-ಕೆ ಎನ್ ಲಾವಣ್ಯ ಪ್ರಭಾ
*
ಖಾಲಿ ಶೂನ್ಯದಲ್ಲಿ ಕೈ ಚಾಚಿ
ಕಾಯುತ್ತಾ ನಿಂತಿದ್ದೇನೆ ಸಖಾ
ಯುಗಯುಗಾಂತರಗಳಿಂದ
ಕಾಡುವ ವಿರಹ ಒತ್ತಿಟ್ಟು ಎದೆಯಲ್ಲಿ
ಕಣ್ಣಹನಿ ಬಿಕ್ಕಿನಲಿ
ಮಿಡಿಯುವ ಹೃದಯಕ್ಕೆ
ಬಣ್ಣದ ಸೆರಗ ಹೊದಿಸಿ
ನಗುಮೊಗದ ನಟನೆಯಲಿ
ಕತ್ತಲು ಬೆಳಕಿನಲಿ
ನೆರಳ ತಂಪು ಬಿಸಿಲ ಬೇಗೆಯಲಿ
ದಣಿದ ದಾಹವನ್ನೂ ಸಾವರಿಸಿಕೊಂಡು
ಬಂದು ಹೋಗುವವರ
ಹೆಜ್ಜೆ ಸದ್ದುಗಳಲ್ಲಿ
ನಿನ್ನ ಸಪ್ಪಳವನ್ನು ಕಿವಿಗೊಟ್ಟು
ಆಲಿಸಿ ಮತ್ತೆ ಮತ್ತೆ ಕಾಯುತ್ತಿದ್ದೇನೆ

ಉರುಳಿ ಬೀಳುವ ದೇಹ
ಉಸಿರು ನಿಲ್ಲುವ ಪ್ರಾಣ
ಮುಂದಿನ ನಿಲ್ದಾಣಕ್ಕೆ ಅಣಿಯಾಗುವ
ಪ್ರಯಾಣಕ್ಕೂ ಮೊದಲು
ಕ್ಷಣ ಅನುಕ್ಷಣ ತುಡಿವ ನನ್ನಾತ್ಮ
ನಿನ್ನ ಹೆಸರನ್ನೇ ಧ್ಯಾನಿಸುತ್ತಿದೆ
ಚಂಡಮಾರುತ ಬಿರುಗಾಳಿ
ಸುನಾಮಿಗಳೆಷ್ಟೇ ಬಂದರೂ
ನಿನ್ನೊಲವ ರಕ್ಷೆಯಲಿ
ಮಣ್ಣಿನಲ್ಲಿ ಪಾದವೊತ್ತಿ ಗಟ್ಟಿ ಬೇರೂರಿ
ನಿಂತೇ ಇದ್ದೇನೆ ಕೈ ಚಾಚಿ ನಿನ್ನೆಡೆಗೆ ಹೀಗೆ
ಪ್ರತಿಧ್ವನಿಸುತ್ತಿದೆ ನಿರಂತರ
ನನ್ನೊಂದಿಗೆ ನಿನ್ನ ಪ್ರೀತಿಯ
ನಿಲ್ಲದ ಅನಾಹತ ನಾದ.
ಬಾ ಬೇಗ ಬಂದುಬಿಡು ಗೆಳೆಯ
ಚಾಚಿದ ಅಂಗೈ ಬೆರಳುಗಳನ್ನೊತ್ತಿ
ಬೆಚ್ಚಗೆ ಬರಸೆಳೆದು
ನಿನ್ನಪ್ಪುಗೆಯಲಿ ಒಮ್ಮೆ ನನ್ನನಿರಿಸಿ
ಲೋಕಾಂತದೊಳಗೆ ಏಕಾಂತ ಕಾಣಿಸುವ
ನಮ್ಮ ಲೋಕದ ಕನಸ ಹೊಸೆದು
ಅಳು ಮರೆಸಿ ನಗು ತುಳುಕಿಸಿ
ಸಂಭ್ರಮದ ತೆಕ್ಕೆಯಲಿ
ಜೊತೆಯಾಗಿ ಜೇನಾಗುವಾ
ಬಾ ಬೇಗ ಬಂದುಬಿಡು
ಎನ್ನೊಲವ ಚೆಲುವಾ






0 Comments