ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಿಳಿಮಲೆಯವರ ’ಬಹುರೂಪ’ …..’ – ಸಂಗೀತಾ ರವಿರಾಜ್ ಬರೀತಾರೆ

ಡಾ.ಪುರುಷೋತ್ತಮ ಬಿಳಿಮಲೆ ಅವರ ಹೊಸ ಪುಸ್ತಕದಲ್ಲಿ

ಕರ್ನಾಟಕದ ಬಹುರೂಪದ ಅನಾವರಣ

-ಸಂಗೀತ ರವಿರಾಜ್

ಡಾ.ಪುರುಷೋತ್ತಮ ಬಿಳಿಮಲೆಯವರ ಬಹುರೂಪ ಕೃತಿಯು ಅದರ ಶೀರ್ಷಿಕೆಗೆ ಅನುರೂಪವಾದ ಅನುಭವಗಳ ಮತ್ತು ಚಿಂತನೆಗಳ ಗುಚ್ಚ. ತಾವು ಹುಟ್ಟಿ ಬೆಳೆದ ಹಳ್ಳಿಯ ಬಾಲ್ಯಕಾಲದ ಅಭೂತಪೂರ್ವ ಅನುಭವಗಳಿಂದ ಶುರುಹಚ್ಚಿ, ದೆಹಲಿಯ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದಲ್ಲಿನ ಉದ್ಯೋಗ ಪರ್ವವನ್ನು ದಾಟಿ ವಿದೇಶಗಳ ವಿಶಿಷ್ಟತೆಯ ಚಿತ್ರಣಗಳನ್ನು ಓದುತ್ತಿದ್ದಂತೆ ಮನಸ್ಸಿನಲ್ಲಿ ಚಿಂತನೆಗಳು ತೀವ್ರವಾಗಿ ಆವರಿಸಿಕೊಳ್ಳುತ್ತವೆ. ಐದು ಆಯಾಮಗಳಲ್ಲಿ ಲೇಖನಗಳನ್ನು ವಿಂಗಡಿಸಿಕೊಂಡಿರುವ ಬಹುರೂಪ ಹೊತ್ತಿಗೆಯ ಮೊದಲ ಭಾಗದಲ್ಲಿ ಬಂಟಮಲೆಯ ಕಿರುತೊರೆಯಿಂದ ಮೊದಲ್ಗೊಂಡು, ಲೇಖಕರ ಅಚ್ಚುಮೆಚ್ಚಿನ ಯಕ್ಷಗಾನ ತಾಳಮದ್ದಳೆಗಳು ಲೇಖನಗಳಲ್ಲಿ ಮೇಳೈಸಿ ಓದುಗರನ್ನು ಅಪ್ಯಾಯಮಾನಗೊಳಿಸುತ್ತದೆ. ಬಾಲ್ಯದ ಸಂಗತಿಗಳನ್ನು ತೆರೆದುಕೊಡುತ್ತಾ ನಮಗ್ಯಾರಿಗು ನಿಲುಕದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಅವರು ಬಿಂಬಿಸಿದ್ದಾರೆ. ವಿಧ್ಯೆ ಇಲ್ಲದ ಜಾತಕ ಮತ್ತು ನನ್ನ ಶಾಲೆ ಬರಹದಲ್ಲಿ ಈ ಹುಡುಗನಿಗೆ ವಿಧ್ಯಾಯೋಗವಿಲ್ಲ ಎಂಬುದಾಗಿ ಅರುಹಿದ ಜ್ಯೋತಿಷ್ಯನ ಮಾತು ವಾಸ್ತವದಲ್ಲಿ ಸಂಪೂರ್ಣ ವಿರುದ್ಧವಾಗಿರುವ ವೈರುಧ್ಯವು ಸಮಾಜಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ. ಬಾಲ್ಯದ ಇತಿಮಿತಿಯ ಯಕ್ಷಗಾನ ನೋಡುವಿಕೆ ಮತ್ತು ಪಾತ್ರದ ಬಗ್ಗೆ ಚಿಂತಿಸುವಿಕೆ ಬರಬರುತ್ತಾ ಇವುಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಆಯ್ಕೆ ಮತ್ತು ದಾರಿಗಳು ಯಾವುವು ಎಂಬುದನ್ನು ಗಂಭೀರವಾಗಿ ಆಲೋಚಿಸುವಂತೆ ಮಾಡುತ್ತದೆ.

ತುಳು ಪರಿಕಲ್ಪನೆಯ ಸುತ್ತ ಮುತ್ತ ಮತ್ತು ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಎಂಬೆರಡು ಲೇಖನಗಳು ತೌಳವ ಸಂಸ್ಕೃತಿಯ ಪ್ರತೀಕವಾಗಿ ತುಳುವಿನ ಸಂಪೂರ್ಣ ಪರಿಕಲ್ಪನೆಯನ್ನು ಆಳವಾಗಿ ಪರಿಚಯಿಸುತ್ತದೆ. ಇಲ್ಲಿರುವ ಪ್ರತಿಯೊಂದು ಅಂಶವು ಕೂಲಂಕುಷವಾಗಿ ಪರಿಶೀಲಿಸಿದ ಸರ್ವ ಶ್ರೇಷ್ಠ ವಿಚಾರಗಳು ಇದಕ್ಕೆ ಸಂವಾದಿಯಾಗಿ ಕೋಮುವಾದಿ ಭಾವನೆಯಿರುವ ಜನರನ್ನು ಘಾತುಕ ಶಕ್ತಿಗಳೆಂದು ಸಾರುವ ಅಧ್ಬುತ ಲೇಖನ ಮನೆಮುರುಕರು ಮತ್ತು ಮಂಗಳೂರು ಮಲ್ಲಿಗೆ. ತಂದೆಯಿಂದ ಬಳುವಳಿಯಾಗಿ ಬಂದಂತಹ ಯಕ್ಷಗಾನ, ತಾಳಮದ್ದಳೆ ಕಲೆಯನ್ನು ತಾನದರಲ್ಲಿತೊಡಗಿಸಿಕೊಂಡ ಅದಮ್ಯ ಪರಿಯನ್ನು ಅಗ್ರಮಾನ್ಯ ನೆಲೆಗಟ್ಟಿನ ಮೇಲೆ ಅನುಭವಗಳನ್ನು ಪ್ರಸ್ತುತ ಪಡಿಸಿದ್ದಾರೆ, ಲೇಖಕರು. ಬಹುರೂಪದ ಎರಡನೆಯ ವಿಭಾಗದಲ್ಲಿ ಭಾಷೆಗಳ ಬಗ್ಗೆ ಆಳವಾದ ಅಧ್ಯಯನ ಬರಹಗಳು ಚಚರ್ಿತನಾಗಿವೆ. ಸಣ್ಣ ಭಾಷೆಗಳ ಸಬಲೀಕರಣದಲ್ಲಿ ಭಾರತದ 172 ಭಾಷೆಗಳು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದು, 101 ಭಾಷೆಗಳು ಅತೀವ ಅಪಾಯದಲ್ಲಿರುವ ಭಾಷೆಗಳೆಂದು, 71 ಭಾಷೆಗಳು ಎಲ್ಲಾ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದು ಗುರುತಿಸಿದೆ. ಸಣ್ಣ ಭಾಷೆಯ ಅಭಿವೃದ್ಧಿಯ ಕುರಿತು ಸರಕಾರದ ನಿರ್ಲಕ್ಷ್ಯದ ಬಗ್ಗೆ ಇಲ್ಲಿ ಧ್ವನಿಯೆತ್ತಲಾಗಿದೆ. ಅಸಹನೆ ಕನ್ನಡದ ಗುಣವಲ್ಲ ಎಂಬುದನ್ನು ವಿಸ್ತೃತವಾಗಿ ವಿವರಿಸಿದ ಲೇಖನ ಕನ್ನಡ ದೇಸಿ ಅಂದರೆ ನೀರುಳ್ಳಿ. ಇದರಲ್ಲಿ ಕನ್ನಡದಲ್ಲಿ ನೆಲೆನಿಂತ ಅನ್ಯರ ವಿಚಾರಗಳು ಕರಾರುವಕ್ಕಾಗಿದೆ.

ಪಠ್ಯ ವಿಸ್ತರಣೆಯ ಬಗೆಗೆ ಆಳವಾಗಿ ತಿಳಿಸಿರುವ ಲೇಖಕರು ‘ಕೇಳುಗ’ ಕೇಂದ್ರಿತ ಪಠ್ಯಗಳು ‘ನೋಡುಗ’ ಕೇಂದ್ರಿತ ಪಠ್ಯವಾಗಿ ಬೆಳೆದದನ್ನು ಉಲ್ಲೇಖಾರ್ಹ ಎಂಬುದಾಗಿ ದಾಖಲಿಸಿದ್ದಾರೆ. ಪಂಪನ ವಿಕ್ರಮಾರ್ಜುನವಿಜಯ ಓದುಗ ಕೇಂದ್ರಿತ ಕಾವ್ಯ ಕುಮಾರವ್ಯಾಸನದ್ದು ಕೇಳುಗ ಕೇಂದ್ರಿತ ಕಾವ್ಯ ಮತ್ತು ಕುಮಾರವ್ಯಾಸನ ಕೃಷ್ಣ ಸಂಧಾನ ಲಕ್ಷಾಂತರ ಪ್ರಯೋಗಗಳನ್ನು ಕಂಡ ನೋಡುಗ ಕೇಂದ್ರಿತ ಪಠ್ಯ ಇವುಗಳು ಪರಿಶೀಲನಾತ್ಮಕವಾಗಿದೆ. ಕರ್ನಾಟಕ ಜಾನಪದ ಅಧ್ಯಯನವನ್ನು ಉದಾರವಾದಿ ನೆಲೆಯಿಂದ ಹೊರತರಬೇಕಾದದ್ದು ಇಂದಿನ ಅಗತ್ಯಗಳಲ್ಲಿ ಒಂದು ಎಂಬುದರ ಮಾರ್ಮಿಕ ಚಿತ್ರಣವಿದೆ. ಜಾನಪದ ಹೆಸರಿನಲ್ಲಿ ಮೂಢನಂಬಿಕೆಗಳ ಪ್ರತಿಪಾದನೆಯನ್ನು ವಿರೋಧಿಸುತ್ತಾರೆ. ವಿವರಣೆ ಮತ್ತು ವ್ಯಾಪ್ತಿಯ ದೃಷ್ಠಿಯಿಂದ ಐತಿಹ್ಯಗಳ ಪುರಾಣಕ್ಕಿಂತ ಕಿರಿದು ಎಂಬುದು ಲೇಖಕರ ಅಭಿಪ್ರಾಯ ಕರ್ನಾಟಕ ಐತಿಹ್ಯಗಳ ವಿಶ್ವಕೋಶದಲ್ಲಿ ಐತಿಹ್ಯಗಳು ಬಯಸುವ ಭೌತಿಕ ಆಧಾರಗಳನ್ನು ಪುರಾಣಗಳು ಬಯಸುವುದಿಲ್ಲ. ಎಂಬುದನ್ನು ನಿರೂಪಿಸಲಾಗಿದೆ. ಕರ್ನಾಟಕ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ಏಕಿಲ್ಲ ಲೇಖನವು ಜಾಗತಿಕ ಮಟ್ಟದಲ್ಲಿ ನಮ್ಮ ಕಲೆಗಳಿಗೆ ಬೆಳಕು ಚೆಲ್ಲುವ ಕಾರ್ಯವಾಗಬೇಕು ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸಿದ ಗಂಭೀರ ಚಿಂತನೆ ಇಲ್ಲಿನ ಬರಹಗಳು ಕೇವಲ ಬರಹಗಳಾಗದೇ ಒಂದು ನಿರ್ಧಿಷ್ಟ ಭೂಮಿಕೆಯ ಅಗತ್ಯತೆಗಳನ್ನು ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ.

ರಾಷ್ಟ್ರೀಯ ಪಕ್ಷಗಳನ್ನು ಅವಕಾಶ ದೊರೆಯದಾಗ ತಮ್ಮ ಅಸ್ತಿತ್ವಕ್ಕಾಗಿ ಪಕ್ಷವೊಂದನ್ನು ಕಟ್ಟಿ ಜನರ ಭಾವನೆಗಳನ್ನು ಬಡಿದೆಬ್ಬಿಸಿ ಅಧಿಕಾರ ಹಿಡಿಯುವ ಹುನ್ನಾರವನ್ನು ಸಮರ್ಪಕವಾಗಿ ವಿಶ್ಲೇಷಿಸಿದ್ದಾರೆ. ಸಂಕೀರ್ಣ ವಿಷಯಗಳನ್ನು ಎಳೆಎಳೆಯಾಗಿ ತೆರೆದಿಟ್ಟು ಓದುಗರಿಗು ಅದರ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವ ಜಾಗೃತ ಬರಹಗಳು ಇಲ್ಲಿವೆ. ಬಹುರೂಪದ ಮೂರನೆ ಭಾಗದಲ್ಲಿ ಲೇಖಕಕರು ವಾಸಿಸುವ ದೆಹಲಿಯಲ್ಲಿ ಕನ್ನಡದ ಕುರುಹುಗಳ ಬಗೆಗಿನ ಸ್ಪಷ್ಟ ಚಿತ್ರಣವಿದೆ. ದೆಹಲಿಯಲ್ಲೊಂದು ಕನ್ನಡದ ಗುರುತು, ಕನ್ನಡಿಗರ ವಲಸೆಯ ಸುತ್ತಮುತ್ತ, ರಾಜಧಾನಿ ದೆಹಲಿಗೆ ನೂರು ವರುಷ ಪ್ರಮುಖ ಪ್ರಖರ ಲೇಖನಗಳು. 1500ರರ ಸುಮಾರಿಗೆ ದೆಹಲಿಯನ್ನಾಳಲು ಆರಂಭಿಸಿದ ಮೊಗಲರ ನೆನಪುಗಳು ಪ್ರಸ್ತುತ ದಿನಗಳಲ್ಲು ಇರುವ ವಿಚಾರ ನಮಗೆ ಆಶ್ಚರ್ಯಕರ ರೀತಿಯಲ್ಲಿ ತಿಳಿಯುತ್ತದೆ. ದೆಹಲಿಯಲ್ಲಿ ಕನ್ನಡವನ್ನು ಎತ್ತಿ ಕಟ್ಟುವಲ್ಲಿ ಶ್ರಮಿಸಿದ ಕನ್ನಡಿಗರ ಪರಿಶ್ರಮ ಅಪ್ಯಾಯಮಾನವಾದದ್ದು ಎಂಬುದರ ಅರಿವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಗುವಿನ ಆರಂಭಿಕ ಶಿಕ್ಷಣ ಮಾತೃಭಾಷೆಯಲ್ಲಿ ಆಗಬೇಕಾದ ಅನಿವಾರ್ಯತೆಗಳನ್ನು ತಿಳಿಯಪಡಿಸಿ ಮಗುವಿನ ಸ್ವಂತಿಕೆ ಬೆಳೆಯುವಲ್ಲಿ ಕಾರ್ಯಪ್ರವೃತ್ತರಾಗುವ ಅಭಿಲಾಷೆವ್ಯಕ್ತಪಡಿಸುತ್ತಾರೆ. ಜಾತೀಯತೆ, ಕೋಮುವಾದ ಮತ್ತು ಸಂಸ್ಕೃತಿಗಳ ಬಗೆಗೆ ವಿಷಬೀಜ ಬಿತ್ತುವವರ ಕಡೆಗೆ ಕಿಡಿಕಾರುವ ಲೇಖಕರು ಅನ್ಯಜಾತಿಗಳ ನಡುವೆ ಅಸಹನೆ ಕಡಿಮೆಯಾಗಬೇಕೆಂಬ ಧೋರಣೆಯುಳ್ಳವರು.

ಜನಪದದ ಕುರಿತಾದ ತೌಲನಿಕ ಅಧ್ಯಯನಗಳತ್ತ ಗಮನಹರಿಸಬೇಕಾದ ಇಂದಿನ ಅಗತ್ಯಗಳನ್ನು ವಿವರಿಸುತ್ತಾ ಅರವನ್ ಜಾತ್ರೆಯ ಇತಿಹಾಸವನ್ನು ನಿರೂಪಿಸಿದ ರೀತಿ ಅನನ್ಯ. ಕೃಷ್ಣನಿಲ್ಲದ ಭಾರತೀಯ ರಂಗಭೂಮಿಯಿಲ್ಲ ಎಂಬುದನ್ನು ವಿವರಿಸಿದ ಅಪೂರ್ವ ಬರಹದಲ್ಲಿ ಸಂಕೀರ್ಣ ವಿಷಯವು ಸರಳವಾಗಿ ನಮ್ಮನ್ನು ತಟ್ಟುತ್ತದೆ. ಕಠಿಣ ವಿಷಯಗಳನ್ನು ಜತನದಿಂದ ಓದುಗರಿಗೆ ತಲುಪಿಸುವ ಜವಬ್ದಾರಿಯನ್ನು ನಿಷ್ಠೆಯಿಂದ ಬಹುರೂಪ ಹೊತ್ತಿಗೆ ಮಾಡಿದೆ. ಬಹುರೂಪದ ನಾಲ್ಕನೇ ಭಾಗದಲ್ಲಿ ನದಿಗಳು, ಕ್ಷೇತ್ರಗಳು. ಪುರಾಣಕತೆಗಳ ಸಮ್ಮಿಲನವು ಉಪಕತೆಗಳೊಂದಿಗೆ ಸೇರಿ ಅತ್ಯಂತ ಪ್ರಖರವಾದ ಚಿಂತನಾಶೀಲ ಬರಹಗಳಾಗಿವೆ. ಲೇಖಕರು ಕಥಾಪ್ರಿಯರು ಮತ್ತು ಹಾಸ್ಯಪ್ರಿಯರೆಂದು ಮನದಟ್ಟಾಗುವ ನಮಗೆ ಅವರ ದೃಷ್ಟಿಕೋನಕ್ಕೆ ನಾವು ಸೆಳೆದುಬಿಡುತ್ತೇವೆ. ಇಲ್ಲಿಯ ಪ್ರತಿಯೊಂದು ಬರಹಗಳು ಅಧ್ಯಯನಶೀಲ ಬರವಣಿಗೆಗಳು. ಹಿಂದೂಗಳಿಲ್ಲದ ಸಿಂಧು ನದಿ, ಗಂಗೆಯ ಕತೆ, ಕಳೆದುಹೋದ ಸರಸ್ವತಿ ಇವುಗಳನ್ನು ಓದಿದಾಗ ನಮಗಿದು ಅರ್ಥವಾಗುತ್ತದೆ. ಮೌಖಿಕ ನಿರೂಪಣೆಗಳಿಗೆ ಮನ್ನಣೆಬೇಕೆಂದು ವಿಶ್ಲೇಷಿಸುವ ಅಂಶವು ಹೊಸ ವಿಚಾರವೊಂದನ್ನು ತಿಳಿಸುತ್ತದೆ. ತಾವು ಭೇಟಿ ನೀಡಿದ ಸ್ಥಳದ ಪರಿಕಲ್ಪನೆಯೊಂದಿಗೆ ಅಧ್ಬುತವಾಗಿ ಹೊರಹೊಮ್ಮಿದ ಲೇಖನಗಳಿವೆ. ಕೊನೆಯ ಭಾಗದ ಬಹುರೂಪ ವಿಶ್ವದ ನೆಲೆಗಟ್ಟಿನಲ್ಲಿ ನಿಂತು ನೋಡಿದ ವಿದೇಶ ನೆಲದ ವಿಶಿಷ್ಟ ಸೊಗಡುಗಳ ಮಹತ್ವದ ಅಧ್ಯಾಯಗಳು.

ಜಪಾನಿನ ‘ಕಮಿ’ ತುಳುನಾಡಿನ ‘ಕುಲೆ’ ಗಳನ್ನು ನೆನಪಿಸುವುದನ್ನು ತೆಗೆದಿರಿಸಿದ್ದಾರೆ. ಆಡಂ ಮತ್ತು ಈದ್ಗಳನ್ನು ಬಿಟ್ಟು ಜಿಗಣೆಗಳ ಕಡೆಗೆ ಬರಹದಲ್ಲಿ ಜಪಾನ್ ಪುರಾಣವು ಭಾರತೀಯ ಪುರಾಣಗಳಿಗಿಂತ ಹೇಗೆ ಭಿನ್ನವಾಗಿದೆ. ಎಂಬುದನ್ನು ಅರ್ಥವಾಗುತ್ತದೆ. ದೇಹ ಮತ್ತು ಸಂಸ್ಕೃತಿಯ ಸ್ವಾಮ್ಯತೆಯೊಂದಿಗೆ ದೇಹದ ಬಳಕೆಯನ್ನು ಕುರಿತಂತೆ ನಡೆಯಿಸಿದ ಕುತೂಹಲಕರವಾದ ಸಂಶೋಧನೆಯ ಒಳನೋಟವನ್ನು ಕಾಣಬಹುದು. ಇಚಿರೋ ಹೇಳಿದ ಕೊಜಿಕಿ ಕತೆ ಲೇಖಕರಿಗೆ ಬಂಟಮಲೆಯ ಜಿಗಣಿಗಳು ನೆನಪಾದರೆ ಓದುಗರಿಗೆ ಹೊಸತೊಂದು ಲೋಕವನ್ನು ಖಂಡಿತ ಸೃಷ್ಟಿ ಮಾಡುತ್ತದೆ. ಆಫ್ರಿಕಾದ ಕವಿತೆಗಳ ವಿಭಿನ್ನತೆಯು ನಮ್ಮನ್ನು ಕಾಡುತ್ತದೆ. ಧಾವಂತದ ಬದುಕಿನ ಸದ್ಯದ ದಿನಗಳಲ್ಲಿ ನಮ್ಮ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಭಾಷೆ, ಇವುಗಳನ್ನೆಲ್ಲಾ ಮುಂದಿನ ತಲೆಮಾರಿನವರಿಗೆ ತಲುಪಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂಬ ಬಹುಪಾಲು ಆಶಯ ಬಹುರೂಪ ಹೊತ್ತಿಗೆ ಹೊತ್ತಿದೆ. ಈ ದಿಶೆಯಲ್ಲಿ ಕೆಲವು ತತ್ವಗಳನ್ನು ಪ್ರತಿಪಾದಿಸಿ ಜ್ಞಾನವಿಸ್ತಾರದ ಸವಿಸ್ತಾರ ರೂಪ ಬಹುರೂಪದ್ದಾಗಿದೆ. ಡಾ.ವಿವೇಕ ರೈಯವರ ಮುನ್ನುಡಿಯಲ್ಲಿ ಯಾಜಿ ಪ್ರಕಾಶನದ ‘ಬಹುರೂಪ’ ಅಪರೂಪದ ಹೊತ್ತಿಗೆ.

‍ಲೇಖಕರು avadhi

3 March, 2014

2 Comments

  1. smitha Amrithraj

    naanu odiruve.ellaroo odale bekada uttama pustaka-smitha.

  2. narayan raichur

    illina janapada chintanegalu/kathanakagalu aiteehyagalu mana sleyuvanthadu maatravallu mana-muttuvanthadu kooda !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading