ಬಾವಿಗೆ ಬಿದ್ರೂ ಬೆಂಛೋದ್ ಬಿಡ..!!

  ನಿನ್ನ ನಾಲಿಗೆ ಬಲವೊಂದಿದ್ದರೆ ಸಾಕೋ !

ಉತ್ತರ ಕನ್ನಡ ಜಿಲ್ಲೆಯ ಕಾಡಿನಂಚಿಗಿದ್ದ ನಮ್ಮೂರ ಆಡುಮಾತು ಅಪ್ಪಟ ಕನ್ನಡವೇ ಆಗಿದ್ದರೂ “ಬೆಂಛೋದ್” ಎಂಬ ಪಾರಿಭಾಷಿಕ ಶಬ್ದವನ್ನು ಬಾಲ್ಯದಲ್ಲೇ ಕೇಳಿದ್ದೆ. ಭವಿಷ್ಯದಲ್ಲಿ ದಿನಬೆಳಗಾದರೆ ಈ ಶಬ್ದವು ಕರ್ಣಪಟಲಕ್ಕೆ ಬಡಿಯುತ್ತದೆ ಎನ್ನುವ ಕಲ್ಪನೆ ಆಗ ಖಂಡಿತ ಇರಲಿಲ್ಲ. ಬಾಯ್ತಪ್ಪಿಯೂ ಕೆಟ್ಟ ಬೈಗುಳಗಳನ್ನು ಆಡದ ನಮ್ಮ ತಾಯಿ “ಬಾವಿಗೆ ಬಿದ್ರೂ ಬೆಂಛೋದ್ ಬಿಡ” ಎನ್ನುವ ಮಾತನ್ನು ಕೆಲವು ಸಂದರ್ಭಗಳಲ್ಲಿ ಬಳಸುತ್ತಿದ್ದಳು. ಬಿಡಿಯಾಗಿ “ಬೆಂಛೋದ್” ಶಬ್ದದ ಅರ್ಥ ಆಕೆಗೆ ತಿಳಿದಿರಲಿಕ್ಕಿಲ್ಲ; ಆಕೆಯನ್ನು ಬಿಡಿ, ಅದೊಂದು ಬೈಗುಳವೆಂದು ನನಗೆ ಗೊತ್ತಾದದ್ದೂ ಮುಂಬಯಿಗೆ ಬಂದ ನಂತರವೇ!

ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಅರ್ಥದಲ್ಲೇ ಆಕೆ ಇದನ್ನು ಬಳಸುತ್ತಿದ್ದಳು ಎಂಬುದು ನಂತರ ಗ್ರಹಿಕೆಗೆ ಬಂದ ಸಂಗತಿ. ಮಾತುಮಾತಿಗೆ ಬೆಂಛೋದ್ ಬೆಂಛೋದ್ ಎನ್ನುತ್ತಿದ್ದ  ಘಮಂಡಿ ವ್ಯಕ್ತಿಯೊಬ್ಬ ಕಾಲ್ತಪ್ಪಿ ಬಾವಿಗೆ ಬಿದ್ದಿರಬಹುದು. ಆಗಲೂ ಅತನ ಬಾಯಿಯಿಂದ ಅಯ್ಯೋ ಅನ್ನುವ ಬದಲು “ಬೆಂಛೋದ್’ ಉದ್ಘಾರವೇ ಹೊರಬಿದ್ದಿರಬೇಕು. ಅಂದಿನಿಂದ ಈ ಮಾತು ಹುಟ್ಟಿಕೊಂಡಿರಬಹುದು, ಮುಂದೆ ಅದೊಂದು ನುಡಿಗಟ್ಟಾಗಿ ನಮ್ಮ ಭಾಷೆಯಲ್ಲಿ ಸ್ಥಾನ ಪಡೆದಿರಬೇಕು ಅನಿಸುತ್ತದೆ, ಇರಲಿ!

ನಾವು ಚಿಕ್ಕವರಿದ್ದಾಗಲೇ ಕೇಳಿಸಿಕೊಳ್ಳುತ್ತಿದ್ದ ಇನ್ನೊಂದು ನುಡಿಗಟ್ಟು: ಮಾವ ಮಾರೀಚ, ಅಳಿಯ ಫೋದರೀಚ! “ತೂತೂ ಮೈಮೈ” ಎನ್ನುವ ಸ್ವಭಾವದ ಮಾವ ಅಳಿಯಂದಿರ ಮಾತಿನ ಜಗಳವನ್ನು ಹಾಗೆ ಬಣ್ಣಿಸಲಾಗುತ್ತಿತ್ತು. ಜಿಂಕೆ ವೇಷ ಧರಿಸಿ ಸೀತಾಪಹರಣಕ್ಕೆ ಕಾರಣನಾದ ಮಾರೀಚನ ಬಗ್ಗೆ ನಮಗೆ ಗೊತ್ತಿದ್ದರೂ ಈ ಫೋದರೀಚ ಯಾವ ಪುರಾಣದ ಕತೆಗಳಲ್ಲೂ ಬಂದಿರಲಿಲ್ಲವಾದ್ದರಿಂದ ಆತ ಅಪರಿಚಿತನಾಗಿಯೇ ಇದ್ದ. ಮುಂಬಯಿಗೆ ಬಂದ ನಂತರವೇ ಇವರು ಪುರಾಣ ಪುರುಷರಲ್ಲವೆಂದೂ, ಮಾರೀಚ್ಯಾ ಮತ್ತು ಫೋದರೀಚ್ಯಾಗಳು ಪುರುಷರ ಜನ್ಮಕುಂಡಲಿಯನ್ನೇ ಜಾಲಾಡುವ ಮರಾಠಿ ಬೈಗುಳಗಳೆಂದೂ ಗೊತ್ತಾದದ್ದು!

ಮೂವತ್ತು ವರ್ಷಗಳ ಹಿಂದೆ ಮೊದಲಬಾರಿಗೆ ಮುಂಬಯಿಗೆ ಬಂದ ಸಂದರ್ಭದಲ್ಲಿ ನನಗೆ ಹಿಂದಿಯಾಗಲಿ ಮರಾಠಿಯಾಗಲಿ ಅಷ್ಟಾಗಿ ಬರುತ್ತಿರಲಿಲ್ಲ. ಲೋಕಲ್ ಟ್ರೇನಿನಲ್ಲಿ, ಬಾಜಾರಿನಲ್ಲಿ ಅಥವಾ ಆಫೀಸಿನಲ್ಲಿ ಕೇಳಿಬರುತ್ತಿದ್ದ ಎಲ್ಲ ಸಂಭಾಷಣೆಗಳು ಬರೀ ಸದ್ದು ಮಾತ್ರ ಆಗಿದ್ದವು. ಆದರೆ ಅವರ ಮಾತಿನ ನಡುವೆ ನುಸುಳುತ್ತಿದ್ದ ಬೆಂಛೋದ್ ಶಬ್ದದಿಂದ ಕಿವಿ ನೆಟ್ಟಗಾಗಿ ಕರುಳಸಂಬಂಧವೊಂದು ಬೆಸೆದುಕೊಳ್ಳುತ್ತಿತ್ತು! ಬಳಕೆಯಾಗುವ ಸಂದರ್ಭಗಳನ್ನು ಗಮನಿಸಿದಾಗ ಕೋಪಕ್ಕೂ ಅಸಹನೆಗೂ ಕೆಲವೊಮ್ಮೆ ಸಲಿಗೆ ಮತ್ತು ಪ್ರೀತಿಗೂ ಸಲ್ಲುವ ಶಬುದ ಎಂಬುದು ಅರ್ಥವಾಯಿತು.

ಮೊದಲಿಂದಲೂ ನಾನು ಕೆಟ್ಟ ಬೈಗುಳಗಳ ಬಳಕೆಯ ವಿರೋಧಿಯಾದರೂ ಕ್ರಮೇಣ ಬೆಂಛೋದ್ ಶಬ್ದವು ನನ್ನ ಶಿಷ್ಟಭಾಷಾ ಬಳಕೆಯ ನಿಯತ್ತನ್ನು ಕೊಂಚ ದುರ್ಬಲಗೊಳಿಸುವಷ್ಟು ಸಶಕ್ತವಾಯಿತು. ಈಗಂತೂ ಮುಂಬೈನ ಧಾವಂತದ ಬದುಕಿನ ಒತ್ತಡವನ್ನು ರಿಲೀಸ್ ಮಾಡಿಕೊಳ್ಳಲು ಮತ್ತು ರಕ್ಷಣಾ ತಂತ್ರವಾಗಿ ಇಂಥ ಇನ್ನಷ್ಟು ಶಬ್ದಗಳು ಬತ್ತಳಿಕೆಯನ್ನು ಅಲಂಕರಿಸಿವೆ!

ಜನದಟ್ಟಣೆಯ ಮುಂಬೈನಲ್ಲಿ ಪ್ರತಿಯೊಂದಕ್ಕೂ ಸ್ಪರ್ಧೆಯೇ. ಶೇರ್ ಆಟೋಗೆ ಕ್ಯೂ, ಟ್ಯಾಕ್ಸಿ ಹಿಡಿಯಲು ಕ್ಯೂ, ಟ್ರೇನು ಟಿಕೇಟಿಗೆ ಕ್ಯೂ, ಚಲಿಸುವ ಲೋಕಲ್ ಹತ್ತಲು-ಇಳಿಯಲು ತುರುಸು, ಎಟಿಎಮ್ ನಲ್ಲಿ ಬ್ಯಾಂಕಿನಲ್ಲಿ ಉದ್ದ ಸಾಲು, ಸ್ಟಾಂಪ್ ಕೊಳ್ಳಲೂ ಪೋಸ್ಟ್ ಆಫೀಸಿನಲ್ಲಿ ಚೀಟಿ ತೆಗೆದು ನಿಲ್ಲು-ಹೀಗೆ ಮುಂಬೈಕರ್ ಸದಾ ಒತ್ತಡದಲ್ಲಿಯೇ ಇರಬೇಕಾಗುತ್ತದೆ. ಸೌಜನ್ಯತೆ, ಮೆಲುಮಾತು, ಪರಸ್ಪರ ಗೌರವ ಇತ್ಯಾದಿ ಸಾರ್ವಜನಿಕ ಶಿಷ್ಟತೆಗಳನ್ನು ಪಾಲಿಸುವ ಸಂಸ್ಕಾರ ಮುಂಬೈವಾಸಿಗಳಿಗೆ ಇದೆಯಾದರೂ ಇಲ್ಲಿಯ ಒತ್ತಡದಲ್ಲಿ ಅದು ಕ್ಷಣಕ್ಷಣಕ್ಕೂ ಅಗ್ನಿದಿವ್ಯವನ್ನು ಹಾಯಬೇಕಾಗುತ್ತದೆ.

ಗಚ್ಚಾಗಿಚ್ಚಿ ಆಗಿ ಚಲಿಸುವ ಲೋಕಲ್ ಟ್ರೇನುಗಳಂತೂ ನಮ್ಮ ಸದ್ಗುಣಗಳನ್ನೆಲ್ಲ ಸಾರಸಗಟು ಚಿಂದಿ ಮಾಡುವ ಗಿಲೊಟಿನ್ ಯಂತ್ರವಿದ್ದಂತೆ. ಕೋಪನಿಗ್ರಹಿಗಳೂ, ಸರ್ವಗುಣ ಸಂಪನ್ನರು, ಪ್ರಸನ್ನಚಿತ್ತರು ಎಂದು ತಮ್ಮನ್ನು ಬಣ್ಣಿಸಿಕೊಳ್ಳುವವರನ್ನೂ, “ನಗ್ ನಗ್ತಾ ಮಾತನಾಡಿ, ಸಿಟ್ಟು- ಕೋಪ- ಕಿರುಚಾಟಗಳನ್ನು ಬದುಕಿನಿಂದ ದೂರವಿಡಿ” ಎಂದು ಪ್ರವಚನಗೈಯುವ ಸ್ವಘೋಷಿತ ಶಾಂತಿಪುರುಷರನ್ನು ಪೀಕ್ ಅವರ್ಸ್ ನಲ್ಲಿ ಒಮ್ಮೆ ಲೋಕಲ್ ಟ್ರೇನ್ ಹತ್ತಿಸಿಬಿಡಬೇಕು. ಆಗ ಅವರ ನಿಜಚಿತ್ತ ಬೆತ್ತಲಾಗದಿದ್ದರೆ ಹೇಳಿ!

ಮುಂಬೈಕರರಿಗೆ ಲೋಕಲ್ ಟ್ರೇನಿನಲ್ಲಿ ಇಂಥ ವಿಪರೀತ ಸನ್ನಿವೇಶಗಳ ಅರಿವಿದೆ. ಎಷ್ಟು ತಳ್ಳಿದರೆ ಅದು ಸಹಜ ನೂಕಾಟ, ಎಷ್ಟು ದಬ್ಬಿದರೆ ಅದು ಉದ್ಧೇಶಪೂರ್ವಕ ಎಂಬುದನ್ನು ತೀರ್ಮಾನಿಸುವ ತಾರತಮ್ಯ ಜ್ನಾನವಿರುತ್ತದೆ.  ಎಂಥ ಅಸ್ತವ್ಯಸ್ತ ಸಂದರ್ಭದಲ್ಲೂ ಪಾಲಿಸಬೇಕಾದ ಅಲಿಖಿತ ನಿಯಮಗಳ ಅರಿವಿರುತ್ತದೆ. ಆದರೂ ಅಸಹನೆಯ ಕಿಡಿ ಯಾವುದೇ ಸಂದರ್ಭದಲ್ಲೂ ಸಿಡಿಯುವ ಸಾಧ್ಯತೆ ಇರುತ್ತದೆ. “ಧಕ್ಕಾ ಕಾಯ್ಕು ಮಾರ್ತೇ ಹೈರೇ”,”ಸೀನೇ ಸೆ ಹಾಥ್ ನಿಕಾಲೋ ಭೈ”,  “ಪೇರ್ ಪೆ ಕ್ಯೂ ಖಡಾ ಹೈಬೇ” ಎಂದು ಶುರುವಾಗುವ ಸಣ್ಣ ತಕರಾರು ಮಾತಿಗೆ ಮಾತು ಬೆಳೆದು ಶಬ್ದಕೋಶದಲ್ಲಿರುವ ಎಲ್ಲಾ ಗಾಲಿ(ಬೈಗುಳ)ಗಳು ಹೊರಬೀಳುತ್ತವೆ. ಸ್ವಲ್ಪ ಸುರಕ್ಷಿತ ಸ್ಥಳದಲ್ಲಿ ನಿಂತು ಸುಮ್ಮನೇ ಕೇಳುವವರ ಶಬ್ದಭಂಡಾರವನ್ನು ಶ್ರೀಮಂತಗೊಳಿಸುತ್ತವೆ.

ಜಗಳ ಅದೆಷ್ಟೇ ತಾರಕಕ್ಕೇರಿದರೂ ಕೈಕೈ ಮಿಲಾಯಿಸುವ ಸಂದರ್ಭಗಳು ತೀರಾ ಕಡಿಮೆ.  ಮುಂಬೈವಾಲೆ ಹೊಡೆದಾಟಕ್ಕೆ ಹೆದರುವ ಜನ ಎಂದು ಹೀಗಳೆಯಬೇಡಿ! ಮುಷ್ಠಿ ಯುದ್ಧದ ಸಂಭಾವ್ಯತೆ ಕಡಿಮೆ ಆಗಿರುವುದಕ್ಕೆ ಕಾರಣ ಇಷ್ಟೇ; ಆ ಗಚ್ಚಾಗಿಚ್ಚಿಯಲ್ಲಿ ಅವರವರ ಕೈಗಳೂ ಅವರವರ ಸ್ವಾಧೀನದಲ್ಲಿರುವುದಿಲ್ಲವಲ್ಲ. ಕೆನ್ನೆಗೆ ಬಿಗಿಯುವಷ್ಟು ಸಿಟ್ಟು ಬಂದರೂ ಕೈ ಚಲನೆಗೆ ಕನಿಷ್ಠ ಜಾಗವಾದರೂ ಬೇಕಲ್ಲ ಸ್ವಾಮಿ!

ಹೀಗಾಗಿಯೇ ಇಂಥ ಸಮರಗಳಲ್ಲಿ ನಾಲಿಗೆಯೇ ನಿಮ್ಮ ಪಾಶುಪತಾಸ್ತ್ರ. ನಿಮ್ಮ ನಾಲಿಗೆ ಮೇಲೆ ಎಂಥೆಂಥ ಬೈಗುಳಗಳು ನಲಿದಾಡುತ್ತವೆ ಎನ್ನುವುದರ ಮೇಲೆ ಎದುರಾಳಿಯನ್ನು ಮಣಿಸುವ ಸಾಧ್ಯತೆ ನಿರ್ಧಾರವಾಗುತ್ತದೆ. ಅಬೆ ಪೋಪಟ್, ನಾಲಾಯಕ್, ಯೆಡಾ ಸಾಲಾ, ಚುತಿಯಾ, ಚಾ ಆಯಿಲಾ ಎನ್ನುವ “ಸೌಮ್ಯ” ಮಾತಿನಿಂದ ಶುರುವಾಗಿ ಗಾಂಡೂ, ಲೌಡೇ, ಮಾರೀಚ್ಯಾ, ಫೋದರೀಚ್ಯಾ, ಫೋಕನೀಚ್ಯಾ, ಮಾದರಚೋದ್, ಬೆಂಛೋದ್ ಇತ್ಯಾದಿ “ಘಂಟಾ” ನಿನಾದಗಳು ಮುಂದುವರಿಯುತ್ತವೆ. ಪರಸ್ಪರರ ಮಾತಾ ಪಿತಾ ಭಾಯಿ ಬಹನ್ ಅಜ್ಜ ಅಜ್ಜಿ ಎಲ್ಲರಿಗೂ ಸಹಸ್ರ ಬೈಗುಳಾವಳಿಗಳಲ್ಲಿ ಮರ್ಯಾದೆ ಸಲ್ಲುತ್ತದೆ.

ಬೇರೆಬೇರೆ ಪ್ರದೇಶದವರು ಮುಂಬೈಗೆ ಬರುವಾಗ ತಮ್ಮ ಜೊತೆ ಸ್ಥಳೀಯ ಬೈಗುಳ ಮಾತುಗಳನ್ನು ತರುವುದರಿಂದ ಮುಂಬೈನ ಗಾಲಿ ಭಾಷೆ ವೈವಿಧ್ಯಮಯವೂ ರಂಜನೀಯವೂ ಆಗಿದೆ. ಹೆಚ್ಚಿನ ಬೈಗುಳಗಳು ಗುಪ್ತಾಂಗಗಳು ಮತ್ತು ಲೈಂಗಿಕ ಸಂಗತಿಗಳನ್ನೇ ವರ್ಣಿಸುತ್ತವೆ. ಅವನ್ನು ಭಾಷೆಯಲ್ಲಿ ಹೆಚ್ಚು ಕುರೂಪಗೊಳಿಸಿದವನು ಒಂದು ಕೈ ಮೇಲಿರುತ್ತಾನೆ. ನಿತ್ಯದ ಗಾಲಿಗಳಿಂದ ಬೇಸತ್ತ ಕೆಲವು ಸೃಜನಶೀಲ ನಾಲಿಗೆಗಳು “ಅಬೇ, ಶಟಾ ಚಿ ಚಟ್ನಿ”  ಅಥವಾ “ಪಾಚೀ ಬೋಟಾ ಗಾಂಡ್ಯಾತ್’ ನಂಥ ನವ್ಯನುಡಿಗಳನ್ನು ಪ್ರಸ್ತುತಪಡಿಸಿ ಎಲ್ಲರಲ್ಲೂ ನಗೆ ಉಕ್ಕಿಸುತ್ತಾರೆ.

ಆ ನಗುವಿನ ಅಲೆಯಲ್ಲಿ ಜಗಳವೂ ಥಂಡಾ ಆಗುವುದಿದೆ. ಎಷ್ಟೋ ಬಾರಿ ಅಕ್ಕಪಕ್ಕದವರು ಏನೋ ತಮಾಷೆಯ ಮಾತನ್ನಾಡಿ ಜಗಳ ಅತಿರೇಕಕ್ಕೆ ಹೋಗದಂತೆ, ಮಾತು ಅಶ್ಲೀಲವಾಗದಂತೆ ತಡೆಯುತ್ತಾರೆ. ಆದರೂ ಪಬ್ಲಿಕ್ಕಿನ ನಿರ್ಬಂಧವನ್ನು ಮೀರಿ ಮಾತು ಮುಂದುವರಿಯುವುದುಂಟು. ಏನೇ ಇರಲಿ ಈ ಕಲಹಗಳ ಸೆಲ್ಫ್ ಲೈಫ್  ಮೂರ್ನಾಲ್ಕು ನಿಮಿಷ ಮಾತ್ರ. ಯಾಕೆಂದರೆ ಅಷ್ಟರಲ್ಲಿ ಇನ್ನೊಂದು ಸ್ಟೇಶನ್ನು ಬಂದು ಹತ್ತಿಳಿಯುವವರ ಗದ್ದಲದಲ್ಲಿ ಇವರ ಮಾತುಗಳು ಗಂಟಲಲ್ಲಿ ಸಿಕ್ಕಿಕೊಂಡು ಬರೀ ಸ್ವಗೊಣಗಾಟದಲ್ಲಿ ಅಸು ನೀಗುತ್ತವೆ.

ಅಂಕೋಲೆ ಸೀಮೆಯವನಾದ ನನಗೆ ಕೆಲವೊಮ್ಮೆ ಮುಂಬೈ ಬೈಗುಳಗಳ ಶ್ರೀಮಂತಿಕೆ ಕಂಡು ಅಸೂಯೆಯಾಗುವುದುಂಟು. ಈ ವಿಷಯದಲ್ಲಿ  ನಮ್ಮೂರು ಹಿಂದುಳಿದ ಪ್ರದೇಶವೇ ಅನಿಸುತ್ತದೆ. ಅಂಕೋಲೆಯಲ್ಲಿ ಕೆಂಡದಂಥ ಕೋಪಕ್ಕೂ, ಸಹಜ ಸ್ನೇಹಕ್ಕೂ ಯಥೇಚ್ಚವಾಗಿ ಸಲ್ಲುವ ಏಕಮಾತ್ರ ಶಬ್ದವೆಂದರೆ ಬೋ…ಮಗನೆ!  ನಂತರದ ಗ್ರೇಡ್ ಟು ಬೈಗುಳವೆಂದರೆ ಸೂ..ಮಗನೆ. ಮೂರನೇ ಹಂತಕ್ಕೂ ಸಿಟ್ಟು ಮುಂದುವರಿದರೆ ಕೈಕೈ ಹೊಡೆದಾಟವೇ!

ಈ ಲೇಖಕನ ಹೊಸ ಪ್ರಮೇಯದ ಪ್ರಕಾರ ಬೈಗುಳಗಳ ವೈವಿಧ್ಯತೆ ಮತ್ತು ಮಾರಾಮಾರಿ ಜಗಳಗಳು ವಿಲೋಮ ಅನುಪಾತದಲ್ಲಿರುತ್ತದೆ. ಬೈಗುಳಗಳಲ್ಲಿ ಶ್ರೀಮಂತಿಕೆಯಿದ್ದರೆ ಇದ್ದರೆ ಒಳ್ಳೆಯದು. ಯಾಕೆಂದರೆ ಸಿಟ್ಟು, ಸಿಡುಕು, ಹತಾಶೆಯನ್ನು ಆ ಶಬ್ದಗಳಲ್ಲಿ ಕಾರಿಕೊಂಡು ಹಗುರಾಗುವ ಅವಕಾಶವಿರುತ್ತದೆ. ಮತ್ತು ಆ ವಿಲಂಬಿತ ಸಮಯದಲ್ಲಿ ನೆತ್ತಿಗೇರಿದ ಪಿತ್ಥದ ಪ್ರತಾಪ ಕಡಿಮೆಯಾಗಿ ಹೊಡಪೆಟ್ಟೂ ತಪ್ಪುವ ಸಾಧ್ಯತೆಯಿರುತ್ತದೆ. ಆದಾಗ್ಯೂ ಅಂಕೋಲೆ ಮತ್ತು ಗೋಕರ್ಣ ಸೀಮೆಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಬೋ.. ಮತ್ತು ಸೂ…ಮಗನೆ ಎಂಬ ಎರಡೇ ಶಬ್ದಗಳನ್ನು ನಮ್ಮ ಯಶವಂತ ಚಿತ್ತಾಲರು “ಶಿಕಾರಿ” ಕಾದಂಬರಿಯಲ್ಲಿ  ಅತ್ಯಂತ ಧ್ವನಿಪೂರ್ಣವಾಗಿ ಬಳಸಿಕೊಂಡಿದ್ದುಂಟು.

ನಾಗರಿಕ ಸಮಾಜದ ಮನುಷ್ಯ-ಕ್ರೌರ್ಯಗಳಿಗೆ ಈಡಾಗುವ ಶಿಕಾರಿಯ ನಾಯಕ ನಾಗಪ್ಪ ಅಂಥ ಉಸಿರುಗಟ್ಟುವ ವಾತಾವರಣದಿಂದ, ರೋಗಗ್ರಸ್ತ ಮನಸುಗಳಿಂದ ನಿರಾಳವಾಗಲು ಸ್ವಗತದಲ್ಲಿ ಬೋ..ಮಗನೇ  ಮತ್ತು ಸೂ…ಮಗನೆ ಎಂಬೆರಡು ಬೈಗುಳಗಳನ್ನು ಆಡುತ್ತಿರುತ್ತಾನೆ. ಅಷ್ಟರಮಟ್ಟಿಗೆ ಅವು ಅವನ ಅಸಹಾಯಕತೆಯನ್ನು ಮೀರುವ ಅಸ್ತ್ರವಾಗುತ್ತವೆ. ಬಹುಶ: ಶಿಷ್ಟ ಓದುಗರಿಗೆ ಆ ಶಬ್ದಗಳು ಕಿರಿಕಿರಿಯಾಗಬಾರದು ಎಂದು ಚಿತ್ತಾಲರು ಆ ಬೈಗುಳಗಳನ್ನು “ಒಂದು ಮಗನೆ” ಮತ್ತು “ಎರಡು ಮಗನೆ” ಎಂದು ಬ್ಯಾಪ್ಟೈಸ್ ಮಾಡಿ ನಾಗಪ್ಪನ ಬಾಯಲ್ಲಿ ನುಡಿಸಿದ್ದರು. ಆದರೆ ಎದುರಾಳಿಗಳ ಮೇಲೆ ಬೀರುವ ಘೋರ ಪರಿಣಾಮ ಮತ್ತು ಉವಾಚಿಸಿದವರು ಅನುಭವಿಸುವ ನಿರಾಳತೆಯ ಲೆಕ್ಕಾಚಾರ ಹಾಕಿದರೆ ಮೂಲ ಸ್ವರೂಪದ ಬೋ..ಮತ್ತು ಸೂ…ಮಗನೆ ಎಂಬೆರಡು ಬೈಗುಳಗಳಿಗೆ ಯಾವುದೇ ಪರ್ಯಾಯ ಶಬ್ದಗಳು ಸಾಟಿಯಾಗಲಾರವು ಎಂಬುದು ಈ ಲೇಖಕನ ನಮ್ರ ನಂಬಿಕೆ!

ಅವಧಿಯ ಓದುಗರು ಕನ್ನಡದ ಸುಸಂಸ್ಕೃತ ಮನಸುಗಳಾಗಿರುವುದರಿಂದ ಅಮ್ಚಿ ಮುಂಬೈನಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಬೈಗುಳಗಳನ್ನು ಬಳಸಿಲ್ಲ. ಬಳಸಿದವನ್ನು ಆದಷ್ಟೂ ಸೌಮ್ಯಗೊಳಿಸಿದ್ದೇನೆ. ಅಮ್ಚಿ ಮುಂಬೈನ ಈ ಮುಖವನ್ನೂ (ಅಥವಾ ನಾಲಿಗೆಯನ್ನು?)ತೋರಿಸುವುದು ನನ್ನ ಇರಾದೆ, ಅಷ್ಟೇ! ಇಷ್ಟೂ ಪಥ್ಯವಾಗದೇ “ಆತಾ ಮಾಝೀ ಸಟಕಲಿ” ಅಂತ ಜರೆಯದಿರಿ ಪ್ಲೀಸ್!

***

 

 

‍ಲೇಖಕರು Avadhi GK

March 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: