ಮನುಷ್ಯ ಜಾತಿ ತಾನೊಂದೆ ವಲಂ
ರಾಜಾರಾಂ ತಳ್ಳೂರ್
ಸಾಮಾನ್ಯವಾಗಿ ಯಾರದ್ದೋ ವೈಭವಗಳಲ್ಲೇ ನಮ್ಮ ಸಂಸ್ಕೃತಿ ಸಿರಿವಂತಿಕೆಯ ಕನಸು ಕಾಣುವ ಸರಕಾರಿ ಕಾರ್ಯಕ್ರಮಗಳಿಗೆ ಹೊರತಾಗಿ, ಸಾಮಾಜಿಕವಾಗಿ ತೀರಾ ಅಗತ್ಯವಾಗಿದ್ದ ಚುಚ್ಚುಮದ್ದು ಒಂದನ್ನು ಹಿಡಿದು ‘ಮನುಷ್ಯ ಜಾತಿ ತಾನೊಂದೆ ವಲಂ’ ನಾಡಿನ ಸಂಚಾರಕ್ಕೆ ಹೊರಟಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಮತ್ತು ವಾರ್ತಾ ಇಲಾಖೆಗೆ ಅಭಿನಂದನೆಗಳು.
ನಿನ್ನೆ ಉಡುಪಿಯ ಮಲ್ಪೆ ಕಡಲ ಕಿನಾರೆಯಲ್ಲಿ “ಮನುಷ್ಯ ಜಾತಿ ತಾನೊಂದೆ ವಲಂ” ಮಲ್ಟಿ ಸೆನ್ಸರಿ ರೂಪಕವನ್ನು ಕಂಡೆ. “ ಬಿ. ವಿ. ಕಾರಂತರ ಕನಸು ಸ್ವಲ್ಪ ಮಟ್ಟಿಗೆ ನನಸಾಗಿದೆ; ಆದರೆ ಅದನ್ನು ಕಾಣೋಕೆ ಅವರಿಲ್ಲ” ಎನ್ನುವ ನಿರ್ದೇಶಕ ಬಸವಲಿಂಗಯ್ಯ ಅಳಲು ಮೈಸೂರು ರಂಗಾಯಣದ ಮೊದಲ ದಿನಗಳ ಸಂಭ್ರಮ ಕಂಡವರಿಗೆ ಸತ್ಯ ಅನ್ನಿಸದಿರುವುದಿಲ್ಲ. ಎರಡು ಗಂಟೆಗಳ ಅವಧಿಯಲ್ಲಿ ಎರಡು ಸಾವಿರ ವರ್ಷಗಳ ನೋವಿನ ಕತೆಗಳ ಮೂಲಕವೇ ನಾಡಿನ ಕತೆಯನ್ನು ಕಟ್ಟಿಕೊಡುವ “ಮನುಷ್ಯ ಜಾತಿ ತಾನೊಂದೆ ವಲಂ” ನಾಟಕ ನೋಡುತ್ತಿರುವಾಗಲೇ ಸಣ್ಣ ಸಣ್ಣ ಪ್ಯಾಕೇಜ್ ಗಳಲ್ಲಿ ಅದು ಉಂಟುಮಾಡಿದ ಡಿಸ್ ಕಂಫರ್ಟ್ ನನಗೆ ವಿಶೇಷ ಅನುಭವ ಮತ್ತು ಇದು ಸರ್ಕಾರಿ ಕಾರ್ಯಕ್ರಮವೊಂದರ ಮೂಲಕ ಆಗುತ್ತಿರುವುದರಿಂದ ನನ್ನ ಮಟ್ಟಿಗೆ ಅದು ಮತ್ತಷ್ಟು ಹೆಚ್ಚು ತೂಕದ್ದಾಗುತ್ತದೆ.
ಕನ್ನಡ ಕರಾವಳಿಯೇ ನೆನಪು ಬಿಡತೊಡಗಿರುವ ಕುದ್ಮಲ್ ರಂಗ ರಾವ್ “ಮನುಷ್ಯ ಜಾತಿ ತಾನೊಂದೆ ವಲಂ” ಮೂಲಕ ನಾಡಿನ ೨೦೦೦ ವರ್ಷಗಳ ಇತಿಹಾಸದಲ್ಲಿ ಸ್ಥಾನ ಪಡೆದಿರುವುದೇ ಈ ರೂಪಕ ಏಕೆ ಭಿನ್ನ ಎಂಬ ಬಗ್ಗೆ ಸಾಕಷ್ಟು ಹೊಳಹುಗಳನ್ನು ಕೊಡುತ್ತದೆ. ನನಗಿರುವ ಒಂದೇ ದೂರು ಈ ಪ್ರದರ್ಶನದ ಸಂಗೀತದ ಬಗೆಗಿನದ್ದು. ಕನ್ನಡ ಚಲನಚಿತ್ರ ಸಂಗೀತ ಈಗ “ಕ್ವಾರ್ಟರ್ ಬಾಟ್ಲಿ” ಮಟ್ಟ ತಲುಪಿರುವುದರಿಂದ, ಹಂಸಲೇಖ ಸಂಗೀತ ಆ ಮಟ್ಟಕ್ಕೆ ಸ್ವಲ್ಪ ಔಟ್ ಡೇಟೆಡ್ ಅನ್ನಿಸಿತು…






– ಈಗ ಕನ್ನಡ ಚಿತ್ರ ಸಂಗೀತ ಮಾತ್ರವಲ್ಲ ಕಥೆ ಚಿತ್ರಕಥೆ ಸಂಭಾಷಣೆ ಜೊತೆಗೆ ಕಥಾ ನಿರೂಪಣೆ ಜೊತೆಗೆ ನಟ ನಟಿಯರ ಅಂಗಿಕ ಅಭಿನಯ ಎಲ್ಲವೂ ಅಧ್ವಾನವೆನ್ನುವ ಮಟ್ಟತಲುಪಿ ಬಹಳ ಕಾಲವಾಗಿದೆ. ಹಿಂದಿಯವರು ಹಾಲಿವುಡ್ ನವರ ಅನುಕರಣೆ ಮಾಡಿದರೆ ಪ್ರಾದೇಶಿಕ ಭಾಷೆಯವರು ಅವರನ್ನು ಅನುಕರಣೆ ಮಾಡುತ್ತಾರೆ. ಇದೊಂದು ಮದ್ದಿಲ್ಲದ ಕಾಯಿಲೆ.