-ನೂತನ ದೋಶೆಟ್ಟಿ
ಕಳೆದು ಹೋಗಿಬಿಡಬೇಕು
ಹೊದಿಕೆಯನು ಕೊಡವಿ ಮಡಚಿಟ್ಟಂತೆ
ಬಾಗಿಲೆದುರ ಕಾಲೊರೆಸನ್ನು ಝಾಡಿಸಿ ಇಟ್ಟಂತೆ
ಕೆಲವೊಮ್ಮೆ ನಮ್ಮನ್ನೇ ಒಳಗೆ ಕೂಡಿಟ್ಟು
ಬೀಗ ಜಡಿಯಬೇಕು.
ದಿನವೂ ಸವೆಸಿದ ಅದೇ ರಸ್ತೆಯ ಮಗ್ಗುಲಲ್ಲಿ
ಸುಡು ಮಧ್ಯಾನ್ಹ ಮೂಡುವ ಕಾಮನಬಿಲ್ಲು
ತುಂತುರು ಹನಿಯಾಗಿ ಮನಸ ತೋಯಿಸುವ
ರಮ್ಯ ಕ್ಷಣ ಅದು
ಅರಿತವರ ನಡುವೆ ಹೆಣಗಿದ ಬಾಳಿಗೆ
ಅಪರಿಚಿತ ಸಂತೆಯಲ್ಲಿ ರೆಕ್ಕೆ ಮೂಡಿ
ಗಾಳಿಯಲ್ಲಿ ಪಟಪಟಿಸುತ್ತ
ಗೌಜಿನಲ್ಲಿ ಆಲಾಪಿಸುವ ತಪ್ತ ಸಮಯವದು
ನಾನು ನಾನಾಗುವ
ಕಳೆದ ನನ್ನ ಹುಡುಕದ
ಮಗುವೊಂದು ಗಿಲಾಕಿಯಾಟದಲ್ಲಿ
ಮೈಮರೆವ ಮುಗ್ಧ ಹೊತ್ತು ಅದು
ಅವರು ಇವರೆಂಬ ಮರಳ ಮೇಲೆ
ಜಾರುತ್ತ ಬಯಲಾಗುವ
ತಂಪ ನೇವರಿಸುತ್ತ
ಒಳಗಂಪು ತಿಳಿಯಾಗುವ
ಅನನ್ಯ ಘಳಿಗೆಯದು
ಬಿಡದೆ ಅಪ್ಪಿಕೊಂಡು
ಆವರಿಸಿಕೊಂಡು
ಜಡಿದ ಬೀಗವ ತೆಗೆದು
ಇಡುವ ಒಳ ಅಡಿಯಲ್ಲಿ
ನವಿಲು ಲಾಸ್ಯವಾಡುತ್ತದೆ.






0 Comments