ಬಿಂದು ರಕ್ಷಿದಿ ತಮಟೆ ಬಡಿದರು..

ಬರಿಯ ತೊಗಲಿನ ಹೊದಿಕೆಯಲ್ಲಿದು…

– ಬಿಂದು ರಕ್ಷಿದಿ

ಈ ಲೇಖನ ಈ ಮೊದಲು ‘ಜೇನುಗಿರಿ’ಯಲ್ಲಿ ಪ್ರಕಟವಾಗಿದೆ

ಚಿತ್ರಗಳು: ನಭಾ ಒಕ್ಕುಂದ

ತಮಟೆ ಅದು ಬರಿಯ ವಾದ್ಯ ಅಲ್ಲ. ಅದು ತಲತಲಾಂತರ ಗಳಿಂದ ನೊಂದು ಬೆಂದವರ ದನಿ. ತಮಟೆಯಿಂದ ಹೊರಹೊಮ್ಮುವ ಪ್ರತಿ ನಾದ ಕೂಡ ಒಡಲಾಳದ ನೋವನ್ನ ಸಾರುವಂತದ್ದು. ಪದಗಳಿಂದ ಹೊರಡಿಸಲು ಅಸಾಧ್ಯವಾದ ನೋವಿನ ನುಡಿಗೆ ನಾದದ ರೂಪ ನೀಡಿ ಹೊರಡಿಸುವ ಅಸಾಮಾನ್ಯ ವಾದ್ಯ. ಇದು ನನ್ನನ್ನು ಯಾಪಾಟಿ ಸೆಳೆದುಕೊಂಡಿದೆಯೆಂದರೆ ಇತ್ತೀಚೆಗೆ ನಾ ಕೇಳುವ ಪ್ರತಿ ಶಬ್ದಗಳಲ್ಲಿಯೂ ತಮಟೆಯ ತಾಳವೇ ಕೇಳಿಸುತ್ತಿದೆ!

ನನ್ನ ಊರಲ್ಲಾಗಲಿ, ರಂಗ ಶಾಲೆಯಲ್ಲಾಗಲಿ ತಮಟೆಯನ್ನು ಬಳಸಿದ ನೆನಪಿಲ್ಲ ನನಗೆ. ದೂರದಲ್ಲಿ ನಿಂತು ನೋಡುತ್ತಿದ್ದ ಯಾವುದೋ ಮೆರವಣಿಗೆ, ಇನ್ಯಾವುದೋ ಸಿನೆಮಾದಲ್ಲಿ ನುಡಿಸಿದ್ದನ್ನು ಕಂಡಿರಬಹುದು ಅಷ್ಟೇ. ಆದರೆ ಇತ್ತೀಚೆಗೆ ತಮಟೆ ಗೂ ನನಗೂ ಒಂದು ಸಂಬಂಧ ಬೆಳೆದು ಹೋಯ್ತು.

ಅದು ದಕ್ಲ ಕಥಾ ದೇವಿ ಕಾವ್ಯ ನಾಟಕದ ಮೂಲಕ.

ಅರೆ ಮತ್ತು ತಮಟೆ ಯನ್ನ ಕ್ಷಣ ಕಾಲವಾದರೂ ಮುಟ್ಟದ ಹೊರತು ನಾನು ನಾಟಕಕ್ಕೆ ಇಳಿಯುವುದೇ ಇಲ್ಲ. ಆದರೆ ಅಲ್ಲಿ ಯಾವತ್ತೂ ನುಡಿಸುವ ಸಾಹಸ ಮಾಡಿರಲಿಲ್ಲ. ಭರತ ನ ಕೈಚಳಕದ ಬಗ್ಗೆ ಕುತೂಹಲವಿತ್ತು. ನುಡಿಸುವ ಆಸೆಯೂ ಇತ್ತು. ಸರಿಯಾದ ರೀತಿ ಗೊತ್ತಿರಲಿಲ್ಲ. ಅದು ನನಸಾಗಿದ್ದು ‘ದಿ ಕೊಲಾಜ್’ ಮತ್ತು ‘ಜಂಗಮ ಪದ’ ಸಹಯೋಗದಲ್ಲಿ ನಡೆದ ತಮಟೆ ಶಿಬಿರದಲ್ಲಿ .

ಸುಮಾರು 16 ಜನರ ಒಂದು ವಾರ ಕಾಲಾವಧಿಯ ಶಿಬಿರವದು. ಮೊದಲನೇ ದಿನ ಹೊಸ ತಮಟೆ ತರಿಸಿದ್ದರು. ನಾನು ಚರ್ಮದ ತಮಟೆಯನ್ನು ಹಿಡಿದು ಕೊಂಡಾಗ ನನಗ ಅದರ ಘಮಲು ಹೊಸತು. ಇಡೀ ದಿನ ಅದನ್ನ ಬಳಸಿ ನನ್ನ ಬಟ್ಟೆ ಆ ತಮಟೆಗೆ ಬಳಸಿದ್ದ ಚರ್ಮದ ಘಮಲನ್ನು ಹೀರಿಕೊಂಡಿತ್ತು. ಆ ದಿನದ ತರಬೇತಿ ಮುಗಿಸಿ ನಾನು ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು ಆಗ ಬಸ್ಸಿನಲ್ಲಿ ಅಕ್ಕಪಕ್ಕದವರು ನೋಡುವ ರೀತಿಗೆ ನಾನು ಒಂದು ಸರತಿ ನನ್ನ ಬಟ್ಟೆ ಮೂಸಿಕೊಂಡೆ ಏನಾದ್ರೂ ಅಸಹ್ಯ ಅನ್ನುವಂತಹ ವಾಸನೆ ಬರ್ತಾ ಇರಬಹುದಾ ನನ್ನ ಮೈಯಿಂದ ಅಂತ.

ನನಗೆ ಅದು ಚರ್ಮದ ಘಮಲು ಅನಿಸಿದರೆ ಅವರಿಗೆ ಅದು ವಾಸನೆ. ಏನೆಂದು ಕೊಂಡರೋ ಏನೋ ಆದರೆ ಅವರು ನನ್ನನ್ನು ನೋಡೋ ರೀತಿಯಿಂದಲೇ ವಿಪರೀತ ಮುಜುಗರ ಪಟ್ಟಿದ್ದು ನಿಜ. ಬರಿಯ ಒಂದು ಗಂಟೆ ಪ್ರಯಾಣಕ್ಕೆ ನಾನು ಅಷ್ಟು ಮುಜುಗರ ಪಟ್ಟೆ! ಹಾಗಾದ್ರೆ ಎಷ್ಟೋ ವರ್ಷಗಳಿಂದ ಅದೆಷ್ಟು ಸಂಕಟ, ಅದೆಷ್ಟು ನೋವು, ಅದೆಷ್ಟು ಮುಜುಗರವನ್ನು ಸಹಿಸಿಕೊಂಡು ಬದುಕಿ ಬಂದಿದೆ ಒಂದು ಇಡೀ ಸಮುದಾಯ ಅನ್ನೋದು ಊಹೆಗೂ ನಿಲುಕದ್ದು!

ಕಲಿಯುವ ಹಂಬಲ ಇರುವವರಿಗೆ ತಾಳ್ಮೆ ಇರಬೇಕು ಅನ್ನೋ ಮಾತಿದೆ ಆದ್ರೆ ನನಗದು ಮರೆತೇ ಹೋಗಿತ್ತು. ತಮಟೆಯನ್ನು ಕಲಿಯುವುದಕ್ಕೆ ಹೋದ ನನಗೆ ಅದರ ತಾಳ ಜ್ಞಾನ ಇಲ್ಲದೆ, ಅದನ್ನು ಹೇಗೆ ನುಡಿಸಬೇಕು ಅಂತ ಗೊತ್ತಿಲ್ಲದಿದ್ದರೂ ಕೂಡ, ಅದು ಕೈಗೆ ಸಿಕ್ಕ ತಕ್ಷಣ ತಾಳ್ಮೆ ಕಳೆದುಕೊಂಡು ಬಡಿಯೋದಕ್ಕೇ ಶುರುಮಾಡಿದೆ; ನನ್ನಂತೆಯೇ ಹಲವರೂ! ತಮಟೆಯ ಶಕ್ತಿಯೆಂದರೆ ಯಾವುದೇ ಮನುಷ್ಯ ತಮಟೆಯನ್ನು ಮುಟ್ಟಿದರೆ, ಅದರ ನಾದ ಕೇಳಿದರೆ ಸುಮ್ಮನಿರಲು ಸಾಧ್ಯವೇ ಇಲ್ಲ.

ಇನ್ನು ಹೆಗಲೇರಿದ ತಮಟೆಯ ಅನುಭವವೇ ಬೇರೆ. ಹೆಗಲಿನ ಹಗ್ಗ, ಕೈಗೆ ಒತ್ತುವ ಚಿಟಿಕೆ ಮತ್ತು ತಮಟೆಯ ಅಂಚು, ಆಧಾರಕ್ಕಾಗಿ ಹೊಟ್ಟೆಗೆ ಒತ್ತಿಕೊಂಡಾಗ ತಮಟೆಯ ಹೊರಭಾಗ ಮಾಡುವ ಬೇನೆ ನಮಗೆಲ್ಲರಿಗೂ ಹೊಸತು.

ಹೆಚ್ಚು ನೋವಾಗದಂತೆ ಹೆಗಲಿಗೆ, ಹೊಟ್ಟೆಗೆ, ಕೈಗೆ ಬಟ್ಟೆಯನ್ನು ಸುತ್ತಿಕೊಂಡು ಪ್ರಾಕ್ಟೀಸ್ ಮಾಡಿದೆವು. ವಿಶೇಷವೆಂದರೆ ಕೊನೆ ಕೊನೆಗೆ ಆ ನೋವೂ ಅಭ್ಯಾಸವಾಗಿ, ಅಪ್ಯಾಯಮಾನ ಅನಿಸತೊಡಗಿತು! ಮೊದ ಮೊದಲು ತಮಟೆ ಹಿಡಿಯಲೂ ಬಾರದ ನನಗೆ ದಿನ ಕಳೆದಂತೆ ಅದು ಆತ್ಮೀಯವಾಗುತ್ತ ನಡೆದ ಸೋಜಿಗವನ್ನು ಮನಸಾರೆ ಅನುಭವಿಸಿದೆ!

ಅಸ್ಪೃಶ್ಯತೆಯ ನೋವನ್ನ ಅನುಭವಿಸದೇ ಇರುವವರು ತಮಟೆ ನುಡಿಸುವುದಕ್ಕೂ ಇಡೀ ಜೀವನ ಅದನ್ನೇ ಅನುಭವಿಸಿರುವವರು, ಹಿಂಸೆಯನ್ನು ಸಹಿಸಿ, ಕ್ರೂರತ್ವಕ್ಕೆ ಬಲಿಯಾಗಿ ಜೀವಮಾನ ಸವೆಸಿದವರು ತಮಟೆಯಲ್ಲಿಯೇ ಮಾತನಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಸ್ವಲ್ಪ ಮಟ್ಟಿಗೆ ನಮಗೆ ಈಗ ಅದು ಅರಿವಿಗೆ ಬರುತ್ತಿದೆ.

ಮೊದಲ ದಿನ ಚರ್ಮದ ತಮಟೆ ಮುಟ್ಟಿದ ನನಗೆ ಅದರ ಘಮಲಿನ ಜೊತೆ ಆ ಚರ್ಮದ ಮೇಲಿನ ಕೂದಲುಗಳ ಸ್ಪರ್ಶ ಕೂಡ ಒಂದು ತರಹದ ವಿಶೇಷ ಅನುಭವ ನೀಡಿತು. ಅದನ್ನು ಬೆಂಕಿಯಲ್ಲಿ ಹದ ಮಾಡುವ ಪ್ರಕ್ರಿಯೆ ಒಂದಿದೆ. ಬಹುಮುಖ್ಯ ಭಾಗವಾದ ಹದ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ನಾವು ಆತುರಕ್ಕೆ ಬಿದ್ದು ಸುಮಾರು 4 ರಿಂದ 5 ತಮಟೆಯನ್ನು ಸುಟ್ಟಿದ್ದನ್ನು ಮರೆಯುವ ಹಾಗೇ ಇಲ್ಲ. ಆಗಲೇ ಅರಿವಾಯ್ತು ನನಗೆ! ಯಾವುದೇ ವಾದ್ಯವಿರಲಿ ಅದನ್ನು ನುಡಿಸೋದು ಮಾತ್ರವಲ್ಲ, ಅದರ ಹಿಂದಿನ ಕೆಲಸ ಮತ್ತು ಶ್ರಮದ ಬಗ್ಗೆ ತಿಳಿವಳಿಕೆ ಇರಬೇಕು ಅಂತ. ವಾದ್ಯ ಹೇಗೆ ಹದವಾಗಿರುತ್ತದೆಯೋ ಹಾಗೆಯೇ ನುಡಿಸುವವರು ಕೂಡ ಹದವಾಗಿರಬೇಕು ಅಂತ.

ಇನ್ನು ತಮಟೆಯನ್ನು ಎದುರಿಗೆ ಇರುವವರು ನುಡಿಸಿದ್ದನ್ನ ನೋಡಿ ಕಲಿಯುವ ರೂಡಿಯೇ ಈಗಲೂ ಇರುವುದು. ಆದರೆ ಭರತ್ ಡಿಂಗ್ರಿ ಪ್ರತಿಯೊಂದು ತಾಳಕ್ಕೂ ತನ್ನದೇ ಆದ ಹೊಸ ರೂಪ ಕೊಟ್ಟಿದ್ದು ಅವನ ಅನುಭವಕ್ಕೆ ಒಂದು ಸಾಕ್ಷಿ.

ಉದಾಹರಣೆಗೆ, ‘ಜಂ ತಕ್ಕ ಜಾಮ್ ಜಾಮ್ ತಕ್ಕ ತಕ್ಕ ‘ ಅನ್ನುವ ಬೋಲ್ ಇದ್ರೆ ಅದೇ ಪದಗಳನ್ನ ಇನ್ನೊಂದು ತಾಳಕ್ಕೂ ಬಳಸಬಹುದು. ಆದರೆ ಯಾವ ಲಯಕ್ಕೆ ಅದನ್ನ ಯಾವ ಅಂತರದಲ್ಲಿ ಹೇಗೆ ನುಡಿಸಿದರೆ ಬೇರೆ ಬೇರೆ ತಾಳವನ್ನು ಮೂಡಿಸಬಹುದು ಎಂಬುದು. ತಮಟೆಯನ್ನು ಅದರ ಬೇರೆ ಬೇರೆ ಜಾಗಗಳಲ್ಲಿ ನುಡಿಸಿದಾಗ ವಿಭಿನ್ನ ಶಬ್ದಗಳು ಹೇಗೆ ಹೊಮ್ಮುತ್ತವೆ ಅನ್ನುವ ಸೂಕ್ಷ್ಮ ಸಂಗತಿ ತಿಳಿದು ಕೊಳ್ಳೋಕೆ ಸಾಧ್ಯವಾಗಿದ್ದು ಭರತನ ಸರಳ ವಿಧಾನದಿಂದ.

7 ದಿನದಲ್ಲಿ ಸುಮಾರು ಒಂಬತ್ತು ತಾಳಗಳನ್ನು ಕಲಿತಿದ್ದೇವೆ. ಪ್ರತಿಯೊಂದು ತಾಳವನ್ನು ನುಡಿಸುವಾಗಲೂ ಸಿಗುವ ಸಂತೋಷವನ್ನು ಪದಗಳಲ್ಲಿ ಕಟ್ಟಿಕೊಡೋಕೆ ಅಸಾಧ್ಯ. ಆ ರೀತಿಯ ಸಂತೋಷವನ್ನು ತಮಟೆಯ ಮೂಲಕ ಹೊರಹೊಮ್ಮಿಸುವ ಗುಣ ಈಗ ಬಂದಿದೆ. ಆದರೆ ನಿಜವಾಗಿಯೂ ತಮಟೆ ಏನು ಹೇಳಬೇಕೋ ಅದನ್ನು ಹೊಮ್ಮಿಸೋದಕ್ಕೆ ಸಾಕಷ್ಟು ಸಮಯ ಬೇಕು. ಬೆಂಕಿಯಲ್ಲಿ ತಮಟೆ ಬೆಂದ ಹಾಗೆ, ಜಾತಿ ವ್ಯವಸ್ಥೆಯ, ಅಸ್ಪೃಶ್ಯತೆಯ ಬೆಂಕಿಯಲ್ಲಿ ಬೆಂದು ಸುಟ್ಟು ಕರಕಲಾದ ಅದೆಷ್ಟೋ ಹಿರಿಯರ, ಈಗಲೂ ಬೆಯುತ್ತಿರುವರ ನೋವನ್ನ ಅರ್ಥೈಸಿಕೊಳ್ಳುವ ಗುಣ ಇಡೀ ಸಮಾಜ ಬೆಳೆಸಿಕೊಳ್ಳಲಿ. ಮಿದುವಾಗಲಿ ಮನಸು!

ನಮ್ಮ ತಂಡದ ಪ್ರತಿಯೊಬ್ಬರೂ ಸೂಕ್ಷ್ಮ ಮತಿಗಳು. ಪ್ರೀತಿ ಪಾತ್ರರು. ಎಲ್ಲರೂ ಒಂದಲ್ಲ ಒಂದು ಕಲಾ ಪ್ರಕಾರಗಳಲ್ಲಿ ತೊಡಗಿಸಿ ಕೊಂಡವರು. ಇಲ್ಲಿ ಶಿಬಿರದಲ್ಲಿ ಸುಮಾರು 20 ವರ್ಷದವರಿಂದ ಹಿಡಿದು 60 ವರ್ಷ ದಾಟಿದವರೂ ಇದ್ದದ್ದು ಇನ್ನೊಂದು ವಿಶೇಷ. ಇದನ್ನು ಮುಂದುವರಿಸುವ ಆಸೆಯಿದೆ. ಭರತ್ ನಿಗೆ ಋಣಿ ನಾನು.

‍ಲೇಖಕರು avadhi

August 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: