ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿನ್ಲಾಡೆನ್ ಕೂಡಾ ಒಬ್ಬ ಪರಿಸರವನ್ನು ಕೆಡಿಸುವ ವಿಷದ ಹೊಗೆ ಉಗುಳುವ ರಾಕ್ಷಸ.

ಪರಿಸರ ಕಾಳಜಿ

ಉಷಾ ರೈ

ಪರಿಸರನಾಶ ಮತ್ತು ಮಾಲಿನ್ಯ ನಮ್ಮನ್ನು ಕಂಗೆಡಿಸುತ್ತಿರುವ ಒಂದು ಆತಂಕಕಾರಿ ಸಮಸ್ಯೆ. ಪರಿಸರ ಕಾಳಜಿ ಇಂದಿನ ಸವಾಲು ಮತ್ತು ಮುಂದಿನ ಭೀತಿ ಎಂದರೂ ತಪ್ಪಿಲ್ಲ.

ಪರಿಸರ ಕಾಳಜಿಯ ಚಿಂತನೆ ಇಂದಿನ ಅಗತ್ಯ. ಅದು ಸುತ್ತು ಮುತ್ತಲಿನ ಗಲೀಜು ತುಂಬಿರುವ ಪರಿಸರ ಮಾಲಿನ್ಯವಾಗಿರಬಹುದು; ಶೇಖಡಾ ಎಂಭತ್ತೈದು ಜನರನ್ನು ಉಬ್ಬಸ ರೋಗಕ್ಕೆ ಬಲಿಯಾಗಿಸಿರುವ ಕಲುಷಿತ ಹವೆ ಅಥವಾ ಕಾಂಗ್ರೆಸ್ ಗ್ರಾಸ್ನ ಹಾವಳಿಯಾಗಿರಬಹುದು; ವಾಹನಗಳ ಹೊಗೆಯಿಂದ ಕಾರ್ಬನ್ ಡೈ ಆಕ್ಸೈಡ್ ಹಬ್ಬಿ ಹಾಳುಗೆಡುತ್ತಿರುವ ಗಾಳಿಯಿರಬಹುದು; ಗಣಿಗಾರಿಕೆಯಿಂದ ಮಾಯವಾಗುತ್ತಿರುವ ಗುಡ್ಡ ಬೆಟ್ಟಗಳು ತಂದೊಡ್ಡುತ್ತಿರುವ ಪರಿಸರ ನಾಶ ಇರಬಹುದು; ಕಾಡುಗಳನ್ನು ನೆಲಸಮ ಮಾಡುತ್ತಿರುವುದರಿಂದ ಉಂಟಾದ ಪರಿಸರ ನಾಶವಿರಬಹುದು; ಕಲುಷಿತವಾಗಿರುವ ಜೀವಂತ ಮನಸುಗಳಿರಬಹುದು; ಅಥವಾ ರಾಜಕೀಯವನ್ನೇ ಕೊಳಕು ರಾಢಿಯಾಗಿಸಿರುವ ಲಂಚಗುಳಿತನವಿರಬಹುದು; ಎಲ್ಲಕ್ಕಿಂತ ಮುಖ್ಯವಾಗಿ ಮನೆಮನೆಯೊಳಗೂ ದೂರದರ್ಶನದ ವಿವಿಧ ಚನಲುಗಳು ಕಕ್ಕುತ್ತಿರುವ ಮಾಲಿನ್ಯವಿರಬಹುದು; ಕೊಲೆ ಸುಲಿಗೆ, ಹೊಡೆತ ಬಡಿತ, ಬಲಾತ್ಕಾರ, ಸೆಕ್ಸ್ಗಳನ್ನೇ ವೈಭವೀಕರಿಸಿ ತೋರಿಸುತ್ತಿರುವ ಸಿನೀಮಾ ಹಾಗೂ ಬೇರೆ ಮಾದ್ಯಮಗಳಿರಬಹುದು. ಇವೆಲ್ಲಾ ಒಂದಲ್ಲ ಒಂದು ವಿಧದಲ್ಲಿ ನಮ್ಮೆಲ್ಲರನ್ನೂ ಕಾಡಿಸುತ್ತಿರುವುದರಿಂದ ಒಂದಲ್ಲ ಒಂದು ಬಾರಿ ನಾವು ‘ಎಲ್ಲ ಕೆಟ್ಟುಹೋಗಿದೆ. ಇಲ್ಲಿ ಬದುಕುವುದಾದರೂ ಹೇಗೆ’ ಎಂದು ಉದ್ಗರಿಸಿ ನಮ್ಮ ಬೇಸರವನ್ನು ಹೊರ ಹಾಕಿಯೇ ಇರುತ್ತೇವೆ. ಆದರೆ ಈ ಪರಿಸರ ಮಾಲಿನ್ಯಕ್ಕೆ ನಾವೆಷ್ಟು ಕಾರಣರು, ಅದನ್ನು ಸರಿಪಡಿಸಲು ನಾವೇನು ಮಾಡಬಹುದು ಎಂದು ತಿಳಿಯುವ ಪ್ರಯತ್ನವನ್ನೇ ಮಾಡೋದಿಲ್ಲ.

ಉದಾಹರಣೆಗೆ ರಸ್ತೆ ಬದಿಯಲ್ಲಿರುವ ಕಸದ ತೊಟ್ಟಿಗಳು ಉಕ್ಕಿಹರಿದು ರಸ್ತೆಯಲ್ಲೆಲ್ಲಾ ಕಸ ಹಾರಾಡುತ್ತಿದ್ದರೆ ಸುತ್ತು ಮುತ್ತಲಿನ ಮನೆಯವರನ್ನು ಬೈಯುತ್ತೇವೆಯಲ್ಲದೆ ನಮ್ಮ ಮನೆಯ ಕೆಲಸದವಳು ಎಲ್ಲಿ ಕಸ ಬಿಸಾಡುತ್ತಾಳೆಂದು ನೋಡಲು ಹೋಗುವುದಿಲ್ಲ. ಅಥವಾ ಕೆಲಸದವರು ಬಾರದಾಗ ಮೆಲ್ಲಗೆ ರಾತ್ರಿ ಹೊತ್ತಿನಲ್ಲಿ ರಸ್ತೆಯ ಬದಿಯಲ್ಲಿರುವ ಅಥವಾ ಯಾವುದಾದರೂ ಖಾಲಿ ಸೈಟ್ ಇದ್ದರೆ ಅಲ್ಲಿ ಕಸ ಬಿಸಾಡಿ ಕಣ್ಣು ಮುಚ್ಚಿ ಹಿಂದಕ್ಕೆ ಬರುತ್ತೇವೆ. ಬೇರೆಯವರ ವಾಹನ ಕಪ್ಪು ಹೊಗೆಯುಗುಳುತ್ತಿದ್ದರೆ ಅವರನ್ನು ಬೈಯ್ಯುತ್ತೇವೆಯಲ್ಲದೆ ನಮ್ಮ ವಾಹನದ ಎಮಿಶನ್ ಟೆಸ್ಟ್ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಧೂಮಪಾನ ಮಾಡಿ ನಮ್ಮ ಹತ್ತಿರದಲ್ಲಿರುವವರಿಗೆ ವಿಷ ಉಣಿಸುತ್ತೇವೆಯಲ್ಲದೆ ಈ ಕೆಟ್ಟ ಚಟವನ್ನು ಬಿಟ್ಟು ನಾವೂ ಆರೋಗ್ಯದಿಂದಿರೋಣ ಬೇರೆಯವರನ್ನೂ ನೆಮ್ಮದಿಯಲ್ಲಿರಲು ಬಿಡೋಣ ಎಂದು ಯೋಚಿಸುವುದಿಲ್ಲ. ಕೆಟ್ಟ ಸಿನೀಮಾಗಳ ದೃಶ್ಯಗಳನ್ನು ನೋಡಿದಾಗ ಬೈಯ್ದು ಸುಮ್ಮನಾಗುತ್ತೇವೆಯಲ್ಲದೆ ಪ್ರತಿಭಟಿಸಲು ಹೋಗುವುದಿಲ್ಲ.

ದೀಪದಡಿಯಲ್ಲಿ ಕತ್ತಲು ಹಬ್ಬಿಸುವ ದೀಪ ಸುತ್ತಲ ಅಂಕುಡೊಂಕುಗಳಿಗೆ ಬೆಳಕು ಚೆಲ್ಲಿ ತೋರಿಸುವ ಹಾಗೆ ನಮ್ಮ ಮನೋಭಾವ ಇರುತ್ತದೆ. ನಾವು ಪರಿಸರ ಮಾಲಿನ್ಯಕ್ಕೆ ಎಷ್ಟು ಕಾರಣರಾಗಿದ್ದೇವೆ ಎನ್ನುವ ಅರಿವೇ ನಮಗಿರುವುದಿಲ್ಲ. ಅದರಿಂದಾಗಿಯೇ ಎಲ್ಲ ರೀತಿಯ ಪರಿಸರ ಮಾಲಿನ್ಯಗಳು ಜಾಸ್ತಿಯಾಗಿವೆ. ನಮಗೆಲ್ಲರಿಗೂ ಪರಿಸರದ ಬಗ್ಗೆ ಕಾಳಜಿ ಇದೆ ಎನ್ನುವುದು ‘ಅಯ್ಯೋ ಎಲ್ಲ ಕೆಟ್ಟಿದೆ’ ಎನ್ನುವಾಗಿನ ನಿಟ್ಟುಸಿರಲ್ಲಿ ಗೋಚರಿಸಿ ಅದು ನಿಟ್ಟುಸಿರಲ್ಲಿಯೇ ಕೊನೆಯಾಗುವುದಲ್ಲದೆ ಪರಿಹಾರಕ್ಕಾಗಿ ದಾರಿಹುಡುಕುವ ಪ್ರಯತ್ನ ಮಾಡಲು ಹೋಗುವುದಿಲ್ಲ. ಬೇರೆ ಯಾರಾದರೂ ಮಾಡಬಹುದು ಎಂದು ಸುತ್ತಲೂ ನೋಡುತ್ತೇವೆ. ಕಾಳಜಿ ಕಾಳಜಿಯಾಗಿಯಷ್ಟೇ ಉಳಿಯುತ್ತದೆ. ಹಾಗಾಗಬಾರದು. ಪರಿಸರದ ಬಗ್ಗೆ ಕಾಳಜಿ ವಹಿಸುವುದರಿಂದ ನಮಗೇ ಲಾಭವಲ್ಲದೇ ಬೇರಾರಿಗೂ ಅಲ್ಲ.

ಪರಿಸರ ಕಾಳಜಿ ಅಂದರೆ ಏನು? ಕಲುಷಿತ ಗಾಳಿ, ನೀರು, ಕಸತುಂಬಿದ ವಾತಾವರಣ ಮಾತ್ರ ಪರಿಸರ ಮಾಲಿನ್ಯ ಎನ್ನುವ ತಲೆಬರಹದಡಿಯಲ್ಲಿ ಮಾಡುವ ಪಟ್ಟಿಯಲ್ಲಿ ಬರುವುದೇ? ಕಲುಷಿತ ಮನಸುಗಳು, ಜನರ ಮನಸನ್ನು ಕೆಡಿಸುವ ದೃಶ್ಯ ಮಾದ್ಯಮಗಳು, ಈಗೀಗ ಜನರಲ್ಲಿ ಕಂಡು ಬರುತ್ತಿರುವ ಜೀವನ ವಿರೋಧಿ ನಿಲುವುಗಳು ಈ ಚೌಕಟ್ಟಿನಲ್ಲಿ ಬರುವುದಿಲ್ಲವೇ?

ಪರಿಸರ ಮಾಲಿನ್ಯ ಅಂದಕೂಡಲೇ ಇವೆಲ್ಲವೂ ನೆನಪಿಗೆ ಬರುತ್ತದೆ. ಉಸಿರುಗಟ್ಟಿಸುವ ವಾಹನಗಳ ಹೊಗೆ ತುಂಬಿರುವ ಗಾಳಿ, ಕುಡಿದರೆ ರೋಗರುಜಿನಗಳಿಗೆ ತುತ್ತು ಮಾಡುವ ಕಲುಷಿತ ನೀರು. ಒಬ್ಬರನ್ನೊಬ್ಬರು ಕೊಲ್ಲುವ, ಕಿತ್ತು ತಿನ್ನುವ ಭಾವ ಹೊತ್ತ ಮನುಷ್ಯರು, ಎಲ್ಲೆಲ್ಲೂ ಹಬ್ಬಿರುವ ಲಂಚಾವತಾರ, ಮಕ್ಕಳ ಮಾರಾಟ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಮೇಲಿನ ಅತ್ಯಾಚಾರಗಳು, ಬದಲಾಗುತ್ತಿರುವ ಗಂಡು ಹೆಣ್ಣಿನ ಸಂಬಂಧಗಳು, ಭ್ರೂಣ ಹತ್ಯೆ, ಭಯೋತ್ಪಾದಕರ ಗುಂಪುಗಳು, ಕೆಟ್ಟ ಸಿನೀಮಾಗಳು, ಕೆಲವೊಮ್ಮೆ ಇಂಟರ್ನೆಟ್, ದೂರದರ್ಶನ ಮನೆಯ ಒಳಗೇ ತಂದು ಚೆಲ್ಲುವ ಅಸಹ್ಯ ದೃಶ್ಯಗಳು, ಇತ್ಯಾದಿ ಇತ್ಯಾದಿ. ಇವೆಲ್ಲವೂ ಸಾಮಾಜಿಕ ಪರಿಸರವನ್ನು ಕೆಡಿಸುವ ಸಂಗತಿಗಳು. ಬಿನ್ಲಾಡೆನ್ ಕೂಡಾ ಒಬ್ಬ ಪರಿಸರವನ್ನು ಕೆಡಿಸುವ ವಿಷದ ಹೊಗೆ ಉಗುಳುವ ರಾಕ್ಷಸ. ಅವನ ಉಸಿರಾಟದಲ್ಲಿ ಇಡೀ ವಿಶ್ವವನ್ನೇ ಸುಡಲು ಹೊರಟ ಉರಿಯಿತ್ತು. ಅವನು ಸತ್ತ ಆದರೆ ಅವನ ಪೀಳಿಗೆಯವರು ಇನ್ನೂ ಇದ್ದಾರಲ್ಲ?

ವಾತಾವರಣದಲ್ಲಿ ಹಬ್ಬಿರುವ ಉರಿಯನ್ನು ತಗ್ಗಿಸಲು ಮರಗಳನ್ನು ನೆಟ್ಟು ಗಾಳಿಯ ಶುದ್ಧಿಗೆ ಪ್ರಯತ್ನಿಸಬಹುದು, ಹವೆಯನ್ನು ತಣ್ಣಗಾಗಿಸಲು ನೋಡಬಹುದು. ಆದರೆ ಮನುಷ್ಯರು ಉಗುಳುವ ದ್ವೇಷದ ಉರಿಯನ್ನು ನಂದಿಸುವುದು ಹೇಗೆ? ಮನುಷ್ಯರನ್ನು ಹಾಡುಹಗಲೇ ಕೊಚ್ಚಿಕೊಲ್ಲುವ ದಂಡುಪಾಳ್ಯ ಗ್ಯಾಂಗಿನವರು ಮತ್ತು ಅಂತಹದ್ದೇ ಗುಂಪಿನ ಇನ್ನೂ ಕೆಲವರು ಉಂಟುಮಾಡುತ್ತಿರುವ ಭಯಾನಕ ಪರಿಸರವನ್ನು ಸರಿಪಡಿಸುವುದು ಹೇಗೆ? ಮತಾಂಧತೆಯ ದ್ವೇಷದಿಂದ ದೇಶ ದೇಶಗಳನ್ನೇ ಕೆಡವಲು ನೋಡುವ ಭಯೋತ್ಪಾದಕರಿಂದ ಕೆಡುವ ಸಾಮಾಜಿಕ, ರಾಜಕೀಯ, ಆಥರ್ಿಕ ಪರಿಸರವನ್ನು ಸರಿಪಡಿಸುವುದು ಹೇಗೆ? ಹಣ ಮಾಡುವ ಗುರಿಯನ್ನಿಟ್ಟುಕೊಂಡೇ ರಾಜಕೀಯ ಪ್ರವೇಶಿಸಿ ಲಂಚಗುಳಿತನವನ್ನು ಮೆರೆಸುತ್ತಿರುವ, ಒಬ್ಬರ ಮೇಲೊಬ್ಬರು ಧ್ವೇಷ ಸಾಧಿಸುವ ರಾಜಕಾರಣಿಗಳು ಕೆಡಿಸುವ ರಾಜಕೀಯ ಪರಿಸರವನ್ನು ಸರಿಪಡಿಸುವುದು ಹೇಗೆ? ಪರಿಸರವಾದಿಗಳ ಕಾರ್ಯವ್ಯಾಪ್ತಿಯಲ್ಲಿ ಇವೆಲ್ಲ ಬರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಇದೂ ಒಂದು ರೀತಿಯಲ್ಲಿ ಪರಿಸರಕ್ಕೆ ಮಸಿ ಬಳೆಯುತ್ತಿರುವ ವಿಷಯಗಳೇ. ಇವೆಲ್ಲವೂ ಪರಿಸರ ಮಾಲಿನ್ಯವಲ್ಲದೆ ಇನ್ನೇನು?.

ಇದಕ್ಕೆಲ್ಲ ಯಾರು ಪರಿಹಾರ ಹುಡುಕುತ್ತಾರೆ?

 

 

 

 

 

 

 

 

‍ಲೇಖಕರು G

6 November, 2012

1 Comment

  1. SavitaInamdar

    ನಿಮ್ಮ ಹಾಗೆ ಇತರರಿಗೂ ತಮ್ಮ ತಮ್ಮ ಪರಿಸರದ ಕಾಳಜಿವಹಿಸಿದಲ್ಲಿ ಪರಿಸರ ಮಾಲಿನ್ಯಕ್ಕೆ ನಾಂದಿ ಹಾಡಬಹುದು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮೀ ಲೇಖನ ಉಷಾ ಜಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading