ಬೀರು ದೇವರಮನಿ ಯವರ ಚೊಚ್ಚಲ ಕೃತಿ’ ಬೆಳಕಿನ ಒಂಟಿ ನಡಿಗೆ’ ಕವಿತಾ ಸಂಕಲನದ ಕುರಿತು ಬೆನ್ನುಡಿ ಮತ್ತು ಅಭಿಪ್ರಾಯ.
ಬೀರು ದೇವರಮನಿ

‘ಬೆಳಕಿನ ಒಂಟಿ ನಡಿಗೆ’ ಕೃತಿಯ ಬೆನ್ನುಡಿ
ಕಾಜೂರು ಸತೀಶ್
‘ಬೆಳಕಿನ ಒಂಟಿ ನಡಿಗೆ’ ಬೀರು ದೇವರಮನಿ ಅವರ ಚೊಚ್ಚಲ ಕವನ ಸಂಕಲನ. ಅದು ಕಣ್ಣೆದುರಿಗಿನ ಹತಾಶೆ, ಅತೃಪ್ತಿ, ಆಕ್ರೋಶ ಮತ್ತು ಆಶಯಗಳ ಚಕಮಕಿಯಲ್ಲಿ ಹುಟ್ಟುವ ಬದುಕಿನ ಮತ್ತು ಕಾವ್ಯದ ಬೆಳಕಿನ ನಡಿಗೆ.
ಕಾವ್ಯದ ಕಡುಮೋಹಿಯಾದ ಬೀರು ಅವರ ಕವಿತೆಗಳು ಒಂದು ವಿಶಿಷ್ಟ ಸಾಮಾಜಿಕ ಎಚ್ಚರದಲ್ಲಿ ಮೈಪಡೆದವುಗಳು. ಅದರ ಜೊತೆಜೊತೆಗೆ ಯೌವ್ವನದ ವಯೋಸಹಜ ತುಡಿತಗಳು, ವ್ಯಕ್ತಿ ಚಿತ್ರಗಳು, ಬಾಲ್ಯದ ಮುಗ್ಧತೆಗಳೆಲ್ಲ ಇಲ್ಲಿ ಕವಿತೆಗಳಾಗಿವೆ. ಕಾವ್ಯಲೋಕದಲ್ಲಿ ಅವರು ತಳವೂರಿ ನಿಲ್ಲಬಲ್ಲರು ಎನ್ನುವುದಕ್ಕೆ ‘ಬಿಡುಗಡೆಯೊಂದಿಲ್ಲ ಬಂಧಿಯಾಗಬೇಕು’ ಮತ್ತು ‘ಕಂಡದ್ದನ್ನು ಬಚ್ಚಿಡುವುದು’ ಎಂಬ ಎರಡು ಕವಿತೆಗಳೇ ಸಾಕ್ಷಿ.
‘ನಿಸರ್ಗನೋಟ’ದ ಕ್ರಮದಲ್ಲಿ ಕಾವ್ಯವನ್ನು ಕಾಣುವ ಬೀರು ಅವರ ಕವಿತೆಗಳು ‘ಬರಗಾಲದಲ್ಲಿ ಬೆಂಕಿಯುಂಡೆಯನ್ನು ತಿನ್ನುವ’ ಮರಗಳನ್ನು ಧ್ಯಾನಿಸುತ್ತಾ ‘ಜಗತ್ತು ಹಸಿರಾಗಲಿ’ ಎಂಬ ಸದಾಶಯವನ್ನು ಹೊತ್ತು ನಿಲ್ಲುತ್ತವೆ. ಇಂತಹದ್ದೇ ಮಹತ್ತಾದ ಆಶಯಗಳನ್ನು ಧ್ವನಿಸುವ ಕವಿತೆಗಳು ಸಂಕಲನದುದ್ದಕ್ಕೂ ಕಾಣಸಿಗುತ್ತವೆ. ಸರಳವಾಗಿ ಮಾತಿಗಿಳಿಯುವ ಅವು ಅಮಾನುಷತೆಯ ವಿರುದ್ಧ ತುಸು ಹೆಚ್ಚೇ ಶಬ್ದಮಾಡುತ್ತವೆ. ಅವೆಲ್ಲವುಗಳ ಒಟ್ಟು ಧ್ವನಿ- ಸಮಸಮಾಜವೊಂದರ ನಿರ್ಮಾಣ; ನಡೆವ ಕಪ್ಪು ಹಾದಿಗೊಂದಿಷ್ಟು ಬೆಳಕಿನ ಲೇಪನ.
ಭರವಸೆ ಮೂಡಿಸುತ್ತಾ ಕಾವ್ಯಲೋಕಕ್ಕೆ ಹೆಜ್ಜೆಯನ್ನಿಟ್ಟ ಗೆಳೆಯ ಬೀರು ದೇವರಮನಿ ಅವರ ಮುಂದಿನ ಕಾವ್ಯದ ನಡಿಗೆ ಮತ್ತಷ್ಟೂ ಬೆಳಕಿನಿಂದ ಕೂಡಿರಲಿ ಎಂದು ಪ್ರೀತಿಯಿಂದ ಆಶಿಸುತ್ತೇನೆ.
ಅಭಿಪ್ರಾಯ
ಕೃಷ್ಣ ದೇವಾಂಗಮಠ
ಬೆಳಕೇ ತಾನಾದ ಜೀವವೊಂದರ ಕಾವ್ಯ
ಬೆಳಕು ಮಾತ್ರವೇ ತಾನು ಹೀಗೇ ಒಂಟಿ ಚಲನೆ ಮಾಡಲು ಸಾಧ್ಯ. ಆದರೆ ಇದು ಒಬ್ಬಂಟಿ ನಡಿಗೆ ಅಲ್ಲ ಬದಲಾಗಿ ಎಲ್ಲರಿಗೂ ದಾರಿ ದೀಪವಾಗಿ ತಾನು ಮುಂದೆ ನಡೆಯುತ್ತಾ ಎಲ್ಲರೊಟ್ಟಿಗೆ ಸಾಗುವುದು. ನಡಿಗೆ ಅನ್ನುವುದೇ ಬಹಳ ಮುಖ್ಯವಾದದ್ದು. ಲೌಕಿಕ ಮತ್ತು ಅಲೌಕಿಕ ಚಲನೆಗಳು ನಮ್ಮನ್ನು ಎಲ್ಲ ಆಯಾಮಗಳಿಂದಲೂ ಬೆಳೆಸುವಂಥವು. ಈ ಬೆಳಕಿನ ಒಂಟಿ ನಡಿಗೆ ನೇರ ಬುದ್ಧನನ್ನೆ ನೆನಪು ತರುವಂತಹ ಚಿತ್ರ. ಇದನ್ನೇ ಕವಿ ತಮ್ಮ ಮತ್ತೊಂದು ಕವಿತೆಯಲ್ಲಿ “ನಾನೊಂದು ವಾರಸುದಾರರಿಲ್ಲದ ಧೂಳಿನ ಕಣ” ಎನ್ನುತ್ತಾರೆ. ಇಲ್ಲಿ ಶಾಂತಿ ಇದೆ ಮತ್ತು ಅಷ್ಟೇ ತನ್ಮಯತೆಯೂ ಇದೆ.
ಬೀರು ದೇವರಮನಿ ಅವರು ಕವಿತೆಗಳನ್ನು ಹಚ್ಚಿಕೊಂಡು ಓದುವ, ಅವುಗಳಿಂದ ತಮ್ಮನ್ನು ಶ್ರೀಮಂತಗೊಳಿಸಿಕೊಳ್ಳುತ್ತಲೇ ಅವುಗಳನ್ನು ಪ್ರೀತಿಯಿಂದ ಮಾತನಾಡಿಸುವ , ಈ ಹೊತ್ತಿಗೆ ಕವಿ ಮತ್ತು ಕವಿತೆಗಳಿಗಿರುವ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಒಟ್ಟಿಗಿರುವ, ಏಕಾಂತವನ್ನು ಕಾಯ್ದುಕೊಂಡು ಲೋಕಾಂತಕ್ಕೆ ತೆರೆದುಕೊಳ್ಳುವ, ಸದಾ ಹಸನ್ಮುಖಿಯಾಗಿರುವ ಜೀವಪರ ಕಾಳಜಿಯ ಮಿತ್ರ. ತಮ್ಮ ಕವಿತೆಗಳನ್ನು ಹೀಗೆ ಈ ನೆವದಲ್ಲಿ ನನಗೆ ಓದಿಸುತ್ತಿರುವುದಕ್ಕೆ ನಾನು ಅವರ ಕವಿತೆಗಳಿಗೆ ಆಭಾರಿ. ಯಾವುದೂ ಹೊರಗಿನದಲ್ಲಾ ಎಂದು ಕವಿತೆ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಸದಾ ಮೊರೆವ ಕಡಲು.
ಕವಿತೆಯೆಂದರೆ ಕಲ್ಪನೆಯೊಂದಿಗೆ ಬೆರೆತು ತನ್ನ ಸುತ್ತಲಿನ ವಾಸ್ತವಕ್ಕೆ ಧ್ವನಿಯಾಗುವುದು ಎಂದು ಅರಿತಿರುವ ಈ ಕವಿ ಕರುಣೆಯ ಕೂಗು ಮಾತ್ರ ಹಾಕಬಲ್ಲೆ ಎಂದು ಮೆಲು ಬಂಡಾಯವಾದಿಯಾಗಿ ಎದೆಯ ದನಿಯಲ್ಲಿ ಬರೆಯಬಲ್ಲರು ಎನ್ನುವುದಕ್ಕೆ ಸಂಕಲನದ ಕೆಲವು ಪದ್ಯಗಳೇ ಸಾಕ್ಷಿ. ಕ್ರಾಂತಿ ಎಲ್ಲರ ಒಳಗೇ ಆಗಬೇಕು ಎಂದು ಇವರಿಗೆ ತಿಳಿದಿದೆ.ತಲ್ಲಣಗಳನ್ನು ಅದರಾಚೆಗೆ ನಿಂತು ತಣ್ಣಗೆ ದಾಟಿಸುವ ನಿರ್ಲಿಪ್ತತೆ ನಿಮಗೆ ನಿಧಾನಕ್ಕೆ ದಕ್ಕುತ್ತಿದೆ. ಇಲ್ಲಿಯ ಬಹುತೇಕ ಕವಿತೆಗಳ ಮೇಲೆ ದಟ್ಟವಾಗಿ ಆಂಗ್ಲ ಸಾಹಿತ್ಯ ಪ್ರಭಾವಿಸಿದಂತೆ ಕಾಣುತ್ತದೆ. ಅದರಿಂದ ನೀವು ಬಿಡಿಸಿಕೊಂಡು ನಿಮ್ಮನ್ನು ನೀವು ಹೊಸದಾಗಿ ಕಟ್ಟಿಕೊಳ್ಳಬಲ್ಲಿರಿ ಎನ್ನುವುದನ್ನೂ ಇಲ್ಲಿ ನಿರೂಪಿಸಿದ್ದೀರಿ ಕೂಡ.
ಏಕಾಂತದ ಹಕ್ಕಿಯೊಂದನ್ನು ಕಂಡಿದ್ದೇನೆ
ತನಗೆ ತಾನೆ ಬಹಿಷ್ಕಾರ ಹಾಕಿಕೊಂಡು
ಗೂಡಿನಿಂದ ಹೊರನಡೆದು ನೆಟ್ಟಗೆ
ನಿಂತ ಕೋಲಿನ ಮೇಲೆ ಕೂರಲು ತವಕಿಸುವುದನ್ನು
ಕವಿಯು ಸ್ವಯಂ ವಿಮರ್ಶಕರಾಗಿದ್ದಾರೆ. ತನ್ನ ಕವಿತೆಯ ಓರೆಕೊರೆ ತಿಳಿಯಬಲ್ಲವನಾಗಿದ್ದಾನೆ. ಅನುಭವಗಳನ್ನು ಕವಿತೆಗೆ ಒಗ್ಗಿಸುವ ಕಲೆಗಾರಿಕೆ ಸಂಪಾದಿಸುತ್ತಿರುವ ಈ ಕವಿ ನಿರಾಶಾವಾದಿಯಲ್ಲ. ಭವಿಷ್ಯದ ಕುರಿತ ಭರವಸೆ ಇಟ್ಟುಕೊಂಡು ವಾಸ್ತವಕ್ಕೆ ಸ್ಪಂದಿಸುತ್ತಲೇ ಜಗದ ಬೆರಗನ್ನು ತನ್ನೊಳಗೆ ತುಂಬಿಕೊಳ್ಳುತ್ತಿದ್ದಾರೆ. ಕಾವ್ಯದ ಭಾಷೆಯ ಮೇಲ್ಮೈ ತುಂಬಾ ಸರಳವಾಗಿದೆಯಾದರೂ ರೂಪಕಗಳಲ್ಲಿ ಸಂಕೀರ್ಣವಾಗಲು ಹಲವು ಕಡೆ ತವಕಿಸುತ್ತಿದೆ. ಆದರೆ ಸ್ಪಷ್ಟತೆಯನ್ನು ಪಡೆದುಕೊಳ್ಳಬೇಕೆಂದು ಅನ್ನಿಸುತ್ತದೆ.ಭಾಷೆಗೆ ಸುಲಭವಾಗಿ ಒಗ್ಗದ ಭಾವಗಳನ್ನು ಮಾತಿನಲ್ಲಿ ಹಿಡಿಯಲು ಪ್ರಯತ್ನಿಸಿದ್ದಾರೆ.ಕವಿತೆ ಒಂದು ವಸ್ತುವನ್ನು ನಿಭಾಯಿಸಿದ ಮೇಲೂ ಅದು ತನ್ನೊಳಗೆ ಮತ್ತು ಆಚೆಗೆ ಒಂದು ಕದಡಿದ ಭಾವವನ್ನು ಉಳಿಸಿಕೊಳ್ಳಬೇಕು. ಸಂಕಲನದ ಕವಿತೆಗಳು ಆಧುನಿಕತೆಯಲ್ಲಿ ಕಳೆದುಹೋಗದೆ, ಕೃತಕವಾಗದೇ ತಮ್ಮದೇ ಆದ ಹದಸ್ಥಿತಿಯನ್ನು ಕಾಯ್ದುಕೊಂಡಿವೆ. ಪ್ರಭುದ್ಧತೆಯ ಹಾದಿಯನ್ನು ಕ್ರಮಿಸುತ್ತಿರುವ ಕವಿ ಭ್ರಮೆಯಿಂದ ತಮ್ಮನ್ನು ತಾವು ಪಾರು ಮಾಡಿಕೊಂಡಿದ್ದಾರೆ ಎಂದು ನಂಬಿದ್ದೇನೆ.
“ಅವಳ ಆತ್ಮ
ಮಂಜುಗಡ್ಡೆಯಂತೆ ತಂಪಾಗಿದೆ ”
ಕವಿ ಪ್ರೇಮವನ್ನೂ ಮೈಗೂಡಿಸಿಕೊಂಡಿದ್ದಾರೆ. ಅವಳು, ಕವಿತೆಗಳಲ್ಲಿ ಎಲ್ಲವೂ ಆಗಿ ಸುಳಿದಾಡಿದ್ದಾಳೆ. ಪ್ರೀತಿ, ಹತಾಷೆಯಾಗಿಯೂ ಮತ್ತು ಜೀವನ್ಮುಖಿಯಾಗಿಯೂ ಇವರಿಗೆ ಕಾಣುತ್ತದೆ. ಅಂತೆಯೇ ಹತಾಷೆಯ ಈ ಕಾಲದಲ್ಲಿ ಒತ್ತಡಗಳನ್ನು ಮರೆತು ಬದುಕಲು ಪ್ರೀತಿಯೂ ಧ್ಯಾನವೇ ಆಗಿ ನನಗೆ ಕಾಡುತ್ತದೆ. ಬೆಳಕಿನ ಒಂಟಿ ನಡಿಗೆ ಎಲ್ಲವನ್ನೂ ಹಾಯ್ದು ಕೆಲವು ಕಡೆ ವೇಗವಾಗಿ ಚಲಿಸಿದಂತೆ ಅನ್ನಿಸುತ್ತದೆ. ಸ್ವಲ್ಪ ನಿಂತು ಆಮೆಯ ವೇಗದಲ್ಲಿ ಚಲಿಸಿದ್ದಾದರೆ ಇನ್ನಷ್ಟು ಆಳ ಅಗಲಗಳನ್ನು, ಮಗ್ಗುಲುಗಳನ್ನು ಸ್ಪರ್ಶಿಸಲು ಸಾಧ್ಯವಿದೆ. ಸಹಜ ಕವಿಯೇ ಆಗಿರುವ ಬೀರು ದೇವರಮನಿಯವರ ಮೊದಲ ಸಂಕಲನ ಭರವಸೆಯೊಂದನ್ನು ಚಿಗುರಿಸಿದೆ. ಕಾವ್ಯ ಅವರನ್ನು ಹಬ್ಬಿಕೊಂಡು ಅವರ ಕಾವ್ಯದ ಬೇರುಗಳು ಗಟ್ಟಿಯಾಗುತ್ತಾ ಸಾಗಲಿ. ಈ ಸಂಕಲನ ಪುಸ್ತಕ ಪ್ರಾಧಿಕಾರದ ಸಹಾಯ ಧನ ಪಡೆದು ಪ್ರಕಟಗೊಳ್ಳುತ್ತಿರುವುದು ತುಂಬಾ ಖುಷಿಯ ಸಂಗತಿ. ಕವಿತೆ ಎಂದಿಗೂ ಕವಿಯನ್ನು ಜನರೆದೆಯಲ್ಲಿ ಉಳಿಸುವಂಥದ್ದು ಹಾಗೆ ದೇವರಮನಿಯವರು ನಮ್ಮಲ್ಲಿ ಒಂದು ಪ್ರಜ್ಞೆಯ ಜೊತೆಗೆ ಅವರ ಸಾಲುಗಳೊಂದಿಗೆ ಉಳಿಯುವ ಕವಿಯಾಗಿ ಬೆಳೆಯಲಿ. ಈ ಸಂಕಲನದೊಂದಿಗೆ ಸ್ಪಷ್ಟ ಹೆಜ್ಜೆ ಗುರುತೊಂದನ್ನು ಮೂಡಿಸಲು ಮುಂದಾಗಿರುವ ಕವಿಗೆ ಕಾವ್ಯವೇ ಉಸಿರಾಗಲಿ ಎಂದು ಹಾರೈಸುವೆ.
ಬೀರು ದೇವರಮನಿ ಯವರ ಬೆಳಕಿನ ಒಂಟಿ ನಡಿಗೆ
ನಿಮಗೆ ಇವೂ ಇಷ್ಟವಾಗಬಹುದು…




0 Comments