ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಟಿ ಶಿವಪ್ರಸಾದ್ ಕೇಳ್ತಾರೆ: ಬುದ್ದಗಯಾ ದಾಳಿಗೆ ಯಾಕೆ ಪ್ರತಿಭಟನೆ ನಡೆಸಬೇಕು?

ನಾಗರಾಜ್ ಹೆತ್ತೂರ್

ಈಚೆಗೆ ಅರಕಲಗೂಡಿನ ಗ್ರಾಮವೊಂದರಲ್ಲಿ ದಲಿತರನ್ನು ದೇವಸ್ಥಾನಕ್ಕೆ ಸೇರಿಸಲಿಲ್ಲ. ಈ ಬಗ್ಗೆ ದಲಿತರಿಗೆ ಬಹಿಷ್ಕಾರ ಎಂಬಂತೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಕೆಲವರು ಇದನ್ನು ಖಂಡಿಸಿದ್ದರು. ಆದರೆ ನನಗೆ ಖಂಡಿಸಲು ಮನಸ್ಸು ಬರಲಿಲ್ಲ. ಬದಲಾಗಿ ದೇವಸ್ಥಾನಕ್ಕೆ ಪ್ರವೇಶ ಬೇಕು ಎಂದ ದಲಿತರ ಮೇಲೆಯೇ ಕೋಪ ಬಂತು. ಇಷ್ಟಕ್ಕೂ ಅಲ್ಲಿ ಪ್ರವೇಶ ಇಲ್ಲವೆಂದ ಮೇಲೆ ಯಾಕೆ ಹೋಗಬೇಕು…? ಹೋಗಬೇಡಿ ಎಂದು ಮನವಿ ಮಾಡಿದ್ದೆ. ಅದಕ್ಕೆ ನಮ್ಮ ಬೆಂಬಲ ಇಲ್ಲ. ದಲಿತರನ್ನು ದೇವಸ್ಥಾನದಿಂದ ದೂರ ಇಡುವ ದೇವರುಗಳನ್ನು ಹಾಗೂ ಅದಕ್ಕೆ ಕಾರಣರಾದವರನ್ನು ದಲಿತರೇ ದೂರ ಇಡುವ ಮೂಲಕ ಅವರನ್ನೇ ಬಹಿಷ್ಕರಿಸಿ ಎಂದು ಮನವಿ ಮಾಡಿದ್ದೆವು.
ಮೊನ್ನೆ ಬುದ್ದ ಗಯಾದಲ್ಲಿ ಸರಣಿ ಸ್ಪೋಟ ಸಂಭವಿಸಿದಾಗ ಇದೇನಿದು ಹೀಗೆ ಆಯಿತಲ್ಲಾ ಎಂದು ಬೆಚ್ಚಿ ಗೆಳಯ ಸಮತಾ ಸೈನಿಕ ದಳದ ಸತೀಶ್ ಕರೆದುಕೊಂಡು ಗುರುಗಳಾದ ಶಿವಪ್ರಸಾದ್ ಮನೆಯತ್ತ ಓಡಿದೆ. ಸಾರ್ ಬುದ್ದ ಗಯಾದಲ್ಲಿ ಸ್ಪೋಟವಾಗಿದೆ. ಹಿಜ್ಬುಲ್ ಮುಜಾವುದ್ದೀನ್ ಸಂಘಟನೆ ಕೈವಾಡ ಇದೆಯಂತೆ. ಜಗತ್ತಿಗೆ ಶಾಂತಿಮಂತ್ರ ಹೇಳಿದ ಬುದ್ದ ಒಡಲಿಗೆ ಬಾಂಬ್ ಇಟ್ಟಿದ್ದಾರೆ. ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ. ನಾವು ಏನಾದರೂ ಪ್ರತಿಭಟನೆ ಮಾಡಬೇಕು, ಖಂಡಿಸಬೇಕು, ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಒಂದೆ ಸಮನೆ ಹೇಳಿ ನನ್ನ ಆತಂಕ ಕಡಿಮೆ ಮಾಡಿಕೊಂಡೆ.

ನನ್ನತ್ತು ಬೆರಗುಗಣ್ಣಿನಿಂದ ನೋಡಿದ ಕೆ.ಟಿ. `ಮಾಡ್ಕೊಳ್ಳಿ ಬಿಡೋ’ ಎಂದು ತಣ್ಣಗೆ ಪ್ರತಿಕ್ರಿಯಿಸಿ ಸುಮ್ಮನೆ ನಕ್ಕರು.
ಜಗತ್ತೇ ಮುಳುಗಿ ಹೋಯಿತು ಎಂಬಂತಿದ್ದ ನಾನು ಒಂದು ಕ್ಷಣ ಇಳಿದು ಹೋದೆ. ಅಪ್ಪಟ ಬುದ್ದಿಸ್ಟ್ ಆಗಿರುವ ಕೆಟಿ ಯಿಂದ ಅವರಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ.
ಅವರ ಟೇಬಲ್ ಮೇಲಿದ್ದ ನಟರಾಜ್ ಬೂದಾಳು ಬರೆದಿರುವ ನಾಗಾರ್ಜುನನ ಮೂಲಮಾಧ್ಯಮಿಕಕಕಾರಿಗ ಕೃತಿಗೆ ತಾವು ಬರೆದು ಮುನ್ನುಡಿಯ ಭಾಗವನ್ನು ತೆಗೆದು ತೋರಿಸಿ ಇದನ್ನು ಓದಿಕೋ ಎಂದರು
ಅದರಲ್ಲಿ ಹೀಗೆ ಬರೆದಿತ್ತು.
`ಇತ್ತೀಚೆಗೆ ಅಫ್ಗಾನಿಸ್ತಾನದಲ್ಲಿ ಬೋಮಿಯನ್ ಬುದ್ದ ವಿಗ್ರಹವನ್ನು ನಾಶಪಡಿಸಲಾಯಿತು. ಬೌದ್ಧ ಅನುಯಾಯಿಯೊಬ್ಬ ಅದಕ್ಕೆ ತೋರಿಸಬಹುದಾದ ಪ್ರತಿಕ್ರಿಯೆಯನ್ನು ದಾಖಲಿಸುವುದಾದರೆ ಪ್ರಜ್ಞಾಪಾರಮಿತ ಶಾಸ್ತ್ರದ ಸೂತ್ರವೊಂದನ್ನು ಹೀಗೆ ದಾಖಲಿಸಬಹುದು’
ರೂಪದ ಸುತ್ತ ಸುತ್ತುವಾತನಿಗೆ ಕುರುಹಿನ ಚಿಂತೆ
ರೂಪವೇ ಕುರುಹಿನ ಎಂದಾತನಿಗೂ ಕುರುಹಿನ ಚಿಂತೆ
ರೂಪದ ಉದಯವ ಸುತ್ತುವಾತನಿಗೆ ಕುರುಹಿನ ಚಿಂತೆ
ರೂಪದ ಭಂಗದ ಸುತ್ತ ಸುತ್ತುವಾತನಿಗೆ ಕುರುಹಿನ ಚಿಂತೆ
ರೂಪ ವಿರೂಪ ಮಾಡಬಲ್ಲಾತನಿಗೆ ಮತ್ತೆ ಕುರುಹಿನ ಚಿಂತೆ
ರೂಪ ಶೂನ್ಯವೆಂದಾತನಿಗೆಯೂ ಮತ್ತೆರ ಕುರುಹಿನ ಚಿಂತೆ
ನಾನೇ ಬೋದಿಸತ್ವನೆಂದಾತಂಗೆಯೂ ಕುರುಹಿನ ಚಿಂತೆ!
ಈ ಕುರುಹುಗಳಿಂದ ಬಿಡುಗಡೆಗೊಳ್ಳುವುದು ಹೇಗೆ ? ಅಲ್ಲಮ ಪರಿಹಾರ ಸೂಚಿಸುತ್ತಾನೆ
ಕಾಮಿಸುವುದಿಲ್ಲಾಗಿ ಕಲ್ಪಿಸುವುದಿಲ್ಲ.
ಕಲ್ಪಿಸುವುದಿಲ್ಲಾಗಿ ಭಾವಿಸುವುದಿಲ್ಲ
ಗುಹೇಶ್ವರನೆಂಬುದಿಲ್ಲಾಗಿ ಬಯಲೆಂಬುದಿಲ್ಲ
 
ಇದನ್ನು ಎರಡೆರಡು ಸಲ ಓದಿ ಸುಮ್ಮನೆ ಕುಳಿತುಕೊಂಡೆ. ಕೆಟಿ ಸುಮ್ಮನೆ ನಕ್ಕರು.
ಅರ್ಥವಾಯಿತಾ ಎಂದರು.

ಅಷ್ಟರಲ್ಲಿ ನನ್ನ ಆತಂಕ ಸ್ವಲ್ಪ ಕಡಿಮೆಯಾಗಿತ್ತು. ನೀವೆ ಹೇಳಿ ಸಾರ್ ಏನು ಅರ್ಥ ಆಗುತ್ತಿಲ್ಲ ಎಂದೆ.
`ನ್ಯಾಷಿನಲ್ ಜಿಯಾಗ್ರಫಿಯಲ್ಲಿ ಕೋಟ್ ಮಾಡಿದ್ದ ನೆನಪು. ಅಫ್ಘಾನಿಸ್ಥಾನದಲ್ಲಿ ಒಬ್ಬ ಹೇಳುತ್ತಿದ್ದನಂತೆ ಬುದ್ದನ ವಿಗ್ರಹಗಳು ಇದ್ದಾಗ ಅಲ್ಲಿ ಮಳೆ ಬೆಳೆ ಚೆನ್ನಾಗಿತ್ತಂತೆ. ಈಗ ಅದೂ ಆಗುತ್ತಿಲ್ಲವಂತೆ ಬುದ್ದನ ವಿಗ್ರಹಗಳನ್ನು ಒಡೆದ ಫಲ’ ಎಂದು ಅಲ್ಲಿಯ ಜನ ಮಾತನಾಡಿಕೊಳ್ಳುತ್ತಿದ್ದಾರಂತೆ’ ಎಂದರು.
ನನಗೆ ಸಮಾಧಾನ ಆಗಲಿಲ್ಲ
ಮತ್ತೆ ಕೇಳಿದೆ. ಸಾರ್ ವಿಶ್ವದಲ್ಲಿ  ಬೌದ್ಧ ಧರ್ಮ ಮೂರನೆ ಅತಿ ದೊಡ್ಡ ಧರ್ಮ ಆಗಿರಬಹುದು. ಆದರೆ ಬುದ್ದ ಹುಟ್ಟಿದ ಭಾರತದಲ್ಲೇ ಬುದ್ದಿಸ್ಟ್ ಅಲ್ಪಸಂಖ್ಯಾತರು. ನಾವೂ ಇದ್ದೇವೆ ನಿಮ್ಮ ಬೆಂಬಲಕ್ಕೆ ಎಂದು ತೋರಿಸಿಕೊಳ್ಳಾದರೂ ನಾವು ಪ್ರತಿಭಟನೆ ಮಾಡಬೇಕು. ಇಲ್ಲದಿದದ್ದರೆ ಈ ಕೃತ್ಯಗಳು ಮರುಕಳಿಸುತ್ತವೆ ಎಂದು ಅಸಹನೆ ವ್ಯಕ್ತಪಡಿಸಿದೆ.
ಸ್ವಲ್ಪ ಹೊತ್ತು ಯೋಚಿಸಿದ ಕೆ.ಟಿ ಸಾರ್, `ನೋಡೋ ನಾನು ಬುದ್ದಿಸ್ಟ್ ಬುದ್ದನ ಮಾರ್ಗದಲ್ಲಿ ನಡೆಯುತ್ತೇನೆ. ಆದರೆ ಬುದ್ದನನು ಆರಾಧಿಸುವುದಿಲ್ಲ. ನಾವು ಪ್ರತಿಭಟನೆ ಮಾಡಿದಾಕ್ಷಣ ನಾವು ಸರಿ-ತಪ್ಪು ಒಪ್ಪಿಕೊಂಡಂತೆ. ಹೇಗೆ ಹಿಂದೂಗಳಿಗೆ ದೇವಸ್ಥಾನ ಇಂಪಾರ್ಟೆಂಟ್ ಆಗುತ್ತಿದೆಯೋ ಹಾಗೆ ನಾವು ಬುದ್ದನ ಪ್ರತಿಮೆ ಇಂಪಾರ್ಟೆಂಟ್ ಎಂದು ಒಪ್ಪಿಕೊಂಡಂತಾಗುತ್ತದೆ. ಆದರೆ ಬುದ್ದ ಇದನ್ನು ಎಲ್ಲಿಯೂ ಹೇಳಲಿಲ್ಲ. ಇಂದಿನ ಬುದ್ದಿಸ್ಟ್ಗಳು ಮಠ ಕಟ್ಟಿಕೊಂಡು ಬುದ್ದನನ್ನು ಬಂಧಿಸುತ್ತಿದ್ದಾರೆ. ನಾಗಾರ್ಜುನ ಬುದ್ದನ ಬಗ್ಗೆ ಹೇಳಿರುವುದು ಅಷ್ಟೆ. ಬುದ್ದ ಯಾರಿಗೂ ಏನನ್ನೂ ಬೋಧಿಸಿಯೇ ಇಲ್ಲ. ಲೋಕದೃಷ್ಠಿ ಏನಿದೆ ಎಂದು ಹೇಳಿದ. ನನ್ನನ್ನು ಹಾಗೂ ನಾನು ಹೇಳಿದ್ದನ್ನು ನಂಬು ಎಂದು ಎಲ್ಲಯೂ ಹೇಳಲಿಲ್ಲ. ಅದನ್ನೇ ಲೋಕದೃಷ್ಠಿ ಎನ್ನುತ್ತಾರೆ. ಬುದ್ದ ಅಂದು ಹೇಳಿದ್ದನ್ನೇ ವಿಜ್ಞಾನ ಇಂದು ಪ್ರೂವ್ ಮಾಡಲು ಹೊರಟಿದೆ. ಪ್ರಪಂಚಕ್ಕೆ ಅದರದೇ ಆದ ಕ್ಯಾಟೆಕ್ಟರ್ ಇಲ್ಲ. ನಾವು ಅಂದುಕೊಂಡಂತೆ ಪ್ರಪಂಚ.
ಎಂ ಥಿಯರಿ ಹೀಗೆ ಹೇಳುತ್ತದೆ. ಲೋಕವನ್ನು ವಿವರಿಸಲು ಒಂದು ಥಿಯರಿಯಿಂದ ಸಾಧ್ಯವಿಲ್ಲ. ಒಂದು ಸೆಟ್ ಅಫ್ ಥಿಯರಿ ಭೇಕು. ವಿಜ್ಞಾನ ಕೂಡ ಮಧ್ಯಮ ಮಾರ್ಗವನ್ನು ಮಾತನಾಡುತ್ತದೆ. ಆ ಸಂದರ್ಭಕ್ಕೆ ಏನು ಬರುತ್ತದೆಯೋ ಅದಷ್ಟೆ. ಮುಂದಿನ 200-300 ವರ್ಷಗಳ ಮುಂದೆ ಮನುಷ್ಯನ ನೋಟ ಪ್ರಪಂಚದ ಬಗ್ಗೆ ಸಂಪೂರ್ಣ ಬದಲಾಗಿರುತ್ತದೆ. ದೇವ್ರು-ಪವ್ರು ಎಂಥದ್ದು ಇರುವುದಿಲ್ಲ. ವಿಜ್ಞಾನ ಅದನ್ನು ಸಾಧಿಸುತ್ತದೆ. ದೇವರನ್ನು ನಂಬದಿರುವ ಮಂದಿ ಹೆಚ್ಚಾಗುತ್ತಾರೆ. ಕಾರಣ ವಿಜ್ಞಾನ ಇರುವಿಕೆಯನ್ನು ಕನ್ಸಿಡರ್ ಮಾಡುವುದೇ ಇಲ್ಲ.
ಅದೇ ರೀತಿ ಬುದ್ದನ ಫಲಾಸಫಿಯನ್ನು ಕೋಟೆಯೊಳಹಗೆ ಬಂಧಿಸುತ್ತಿದ್ದಾರೆ. ಬುದ್ದನನ್ನು ಇವರು ನೋಡುತ್ತಿರುವ ದೃಷ್ಠಿಕೋನವೇ ಬೇರೆಯಾಗಿದೆ. ಬುದ್ದನಿಗೂ ಒಂದು ಸಂಸ್ಥೆ ಕಟ್ಟುತ್ತಿದ್ದಾರೆ ಬುದ್ದ ಇದನ್ನು ಎಲ್ಲಿಯೂ ಹೇಳಲಿಲ್ಲ. ಇವೆಲ್ಲ ಬುದ್ದನ ಚಿಂತನೆಗಳನ್ನು ಸ್ಥಗಿತಗೊಳಿಸುತ್ತವೆ. ಯಾವುದೂ ಪೂರ್ಣವೂ ಅಲ್ಲ ಅಪೂರ್ಣವೂ ಅಲ್ಲ ಎಂಬುದಕ್ಕೆ ಇವೆಲ್ಲ ವಿರುದ್ಧವಾದವುಗಳು.
ಯಾವಾಗ ಹೀಂದೂ, ಮುಸ್ಲಿಂ, ಕ್ರಿಶ್ಚಿಯನ್ ಬುದ್ದಿಸ್ಟ್ ಯಾವುದೇ ಧರ್ಮ ಸಂಸ್ಥೆಗಳನ್ನು , ಸೇವಸ್ಥಾನಗಳನ್ನು ಕಟ್ಟಿ ಪೂಜಿಸಲು ಆರಂಭಿಸುತ್ತಾರೋ ಅಲ್ಲಿಂದ ಶುರುವಾಗುತ್ತದೆ ಮಾಫಿಯಾ… ಇದು ಒಂದು ರೀತಿಯ ಮಾಫಿಯಾಗಳು. ಉದಾಹರಣೆಗೆ ದಲೈಲಾಮ ಕಂಡರೆ ಮಹಬೋಧಿಯವರಿಗೆ ಆಗುವುದಿಲ್ಲ. ಇವರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಬುದ್ದಿಸ್ಟ್ಗಳಲ್ಲೂ ಇಂಥಹ ಹಲವಾರು ವೈರುದ್ಯಗಳಿವೆ.
ವಿಶ್ವದಲ್ಲಿ ದೇವರಿಲ್ಲದ ಧರ್ಮಗಳು ಎರಡೇ ಒಂದು ಬೌದ್ಧ ಧರ್ಮ ಮತ್ತೊಂದು ಜೈನ ಧರ್ಮ ಆದರೆ ಇವರು ಹೇಳಿದ್ದನ್ನು ಯಾರೂ ಪಾಲಿಸುತ್ತಿಲ್ಲ ಅದೇ ದುರಂತ. ಈಚೆಗೆ ಬಸವಣ್ಣನನ್ನೂ ದೇವರನ್ನಾಗಿ ಮಾಡಿಕೊಂಡರು. ಬದುಕುವ ಮಾರ್ಗ ಹೇಳಿದವರನ್ನೇ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಬುದ್ದನಿಗಿಂತ ಮೊದಲು ಹಿಂದೂ ಧರ್ಮವನ್ನು ಅಟಾಕ್ ಮಾಡಿದ ಮೊಟ್ಟ ಮೊದಲ ವ್ಯಕ್ತಿ ಬಾಹುಬಲಿ. ಬುದ್ದ ನಂತರದಲ್ಲಿ ಬದುಕಿನ ಮಾರ್ಗ ಹೇಳಿದ. ಹಿಂಸೆ ಮತ್ತು ಅಹಿಂಸೆಯ ಮಧ್ಯದ ಮದ್ಯಮ ಮಾರ್ಗವನ್ನೇ ಬುದ್ದ ಹೇಳಿದ್ದು ಎಂದ ಕೆಟಿ ನಿಟ್ಟುಸಿರು.
ಸಾರ್. ಭಾರತದಲ್ಲಿ ಬೌದ್ಧ ಧರ್ಮವನ್ನು ಇಂದಿಗೂ ಉಳಿಸುತ್ತಿರುವುದು ದಲಿತರು. ಅಂಬೇಡ್ಕರ್ ಹೇಳಿದ ಒಂದೇ ಕಾರಣಕ್ಕೆ ಅಥವಾ ಅವರು ಬೌದ್ಧ ಧರ್ಮಕ್ಕೆ ಹೋದ ಕಾರಣಕ್ಕಾಗಿ ಈ ನಾಡಿನ ದಲಿತರೆಲ್ಲ ಬೌದ್ಧ ಧರ್ಮ ದತ್ತ ಹೋಗುತ್ತಿದ್ದಾರೆ ಮತ್ತು ಹೋಗಿದ್ದಾರೆ. ಆದರೂ ಭಾರತದಲ್ಲಿ ಅಲ್ಪಸಂಖ್ಯಾತರಾತರು. ಅಂಭೇಡ್ಕರ್ ಕ್ರಿಶ್ಚಿಯನ್ ಧರ್ಮಕ್ಕೆ ಹೋಗಿದ್ದರೆ ಚೆನ್ನಾಗಿರುತ್ತಿತ್ತು.. ಅಸ್ಪೃಶ್ಯತೆ, ಅಸಮಾನತೆ ಇವೆಲ್ಲಾ ಇರುತ್ತಿರಲಿಲ್ಲ ಅಲ್ಲವೇ..? ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಂಬೇಡ್ಕರ್ ಅಲ್ಲವನ್ನೂ ಅಧ್ಯಯನ ಮಾಡಿಯೇ.. ಬೌದ್ಧ ಧರ್ಮಕ್ಕೆ ಸೇರಿಕೊಂಡರು. ಹೀಗೆಂದು ಹಾಗೆ ಸೇರಲಿಲ್ಲ ಉಳಿದ ಎಲ್ಲ ಧರ್ಮಗಳನ್ನು ಓದಿ ಅರಗಿಸಿಕೊಂಡೇ ಅಂತಿಮವಾಗಿ ಬೌದ್ಧ ಧರ್ಮ ಆರಿಸಿಕೊಂಡರು. ಆ ಕಾಲಕ್ಕೆ ಬೌದ್ಧ ಧರ್ಮ ಅವರಿಗೆ ಶ್ರೇಷ್ಟ ಎನಿಸಿಕೊಂಡಿತು. ಅದ್ದರಿಂದಲೇ ಬೌದ್ಧ ಧರ್ಮಕ್ಕೆ ಬಂದರು. ಒಬ್ಬರು ದೊಡ್ಡ ಮ್ಯಾಜಿಷಿನ್ ಇದ್ದರು. ಹೆಸರು ಹುಸೇನ್ ಅಂತಾ ಅವರು ಪ್ರೊಫೆಸರ್ ಗೆ ಯಾವಾಗಲೂ ಹೇಳುತ್ತಿದ್ದರು. ಸಾರ್ ದಲಿತರೆಲ್ಲ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಬೇಕು. ಈ ಹಿಂದೂಗಳಿಗೆ ಬುದ್ದಿ ಕಲಿಸಬೇಕೆಂದರೆ ಇದೊಂದೆ ಮಾರ್ಗ ಎನ್ನುತ್ತಿದ್ದರು. ಪ್ರೊಫೆಸರ್ ಅವನಿಗೆ ಯಾವಾಗಲೂ ಬೈಯ್ಯುತ್ತಿದ್ದರು. ಏನೋ ಹೀಂಗೆಲ್ಲಾ ಮಾತನಾಡುತ್ತಾನೆ ಎಂದು ನನ್ನೊಂದಿಗೆ ಹೇಳುತ್ತಿದ್ದರು. ಒಂದೊಂದು ಸಾರ್ ಹುಸೇನ್ ಹೇಳುವುದರಲ್ಲಿ ಅರ್ತ ಇದೆ ಎನಿಸುತ್ತಿತ್ತು. ಹಿಂದೂ ಧರ್ಮವನ್ನು ಎದುರಿಸುವ ಶಕ್ತಿ ಇರುವ ಧರ್ಮ ಇಸ್ಲಾಂ ಧರ್ಮಕ್ಕೆ ಎನಿಸುತ್ತಿತ್ತು. ನಿಮಗೆ ಯಾರಿಗೂ ಗೊತ್ತಿಲ್ಲದಿರಬಹುದು ಪ್ರೊಫೆಸರ್ ಬುದ್ದನ ತತ್ವಗಳಿಂದ ಪ್ರಭಾವಿತರಾಗಿದ್ದರು. ಬುದ್ದನ ಹಾದಿಯಲ್ಲೇ ನಡೆಯುತ್ತಿದ್ದರು. ಆದರೆ ಅಧಿಕೃತವಾಗಿ ನಾನು ಬುದ್ದಿಸ್ಟ್ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಹೀಗೆ ಒಂದು ದಿನ ನನಗೆ ಬುದ್ದನ ಪ್ರತಿಮೆ ತೆಗೆದುಕೊಂಡು ಬಾ ಎಂದು ಹೇಳಿದ್ದರು. ಆದರೆ ನನಗೆ ಪ್ರತಿಮೆ ಕೊಡಲು ಸಾಧ್ಯವಾಗಲಿಲ್ಲ’
ಬುದ್ದ ಗಯಾ ದಾಳಿ ಖಂಡಿಸಿ ಪ್ರತಿಭಟನೆ ನಡೆಸಬೇಕು ಎಂದು ಹುರುಪಿನಿಂದ ಹೋದ ನಾನು ನನ್ನ ಗೆಳೆಯ ಸಮತಾ ಸೈನಿಕ ದಳದ ಸತೀಶ್ ಗೆ ಆಕ್ಷಣ ನಿರಾಸೆ ಆದರೂ ಗುರುಗಳು ಹೇಳಿದ್ದರಲ್ಲಿ ಅರ್ಥ ಇದೆ ಎಂದು ಪ್ರತಿಭಟನೆ ಬೇಡ ಎಂದು ನಿರ್ಧರಿಸಿ ಅಲ್ಲಿಂದ ಹೊರಟರೆವು.
 

‍ಲೇಖಕರು avadhi

10 July, 2013

22 Comments

  1. ರೂಪ ಹಾಸನ

    ಬುದ್ಧನೆಂಬುದು ಬೆಳಕು.. ಅದನ್ನು ಕಟ್ಟಲಾಗದು,ಮುಟ್ಟಲಾಗದು, ಮೆಟ್ಟಲಾಗದು,ಮುರಿಯಲಾಗದು,ಕೆಡವಲಾಗದು,ಸ್ಪೋಟಿಸಲಾಗದು….ತನ್ನಷ್ಟಕ್ಕೇ ಆಳದಲ್ಲಿ ಹುಟ್ಟುವಂತದದು… ಬರಿದೇ ಅನುಭವಕ್ಕೆ ದಕ್ಕುವಂತದು…..

    • vishnu

      superr

  2. ವಿ.ಎನ್.ಲಕ್ಷ್ಮೀನಾರಾಯಣ

    ಬುದ್ಧ ಮತ್ತು ಅಲ್ಲಮನ ಮುಖೇನ ನಮಗೆ ದಕ್ಕುವ ವರ್ಗರಹಿತ,ಜಾತಿರಹಿತ ಸಮುದಾಯ ಬದುಕಿನ ದರ್ಶನ-ತಿಳುವಳಿಕೆ ಎಲ್ಲ ಬಗೆಯ ಫ್ಯಾಸಿಸ್ಟ್ ಮತ್ತು ಬಂಡವಾಳವಾದೀ ರಾಜಕೀಯವನ್ನು ಹಿಮ್ಮೆಟ್ಟಿಸುವ ಹೋರಾಟಗಳಿಗೆ ತಳಹದಿಯಾಗಬೇಕೇ ಹೊರತು ವ್ಯಕ್ತಿ ಮಟ್ಟದ ಹಿಮ್ಮುಖಿ,ಒಳಸರಿಯುವಿಕೆಯ ನಿಷ್ಕ್ರಿಯಧೋರಣೆಗೆ ದಾರಿ ಮಾಡಿಕೊಡಬಾರದು.ಇಂದು ಪ್ರಪಂಚಾದ್ಯಂತ ಕಾಣುತ್ತಿರುವ ‘ಆತಂಕವಾದ’ಎಂಬ ಬೆಳವಣಿಗೆ ಫ್ಯಾಸಿಸ್ಟ್ ಮತ್ತು ಬಂಡವಾಳವಾದೀ ರಾಜಕೀಯದ ದಮನಕಾರೀ ನಿಯಂತ್ರಣಕ್ಕೆ ಪ್ರತಿಯಾಗಿ ಹುಟ್ಟಿರುವ ರಾಜಕೀಯ. ಇದರಲ್ಲಿನ ಮತೀಯ ಅಥವಾ ಮೂಲಭೂತವಾದದ ಅಂಶಗಳೇ ಈ ಪ್ರತಿಭಟನಾ ರಾಜಕೀಯದ ಸಾರಸರ್ವಸ್ವವಲ್ಲ. ‘ಆತಂಕವಾದವೇ’ಇಂದಿನ ವಿಶ್ವದ ಸಮಸ್ಯೆಗಳಿಗೆ ಕಾರಣ ಎಂದು ಎಲ್ಲರೂ ನಂಬಬೇಕೆಂದು ಒತ್ತಾಯಿಸುವುದೂ ದಮನಕಾರಿ ರಾಜಕೀಯದ ಒಂದು ಭಾಗ. ದುರಾಸೆ ಮತ್ತು ಸಾವಿನ ಭಯವನ್ನು ನಗದೀಕರಿಸಿಕೊಳ್ಳಲು ವಿಮಾ ವ್ಯಾಪಾರ ಹುಟ್ಟಿಕೊಂಡಿರುವಂತೆ ಆತಂಕವಾದದ ಭಯವನ್ನು ನಗದೀಕರಿಸಿಕೊಳ್ಳಲು ಯುದ್ಧೋದ್ಯಮ, ಸರ್ವೇಲೆನ್ಸ್ ಉಪಕರಣಗಳ ಜಾಗತಿಕ ವ್ಯಾಪಾರ ವಿಸ್ತಾರಗೊಳ್ಳುತ್ತಿವೆ. ವ್ಯಾಪಾರದ ಮೂಲಕ ಜನರ ಆರ್ಥಿಕ ಬದುಕನ್ನು ನಿಯಂತ್ರಿಸುವಂತೆಯೇ ರಕ್ಷಣೆಯ ಹೆಸರಿನಲ್ಲಿ ಜನರ ಸಾಮಾಜಿಕ ಮತ್ತು ಖಾಸಗಿ ಬದುಕನ್ನು ಇಂದಿನ ಬಂಡವಾಳವಾದೀ ಸಾಮ್ರಾಜ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಎಲ್ಲ ದೇಶಗಳೂ ಪೊಲೀಸ್ ಪ್ರಭುತ್ವದತ್ತ ದಾಪುಗಾಲಿಡುತ್ತಿವೆ.ಪೊಲೀಸ್ ಪ್ರಭುತ್ವ ಬಲಗೊಳ್ಳಲು ಆಧಾರ್ ನಂಬರ್ ನಿಂದ ಹಿಡಿದು ಎನ್ಎಸ್ಎ,ಸಿಐಎ, ಬಾಂಬು, ‘ಆತಂಕವಾದ’,’ಉಗ್ರವಾದ’ ಎಲ್ಲವೂ ಅತ್ಯಗತ್ಯ. ಸಮಸ್ಯೆಯ ಮೂಲ ಎಲ್ಲಿದೆ ಎಂದು ತಿಳಿಯದೆ ಮಾಡುವ ಟೋಕನ್ ಪ್ರತಿಭಟನೆ ಪ್ರಭುತ್ವಕ್ಕೆ ಸಹಾಯಕಾರಿ.ಮಾಡದೇ ಇರುವ ನಿಷ್ಕ್ರಿಯತೆಯೂ ಸಹಕಾರಿಯೇ.
    ಉದಾಹರಣೆಗೆ ಮಯನ್ಮಾರ್ ನಲ್ಲಿ ಕಂಡುಬರುವ ಬೌದ್ಧಮತೀಯತೆಗೂ ಬುದ್ಧನ ತಾತ್ವಿಕ ತಿಳುವಳಿಕೆಗೂ ಯಾವ ಸಂಬಂಧವೂ ಇಲ್ಲ. ಎಲ್ಲ ಪ್ರವಾದಿ, ಮಹಾತ್ಮ, ಧಾರ್ಮಿಕ ಮುಖಂಡರ ತತ್ವಗಳಿಗೂ ಇಂದಿನ ಜನಸಾಮಾನ್ಯರ ಬದುಕನ್ನು ನಿಯಂತ್ರಿಸುವ ರಾಜಕೀಯ-ಪ್ರತಿರಾಜಕೀಯಕ್ಕೂ ಇರಬಹುದಾದ ಸಂಬಂಧ ಕೇವಲ ತೋರಿಕೆಯದು. ಎರಡು ಹೊತ್ತಿನ ಊಟಕ್ಕೆ ಪರದಾಡಬೇಕಿಲ್ಲದ ಜನರಿಗೆ ಮಾತ್ರ ನಿಜವೆನ್ನಿಸುವಂಥದು. ಆದರೆ,ಸಮಸ್ಯೆಯೇ ತೋರಿಕೆಯದಲ್ಲ.ಹಸಿವಿನ ಮೇಲೆ ಆಧಾರಿತವಾದ ಬದುಕೇ ತೋರಿಕೆಯದಲ್ಲ. ಬುದ್ಧನ ಮಧ್ಯಮ ಮಾರ್ಗ ಒತ್ತುಕೊಡುವುದು ಈ ಬದುಕಿಗೆ.ಹಸಿವಿನ, ಭಯದ, ನಿಯಂತ್ರಣದ ರಾಜಕೀಯ. ಆದ್ದರಿಂದಲೇ ಸಂಘ, ಲಾಮಾ, ಮಠ,ಅವುಗಳನ್ನು ಪೋಷಿಸಲು ಬೇಕಾದ ರೈತರ ಪರಿಶ್ರಮ, ಹೊಲಗದ್ದೆಗಳು ಎಲ್ಲವೂ ಅಗತ್ಯವೆನಿಸಿವೆ. ನಿಷ್ಕ್ರಿಯತೆ, ಹಿಮ್ಮುಖ ದೃಷ್ಟಿ, ಪ್ರಜ್ಞೆಯ ಒಳಸರಿಯುವಿಕೆ ಬೌದ್ಧ ಧರ್ಮ ಅಥವಾ ಯಾವುದೇ ಧರ್ಮದ, ಅದರಲ್ಲೂ ಸೂಫಿ,ಅನುಭಾವಿ ಮುಂತಾದ ದರ್ಶನಗಳ ತಪ್ಪುಗ್ರಹಿಕೆಯಿಂದ ಹುಟ್ಟುವ ಮನಸ್ಥಿತಿ. ಬೌದ್ಧಿಕವಾಗಿ ಪ್ರಗತಿಪರವೆಂಬಂತೆ ತೋರುವ ‘ತಾತ್ವಿಕ ಎಚ್ಚರ-ರಾಜಕೀಯ ಮೌಢ್ಯದ’ಪರಿಪಾಕ.ಇದಕ್ಕಿಂತ ಪ್ರತಿಭಟನೆ, ಸಾಂಕೇತಿಕವಾಗಿದ್ದರೂ ಸರಿಯೆ, ಉತ್ತಮವಾದದ್ದು.

  3. prakash mithra

    ಚರಿತ್ರೆಯನ್ನ್ನು ಗಮನಿಸಿದರೆ ಎಷ್ಟೋ ಸ್ತೂಪ ಸ್ಥಾವರ ದೇಗುಲ, ಮತ್ತು ದರ್ಮಗಳು ಅಳಿದ ಮೇಲೂ ಉಳಿದದ್ದು ಮತ್ತೇನನ್ನೋ ಕಟ್ಟುವ ಮನುಷ್ಯನ ಕೌಶಲ್ಯ ಮತ್ತು ಜೀವನ ಪ್ರೀತಿ …. ಕೆಡುವುವರು ಕೆಡವಲಿ ಬಿಡಿ ….. ಮತ್ತೆಲ್ಲೋ ಹೊಸ ದ್ವೀಪ ಗಳೇಳುವುದ … ತಡೆಯಲು ಸಾಧ್ಯವೇ ….

  4. prasad raxidi

    ಕೆ.ಟಿ.ಸರಿಯಾಗಿಯೇ ಹೇಳಿದ್ದಾರೆ. ಬುದ್ಧನ ಮುಂದೆ- ಪ್ರತಿಭಟನೆಯೂ ದಾಳಿಯಷದ್ಟೇ ಅರ್ಥಹೀನವಾದದ್ದು… ಇದೇ.. ದಾಳಿಕೋರರಿಗೂ ಬುದ್ಧನ ಬೆಳಕನ್ನು ತೋರುವ ಮಾರ್ಗವೆನಿಸುತ್ತದೆ..

  5. prasad raxidi

    ಕೆ.ಟಿ. ಸರಿಯಾಗಿಯೇ ಹೇಳಿದ್ದಾರೆ. ಬುದ್ಧನ ಮುಂದೆ- ಪ್ರತಿಭಟನೆಯೂ ದಾಳಿಯಷ್ಟೇ ಅರ್ಥಹೀನವಾದದ್ದು… ಬಹುಷಃ ಇದೇ ದಾಳಿಕೋರರಿಗೂ ಬುದ್ಧನ ಬೆಳಕನ್ನು ತೋರುವ ಮಾರ್ಗವೆನಿಸುತ್ತದೆ….

  6. bmbasheer

    ಅರ್ಥ ಪೂರ್ಣ ಬರಹ. ishtavaayitu

  7. ಲಿಂಗರಾಜು ಬಿ.ಎಸ್.

    ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು.
    ನಾನು ಮಾತನಾಡಲಿಲ್ಲ
    ಯಾಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.
    ಆಮೇಲೆ ಅವರು ಯಹೂದಿಗಳಿಗಾಗಿ ಬಂದರು
    ನಾನು ಮಾತನಾಡಲಿಲ್ಲ
    ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.
    ನಂತರ ಅವರು ಕಾರ್ಮಿಕರಿಗಾಗಿ ಬಂದರು
    ನಾನು ಮಾತನಾಡಲಿಲ್ಲ
    ಯಾಕೆಂದರೆ ನಾನು ಕಾರ್ಮಿಕನಾಗಿರಲಿಲ್ಲ.
    ಬಳಿಕ ಅವರು ಕೆಥೊಲಿಕ್ಕರಿಗಾಗಿ ಬಂದರು
    ನಾನು ಮಾತನಾಡಲಿಲ್ಲ
    ಯಾಕೆಂದರೆ ನಾನು ಪ್ರೊಟೆಸ್ಟೆಂಟನಾಗಿದ್ದೆ.
    ಕೊನೆಗೆ ಅವರು ನನಗಾಗಿಯೇ ಬಂದರು
    ಆ ಹೊತ್ತಿಗೆ ನನ್ನ ಪರ ಮಾತನಾಡಲು
    ಯಾರೂ ಉಳಿದಿರಲಿಲ್ಲ.
    (ಬರೆದವರು ಜರ್ಮನಿಯ ಮಾರ್ಟಿನ್ ನೀಮ್ಯುಲರ್ (೧೮೯೨- ೧೯೮೪) ಎಂಬ ಪಾದ್ರಿ. ನಾಝಿ ದೌರ್ಜನ್ಯ ಹಾಗೂ ಯಹೂದಿ ಜನಾಂಗಹತ್ಯೆಯ ವಿರುದ್ಧ ಮಾತನಾಡಿದವರು. ಈ ಪದ್ಯ ಇವರಿಗಿಂತ ಪ್ರಸಿದ್ಧ.)
    ಈ ಲೇಖನಕ್ಕೆ ಇದು ಸರಿ ಹೋಗಬಹುದೇನೋ…….

  8. Dr. Sidram Karanik

    ನಾಳೆ ಡಾ. ಬಾಬಾಸಾಹೇಬ ಅಂಬೇಡ್ಕರರನ್ನೇ ಇಲ್ಲವಾಗಿಸುವ ಪ್ರಯತ್ನ ನಡೆಸುವ ಮಂದಿ ಇದ್ದಾರೆ. ಆಗಲೂ ನಾವು ತಣ್ಣಗಾಗಿಯೇ ಇರಬೇಕೇ ? ಕೆ.ಟಿ. ಯವರು ಹಾಗೆ ಹೇಳಿದರು ಎಂದ ಮಾತ್ರಕ್ಕೆ ನಮ್ಮತನವನ್ನು ಬಿಟ್ಟುಕೊಡಲು ಸಾಧ್ಯವೇ ? ಹಾಗಾದರೆ ಡಾ. ಬಾಬಾಸಾಹೇಬ ಅಂಬೇಡ್ಕರರು ಕಾಳಾರಾಮ ಮಂದಿರ ಪ್ರವೇಶ ಚಳುವಳಿ ಯಾಕೆ ಮಾಡುತ್ತಿದ್ದರು ? ಉಂಡು-ತಿಂದು ಬುದ್ಧನನ್ನು, ಅಂಬೇಡ್ಕರ್ ರನ್ನು ಅರ್ಥೈಸುವ ಮಂದಿಯ ಮಾತು ಕೇಳಿ, ಭಾವನಾತ್ಮಕವಾಗಿ ಇನ್ನೂ ಜೀವಂತ ಇರುವ ಮಂದಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ ? ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ನೀವು ಅರ್ಥ ಮಾಡಿಕೊಂಡಿದ್ದು ಹೇಗೆ ? ದಲಿತರು, ಬಲಿತರಾದಾಗ ಏನೋ ಒಂದು ಮೇಲರಿಮೆಯಲ್ಲಿ ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗುವುದನ್ನು ತಪ್ಪಿಸುವ ಪ್ರಯತ್ನ ನಮ್ಮ ಮುಂದಿದೆ. ತಿಳಿದವರೆಂದುಕೊಂಡವರೇ ತಿಳಿಗೇಡಿಯಾದರೆ ತಿಳಿದುಕೊಳ್ಳದವರ ಪಾಡೇನು ?

  9. Dr. Sidram Karanik

    ದಯವಿಟ್ಟು ಯಾರಾದರೂ ಪ್ರೊ. ಕೆ.ಟಿ. ಶಿವಪ್ರಸಾದ್ ಅವರ ಮೊಬೈಲ್ ನಂಬರ್ ಕೊಡುತ್ತೀರಾ ? ನನ್ನ ಮೊಬೈಲ್ 9035343031 ಕ್ಕೆ ಮೆಸೇಜ್ ಮಾಡಿ.

  10. ನಾಗರಾಜ್ ಹೆತ್ತೂರ್

    ಸಿದ್ದರಾಮ್ ಕಾರ್ಣಿಕ್ ಅವರೇ ಕೆ.ಟಿ ಅವರ ಬಗ್ಗೆ ನಿಮ್ಮದು ತಪ್ಪು ತಳಿವಳಿಕೆ. ಬಹುಶಃ ಬಾಬಾ ಸಾಹೇಬರನ್ನು ಓದಿಕೊಂಡು ಅವರ ಹಾದಿಯಲ್ಲಿ ನಡೆಯುತ್ತಿರುವ ಅಂತೆಯೇ ಬದುಕುತ್ತಿರುವ ನಮ್ಮೊಳಗಿನ ಏಕೈಕ ಅಂಬೇಡ್ಕರ್ ವಾದಿ ಅಂದರೆ ಅದು ಕೆಟಿಎಸ್ ಮಾತ್ರ.ಅವರು ಪ್ರೊಫೆಸರ್ ಅಲ್ಲ.ಅವರು ಚಿತ್ರ ಕಲಾವಿದರು. ಕಾರ್ಲೆ ಗ್ರೋಪ್ ಆಫ್ ಕಂಪನಿಸ್ ನ ಒಡೆಯ. ಸಾವಿರಾರು ಕೋಟಿ ರೂ. ಒಡೆಯರಾಗಿದ್ದರೂ ಅವೆಲ್ಲವನ್ನೂ ಬದಿಗಿಟ್ಟು. ತಾವಾಯಿತು ತಮ್ಮ ಪೇಯಿಂಟ್ಂಗ್ ಆಯಿತು ಎಂಬಂತೆ ಬದುಕುತ್ತಿದ್ದಾರೆ. ಅದು ಎಲ್ಲಿಯವರೆಗೆ ಎಂದರೆ ಕುವೆಂಪು ಅವರ ಮಾತಿನಂತೆ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಎಂಬಂತೆ ಸ್ವಂತಕ್ಕೊಂದು ಮನೆಯನ್ನು ಕಟ್ಟಿಕೊಳ್ಳದೆ ಬಾಡಿಗೆ ಮನೆಯಲ್ಲಿ ವಾಸ ಇದ್ದಾರೆ. ಬಾಬಾ ಸಾಹೇಬರ ಬಗ್ಗೆ ಮಾತನಾಡಲು ಕೆ.ಟಿ ವರನ್ನು ಕರೆಸುತ್ತಾರೆ. ಬಾಬಾ ಸಾಹೇಬರ ಬರಹಗಳನ್ನು ಓದಿ ಅರಗಿಸಿಕೊಂಡಿರುವರಲ್ಲಿ ಪ್ರಮುಖರು ಕೆ.ಟಿ. ತೇಜಸ್ವಿ, ಪ್ರೊಫೆಸರ್ ಅವರ ಒಡನಾಡಿ, ಬಹುಶಃ ನಿಮಗೆ ತಿಳಿವಳಿಕೆ ಇಲ್ಲದೆ ಹೀಗೆಲ್ಲ ಆತಂಕ ವ್ಯಕ್ತಪಡಿಸಿದ್ದೀರಿ ಎನ್ನಿಸುತ್ತದೆ. ದಲಿತರ ಮೇಲೆ ಎಲ್ಲೇ ಪ್ರತಿಭಟನೆ ನಡೆಯಲಿ ತಕ್ಷಣ ಪ್ರತಿಕ್ರಿಯೆ ನೀಡುವ ವ್ಯಕ್ತಿ ಇದ್ದಾರೆ ಎಂದರೆ ಅದು ಕೆ.ಟಿ ಮಾತ್ರ. ನಮ್ಮೊಂದಿಗೆ ಡಿಸಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಇಂದಿಗೂ ಪಾಳ್ಗೊಳ್ಳುತ್ತಾರೆ. ಯಾಕೆ..? ಯಾವ ವಿಷಯಕ್ಕೆ, ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದನ್ನು ಗಮನಿಸಿ. ಬುದ್ದನ ವಿಚಾರ. ನೆನಪಿರಲಿ. ಬಹುಶಃ ನಿಮಗೆ ಆಶ್ವರ್ಯವಾಗಬಹುದು ಕೆ.ಟಿ ಒಬ್ಬ ದಲಿತನಲ್ಲ. ಅವರೊಬ್ಬ ಸವರ್ಣೀಯ. ಇಷ್ಟೆಲ್ಲ ಆಸ್ತಿ, ಹೆಸರು ಇದ್ದರೂ ಅವರು ದಲಿತ ಚಳವಳಿಯಲ್ಲಿ ಇದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ. ಅಂದ ಹಾಗೆ ಕೆಟಿ ಮಾವಳ್ಳಿ ಶಂಕರ್ ನೇತೃತ್ವದ ದಸಂಸ ದ ರಾಜ್ಯ ಸಂಚಾಲಕರು ಕೂಡ ಹೌದು. ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಿ ಮತ್ತು ನಂತರ ಮಾತನಾಡಿ…

    • Dr. Sidram Karanik

      ನಿಮಗೆ ಖರ್ಗೆಯವರು ಉತ್ತರ ನೀಡಿದ್ದಾರೆ ನಾಗರಾಜ್ ಹೆತ್ತೂರು. ನಿಮ್ಮಲ್ಲಿರುವ ಗೊಂದಲಗಳನ್ನು ಮೊದಲು ಬಿಡಿಸಿಕೊಳ್ಳಿ. ನಮಗೆ ಕೆ.ಟಿಯವರ ಬಗ್ಗೆ ವ್ಯಕ್ತಿಗತವಾದ ಯಾವ ದ್ವೇಷವೂ ಇಲ್ಲ. ನಿಮ್ಮೊಂದಿಗೂ ಕೂಡ. ಭಾವನಾತ್ಮಕವಾಗಿ ಯಾವುದಕ್ಕೂ ಹೆಚ್ಚು ಒತ್ತು ನೀಡುವುದು ಒಳ್ಳೆಯದೋ ಕೆಟ್ಟದ್ದೋ ಅದು ನಿಮಗೆ ಬಿಟ್ಟಿದ್ದು. ದಯವಿಟ್ಟು ತಿಳಿದುಕೊಳ್ಳಬೇಕಾದವರು ಯಾರು ಎಂಬುವುದನ್ನು ನೆನಪಿಟ್ಟುಕೊಳ್ಳಿ. ಇನ್ನು ಮಾವಳ್ಳಿ ಶಂಕರ್ ಅವರ ಬಗ್ಗೆ ಬರೆದಿದ್ದೀರಿ. ದಯವಿಟ್ಟು ನಿಮಗೆ ಸಮಯವಿದ್ದರೆ ನನ್ನ ಬಗ್ಗೆಯೂ ಅವರು ಹೇಳುತ್ತಾರೆ. ದಯವಿಟ್ಟು ಅವರನ್ನು ಸಂಪರ್ಕಿಸಿರಿ. ಮಾನಸಿಕ ಗುಲಾಮಗಿರಿಯಲ್ಲಿ ಇರುವವರ ಬಗ್ಗೆ ನನಗೆ ಖೇದವಿದೆ.

      • Somalinga Kharge

        ಸಿದ್ರಾಮ ಕಾರಣಿಕ ಅವರ “ನಿಮ್ಮಲ್ಲಿರುವ ಗೊಂದಲಗಳನ್ನು ಮೊದಲು ಬಿಡಿಸಿಕೊಳ್ಳಿ. ನಮಗೆ ಕೆ.ಟಿಯವರ ಬಗ್ಗೆ ವ್ಯಕ್ತಿಗತವಾದ ಯಾವ ದ್ವೇಷವೂ ಇಲ್ಲ. ನಿಮ್ಮೊಂದಿಗೂ ಕೂಡ. ಭಾವನಾತ್ಮಕವಾಗಿ ಯಾವುದಕ್ಕೂ ಹೆಚ್ಚು ಒತ್ತು ನೀಡುವುದು ಒಳ್ಳೆಯದೋ ಕೆಟ್ಟದ್ದೋ ಅದು ನಿಮಗೆ ಬಿಟ್ಟಿದ್ದು. ದಯವಿಟ್ಟು ತಿಳಿದುಕೊಳ್ಳಬೇಕಾದವರು ಯಾರು ಎಂಬುವುದನ್ನು ನೆನಪಿಟ್ಟುಕೊಳ್ಳಿ.” ಎಂಬ ಅಭಿಪ್ರಾಯ ನನ್ನದೂ ಕೂಡ ಆಗಿದೆ. ಧನ್ಯವಾದ ಸಿದ್ರಾಮ ಅವರೇ, ಉತ್ತಮವಾದ ರೀತಿಯಲ್ಲಿ ನಾಗರಾಜ್ ಅವರಿಗೆ ತಿಳಿ ಹೇಳಿದ್ದಕ್ಕೆ.

        • Dr. Sidram Karanik

          ಮಾನಸಿಕ ಗುಲಾಮಗಿರಿಯ ಅನುಭವ ಕಂಡಂತಾಯಿತು ಬಿಡಿ ಖರ್ಗೆ ಬ್ರದರ್ !

  11. Somalinga Kharge

    ” ನಾನು ನನ್ನ ಗೆಳೆಯ ಸಮತಾ ಸೈನಿಕ ದಳದ ಸತೀಶ್ ಗೆ ಆಕ್ಷಣ ನಿರಾಸೆ ಆದರೂ ಗುರುಗಳು ಹೇಳಿದ್ದರಲ್ಲಿ ಅರ್ಥ ಇದೆ”
    ನಮ್ಮ ನೆಚ್ಚಿನ ನಾಗರಾಜ ಹೆತ್ತೂರ್ ಅವರು ಕೆ. ಟಿ. ಅವರ ಪತ್ರಿಕಾ ಕಾರ್ಯದರ್ಶಿ ತರಹ ಬರೆಯುವುದು ನಿಲ್ಲಿಸಿ ಸ್ವಂತ ಚಿಂತನೆ ನಡೆಸಿದರೆ ಇಂತಹ ಗೊಂದಲಗಳಲ್ಲಿ ಸಿಕ್ಕಿಬೀಳುವುದನ್ನು ನಿಲ್ಲಿಸಬಹುದು.

  12. suvarna

    ಬುದ್ದ ಗಯಾದಲ್ಲಿ ನಡೆದಿರುವ ವಿದ್ವಂಸ ಕೃತ್ಯ ಖಂಡಿಸಿ ಕೆ.ಟಿ. ಯಾಕೆ ಪ್ರತಿಭಟನೆ ಮಾಡಬೇಕು ಎಂದು ಕೇಳಿರುವುದರಲಿ ನಿಜಕ್ಕೂ ಅಥಱ ವಿದೆ. ವಿದ್ವಂಸಕರು ವಿಗ್ರಹ ದೇವಾಲಯ ನಾಶ ಪಡಿಸಬಹುದು ಆದರೆ ನಮ್ಮ ೊಳಗಿನ ಬುದ್ದನನ್ನು ನಾಶಪಡಿಸಲು ಸಾದ್ಯ ವೇ ? ಬುದ್ದನನ್ನು ಯಾರೊಬ್ಬರು ಮುಟ್ಟುವುದಕ್ಕೆ ಸಾಧ್ಸವಿಲ್ಲ್ಯ ಬುದ್ದ ಒಂದು ಬೆಳಕಿನ ಶಕ್ತಿ.ಇದಕ್ಕೆ ಚಲನೆ ಇದೆ ಆಗ ಹೇಳಿದ ಬುದ್ದನ ಚಲನೆಯೇ ಇಂದು ವಿಜಾನಿಗಳು ಹೇಳುತ್ತಿರುವುದು. ಪ್ರತಿಭಟಿಸುವುದರಿಂದ ಪ್ರಯೋಜನವಿಲ್ಲ. ತಪ್ಪು ಮಾಡಿದವರಿಗೆ ಅರಿವು ಆಗಬೆಕು ಎಂದರೆ ಮೌನವೇ ಉತ್ತರ.

  13. Somalinga Kharge

    ” ನಮ್ಮೊಂದಿಗೆ ಡಿಸಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಇಂದಿಗೂ ಪಾಳ್ಗೊಳ್ಳುತ್ತಾರೆ”
    ಪೀಯುಸಿ ಫೇಲ್ ಆದ ಹುಡುಗರು ಅಂದರೆ ಅದೇನು ಪ್ರೀತಿಯೋ ನಮ್ಮ ಕೆ ಟಿ ಅವರಿಗೆ! 😉

  14. ನಾಗರಾಜ್ ಹೆತ್ತೂರ್

    ಸಹೋದರ ಸೋಮಲಿಂಗ ಖರ್ಗೆ ಅವರೇ ನಿಮ್ಮ ವ್ಯಂಗ್ಯದ ಮಾತಿಗೆ ಏನ್ನೆನ್ನಬೇಕೋ ತಿಳಿಯುತ್ತಿಲ್ಲ. ಕೆ.ಟಿ. ಚಿಂತನೆಗಳು ನಿಮಗೆ ಇಷ್ಟ ಆಗದಿದ್ದರೆ ಬಿಟ್ಟು ಬಿಡಿ. ನನಗೆ ನನ್ನದೇ ಆದ ಒಂದು ಕೆಲಸ ಕೆಲಸ ಇದೆ. ನಿತ್ಯ ಮೈಮುರಿದು ದುಡಿಯುತ್ತೇವೆ. ನಾವು ಯಾರ ಕಾರ್ಯದರ್ಶಿಯೂ ಅಲ್ಲ. ಕೆ.ಟಿ . ನಮ್ಮ ಗುರುಗಳು, ಅವರು ಹೇಳಿದ್ದನ್ನು ಪಾಲಿಸುತ್ತೇವೆ. ಹಾಗೆಂದು ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ ಎಂಬುದು ನಿಮ್ಮ ಭ್ರಮೆ. ಅವರ ಚಿಂತನೆಗಳನ್ನು ಕೇಳಿಕೊಳ್ಳುವವರು ಕೇಳಿಕೊಳ್ಳುತ್ತಾರೆ, ಇಷ್ಟ ಇಲ್ಲದಿವರು ಓದಿ ಮರೆಯುತ್ತಾರೆ ಬಿಡಿ. ಯಾರಿಗೂ ಭಟ್ಟಂಗಿಗಳಿಗೆ ಇಷ್ಟವಾಗಲಿಲ್ಲ ಎಂದರೆ ನಾವು ಹೊಣೆಯೇ..? ನಾವು ನಿತ್ಯ ಚಳವಳಿಯಲ್ಲಿ ಇರುವ ಮಂದಿ ನಾವು ಯಾವುದೇ ಗೊಂದಲಗಳಲ್ಲೂ ಇಲ್ಲ. ಗೊಂದಲಗಳಿದ್ದರೆ ಸಾರ್ವಜನಿಕ ಜೀವನದಲ್ಲಿ ಬದುಕಲು ಸಾಧ್ಯವಿಲ್ಲ. ಆದರೆ ತಾವು ಮಾತನಾಡುವುದಿಲ್ಲ ಮಾತನಾಡುವರನ್ನೂ ಬಿಡದ ಎಡತಾಕಿಕೊಂಡು ಚಳವಳಿ ಗಂಧವೇ ಇಲ್ಲದೇ ಪ್ರತಿಕ್ರಿಯಿಸಿದರೆ ಏನೆನ್ನಬೇಕು…! ದುರುದ್ದೇಶಪೂರಿತ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ… !

    • Somalinga Kharge

      ಪ್ರಿಯ ನಾಗರಾಜ್ ಹೆತ್ತೂರ್, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
      [ನಿಮ್ಮ ವ್ಯಂಗ್ಯದ ಮಾತಿಗೆ ಏನ್ನೆನ್ನಬೇಕೋ ತಿಳಿಯುತ್ತಿಲ್ಲ]
      ಕ್ಷಮಿಸಿ, ನನ್ನ ಮಾತಿನಲ್ಲಿ ವ್ಯಂಗ್ಯ ಖಂಡಿತ ಇಲ್ಲ. ಕಳೆದು ಒಂದು ವರ್ಷದಿಂದ ತಾವು ಬ್ಲಾಗು ಪತ್ರಿಕೆಗಳಲ್ಲಿ ಬರೆದಿರುವ ಬರಹಗಳನ್ನು ತೆಗೆದು ನೋಡಿ. ಕೆ ಟಿ ಹೀಗೆ ಹೇಳಿದರು ಹಾಗೆ ಹೇಳಿದರು ಅಂತ ಬರೆದದ್ದೇ ಹೆಚ್ಚು. ಸ್ವಂತ ಚಿಂತನೆ ಇರುವ ಒಂದು ಬರಹವನ್ನಾದರೂ ತೋರಿಸಿ. ಸತ್ಯ ಕಟು ಅಲ್ಲವೇ?
      [ನಿತ್ಯ ಮೈಮುರಿದು ದುಡಿಯುತ್ತೇವೆ.]
      ಇಲ್ಲ ಅಂತ ನಾನೆಲ್ಲಿ ಹೇಳಿದೆ?!!
      [ಕೆ.ಟಿ . ನಮ್ಮ ಗುರುಗಳು, ಅವರು ಹೇಳಿದ್ದನ್ನು ಪಾಲಿಸುತ್ತೇವೆ. ಹಾಗೆಂದು ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ ಎಂಬುದು ನಿಮ್ಮ ಭ್ರಮೆ. ]
      ಅಲ್ಲಾರಿ, ಪ್ರತಿಭಟನೆ ಮಾಡಬೇಕು ಅಂತ ಹೋಗಿ ಕೆ.ಟಿ . ಅವರ ಮಾತು ಕೇಳಿ “ಗುರುಗಳು ಹೇಳಿದ್ದರಲ್ಲಿ ಅರ್ಥ ಇದೆ ಎಂದು ಪ್ರತಿಭಟನೆ ಬೇಡ ಎಂದು ನಿರ್ಧರಿಸಿ ಅಲ್ಲಿಂದ ಹೊರಟರೆವು” ಅಂತ ಬರೆದದ್ದು ನಾನೋ ನೀವೋ?
      [ನಾವು ನಿತ್ಯ ಚಳವಳಿಯಲ್ಲಿ ಇರುವ ಮಂದಿ ನಾವು ಯಾವುದೇ ಗೊಂದಲಗಳಲ್ಲೂ ಇಲ್ಲ. ಗೊಂದಲಗಳಿದ್ದರೆ ಸಾರ್ವಜನಿಕ ಜೀವನದಲ್ಲಿ ಬದುಕಲು ಸಾಧ್ಯವಿಲ್ಲ. ]
      ಚಳುವಳಿಯನ್ನು ವೃತ್ತಿ ಹಾಗೂ ಉಪವೃತ್ತಿ ಮಾಡಿಕೊಂಡ ಜನರಿಗೆ ಖಂಡಿತ ಗೊಂದಲಗಳಿಲ್ಲ. ಅವರದ್ದೇನಿದ್ದರೂ ಗೊಂದಲವೆಬ್ಬಿಸುವುದೇ ಕೆಲಸ.
      [ದುರುದ್ದೇಶಪೂರಿತ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ]
      ಕ್ಷಮಿಸಿ, ಇದು ತುಂಬಾ ಕ್ರೂರವಾದ ಮಾತು.

  15. nagaraj hettur

    Karge avare teeke sakaratmavagiddare chenna. obbarige obbaru heccu istavaguttare k t nanage ista. Avara bagge heccu bareyuttene naanu barediddellavannu nimage torisabekemba niyama niyama illavalla? Kt bagge estu barediddene endu nimage gottiddare heli naanu lekka hakilla. intahavara athava intaha vishayada bagge bareyuvudu biduvudu nanna vayaktika vichara adakke donne nayakana appane beke.. Irali ee vichara munduvaresuvudu istavilla k t haagu nannnannu nammante iralu bidi dhanyavaadagalu nimage

    • Somalinga Kharge

      [teeke sakaratmavagiddare chenna]
      ತಮ್ಮ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳ ಕುರಿತು ತಾವೂ ಸಕಾರಾತ್ಮಕ ಧೋರಣೆ ಇಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. “adakke donne nayakana appane beke” ಅಂತೆಲ್ಲ ಬರೆಯುವವರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ.
      [Kt bagge estu barediddene endu nimage gottiddare heli naanu lekka hakilla]
      ತಾವು ಬರೆದಿರುವ ಎಲ್ಲ ಬರಹಗಳನ್ನೂ ತಾವೇ ನೋಡಿ ಯಾರ ಬಗ್ಗೆ ಹೆಚ್ಚು ಬರೆದಿದ್ದೀರಿ ಎಂದು ತಾವೇ ತೀರ್ಮಾನಕ್ಕೆ ಬನ್ನಿ.

  16. Anonymous

    BUDDHANA THABBIDAVARELLA PRABUDDHARALLA !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading