ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಬಾಳಿಗೆ ಈ ಕಟ್ಟೆಗೆ ನನ್ನದೊಂದು ಸಲಾಂ!

ಸಂವರ್ತ ‘ಸಾಹಿಲ್’ ಹೊಸ ಕೃತಿ ಈಗ ಮಾರುಕಟ್ಟೆಯಲ್ಲಿದೆ. ಕನ್ನಡಪ್ರಭದಲ್ಲಿನ ಅಂಕಣ ಬರಹಗಳನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.

ಈ ಕೃತಿಗೆ ಸಂವರ್ತ ಬರೆದ ಮಾತು ಇಲ್ಲಿದೆ  

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿರೋಷಿಮಾ ಮೇಲೆ ಅಮೇರಿಕ ಬಾಂಬ್ ದಾಳಿ ಮಾಡಿದಾಗ ತನ್ನ ಸುತ್ತಮುತ್ತಲಿದ್ದ ಜನರೆಲ್ಲರೂ ಸಂಭ್ರಮಿಸುವುದನ್ನು ಕಂಡು ಯಾರೊಂದಿಗೆ ಏನು ಮಾತನಾಡಬೇಕು ಎಂದು ತಿಳಿಯದೆ ನೋಮ್ ಚೋಮ್ಸ್ಕಿ ಹತ್ತಿರದ್ದಲ್ಲೇ ಇದ್ದ ಕಾಡಿಗೆ ಹೋಗಿ ಕೆಲವು ಘಂಟೆ ಕಳೆದರಂತೆ. ಇದನ್ನೆಲ್ಲಾ ಸ್ಮರಿಸಿಕೊಳ್ಳುವ ಲೇಖನದಲ್ಲಿ ಚೋಮ್ಸ್ಕಿಹೇಳುತ್ತಾರೆ ಆ ಕ್ಷಣದಲ್ಲಿ ಅವರನ್ನು ಬಾಂಬ್ ದಾಳಿಯ ನೋವಿನಷ್ಟೇ ಕಾಡಿದ್ದು ಆಗ ಅವರು ಅನುಭವಿಸಿದ ಏಕಾಂತ.

ಭಾರತದಲ್ಲಿ 2014ರ ಲೋಕಸಭಾ ಚುನಾವಣೆಗೆ ಮುನ್ನ ತಮ್ಮ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡುವಾಗ ಅಲ್ಲಿ ಹೊರಹೊಮ್ಮುತ್ತಿದ್ದ ಮಾತುಗಳನ್ನು ಕೇಳಿ ಶಿವ್ ವಿಶ್ವನಾಥನ್ ಬದಲಾಗುತ್ತಿರುವ ಸಾಮಾಜಿಕ ಮೌಲ್ಯವನ್ನು ಗುರುತಿಸುತ್ತಾ, ಬದಲಾಗುತ್ತಿರುವ ಲೋಕದಲ್ಲಿ ತಾನು ನಂಬಿರುವ ಮೌಲ್ಯಗಳು ಮತ್ತು ಸ್ವತಃ ತಾನೇ ಇಲ್ಲಿ ಅಪ್ರಸ್ತುತವೇನೋ ಎಂಬ ಸಂಶಯ ಮೂಡುತ್ತದೆಂದು ಲೇಖನವೊಂದರಲ್ಲಿ ಬರೆದುಕೊಂಡಿದ್ದರು.

2015 ರ ಮೇ ತಿಂಗಳಲ್ಲಿ ‘ಕನ್ನಡ ಪ್ರಭ’ ಪತ್ರಿಕೆಗಾಗಿ ಅಂಕಣ ಬರೆಯಲು ಆಹ್ವಾನ ಬಂದಾಗ ತಡಮಾಡದೆ ಒಪ್ಪಿಕೊಳ್ಳಲು ಕಾರಣ ಏನೆಂಬುದನ್ನು ಹೇಳಲು ಮೇಲಿನ ಶಬ್ದ-ಚಿತ್ರಗಳನ್ನು ಕಟ್ಟಿಕೊಟ್ಟಿದ್ದೇನೆ.

ಬರವಣಿಗೆಯ/ ಭಾಷೆಯ ಕುರಿತು ಮಂಥನ ನಡೆಸುವ ಸುದೀರ್ಘ ಲೇಖನವೊಂದರಲ್ಲಿ ನನ್ನ ಬಹಳ ಇಷ್ಟದ ಲೇಖಕ ಎಡ್ವಾರ್ಡೊ ಗಾಲಿಯಾನೊ ಹೇಳುವುದೇನೆಂದರೆ, ಮನುಷ್ಯ ಬರೆಯುವುದು ತನಗನ್ನಿಸಿದ್ದನ್ನು ನುಡಿಯಬೇಕು ಎನ್ನುವ ಮತ್ತು ನುಡಿಯದೆ ಇರಲಾಗದ ಒತ್ತಡದಿಂದ ಮಾತ್ರವಲ್ಲ. ತನ್ನ ಮಾತಿನ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸಿ ಆ ಮೂಲಕ ಸಮುದಾಯ ಕಟ್ಟುವ ಸಲುವಾಗಿ ಸಹ. ಅಲ್ಲಿಗೇ ನಿಲ್ಲದೆ ಗಾಲಿಯಾನೊ ಹೇಳುತ್ತಾನೆ, ಮನುಷ್ಯ ಬರೆಯುವುದು ತನ್ನ ಮತ್ತು ಸಮಾಜದ ಇತರರ ಏಕಾಂತವನ್ನು ಕಡಿಮೆಗೊಳಿಸಲು.

ದಿ ಹಿಂದೂ’ ಪತ್ರಿಕೆಯ ಪತ್ರಕರ್ತನಾಗಿ ನಾನು ಮಂಗಳೂರಿನಲ್ಲಿ ದುಡಿಯುತ್ತಿದ್ದಾಗ ಒಮ್ಮೆ ಬೇರೊಂದು ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಯಿತು. ‘ಮದಿರೆಗಾಗಿ ಮಗುವನ್ನೇ ಮಾರಿದ ಮಹಾತಾಯಿ’ ಎಂಬ ಸೆನ್ಸೇಷನಲ್ ತಲೆಬರಹ ಹೊತ್ತಿದ್ದ ಆ ವರದಿ ನಿರೂಪಿಸಿದ ಕತೆ ಹೀಗಿತ್ತು:

‘ಹೆಂಡಕ್ಕೆ ಹಣವಿಲ್ಲದಾಗ ಹೆಂಗಸೊಬ್ಬಳು ತನ್ನ ಮಗುವನ್ನೇ ಮಾರಿದಳು’. ಆ ವರದಿಯ ದನಿಯಲ್ಲಿ ಸಿಟ್ಟು, ಅಸಹ್ಯ ಎಲ್ಲವೂ ಇತ್ತು ಮತ್ತು ಒಂದು ಬಗೆಯ ನೈತಿಕ ಅಹಂ ಎದ್ದು ಕಾಣುತಿತ್ತು. ನನಗೆ ಆ ವರದಿಯ ವಿವರಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾನು ದುಡಿಯುತ್ತಿದ್ದ ಪತ್ರಿಕೆಗಾಗಿ ವರದಿ ಮಾಡಲು ಆ ಘಟನೆಯ ಬೆನ್ನು ಹತ್ತಿ ಹೋದೆ.

ನನ್ನೊಂದಿಗೆ ಮಾತನಾಡುತ್ತಾ ಆ ‘ಮಹಾತಾಯಿ’ ತಾನು ಮಗುವನ್ನು ಮಾರಿದ್ದು ಮತ್ತು ಮಗುವನ್ನು ಮಾರಿದ ಸಂಜೆಯೇ ಕುಡಿದು ಕೇರಿಯಲ್ಲಿ ಗಲಾಟೆ ಎಬ್ಬಿಸಿದ್ದು ಎರಡನ್ನು ಒಪ್ಪಿಕೊಂಡಳು.

ಆದರೆ ಆಕೆಯ ಪ್ರಕಾರ ಕುಡಿಯಲು ಹಣ ಬೇಕೆಂದು ಆಕೆ ಮಗುವನ್ನು ಮಾರಿದ್ದಲ್ಲ, ಮನೆಯಲ್ಲಿ ಇದ್ದ ಕಡು ಬಡತನದ ನಡುವೆ ಮಗುವನ್ನು ಸಾಕಲಾಗದು ಎಂದು ಅರಿವಾಗಿ ಮತ್ತು ಮಗುವನ್ನು ಮಾರಿದರೆ ಇರುವ ಇತರ ಮಕ್ಕಳಿಗೆ ಇನ್ನೊಂದಿಷ್ಟು ದಿನ ಊಟ ಹಾಕಲು ಸಾಧ್ಯವಾಗುತ್ತದೆ ಎಂಬುದಕ್ಕಾಗಿ. ಆದರೆ ಮಗುವನ್ನು ಮಾರಿದಾಗ ಆ ಸ್ಥಿತಿಗೆ ತಲುಪಿದ ತನ್ನ ಬದುಕಿನ ಬಗೆಗೆ ಸಿಟ್ಟು ಬಂದು ತನ್ನ ಪಾಡಿಗೆ ತಾನೇ ಮರುಕ ಪಡುತ್ತಾ ಆಕೆ ತನ್ನ ಅಸಹಾಯಕತೆಯ ದುಃಖದಲ್ಲಿ ಮದಿರೆ ಕುಡಿದಿದ್ದಳು.

ಈ ಘಟನೆಯ ಕುರಿತ ವರದಿ ಮತ್ತು ಆ ವರದಿಯ ಸುತ್ತಲಿನ ಈ ಘಟನೆ ನಾನು ಎಂದೂ ಮರೆತಿಲ್ಲ, ನನ್ನಿಂದ ಮರೆಯಲೂ ಆಗದು. ಯಾಕೆಂದರೆ ಒದಗಿರುವ ಮಾಹಿತಿಗಳೇ ಎಲ್ಲವನ್ನೂ ಹೇಳುವುದಿಲ್ಲ, ಆ ಮಾಹಿತಿಗಳನ್ನು ಆ ಮಾಹಿತಿಯ ಸುತ್ತಲಿರುವ ಸಂದರ್ಭ, ಅದರ ಹಿಂದಿರುವ ಇತಿಹಾಸ ಹೀಗೆ ಸಮಗ್ರವಾಗಿ ನೋಡದೆ ಹೋದರೆ ನಾವು ಸತ್ಯಕ್ಕೆ ವಿಮುಖರಾಗಿ ಹೋಗುತ್ತೇವೆ ಎಂಬುದು ತೀರಾ ಹತ್ತಿರದಿಂದ ನನಗೆ ಕಾಣಿಸಿದ, ಮನವರಿಕೆ ಮಾಡಿದ ಘಟನೆ ಅದು. ಅದಕ್ಕೆ ಉತ್ಪಲ್ ದತ್ತ್ ಹೇಳುವುದು ಇತಿಹಾಸದ ಪರಿಜ್ಞಾನ ಇಲ್ಲದ ವರದಿಗಾರ ಮಾತ್ರ ವಸ್ತುನಿಷ್ಠ ವರದಿ ಮಾಡಬಲ್ಲ ಎಂದು. ವಸ್ತುನಿಷ್ಠ ಬರವಣಿಗೆ ಕವಿ ಹೋಸೆ ಕೊರೊನೆಲ್ ಉರ್ತೆಚೊ ಪ್ರಕಾರ ಮನುಷ್ಯರನ್ನು, ಮನುಷ್ಯರ ಬದುಕನ್ನು ಜೀವ ತುಂಬಿದ ಜೀವವಾಗಿಯಲ್ಲದೆ ಕೇವಲ ವಸ್ತುವಾಗಿ ನೋಡುತ್ತದೆ.

’ದಿ ಹಿಂದೂ’ ಪತ್ರಿಕೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದು ನನಗೆ ಪತ್ರಿಕೋದ್ಯಮದ ಗುರುವಾದ ಸುದೀಪ್ತೋ ಮೊಂಡಲ್ ಆಗಾಗ ಹೇಳುತ್ತಿದ್ದ ಮಾತೇನೆಂದರೆ ಬರವಣಿಗೆಯಲ್ಲಿ, ವರದಿಗಳಲ್ಲಿ ಸಮತೋಲನ ಸಾಧಿಸುವುದು ಎಂದರೆ ಅಪ್ರಾಮಾಣಿಕನಾಗುವುದು ಮತ್ತು ಬೇಜವಾಬ್ದಾರನಾಗುವುದು. ’ಅಸಮತೆಯ ಈ ಲೋಕದ ಕುರಿತು ಬರೆಯುವಾಗ ಸಮತೋಲನ ಕಾಪಾಡಿಕೊಳ್ಳಬೇಕು ಎಂದರೆ ಅದು ಹೇಗೆ ಸಾಧ್ಯ?’ ಎಂದು ಕೇಳುತ್ತಿದ್ದ ಅವನ ಪ್ರಕಾರ ಬರವಣಿಗೆಯಲ್ಲಿ ಅಥವಾ ವರದಿಯಲ್ಲಿ ಎದುರಿನ ವಿಷಯವನ್ನು ಮುಖಾಮುಖಿಯಾದ ಮೇಲೆ, ಅಲ್ಲಿನ ಸಂಕೀರ್ಣತೆಗಳನ್ನು ಅಳೆದು ತೂಗಿದ ಮೇಲೆ, ಅಲ್ಲಿ ನೊಂದವರ ಶೋಷಿತರ ಪಕ್ಷ ವಹಿಸದೆ ಹೋದರೆ, ಅದರ ಬದಲಾಗಿ ವಸ್ತುನಿಷ್ಠತೆಯ ವ್ಯಸನದಲ್ಲಿ ಒಂದಿಷ್ಟು ಮಾಹಿತಿಗಳನ್ನೇ ಸಂಗ್ರಹಿಸಿ ಕೊಟ್ಟರೆ ಅದು ದಮನಿತರ ವಿರುದ್ಧದ ಪೂರ್ವಾಗ್ರಹವನ್ನೇ ಸೂಚಿಸುತ್ತದೆಯೇ ಅಲ್ಲದೆ ಮತ್ತಿನ್ನೇನೂ ಅಲ್ಲ. ಅಂತಹ ವರದಿ ಮತ್ತು ಬರವಣಿಗೆ ಅಸಮಾನ ಲೋಕದ ಯಥಾಸ್ಥಿತಿ ಕಾಪಾಡಿಕೊಳ್ಳಲು ವ್ಯವಸ್ಥೆಗೆ ಪುಷ್ಟಿ ನೀಡುವ ಕಾಲಾಳಾಗುತ್ತದೆ.

ಇದನ್ನೆಲ್ಲಾ ಇಲ್ಲಿ ನೆನಪಿಸಿಕೊಳ್ಳಲು ಕಾರಣ, ನನ್ನೆಲ್ಲಾ ಅಂಕಣ ಬರಹಗಳನ್ನು ಜೊತೆಗಿಟ್ಟು ನೋಡುವಾಗ ಈ ಎಲ್ಲಾ ಲೇಖನಗಳ ಹಿಂದೆ ಕೆಲಸ ಮಾಡಿರುವ ಪ್ರಜ್ಞೆ, ದೃಷ್ಟಿ, ಇವುಗಳಿಗೆ ಹಲವಾರು ಕಾರಣಗಳಿದ್ದರೂ, ಎಲ್ಲದರ ಹಿಂದೆ ಕಾರ್ಯ ನಿರ್ವಹಿಸಿರುವ ಎಚ್ಚರ ಮತ್ತು ಪ್ರಜ್ಞೆಯನ್ನು ರೂಪಿಸಿದ ಪ್ರಮುಖ ಘಟನಾವಳಿಗಳಲ್ಲಿ ಈ ಮೇಲಿನ ಘಟನೆ ಮತ್ತು ಅದರ ಸುತ್ತಲಿನ ನನ್ನ ಆಲೋಚನೆಗಳು ಬಹಳ ಮುಖ್ಯವಾದದ್ದು.

ಬರವಣಿಗೆ ಲೋಕವನ್ನು ಬದಲಾಯಿಸುತ್ತದೆ ಎಂಬ ನಂಬಿಕೆ ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನ ಬರವಣಿಗೆ ಲೋಕ ಬದಲಾವಣೆಗೆ ಪುಷ್ಟಿ ನೀಡದು ಎನ್ನುವ ನಂಬಿಕೆ. ಇದನ್ನು 2015 ಜೂನ್ ತಿಂಗಳಿನಿಂದ ಹಿಡಿದು, ನಡುವೆ ಜೂನ್ 2016 ರಿಂದ ಅಕ್ಟೋಬರ್ 2016 ರ ತನಕದ ಅಲ್ಪವಿರಾಮ ಹೊರತುಪಡಿಸಿ, ಡಿಸೆಂಬರ್ 2016 ರ ತನಕ ‘ಬಾಳ್ಕಟ್ಟೆ’ ಅಂಕಣ ಬರೆಯುವ ಸಂದರ್ಭದಲ್ಲಿ ಮತ್ತೆ ಮತ್ತೆ ನನಗೆ ನಾನೇ ಹೇಳಿಕೊಂಡಿದ್ದೇನೆ.

‘ಕನ್ನಡ ಪ್ರಭ’ ಪತ್ರಿಕೆಗೆ ನಾನು ಬರೆದ ಅಂಕಣಕ್ಕೆ ನಾನು ನೀಡಿದ ಹೆಸರು ‘ಬಾಳ್ಕಟ್ಟೆ’. ಈ ಹೆಸರಿಗೆ ಏನು ಅರ್ಥ ಎಂದು ಹಲವರು ಕೇಳಿದ್ದಾರೆ. ಮಣಿಪಾಲದಲ್ಲಿ ಹುಟ್ಟಿ ಬೆಳೆದ ನನ್ನ ಮೂಲ ಮಣಿಪಾಲಕ್ಕೆ ಬಹಳ ಸಮೀಪವಾದ ಬಾಳ್ಕಟ್ಟ. ಅದು ಆ ಹೆಸರಿನ ಕುರಿತು ನನಗಿರುವ ಆಕರ್ಷಣೆ ಮತ್ತು ಭಾವನಾತ್ಮಕ ನಂಟಿಗೆ ಕಾರಣ. ಆದರೆ ಆ ಹೆಸರನ್ನು ಆಯ್ಕೆ ಮಾಡಲು ಇದ್ದ ಇನ್ನೊಂದು ಕಾರಣ ಎಂದರೆ, ಶಿವರಾಂ ಕಾರಂತರ ‘ಮೂಕಜ್ಜಿಯ ಕನಸು’ ಕಾದಂಬರಿಯಲ್ಲಿ ಆ ಊರಿನಲ್ಲಿರುವ ಬಸರಿ-ಕಟ್ಟೆ ಮತ್ತು ಬೂದಿ-ಕಟ್ಟೆ ಕುರಿತು ಮಾತನಾಡುತ್ತಾ ಮೂಕಜ್ಜಿ, ’ಅವೆರಡರ ನಡುವೆ ಬಾಳ್ಕಟ್ಟೆ ಅಂತ ಒಂದಿರಬೇಕಿತ್ತು. ಬಸಿರು ಮತ್ತು ಬೂದಿ ನಡುವೆ ಇರುವುದೇ ಬಾಳು ಅಲ್ವಾ?’ ಎಂದು ಹೇಳುತ್ತಾಳೆ.

ಬಾಳಿನ ಕಟ್ಟೆಯ ಮೇಲೆ ಕುಂತು ಮುಂದೆ ಸಾಗುತ್ತಿರುವ ಬದುಕನ್ನು, ಲೋಕದ ಆಗುಹೋಗುಗಳನ್ನು ನೋಡುತ್ತಾ ನನ್ನ ಗಮನಕ್ಕೆ ಬಂದ ನನ್ನನ್ನು ಸೆಳೆದ, ಕಾಡಿದ ದೊಡ್ಡ, ಸಣ್ಣ ಸಂಗತಿಗಳಿಗೆ ಸ್ಪಂದಿಸಿ ದೇಶ-ಕಾಲದೊಂದಿಗೆ ನಡೆಸಿದ ಸಂವಾದವೇ ಈ ಅಂಕಣ ಬರಹಗಳು. ಯಾವುದೇ ನಿರ್ದಿಷ್ಟ ವಿಷಯದ ಕುರಿತು ಬರೆಯಬೇಕು ಎಂಬ ಒತ್ತಡ ನನ್ನ ಮೇಲಿರಲಿಲ್ಲ. ಯಾವುದೇ ಬೇಲಿ ಹಾಕದೆ ಒಲಿದಂತೆ ಹಾಡಲು ಸ್ವಾತಂತ್ರ ನೀಡಿದ ’ಕನ್ನಡ ಪ್ರಭ’ ನನ್ನಲ್ಲಿ ತುಂಬಿದ ಧೈರ್ಯ ಅಷ್ಟಿಷ್ಟಲ್ಲ. ಇದರಿಂದಾಗಿ ನಾನು ಕಂಡದ್ದನ್ನು ಕಂಡ ಹಾಗೆ, ಅನಿಸಿದ್ದನ್ನು ಅನಿಸಿದ ಹಾಗೆ, ನನ್ನೊಂದಿಗೆಯೇ ರಾಜಿ ಮಾಡಿಕೊಳ್ಳದೆ ಬರೆಯಲು ಸಾಧ್ಯ ಆಯಿತು. ಸಾಮಾನ್ಯವಾಗಿ ಕನ್ನಡದಲ್ಲಿ ಬರೆಯಲು ಹಿಂಜರಿಯುತ್ತಿದ್ದ ನನ್ನ ಕೈಯಲ್ಲಿ ಬರೆಸಿ, ನನ್ನ ಮಾತೃಭಾಷೆಯನ್ನು ನನಗೆ ಮತ್ತಷ್ಟು ಆಪ್ತವಾಗಿಸಿತು ಈ ಅಂಕಣಗಳ ಯಾನ.

ನನ್ನನ್ನು ವಿನೀತಗೊಳಿಸಿದ ಈ ಅನುಭವವನ್ನು ಸಾಧ್ಯವಾಗಿಸಿದ್ದು ’ಕನ್ನಡ ಪ್ರಭ’ದ ನೇತೃತ್ವ ವಹಿಸಿಕೊಂಡಿದ್ದ ಸುಗತ ಶ್ರೀನಿವಾಸರಾಜು. ಕನ್ನಡ ಪತ್ರಿಕೋದ್ಯಮದಲ್ಲಿ ಒಂದೇ ಜಾತಿಯ ಮಂದಿ ಹೆಚ್ಚಿರುವುದನ್ನು ಹೆಮ್ಮೆಯ ಸಂಗತಿ ಎಂದು ನಂಬಿರುವ, ಅದನ್ನು ನಿರ್ಲಜ್ಜವಾಗಿ ಹೇಳಿಕೊಳ್ಳುವ ಮತ್ತು ಸಂಭ್ರಮಿಸುವ ಸಂಪಾದಕರಿರುವ ಈ ಕಾಲದಲ್ಲಿ, ನನ್ನನ್ನು ಈ ತನಕ ಒಂದೇ ಒಂದು ಬಾರಿಯೂ ಭೇಟಿಯಾಗದ ಸುಗತ ನನ್ನ ಮೇಲೆ ನಂಬಿಕೆ ಇಟ್ಟು, ನನ್ನ ಕೈಯಲ್ಲಿ ಬರೆಸಿದ್ದು ಅವರ ಹಿರಿಮೆಯೇ ಸರಿ. ನನ್ನ ಅಂಕಣ ಒಂದು ವರ್ಷ ಪೂರೈಸುವ ಸಂದರ್ಭದಲ್ಲಿ, ’ಅವಿರತವಾಗಿ ಬರೆಯುತ್ತಲೇ ಇರಲು – ಅದೂ ನಿಯತಕಾಲಿಕಕ್ಕೆ, ಡೆಡ್ಲೈನ್ ಕತ್ತಿ ತಲೆಯ ಮೇಲೆ ತೂಗುತ್ತಿರುವಾಗ- ಬಹಳವಾದ ಓದು ಮತ್ತು ಅನುಭವ ಬೇಕು. ಅಂಥಾ ಓದು, ಅಂಥಾ ಅನುಭವ ನನ್ನಲ್ಲಿ ಇಲ್ಲ’ ಎಂದು ಪತ್ರ ಬರೆದು ಅಂಕಣ ನಿಲ್ಲಿಸಲು ಅನುಮತಿ ಕೋರಿದಾಗ ಸುಗತ ಅವರು, ’ನಿಲ್ಲಿಸುವಂತಿಲ್ಲ. ಅಗತ್ಯವಿದ್ದರೆ ಸ್ವಲ್ಪ ಸಮಯದ ವಿಶ್ರಾಂತಿ ತೆಗೆದುಕೊಂಡು, ಆಮೇಲೆ ಮತ್ತೆ ಬರೆಯಲಾರಂಬಿಸು,’ ಎಂದು ಹೇಳಿ, ನಾನು ಕಾಗದದ ಮೇಲೆ ಇಡಲಿಚ್ಚಿಸಿದ ಪೂರ್ಣವಿರಾಮಕ್ಕೆ ಸಣ್ಣ ಬಾಲ ಕೊಟ್ಟು ಅಲ್ಪವಿರಾಮವನ್ನಾಗಿಸಿದ್ದರು. ಈಗ ಈ ಪುಸ್ತಕಕ್ಕೆ ಒಂದು ಆಪ್ತ ಬೆನ್ನುಡಿಯನ್ನು ಬೇರೆ ಬರೆದಿದ್ದಾರೆ. ಅವರ ನನ್ನ ಮೇಲಿರಿಸಿದ ಪ್ರೀತಿ ನಂಬಿಕೆ ವಿಶ್ವಾಸಕ್ಕೆ ನಾನು ಅವರಿಗೆ ಸದಾ ಋಣಿ.

ಈ ಯಾನದ ಸಂದರ್ಭದಲ್ಲಿ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನನ್ನ ಲೇಖನಗಳ ಮೊದಲ ಓದುಗರಾಗಿ ಮತ್ತು ಅವುಗಳನ್ನು ಪ್ರಕಟಣೆಗೆ ಸಿದ್ಧ ಪಡಿಸಿದ ಕುಮಾರ್ ಮತ್ತು ಸಹ್ಯಾದ್ರಿ ನಾಗರಾಜ್ ಇವರಿಗೆ ಅನಂತ ಅನಂತ ಧನ್ಯವಾದಗಳು.

ಪ್ರತಿ ಅಂಕಣ ಬರೆಯುವಾಗ ನನ್ನ ಆಲೋಚನೆಗಳನ್ನು ಪರಿಷ್ಕರಿಸಿ ನಯಗೊಳಿಸಲು ಸಹಾಯ ಮಾಡಿದ ಸ್ನೇಹಿತರು ಹಲವರು. ಅದೂ ಅಲ್ಲದೆ ಇಲ್ಲಿನ ಕೆಲವು ಲೇಖನಗಳು ಹೊರಹೊಮ್ಮಿದ್ದು ಒಂದಿಷ್ಟು ಸ್ನೇಹಿತರೊಂದಿಗಿನ ನನ್ನ ನಿರಂತರ ವಾದ, ಸಂವಾದದ ಮುಂದುವರಿಕೆಯಾಗಿ, ಫಲವಾಗಿ. ಪಲ್ಲವಿ ರಾವ್, ಸಂಧ್ಯಾ ರಾಣಿ, ಆನ್ ಕೊರೆಯ, ಅಮೃತ್ ಗಂಗರ್, ಅರುಣ್ ಜೋಳದಕೂಡ್ಲಗಿ, ಅನನ್ಯ ಕಾಸರವಳ್ಳಿ, ಶೃಂಗ ವಾಸುದೇವ್, ಉತ್ಥಾನ, ಟ್ರಿನಾ ಬ್ಯಾನರ್ಜಿ, ರಕ್ಷ0ದ ಜಲೀಲ್, ನಿಶಿತ ಆಯೇಷಾ ಅಶ್ರಫ್, ಕಿಸ್ಲೈ ತಿವಾರಿ, ಧನ್ವಂತಿ ನಾಯಕ್, ಧರ್ಮಕೀರ್ತಿ ಸುಮಂತ್, ರಾಹುಲ್ ರಾಜೀವ್, ಡಾ. ಪಿ.ವಿ. ಭಂಡಾರಿ, ದಿವ್ಯಶ್ರೀ ಹೆಗ್ಡೆ, ಶ್ರೀಶ, ವಿಷ್ಣು, ವಿಜಯ್, ನೀತಾ ಇನಾ0ದಾರ್, ಮಧು, ಅದಿತಿ ಸುರೇಂದ್ರ, ಲೋಕೇಶ್ ಊರಬೈಲ್, ಪ್ರಥಮೇಶ್ ಪೈ, ಮೈತ್ರೀಯಿ ಮಿಶ್ರ, ಮಾನ್ಯ ವೆಂಕಟೇಶ್, ಸಂದೀಪ್ ನಯನಿ ಇವರೆಲ್ಲರನ್ನು ನೆನಪಿಸಿಕೊಳ್ಳಲು ಮುಖ್ಯ ಕಾರಣ ಕಲಿಕೆ ಮತ್ತು ಬರವಣಿಗೆ ಸಾಮುದಾಯಿಕ ಬಾಳ್ವೆಯ ಒಂದು ಫಲ ಎಂಬುದನ್ನು ಸ್ಪಷ್ಟವಾಗಿ ಹೇಳಲು.

ನನ್ನ ಅಂಕಣಗಳನ್ನು ಓದಿದ, ಮೆಚ್ಚಿದ, ಮೆಚ್ಚದ, ವಿಮರ್ಶಿಸಿದ, ಟೀಕಿಸಿದ, ಅವುಗಳ ಶಕ್ತಿ-ಮಿತಿ ತೋರಿ ಆ ಮುಖಾಂತರ ನನ್ನನ್ನು ಬೆಳೆಸಿದ ಏಲ್ಲರಿಗೂ ನನ್ನ ಧನ್ಯವಾದ. ಆದರೆ ಇಲ್ಲಿ ವಿಶೇಷವಾಗಿ ನೆನೆಯಬೇಕಾದದ್ದು ಈ ಅಂಕಣಗಳನ್ನು ಬರೆಯುವ ಸಂದರ್ಭದಲ್ಲಿ ಆಗಾಗ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಪ್ಪ, ಅಮ್ಮ, ಅಕ್ಕ, ಪ್ರಜ್ಞಾ ಶಾಸ್ತ್ರಿ, ನದಿ ಪಲ್ಶಿಕರ್, ಸತೀಶ್ ಜಿ.ಟಿ., ಪಂಪಾರೆಡ್ಡಿ, ಸ್ಫೂರ್ತಿ ಹರವು, ಅವಿನಾಶ್, ಧರಣೀಶ್, ಕಿರಣ್, ರಾಜೇಂದ್ರ ಪ್ರಸಾದ್, ಚಿದಂಬರ ನರೇಂದ್ರ, ಕುಂಟಾಡಿ ನಿತೇಶ್, ಶ್ರೀಕಾಂತ್ ಪ್ರಭು, ಸ್ವರೂಪ್, ಅಶ್ವಿನ್, ಸೃಜನ ಕಾಯ್ಕಿಣಿ, ವರುಣ್ ಭಟ್ಟ ಇವರೆಲ್ಲರನ್ನು.

ಈ ಪುಸ್ತಕವನ್ನು ಈಗ ಪ್ರೀತಿಯಿಂದ ಪ್ರಕಟಿಸುತ್ತಿರುವ ಹಿರಿಯಕ್ಕನಂಥಾ ಅಕ್ಷತಾಳಿಗೆ, ಅಹರ್ನಿಶಿ ಬಳಗಕ್ಕೆ, ಮುನ್ನುಡಿ ಬರೆಯಲು ಒಪ್ಪಿರುವ ನಾನು ಬಹಳ ಪ್ರೀತಿಸಿ, ಗೌರವಿಸುವ ಗುರುಗಳಾದ ರಹಮತ್ ತರೀಕೆರೆ ಅವರಿಗೆ ಮತ್ತು ಪ್ರೂಫ್ ನೋಡಿದ ರಾಜಾರಾಮ್ ತಲ್ಲೂರ್ ಅವರಿಗೆ ಧನ್ಯವಾದ ಹೇಳಲು ಹೊರಟಾಗಲೇ ಚಾರ್ಲಿ ಚಾಪ್ಲಿನ್ ಹೇಳಿದ, “words are so futile, so feeble” ಎಂದಿದ್ದು ನೂರಕ್ಕೆ ನೂರು ಸತ್ಯ ಎಂದು ಅನಿಸಲು ಶುರುವಾಗುತ್ತದೆ.

ಈ ಅಂಕಣ ಯಾನ ನನಗೆ ಹೊಸ ಸ್ನೇಹಿತರನ್ನು ತಂದುಕೊಟ್ಟಿದೆ, ಹೊಸ ವೈರಿಗಳನ್ನೂ ತಂದು ಕೊಟ್ಟಿದೆ, ಇದ್ದ ಸ್ನೇಹಿತರನ್ನು ಮತ್ತೆ ಇನ್ನಷ್ಟು ಪರಿಚಯಿಸಿದೆ. ಇವೆಲ್ಲ ಆಗದೆ ಹೋಗಿದ್ದರೆ ಬಹುಶಃ ನನಗೆ ನನ್ನ ಬರವಣಿಗೆ ಕುರಿತು ನಂಬಿಕೆ ಕಡಿಮೆ ಆಗಿರುತ್ತಿತ್ತೇನೋ.

ಇನ್ನು ಕೊನೆಯದಾಗಿ ಮತ್ತು ಬಹಳ ಮುಖ್ಯವಾಗಿ ನೆನೆಯಬೇಕಾದದ್ದು ನನ್ನ ಆಲೋಚನೆಗಳನ್ನು ರೂಪಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸಿದ ನನ್ನ ಗುರುಗಳಾದ ಡಾ. ಆರ್ಕೆ ಮಣಿಪಾಲ್, ಅನಿಲ್ ಪಿಂಟೋ, ರಿಚರ್ಡ್ ರೇಗೊ, ನಾಡೋಜ ಕೆ.ಪಿ. ರಾವ್, ಬುರೋಶಿವ ದಾಸಗುಪ್ತ, ಹರ್ಷ ಮಂದರ್, ಜಿ. ರಾಜಶೇಖರ್, ಕೆ. ಫಣಿರಾಜ್, ಪಟ್ಟಾಭಿರಾಮ ಸೋಮಯಾಜಿ, ರಹಮತ್ ತರೀಕೆರೆ, ಎಚ್.ಎಸ್. ಶಿವಪ್ರಕಾಶ್, ಸೌಮ್ಯಬ್ರತ ಚೌಧರಿ, ಶಮೀಕ್ ಬಂದ್ಯೋಪಾಧ್ಯಾಯ, ಅಂಜುಮ್ ರಾಜಬಲಿ, ಅಶ್ವಿನಿ ಮಲಿಕ್ ಮತ್ತು ಶ್ರೀಪ್ರಕಾಶ್. ಅವರುಗಳಿಗೆ ನನ್ನ ಅನಂತ ಅನಂತ ಧನ್ಯವಾದ.

ಈ ಎಲ್ಲಾ ಗುರುಗಳಿಂದ ಕಲಿತ ಒಂದು ಬಹು ಮುಖ್ಯ ಪಾಠ ಮಾತಿನ ರೂಪದಲ್ಲಿ ದಕ್ಕಿದ್ದು ಕೆ.ಪಿ.ರಾಯರ ಮುಖಾಂತರ. ಅದೇನೆಂದರೆ ನಾವು ಬದುಕಿನ ಶಿಷ್ಯ ಆಗಬೇಕೆನ್ನುವುದು. ಸುತ್ತ ಸಾಗುತ್ತಿರುವ ಬದುಕನ್ನು ಬಾಳ್ಕಟ್ಟೆ ಮೇಲೆ ಕುಂತು ನೋಡುತ್ತಾ ಅದರ ಕುರಿತು ಆಲೋಚಿಸುತ್ತಾ ಆ ಮುಖೇನ ನಿರಂತರವಾಗಿ ಏನೇನೋ ಹೊಸ ಸಂಗತಿಗಳನ್ನು ಕಲಿಯಲು ಸಾಧ್ಯವಾಗಿದೆ. ಬಾಳ್ಕಟ್ಟೆಯ ಮೇಲೆ ಕುಳಿತ ನಾನು ನನ್ನ ತೋಳಿಗೆ ಕಟ್ಟಿಕೊಂಡ ತಾವೀಜಿನ ಮೇಲೆ ಬರೆದಿರುವ ಆಯತ್ ಬಟ್ರ್ರಂಡ್ ರಸ್ಸಲ್ ನ ಒಂದು ಮಾತು : “ನಾನು ನನ್ನ ನಂಬಿಕೆಗಳಿಗಾಗಿ, ನಂಬಿದ ವಿಷಯಗಳಿಗಾಗಿ ಎಂದೂ ಪ್ರಾಣ ಕೊಡುವುದಿಲ್ಲ. ಯಾಕೆಂದರೆ ನನ್ನ ನಂಬಿಕೆ ಸುಳ್ಳಾಗಿರಬಹುದು.”

ಈ ಬಾಳಿಗೆ ಈ ಕಟ್ಟೆಗೆ ನನ್ನದೊಂದು ಸಲಾಂ!

‍ಲೇಖಕರು Avadhi

15 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading