ಬೀದಿಯಲ್ಲಿ ಕೊಳಲನೂದುವ ಕೃಷ್ಣ ಇನ್ನೂ ಬರಲಿಲ್ಲ..!

ಅನಿತಾ ಪಿ ತಾಕೊಡೆ

ವಾರದ ಆರು ದಿನಗಳ ಬಿಡುವಿಲ್ಲದ ನಡೆಗೆ ಒಂದು ದಿನದ ವಿರಾಮ. ಹಾಗಾಗಿ ಈ ದಿನ ಆಫೀಸಿಗೆ ಕೆಲಸಕ್ಕೆ ಹೋಗುವವರ ಮನೆಮಂದಿಯೆಲ್ಲ ಸ್ವಲ್ಪ ತಡವಾಗಿ ಎದ್ದಿರಬಹುದು. ಎಂಟು ಗಂಟೆಯೊಳಗೆ ಮುಗಿದು ಬಿಡುವ ಮನೆಗೆಲಸಗಳೆಲ್ಲ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೂ ಮುಂದುವರಿಯಬಹುದು. ‘ಇನ್ನೂ ಎದ್ದಿಲ್ಲವೇ, ಮನೆಗೆಲಸ ಮುಗಿದಿಲ್ಲವೇ’ ಎಂದು ಯಾರಾದರೂ ಕರೆ ಮಾಡಿ ಕೇಳಿದರೆ ಒಂದೇ ಉತ್ತರ: ‘ಇಂದು ಭಾನುವಾರವಲ್ಲವೇ ನಿಧಾನಕ್ಕೆ ಕೆಲಸ ಮಾಡಿದರಾಯಿತು’ ಹೀಗೆ ಪ್ರತಿ ವಾರದ ರಜೆಯ ದಿನ, ಅಡುಗೆ ಮನೆಗೆ ಮಾತ್ರ ರಜೆ ನೀಡದೆ ಕಳೆದು ಹೋಗಿಬಿಡುತ್ತಿತ್ತು.

ಕಳೆದ ಏಳೆಂಟು ತಿಂಗಳು  ಲಾಕ್‍ ಡೌನ್‍ನಿಂದಾಗಿ ವಾರ ಪೂರ್ತಿ ರಜಾದಿನಗಳಾಗಿಯೇ ಮಾರ್ಪಟ್ಟಾಗ ಹಲವರು, ‘ಈವಾಗ ತುಂಬಾ ಬಿಡುವಿದೆ, ನೀನು ಕತೆ ಕವನಗಳನ್ನು ತುಂಬಾ ಬರೆದಿರಬಹುದಲ್ಲವೇ?’ ಎಂದು ಕೇಳುತ್ತಿದ್ದರು. “ನಮಗೆಲ್ಲಿದೆ ಸಮಯ..! ವರ್ಕ್ ಫ್ರಮ್ ಹೋಮ್ ಅಲ್ಲವೇ..! ಎಲ್ಲರೂ ಮನೆಯಲ್ಲಿ ಇರುವಾಗ ದಿನಕ್ಕೆ ನಾಲ್ಕು ಸಲ ಚಾ, ಎರಡು ಸಲ ತಿಂಡಿ, ಅನ್ನ ಸಾರು ಪಲ್ಯ, ಕೊರೊನಾ ಕಷಾಯ, ಪದೇ ಪದೇ ಕುಡಿಯಲು ಬಿಸಿ ಬಿಸಿ ನೀರು ಹೀಗೆ ಈ ಲಾಕ್‍ ಡೌನ್ ಗೃಹಿಣಿಗೆ ಮಾತ್ರ ಬಿಡುವಿಲ್ಲದಷ್ಟು ಕೆಲಸ ಕೊಟ್ಟು ಬಿಟ್ಟಿದೆ” ಅಂದಾಗ ಕೇಳಿದವರೂ ‘ಹೌದಲ್ಲವೇ’ ಎಂದು ಸುಮ್ಮನಾಗುತ್ತಿದ್ದರು.

ಈಗ ಲಾಕ್‍ ಡೌನ್ ಬಂಧನದಿಂದ ಬಹುಪಾಲು ಬಿಡುಗಡೆ ಸಿಕ್ಕಿದೆ. ಮುಂಬೈ ನಗರ ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಿದೆ. ಪರಿಸ್ಥಿತಿಯನ್ನು ಇರುವ ಹಾಗೆಯೇ ಒಪ್ಪಿಕೊಂಡು, ಅನುಭವದ ಮೂಸೆಯಲ್ಲಿ ಕಲಿತ ಪಾಠಗಳೊಂದಿಗೆ ಕೆಲವೊಂದು ಬದಲಾವಣೆಗಳಿಗೆ ಒಗ್ಗಿಕೊಂಡು, ಕಳೆದು ಹೋದುದರ ಚಿಂತೆಯನ್ನು ಬದಿಗಿರಿಸಿ, ಎರಡಿಪ್ಪತ್ತರ ವರುಷವನ್ನು ದಾಟಿ ಹೊಸ ವರ್ಷದಲ್ಲಿ ಮುಂಬೈ ಮಾಯಾನಗರಿ ಮತ್ತೆದ್ದು ನಿಂತು ಎಲ್ಲರಲ್ಲೂ ಹೊಸ  ಭರವಸೆಯನ್ನು ಮೂಡಿಸಿದೆ.

ಕೊರೊನಾ ಕಾರಣದಿಂದ ತಮ್ಮೂರಿಗೆ ತೆರಳಿದ ಹೆಚ್ಚಿನವರು ಮತ್ತೆ ನಗರ ಸೇರಿಕೊಂಡಿದ್ದಾರೆ. ರೋಗದ ಭೀತಿ ಯಾರಿಗೂ ಇದ್ದಂತೆ ಕಾಣುವುದಿಲ್ಲ. ಆದರೆ ದಂಡ ತೆರಬೇಕಾಗುವ ಭಯಕ್ಕೋ ಏನೋ..! ಮಾಸ್ಕ್ ಧರಿಸುತ್ತಿದ್ದಾರೆ. ಅಂಗಡಿಗಳಲ್ಲಿ ಸಾಲಾಗಿ ನಿಲ್ಲುವ ಜನರ ನಡುವೆ ಈಗ ಸಾಮಾಜಿಕ ಅಂತರವಿಲ್ಲ. ‘ಐಸಾ ಚಿಪ್ಕೋ ಮತ್, ಡಿಸ್ಟೆನ್ಸ್ ಮೈಂಟೈನ್ ಕರೋನಾ. ಸಮಜ್ಮೆ ನಹೀ ಆತಾ ಹೈಕ್ಯಾ?’ ಎಂದು ಈಗ ಯಾರೂ ಗದರಿಸುವುದಿಲ್ಲ. ಪ್ರತಿಯೊಂದು ವಸ್ತುಗಳನ್ನು ಕೊಂಡುಕೊಂಡ ನಂತರ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವವರು, ಅದು ಚರ್ಮರೋಗಕ್ಕೆ ಕಾರಣವಾಗಬಹುದೆಂಬುದನ್ನೂ ಅರಿತು ಅದರ ಬಳಕೆಯನ್ನು ಕಡಿಮೆ ಮಾಡಿದ್ದಾರೆ.

ಬ್ಯಾಂಕಿನ ಹೊರಗಡೆ ಇಷ್ಟುದ್ದದ ಸಾಲಿನಲ್ಲಿ ನಿಂತು, ಬಾಗಿಲಿನ ಬಳಿ ಬರುವಷ್ಟರ ಹೊತ್ತಿಗೆ, ಎದುರುಗೊಳ್ಳುವ ಸ್ಯಾನಿಟೈಸರ್ ಸ್ಟ್ಯಾಂಡಿನಲ್ಲಿರುವ ಬಾಟಲುಗಳು ಖಾಲಿಯಾಗಿ ಕಾಲಿನ ಬೆರಳಿನಲ್ಲಿ ಎಷ್ಟು ಒತ್ತಿದರೂ ಟುಸ್ ಪುಸ್ಸ್ ಅನ್ನುವುದಿಲ್ಲ. ಶಿಸ್ತಿನ ಪಾಲನೆಯ ಬೋಧನೆಯನ್ನು ಮಾಡುತ್ತ ಇಬ್ಬಿಬ್ಬರನ್ನೇ ಬ್ಯಾಂಕಿನ ಒಳಗಡೆ ಕಳುಹಿಸುತ್ತಿದ್ದ ಕಾವಲುಗಾರ ಈಗ ಒಳಗಡೆ ಕುರ್ಚಿ ಹಾಕಿ ತನ್ನ ಪಾಡಿಗೆ ತಾನು ಸುಮ್ಮನೆ ಕೂತಿದ್ದಾನೆ. ನಮಗೂ ಸ್ವಲ್ಪ ಮಟ್ಟಿಗೆ ಉಸಿರು ಬಿಡುವಂತಾಗಿದೆ.

ದಿನ ಬಳಕೆಯ ವಸ್ತುಗಳನ್ನು ಕದ್ದು ಮುಚ್ಚಿ ಮಾರುವ ಪರಿಸ್ಥಿತಿ

ಲಾಕ್‍ಡೌನ್ ಸಂದರ್ಭದಲ್ಲಿ ದಾಸ್ತಾನು ಪೂರ್ತಿ ಖಾಲಿಯಾಗುವವರೆಗೂ ಭರ್ಜರಿ ವ್ಯಾಪಾರ ಗಿಟ್ಟಿಸಿಕೊಂಡದ್ದು ದಿನಸಿ ಅಂಗಡಿಗಳು ಮಾತ್ರ. ಕೆಲವು ತಿಂಗಳ ಹಿಂದೆ, ‘ಬೇಕಾದರೆ ತಗೊಳ್ಳಿ ಇಲ್ಲವಾದರೆ ಬಿಟ್ಟುಬಿಡಿ’ ಎಂದು ಬಾಯಿಗೆ ಬಂದಷ್ಟು ಬೆಲೆ ಹೇಳಿ ನಿಷ್ಟೂರವಾಗಿ ವರ್ತಿಸುತ್ತಿದ್ದ ಅಂಗಡಿ ಮಾಲಕರು ಮತ್ತೆ ಹಿಂದಿನಂತೆ ಗ್ರಾಹಕರೊಡನೆ ವಿನಯತೆಯಿಂದ ನಡೆದುಕೊಳ್ಳುತ್ತಿದ್ದಾರೆ.

ಕೊರೊನಾ ಕಾಳಜಿಗಿಂತ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡು ದೊಡ್ಡ ದೊಡ್ದ ಅಂಗಡಿಗಳಿಗೆ ದಾಳಿ ಮಾಡಿ ಬೇಕಾದಷ್ಟು ಲಂಚ ಗಿಟ್ಟಿಸಿಕೊಳ್ಳುತ್ತಿದ್ದ ಬಿಎಂಸಿ ಅಧಿಕಾರಿಗಳು ಮತ್ತೆ ಹಿಂದಿನಂತೆ ಬೀದಿ ವ್ಯಾಪಾರಿಗಳತ್ತ ಮುಖ ಮಾಡಿ ಐವತ್ತು, ನೂರು ರೂಪಾಯಿಗಳನ್ನು ವಸೂಲಿ ಮಾಡುವುದರಲ್ಲಿ ನಿರತರಾಗಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ನಿತ್ಯದ ವಸ್ತುಗಳಿಗಾಗಿ ನಡೆಸಿದ ಪರದಾಟ ಯಾವತ್ತಿಗೂ ಮರೆಯುವಂಥದ್ದಲ್ಲ. ಮಾರ್ಚ್ ತಿಂಗಳಲ್ಲಿ ಶುರುವಾದ ಲಾಕ್ ಡೌನ್ ಮೇ ತಿಂಗಳಿನಲ್ಲಿ ತುಸು ಸಡಿಲಗೊಂಡು ಒಂದು ದಿನ ರಸ್ತೆಯ ಎಡಬದಿ ಇನ್ನೊಂದು ದಿನ ಬಲಬದಿಯ ಅಂಗಡಿಗಳು ತೆರೆಯಲು ಅನುಮತಿ ನೀಡಲಾಗಿತ್ತು. ಬಿಎಂಸಿ ಅಧಿಕಾರಿಗಳಿಗೆ ಲಂಚ ಕೊಟ್ಟ ಮಾಲೀಕರ ಅಂಗಡಿಗಳು ಮಾತ್ರ ನಿತ್ಯವೂ ತೆರೆದಿರುತ್ತಿದ್ದವು. ಆದರೆ ಮೇ 31 ರಂದು ಏಕಾಏಕಿಯಾಗಿ ಬಿಎಂಸಿ ಗಾಡಿಯಲ್ಲಿ ಬಂದ ಅಧಿಕಾರಿಗಳು ಎಲ್ಲರೂ ನೋಡುತ್ತಿದ್ದಂತೆಯೇ ಅಂಗಡಿಯ ಮುಂದೆ ನೇತಾಡುವ ಲೇಸ್ ಕುರ್ಕುರೆ ಪ್ಯಾಕೇಟುಗಳನ್ನು ಎಳೆದು ರಸ್ತೆಗೆ ಚೆಲ್ಲಿ ಬರುವ ಜೂನ್ ಹದಿನೈದರವರೆಗೆ ಯಾವುದೇ ಅಂಗಡಿಗಳು ತೆರೆದಿರುವುದಿಲ್ಲ ಎಂದು ಘೋಷಣೆ ಮಾಡಿ ಹೊರಟು ಹೋಗಿದ್ದರು.

ಆ ಸಮಯದಲ್ಲಿ ಕೊರೊನಾ ಹಾವಳಿ ಡೊಂಬಿವಲಿ ಕಲ್ಯಾಣ್ ಪರಿಸರದಲ್ಲಿ ಮಿತಿ ಮೀರಿತ್ತು. ಯಾವುದೇ ಪೂರ್ವ ಸೂಚನೆಯಿಲ್ಲದೆ ಎಲ್ಲಾ ಅಂಗಡಿಗಳು ಮುಚ್ಚಿದ್ದರಿಂದ ಆ ಸಮಯದಲ್ಲಿ ದಿನ ನಿತ್ಯದ ಸಾಮಾನುಗಳಿಗೆ ಗಲ್ಲಿ ಗಲ್ಲಿ ಸುತ್ತಿ ಕಾಲು ನಡಿಗೆಯಲ್ಲಿಯೇ ಎರಡು ಮೂರು ಕಿಲೋಮೀಟರ್ ದೂರದಿಂದ ಸಾಮಾಗ್ರಿಗಳನ್ನು ಕೊಂಡು, ಹೊತ್ತುಕೊಂಡು ಬಂದ ನೆನಪು ಇನ್ನೂ ಅಚ್ಚಳಿಯದೆ ಉಳಿದಿದೆ. ಸಾರಾಯಿಯನ್ನು ಕದ್ದು ಮುಚ್ಚಿ ಮಾರುವುದನ್ನು ಕೇಳಿದ್ದೇನೆ ಆದರೆ ನಿತ್ಯ ಬಳಕೆಯ ವಸ್ತುಗಳನ್ನು ಆ ರೀತಿ ಮಾರುವುದನ್ನು ಕಂಡಿದ್ದು ಇದೇ ಮೊದಲ ಬಾರಿ. ದಿನಸಿ ಅಂಗಡಿಯಲ್ಲಿರುವ ಒಬ್ಬಾತ ದೂರದಲ್ಲಿ ಬಿಎಂಸಿ ಗಾಡಿ ಬರುವುದೇ ಎಂದು ನಿಗಾವಹಿಸುತ್ತಿದ್ದರೆ, ಇನ್ನೊಬ್ಬ ನಮ್ಮನ್ನು ದೂರದಲ್ಲಿಯೇ ನಿಲ್ಲುವಂತೆ ಹೇಳಿ ಬೇಕಾದ ಸಾಮಾನುಗಳ ಚೀಟಿಯನ್ನು ತೆಗೆದುಕೊಂಡು ಹೋಗುತ್ತಿದ್ದ.

ಸ್ವಲ್ಪ ಹೊತ್ತಿನ ನಂತರ ಅರ್ಧ ಮುಚ್ಚಿದ ಬಾಗಿಲಿನಿಂದ ಹೊರಬಂದು ಕೈ ಸನ್ನೆ ಮಾಡಿ ಕರೆದು ಸಾಮಾನುಗಳ ಚೀಲವನ್ನು ಕೊಟ್ಟು ಹಣವನ್ನು ತೆಗೆದುಕೊಂಡು ಬೇಗ ಇಲ್ಲಿಂದ ಹೋಗಿ ಅನ್ನುತ್ತಿದ್ದರು. ಅಂಗಡಿ ತೆರೆದಿರುವುದು ಅಧಿಕಾರಿಗಳಿಗೆ ಗೊತ್ತಾದರೆ ಹದಿನೈದು ಸಾವಿರ ದಂಡ ತೆರಬೇಕಾಗುತ್ತಿತ್ತು. ಇಲ್ಲವಾದರೆ ಅಂಗಡಿಯ ಪರವಾನಗಿಯನ್ನೇ ರದ್ದು ಪಡಿಸುವುದಾಗಿ ಬೆದರಿಕೆಯನ್ನೊಡ್ಡಿದ್ದರು.

ತರಕಾರಿ ಅಂಗಡಿಗಳು ಕೂಡ ಹಾಗೆಯೇ. ಅಂಗಡಿಯ ಬಾಗಿಲಿನ ಮೇಲೆ ಮೊಬೈಲ್ ನಂಬರಿನ ಒಂದು ಚೀಟಿಯನ್ನು ಅಂಟಿಸುತ್ತಿದ್ದರು ಆ ನಂಬರಿಗೆ ಕರೆ ಮಾಡಿ ಇಂಥ ತರಕಾರಿಗಳು ಬೇಕು ಎಂದು ಹೇಳಬೇಕು. ಸ್ವಲ್ಪ ಹೊತ್ತಿನಲ್ಲಿ ಮುಚ್ಚಿದ ಬಾಗಿಲಿನ ಎಡೆಯಿಂದ ಕೈಯನ್ನು ಮಾತ್ರ ಹೊರಗೆ ತೂರಿಸಿ ತರಕರಿಯನ್ನು ಇಟ್ಟು ಬಿಡುತ್ತಿದ್ದರು. ದೂರದಲ್ಲಿ ನಿಂತ ನಮಗೆ ಕರೆ ಮಾಡಿ ಹೇಳಿದ ಕೂಡಲೇ ನಾವು ಹೋಗಿ ತೆಗೆದುಕೊಂಡು ಬರಬೇಕು. ಹಾಲಿನ ಅಂಗಡಿಯಲ್ಲೂ ಹಾಗೆಯೇ.

ಮುಚ್ಚಿದ ಅಂಗಡಿಯ ಬಾಗಿಲಿನ ಬದಿಯಲ್ಲಿ ಒಂದು ಕುರ್ಚಿ ಇಟ್ಟು ಒಬ್ಬ ಕುಳಿತುಕೊಳ್ಳುವುದು. ಹಾಲಿನ ಡೇರಿಯೊಳಗೆ ಒಬ್ಬ ಇರುತ್ತಿದ್ದ. ಹೀಗೆ ಗ್ರಾಹಕರೊಂದಿಗೆ ವ್ಯಾಪಾರ ವಿನಿಮಯ ನಡೆಯುತ್ತಿತ್ತು. ಒಮ್ಮೆ ವೇಷ ಮರೆಸಿ ಬಂದ ಬಿಎಂಸಿ ಅಧಿಕಾರಿ ಅದನ್ನೂ ಪತ್ತೆ ಹಚ್ಚಿ ತಕ್ಕಡಿಗಳನ್ನೆಲ್ಲ ಕೊಂಡು ಹೋಗಿದ್ದಲ್ಲದೆ, ದಂಡವನ್ನೂ ವಿಧಿಸಿದ್ದ. ಹೀಗಾಗಿ ನಮ್ಮ ಕಟ್ಟಡದ ಸುತ್ತ ಮುತ್ತಲಿನ ಎಲ್ಲ ದಿನಸಿ ಅಂಗಡಿಯವರು ತಮ್ಮ ತಮ್ಮ ಊರಿಗೆ ಹೊರಟು ಹೋದವರು ಒಂದೂವರೆ ತಿಂಗಳು ವಾಪಸ್ಸು ಬರಲಿಲ್ಲ.

ಎಲ್ಲಿಗೂ ಸಲ್ಲದವರಂತಿದ್ದ ತುಳು ಕನ್ನಡಿಗರು  

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಊರಿನವರನ್ನು ಬೇಗನೇ ಕರೆಸಿಕೊಳ್ಳಿ ಎಂದು ಮಹಾರಾಷ್ತ್ರ ಸರಕಾರ ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರ ವಾಟ್ಸ್ಯಾಪ್‍ನಲ್ಲಿ ಹರಿದಾಡಿದಾಗ ಮಾತ್ರ ನಾವ್ಯಾವುದೋ ಪರಕೀಯ ಊರಿನಲ್ಲಿದ್ದೇವೆ ಅನ್ನುವುದು ಅರಿವಿಗೆ ಬಂದು ಮನಸ್ಸನ್ನು ಘಾಸಿಗೊಳಿಸುತ್ತಿತ್ತು. ‘ಬೇರೆ ಬೇರೆ ಊರಿನಿಂದ ವಲಸೆ ಬಂದವರ ಕಾರಣದಿಂದಲೇ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಯಿತು. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಯ್ತು’ ಅಂತ ಮುಖ ಸಿಂಡರಿಸಿ ಹೇಳುತ್ತಿದ್ದ ನಮ್ಮ ಕಟ್ಟಡದ ಕೆಲವು ಮರಾಠಿ ಮಹಿಳೆಯರು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು.

ಈಗ ಎಲ್ಲವೂ ಸುಧಾರಿಸಿಕೊಂಡಿದೆ. ನಮ್ಮ ಕಟ್ಟಡದ ನಿವಾಸಿಗಳು ಮಾಸ್ಕ್ ಇಲ್ಲದೆಯೇ ನಗು ನಗುತ್ತ ನಮ್ಮನ್ನು ಮಾತಾಡಿಸುತ್ತಾರೆ. ‘ಕೊರೊನಾ ಆರಂಭದ ಕಾಲದಲ್ಲಿ ಎಲ್ಲಿದ್ದೀರೋ ಅಲ್ಲಿಯೇ ಇದ್ದುಬಿಡಿ’ ಅನ್ನುತ್ತಿದ್ದ ಊರಿನ ಕೆಲವು ಗಣ್ಯರು ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಊರಿಗೆ ಹೋಗಿ ಬರುವ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಕೊರೊನಾದ ಭೀತಿಯಿಂದ ಜನರ ಬದಲಾದ ಮನೋಭಾವಗಳು ಮತ್ತೆ ಯಥಾಸ್ಥಿತಿಗೆ ಬಂದು ನಿಂತಿವೆ. ಒಂದೇ ಸಾಲಿನಲ್ಲಿ ಹೇಳುವುದಾದರೆ ಊರಿಗೂ, ಪರವೂರಿಗೂ, ಎಲ್ಲಿಗೂ ಸಲ್ಲದವರಾಗಿ ಅತಂತ್ರ ಸ್ಥಿತಿಯಲ್ಲಿದ್ದ ಮುಂಬೈ ತುಳು ಕನ್ನಡಿಗರಿಗೆ ಮತ್ತೆ ಬಲ ಬಂದಂತಾಗಿದೆ.

ಮುಂಬೈ ಮಹಾನಗರಿ ಮತ್ತೆ ಗರಿಕೆದರಿ ನಿಂತಿದೆ. ಖಾಲಿಯಾಗಿದ್ದ ಬೀದಿಗಳು, ಬಜಾರುಗಳು ಮತ್ತೆ ತುಂಬಿಕೊಂಡಿವೆ. ಕೋಳಿ, ಮಟನ್, ಮೀನು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಜನ ಜಾತ್ರೆ ಹಿಂದಿನಂತೆಯೇ ಶುರುವಾಗಿದೆ. ಈಗ ಹೊರಗಿನ ತಿಂಡಿಯನ್ನು ತಿನ್ನಲು ಯಾರೂ ಭಯ ಪಡುತ್ತಿಲ್ಲ. ಪಾನಿಪೂರಿ, ಮಸಾಲ ಪೂರಿ, ಸೇವ್ ಪೂರಿ, ಬೇಲ್ ಪೂರಿ,  ಮಿಸಲ್ ಪಾವ್ ವಡಾಪಾವ್ ಗಾಡಿಗಳು ಬೀದಿಯಲ್ಲಿ ಸಾಲಾಗಿ ನಿಂತು ಒಳ್ಳೆಯ ವ್ಯಾಪಾರವನ್ನು ಗಿಟ್ಟಿಸಿಕೊಳ್ಳುತ್ತಿವೆ.

ಬೀದಿಯಲ್ಲಿ ಹೋಗಿ ಬರುವವರಲ್ಲಿ, ವ್ಯಾಪಾರಸ್ಥರ ಮುಖದಲ್ಲಿ  ಮೊದಲಿನದೇ ಉತ್ಸಾಹ ಕಂಡು ಬರುತ್ತಿದೆ. ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಹೋಟೆಲ್ ಉದ್ಯಮಗಳು ಕೂಡ ಚೇತರಿಸಿಕೊಳ್ಳುತ್ತಿವೆ. ಹೊಸ ವರುಷದಲ್ಲಿ ಹೊಸದಾದ ಲವಲವಿಕೆಯಲ್ಲಿ ಮುಂದಡಿಯಿಡಲು ನಗರಿ ಸರ್ವ ಸನ್ನದ್ಧವಾಗಿ ನಿಂತಿದೆ.

ಆದರೆ ಪ್ರತಿ ಭಾನುವಾರ ಕೊಳಲಿನ ದಂಡಿಗೆಯನ್ನು ಹೆಗಲಲ್ಲಿ ಹೊತ್ತು ಮೋಹಕ ರಾಗ ನುಡಿಸುತ್ತಾ ಗಲ್ಲಿ ಗಲ್ಲಿ ತಿರುಗುವ ಕೊಳಲನೂದುವ ಕೃಷ್ಣ ಇನ್ನೂ ಕಾಣಿಸುತ್ತಿಲ್ಲ. ಅವನು ನುಡಿಸುತ್ತಿದ್ದ ಕೊಳಲ ದನಿಯಲ್ಲಿ ಅವನ ಅಂತರಂಗದ ಹಲವಾರು ಭಾವಗಳು ವ್ಯಕ್ತವಾಗುತ್ತಿದ್ದವು. ಒಮ್ಮೆ ಶಿವರಂಜಿನಿ ರಾಗವನ್ನು ನುಡಿಸುತ್ತಿದ್ದಾಗ ಮನಸ್ಸಿಗೆ ಏನೋ ಅನ್ನಿಸಿ ಅವನ ಬಳಿ ಹೋಗಿ ಒಂದು ಕೊಳಲನ್ನು ಖರೀದಿಸಿದ್ದೆ. 

ನಾಲ್ಕು ಹೆಜ್ಜೆ ಮುಂದೆ ಹೋಗುವಷ್ಟರಲ್ಲಿ ಅವನು ಲವಲವಿಕೆಯನ್ನು ಮೂಡಿಸುವಂತಹ ಯಮನ್ ಕಲ್ಯಾಣಿ ರಾಗವನ್ನು ನುಡಿಸಲಾರಂಭಿಸಿದ. ಅಂದಿನಿಂದ ಅವನ ಕೊಳಲ ದನಿಯಲ್ಲೇ ಅವನ ವ್ಯಾಪಾರದ ಏರಿಳಿತವನ್ನು ಹಾಗೂ ಅವನ ಅಂತರಂಗವನ್ನು ತಿಳಿಯುತ್ತಿದ್ದೆ. ನಗರದಲ್ಲಿ ಎಲ್ಲವೂ ಯಥಾಸ್ಥಿತಿಗೆ ಬರುತ್ತಿರುವಾಗ ಪ್ರತಿ ಭಾನುವಾರ ತನ್ನ ಇಂಪಾದ ಕೊಳಲದನಿಯಿಂದಲೇ ಮನಸ್ಸಿಗೆ ಹಿತ ನೀಡುವ ಕೊಳಲನೂದುವ ಕೃಷ್ಣನೂ ಬಲು ಬೇಗನೇ ಬರಬಹುದು ಅಲ್ಲವೇ..!  

‍ಲೇಖಕರು Avadhi

January 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಅನಿತಾ, ನಮ್ಮಲ್ಲಿಯ ಕೊಳಲನೂದುವ ಕೃಷ್ಣ ಮರಳಿ ಬಂದು ತಿಂಗಳಿಗೂ ಹೆಚ್ಚಾಯ್ತು.‌ ಹೌದು, ಮರಳಿ ಮೊದಲ ಬಾರಿ ಅವನ ಮುರಲೀನಾದ ಕೇಳಿದಾಗ ಮನ ಅರಳಿತು. ಕೊರೊನಾ ಹೋಗಿ ಬಿಟ್ಟಿತೇ ಎಂದು ಸಂಭ್ರಮವೆನಿಸಿತು. ನಿಮ್ಮವನೂ ಬಂದಾನು.
    ಖುಶಿ ಕೊಟ್ಟಿತು, ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: