ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಿಗ್ ಬಾಸ್’ – ಹಂಚಿ ತಿನ್ನುವ ಬದಲು ಹೊಂಚಿ ತಿನ್ನುವ ಕಥೆ

ಗೊರೂರು ಶಿವೇಶ್

ಕಳೆದ ಬಾರಿಯಂತೆ ಈ ಬಾರಿಯು ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಅಕುಲ್ ಬಾಲಾಜಿ ಬಿಗ್ಬಾಸ್ನ ಪಟ್ಟಕ್ಕೇರಿ ಬಿಗ್ಬಾಸ್ನ ಸೀಸನ್-2 ಗೆ ತೆರೆ ಬಿದ್ದಿದೆ. ಖಾಸಗಿ ಛಾನಲ್ಲೊಂದು ಹಿಂದಿನ ದಿನ ನಡೆದ ಸಮೀಕ್ಷೆಯಲ್ಲಿ ಸೃಜನ್ ಲೋಕೇಶ್ ಸುಮಾರು ನಾಲ್ಕೈದು ಸಾವಿರ ಮತಗಳಿಗಿಂತ ಮುಂದಿದ್ದನ್ನು ಕಂಡು ಸೃಜನ್ಗೆ ಪಟ್ಟ ಖಚಿತ ಎಂದು ಬಹುತೇಕರು ಭಾವಿಸಿದ್ದರು. ಬಿಗ್ಬಾಸ್ ಮನೆಯಲ್ಲಿ ಸಭ್ಯತೆಯ ಪ್ರತೀಕವಾಗಿ ತನ್ನ ನಗೆಚಾಟಿಕೆಗಳಿಂದ ಇತರರ ಅನುಕರಣೆ ಮಾಡುತ್ತಾ ರಂಜಿಸುತ್ತಿದ್ದ ಸೃಜನ್ ಈ ಹಿಂದೆ ನಡೆಸಿಕೊಟ್ಟ ‘ಮಜಾ ವಿತ್ ಸೃಜಾ’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಸಾಧಿಸಿದ್ದು, ಅವರ ನೆರವಿಗೆ ಬರಬಹುದೆಂದು ಭಾವಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ.
ಸೃಜನ್-ಅಕುಲ್ ಇಬ್ಬರೂ ಕಿರುತೆರೆಯಲ್ಲಿ ಆ್ಯಂಕರಿಂಗ್ನಿಂದಾಗಿಯೆ ಪ್ರಸಿದ್ಧರು. ಸೃಜನ್ ಆ ಸನ್ನಿವೇಶಕ್ಕೆ ತಕ್ಕಂತೆ ಹೊಮ್ಮಿಸುತ್ತಿದ್ದ ಕಿಡಿ ನುಡಿಗಳು ಕಾರ್ಯಕ್ರಮದ ಮಟ್ಟವನ್ನು ಆಕರ್ಷಣೀಯಗೊಳಿಸಿದರೆ, ಇನ್ನೊಂದೆಡೆ ಅಕುಲ್ ಆಂಗಿಕ ಚೇಷ್ಟೆಗಳಿಂದ ಸ್ಪರ್ಧೆಗಳ ಮೇಲೆ ತೋರಿಸುತ್ತಿದ್ದ ಕೋಪ, ಬೈಗುಳಗಳು ಅವರದೇ ಆದ ಅಭಿಮಾನಿಗಳನ್ನು ಹುಟ್ಟುಹಾಕಿತ್ತು.
ಕಳೆದ ಬಾರಿ ತನ್ನ ಸೃಜನಶೀಲ ಚಟುವಟಿಕೆಯಿಂದ ವೀಕ್ಷಕರ ಮನಗೆದ್ದಿದ್ದ ಅರುಣ್ ಸಾಗರ್ ಗೆಲ್ಲಬಹುದೆಂಬ ನಿರೀಕ್ಷೆಯನ್ನು ಹುಸಿಗೊಳಿಸಿ ವಿಜಯರಾಘವೇಂದ್ರ ವಿಜೇತರಾದಂತೆ ಈ ಬಾರಿಯೂ ಸಂಭವಿಸಿದೆ. ಪ್ರೇಕ್ಷಕರ ನಿರೀಕ್ಷೆಯಂತೆ ನಡೆದರೆ ‘ಕಿಕ್’ ಸಿಗಲಾರದೆಂಬ ಕಾರಣಕ್ಕೆ ಬದಲಾಯಿತೋ ಅಥವಾ ಸೃಜನ್ ಸಭ್ಯತೆಯನ್ನು ಇಷ್ಟಪಟ್ಟ ಸಭ್ಯರು ಕೇವಲ ತಮ್ಮ ಅಭಿಮಾನವನ್ನು ಮಾತಿಗೆ ಸೀಮಿತಗೊಳಿಸಿ ಅಭಿಮಾನ ವೋಟಾಗಿ ಪರಿವರ್ತನೆಯಾಗದ ಕಾರಣ ಸೋಲನ್ನು ಅನುಭವಿಸಬೇಕಾಯಿತೋ ‘ಬಿಗ್ಬಾಸ್’ಗೆ ಗೊತ್ತು. ಆದರೆ ಅಕುಲ್ ಬಾಲಾಜಿ ಗೆದಿದ್ದು ಕಳೆದ ಬಾರಿಯಷ್ಟು ನಿರಾಸೆಯಂತೂ ಮೂಡಿಸಿಲ್ಲ. ಏನೇ ಆದರೂ ಛಾನಲ್ಗೆ ಟಿ,ಆರ್.ಪಿ ಏರಿಸುವುದು ಅಲ್ಲಿನ ಸಭ್ಯತೆಯ ಆಟಗಳಲ್ಲ ಎಂದು ಮನದಟ್ಟಾಗಿದೆ. ಸ್ಪರ್ಧೆಗಳ ಬೈದಾಟ, ಕಿತ್ತಾಟ, ಪರಸ್ಪರ ತೋಳೇರಿಸುವುದು, ಮತ್ತೊಬ್ಬರ ನಿಂದನೆ, ಗಾಸಿಪ್ ಇದು ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುದನ್ನು ಶೃತಪಡಿಸಲೋ ಎಂಬಂತೆ ಅಕುಲ್, ಗುರುಪ್ರಸಾದ್, ಸಂತೋಷ್, ದೀಪಿಕಾಕಾಮಯ್ಯರ ಒಡನಾಟದ ಪ್ರಸಂಗಗಳು ಪ್ರಸಾರದ ಬಹುತೇಕ ಸಮಯವನ್ನು ಆಕ್ರಮಿಸಿದ್ದು ಸುಳ್ಳಲ್ಲ.

ಪ್ರಾಚೀನ ಭಾರತದ ತಿಳುವಳಿಕೆಯಿಂದ ‘ಹಂಚಿತಿನ್ನು’ ಸಿದ್ಧಾಂತವನ್ನು ಬದಿಗಿಟ್ಟು ‘ಹೊಂಚಿತಿನ್ನು’ ಎಂಬ ಆಧುನಿಕ ಭಾರತದ ನಂಬಿಕೆಯನ್ನು ಪ್ರತಿಪಾದಿಸಿದ್ದು ಇದರ ಹೆಗ್ಗಳಿಕೆಯೂ ಹೌದು. ಟಾಸ್ಕ್ ವಿಜೇತರಾದವರಿಗೆ ನೀಡಲಾಗುತ್ತಿದ್ದ ವಿಶೇಷ ತಿಂಡಿ ತೀರ್ಥಗಳನ್ನು ಕೊಡುವಾಗಲೇ ಇಡುತ್ತಿದ್ದ ಕಂಡಿಷನ್ ಎಂದರೆ ಇತರರಿಗೆ ನೀಡದೆ ಒಬ್ಬರೆ ತಿನ್ನಬೇಕೆಂಬುದು. ಕೆಲವೊಮ್ಮೆ ಒಬ್ಬರೆ ಉಳಿದ ಸಂದರ್ಭದಲ್ಲಿ ಇತರೆ ಸ್ಪರ್ಧಿಗಳ ಎದುರಿಗೆ ಈ ಕೆಲಸವನ್ನು ಮಾಡಬೇಕಾದ್ದು ಮೊದಮೊದಲು ಮುಜುಗರ ಪಟ್ಟುಕೊಂಡರೂ ನಂತರ ‘ಸಾರಿ’ ಹೇಳುತ್ತಾ ಚಪ್ಪರಿಸಲಾರಂಬಿಸಿದ್ದು ಬದಲಾದ ಆಧುನಿಕ ಮನೋಭಾವಕ್ಕೆ ಹಿಡಿದ ಕನ್ನಡಿ.
ಷೋ ಆರಂಭದಲ್ಲಿ ಸೃಜನ್ ಲೋಕೇಶ್ ಮಿಂಚಿ ನಂತರ ಕಾರ್ಯಕ್ರಮ ನೀರಸದೆಡೆಗೆ ಸಾಗುತ್ತಿದ್ದಂತೆ ‘ಷೋ’ವನ್ನು ಕೊಂಚಮಟ್ಟಿಗೆ ರಂಗೇರಿಸಿದ್ದು ಅಕುಲ್, ಗುರುಪ್ರಸಾದ್ ಜೋಡಿ ಎಂಬುದು ಸುಳ್ಳಲ್ಲ. ಪ್ರಾರಂಭದಲ್ಲಿ ಕಿತ್ತಾಟ, ಪರಸ್ಪರ ಜರಿದಾಡಿದರೂ ಕೊನೆಗೆ ಒಂದಾಗಿ ಕೋಡಿಂಗ್-ಡಿಕೋಡಿಂಗ್ ಮಾಡುತ್ತಾ ಬಿಗ್ಬಾಸ್ನ ಮನೆ ಚಟುವಟಿಕೆಯಿಂದ ಇರುವಂತೆ ಮಾಡಿದ್ದು ಈ ಜೋಡಿಯೆ.
ಷೋನ ಆರಂಭದ ದಿನಗಳಲ್ಲಿ ಹಾಗೂ ಮೊದಲಾರ್ಧದಲ್ಲಿ ಸೃಜನ್ ಮಿಂಚಿದರೆ ಗುರುಪ್ರಸಾದ್ ಸಾಥ್ ಸಿಕ್ಕಿದ ನಂತರ ಅಕುಲ್ ತನ್ನ ತಂತ್ರಗಾರಿಕೆಯಿಂದ ವೀಕ್ಷಕರ ಗಮನ ಸೆಳೆಯುತ್ತಾ ಹೋದ. ಇದಕ್ಕೆ ಉದಾಹರಣೆ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡುವ ಸಂದರ್ಭ. ಸೃಜನ್ ಹಾಗೂ ಇತರೆ ಸದಸ್ಯರು ಭೇಟಿಯ ಸಂದರ್ಭದ ಆನಂದಭಾಷ್ಪದಲ್ಲಿಯೆ ಕಳೆದುಹೋದರೆ ಅಕುಲ್ ಕಣ್ಣೀರುಗೆರೆಯುತ್ತಲೆ ತನ್ನ ಕುಟುಂಬದ ಸದಸ್ಯರನ್ನು ಬಳಸಿಕೊಂಡೇ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಲು ಪ್ರಯತ್ನಪಟ್ಟ ರೀತಿ ಗಮನ ಸೆಳೆಯಿತಲ್ಲದೆ ಅನುಪಮಳಿಗೆ ನೀಡಿದ ಸೀಕ್ರೇಟ್ ಹ್ಯಾಲಿನೇಷನ್ ಟಾಸ್ಕ್ ಸಂದರ್ಭದಲ್ಲಿ ಅನುಪಮಳ ಮೋಹಿನಿ ವರ್ತನೆಯಿಂದ ಸೃಜನ್ ದಿಙ್ಮೂಡನಾದರೆ ಅಕುಲ್ ಸಾಧಾರಣವಾಗಿ ಮನೆಗಳಲ್ಲಿ ಇಂಥ ಸಂದರ್ಭದಲ್ಲೂ ಮಾಡುವ ನಿಂಬೆಹಣ್ಣು ಮಂತ್ರಿಸಿ, ನಿವಾಳಿಸಿ ಅನುಪಮಗಳಿಗೆ ತೋರಿಸಿದ ಕಾಳಜಿ ಸಾಮಾನ್ಯ ಪ್ರೇಕ್ಷಕರನ್ನು ಹಿಡಿದಿಟ್ಟಿರಲಿಕ್ಕೂ ಸಾಕು.
ಒಟ್ಟಾರೆ ಬಿಗ್ ಬಾಸ್ ಮುಗಿದಿದೆ. ತನ್ನ ಮಾರ್ಗದರ್ಶನಕ್ಕಾಗಿ ‘ಗುರು’ ಗುರುಪ್ರಸಾದ್ಗೆ ಕಾರೊಂದನ್ನು ಬಳುವಳಿಯಾಗಿ ಅಕುಲ್ ನೀಡಿಯಾಗಿದೆ. ಬಿಗ್ಬಾಸ್ನ ಪ್ರವೇಶ ಈ ಇಬ್ಬರ ವೃತ್ತಿಜೀವನದ ಮೇಲೆ ಉಂಟುಮಾಡುವ ಪರಿಣಾಮವನ್ನು ಕಾದುನೋಡಬೇಕಾಗಿದೆ. ಈ ನಡುವೆ ಬಿಗ್ಬಾಸ್ನಿಂದ ಇವರಿಗಿಂತ ಮೊದಲು ಹೊರಬಂದ ಸಂತೋಷ್ ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ಸೀಸನ್-3ರ ಆ್ಯಂಕರ್ ಆಗಿ ಅವಕಾಶ ಗಿಟ್ಟಿಸಿದ್ದಾರೆ. ‘ಹಳ್ಳಿ ಲೈಫ್’ ಅವರ ಬಾಯಲ್ಲಿ ‘ಹಲ್ಲಿ ಲೈಫ್’ ಆಗಿ ಆ್ಯಂಕರಿಕೆಯಲ್ಲಿ ತಡಬಡಾಯಿಸುತ್ತಿರುವುದು ಮತ್ತೊಮ್ಮೆ ಅಕುಲ್ಗೆ ಹಾದಿಯನ್ನು ಹದಮಾಡಬಹುದು.
 

‍ಲೇಖಕರು G

12 October, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading