ಸನತ್ ರೈ
ಮಹೇಂದ್ರ ಸಿಂಗ್ ಧೋನಿ. ರಿಯಲ್ ಗೇಮ್ ಚೇಂಚರ್.
ತೀಕ್ಷ್ಣ ನೋಟದಿಂದಲೇ ಬೌಲರ್ ಗಳನ್ನು ಧ್ವಂಸ ಮಾಡುವ ಗ್ರೇಟ್ ಗೇಮ್ ಫಿನಿಶರ್.
ಕೊನೆಯ ಓವರ್ ತನಕ ಕ್ರೀಸ್‍ನಲ್ಲಿದ್ರೆ ಸಾಕು ಗೆಲುವನ್ನೇ ಕಸಿದುಕೊಳ್ಳುವ ಮಾಸ್ಟರ್.
ಸೋಲು -ಗೆಲುವಿನ ಲೆಕ್ಕಚಾರದಲ್ಲಿ ಹಾವು ಏಣಿಯಂತೆ ಆಟವಾಡಿಸುವ ಗ್ಯಾಂಬ್ಲರ್.
ತಾಳ್ಮೆಯನ್ನು ಕಳೆದುಕೊಳ್ಳದೇ ಎದುರಾಳಿ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡುವ ಸೈಲೆಂಟ್ ಕಿಲ್ಲರ್.
ಕೊನೆಯ ತನಕ ಅಭಿಮಾನಿಗಳನ್ನ ಅಭಿಮಾನವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಸೂಪರ್ ಸ್ಟಾರ್.
ಹೌದು, ಧೋನಿ ಲಯದಲ್ಲಿದ್ರೆ ಸಾಕು, ಆ ಸ್ಟೈಲೇ ಬೇರೆ, ಆ ಗತ್ತೇ ಬೇರೆ, ಆ ಪೊಗರೇ ಬೇರೆ. ಅಲ್ಲಿ ಎಲ್ಲವೂ ಸೂಪರೋ ಸೂಪರ್…
ಯಾಕಂದ್ರೆ ಚಿನ್ನಸ್ವಾಮಿಯಲ್ಲಿ ಹಾಂಗಿತ್ತು ‘ರಾಂಚಿ ರಾಂಬೋ’ನ ದರ್ಬಾರು.
ಹೌದು, ಚಿನ್ನಸ್ವಾಮಿ ಮೈದಾನದಲ್ಲಿ ಬುಧವಾರ ರಾತ್ರಿ ಆರ್‍ಸಿಬಿ ವಿರುದ್ಧ ಎಂಎಸ್‍ಡಿ ಚೆಂದದ ಆಟವನ್ನೇ ಆಡಿದ್ರು. ಆರ್‍ಸಿಬಿಯ ಕಿಕ್‍ಗೆ ಸೂಪರ್ ಕಿಂಗ್ಸ್ ಸೋಲಿನ ಹಾದಿ ಹಿಡಿದಾಗಲೂ ಧೋನಿ ತಬ್ಬಿಬ್ಬುಗೊಳ್ಳಲಿಲ್ಲ. ಸೋಲಿನ ಭೀತಿ ಕಣ್ಣೆದುರಿದ್ರೂ ಧೋನಿಯ ಆತ್ಮವಿಶ್ವಾಸ ಕುಗ್ಗಲಿಲ್ಲ.
ಅಂಬಟಿ ರಾಯುಡು ಜೊತೆ ಸೇರಿ ಗೆಲುವಿನ ಗೋಪುರ ಕಟ್ಟಲು ಹೊರಟ ಧೋನಿ ಏಕಾಗ್ರತೆಯನ್ನು ಕಾಯ್ದುಕೊಂಡ್ರು. ಆರಂಭದಲ್ಲಿ ರಾಯುಡು ಆರ್ಭಟಕ್ಕೆ ಸಾಥ್ ನೀಡಿದ ಎಂಎಸ್‍ಡಿ ನೋಡ ನೋಡುತ್ತಲೇ ಆರ್‍ಸಿಬಿಯ ಗೇಮ್ ಪ್ಲಾನ್ ಅನ್ನು ಉಲ್ಟಾಪಲ್ಟಾ ಮಾಡಿಬಿಟ್ರು.
ಕೊನೆಯ ನಾಲ್ಕೈದು ಓವರ್ ಗಳಲ್ಲಿ ಸರಾಸರಿ 14 ರನ್‍ಗಳ ಅವಶ್ಯಕತೆ ಇದ್ರೂ ಕೂಡ ಧೋನಿ ಅಂಜಲಿಲ್ಲ. ಎದೆಗುಂದಲಿಲ್ಲ. ಗೆಲುವು ನನ್ನದೇ. ಗೆದ್ದೇ ಗೆಲ್ಲುತ್ತೇನೆ ಎಂಬ ಹಠಕ್ಕೆ ಬಿದ್ದ ಮಾಹಿ, ಯಾರೂ ಊಹಿಸದ ರೀತಿಯಲ್ಲಿ ಆರ್‍ಸಿಬಿ ಕೈಯಿಂದ ಗೆಲುವನ್ನು ತನ್ನ ಕೈವಶ ಮಾಡಿಕೊಂಡ್ರು. ಅದ್ರಲ್ಲೂ ವಿಜಯದ ರನ್‍ಗಾಗಿ ಬಾರಿಸಿದ ಆ ಸಿಕ್ಸರ್ ಗೆ ಧೋನಿಯೇ ಸರಿ ಸಾಟಿ ಎಂಬುದರಲ್ಲಿ ಎರಡು ಮಾತಿಲ್ಲ.
ಹುಚ್ಚು ಅಭಿಮಾನಿಗಳ ಅಭಿಮಾನವನ್ನು ಅರಿತುಕೊಂಡು ಆಟವಾಡುವ ಕಲೆ ಧೋನಿಗೆ ಕರಗತವಾಗಿಬಿಟ್ಟಿದೆ. ಯಾಕಂದ್ರೆ, ಐಪಿಎಲ್ ಅಂದ್ರೆ ಕೇವಲ ಆಟವಲ್ಲ. ಅದು ಪಕ್ಕಾ ಮನರಂಜನೆ. ನವರಸಗಳನ್ನು ಮೈಗೂಡಿಸಿಕೊಂಡಿರುವ ಆಟದಲ್ಲಿ ಯಾವುದು ಉಂಟು ಯಾವುದು ಇಲ್ಲ ಎಂಬುದನ್ನು ಹೇಳುವಂತಿಲ್ಲ.
ಇದನ್ನೆಲ್ಲಾ ಅರಿತುಕೊಂಡಿರುವ ಧೋನಿ ಅಭಿಮಾನಿಗಳನ್ನು ಯಾವತ್ತೂ ಹುಸಿಗೊಳಿಸುವುದಿಲ್ಲ. ಒಂದು ವೇಳೆ, ಬ್ಯಾಟ್‍ನಲ್ಲಿ ರನ್ ಮಳೆಯನ್ನು ಹರಿಸದಿದ್ರೂ ನಾಯಕನಾಗಿ ತಂಡವನ್ನು ಮುನ್ನಡೆಸುವ ಚಾಣಕ್ಯ ತಂತ್ರದ ಪರಿಯಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದುಬಿಡ್ತಾರೆ. ಅಷ್ಟರ ಮಟ್ಟಿಗೆ ಧೋನಿ ಎಲ್ಲರಿಗೂ ಇಷ್ಟವಾಗುತ್ತಾರೆ.
ಅದೆನೇ ಇರಲಿ, ಧೋನಿಗೆ ವಯಸ್ಸಾಗಿದೆ. ಹಾಗಂತ ಆಟದ ಖದರ್ ಕಮ್ಮಿಯಾಗಿಲ್ಲ. ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಮಾಹಿಯ, ಮಹಿಮೆ ಮತ್ತೆ ಶುರುವಾಗಿದೆ. ಕ್ರಿಕೆಟ್‍ನ ಶಾಸ್ತ್ರಿಯ ಕಲೆಗಳನ್ನು ಬದಿಗೊತ್ತಿ ತನ್ನದೇ ಸ್ಟೈಲ್‍ನಲ್ಲಿ ಬ್ಯಾಟಿಂಗ್ ಮಾಡುವ ಧೋನಿ ದೈತ್ಯ ಪ್ರತಿಭೆ. ಬೌಲರ್ ಗಳ ತಂತ್ರಗಳನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡು ಬ್ಯಾಟ್ ಬೀಸುವ ಕಲೆಯೊಂದಿಗೆ ಟೈಮ್ ಸೆನ್ಸ್ ಹಾಗೂ ಪವರ್ ಗೇಮ್ ಇದೆಯಲ್ಲಾ ಅದು ಎಂಥವರನ್ನು ಕೂಡ ಒಂದು ಕ್ಷಣ ಅಚ್ಚರಿಗೊಳಿಸುತ್ತೆ.
ಎಷ್ಟೇ ಒತ್ತಡವಿರಲಿ, ಎಷ್ಟೇ ದೊಡ್ಡ ಸವಾಲು ಇರಲಿ, ಧೋನಿ ಕ್ರೀಸ್‍ನಲ್ಲಿದ್ರೆ ಅವ್ರ ಮುಖದಲ್ಲಿ ಒಂಚೂರು ಭಯವಿರಲ್ಲ. ಅಳುಕು ಇರಲ್ಲ. ಸಂಯಮದಿಂದಲೇ ಎಲ್ಲವನ್ನು ಮೆಟ್ಟಿ ನಿಲ್ಲುವ ತಾಕತ್ತು ಮಹೇಂದ್ರ ಸಿಂಗ್ ಧೋನಿಗಿದೆ. ಅದಕ್ಕಾಗಿ ಅನ್ನೋದು ಧೋನಿ ಅಂದ್ರೆ ಯುನಿವರ್ಸಲ್ ಬಾಸ್.






0 Comments