ಅಮ್ಮನ ಬೊಂತೆ

ಪ್ರೇಮಾ ಟಿ ಎಮ್ ಆರ್

ಜೋತು ಬಿದ್ದಿದೆ ಅಮ್ಮನೆದೆ
ಹೀರಿದ ಹಾಲಿಗೆ ಲೆಕ್ಕ ಕೊಡುವಂತೆ
ಎಲ್ಲೆಲ್ಲಿ ಕೂತು ಕುಡಿಸಲು ಸೌಡು ಸಿಕ್ಕಿತೋ
ಅಲ್ಲೆಲ್ಲ ಕುಡಿಸುತ್ತಲೇ ಕನಸ ಹೆಣೆದಿದ್ದಾಳೆ

ಮನೆಮುಂದಿನ ಹೊಟ್ಟೆ ಉಬ್ಬುವ
ಹಲಸಿನ ಮರದಲ್ಲಿ ಕಾಯಿ
ಕಿಕ್ಕಿರಿದು ಸೊಳೆಗಟ್ಟುವ ಹೊತ್ತಲ್ಲಿ
ಅಮ್ಮ ಪಡಚಾರಿಗೂ ಜಾಗಬಿಡದೇ
ಒತ್ತೊತ್ತಿ ಕಟ್ಟಿರಬಹುದು ಬಯಕೆಯ ಬುತ್ತಿ
ಇರುಳು ರಮಿಸುವ ಕ್ಷಣಗಳ
ಮಿಂಚು ಬೆಳಕಲ್ಲಿ ಕಟ್ಟಿದ ಕನಸ ಲೆಕ್ಕಕ್ಕೆ
ಹಗಲು ತಾಳೆಯ ನೋಡಿ
ಆ ಲೆಕ್ಕಕ್ಕೆ ಈ ಲೆಕ್ಕ ಪೂರ್ತಿ ತಲೆಕೆಳಗಾಗಿ
ನಿಟ್ಟುಸಿರು ಬಿಟ್ಟಿರಬಹುದು

ಮಾಗಿದ ಹಲಸು ನೆಲದಲ್ಲಿ ಬಸ್ಸೆಂದು
ಸೊಳೆಗಳು ಚೆಲ್ಲಾಪಿಲ್ಲಿ
ಚಟ್ಟದಮೇಲೆ ನೆಟ್ಟಗೆ ಮಲಗಿದ ಅಮ್ಮನ
ಸುತ್ತ ಚದುರಿಬಿದ್ದ ಕನಸುಗಳು
ಬಿಟ್ಟು ಬಿಡಲೆಂತು?
ಅಮ್ಮ ಎಷ್ಟೊಂದಾಸೆಯಿಂದ ಪೇರಿಸಿಟ್ಟುಕೊಂಡಿದ್ದಳೋ……

ಎಲ್ಲ ಬರಗಿ ಬೊಂತೆಯೊಳಗಿಟ್ಟು
ಹೊತ್ತು ನಡೆದಿದ್ದೇನೆ
ವರುಷಗಳು ಜಾರುತ್ತಿವೆ
ಬೊಂತೆ ತೂತಾಗಿ ಸೋರುತ್ತ ಸಾಗಿದೆ
ಹೊರಜಗುಲಿಮೂಲೆ ಸಾರಿಸುವಾಗೊಂದಿಷ್ಟು
ಏಳುಹೆಜ್ಜೆಯ ನಡೆವ ಮೂರ್ತದ
ಅಮೂರ್ತದಲ್ಲೊಂದಷ್ಟು
ಮನೆಗೆ ಹೆರವಾಗಿ ಹೆರಮನೆ
ಸ್ವಂತವಾಗುವಾತಂಕದಲ್ಲಷ್ಟು
ಪ್ರಸ್ಥದ ಸುಡುಸುಡು ಕಾವಿನಲ್ಲಷ್ಟು
ಬಯಕೆಯೋಕರಿಕೆ ಸೀಮಂತದ ಹರಕೆ
ಬಾಣಂತನದ ಹಸುಕು
ನಾಮಕರಣದ ಗೌಜುಗದ್ದಲಗಳಲ್ಲೆಲ್ಲ
ಅಮ್ಮನದು ಜಾರಿ ನನ್ನದು ಸೇರಿ
ಬೊಂತೆಯಲ್ಲಿನ್ನೂ ಬೊಂತೆಯಿದೆ

ಸೋರುವ ಬೊಂತೆಗೊಂದು
ಪರ್ಯಾಯ ಹುಡುಕಿ ಸುತ್ತಿದ್ದೇನೆ ಹೊಸ ಸೀರೆ
ಮುಂಗಾರಿಗೆ ಬಿಟ್ಟೂಬಿಡದೇ
ಹುಲ್ಲು ಹುಟ್ಟುವಹಾಗೆ
ಅರ್ಥವಿಲ್ಲದ ಆಸ್ತಿಯಲ್ಲದ ಆಸೆಯ
ವಿಲ್ಲು ಬರೆದು ತುರುಕಿದ್ದೇನದರಲ್ಲೇ

ಹರಯದ ಭರಾಟೆಯಲ್ಲೂ
ಭರವಸೆಗೆ ಬರ
ನನ್ನ ಮೆದ್ದುವ ಗೆಜ್ಜೆಕಾಲಿನ ಮುದ್ದುಮಗಳು
ಒಂಚೂರು ಉದ್ದವಾಗಲಿ ಎಂದು ಕಾದಿದ್ದೇನೆ
ಕನಸ ಕೊತ್ತಲ ಪತ್ತಲಮೂಟೆ
ಅವಳ ತಲೆಗಿಟ್ಟುಬಿಡಲು

‍ಲೇಖಕರು Avadhi

May 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: