ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ. ಶ್ರೀನಿವಾಸ ಹೊಸ ಕವಿತೆಗಳು

ಬಿ. ಶ್ರೀನಿವಾಸ

ನೇತು ಬಿದ್ದ ಹಾರ

***************

ಬೆಳೆದ ಸೀಮೆಯಿಂದ ಅಸೀಮ ಊರುಗಳವರೆಗೂ ಸುಗಂಧ ಪರಿಮಳ

ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ

ಒಂದರ ಹಿಂದೊಂದು ಪೋಣಿಸಿ ನೆನಪುಗಳ

ತಯಾರಿಸುತ್ತಾಳೆ ಮುದುಕಿ

ಕೈಯ್ಯ ಸುಕ್ಕುಗಳೊಂದೂ ಸೋಕದೆ ಅರಳುತ್ತದೆ

ಬಣ್ಣ ಬಣ್ಣದ ಗೊಂಡೇವು ಕಟ್ಟುವನು ಮಗ

ತುಸು ಹೆಚ್ಚೇ ಹೊಡೆಯುತ್ತಾನೆ

ಘಮಘಮಿಸುವ ಅತ್ತರನು 

ತೊಡುವವನ ಸಂಭ್ರಮದಲಿ

ಮದುವೆ ಮುಗಿದ ಹಂದರದ ಮೌನ

ಹೊಸ ಆರ್ಡರು ಬರುವ ತನಕ!

ಮಂತ್ರಿ ಮಹೋದಯರ ಮನೆಗಳಲ್ಲಿ

ನೇತು ಬಿದ್ದಿದೆ ಹಾರ

ಬೆಚ್ಚುವನು 

ಆರ್ಡರು ಕೊಳ್ಳಲು ಹೋದ ಮಗ 

ಥೇಟ್!

ತನ್ನವ್ವನ ಕೈಗಳೇ ನೇತು ಬಿದ್ದುದು ನೆನೆದು!

# ಹಾವೇರಿಯ ಯಾಲಕ್ಕಿ ಹಾರವನ್ನು ತಯಾರಿಸುವ ಮುಸಲ್ಮಾನರ ಮುದುಕಿ, ಯಾಲಕ್ಕಿಯನ್ನು ತನ್ನ ಹಳೆ ಮನೆಯ ಬಾವಿಯ ನೀರಲ್ಲಿ ನೆನೆಸಿ, ನಂತರ ಪೋಣಿಸುತ್ತಾಳೆ. ಮಗ ಉಸ್ಮಾನ್ಸಾಬು ಅಲಂಕಾರಿಕವಾಗಿ ಗೊಂಡೆ, ಮಿಂಚಿನ ದಾರ ಕಟ್ಟುವನು. ಈ ಭಾಗದಲ್ಲಿ ಯಾಲಕ್ಕಿ ಬೆಳೆಯದಿದ್ದರೂ “ಯಾಲಕ್ಕಿ ಕಂಪಿನ ನಗರಕ್ಕೆ ಸ್ವಾಗತ” ಬೋರ್ಡನ್ನು ನಗರದ ಕಮಾನಿಗೆ ತೂಗುಬಿಡಲಾಗಿದೆ.

ಕಾಗಿನೆಲೆ ಸುತ್ತ

*************

ಕನಕನಿಲ್ಲದ ಕಾಗಿನೆಲೆಯಲಿ

ಅಂತಸ್ತುಗಳದೇ ಕಾರುಬಾರು!

ಕಾಗಿನೆಲೆ ಸುತ್ತ

ಸಿರಿವಂತಿಕೆ ಹುತ್ತ

ಗೋರಿಗಳದ್ದೇ ಮೌನ

ಎಷ್ಟಾದರೇನು ಮಠಗಳು?

ಇಳಿಯದೆ 

ಹೊತ್ತವರ ಭಾರ.

 ಹಾವೇರಿ ಸುತ್ತಮುತ್ತ 

*****************

ಹುಲಗೂರ ಸಂತೆಯೊಳಗೊಬ್ಬ

ಬೊಗಸೆಯೊಡ್ಡಿ ನಿಂತಿದ್ದಾನೆ

ಶರೀಫ

ಸಾಬರನಂತೆ ಹೌದಾ?

ಕೇಳುವನೊಬ್ಬ ಈಗ

ಎರಡು ಶತಮಾನಗಳ ನಂತರ!

***

ಕಟ್ಟುವನು

ಸಾಹಿತ್ಯಕ್ಕೂ ದರಪಟ್ಟಿ

ಕಾಳು ಕಡಿ ವ್ಯಾಪಾರಿ 

ಚೀಲಕೆ ತುಂಬಿ!

ಟೊಪ್ಪಿ ಹಾಕಿದ್ದರೂ

ಆಗಲೇಬೇಕೆಂದೇನಿಲ್ಲ ಗಾಂಧಿ!

***

ಕಟ್ಟತ್ತೇವ ನಾವು ಕಟ್ಟತೇವ ಕಟ್ಟೇಕಟ್ಟತೇವ

ಹಾಡುವ ಹುಕಿ ಹುಡುಗರಿಗೆ

ದಾರಿ ಸಾಗದ ಆತಂಕ 

ಕವಿಯ ಮೊಗದಲಿ

***

ಮಠವೊಂದಿದ್ದರೆ ಉತ್ತರಕೆ

ಇದೆ,

ಮತ್ತೊಂದು ದಕ್ಷಿಣಕೆ

ಸಾಗವು ಎಂದಿಗೂ

ಒಂದು

ಮತ್ತೊಂದರ ಜೊತೆ

***

ಮತ್ತೆ ಹುಟ್ಟಿ ಬಂದರೂ ಬಸವಣ್ಣ

ಕೆಳಗಿಳಿಯುವಂತಿಲ್ಲ

ಕುದುರೆ ಸವಾರಿ

ಕಂಪಲ್ಸರಿ!

***

ಅರವತ್ತಮೂರು ಮಠಗಳಲ್ಲಿ ಎಲ್ಲಿರುವನು ಬಸವಣ್ಣ?

ವಿಳಾಸ ಕೇಳುತ್ತಿರುವನು ಒಬ್ಬ.

ಎಷ್ಟಿದ್ದರೇನು ಮಠ

ಹೊತ್ತವರ ಭಾರ ಇಳಿಯದೆ.

***

ನಿಂತೇ ಇರುವನು ಮಹದೇವ

ಪಾವು ಗಾತ್ರದ ಗುಂಡಿಗೆ ಹೊಕ್ಕ ಗುಂಡು ಹೊತ್ತು,

ಗೆಳೆಯರ ನಿರುಕಿನಲಿ

ಮಿಸುಕುವನು ಸರ್ಕಲ್ಲಿನ ಗಾಂಧಿ

ನಗೆಮಿಂಚು ಮಗುವಿಗಷ್ಟೆ ತೋರಿ.

           *****

ಹಾವೇರಿಯ ವರ್ತಮಾನ 

**********************

೧.

ಕೆಲ ವರ್ಷಗಳ ಹಿಂದೆ

ಲೋಹದ ನಳಿಕೆಗಳ ಗುಂಡು

ಸಿಡಿದು ಗೋಲಿಬಾರು

ಆದಾಗ

ಹೀಗೆಯೇ ಬಿದ್ದಿದ್ದವು 

ರಸ್ತೆಯ ಮೇಲೆ

ಬಾರುಕೋಲು

ಹಸಿರು ಟವೆಲ್ಲು!

ಆಗಲೂ…

ಕಟ್ಟತೇವ…

ನಾವು ಕಟ್ಟೇ ಕಟ್ಟುತ್ತೇವಾ…

ಈಗಲೂ…

ತೇಲಿಬರುತಿದೆ ಆಲಾಪನೆ!

೨.

“ಸೂರಿನ ಒಂದು ತುಂಡು ನೆಲಕ್ಕಾಗಿ ಮೈಮೇಲೆ ಮಲ ಸುರುವಿಕೊಂಡವರನ್ನು ಸಂತೈಸಲಾದರೂ

ಬಂದಿದ್ದರೆ…

ಈ ಪಾದಗಳು

ಖಂಡಿತ ಪೂಜಿಸಲ್ಪಡುತ್ತಿದ್ದವು!”

ಕೂಗುತಿರುವನು ಬಸ್ಟ್ಯಾಂಡಿನ ಮೂಲೆಯಲಿ ಗೋಣಿಚೀಲ ಹೊದ್ದು ಮಲಗಿದ ಹುಚ್ಚನೊಬ್ಬ

೩.

ಹಾವೇರಿಯ ಸಂತಿ ಬಜಾರಿನಲಿ

ಸಂಜೆಗತ್ತಲಿಗೂ ಮುನ್ನ ಮಾರ್ಕೆಟ್ಟಿಗೆ ದುಗುಡ ತುಂಬಿದ ಹೊತ್ತಲ್ಲಿ,

ಗಂಡಸರ ಎದುರು

ಹೂ ಮಾರುವ ಅವಳ ಕೈಗಳು

ಒಮ್ಮೊಮ್ಮೆ ಮಾರುದ್ದ ದಾಟಿಯೂ ಹೋಗುವುದುಂಟು.

ತನಗೆ ದಕ್ಕದ ಪ್ರೀತಿ

ಅವರಿಗಾದರೂ ದೀರ್ಘವಾಗಲಿ ಎಂದು ಹಾರೈಸುವುದು.

೪.

ಹಾವೇರಿಯೆಂದರೆ…

ಇತಿಹಾಸ

ವರ್ತಮಾನವಷ್ಟೇ ಅಲ್ಲ

ದುಃಖ

ವಿಷಾದ

ಮತ್ತು

ಪ್ರೀತಿ.

                 

‍ಲೇಖಕರು avadhi

13 June, 2023

1 Comment

  1. Lakshmi H

    Chennagide Sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading