
ತೀರ್ಥಹಳ್ಳಿಯ ಮೌಲ್ಯಗಳ ಪ್ರತಿನಿಧಿಯಂತೆ
ಬುಟ್ಟಿ ತಟ್ಟಿ- ತಟ್ಟೆಗಳ ಹಮೀದ್ ಖಾನ್
——————————————————
ನೆಂಪೆ ದೇವರಾಜ್
ತೀರ್ಥಹಳ್ಳಿಯ ಆಜಾದ್ ರಸ್ತೆ ಸಂಪೂರ್ಣ ಬದಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡದ್ದರ ಕುರುಹಾಗಿ ತಾಲೂಕು ಕಚೇರಿ ಆವರಣದಲ್ಲಿ ಬಹು ಆಕರ್ಷಕ ಪೆಂಡಾಲೊಂದು ಕೈಬೀಸಿ ಕರೆಯುತಿದೆ.
ಮಂತ್ರಿ ಮಹದೇವಪ್ಪರಾದಿಯಾಗಿ ಅನೇಕ ಗಣ್ಯಾತಿ ಗಣ್ಯರ ಆಗಮನವಾಗುತ್ತಿದೆ. ಈ ಸಮಾರಂಭಕ್ಕೆ ಸ್ವತಃ ಕಿಮ್ಮನೆ ರತ್ನಾಕರ್ ರವರೆ ಟೌನಿನ ಪ್ರತಿ ಮನೆ ಮನೆಗೆ ಹೋಗಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುತ್ತಿದ್ದಾರೆ. ಗುತ್ತಿಗೆ ದಾರರು, ಇಂಜಿನಿಯರ್ ಗಳು ಪೆಂಡಾಲನ್ನು ಅಂದಗೊಳಿಸಲು ಹಾಗೂ ಮಂತ್ರಿ ಮಹೋದಯರುಗಳು ಸಂತೃಪ್ತಗೊಳ್ಳಲು ಹಗಲೂ ರಾತ್ರಿ ಎನ್ನದೆ ದುಡಿವ ದೃಶ್ಯವನ್ನು ಕಂಡೆ.
ಸುಂದರವಾಗಿ ಕಂಗೊಳಿಸುತ್ತಿರುವ ಡಬಲ್ ರಸ್ತೆಯ ಪಕ್ಕವಿರುವ ಕಟ್ಟಡಗಳು ಮನಸೂರೆ ಗೊಂಡಂತೆ ಒಂದು ಕ್ಷಣ ಅನಿಸಿತು.ಈ ದಿನ ಹತ್ತಾರು ಅಂಗಡಿಗಳನ್ನು ಹೊಕ್ಕು ಹೊರ ಬಂದೆ. ಅನೇಕವುಗಳು ಆಧುನಿಕವಾಗಿ ಶೃಂಗಾರಗೊಂಡ ಲಲನೆಯರ ತರ ಕಾಣತೊಡಗಿದವು. ಸೀತೆ, ತಿಮ್ಮಿ ಮತ್ತು ಪೀಂಚಲುವಿನ ತರ ಕಾಣಲೇ ಇಲ್ಲ. ಹುಡುಕುತ್ತಾ ಹೋದಂತೆ ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ‘ಛಲಗಾರ’ ಪತ್ರಿಕೆಯನ್ನು ಕೈಲ್ಲಿಡಿದು ಓದುತ್ತಾ ಕೂತಿದ್ದರು.
ನನ್ನ ನೋಡಿದ ಈ ಎಂಬತ್ತನಾಲ್ಕು ವರ್ಷದ ಮನುಷ್ಯನಿಗೆ ಒಮ್ಮೆ ಗುರುತಾಗಲಿಲ್ಲ. ಆ ಹೊತ್ತಿಗೇ ‘ನೂರು ಗ್ರಾಮ್ ಅಡಿಕೆ ಕೊಡಿ ಎಂದು ಕೇಳಲು ಯುವತಿಯೋರ್ವರು ಬಂದರು.’ ‘ಈಗಷ್ಟೇ ಖಾಲಿಯಾಗಿದೆ’ ಎಂದರು ಹಮೀದ್ ಖಾನ್. ಮತ್ತೆ ನನ್ನ ಕಡೆ ನೋಡಿದವರೆ ‘ಓಹೋ ಬಾರೀ ದಿನವಾಯ್ತು. ಏನೂ ಸುದ್ದಿ ಇಲ್ಲವಲ್ಲ! ಸಂಪೂರ್ಣ ಮನೆ ಸೇರಿದ್ದೀರ? ಹೀಗೆಲ್ಲ ಪ್ರಶ್ನೆಗಳ ಸುರಿಮಳೆ.
ಒಂದಷ್ಟು ಎಲೆಯ ಕಟ್ಟು, ಬೆತ್ತದ ಬುಟ್ಟಿ, ಅಡಿಕೆ ತಟ್ಟಿ, ಸುಣ್ಣ, ಹೊಗೆ ಸೊಪ್ಪುಗಳ ಮಧ್ಯೆ ಈ ಶ್ವೇತ ಬಣ್ಣದ ಹಮೀದ್ಖಾನ್ ಮುಳುಗಿ ಹೋಗಿದ್ದರು. ಒಂದು ಕಡೆ ಆಜಾದ್ ರಸ್ತೆಯನ್ನು ಸಾರ್ವಜನಿಕರಿಗೆ ಅರ್ಪಿಸುವ ಅದ್ದೂರಿ ಕಾರ್ಯಕ್ರಮದ ನಡುವೆ ಹಮೀದ್ ಖಾನ್ ಒಮ್ಮೆಲೆ ನನ್ನನ್ನು ಹತ್ತಾರು ವರ್ಷ ಹಿಂದಕ್ಕೆ ಕೊಂಡೊಯ್ದರು.
ಅವರ ಭೂತ ಕಾಲದ ಆಜಾದ್ ರಸ್ತೆಯಲ್ಲಿ ಗೋಪಾಲಗೌಡರು ಬಂದರು. ಅಪ್ಪಣ್ಣ ಹೆಗ್ಡೆಯವರು ಬಂದರು, ಬಿ.ಎಸ್ ವಿಶ್ವನಾಥ್ ಬಂದರು. ತಾವು ಮತ್ತು ತಮ್ಮ ಸಹೋದರ ಕಾಸಿಂ ಖಾನ್ ಇಬ್ಬರೂ ತೀರ್ಥಹಳ್ಳಿಯ ಅಂದಿನ ಪುರಸಭೆಗೆ ಆಯ್ಕೆಯಾಗಿದ್ದಕ್ಕಾಗಿ ಸಾವಿರಾರು ಜನ ಅಭಿನಂದಿಸಿದ್ದನ್ನು ಹೇಳಿದರು. ಆದರೆ ಗೋಪಾಲಗೌಡರು ಶಾಸಕರಾಗಿಯೂ ಅಭಿನಂದಿಸಲಿಲ್ಲ. ಸತ್ಯ ಹೇಳಿದರು. ಒಂದೇ ಕುಟುಂಬದ ಇಬ್ಬರೂ ಗೆದ್ದಿದ್ದರಿಂದ ಬೇರೆಯವರಿಗೆ ಅವಕಾಶ ತಪ್ಪಿ ಹೋಗುತ್ತದೆ, ಇದು ಕೂಡದು ಎಂದರಂತೆ. ಕೃಷ್ಣಯ್ಯ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ, ಅಣ್ಣಪ್ಪ ಕಾಮತ್ ಮತ್ತು ದೇವರಾಯ ಕಾಮತ್ ಎಂಬ ಸಹೋದರರೂ ಆ ವರ್ಷವೇ ಗೆದ್ದಿದ್ದರಂತೆ.
ಗೌಡರ ಈ ಮಾತಿನಿಂದ ನೊಂದ ಹಮೀದ್ ಖಾನ್ ಮುಂದೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡದ್ದು ಇನ್ನೊಂದು ಕಥೆ! ೧೯೬೭ರ ಚುನಾವಣೆಯಲ್ಲಿ ಗೋಪಾಲಗೌಡರು ಮತ್ತು ಬಿ.ಎಸ್ ವಿಶ್ವನಾಥ್ ರವರು ಸೋಷಲಿಸ್ಟ್ ಮತ್ತು ಕಾಂಗ್ರೆಸ್ಸಿನ ಎದುರಾಳಿಗಳು. ತೀರ್ಥಹಳ್ಳಿಯ ಚರ್ಚ್ ಸರ್ಕಲ್ ಹತ್ತಿರದ ಕಟ್ಟೆಯ ಮೇಲೆ ಹಮೀದ್ ಖಾನ್ ಇತರರೊಂದಿಗೆ ಚುನಾವಣೆ ಹಾಗೂ ಈ ಸಲದ ಫಲಿತಾಂಶದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.. ಆ ಕಾಲದ ಗುತ್ತಿಗೆದಾರ ಅಬುಬೇಕರ್ ಸಾಹೇಬರು ವಿಶ್ವನಾಥನ್ ರವರನ್ನು ಸಮರ್ಥಿಸಿದರೆ ಸೋಷಲಿಸ್ಟ್ ಪಾರ್ಟಿಯ ಗೋಲಾ ಗೌಡರೇ ಗೆಲ್ಲಬೇಕು. ಗೆಲ್ಲುತ್ತಾರೆ ಎಂಬುದು ಹಮೀದ್ ಖಾನ್ ರವರ ಖಚಿತ ನಿಲುವು.
ಇವರ ಜೋರು ಜೋರಾದ ವಾದ ಅಲ್ಲೆ ಚಂದ್ರ ಡಾಕ್ಟರ್ ರವರ ಮನೆಯಲ್ಲಿದ್ದ ಗೋಪಾಲ ಗೌಡರಿ (ಗೌಡರು ಸಾಮಾನ್ಯವಾಗಿ ಡಾ. ಚಂದ್ರ ಶೇಖರ್ ಮನೆಯಲ್ಲಿ ಉಳಿಯುತ್ತಿದ್ದರು)ಗೆ ಕೇಳಿ ಹೊರ ಬರುತ್ತಾರೆ. ಕೂಡಲೆ ಗೌಡರು ಇವರ ಚರ್ಚೆಯೊಂದಿಗೆ ಸೇರಿ ತಮ್ಮ ವಾದ ಮಂಡಿಸುತ್ತಾರೆ. ಇವರ ವಾದ ಸರಣಿಯಿಂದ ಪ್ರಭಾವಿತರಾದ ಹಮೀದ್ ಖಾನ್ ಗೌಡರಿಗೆ ಫಿದಾ ಆಗುತ್ತಾರೆ.
ಅಲ್ಲಿಯವರೆಗೆ ಚುನಾವಣೆ ಬಗ್ಗೆ ನಿರ್ಲಿಪ್ತತೆಯಿಂದಿದ್ದ ಹಮೀದ್ ಖಾನ್, ಗೌಡರ ಅನುಯಾಯಿಯಾಗುತ್ತಾರೆ. ಈ ಸುದ್ದಿಯಿಂದ ವಿಶ್ವನಾಥ್ ರವರ ಕಡೆಯವರು ವಿಚಲಿತರಾಗುತ್ತಾರೆ. ಕಾಂಗ್ರೆಸ್ ಮುಂದಾಳುವೂ ವಿಶ್ವನಾಥ್ ರವರ ಅನುಯಾಯಿಯೂ ಆಗಿದ್ದ ಅಬುಬೇಕರ್ ಸಾಹೇಬ್ ರವರು ತಮ್ಮ ಕಾರಿನಲ್ಲಿ ವಿಶ್ವನಾಥ್ ಮನೆಗೆ ಹಮೀದ್ ಖಾನ್ ರವರನ್ನು ಕರೆದುಕೊಂಡು ಹೋಗುತ್ತಾರೆ. ವಿಶ್ವನಾಥ್ ರವರು ತಮ್ಮನ್ನು ಬೆಂಬಲಿಸುವಂತೆ ಎಷ್ಟೇ ಒತ್ತಾಯಿಸಿದರೂ ಹಮೀದ್ ಖಾನ್ ಜಪ್ಪಯ್ಯ ಎನ್ನುವುದಿಲ್ಲ.’ಗೌಡರ ಎದುರು ಚುನಾವಣೆಗೆ ನಿಂತಿದ್ದೇ ತಪ್ಪು’ ಎಂಬ ವಾದ ಸರಣಿ ಹಮೀದ್ಖಾನ್ ರವರದು.
ಇದೆಲ್ಲ ಏನೇ ಇರಲಿ.ಇಡೀ ತೀರ್ಥಹಳ್ಳಿಯ ಆಜಾದ್ ರಸ್ತೆಯಲ್ಲಿ ಬಹು ಮಹಡಿ ಕಟ್ಟಡಗಳು ಎರಡೂ ಸಮಾನಾಂತರ ರಸ್ತೆಗಳ ನಡುವೆ ಹೂಗಿಡಗಳು, ಪಾದಚಾರಿಗಳು ಹೋಗಲು ಇಂಟರ್ ಲಾಕುಗಳು ಇವೆಲ್ಲ ಅಭಿವೃದ್ದಿಯ ದ್ಯೋತಕಗಳಾಗಿ ಚುನಾವಣೆಯ ಚಿಮ್ಮುಗಲ್ಲು ಎಂದು ಭಾವಿಸುವ ಕಾಲದಲ್ಲಿ ಹಮೀದ್ ಖಾನ್ ತೀರ್ಥಹಳ್ಳಿಯ ಹಳೆ ಕಾಲದ ಮೌಲ್ಯಗಳ ಪ್ರತಿನಿಧಿಯಂತೆ ಇಂದು ಕಂಡರು.
ಚಳಿಗಾಲದಲ್ಲೂ ಬಿಸಿಲು ರಸ್ತೆಗಳ ಮೇಲೆ ಬೀಳಲು ವಾಹನಗಳು ತಡೆಯೊಡ್ಡುತ್ತಿದ್ದವು. ಜನರ ಮನಸ್ಸಿನಲ್ಲಾಗುತ್ತಿದ್ದ ಬದಲಾವಣೆಯನ್ನು ಕಾಂಕ್ರೀಟು ಕಟ್ಟಡಗಳು ಗ್ರಹಿಸುವಲ್ಲಿ ಸೋತಿದ್ದವೋ ಗೆದ್ದಿದ್ದವೋ ಅರ್ಥವಾಗುವಷ್ಟರಲ್ಲಿ ಮತ್ತೊಂದು ಅಂಗಡಿ ಕರೆಯುತ್ತಿತ್ತು.






0 Comments