್ದ ಅವಳ ಗಂಡನಿಗೆ ಪ್ರೀತಿಯಿಂದ ಮಂಜು-ಮರಿ ಅಂತ ಅಲ್ಲೇ ಪಡಸಾಲೆಯಲ್ಲಿ ಮಲಗಿರುವವರಿಗೆಲ್ಲರಿಗೂ ಕೇಳಿಸೋ ಹಾಗೆ ಕೂಗಿದಾಗ ! ಯಾರು ಹೇಳಿದ್ದು ಹಳ್ಳಿಗಳಲ್ಲಿ ಗಂಡ-ಹೆಂಡತಿಯರು ಪ್ರೀತಿ ತೋರ್ಪಡಿಸೋದು ಕಡಿಮೆಯೆಂದು.

ಮಂಜಪ್ಪನವರ ಹೆಸರು ಹೆಂಡತಿಯ ಬಾಯಿಯಿಂದ ಮಂಜು ಮರಿ ಎಂದು ಕೇಳಿದಾಗ ಆದ ಪ್ರೀತಿಯ ದರ್ಶನ, ಕೋಟಿ-ಕೋಟಿ ಸುರಿದು ಮಾಡಿದ ಸಿನಿಮಾಗಳಲ್ಲೂ ಇವ ಕಂಡಿರಲಿಲ್ಲ. ಇನ್ನೂ ಅರಿಯದ ನಿದ್ದೆಯ ಮಂಪರಿನ ಆಕಳಿಕೆಯ ನೆಪದಲ್ಲಿ ಲೀಟರ್ ಗಟ್ಟಲೆ ಗಾಳಿಯ ಒಳ ಎಳೆದು, ಹೊರ ದಬ್ಬಿ ಹೊರ ನಡೆದವನಿಗೆ ಕಂಡದ್ದು ಪದ್ಮಕ್ಕನ ಮನೆ ಮುಂದಿರುವ ಅಂದದ ರಂಗೋಲಿ.

ಬಾಗಿಲು ಸಾರಿಸಿ, ಮನೆ ಮುಂದೆ ಇರೋ ಹೂಗಿಡಗಳಲೆರೆಡು ಹೂ ಕಿತ್ತು ರಂಗೋಲಿಗೆ ಮುಡಿಸಿ, ಹೊಸಲಿಗೆ ಅರಿಶಿನ ಕುಂಕುಮ ಅಲಂಕರಿಸಿ, ಅಲ್ಲೇ ದೂರದಲ್ಲಿದ್ದ ಆಕಳುಗಳ ಬಳಿ ಹೊರಡುವ ತವಕದಲ್ಲಿದ್ದ ಪದ್ಮಕ್ಕ ನನ್ನ ಕಂಡೊಡನೆ ಇಲ್ಲೇ ಕೂತಿರು ಮಗ ಹಿಂಗ್ ಹೋಗಿ ಹಂಗ್ ಬಂದ್ಬಿಡ್ತಿನಿ ಅಂದವಳೇ ಮುಗುಳ್ನಕ್ಕು ಹೊರಟು ಹೋದಳು.

ಒಣ ಮಣ್ಣಿಗೆ ಹಸಿ ನೀರು ತಗುಲಿದ್ದರಿಂದ ಸುವಾಸನೆ ಮೂಗಿಗೆ ಗಮ್ಮೆಂದು ಬಡಿದಿತ್ತು. ಅಲ್ಲಿಯೇ ಜಗುಲಿಯ ಮೇಲೆ ಕುಳಿತ. ಪದ್ಮಕ್ಕ ಒಂದಲ್ಲ ಎರಡಲ್ಲಾ , ಸಾಕಿ ಉಳಿಸಿರೋ ಆಕಳಿನ ಸಂಖ್ಯೆಯ ಇಂದಿಗೂ ಹತ್ತಾರು.

ಹೆತ್ತ ಮಕ್ಕಳೊಂದು ಕಡೆಯಾದರೆ ಅವಳಿಗೆ ಇವು ಒಂದು ಕಡೆ. ಆಕಳಿಗೊಂದುಂದು ಹೆಸರು, ಒಂದೊಂದರ ಹೆಸರು ಕರೆದಾಗಲೂ ತಲೆಯೆತ್ತಿ ನೋಡುವ ಆಕಳುಗಳು. ಒಣ ಮೇವಿದ್ದರೂ, ಎಲ್ಲಿಂದಲಾದರೂ ಹಸಿ ಮೇವು ತಂದು ಹಾಕಬೇಕೆಂದು ಹಂಬಲಿಸುವ ಇವಳ ಮನಸ್ಸು ವಿಶಾಲ.

ಮನೆ ಒಳಗೆ ಕೂತು ಒಲೆ ಉರಿಸುವುದಕ್ಕಿಂತ ಕಾಡು ಸುತ್ತಿ ಈ ಆಕಳುಗಳ ಹೊಟ್ಟೆ ತುಂಬಿಸುವದರಲ್ಲೇ ಇವಳಿಗೆ ಹೆಚ್ಚು ಸಮಾಧಾನ ಮತ್ತು ಖುಷಿ. ದಿನ ಕಳೆದಂತೆ ವಯಸ್ಸೇನು ಬರುವುದೇ, ಹಾಗಾಗಿ ಮನಸಲ್ಲಿ ಉತ್ಸಾಹವಿದೆ ಆದರೆ ಮುಖದಲ್ಲಿ ವಯಸ್ಸಿನ ಗೆರೆಗಳು. ಯೆಚ್ ಯೆಫ್ ಜೆರ್ಸಿ ಹಸುಗಳ ಹಾವಳಿಯಲ್ಲಿ, ಇಲ್ಲಿ ಎಲ್ಲವೂ ನಾಟಿ ಆಕಳುಗಳೆ ಆದ್ದರಿಂದ ಇರುವುದರಲ್ಲಿ ಕೆಲಸ ಸುಲಭವೇ. ಅವಳ ಕೊಟ್ಟಿಗೆಯಲ್ಲಿರುವ ಎರಡು ಎಮ್ಮೆಗಳಿಗೆ ಸಾಟಿಯಾವುದಿಲ್ಲ. ಮನೆ ಮಂದಿಯೆಲ್ಲ ಕುಡಿದು ಸಾಕಾಗುವಷ್ಟು ಹಾಲು, ಮೊಸರು, ತುಪ್ಪ, ಬೆಣ್ಣೆ ಎಲ್ಲವೂ.

ಮಿಕ್ಕಿದ್ದು ನಂದಿನಿ ಡೈರಿಗೆ ಸೇರಿ ತಿಂಗಳ ಕೊನೆಯಲ್ಲಿ ಮುಂದಾಗುವ ಮೊಮ್ಮಕ್ಕಳ ಕೈಗಿಡಲು ಎರಡು ಬಿಡಿಗಾಸು. ನಂಬಿಕೆ ಇದ್ದರೂ ಮನೆಯಲಿ ಕೈ ಮುಗಿಯುವುದು ಅಷ್ಟಕ್ಕಷ್ಟೇ, ದಾರಿಯಲಿ ಕಂಡ ದೇವಸ್ಥಾನಗಳಿಗೆ ಕೈ ಮುಗಿಯುತ್ತಾ ಕಾಯಕವೇ ಕೈಲಾಸ ಎಂದು ನಂಬಿ ತನಗಿರುವ ಎರಡು ಹೆಣ್ಣು ಮಕ್ಕಳಿಗೆ ಯಾವುದೇ ಕಾಯಿಲೆ ಕಸಾಲೆ ಬರದೇ ಸುಖವಾಗಿದ್ದರೆ ಸಾಕೆನ್ನುವಷ್ಟು ಸರಳ .

ಮಂಜಪ್ಪನವರು ಸರಿ ಸುಮಾರು ಅರವತ್ತರ ಅಸುಪಾಸಿನ ಅಪ್ಪಟ ರೈತ. ದೊಡ್ಡ ಕುಟುಂಬ, ಆರೇಳು ಅಣ್ಣ-ತಮ್ಮಂದಿರು. ಅಣ್ಣ-ತಮ್ಮಂದಿರು ಕೆಲಸಕ್ಕೆಂದು ಪಟ್ಟಣ ಸೇರಿದರೆ ಇವರೊಬ್ಬರು ಮಾತ್ರ ಊರಿನಲ್ಲಿಯೇ ಉಳಿದು ವ್ಯವಸಾಯದ ಹಾದಿ ಹಿಡಿದವರು. ಭೂಮಿಯ ಬೆಲೆಯು ಇನ್ನೂ ಸಾವಿರಗಳಲ್ಲಿದಾಗಲೇ ಪೈಪೋಟಿಯ ಮೇಲೆ ಹತ್ತಾರು ಎಕರೆ ಆಸ್ತಿ ಕೊಂಡು ಅಷ್ಟು ಜಮೀನಿನಲ್ಲಿ ನೆಲ ಗುದ್ದಿ ನೀರು ತೆಗೆದಿದ್ದ ಸಾಹಸಿ ರೈತ.

ವರುಷಗಳಾದಂತೆ ಇವರಿಗೆ ಅತ್ಯಮೂಲ್ಯವಾದ ಕೃಷಿ ಇವರ ಅಣ್ಣ-ತಮ್ಮಂದಿರಿಗೆ ಬೇಡವೆನಿಸಿದ್ದು ನಗರದಲ್ಲಿ ಅವರಿಗಿದ್ದ ಉತ್ತಮ ಹಣಕಾಸಿನ ವ್ಯವಹಾರವೇ ಸರಿ. ಮಳೆ ಕಡಿಮೆಯಾದಂತೆ ತೋಟಗಳು ಒಣಗಿ ಮಂಜಪ್ಪನವರ ಆತ್ಮವಿಶ್ವಾಸವೇ ಕುಗ್ಗಿ ಹೋದಂತಾಗಿ ಬಂದದ್ದು ಬರಲಿ ಎಂದು ಬೆಳಿಗ್ಗೆ ಎದ್ದವರೇ ಶಿವನಿಗೆ ನಮಸ್ಕಾರ ಮಾಡಿ ಹೊಲದ ಕಡೆ ಹೋಗುವುದು ಅಭ್ಯಾಸವಾಗಿ ಹೋಗಿದೆ.

ನನ್ನೆರಡೂ ಹೆಣ್ಮಕ್ಕಳ ಮದುವೆಯಾದರೆ, ನನಗೆ ಬೇಕಾದದ್ದಾರು ಏನಿದೆ ಎಂಬ ತಾತ್ಸಾರ ಮನೋಭಾವನೆ ಮೂಡಿರುವುದು ಸುಳ್ಳಲ್ಲ. ಬೇರೆಯವರು ಇವರ ಮೆಚ್ಚಿ ಇವರ ಕೈ ಜೋಡಿಸಿ ಸಹಾಯ ಮಾಡಿದರೂ, ಅಣ್ಣ-ತಮ್ಮಂದಿರ ಸಹಾಯ ಸಿಗಲಿಲ್ಲವಲ್ಲ ಎಂದು ಚಿಂತಿಸಿದ್ದೆ ಹೆಚ್ಚೇನೂ. ಇಂದಿಗೂ ಮಂಜಪ್ಪನವರು ಪಟ್ಟಣದಿಂದ ವಸ್ತುಗಳನ್ನು ಕೊಳ್ಳುವುದು ಅಷ್ಟಕ್ಕಷ್ಟೇ. ಬೇಕಾದುದ್ದನ್ನು ತೋಟದಲ್ಲಿಯೇ ಬೆಳೆದು ರೂಢಿ. ಅಕ್ಕಿ, ರಾಗಿ, ಬೇಳೆ, ಕಾಯಿ ಹೀಗೆ ಹತ್ತಿಪ್ಪತ್ತು ತರಕಾರಿಗಳು ಸದಾ ತೋಟದಲ್ಲಿರುತ್ತವೆ.

ಕಡೆಗೆ ಅಡುಗೆ ಎಣ್ಣೆಯನ್ನು ಮನೆಯಲ್ಲೇ ಇರುವ ಕೋಲ್ಡ್ ಪ್ರೆಸ್‍ನಿಂದ ತಯಾರಿಸಿಕೊಳ್ಳುವುದು ಅಭ್ಯಾಸವಾಗಿ ಹೋಗಿದೆ. ಹಣವಿದ್ದಾಗ ಹತ್ತಿರದ ಪಟ್ಟಣಕ್ಕೋಗಿ ಬೆಣ್ಣೆ ದೋಸೆ ತಿಂದದ್ದಕ್ಕಿಂತ ಅಲ್ಲಿರುವ ತಹಶೀಲ್ದಾರರ, ಸೆಕ್ರೆಟರಿಗಳ ಜೇಬು ತುಂಬಿಸಿದ್ದೇ ಹೆಚ್ಚು. ಅಂದಿನ ಆಸ್ತಿಯ ವಿವರಗಳು ಸರಿಯಿಲ್ಲದೆ ಅವುಗಳನ್ನ ಸರಿ ಮಾಡಿಸಲು ಪಟ್ಟಣಕ್ಕೆ ಅಲೆದಿದ್ದೆ ಜಾಸ್ತಿ. ಇವರ ಗೋಳು ನೋಡಿ ಪದ್ಮಕ್ಕ, ಗಂಡು ಮಕ್ಕಳಿಲ್ಲದ ಮನೆಗೆ ಆಸ್ತಿಯ ಚಿಂತೆಯೇಕೆ ಎಂದಾಗ, ಕಾಳಿ ಮೈ ಮೇಲೆ ಬಂದವರಂತೆ, ಗಂಡು ಮಕ್ಕಳು ಯಾಕೆ ಬೇಕು, ಈ ನನ್ನೆರಡೂ ಹೆಣ್ಮಕ್ಕಳೇ ಸಾಕು ಎಂದು ಎದೆ ತಟ್ಟಿ ಹೇಳುವಾಗ ಅನಿಸಿದ್ದು ಹೆಣ್ಮಕ್ಕಳಿಗೆ ಅಪ್ಪನೇ ಮೊದಲ ಹೀರೋ ಎಂದು.

ಇಬ್ಬರೂ ಮಕ್ಕಳು ಓದುತ್ತಿರುವ ಕಾರಣ ವಾರಾಂತ್ಯದಲ್ಲಿ ಅಥವಾ ಹಬ್ಬ, ಹರಿದಿನಗಳಲ್ಲಿ ಮನೆಗೆ ಬಂದಾಗ ಮತ್ತೆ ಜೀವ ಚಿಗುರೊಡೆದು, ಮಕ್ಕಳ ಮುಂದಿನ ಸುಖವ ನೋಡುವ ಬಯಕೆಯಿಂದ ಮತ್ತಿಪ್ಪತ್ತು ವರ್ಷ ಬದುಕುವ ಆಸೆಯಾಗಿ ತೋಟದಲ್ಲಿ ಎರಡು ಗಂಟೆ ಹೆಚ್ಚು ಕೆಲಸ ಮಾಡಿ ಹಳೆ ಮನೆಯ ಕೆಡವಿ ಹೊಸ ಮನೆಯ ಕಟ್ಟುವಾಸೆಯಾಗಿ ತಡರಾತ್ರಿಯವರೆಗೂ ಸವಿ ಮಾತನಾಡುತ್ತಾ ನೆಮ್ಮದಿಯ ನಿದ್ದೆ ಮಾಡುವ ಮಂಜಪ್ಪನವರ ನೆನೆದರೆ ಬರುವುದು ಕುಷ್ವಂತ್ ಸಿಂಗ್‍‍‍‍‍‍‍ರವರು ಉಲ್ಲೇಖಿಸಿರುವ ‘ದ ಬುಲ್ ಬಿನಿತ್ ದ ಅರ್ತ್’ ಎಂಬ ಕತೆಯ ನಾಯಕ.

 

 

ಜಗುಲಿಯ ಮೇಲೆ ಕೂತು ಯೋಚಿಸುತ್ತಿದ್ದ ಆನಂದನಿಗೆ ಕಂಡದ್ದು ಮಂಜಪ್ಪನವರ ತಾಯಿ. ನಿಂದು ಯಾವೂರು ಮಗ ಎಂದು ಪ್ರೀತಿಯಿಂದ ಅಜ್ಜಿ ಕೇಳಿದ್ದು, ಅವನಿಗೆ ಅಮ್ಮನ ನೆನಪಾಯಿತು. ಅಜ್ಜಿಗೆ ವಯಸ್ಸು ಎಂಭತ್ತೈದಾದರು ಇಂದಿಗೂ ಅದೇ ಗಟ್ಟಿತನ. ಕೈಕಾಲು ಸರಿ ಇದ್ದರೆ ಯಾರ ಹಂಗಿಲ್ಲದೆ ಬದುಕಿ ತೋರಿಸುತ್ತೇನೆ ಎನ್ನುವ ಅಚಲ ಮನೋಭಾವ. ಮಂಜಪ್ಪನವರ ತಾಯಿ ಅಸಾಮಾನ್ಯ ಸ್ವಾಭಿಮಾನಿ. ನನ್ನ ಕೈ ಕಾಲು ನಿಲ್ಲುವವರೆಗೂ ನನ್ನ ಕೆಲಸ ಕಾರ್ಯ ನಾನೇ ಮಾಡುವೆ ಎಂದು ಮಗನಿಗೆ ತಾಕೀತು ಮಾಡಿ ಮನೆಯ ಸ್ವಲ್ಪ ದೂರದಲ್ಲೇ ತೋಟದ ಒಳಗೆ ಅವಳ ಗುಡಿಸಲು ಮಾಡಿಸಿಕೊಂಡು ಬದುಕು.

ಅವಳಿಗೊಂದು ನಾಟಿ ಆಕಳು ಮಾತನಾಡಲು. ಮಂಜಪ್ಪನವರು ಇದಕ್ಕೆ ಅಭ್ಯಂತರ ಮಾಡಿದವರಲ್ಲ, ಬೇಜಾರಾದಾಗ ಅಮ್ಮನ ಗುಡಿಸಲಿಗೆ ಹೋಗಿ ಊಟ ಮಾಡಿ ಗುಡಿಸಲ ಮುಂದಿನ ಜಗುಲಿಯ ಮೇಲೆ ಮಲಗುವುದೂ ಉಂಟು. ಪದ್ಮಕ್ಕನು ಆಗಾಗ್ಗೆ ಹೋಗಿ ಅತ್ತೆಗೆ ಸಹಾಯ ಮಾಡುವುದು ಉಂಟು. ಆನಂದನು ಉತ್ತರಿಸುವ ಮೊದಲೇ, ಇಲ್ಲಿ ಬಾ ಎಂದು ಗುಡಿಸಲಿನ ಬಳಿ ಕರೆದೊಯ್ದ ಅಜ್ಜಿ ತೋರಿದ್ದು ಬಚ್ಚಲನ್ನ. ಸ್ನಾನ ಮಾಡದೆ ಇರುವುದನ್ನು ಗಮನಿಸಿದ ಅಜ್ಜಿ, ಒತ್ತಾಯ ಮಾಡಿ ಗುಡಿಸಿಲಿನ ಹಿಂದೆ ಇರುವ ಬಚ್ಚಲಿಗೆ ನೂಕಿ ಸುಟ್ಟು ಸುಡುವ ನೀರನ್ನು ಒಂದು ತಾಮ್ರದ ಗುಂಡಿಗೆ ಸುರಿದು ಸೀಗೆಕಾಯಿ ಬಟ್ಟಲ ನೂಕಿ, ಬೇಗ ಬಂದು ಬಿಡು, ರೊಟ್ಟಿ ಹಾಕಿರುವೆ ಎಂದು ಹೋದಾಗ ಅವನಿಗನ್ನಿಸಿದ್ದು ಹೋದ ಜನ್ಮದಲ್ಲೇನಾದರು ನಾನು ಇವರ ಮಗನಾಗಿದ್ದೆನೆ ಎಂದು.

ಮೈ ಒರೆಸಿ ಬಿಸಿಲಿಗೆ ಮುಖ ಮಾಡಿ ಕೂತವನಿಗೆ ಹಿಂದೆ ಇಂದ ಬಂದ ಅಜ್ಜಿ ಮತ್ತೊಂದು ವಸ್ತ್ರದಿಂದ ತಲೆ ಒರೆಸಿ ಹಣೆಗೆ ವಿಭೂತಿ ಬಳಿದು ಸಾಕ್ಷಾತ್ ಬಸವಣ್ಣನೇ ನೀನು ಎಂದು ಬೆರಳು ಮುರಿದು ದೃಷ್ಟಿ ತೆಗೆದಾಗ ಮೂಕ ವಿಸ್ಮಿತನಾಗಿ ಅವಳ ಮುಖವನ್ನೇ ನೋಡಿದ. ಅಷ್ಟರಲ್ಲಿ ಪದ್ಮಕ್ಕ ಮತ್ತು ಮಂಜಪ್ಪನವರ ಆಗಮನವಾಗಿದ್ದನ್ನು ಕಂಡು ಎಚ್ಚರಗೊಂಡ ಆನಂದ ಮುಗುಳ್ನಕ್ಕ. ನಗುತ್ತಲೇ ಮಂಜಪ್ಪನವರು ಅವರಮ್ಮನ ಗತವೈಭವವನ್ನು ನೆನೆಯುತ್ತಾ ಚಾಪೆ ಹಾಸಿ ಕುಳಿತರು.

ಅವರೇ ಬೆಳೆದಿದ್ದ ರಾಗಿಯಿಂದ ಮಾಡಿದ ರಾಗಿ ರೊಟ್ಟಿ ಮತ್ತು ಆಗ ತಾನೇ ಕಿತ್ತು ಎಣ್ಣೆಗಾಯಿ ಮಾಡಿದ್ದ ಬದನೆಕಾಯಿ ಪಲ್ಯವ ನೋಡಿದ ತಕ್ಷಣವೇ ಅವನಿಗೆ ಬಾಯಲ್ಲಿ ನೀರೂರಿತು. ಅದರ ಜೊತೆ ಪದ್ಮಕ್ಕ ಬಟ್ಟಲಲ್ಲಿ ತಂದಿದ್ದ ಗಟ್ಟಿ ಎಮ್ಮೆ ಮೊಸರು ಬಡಿಸಿ ಅದಕ್ಕೆ ಶೇಂಗಾ ಚಟ್ನಿ ಪುಡಿ ಹಾಕಿಕೊಟ್ಟಾಗ ಆದದ್ದು ಅಮೃತ. ಒಂದು ಕ್ಷಣಕ್ಕೆ ಅವನು ಸ್ವರ್ಗ ನೋಡಿದ್ದಂತು ಸತ್ಯ. ಹೊಟ್ಟೆ ತುಂಬಾ ತಿಂದು ಅಲ್ಲಿನ ಜಗುಲಿಯ ಮೇಲೆ ಮಲಗಿದ ಅವನಿಗೆ ಆದದ್ದು ಜೀವನದ ಅತ್ಯುನ್ನತ ಕ್ಷಣಗಳೊಲ್ಲೊಂದಾದ ಅನುಭವ.

ಮಗುವಿನ ಮನಸ್ಸಿನ ಪದ್ಮಕ್ಕ, ಸಾಹಸಿ ಮಂಜಪ್ಪನವರು, ಸ್ವಾಭಿಮಾನಿ ಮಹಾತಾಯಿ ನಿಂಗಜ್ಜಿಯ ನೆನಪುಗಳನ್ನು ಹೊತ್ತು ವಾಪಸ್ ಹೊರಟಾಗ ಬಯಸಿದ್ದು ಅವರ ಜೀವನದ ಕಾಲು ಭಾಗವನ್ನಾದರೂ ಜೀವಿಸೋಣವೆಂದು. ಬುದ್ಧನಾಗುವ ಯೋಚನೆಯಲ್ಲಿ ನೂರಾರು ಮೈಲಿ ಬಂದು, ಮೋಕ್ಷದ ಹುಡುಕಾಟದಲ್ಲಿ ವಿಂಡ್ ಮಿಲ್ ಅಳವಡಿಸಿದ್ದ ಬೆಟ್ಟದ ಬುಡಕ್ಕೆ ಬಂದಿದ್ದ. ಎಲ್ಲಿಂದಲೋ ಬಂದ ಕಾಡು ಹಂದಿಯು ಇವನ ದೇವಾರಾಗಿ ಹೋಗಿತ್ತು.

ಜೀವನದಲ್ಲಿ ಎಲ್ಲರಿಗೂ ಅಂತಹ ಒಂದು ರಾತ್ರಿಯ ಅನುಭವ ಮತ್ತೆ ಬೆಳಗಿನ ಬದುಕು ಸಿಗಲಿ ಎಂದು ಆಶಿಸಿದ. ಬುದ್ಧನಾಗುವ ಯೋಚನೆ ಬಿಟ್ಟು ಜೀವನವನ್ನ ಸವಿಯಲು ಸಾಧ್ಯವಾದರೆ ಮತ್ತೊಮ್ಮೆ ಬದುಕಲು ಬೈಕ್ ಸ್ಟಾರ್ಟ್ ಮಾಡಿದ.

‍ಲೇಖಕರು AdminS

September 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: