ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಳಪ್ಪನವರ ರಂಗಾನುಭವ ಕಥನ 'ಬಣ್ಣದ ಬದುಕಿನ ಚಿನ್ನದ ದಿನಗಳು'

ಉಷಾನರಸಿಂಹನ್, ಮೈಸೂರು
ಯಾವುದೇ ಪುಸ್ತಕ ಮತ್ತೆ ಮತ್ತೆ ಮುದ್ರಣಗೊಂಡಿದೆಯೆಂದರೆ ಮತ್ತೆ ಮತ್ತೆ ಓದಿಸಿಕೊಂಡಿದೆ, ಚರ್ಚಿಸಲ್ಪಟ್ಟಿದೆ ಎಂದೇ ಅರ್ಥ. ಪತ್ರಕರ್ತ ಗಣೇಶ ಅಮೀನಗಡರ ಏಣಗಿ ಬಾಳಪ್ಪನವರ ರಂಗಾನುಭವ ಕಥನವು ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಎಂಬ ಶೀರ್ಷಿಕೆಯಿಂದ ಮತ್ತೆ-ಮತ್ತೆ ಮುದ್ರಣಗೊಳ್ಳುತ್ತಾ, ಓದಿಸಿಕೊಳ್ಳುತ್ತಾ ಬಂದಿದೆ.
ಎರಡು ಸಾವಿರದ ನಾಲ್ಕರಿಂದ ಎರಡು ಸಾವಿರದ ಹದಿನೆಂಟರವರೆಗೆ ಏಳು ಮುದ್ರಣಗಳನ್ನು ಕಂಡಿದ್ದು ಕೇವಲ ಸಂಖ್ಯೆಯ ದೃಷ್ಟಿಯಿಂದ ಆದ ಹೆಗ್ಗಳಿಕೆ ಮಾತ್ರವಲ್ಲ, ಕನ್ನಡ ಸಂಸ್ಕೃತಿಗೆ ಇದೊಂದು ಅಮೂಲ್ಯ ಕೊಡುಗೆ, ರಂಗಸಂಸ್ಕೃತಿಯ ವಕ್ತಾರ ಎಂದು ಶ್ಲಾಘಿಸದಿರಲು ಸಾಧ್ಯವೇ ಇಲ್ಲ. ಇಷ್ಟು ಕ್ಷಿಪ್ರಕಾಲದಲ್ಲೇ ಇದು ಏಳು ಮುದ್ರಣಗಳನ್ನು ಕಂಡುದಲ್ಲದೆ ಇಂಗ್ಲೀಷಿಗೆ ಮರಾಠಿಗೆ ತರ್ಜುಮೆಯಾಗಿರುವುದೂ ಒಂದು ವಿಶೇಷವೆ.
ಆ ಕಾರಣಕ್ಕಾಗಿ ಮೊದಲಿಗೆ ಶ್ರೀ ಗಣೇಶ್‌ ಅಮೀನ್‌ಗಡರನ್ನು ತುಂಬು ಮನದಿಂದ ಅಭಿನಂದಿಸುತ್ತೇನೆ. ಮುಖಪುಟದಲ್ಲಿ ಶತಾಯುಷಿ ಏಣಗಿ ಬಾಳಪ್ಪನವರ ರಂಗಾನುಭವಕಥನ ಎಂಬ ಶೀರ್ಷಿಕೆಯೊಂದಿಗೆ ಮಂದಸ್ಮಿತವದನರಾದ ಏಣಗಿ ಬಾಳಪ್ಪನವರ ಆಕರ್ಷಣೀಯವಾದ ಚಿತ್ರವಿದೆ.
ಲೇಖಕರು ಈ ಕಥನದ್ದುದಕ್ಕು ವಿಚಾರಭಾರದಿಂದ ಎಲ್ಲೂ ಕುಸಿಯದಂತೆ ಕುಗ್ಗದಂತೆ ಚಿಕ್ಕಚಿಕ್ಕ ಆಕರ್ಷಕ ಶೀರ್ಷಿಕೆಗಳನ್ನಿಟ್ಟು ಕುತೂಹಲ ಉಳಿಸಿಕೊಳ್ಳುತ್ತಾ ಉಪಅಧ್ಯಾಯಗಳಲ್ಲಿ ಕಥನವನ್ನು ವಿಂಗಡಿಸುತ್ತಾರೆ. ಹಾಗೇ ಮಾಡುತ್ತಲೇ ಕಥನದ ಕುರಿತು ಓದುಗನ ಆಸಕ್ತಿಯನ್ನು ಹೆಚ್ಚಳ ಮಾಡಿಬಿಡುತ್ತಾರೆ. ಉದಾ:- ಚನ್ನಮ್ಮನ ನಾಟಕ ರಚನೆ, ಪ್ರಚಾರವೈಖರಿ, ದುಃಖದಲ್ಲಿ ವ್ಯಂಗ್ಯತನ.. ಇತ್ಯಾದಿ.

ಬಾಳಪ್ಪನವರ ರಂಗಾನುಭವಕಥನ ಎಂಬ ಆಯಾಮವನ್ನು ಮೀರಿ ಸಂಕಥನ ಚಾಲ್ತಿಯಲ್ಲಿದೆ. ಬಾಳಪ್ಪನವರ ಹುಟ್ಟು, ಬಾಲ್ಯ, ತಂದೆ, ತಾಯಿಯರು, ಒಡಹುಟ್ಟಿದವರ ವೈಯಕ್ತಿಕ ಬದುಕಿನ ವಿವರಗಳಲ್ಲಿ ಕಣ್ಣು ಪಸೆಯಾಗುವ, ಹೃದಯ ಆರ್ದವಾಗುವ ಸಾಲುಗಳಿವೆ. ಬಹುತೇಕ ಸಾಧಕರ ಬದುಕಿನ ಆರಂಭ ಆಕರಗಳು ಬಡತನವೇ ಇರುವಂತೆ ಏಣಗಿ ಬಾಳಪ್ಪನವರು ಸಹ ಆರ್ಥಿಕ ಮುಗ್ಗಟ್ಟಿನ ದಿನಗಳಲ್ಲೆ ಸವರಿಸಿ ಸಾವರಿಸಿ ಬದುಕು ಮಾಡಿದವರು.
ಅನುಕೂಲವಂತರ ಮನೆಯ ಹೆಣ್ಣುಮಗಳಾದ ಬಾಳಪ್ಪನವರ ತಾಯಿಗೆ ಹೊಲದ ಕೆಲಸ ಅನನುಭವದ ಕಾರಣ ಕೆಲಸ ಕೊಟ್ಟ ಸಾಹುಕಾರರು ಒಪ್ಪಿಕೊಳ್ಳಲಿಲ್ಲ. ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದಾಗ, ಅತ್ತ ತಾಯಿಯನ್ನು ಸಮಾಧಾನಿಸಿದ ಬಾಲಕ ಬಾಳಪ್ಪ ‘ಅವ್ವಾ ನಾನು ನಿನ್ನ ಕೂಡ ಕೆಲಸಕ್ಕಿರ‍್ತಿನಿ. ಇಬ್ಬರೂ ದುಡಿದ್ರ ಒಂದೇ ಆಳಿನ ಲೆಕ್ಕ ಸಾಹುಕಾರರು ಕೊಡ್ಲಿ’ ಎನ್ನುತ್ತಾನೆ. ಓದುಗನ ಕರುಳು ಚುರಕ್ಕೆನ್ನುವಂತಿದೆ ಅದು. ತಮ್ಮ ಆತ್ಮಕತೆಯ ನಿರೂಪಣೆಯ ಸಂದರ್ಭ ‘ನಾನು ಓದಿ ವಿದ್ಯಾವಂತನಲ್ಲವಾದುದರಿಂದ ಏನು ಹೇಳಿದರೂ ಅದು ನನ್ನ ಅನುಭವದಿಂದಲೇ ಹೇಳಬೇಕು. ಇದು ನನ್ನ ಮಿತಿ’ ಅನ್ನುವ ಬಾಳಪ್ಪನವರ ಮಾತನ್ನು ದಾಖಲಿಸಿರುವ ಗಣೇಶ್‌ ಅಮೀನಗಡ ಅದೇ ಬಾಳಪ್ಪನವರ ಶಕ್ತಿ ಎಂದು ಬರೆಯದೆಯೇ ಹೇಳಿಬಿಡುತ್ತಾರೆ.
‘ಸಾರ್ಥಕ ದಿನಗಳು’ ಎಂಬ ಶೀರ್ಷಿಕೆಯಡಿ ಬಾಳಪ್ಪನವರು ಹೇಳುವ ರಂಗಭೂಮಿ ಪ್ರವೇಶಿಸುವಾಗಿನ ಬಾಳಪ್ಪ ಹೇಗಿದ್ದ? ರಂಗದ ಜೊತೆಗೆ ಬೆಳೆದು ನಿಂತಿರುವ ಈ ಬಾಳಪ್ಪ ಏನಾಗಿದ್ದಾನೆ? ಇವತ್ತು ನನಗೆ ಬಂದ ಮಾನ-ಸನ್ಮಾನ, ಪ್ರಶಸ್ತಿ-ಪುರಸ್ಕಾರಗಳೆಲ್ಲ ಬಯಸಿ ಪಡೆದವುಗಳಲ್ಲ. ಒಲಿದು ಬಂದಂತವು ಎನ್ನುವ ಮಾತುಗಳು ಪ್ರಶಸ್ತಿಗಳಿಗಾಗಿ ನಡೆಯುವ ಲಾಬಿಯ ಕುರಿತು ಒಂದು ಎಚ್ಚರಿಕೆಯಂತಿದೆ.
ಸಾಮಾನ್ಯ ಬಾಲಕನೊಬ್ಬ ರಂಗಪ್ರವೇಶ ಪಡೆದ ಸನ್ನಿವೇಶ, ಅದಕ್ಕೆ ಪೂರಕವಾಗಿದ್ದ ಪ್ರತಿಭೆ, ನಡೆದ ದಾರಿಯಲ್ಲಿ ಹೆಜ್ಜೆಗುರುತುಗಳನ್ನುಳಿಸುತ್ತಾ ಒಂದೊಂದೇ ಸೋಪಾನಗಳನ್ನೇರುತ್ತಾ ಸಾಧನೆಯ ಗುರಿ ಮುಟ್ಟಿದ ಕಥನವನ್ನು ಇನ್ನಿಲ್ಲದಷ್ಟು ರಮ್ಯವಾಗಿ ಎಲ್ಲೂ ಬೋರ್‌ ಹೊಡೆಸದ ಹಾಗೆ ಲೇಖಕರು ನಿರೂಪಿಸುತ್ತಾ ಹೋಗುತ್ತಾರೆ. ಇಂತಹ ಹೇಳುವಿಕೆ ಮೇಲ್ನೋಟಕ್ಕೆ ಒಬ್ಬ ವ್ಯಕ್ತಿಯ ಆತ್ಮಕತೆಯೆನಿಸಿದರೂ ಆಂತರ್ಯದಲ್ಲಿ ಅದು ಬೇರೆಯೇ ಆಗಿದೆ.
ಒಂದು ಕಾಲಮಾನದ ಸುಮಾರು ತೊಂಬತ್ತು ವರ್ಷಗಳ ದೀರ್ಘ ಅವಧಿಯ ರಂಗಭೂಮಿಯ ಆಗು ಹೋಗುಗಳ ಸಮಗ್ರ ಚಿತ್ರಣವನ್ನೇ ಅವರಿಲ್ಲಿ ಕಟ್ಟುತ್ತಾರೆ. ಉದಾ:- ಬಡಗಿಯ ನಾಟಕ ಎಂಬ ಶೀರ್ಷಿಕೆಯಲ್ಲಿ ಹೇಳುವ ಸಂಗೀತವನ್ನು ಕೈ ಬಿಟ್ಟದ್ದರಿಂದ ಸಂಗೀತದ ತಜ್ಞರಸಿಕರು ದೂರವಾದರು. ವಿದ್ವತ್ತಿನ ಅಭಾವದಿಂದ ಸತ್ವಶಾಲಿ ಲೇಖಕರಿಲ್ಲದೆ ವಿದ್ಯಾವಂತ ಪ್ರೇಕ್ಷಕರು ಸನಿಹಕ್ಕೆ ಬರದಾದರು. ಹೀಗಾಗಿ ವೃತ್ತಿ ರಂಗಭೂಮಿ ಅಪ್ರಬುದ್ಧರ ಹೀನರುಚಿಗಳನ್ನು ಉದ್ದೀಪಿಸಿ ಹೇಗಾದರೂ ಹೊಟ್ಟೆ ತುಂಬಿಸಿಕೊಳ್ಳುವವರ ಸ್ಥಳವಾಯಿತು.
ಫಲವಾಗಿ ವೃತ್ತಿ ರಂಗಭೂಮಿ ಪ್ರತಿಷ್ಠೆಯನ್ನೂ, ಪ್ರೇಕ್ಷಕರನ್ನೂ ಕಳೆದುಕೊಂಡಿತು ಎನ್ನುವ ಮಾತುಗಳು ಆ ದಿನಮಾನಗಳ ರಂಗಭೂಮಿಯ ಪರಿಸ್ಥಿತಿಯನ್ನು, ಅದು ಎದುರಿಸಿದ ಬಿಕ್ಕಟ್ಟುಗಳನ್ನು ಮನವರಿಕೆ ಮಾಡಿಕೊಡುತ್ತಲೇ ಮುಂದಿನ ಸಾಲುಗಳಲ್ಲಿ ಬಾಳಪ್ಪನವರಂತಹ ಮಾಗಿದ ಕಲಾವಿದರು, ಕಲೆಯೇ ಬದುಕೆಂದುಕೊಂಡವರು ಅದನ್ನು ಪರಿಹರಿಸಿಕೊಂಡ ರೀತಿಯನ್ನು ಸಂಕಥಿಸುತ್ತದೆ.
‘ಶ್ರೀ ರಂಗದ ಭೇಟಿ’ ಎನ್ನುವ ಅಖ್ಯಾಯಿಕೆಯಲ್ಲಿ ಅವರು ನಾಟಕಕಾರ ಶ್ರೀ ರಂಗದರನ್ನು ಭೇಟಿಮಾಡಿ ಆಡಿದ ಮಾತುಗಳ ಚಿತ್ರಣವಿದೆ. ಹಾಗೆಯೇ ವೃತ್ತಿರಂಗಭೂಮಿ, ವಿಲಾಸಿ ರಂಗಭೂಮಿಯ ನಡುವಿನ ಈರ್ಷೆ ವೈರತ್ವಗಳ ಕುರಿತು ವಸ್ತುನಿಷ್ಠ ಮಾತುಗಳಿವೆ. ಒಂದೇ ಅಭಿರುಚಿ ಒಂದೇ ರಕ್ತ ಹಂಚಿಕೊಂಡು ಹುಟ್ಟಿದ ಸೋದರರಂತೆ ಇರಬೇಕಾಗಿದ್ದವರು ಎರಡು ಬಣಗಳಾಗಿ ಕುರುಕ್ಷೇತ್ರ ಆಯಿತು ಎಂಬ ನೋವಿನ ನುಡಿಗಳಲ್ಲಿ ರಂಗಭೂಮಿಯ ತಲ್ಲಣದ ಚಿತ್ರಣವೊಂದು ಬಿಚ್ಚಿಕೊಳ್ಳುತ್ತದೆ. ಇಂತಹ ಸನ್ನಿವೇಶವನ್ನು ಗೆದ್ದು ಬರಲು ಬಾಳಪ್ಪನವರು ತಮ್ಮದೇ ಯತ್ನಗಳನ್ನು ಮಾಡಿದ್ದರ ವಿವರಗಳು ಮುಂದಿನ ಪುಟಗಳಲ್ಲಿ ತೆರೆದುಕೊಳ್ಳುತ್ತದೆ.
ಹೀಗೆ ರಂಗಾನುಭವ ಕಥನವೊಂದು, ಆತ್ಮಕಥನವೊಂದು ನಿರೂಪಕನ ಜಾಣ್ಮೆಯಿಂದ ಒಂದು ಕಾಲಘಟ್ಟದ ಆಗುಹೋಗುಗಳ ಸಂಸ್ಕೃತಿಯ ಚಿತ್ರಣವಾಗಿದೆ. ‘ಕಣ್ಣು ತೆರೆಸಿದ ಪ್ರೇಕ್ಷಕ’ ಎಂಬ ಅಖ್ಯಾಯಿನಿಕೆಯಲ್ಲಿ ‘ವಧುವರ’ ನಾಟಕದ ಸಂದರ್ಭವನ್ನು ಹೇಳುವಾಗ ತನ್ನ ಮಗಳ ಮೇಲೆ ಅತ್ಯಾಚಾರವೆಸಗುವ ಸನ್ನಿವೇಶಕ್ಕೆ ಪ್ರೇಕ್ಷಕರೊಬ್ಬರು ಬಾಳಪ್ಪನವರೊಡನೆ ನಡೆಸಿದ ಸಂಭಾಷಣೆ –
‘ಬಾಳಪ್ಪ ನೀವು ಹೆಣ್ಣು ಹಡೆದೀರಲ್ಲ?’ ಎಂದು ಕೇಳುತ್ತಾರೆ.
ಹೌದು ಎಂದು ಬಾಳಪ್ಪ ಉತ್ತರಿಸುತ್ತಾರೆ.
ನೀವು ನಾಟಕದಲ್ಲಿ ಆಡಿದ ಸನ್ನಿವೇಶ ನಿಮ್ಮಿಂದ ಸಾಧ್ಯವೆ?’ ಎಂದು ಕೇಳಿಬಿಟ್ಟಾಗ, ಈ ಮಾತಿನಿಂದ ಮರ್ಮಘಾತವಾಗಿ ಇಂತಹ ಸನ್ನಿವೇಶ ಮಾಡಬಾರದಿತ್ತು ಎಂದು ಪಶ್ಚಾತ್ತಾಪಪಟ್ಟು ಕಥೆಯನ್ನುಬದಲಿಸಿ ನಾಟಕವಾಡಿದೆ ಎನ್ನುತ್ತಾರೆ ಬಾಳಪ್ಪನವರು. ಕಲಾವಿದ ಎಲ್ಲೆಡೆಯಿಂದಲೂ ಕಲಿಯುತ್ತಾನೆ. ಈ ಕಲಿಕೆಯ ಪ್ರಕ್ರಿಯೆ ನಿರಂತರ. ಪ್ರೇಕ್ಷಕನೂ ಅವನ ಗುರುವೆ ಎಂಬ ಸಂದೇಶವನ್ನದು ರವಾನಿಸುತ್ತದೆ. ‘ವೈವಿಧ್ಯ ರಾಗಗಳು’ ಎನ್ನುವ ಶೀರ್ಷಿಕೆಯಲ್ಲಿ ರಂಗಭೂಮಿಯಲ್ಲಿ ಹಾಡುವ ರಾಗಗಳ ಪಟ್ಟಿ ಮಾಡುತ್ತಾ ಯಾವ ಸಂದರ್ಭಕ್ಕೆ ಯಾವ ರಾಗವನ್ನು ಬಳಸುತ್ತಾರೆ, ಅದರ ಹಿನ್ನೆಲೆ ಏನು ಕಂದ ಮತ್ತು ಸೀಸ ಪದ್ಯಗಳೇಂದರೇನು, ಅದರ ಲಕ್ಷಣವೇನು ಇತ್ಯಾದಿಗಳ ವಿವರಣೆ ಇದೆ.

ಪತ್ರಕರ್ತ ಗಣೇಶ್ ಅಮೀನಗಡ


ಸಾಮಾನ್ಯವಾಗಿ ನಾಂದಿ ಹಾಡನ್ನು ಭೀಮ್‌ಪಲಾಸ್, ಯಮನ್, ಬಿಹಾಗ್, ದೇಶಕಾರ್, ಹಮೀರ್ ರಾಗದಲ್ಲಿ ಹಾಡುತ್ತಾರೆ. ‘ಇದರಲ್ಲೇ ಯಾಕೆ ಹಾಡ್ತಾರಂದ್ರ ನಾಟಕ ಆರಂಭವಾಗುವ ವ್ಯಾಳೆ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಗೆ ದಿನದ ವ್ಯಾಳೆದಾಗ ಮೂರು ತಾಸಿನ ಪ್ರಹರ ಅಂತರ‍್ತದ. ಇದಕ್ಕೆ ಹೊಂದಿಕೊಂಡು ಹಾಡ್ತಿದ್ರು. ಮಧ್ಯರಾತ್ರಿಗೆ ಮಾಲ್‌ಕಂಸ, ಬೆಳಗಿನ ಜಾವಕ್ಕೆ ಬಿಂದಾಸ್, ತೋಡಿ, ಭೈರವಿ, ಜೀವನ್‌ಪುರಿ, ಜೋಗಿ ರಾಗಗಳನ್ನು ಹಾಡ್ತಿದ್ರು. ಬಿಹಾರ್‌ರಾಗವನ್ನು ಸಿಟ್ಟಿಗೆ ಬಳಸಿದ್ದಾರೆ. ಮಾಲ್‌ಕಂಸರಾಗದ ವೈವಿಧ್ಯಗಳನ್ನು ವಿಶದವಾಗಿ ಚರ್ಚಿಸುತ್ತಾ ರಂಗಗೀತೆಗಳ ಸಾಹಿತ್ಯವನ್ನೂ ಸಮರ್ಪಕವಾಗಿ ಪುಸ್ತಕದಲ್ಲಿ ಬರೆದಿದ್ದಾರೆ.
ಈ ಕಾರಣ ಆ ದಿನಗಳ ರಂಗಸಂಸ್ಕೃತಿ, ರಂಗಸಾಹಿತ್ಯದ ಒಂದಂದಾಜು ಓದುಗನಿಗೆ ಸುಲಭವಾಗಿ ದಕ್ಕುತ್ತದೆ. ರಂಗಭೂಮಿಯ ಕುರಿತ ಪಿ.ಎಚ್.ಡಿ ಪ್ರಬಂಧಗಳಿಗೆ ಇದೊಂದು ಅತ್ಯಮೂಲ್ಯ ಆಕರಗ್ರಂಥ ಎನ್ನುವುದಲ್ಲಿ ಎರಡು ಮಾತಿಲ್ಲ. ಆ ಕಾಲದಲ್ಲಿ ವೃತ್ತಿ ರಂಗಭೂಮಿಗೆ ಆದ ಪ್ರಭಾವ ಪ್ರೇರಣೆಗಳ ಕುರಿತು ಬಾಳಪ್ಪನವರು ಮಾತಾಡಿದ್ದಾರೆ. ಹವ್ಯಾಸಿ ರಂಗಭೂಮಿಯಿಂದ ಕಂಪನಿ ನಾಟಕಗಳು ಹೇಗೆ ಭಿನ್ನ ಅನ್ನೋ ಕುರಿತು ಹೇಳಿದ್ದಾರೆ.
ರಂಗಸಜ್ಜಿಕೆ, ತಾಲೀಮು, ಪಿಟೀಲು, ತಬಲ, ಹಾರ್ಮೋನಿಯಂಗಳಂಥ ವಾದ್ಯಗಳ ಬಳಕೆಯನ್ನು ಕುರಿತು ವಿಸ್ತಾರವಾಗಿ ಮಾತಾಡಿದ್ದಾರೆ. ಅಂಕದ ಪರದೆಯಲ್ಲಿದ್ದ ದೇವರಚಿತ್ರಗಳು ‘ಕಲಾವೈಭವ’ ಎಂಬ ಅಕ್ಷರಗಳಾಗಿ ಪಲ್ಲಟಿಸಿದ್ದನ್ನು ಹೇಳುತ್ತಾರೆ. ನಾಟಕದಟೆಂಟಿನೊಳಗಿನ ಸೀಟಿನ ವ್ಯವಸ್ಥೆ, ಕುರ್ಚಿಗಳ ಸಂಖ್ಯೆ, ಅದರ ದರವನ್ನು ಕುರಿತು ನಿಖರವಾದ ಮಾಹಿತಿ ಕೊಡುತ್ತಾರೆ. ಅಷ್ಟು ಮಾತ್ರವಲ್ಲದೆ ಹ್ಯಾಂಡ್‌ಬಿಲ್ಲಿನ ಜಾಹೀರಾತಿನ ದಿನಗಳನ್ನು ನೆನಪಿಸುತ್ತಾರೆ.
ನಾಟಕ ಟೆಂಟಿನ ಸ್ಥಳದ ಉದ್ದ ಅಗಲಗಳ ಮಾಹಿತಿ, ಕರಪತ್ರಗಳು ಇತ್ಯಾದಿ. ಈ ಎಲ್ಲವನ್ನು ಒಳಗೊಳ್ಳುತ್ತಾ ಕಥನವು ಬಾಳಪ್ಪನವರ ಬದುಕಿನ ಜೊತೆಗೆ ನಾಟಕ ಸಂಸ್ಕೃತಿಯೊಂದನ್ನು, ವೃತ್ತಿ ರಂಗಭೂಮಿಯ ವೈಭವವೊಂದನ್ನು ಕುರಿತು ಮಾತಾಡುವ ಅಧಿಕೃತ ವಕ್ತಾರನಾಗಿ ಬಿಡುತ್ತದೆ.
‘ತಿರುಗುವಮಂಚ’ ಎಂಬ ಶೀರ್ಷಿಕೆಯಲ್ಲಿ ಮರಾಠಿ ನಾಟಕಗಳಿಂದ ಪ್ರಭಾವ ಪಡೆದು ಸೆಟ್ ಬದಲಾವಣೆಯ ಸಮಯ ಉಳಿಸಲು ತಿರುಗುವ ಮಂಚವನ್ನು ಕನ್ನಡ ನಾಟಕಕ್ಕೆ ಅವಳವಡಿಸಿಕೊಂಡ, ತನ್ಮೂಲಕ ನೂತನ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡ ಏಣಗಿ ಬಾಳಪ್ಪನವರು ಮತ್ತು ರಂಗಭೂಮಿಯ ರೋಚಕ ಇತಿಹಾಸವಿದೆ. ಪುಸ್ತಕದುದ್ದಕ್ಕು ಇಂತಹುದ್ದೇ ಅನೇಕ ರೋಚಕ ಸನ್ನಿವೇಶಗಳ ನಿರೂಪಣೆಯೊಂದಿಗೆ ಬಾಳಪ್ಪನವರ ಆಕರ್ಷಕವಾದ ನಾಟಕದ ಭಾವಚಿತ್ರಗಳಿವೆ.
ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ ಒಬ್ಬನ ರಂಗಾನುಭವ ಮಾತ್ರವಲ್ಲ. ಸ್ವಾತಂತ್ರ್ಯ ಪೂರ್ವದ ಎರಡು ದಶಕಗಳ ಮುಂಚಿನಿಂದ ಇಪ್ಪತ್ತನೆ ಶತಮಾನದ ಅಂಚಿನವರೆಗೆ ಕನ್ನಡದ ರಂಗಸಂಸ್ಕೃತಿಯೊಂದರ ಪ್ರಚ್ಛನ್ನ ಚಿತ್ರಣವಿದು. ರಾಜೀವ್‌ ತಾರಾನಾಥರು ಹೇಳುವಂತೆ ಇದನ್ನು ಓದಿದರೆ ಬಾಳಪ್ಪನವರೆ ನಿಂತಂಗಾಗತ ಎನ್ನುವುದು ನಿಜ. ಈ ಕೃತಿಯ ಹಿಂದೆ ಅಗಾಧ ಶ್ರದ್ಧೆ, ಪರಿಶ್ರಮ, ತಾಳ್ಮೆಗಳಿವೆ. ಎರಡು-ಮೂರು ವರ್ಷ ಏಣಗಿ ಬಾಳಪ್ಪನವರ ಬೆನ್ನು ಹತ್ತಿ ಅವರು ಹೋದಲ್ಲಿ ಹೋಗಿ, ಬಂದಲ್ಲಿ ಬಂದು, ಕೂತಲ್ಲಿ ಕೂತು, ಅವರೊಡನೆ ಹರಟುತ್ತಾ ಸಂಗ್ರಹಿಸಿದ ಮಾಹಿತಿಯಿದು. ಆ ಹಿರಿಯರ ಕುರಿತು ಪ್ರೀತಿ, ಗೌರವ, ರಂಗಭೂಮಿಯ ಕುರಿತು ಸೆಳೆತವಿಲ್ಲದ ಯಾರೂ ಇದನ್ನು ಮಾಡಲಾಗದು.

‍ಲೇಖಕರು avadhi

24 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading