ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ʼಮಣ್ಣಪಳ್ಳದ ಮೂಕಿಚಿತ್ರʼದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಗಾಳಿ ತುಂಬಿದ ಪ್ಲಾಸ್ಟಿಕ್ ಬಲೂನುಗಳ ಮೈಗೆ ನಾಜೂಕಾಗಿ ಕೂರಿಸಿದ ತಂತಿ ದೀಪಗಳು, ಆ ರಾತ್ರಿ ಕತ್ತಲೆಯಲ್ಲಿ, ದಾರಿ ದೀಪದಿಂದ ಚೂರು ದೂರವಿದ್ದ ರಸ್ತೆ ತಿರುವಿನಲ್ಲಿ ಅತೀ ಆಕರ್ಷಕವಾಗಿ ಕಾಣುತ್ತಿತ್ತು. ಮಕ್ಕಳಿಗೆ ಆಟಿಕೆಯಂತೆಯೂ, ವಯಸ್ಕರಿಗೆ ಗಮನ ಸೆಳೆಯುವ ಅಲಂಕೃತ ವಸ್ತುವಿನಂತೆಯೂ ಅದಿತ್ತು. ಹತ್ತಿರ ಹೋಗಿ ನೋಡಿದಾಗಷ್ಟೇ ಆ ಮಿಣುಕು ಬೆಳಕಿನ ಹಿಂದೆ ಮಾಸಲು ಮಸಾಲಾಗಿದ್ದ ಮೆಮ್ ರಾಜ್ ಕಾಣಿಸಿದ್ದು.

ಮಣಿಪಾಲದ ರಾತ್ರಿ ಬದುಕಿಗೆ ಹೊಂದಿಕೊಳ್ಳುವಂತೆಯೇ ಸಜ್ಜುಗೊಂಡ ಬಲೂನಿನ ಒಳಗೆ ಒಣಕಲು ಹೊಟ್ಟೆಯೊಳಗೆ ಉಳಿದ ಚೂರು ಪಾರು ಗಾಳಿಯನ್ನೇ ತುಂಬಿಸಿ ತುಂಬಿಸಿ ಅದನ್ನು ಅಗಲಿಸುತ್ತಿದ್ದ ‘ಮೆಮ್ ರಾಜ್’ ಕಳೆದುಕೊಂಡ ಉಸಿರನ್ನು ಪ್ರಯಾಸ ಪಡುತ್ತಾ ವಾಪಸ್ಸು ಪಡೆಯುವಂತೆ ಉಸಿರೆಳೆದುಕೊಳ್ಳುತ್ತಿದ್ದ.

ಕೆದರಿದ ಕೂದಲು, ಹಸಿವಿಗೆ ಗುಳಿಬಿದ್ದ ಹೊಟ್ಟೆ, ಮಣ್ಣಾದ ವಸ್ತ್ರ. ಅವನು ವ್ಯಾಪಾರಕ್ಕೆ ಕೂರದೆ ಇದ್ದಿದ್ದರೆ ಯಾರೇ ಆದರೂ ಭಿಕ್ಷುಕಕನಿರಬೇಕು ಅಂತಲೇ ನಿರ್ಲಕ್ಷಿಸುವಂತ ರೂಪ ಅವನದ್ದು. ಆದರೆ ಅವನ ರೂಪವನ್ನು ಮರೆ ಮಾಚಿಸುವಂತ ಬೆಳಕಿನ ಬಲೂನುಗಳನ್ನು ಮಾರುತ್ತಾ ಕೂತಿದ್ದಕ್ಕೆ ದಾರಿಹೋಕರು ಯಾರೂ ಅವನನ್ನು ನಿರ್ಲಕ್ಷಿಸಲಾಗದೆ ಹತ್ತಿರ ಹೋಗುತ್ತಿದ್ದರು.

ಅಲ್ಲಿ ನಡೆದಾಡುತ್ತಿದ್ದ ಮಕ್ಕಳೆಲ್ಲ ಆ ಕತ್ತಲ ತಿರುವಿನಲ್ಲಿ ಇದೊಂದೇ ಬೆಳಕು ಕಂಡಂತೆ ‘ಅದು ಬೇಕೇ ಬೇಕು’ ಎಂದು ರಚ್ಚೆ ಹಿಡಿಯುತ್ತಿದ್ದರು. ಅವರ ಹಾಗೆಯೇ ನನ್ನ ಕಣ್ಣಿಗೂ ಹೊಳೆದು ಅಲ್ಲಿಯೇ ಗಾಡಿ ನಿಲ್ಲಿಸಿ ಬಲೂನುಗಳನ್ನು ಕೊಳ್ಳಲು ಮುಂದಾದೆ. ಆಗಲೇ ಅವನ ಹಿಂದೆಯೇ ಸುತ್ತುತ್ತಿದ್ದ ನಾಲ್ಕರ ಮಗಳು ಮತ್ತು ಎರಡರ ಮಗ ಕಂಡದ್ದು. ಅವನ ಕಾಲಿಗೆ ಜೋತು ಬಿದ್ದಂತೆಯೇ ಇದ್ದವರು ತಮ್ಮದೇ ವಯಸ್ಸಿನ ಉಳಿದ ಮಕ್ಕಳಿಗೆ ನಾನಾ ವಿಧದಲ್ಲಿ ಬಲೂನು ಕೊಳ್ಳಲು ಬೇಡಿಕೊಳ್ಳುತ್ತಿದ್ದರು. ಅಪ್ಪನೂ ತನ್ನ ವ್ಯಾಪಾರಕ್ಕೆ ಅವರೂ ಪಾಲುದಾರರೂ ಎಂಬಂತೆ “ಹಾಗಲ್ಲ ಕೇಳುವುದು ಹೀಗೆ ಕೇಳುವುದು” ಅಂತೆಲ್ಲ ಪರಿ ಪರಿಯ ಪಟ್ಟುಗಳನ್ನು ಹೇಳಿ ಕೊಡುತ್ತಿದ್ದ.

ಎಲ್ಲಕ್ಕಿಂತ ಮೊದಲು ಮೆಮ್ ರಾಜನ ಕೂದಲು ಮತ್ತು ನೀರೇ ಕಾಣದ ವಸ್ತ್ರಗಳತ್ತಲೇ ನನ್ನ ಕಣ್ಣು ಹರಿದದ್ದು. ಯಾವೂರು? ಎನ್ನುವ ನನ್ನ ಸಾಮಾನ್ಯ ಪ್ರಶ್ನೆಗೆ ‘ಹಮ್ ಥೋ ರಾಜಸ್ತಾನ್ ಸೆ ಹೈ. ಆಪನೇ ಕೋಟಾ ಕ ನಾಮ್ ಸುನಾ ಹೈ? ಉಸ್ಕಾ ನಜದೀಕಿ ಗಾಂವ್.’ ಎನ್ನುತ್ತಾ ತಾನು ಸಂಸಾರ ಕಟ್ಟಿಕೊಂಡು ರಾಜಸ್ತಾನದ ಕೋಟಾದಿಂದ ಇಲ್ಲಿಗೆ ಬಂದವನು ಎನ್ನುವುದನ್ನ ವಿಸ್ತಾರವಾಗಿ ಹೇಳಿದ. ವರ್ಷದಲ್ಲಿ ನಾಲ್ಕೈದು ತಿಂಗಳು ಉಡುಪಿ-ಮಣಿಪಾಲವೇ ನಮ್ಮೂರು, ಹಬ್ಬ, ಜಾತ್ರೆ, ಮಠ, ಮಂದಿರಕ್ಕಂತೂ ಕೊರತೆ ಇಲ್ಲದ ಮೇಲೆ, ತನಗೆ ದುಡಿಯೋದಕ್ಕೆ ಎಲ್ಲಿಯ ಕೊರತೆ ಎನ್ನುತ್ತಾ ತನ್ನ ಜಡೆಕಟ್ಟಿದ ಕೂದಲಲ್ಲಿ ಒಂದೆರೆಡು ಸಾರಿ ಕೈಯಾಡಿಸಿಕೊಂಡ.

ಮಣಿಪಾಲ ಮತ್ತು ಅದರ ಸುತ್ತಮುತ್ತ ಮೈ ಮತ್ತು ಬಟ್ಟೆಯ ಹೊಳಪಲ್ಲಿ ನಿರ್ದಿಷ್ಟ ಶಿಸ್ತನ್ನು ಪಾಲಿಸುವ ಸುಸಂಸ್ಕೃತರ ಮಧ್ಯೆ ದುಡಿಯುವ ವರ್ಗದವರ ಬೆವರಿಳಿಯುತ್ತಿರುವ ಹುಲಿಯ ಬೇರೆಯಾಗಿಯೇ ಕಾಣುವುದಂತೂ ಹೌದು, ಆದರೆ ಅವರ ಮಧ್ಯೆಯೂ ಮೆಮ್ ರಾಜ್ ಮತ್ತು ಬಳಗದವರು ಸ್ವಲ್ಪ ಕೆಂಬಣ್ಣಕ್ಕೆ ತಿರುಗಿ ಇನ್ನೂ ಹೊರಗಿನವರಾಗಿ ಕಾಣುತ್ತಾರೆ. ಈ ಶ್ರಮಿಕರ ನಾಡು ದೂರ ಆದಷ್ಟು ಮಣಿಪಾಲಕ್ಕೆ ಆ ನಾಡಿನವರೂ ದೂರವೆನ್ನಿ.

ಆ ಮಾತು ಈ ಮಾತು ಆದ ಮೇಲೆ ತನ್ನ ಬದುಕು ಬಾವಿ ನೀರಿಂದ ನಳದ ನೀರಿಗೆ ಬಂದು ಮುಟ್ಟಿದ ಕಥೆಯನ್ನು ಶುರು ಮಾಡಿದ. ಮೆಮ್ ರಾಜನ ನೀರಿನಕಥೆ ಶುರು ಆಗುವುದು ಅವನ ರಾಜಸ್ತಾನದ ಅವನ ಹಳ್ಳಿಯಲ್ಲಿ ಗದ್ದೆಗೆ ತಾಗಿಯಿದ್ದ, ಅವನ ಪೂರ್ವಜರು ಕಟ್ಟಿದ್ದ, ವರ್ಷದ ಕೆಲ ತಿಂಗಳು ತಳದಲ್ಲಿ ನೀರಿರುತ್ತಿದ್ದ ಬಾವಿಯಿಂದ. ಅಲ್ಲಿಂದ ಸದ್ಯ ಮಲಗುವ ಮೈದಾನದಿಂದ ಅನತಿ ದೂರದಲ್ಲಿರುವ ಮುನ್ಸಿಪಾಲಿಟಿಯ ನಳದವರೆಗೂ ಅವನ ಕಥೆ ಹರಿಯುತ್ತದೆ.

ಸ್ವಲ್ಪ ವರ್ಷದ ಹಿಂದೆ ಇವನ ಚಿಕ್ಕಪ್ಪ ಒಂದಿಷ್ಟು ಮಸಲತ್ತು ಮಾಡಿ ಬೇಸಾಯ ಮಾಡೋಕೆ ಯೋಗ್ಯ ಅಂತಿದ್ದ ಇವನ ಪಾಲಿನ ಒಂದಿಷ್ಟು ಜಾಗ ಮತ್ತು ಅದಕ್ಕೆ ತಾಗಿಯೇ ಇದ್ದ ಬಾವಿ ಎಂದು ಕರೆಯಬಹುದಾಗಿದ್ದ ನೀರಿನ ಮೂಲವನ್ನು ತನ್ನದಾಗಿ ಮಾಡಿಕೊಂಡನಂತೆ. ಅದನ್ನು ಬಿಟ್ಟು ನಾಲ್ಕೈದು ಜನ ಕಾಲು ನೀಡಿಕೊಂಡು ಮಲಗೋಕೆ ಆಗುವಂತಹ ಗುಡಿಸಲು ಎನ್ನುವುದಕ್ಕಿಂತ ಸ್ವಲ್ಪವೇ ಹೆಚ್ಚು ವ್ಯವಸ್ಥಿತವಾದ ಮನೆ ಪಾಲಿಗೆ ಅಂತ ಉಳಿದುಕೊಂಡಿರುವುದಂತೆ. ಹೀಗಾದ ಮೇಲೆ ಊರು ಬಿಡದೆ ಮತ್ತೇನು ಮಾಡುವುದು? ಎಂದ.

ಇನ್ನು ಜೀವನಕ್ಕೆ ಏನಾದರೂ ಮಾಡಲೇ ಬೇಕಲ್ಲ, ಅದಕ್ಕೆ ತಮ್ಮ ನಾಡಿನಿಂದ ದೇಶದ ಬೇರೆ ಬೇರೆ ಮೂಲೆಗೆ ಇಂತಹುದೇ ಯಾವುದೊ ಒಂದು ವ್ಯಾಪಾರ ಹಿಡಿದು ಹೊರಟು ಎಲ್ಲಾದರೂ ಹಬ್ಬ ಹರಿದಿನ ಮತ್ತು ಒಂದಿಷ್ಟು ಧಾರಾಳ ನೀರು ಕಂಡಕೂಡಲೇ ನಿಲ್ಲುವವರು. ಅದಕ್ಕಿಂತ ಜಾಸ್ತಿಯಾದ್ದು ಇನ್ನೇನು? ಕೂತಲ್ಲಿಯೇ ಒಲೆ ಹೂಡಿ, ರೋಟಿಯೋ ಚಪಾತಿಯೋ ಸುಟ್ಟರೆ ಆಯಿತು. ಇನ್ನು ನಿದ್ರೆಗೆ ಒಂದಿಷ್ಟು ಅಡ್ಡಾಗುವ ಜಾಗ ಅಷ್ಟೇ ಅವಶ್ಯಕತೆ.

ಇವರಲ್ಲಿ ದುಡಿಮೆಗೆ ಯಾವ ಬೇಧಭಾವ ಇಲ್ಲ. ನಿನ್ನೆ ಹುಟ್ಟಿದ ಮಗುವನ್ನೂ ಜೋಳಿಗೆಯಲ್ಲಿ ಕೂರಿಸಿಕೊಂಡು ದುಡಿಯೋಕೆ ಹೊರಡುವ ಹೆಂಗಸರು, ಎಳೆ ಮಕ್ಕಳನ್ನೇ ಕಟ್ಟಿಕೊಂಡು ಬಿಸಿಯುರಿಯಲ್ಲಿ ಊರು ಸುತ್ತುವ ಗಂಡಸರು ಇಲ್ಲಿ ಸಮಾನರೇ. ಇಲ್ಲಿ ನೀವು ಮಲಗೋದು, ಉಣ್ಣುವುದು, ಕೆಲಸ ಎಲ್ಲ ಆಯಿತು, ನಿಮ್ಮೂರಿಗೆ ಹೋಲಿಸಿದರೆ ಇಲ್ಲಿ ಮಳೆ ಬೆಳೆ ಎಲ್ಲಾ ಹುಲುಸಾಲ್ಲವಾ? ಎಂದರೆ, ಗೋಣಾಡಿಸುತ್ತಾ “ಆದರೆ ಬದುಕೋಕೆ ಒಂದಿಷ್ಟು ಹಣ ಸಂಪಾದನೆಯಾದರೆ ಊರಿನ ಸೆಕೆ, ಚಳಿ ಎಲ್ಲವೂ ಹೊಂದಿಕೆ ಆಗುತ್ತೆ ಅದರಲ್ಲಿ ಏನು?” ಎಂದ.

ಅವರಿಗೂ ಇಲ್ಲಿ ಸಂಪಾದನೆಗಿಂತ ಹೆಚ್ಚು ಏನೇ ದೊರಕಿದರು ನೋಡುವವರು ಯಾರು? ಇವತ್ತು ಈ ಊರು, ಮುಂದಿನ ಹೋಳಿ ಮುಗಿಸಿ ಬರುವಾಗ ರೈಲಿನ ಯಾವ ಸ್ಟೇಷನ್ ಅಲ್ಲಿ ಇಳಿದು ಮಾರಾಟಕ್ಕೆ ತೊಡಗುತ್ತಾರೋ ದೇವರಿಗೆ ಗೊತ್ತು.

ರಸ್ತೆಯ ಗಾಡಿಗಳತ್ತಲೇ ಓಡುತ್ತಿದ್ದ ಮಕ್ಕಳನ್ನು ಎಳೆದುಕೊಂಡು “ಈ ಊರಲ್ಲಿ ಇರುವ ಮೂರು ನಾಲ್ಕು ತಿಂಗಳು ಒಂದಿಷ್ಟು ದುಡಿದರೆ ಹೋಳಿಯ ಆಸು ಪಾಸಿನ ಸಮಯದಲ್ಲಿ ಕೋಟಕ್ಕೆ ವಾಪಸ್ಸು ಹೋದಾಗ ಚಿಕ್ಕಪ್ಪ ಮತ್ತಿತರ ಬಂಧು ಬಳಗದವರೆದುರು ಒಂದಿಷ್ಟು ಅಂಜಿಕೆಯಿಲ್ಲದೆ ಎದೆ ಎತ್ತಿ  ನಡೆಯಬಹುದಲ್ಲ” ಎನ್ನುವಾಗ ಅವನ ಮಕ್ಕಳು ಮತ್ತಿಷ್ಟು ಮಂದಿಯನ್ನು ಕರೆಯುತ್ತಾ, ತಮ್ಮ ಮೆಟ್ಟಿಲ್ಲದ ಕಾಲನ್ನು ತೋರಿಸುತ್ತಾ ಒಂದೆರಡು ರೂಪಾಯಿಗಾಗಿ ಗೋಗರೆಯುತ್ತಿದ್ದರು.

ಇಷ್ಟೆಲ್ಲ ಕಥೆ ಹೇಳಿದ ಮೇಲೆ ನಮ್ಮ ಚರ್ಚೆ ನೀರಿನ ಮೂಲಕ್ಕೆ ವಾಪಸ್ಸು ಬಂತು. ವರ್ಷಗಳ ಹಿಂದೆ ಬಾವಿ ಕಳೆದುಕೊಂಡು ಊರುಬಿಟ್ಟವನು ಸದ್ಯಕ್ಕೆ ಉಡುಪಿ ಮುನ್ಸಿಪಾಲಿಟಿ ನಳದ ನೀರನ್ನೇ ಮೆಚ್ಚಿಕೊಂಡಿದ್ದಾನೆ. ಕುಡಿಯುವುದಕ್ಕೆ, ಶೌಚಕ್ಕೆ, ಮಧ್ಯ ಒಮ್ಮೊಮ್ಮೆ ಸ್ನಾನಕ್ಕೆ. ಆದರೂ ಕಳೆದ ಬೇಸಿಗೆಯಲ್ಲಿ ಮಾತ್ರ ಇಂತಾ ಊರಲ್ಲೂ ನೀರು ಕಾಣದೆ ಒದ್ದಾಡಿ ಬಿಟ್ಟೆವು. ನಮ್ಮ ಹಳ್ಳಿಯೇ ಆಗಬಹುದು ಅಂತ ಅಂದುಕೊಂಡೆ ಎನ್ನುತ್ತಾ ಬೆಳಕಿನ ಬಲೂನನ್ನು ನನ್ನ ಕೈಗಿತ್ತ.  

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: