ಶಿವು ಮೋರಿಗೇರಿ
ಪ್ರತಿದಿನ ಬೆಳಗ್ಗೆ ಒಂಭತ್ತರಿಂದ ಹತ್ತರವರೆಗೆ ನಂಗೆ ರಾಹುಕಾಲ. ಯಾಕೇಂತ ಕಾರಣಾನ ನೀವೂ ಕೇಳಬೇಡಿ, ನಾನೂ ಬಾಯಿ ಬಿಡಲ್ಲ. ಆದ್ರೆ ಮೊನ್ನೆ ಗುರುವಾರ ಬೆಳಗ್ಗೆನೆ ನಂಗೆ ಜಿ ಎನ್ ಮೋಹನ್ ಸಾರ್ ಕರೆದು ‘ಬೇಗ ರೆಡಿಯಾಗಪ್ಪಾ ಮೀಡಿಯಾ ಹಬ್ಬಕ್ಕೆ ಹೋಗಬೇಕು’ ಅಂದಾಗ ನಂಗೂ ಚೂರು ಕನ್ಪ್ಯೂಜನ್ನು. ಸರಿ ಎಂದು ತಲೆ ಕೆರೆದುಕೊಳ್ಳುತ್ತಾ ಹೋಗಿ ರೆಡಿಯಾಗಿ ಬಂದ ಮೇಲೆ ಸಾರ್ ಗಾಡಿ ನೇರ ವಿಜಯನಗರದೆಡೆಗೆ. ಹಂಪಿನಗರದ ‘ವಿಜಯನಗರಬಿಂಬ’ ಜ್ಞಾನ ಕುಟೀರದ ಮುಂದೆ ನಾವು ನಿಂತಾಗ, ಮುರುಳಿ ಮೋಹನ್ ಕಾಟಿ ಸಾರ್ ಅಷ್ಟೊತ್ತಿಗೆಲ್ಲಾ ಅಲ್ಲಿದ್ದರು. ನಮ್ಮ ಸಾರ್ ದಾರಿನೇ ಎದುರು ನೋಡುತ್ತಿದ್ದಂತಿದ್ದ ಕಶ್ಯಪ್ ಸಾರ್ ನಮ್ಮನ್ನು ಒಳಕರೆದರು. ಶೋಭಾ ವೆಂಕಟೇಶ್ ಅಮ್ಮ ಪರಿಚಯಿಸಿಕೊಂಡರು. ಅವರ ಹಣೆಯ ಮೇಲಿನ ಇಷ್ಟಗಲ ಕುಂಕುಮದ ಬೊಟ್ಟನ್ನು ನೋಡಿದಾಗ ಇವರು ನಮ್ಮ ಉತ್ತರ ಕರ್ನಾಟಕದೋರಾ? ಅನ್ನೋ ಪ್ರಶ್ನೆ ಅಲ್ಲೇ ಮರೆಯೋಯ್ತು. ನಂತರ ಜಿ ಎನ್ ಸಾರ್, ಕಶ್ಯಪ್ ಸಾರ್, ಶೋಭಾ ಮೇಡಂ, ಸುಷ್ಮ ಮೇಡಂ, ಮುರುಳಿ ಸಾರ್, ಇವರೆಲ್ಲಾ ಅಂದಿನ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚಿಸುತ್ತಿದ್ದರೆ ನಾನು, ನನ್ನ ಕೈಯಲ್ಲಿದ್ದ ಕಪ್ ಮಜ್ಜಿಗೆಯಲ್ಲಿ ನಾಲಿಗೆಯಿಂದ ಬೆಣ್ಣೆ ಹುಡುಕುತಿದ್ದೆ.
ನಾನು ಮಜ್ಜಿಗೆ ಕುಡಿದು ಮುಗಿಸುವಷ್ಟರಲ್ಲಿ ಕೊರಳಿಗೆ ಕ್ಯಾಮರಾ ನೇತಾಕಿಕೊಂಡು ಒಳ ಬಂದಿದ್ದು ರಜತ್. ಇವನಿಗೆ ವಿನೋದ್ ಎಂಬ ಇನ್ನೊಂದು ಹೆಸರಿದೆ. ಅವನೂ ಸತ್ಕಾರ ಸ್ವೀಕರಿಸುವಾಗ ನಮ್ಮ ಸಾರ್, ಇವರು ಮುರುಳಿ ಮೋಹನ್ ಕಾಟಿ, ಪ್ರೋಗ್ರಾಂನ ಕನ್ವೈನ್ ಮಾಡ್ತಾರೆ , ಇವರು ರಜತ್ ಅಂತ ಮೀಡಿಯಾ ಹಬ್ಬದಲ್ಲಿ ಮಕ್ಕಳಿಗೆ ಆನಿಮೇಷನ್ ಫಿಲಂ ಮೇಕಿಂಗ್ ಬಗ್ಗೆ ಹೇಳಿಕೊಡ್ತಾರೆ. ಇವನು ಇವರಿಗೆ ಅಸಿಸ್ಟ್ ಆಗಿರ್ತಾನೆ ಅಂತ ನನ್ನ ತೋರಿಸಿ ಹೇಳಿದಾಗ, ನಾನು ಯಪ್ಪಾ, ಕಳೆದ ಆರುತಿಂಗಳಿಂದಾನೂ ಮುರುಳಿ ಸಾರ್ ಗೆ ಅಸಿಸ್ಟ್ ಆಗೇ ಇದ್ದೆ ಮತ್ತೆ ಇವರಿಗೇ ಅಸಿಸ್ಟ್ ಆಗಬೇಕಾ ? ರಾಮೇಶ್ವರಕ್ಕೆ ಹೋದ್ರೂ ಸೂರ್ಯ ಹುಟ್ಟೋದು ಪೂರ್ವಕ್ಕೇ ಬಿಡು ಅನ್ನೋದು ನನಗಾಗ ಖಾತ್ರಿಯಾಯ್ತು..
ನಂತರ ಅಲ್ಲಿಂದ ಎದ್ದು ಚಿಣ್ಣರ ಚಿಲಿಪಿಲಿಯ ಮೀಡಿಯಾ ಹಬ್ಬ ನಡೆಯುವ ವೇದಿಕೆಗೆ ಹೋಗುವಷ್ಟರಲ್ಲಿ ‘ತಂದನಾನ ತಾನಾನ ತಂದನಾನ… ತಂದನಾನ ತಾನಾನ ತಂದನಾನ’ ಅನ್ನೋ ಕಿವಿಗಿಂಪು ನಾದ ಮಕ್ಕಳ ಸುಶ್ರಾವ್ಯ ಕಂಠದಿಂದ ಹೊಮ್ಮಿದ ನಾದ ಗಾಳಿಯಲ್ಲಿನ ಮಲಿನವನ್ನು ತೊಳೆಯುತ್ತಿತ್ತು. ಇನ್ನು ನಾವು ತಲೆದೂಗದೆ ಇರಲು ಹೇಗೆ ಸಾಧ್ಯ ? ನಾವು ವೇದಿಕೆಯ ಹತ್ತಿರ ಹೋಗುತ್ತಿರುವಂತೆಯೇ ಆ ನಾದವೂ ಮೌನವಹಿಸಿತು. ಕಶ್ಯಪ್ ಸಾರ್ ಆಗ ಮೈಕ್ ನೊಂದಿಗೆ ವೇದಿಕೆ ಮೇಲೇರಿ ಮಕ್ಕಳಿಗೆ ಮೀಡಿಯಾ ಹಬ್ಬ ಶುರುವಾಗುವ ಮುನ್ಸೂಚನೆ ನೀಡಿ ಜಿ ಎನ್ ಸಾರ್ ರನ್ನು ವೇದಿಕೆಗೆ ಕರೆದಾಗ ಮಕ್ಕಳ ಹೋ ಕಾರ. ಎರಡನೆಯದಾಗ ಮುರುಳಿ ಮೋಹನ ಕಾಟಿ ಸರ್ ವೇದಿಕೆಯೇರಿದರು. ನಂತರ ವಿಜಯ ನಗರ ಬಿಂಬದ ಅಧ್ಯಕ್ಷರಾದ ಶೋಭಾ ವೆಂಕಟೇಶ್ ಮೇಡಂ ವೇದಿಕೆ ಅಲಂಕರಿಸಿದರು. ಆಮೇಲೆ ರಜತ್. ನಂತರ ಬಂತು ನೋಡಿ ನನ್ನ ಸರದಿ. ಕಶ್ಯಪ್ ಸಾರ್ ನನ್ನನ್ನು ವೇದಿಕೆಗೆ ಕರೆದಾಗ, ಮನೆಗೋಡಿಬಿಡಲೇ ? ಇಲ್ಲೇ ರಾಜಾಜಿನಗರ ದೂರ ಏನಿಲ್ಲ ಅನ್ನಿಸಿತ್ತು. ಜಿ ಎನ್ ಸಾರ್ ಜೊತೆ ನಾನು ಕ್ಲಾಸಲ್ಲಾದ್ರೆ ಕೂಡಬಹುದು. ವೇದಿಕೇಲಿ ? ಹೊಟ್ಟೆ ರ್ರುಂ ಅಂತಿತ್ತು.
ಇನ್ನೇನು ಮಾಡಕ್ಕಾಗಲ್ಲ ವೇದಿಕೆಗೆ ಹೋಗಿ ದುಂಡಗೆ ಮುದುಡಿಕೊಂಡರಾಯಿತು ಎಂದುಕೊಂಡು ಹೋಗಿ ಕುಳಿತರೆ, ಪಕ್ಕದಲ್ಲಿ ಕುಳಿತಿದ್ದ ರಜತ್, ಶಿವಣ್ಣಾ ನೀನು ಈ ಕಡೆ ಬಾರಣ್ಣಾ, ನನ್ನ ಪಕ್ಕ ಜಿ ಎನ್ ಸಾರ್ ಇದಾರೆ. ನಂಗೆ ಭಯ ಆಗ್ತಿದೆ ಅನ್ನೋದಾ ? ಇಲ್ಲಿ ಕುಂದ್ರೋದೇ ಬೇಡ ನಡೆ ಮನೆಗೋಡಿಬಿಡೋಣ ಅಂತ ಅವನ ಕಿವಿಯಲ್ಲಿ ಹೇಳಿದೆ. ತೀರ ನಗಲಾರದೆ ನಕ್ಕ. ಹಾಗೆ ವೇದಿಕೆಯಲ್ಲಿ ಕುಳಿತಾದ ಮೇಲೆ ಕಶ್ಯಪ್ ಸಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಜಿ ಎನ್ ಸಾರ್ ಹತ್ತಿರ ಕೇಳಿಕೊಂಡಾಗ ಸಾರ್ ಮಾತು ಶುರು ಮಾಡಿದರು ಅದೇ ಸಮಯಕ್ಕೆ ಸರಿಯಾಗಿ, ಮುರುಳಿ ಸಾರ್ ರಜತ್ ಗೆ ಪೋಟೋ ಕವರ್ ಮಾಡಲು ಹೇಳಿದಾಗ ಅವನು ವೇದಿಕೆಯಿಂದ ಜಿಗಿದ ಸ್ಪೀಡನ್ನು ಲಿಮ್ಕಾಕ್ಕೆ ಕಳಿಸಿದ್ದೀನಿ. ಜಿ ಎನ್ ಸಾರ್ ಮಕ್ಕಳ ಜೊತೆ ನಡೆಸುವ ಸಂವಾದವನ್ನು ನಾನಲ್ಲೇ ನೋಡಿದ್ದು. ಅವರ ಮಾತು ಮುಗಿದ ಮೇಲೆ ಮುರುಳಿ ಸಾರ್ ಸರದಿ. ಅವರ ಮಾತೂ ಮುಗಿಯುತ್ತಿದ್ದಂತೆಯೇ ಕಶ್ಯಪ್ ಸಾರ್ ನನ್ನತ್ತ ನೋಡುತ್ತಿದ್ದರು. ನಾನು ತಗ್ಗಿಸಿದ ತಲೆಯನ್ನು ಎತ್ತಲೇ ಇಲ್ಲ ಭೂಪ.
‘ಯಪ್ಪಾ ನಿನ್ನ ಕಾಲಿಗೆ ಬೀಳ್ತೀನಿ ಕಾರ್ಯಕ್ರಮವನ್ನ ಇಲ್ಲಿಗೆ ಮುಗಿಸಿಬಿಡಪ್ಪೋ’ ಅಂತಿತ್ತು ಮನಸ್ಸು. ಪುಣ್ಯಕ್ಕೆ ನನ್ನನ್ನು ಮೈಕ್ ಹತ್ತಿರ ಕರೆಯಲೂ ಇಲ್ಲ. ದೊಡ್ಡ ಉಸಿರೆಳೆದುಕೊಂಡು ಮುಗಿದ ಕಾರ್ಯಕ್ರಮದಿಂದಿಳಿದು ಬಂದು ಮುಂದಿನ ತಯಾರಿಯಲ್ಲಿದ್ದಾಗ ಮುರುಳಿ ಸಾರ್, ಮಕ್ಕಳನ್ನುದ್ದೇಶಿಸಿ ‘ಮಕ್ಕಳೇ ನೀವೆಲ್ಲಾ ಈಗ ಮೀಡಿಯಾ ಅನ್ನೋ ಪದವನ್ನು ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ಏನು ತೋಚುತ್ತೆ ಅದನ್ನ ಬರೆಯಿರಿ, ಅದು ಹೇಗೆ ಅಂತ ಜಿ ಎನ್ ಸಾರ್ ತೋರಿಸ್ತಾರೆ ಅಂದಾಗ ಜಿ ಎನ್ ಸಾರ್ ಮೀಡಿಯಾ ಪದ ಕೇಳಿದ ತಕ್ಷಣ ಅವರ ಮನಸ್ಸಿಗೆ ಥಟ್ಟನೆ ನೆನಪಾದ ಪದವನ್ನು ಅತಿಥಿ ಸ್ವ ಹಸ್ತಾಕ್ಷರ ಬೋರ್ಡಿನ ಮೇಲೆ ಬರೆದರು. ಮಕ್ಕಳೂ ತಮಗೆ ತೋಚಿದ್ದನ್ನು ಗೀಚಲು ಮುಗಿಬಿದ್ದರು. ಆಗ ಅಲ್ಲಿಂದ ಜಿ ಎನ್ ಸಾರ್ ತೆರಳಿದರು. ಆಗ ಬಂತು ನೋಡಿ ಮರಳಿ ನಂಗೆ ನನ್ನ ಧ್ವನಿ. ತಕ್ಷಣ ಮುರುಳಿ ಸಾರ್ ಸಲಹೆಯಂತೆ ಒಟ್ಟು ಎಂಭತ್ತು ವಿದ್ಯಾರ್ಥಿಗಳ ಗುಂಪನ್ನು, ಎಂಟು ತಂಡಗಳನ್ನು ಮಾಡಿ ಪ್ರತಿ ತಂಡಕ್ಕೂ ಒಂದೊಂದು ಪೇಪರ್ ಕೊಟ್ಟಾಗ ಆ ಪುಟಾಣಿಗಳ ಮೀಡಿಯಾ ಪದದ ಮೀನಿಂಗು ಮೀನಿನಂತೆ ನಲಿದಾಡಿತು. ನಂತರ ಮೀಡಿಯಾದ ಕುರಿತು ತಮ್ಮ ಮನದಲ್ಲಿದ್ದ ಮಾಹಿತಿಯನ್ನು ಕೆಲ ವಿದ್ಯಾರ್ಥಿಗಳು ಹಂಚಿಕೊಳ್ಳತೊಡಗಿದಾಗ ನಂಗೆ ಆ ಮಕ್ಕಳ ಬುದ್ಧಿಮತ್ತೆಯ ವೇಗ ಗೊತ್ತಾಯ್ತು. ನಂತರ ಅದೇ ಎಂಟು ತಂಡದ ಮಕ್ಕಳಿಗೆ ಒಂದು ಪತ್ರಿಕೆಯ ರೂಪುರೇಷೆ ಹೆಂಗಿರುತ್ತೆ ಅಂತ ಉದಾಹರಣೆ ಸಹಿತ ತೋರಿಸಿಕೊಟ್ಟದ್ದು ರಜತ್.
ಹಾಗೆ ಪತ್ರಿಕೆಯ ರೂಪುರೇಷೆಯನ್ನು ಪರಿಚಯಿಸುತ್ತಿದ್ದಂತೆಯೇ ನೀವೂ ಒಂದು ಪತ್ರಿಕೆಯನ್ನು ರೆಡಿ ಮಾಡಿ ಪೇಪರ್ ಕಟಿಂಗ್ ಗಳನ್ನು ಅಂಟಿಸಿ ಪತ್ರಿಕೆಯನ್ನು ಸಿದ್ದಗೊಳಿಸಿ ಎಂದು ಮುರುಳಿ ಸಾರ್ ಹೇಳಿದಾಗ ಮತ್ತದೇ ಎಂಟು ತಂಡಗಳ ಉತ್ಸಾಹ, ಪತ್ರಿಕೆ ತಯಾರಿಸುವ ಆ ಅರ್ಜೆಂಟು, ವಿಷಯದ ಆಯ್ಕೆಯಲ್ಲಿ ಆ ಪುಟ್ಟ ಹೃದಯಗಳು ತೆಗೆದುಕೊಳ್ಳುತ್ತಿದ್ದ ಧಿಡೀರ್ ದಿಟ್ಟ ನಿರ್ಧಾರ ನನ್ನನ್ನು ತಬ್ಬಿಬ್ಬುಗೊಳಿಸಿದ್ದು ಸುಳ್ಳಲ್ಲ. ಮೊದ ಮೊದಲು ನಂಗೆ ಮಕ್ಕಳ ಬರಹಗಳು ತಮಾಷೆಯಾಗಿಯೇ ಕಂಡದ್ದು. ಆದರೆ ಒಂದು ಪತ್ರಿಕೆಯನ್ನು ನಾವೂ ಸಿದ್ದಗೊಳಿಸ್ತೀವಿ ಅದೇನು ದೊಡ್ಡ ಮಹಾ ಅನ್ನಂಗೆ ‘ವಿಜಯ ನಗರ ಬಿಂಬ ಟೈಮ್ಸ್’ ಪತ್ರಿಕೆ ಆ ಪುಟ್ಟ ದಿಟ್ಟ ಆಲೋಚನೆಗಳಲ್ಲಿ ಅರಳಿತೋ ಆಗಲೇ ನಂಗೆ ಮಕ್ಕಳ ಬರಹ ತಮಾಷೆ ಎಂಬ ಹುಚ್ಚು ನಿಚ್ಚಳಾಗಿದ್ದು. ಆ ಪತ್ರಿಕೆಯ ರೂಪುರೇಷೆಗೆ ಮಾರ್ಗದರ್ಶನ ನೀಡಿದ ಕಶ್ಯಪ್ ಸಾರ್, ಸುಷ್ಮ ಮೇಡಂ, ವಿನೋದ್ ಸಾರ್, ರಜತ್, ಮುರುಳಿ ಸಾರ್, ಶೋಭಾ ಮೇಡಂ, ಮತ್ತು ನನ್ನ ಸಲಹೆಗಳೇ ಮಕ್ಕಳ ಆಲೋಚನೆಗಳ ಮುಂದೆ ಗೌಣ ಎನ್ನಿಸಿಬಿಟ್ಟವು. ದಟ್ ಈಸ್ ಜನರೇಷನ್ ಗ್ಯಾಪ್! ಪತ್ರಿಕೆ ಸಿದ್ದಗೊಳಿಸೋಕ್ಕೆ ಕೊಟ್ಟ ಗಡುವಿನೊಳಗೆ ಹೊಸ ರೂಪುರೇಷೆಯ ‘ವಿಜಯ ನಗರ ಬಿಂಬ ಟೈಮ್ಸ್’ ಮಕ್ಕಳ ಕೈಯಲ್ಲಿ ನಳ ನಳಿಸುತ್ತಿತ್ತು. ಅಷ್ಟೊತ್ತಿಗೆಲ್ಲಾ ಮದ್ಯಾಹ್ನದ ಬಿಡುವು ನೀಡಲಾಗಿ ನಾವೆಲ್ಲಾ ಊಟಕ್ಕೆ ತೆರಳಿದೆವು.
ಮದ್ಯಾಹ್ನದ ಬಿಡುವಿನ ನಂತರ ರೇಡಿಯೋ ಮಾಧ್ಯಮದ ಪರಿಚಯ ಇತ್ತು. ಎಫ್ ಎಂ ರೇಂಬೋದ ನಿರೂಪಕಿ ಛಾಯಾ ಭಗವತಿ ಮೇಡಂರವರು ಮಕ್ಕಳೊಂದಿಗೆ ಸಂವಾದಕ್ಕೆ ಬಂದಾಗಿತ್ತು. ನಂತರ ಮಕ್ಕಳಿಗೆ ಛಾಯಾ ಮೇಡಂ ರೇಡಿಯೋ ನಡೆದು ಬಂದ ಹಾದಿಯನ್ನು, ಕಾರ್ಯಕ್ರಮ ನಿರ್ಮಾಣ, ನಿರ್ವಹಣೆ ವಿಷಯಗಳನ್ನು ಕೂಲಂಕುಷವಾಗಿ ತಿಳಿಸುತಿದ್ದರು. ಆ ಸಮಯದಲ್ಲಿ ಮಕ್ಕಳ ಕಂಗಳಲಿದ್ದ ಉತ್ಸಾಹ ಮುಂದಿನ ಹತ್ತು ವರ್ಷಗಳಲ್ಲಾದರೂ ನಂಗೂ ಚೂರು ಬರಲಿ. ಆ ಪುಟಾಣಿಗಳ ಉತ್ಸಾಹವನ್ನು ಕಂಡೇ ನಾನು ಮುರಳಿ ಸಾರ್ ರನ್ನು ಕೇಳಿದ್ದು, ಸಾರ್, ನಮ್ ಗೆ ಆರು ತಿಂಗಳು ಕಲಿಸಿದ್ದನ್ನ ಈ ಮಕ್ಕಳಿಗೆ ಒಂದೇ ದಿನದಲ್ಲಿ ಹೇಳ್ತಾ ಇದಿರಲ್ಲಾ, ಕೋರ್ಸ್ ಮುಗಿಸಿರೋ ನಮ್ಮ ಕೆಲಸಗಳಿಗೆ ಈ ಮಕ್ಕಳು ಪೈಪೋಟಿ ನೀಡಲ್ವಾ ಸಾರ್ ? ಅಂತ. ಮಕ್ಳನ್ನ ನೋಡಿ ಕಲ್ತೊಳ್ಳಿ ಅಂತ ಗಹಿಸಿದ್ದರು ಅವರು. ಛಾಯಾ ಮೇಡಂರವರು ನಡೆಸಿಕೊಟ್ಟ ಸಂವಾದದಲ್ಲಿ ಮಕ್ಕಳು ಕೇಳಿದ ಕೆಲ ಪ್ರಶ್ನೆಗಳಿಗೆ ಛಾಯಾ ಮೇಡಂ ಜ್ಞಾಪಿಸಿಕೊಂಡು ಉತ್ತರ ಕೊಟ್ಟಿದ್ದೂ ಉಂಟೆಂದರೆ ಈಗಿನಿಂದಲೇ ಮಕ್ಕಳು ದೂರದಿಂದಲೇ ಮಾಧ್ಯಮದ ಚಲನವಲನಗಳನ್ನ ಗಮನಿಸುತ್ತಿರೋದು ಸುಳ್ಳಲ್ಲ ಅನ್ನಿಸಿತು. ಸಂವಾದ ಮುಗಿದ ಮೇಲೆ ಛಾಯಾ ಮೇಡಂ ಆ ಎಂಟೂ ತಂಡಗಳ ಮಕ್ಕಳಿಗೆ ಟಾಸ್ಕ್ ಗಳನ್ನ ನೀಡಿ ಕೇವಲ ಅರ್ಧ ಘಂಟೆ ಸಮಯ ನೀಡಿ ಒಂದು ಸಂದರ್ಶನ, ಒಂದು ಸಾಂಸ್ಕೃತಿಕ ಕಾರ್ಯಕ್ರಮ, ಒಂದು ವಾರ್ತಾ ವಾಚನ ಕಾರ್ಯಕ್ರಮಗಳನ್ನು ನಿರ್ಮಿಸಿ, ನಿರ್ವಹಿಸಬೆಕೆಂದು ಹೇಳಿದಾಗ. ಆ ಅರ್ಧ ಘಂಟೆ ಮತ್ತೆ ಎಂಟು ಗುಂಪುಗಳ ಎಳೆ ಮೆದುಳುಗಳಲ್ಲಿ ಸಿಕ್ಕಿರುವ ಚಿಕ್ಕ ಅವಕಾಶದಲ್ಲಿ ಇಂದಿನ ಮೀಡಿಯಾ ಸಿಸ್ಟಮ್ ಗಳು ನಡೆಯುತ್ತಿರುವ ಹಾದಿಯನ್ನು ಅನುಕರಣಿಸುವಂತಿತ್ತು.
ಕೇವಲ ಅರ್ಧ ಘಂಟೆ ಅವಧಿಯಲ್ಲಿ ಯಾವುದೇ ರೇಡಿಯೋ ಚಾನಲ್ ಗಳಲ್ಲಿ ಒಂದು ಸಂದರ್ಶನ, ಒಂದು ಸಾಂಸ್ಕೃತಿಕ ಕಾರ್ಯಕ್ರಮ, ಒಂದು ವಾರ್ತಾ ವಾಚನ ಕಾರ್ಯಕ್ರಮಗಳನ್ನು ನಿರ್ಮಿಸಿ, ನಿರ್ವಹಿಸಬೆಕೆಂದು ಹೇಳಿದರೆ, ಜಗತ್ತನ್ನೇ ಸೋತವರಂತೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಡುತ್ತೀವಿ. ಕೆಲ್ಸ ಬಿಡಿ ಅಂತ ನೇರವಾಗಿ ಹೇಳದೆ ಹೀಗೆಲ್ಲಾ ಸುತ್ತಿ ಬಳಸಿ ಹೇಳ್ತಾರೆ ಅಂತೀವಿ. ಆದ್ರೆ ಆ ಮಕ್ಕಳು ಸೋಲಲಿಲ್ಲ. ಕೊಟ್ಟ ಗಡುವಿನೊಳಗೆ ದಿಟ್ಟ ಕಾರ್ಯಕ್ರಮಗಳನ್ನು ನಿರ್ಮಿಸಿ ನಿರ್ವಹಿಸಿ ನಮ್ಮ ಮುಖಕ್ಕೆ ಅವರ ಗೆಲುವಿನ ಗೆಳೆಯನನ್ನು ಪರಿಚಯಿಸಿದರು. ಶಾಲೆಯ ಮಕ್ಕಳಿಗೆ ಮಾಧ್ಯಮದ ಕುರಿತು ಹ್ಯಾಗಪ್ಪಾ ಸಂವಾದ ನಡೆಸೋದು ಎಂಬ ಗೊಂದಲದಲ್ಲಿಯೇ ಕಾರ್ಯಕ್ರಮ ಶುರುವಿಟ್ಟ ಛಾಯಾ ಮೇಡಂ ಮಕ್ಕಳ ಉತ್ಸಾಹ, ಇವರ ಸರ್ವಿಸ್ ಗೂ ಸವಾಲೆಸೆಯುವಂತಾ ಪ್ರಶ್ನೆಗಳು ತೂರಿಬಂದದ್ದರಿಂದ ಅವರು ಇನ್ನೂ ಸಂವಾದದಲ್ಲಿಯೇ ತಲ್ಲೀನರಾಗಿದ್ದರು ಆಗ ಕಶ್ಯಪ್ ಸಾರ್ ‘ಮೇಡಂ ಟೈಂ ಆಯ್ತು ಮೇಡಂ’ ಎಂದು ಎಚ್ಚರಿಸುತ್ತಿದ್ದಂತೆಯೇ ಐಯ್ಯೋ ಸಂಜೆಯಾಗೋಯ್ತಾ ?! ಅಂತ ಆಶ್ಚರ್ಯದಿಂದ ಅಂದಿನ ಕಾರ್ಯಕ್ರಮವನ್ನು ಮುಕ್ತಾಯ ಮಾಡಬೇಕಾಯ್ತು.
ಮೀಡಿಯಾ ಹಬ್ಬದ ಎರಡನೆಯ ದಿನ ಅದು ರಜತ್ ನ ದಿನ. ಅವತ್ತು ಬೆಳಗ್ಗೆ ವೇದಿಕೆಗೆ ಹೋಗಿ ಆ ಮಕ್ಕಳನ್ನು ನಾನು ಮತ್ತೊಮ್ಮೆ ನೋಡಿದಾಗ ಅವರ ಉತ್ಸಾಹದ ಜೋಗ ಭೋರ್ಗರೆತ ಚೂರೂ ಕಮ್ಮಿಯಾಗಿರಲಿಲ್ಲ. ಮೈಕ್ ಹಿಡಿದ್ರೆ ಕೈ ನಡುಗಿಸೋ ರಜತ್ ಅಂದು ಆ ಪುಟಾಣಿ ಪಾದರಸದ ಗುಂಪನ್ನು ಸಂಭಾಳಿಸಬೇಕಿತ್ತು. ರಜತ್ ನ ಪಕ್ಕ ಹೋದ ನಾನು ‘ರಜತ್ ಹೆಂಗೂ ನಿನ್ನ ಕಥೆ ಮುಗಿಯುತ್ತೆ. ಯಾವುದಕ್ಕೂ ಹೊರಗಡೆ ಪಟಾಕಿ ಸಿಡಿಸ್ಲಾ ?’ ಅಂತ ಕೇಳಿದಾಗ ಸುಮ್ನಿರಣಾ ಇವಾಗ್ಲೇ ಕೈ ಕಾಲು ಆಡ್ತಿಲ್ಲ. ಅಂತ ಮುರುಳಿ ಸಾರ್ ಕಡೆಯಿಂದ ಮೈಕ್ ಪಡೆದು ಸ್ಟಾಪ್ ಮೋಷನ್ ಎಡಿಟಿಂಗ್, ಪ್ರೊಡೆಕ್ಷನ್ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದ. ಮತ್ತದೇ ಎಂಟು ತಂಡಗಳಿಗೆ ಒಂದೊಂದು ಕಥೆ ಕೊಟ್ಟು ಅವುಗಳಿಗೆ ಡ್ರಾಯಿಂಗ್ ಮಾಡೋಕ್ಕೆ ಮತ್ತದೇ ಅರ್ಧ ಘಂಟೆಯ ಗಡುವು ನೀಡಿದಾಗ ಎಸೆದ ಸವಾಲನ್ನು ಹಿಡಿದು ಗೆಲುವಿನತ್ತ ಮಕ್ಕಳ ನಾಗಾಲೋಟ ಮತ್ತೆ ಶುರು.
ಈ ಬಾರಿ ಮುರುಳಿ ಸಾರ್, ಸುಷ್ಮಾ ಮೇಡಂ, ಶೋಭಾ ಮೇಡಂ, ಮಿಸೆಸ್ ಕಶ್ಯಪ್, ಕಶ್ಯಪ್ ಸಾರ್, ವಿನೋದ್ ಸರ್, ಮತ್ತು ನಾನು ಎಲ್ಲರೂ ಸ್ವಲ್ಪ ಕೈ ಜೋಡಿಸಿ ಮಕ್ಕಳ ದೌಡಿಗೆ ನೆರವಾದೆವು. ಆ ಪುಟಾಣಿಗಳ ಸ್ಟಾಪ್ ಮೋಷನ್ ಪ್ರೊಡಕ್ಷನ್ನಿನ ತಯಾರಿ ಅಂತಿಮ ಹಂತಕ್ಕೆ ಬಂದಾಗ, ಕೆಲಸದ ನಿಮಿತ್ತ ನಾನು ಅಲ್ಲಿಂದ ಹೊರ ಬಂದೆ. ಮರಳಿ ಹೋಗಿ ನೋಡಿದಾಗ ಮಕ್ಕಳ ಕ್ರಿಯೇಟಿವಿಟಿಯಲ್ಲಿ ಅರಳಿದ ಸ್ಟಾಪ್ ಮೋಷನ್ ಮೂವಿಗಳು ನನ್ನ ಮೆದುಳೊಳಗೆ ಸ್ಟಾಪ್ ಆಗಲೇ ಇಲ್ಲ ಇನ್ನೂ ಓಡುತ್ತಲೇ ಇವೆ. ನಾನು ಮರಳಿ ವೇದಿಕೆಗೆ ಸೇರಿಕೊಳ್ಳುವಷ್ಟರಲ್ಲಿ ಅಂದಿನ ಕಾರ್ಯಕ್ರಮ ಮುಗಿದಿತ್ತು. ಅಂದು ಮದ್ಯಾಹ್ನ ಮುರುಳಿ ಸಾರ್ ನ್ಯೂಸ್ ಪೇಪರ್ ಮೇಕಿಂಗ್ ಮತ್ತು ಫಿನಿಷಿಂಗ್ ಬಗ್ಗೆ ಮಾಹಿತಿ ನೀಡಿದರಂತೆ. ಆ ಮಕ್ಕಳು ಫಿನಿಷ್ ಮಾಡಿದ ಪತ್ರಿಕೆಯ ರೂಪುರೇಷೆಯೊಂದನ್ನು ಕಣ್ತುಂಬಿಕೊಂಡು ಭವಿಷ್ಯದ ಮೀಡಿಯಾದ ದಿಕ್ಸೂಚಿ ಕಂಡಂತಾಗಿ ಮನೆಗೆ ಮರಳಿದೆವು.
ಮೀಡಿಯಾ ಹಬ್ಬದ ಮೂರನೇ ದಿನ ಅಂದರೆ ಅಂತಿಮ ದಿನ ನಾನು ಮತ್ತೆ ಗೈರು ವಿದ್ಯಾರ್ಥಿ. ಕೊನೆಯ ದಿನ ಮಕ್ಕಳಿಗೆ ಮುರುಳಿ ಸಾರ್, ಎಲೆಕ್ಟ್ರಾನಿಕ್ ಮೀಡಿಯಾದ ಪ್ರೊಡೆಕ್ಷನ್, ಮೀಡಿಯಾ ಹೌಸ್, ಕಾರ್ಯಕ್ರಮ ನಿರ್ಮಾಣ, ನಿರ್ವಹಣೆ, ಕುರಿತು ಮಾಹಿತಿ ನೀಡಿ, ಪುಟ್ಟ ಪುಟ್ಟ ಕೈಗಳಿಗೇ ಕ್ಯಾಮರಾ ನೀಡಿ , ಪುಟ್ಟ ಪುಟ್ಟ ಆಕೃತಿಗಳನ್ನೇ ಆಂಕರ್ ಗಳನ್ನು ಮಾಡಿ, ತಾರೆಗಳನ್ನು ಮಾಡಿ, ವಾರ್ತಾ ವಾಚನ, ಚರ್ಚಾಕೂಟ, ಸಂದರ್ಶನದಂತಹ ಹಲವು ಆಯಾಮಗಳನ್ನು ವೇದಿಕೆಯಲ್ಲಿಯೇ ನೇರ ಪ್ರಸಾರ ಬಿತ್ತರವಾಗೋವರೆಗೂ ಇರುವ ಸಾಹಸವನ್ನು ಪರಿಚಯಿಸಿ, ಅವುಗಳ ಪ್ರಯೋಗವನ್ನೂ ಮಕ್ಕಳ ಕೈಯಲ್ಲಿ ಮಾಡಿಸಿದಾಗ ಆ ಪುಟ್ಟ ಮಕ್ಕಳ ಧೈರ್ಯಕ್ಕೆ ನನ್ನದೊಂದು ಸಲಾಂ..
ಸಂಜೆ ವಿಜಯ ನಗರ ಬಿಂಬದ ಪುಟಾಣಿ ಪತ್ರಕರ್ತರ ಜೊತೆ “ಪ್ರಶ್ನಾರ್ಥ” ಎಂಬ ತಮಾಷೆ ಪತ್ರಿಕಾ ಗೋಷ್ಠಿಗೆ ಅತಿಥಿಯಾಗಿ ಬಂದದ್ದು ಮಂಡ್ಯದ ಮಗು ಮಂಡ್ಯ ರಮೇಶ್. ಸಂಜೆ ನಾನು ಜಿ ಎನ್ ಸಾರ್ ಜೊತೆ ಮೀಡಿಯಾ ದಿಬ್ಬಣದ ಸಮಾರೋಪಕ್ಕೆ ಹೋದಾಗ ಅಲ್ಲಿ ಮಂಡ್ಯ ರಮೇಶ್ ಕುಳಿತಿದ್ದರು. ಕಶ್ಯಪ್ ಸಾರ್, ಶೋಭಾ ಮೇಡಂ ಅವರಿಗೆ ನನ್ನನ್ನು ಪರಿಚಯಿಸಿದರು. ಅಷ್ಟರಲ್ಲಿ ನಮ್ಮ ಜಿ ಎನ್ ಸಾರ್ ಅಲ್ಲಿಗೆ ಬಂದಾಗ ಮಂಡ್ಯ ರಮೇಶ್ ಸಾರ್ ಒಂದು ಪ್ರೀತಿಯ ಹಗ್ ಕೊಟ್ಟರು. ನಾನು ಮಂಡ್ಯ ರಮೇಶ್ ರನ್ನೇ ದಿಟ್ಟಿಸುತ್ತಿದ್ದೆ ಅವರು ಮಕ್ಕಳು ಮೂರು ದಿನಗಳ ಕಾಲ ಮುಗಿಸಿಟ್ಟಿದ್ದ ಸಾಧನೆಗಳನ್ನು ಅರಳುಗಣ್ಣಲ್ಲಿ ನೋಡುತ್ತಾ ಕಣ್ಣಲ್ಲೇ ಮೆಚ್ಚುಗೆ ಸೂಚಿಸುತ್ತಿದ್ದರು. ಕೆಲ ಕಾಲದ ನಂತರ ಮತ್ತೆ ಎಲ್ಲರೂ ವೇದಿಕೆಯತ್ತ ಬಂದಾಗ ಇಡೀ ವೇದಿಕೆ ಗಿಜಗುಡುತ್ತಿತ್ತು. ಆ ಸಮಾರೋಪದ ದಿನ ಆ ಎಂಬತ್ತು ಪುಟಾಣಿಗಳ ಹೆತ್ತವರೂ ತಮ್ಮ ಮಕ್ಕಳ ಏಳಿಗೆಯನ್ನು ಕಣ್ತುಂಬಿಕೊಳ್ಳಲು ಪಣತೊಟ್ಟು ಬಂದಂತಿತ್ತು.
ಮೊದಲು ವೇದಿಕೆಯಲ್ಲಿ ಇಪ್ಪತ್ತಾರು ಪುಟಾಣಿ ಪತ್ರಕರ್ತರು ಬಂದು ಜಮೆಗೊಂಡರು. ನಂತರ ಪ್ರೆಸ್ ಮೀಟ್ ಮಾಡೋದ್ಯಾಕೆ ? ಅಂತ ಪುಟಾಣಿ ಸಂಘಟಕರನ್ನು ಕೇಳಿದಾಗ ಎಂಟತ್ತು ಪುಟಾಣಿಗಳು ವೇದಿಕೆಯ ಮಧ್ಯ ಭಾಗಕ್ಕೆ ಬಂದು ‘ ರಾಜಾಧಿರಾಜ,,,’ ಎಂದು ಮುಗಿಲಿಗೆ ಕೈ ಎತ್ತಿ ಮಂಡ್ಯ ರಮೇಶ್ ರನ್ನು ವೇದಿಕೆಗೆ ಕರೆದ ಮೈ ಝಂ ಆಹ್ವಾನ ನನಗಿನ್ನೂ ತಲೆಯಲ್ಲಿ ಗಿರಗುಟ್ಟುತ್ತಿದೆ. ಮಂಡ್ಯ ರಮೇಶ್ ರವರು ವೇದಿಕೆ ಅಲಂಕರಿಸಿದಾಗ ಶುರುವಾಯ್ತು ನೋಡಿ ಪುಟಾಣಿ ಪತ್ರಕರ್ತರ ಖಡಕ್ ಪ್ರಶ್ನೆಗಳ ಸುರಿಮಳೆ. ಮಕ್ಕಳು ಮಂಡ್ಯ ರಮೇಶ್ ರನ್ನು ಕೇಳಿದ್ದು ಕೇವಲ ಪ್ರಶ್ನೆಗಳನ್ನಲ್ಲ. ಅದು ನೇರ ಮಂಡ್ಯ ರಮೇಶ್ ರು ನಡೆದು ಬಂದ ಹಾದಿಯನ್ನೇ ಮತ್ತೊಮ್ಮೆ ತೆರೆದಿಡುವಂತಾಯ್ತು. ಆ ಪುಟ್ಟ ಮಕ್ಕಳು ನೇರ ಮಂಡ್ಯ ರಮೇಶ್ ರ ಮೆದುಳಿಗೇ ಕೈ ಹಾಕಿದ್ದರು. ಇತ್ತ ಮಂಡ್ಯ ರಮೇಶ್ ರವರೂ ಸಹ ಆ ಪುಟಾಣಿಗಳೆದಿರು ಮನಬಿಚ್ಚಿ ಮಾತಾಡಿ ಅವರೂ ಮಗುವಾಗಿಬಿಟ್ಟರು.
ಮಂಡ್ಯ ರಮೇಶ್ ರವರು ನೀಡುವ ಉತ್ತರಗಳಿಗೆ ಕಾರ್ಯಕ್ರಮಕ್ಕೆ ನೆರೆದಿದ್ದ ಅಷ್ಟೂ ಪೋಷಕರು ಒಮ್ಮೊಮ್ಮೆ ಮನಬಿಚ್ಚಿ ನಕ್ಕು, ಒಮ್ಮೊಮ್ಮೆ ಧೋ ಚಪ್ಪಾಳೆ ತಟ್ಟಿ, ಮತ್ತೊಮ್ಮೆ ಸಣ್ಣ ಸಿಳ್ಳೆ ಸಿಡಿಸಿ, ಮಗದೊಮ್ಮೆ ಗಂಭೀರರಾಗಿ ಕುಳಿತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಪುಟಾಣಿ ಪತ್ರಕರ್ತರೊಬ್ಬರಿಂದ ಆ ಪ್ರಶ್ನೆ ತೂರಿ ಬಂತು. ಅದು, ‘ಮಂಡ್ಯ ರಮೇಶ್ ರವರೇ, ನಿಮಗೆ ಜೀವನದಲ್ಲಿ ಅತೀ ದುಃಖದ ಸನ್ನಿವೇಶ ಇದ್ದ ಸಂದರ್ಭದಲ್ಲಿ ನಿಮಗೆ ಒಂದು ಕಾಮಿಡಿ ಮಾಡುವ ಸಂದಿಗ್ದತೆ ಎದುರಾದರೆ ಹೇಗೆ ಮಾಡುತ್ತೀರಿ ? ಈ ಪ್ರಶ್ನೆಯನ್ನು ಕೇಳುತ್ತಲೇ ಮಂಡ್ಯ ರಮೇಶ್ ರವರು ಅರೆಕ್ಷಣವೂ ತಾಳದೆ ‘ ಕಂದಾ ನಾನೀಗ ಇಲ್ಲಿ ಬಂದಿದಿನಿ, ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದಿನಿ, ನೀವೆಲ್ಲರೂ ನಕ್ಕು ಸಂತೋಷಪಟ್ಟಿದ್ದೀರ, ಇದೇ ಸಂದರ್ಭದಲ್ಲಿ ಅಲ್ಲಿ ನನ್ನ ತಂದೆ ಹೃದಯಾಘಾತದಿಂದ ಆಸ್ಪತ್ರೆಯ ಐ ಸಿ ಯು ನಲ್ಲಿದ್ದಾರೆ’ ಇಂಥಹ ಸಂದರ್ಭದಲ್ಲಿ ನಿಮ್ಮನ್ನು ನಗಿಸಿದೆನಲ್ಲಾ ಹೀಗೆ ಕಾಮಿಡಿನೂ ಮಾಡ್ತೀನಿ ಕಂದಾ’ ಅಂದಾಗ ಇಡೀ ವೇದಿಕೆ ಸ್ತಬ್ದ. ನೆರೆದವರೆಲ್ಲರ ಕಂಗಳಲ್ಲಿ ಹಸಿ ಪೊರೆ ನಿರ್ಮಾಣ. ನಂಗಂತೂ ಗಂಟಲು ಬಿಗಿದಿತ್ತು.
ಅಷ್ಟಾದ ಮೇಲೂ ಮಂಡ್ಯ ರಮೇಶ್ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು, ಅವರೂ ನಕ್ಕು ನೆರೆದವರನ್ನೂ ನಗಿಸಿದರು. ತಮ್ಮ ಕನಸನ್ನು ಹಂಚಿಕೊಂಡರು. ಭವಿಷ್ಯದ ಭರವಸೆಯನ್ನು ಹರವಿದರು. ಕಂಸಾಳೆಯನ್ನು ಕೈಗಿಡಿದು ನೃತ್ಯವನ್ನೂ ಮಾಡಿದರು. ಮಾತಿನ ನಡು ನಡುವೆ ತಮ್ಮ ಗುರುಗಳಾದ ಬಿ ವಿ ಕಾರಾಂತರನ್ನು ನೆನೆದರು. ತಮ್ಮ ಗೆಳೆಯ ಕಶ್ಯಪ್ ರನ್ನೂ ನೆನೆದರು. ಆಗ ಮಂಡ್ಯರಮೇಶ್ ರನ್ನು ನೋಡಿದಾಗ ನನಗನ್ನಿಸಿದ್ದು ‘ಥಿಂಕ್ ಗ್ಲೋಬಲಿ ಆಕ್ಟ್ ಲೋಕಲಿ ‘ ಅನ್ನೋ ಗಾದೆನ, ಚಾಚೂ ತಪ್ಪದೆ ಜೊತೆಗೆ ಕರೆದೊಯ್ಯುತ್ತಿರುವ ಕೆಲವೇ ಕೆಲವರಲ್ಲಿ ಇವರೂ ಕೂಡಾ ಹೌದು ಅನ್ನಿಸಿತು. ಕಂಸಾಳೆ ಪದಕ್ಕೆ ತಾಳ ಹಾಕಿದ ಮೇಲೆ, ವೇದಿಕೆಗೆ ಜಿ ಎನ್ ಸಾರ್ ಬಂದು ಮೂರು ದಿನಗಳ ಇಡೀ ಕಾರ್ಯಕ್ರಮಗಳ ಉದ್ದೇಶ, ಮತ್ತು ಬಂದ ಫಲಿತಾಂಶವನ್ನು ನೆರೆದ ಪೋಷಕರಿಗೆ ವಿವರಿಸಿ, ಮಂಡ್ಯ ರಮೇಶ್ ರನ್ನು ಅಭಿನಂದಿಸಿದರು. ನಂತರ ವೇದಿಕೆಗೆ ಮುರುಳಿಸಾರ್ ಹೋಗಿ ವಿಜಯನಗರ ಬಿಂಬದ ಸ್ಮರಣಿಕೆಯನ್ನು ಸ್ವೀಕರಿಸಿದರು. ಆಮೇಲೆ ರಜತ್ ವೇದಿಕೆ ಪ್ರವೇಶಿಸಿ ಮಂಡ್ಯ ರಮೇಶ್ ರಿಂದ ಸ್ಮರಣಿಕೆ ಪಡೆದ. ನಂತರ ನನ್ನ ಸರದಿ ನಾನು ವೇದಿಕೆ ಏರಿದಾಗ ಸ್ಮರಣಿಕೆ ನೀಡಿದ ಮಂಡ್ಯ ರಮೇಶ್ ರಿಗೆ ಜಿ ಎನ್ ಸಾರ್ ನನ್ನ ಅವಧಿಯಲ್ಲಿನ ‘ ಜವ್ವಾರಿ ಝಲಕ್ ‘ನ್ನು ಜ್ಞಾಪಿಸಿ ಪರಿಚಯಿಸಿದರು. ಬರೊಬ್ಬರಿ ಎರೆಡು ವರ್ಷಗಳಾಗಿದ್ದವು ಒಂದೇ ಒಂದು ವೇದಿಕೆಯನ್ನೂ ಹತ್ತಿರಲಿಲ್ಲ ನಾನು. ತುಂಬಾ ಗ್ಯಾಪ್ ನ ನಂತರ ತುಂಬಾ ಗಾಂಭೀರ್ಯದ ವೇದಿಕೆಯೇರಿದ ಸಂತಸವಿದೆ ಮನದಲ್ಲಿ.














vijayanagabimba nadesithiruva makkalaranaga shibira chinnara chavadiyalli yashswiyagi nadeda media habbakke karanarada patrakarta G N MOHAN avara thanda murali mohan kati,rajath,shivu moragiri,yellarigu vijayanagara bimbada yellarinda dhanyavadagalu. makkalu kushipattaru,achhri kannugalinada beragadaru,kunidu kuppalisidaru.konege prashnegalagala maleye surisidaru,MANDYA RAMESH avara uttaragalu thamashe,ashchrya,gambira,dinda koodiddavu.konege kunidu kuppalisidaru..avara energy, maa
thu yellarigu achhrigolisitu.makkala thamashe press meet thamashe jothe arthapurnavagithu.
it was a pleasant experience in media habba. makkalige thumba informative agithu. makkalinda naavu’.nimminda makkalu mathu naavu thumba. kalitevu
mandya ramesh estu sarala haagu prathibaavantha vykthi. avarodane nadeda samvadadinda naavu avara bagge bahalashtu tilidanthaayithu. hats off to mandya ramesh. makkalige haadu,natane haagu nruthya yelladara thunukannu namma putta vedikeyalli madi thorisidaru. it was a exciting experience……..