ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲ್ಯದ ಬಾಗಿಲು ಮುಚ್ಚಿದ್ದು ಯಾವಾಗ?

ಬಾಲ್ಯದೊಂದಿಗೆ ಹೀಗೊಂದು ಭೇಟಿ

– ಎಚ್ ಕೆ ಶರತ್

ಕಣ್ಮುಚ್ಚಿ ಕಣ್ಬಿಟ್ಟೆ. ಎದುರು ನಿಟ್ಟುಸಿರಿನ ತೀರ. ಮಾತಿನ ಮೆರವಣಿಗೆ ಹೊರಡುತ್ತಿತ್ತು. ಮಾತೂ ನನ್ನದೇ ಕೇಳುವ ಕಿವಿಯೂ… ವರ್ತಮಾನದ ಉಡುಗೆ ಕಳಚಿಟ್ಟು ಬಾಲ್ಯವೆಂಬ ಬೆತ್ತಲೆ ದೇಹದಲ್ಲಿ ನಿಂತೆ.
ನೆನಪಿನ ಹಾಯಿದೋಣಿ ನಿಟ್ಟುಸಿರಿನ ನದಿ ಮೇಲೆ ಸಾಗುತ್ತಿರುವುದು ಕಣ್ಣಿಗೆ ಬಿತ್ತು. ಹಳೆ ಅಮ್ಮ ನೆನಪಾದಳು. ಅವಳ ಕನವರಿಕೆಗಳು, ಮುಗಿಯದ ಚಡಪಡಿಕೆಗಳು, ನನ್ನ ಕುರಿತಾದ ಹಸಿ ಹಸಿ ಹೊಗಳಿಕೆಗಳು, ಹುಸಿ ತೆಗಳಿಕೆಗಳು ಮನಸ್ಸಿನ ಪರದೆ ಮೇಲೆ ಚಿತ್ತಾರ ಮೂಡಿಸುತ್ತ ಹೋದವು. ಅಪ್ಪನ ಅಟ್ಲಾಸ್ ಸೈಕಲ್ಲು, ಅರ್ಧ ಕಿಲೋಮೀಟರ್ ತಳ್ಳಿದ ಮೇಲಷ್ಟೇ ಸ್ಟಾಟರ್್ ಆಗುತ್ತಿದ್ದ ಟಿವಿಎಸ್ಸು ನೆನಪಿನ ರಸ್ತೆ ಮೇಲೆ ಹಾನರ್್ ಮಾಡುತ್ತ ಸಾಗಿದವು.
ಕಣ್ಬಿಟ್ಟ ಮೊದಲ ಕ್ಷಣ ಗ್ರಹಿಕೆಯ ಗುಡಿಯೊಳಗೆ ಬಂದು ಕೂರಲು ನಿರಾಕರಿಸಿತು. ಕಡೆಯ ಬಾರಿ ಕಣ್ಮುಚ್ಚುವ ಕ್ಷಣ ಬೇಡವೆಂದರೂ ಮನಸ್ಸಿನ ಕದ ತಟ್ಟಿತು. ಭೂತಕಾಲದ ಮಡಿಲಲ್ಲಿ ಮಲಗಲು ಹೊರಟಿದ್ದ ಮನಸ್ಸಿನ ದಿಕ್ಕು ತಪ್ಪಿಸಿ, ಭವಿಷ್ಯದ ಅಗೋಚರ ಹಾದಿಗೆ ದೂಡಿತು. ಸಾವಿನ ಚಿಂತೆಗೆ ಸಾವಿಲ್ಲವೆಂದು ಭಾವಿಸಿ ಬದುಕಿನ ಅತಾರ್ಕಿಕ ಕಸಿವಿಸಿಗೆ ತಾತ್ಕಾಲಿಕ ತಡೆ ಒಡ್ಡಿದೆ.
ವರ್ತಮಾನವೆಂಬ ಬರಡು ಭೂಮಿಯಿಂದ ಮನಸ್ಸಿನ ನಡಿಗೆ ಬಾಲ್ಯವೆಂಬ ಫಲವತ್ತಾದ ನೆಲದೆಡೆಗೆ ಸಾಗಿತು. ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತಿದ ದಿನದ ನೋವು ಕಣ್ಣಂಚಲ್ಲಿ ನಲಿವಾಗಿ ಮಿನುಗಿತು. ಇಷ್ಟದ ಮಿಸ್ಸುಗಳು ನೆನಪಾದರು. ಮಾಡಿದ ಕಿತಾಪತಿಗಳು ಕಣ್ಮುಂದೆ ಸುಳಿದವು.
ನನಗೇ ಅರಿವಿಲ್ಲದಂತೆ ಕಳ್ಳನಾಗಿದ್ದು, ಪಕ್ಕದಲ್ಲಿ ಕೂರುತ್ತಿದ್ದ ಹುಡುಗಿಯ ಬುಕ್ಕುಗಳನ್ನೆಲ್ಲ ಕದ್ದು ದಿನಪೂರ್ತಿ ಕುಕ್ಕರುಗಾಲಲ್ಲಿ ಕಿವಿ ಹಿಡಿದು ನಿಂತು ಗೊಣ್ಣೆ, ಕಂಬನಿಯ ರುಚಿ ಉಂಡಿದ್ದು ಆ ಕ್ಷಣಕ್ಕೆ ಸುಂದರ ನೆನಪಾಗಿ ಹೊರಹೊಮ್ಮಿತು. ನಿನ್ನೆಯ ನರಕ ಇಂದಿನ ಪಾಲಿಗೆ ಸ್ವರ್ಗವಾಗಬಹುದಾದ ಸಂಭಾವ್ಯ ಸಾಧ್ಯತೆಯ ಮೂಲ ಗೋಚರಿಸಿತು.

ಇಷ್ಟದ ಮಿಸ್ಸುಗಳ ಮನವೊಲಿಸಲು ಮಾಡಿದ ಕಸರತ್ತುಗಳು, ಹೊಡೆಯುವುದು ತಮ್ಮ ಜನ್ಮಸಿದ್ಧ ಹಕ್ಕೆಂದು ಭಾವಿಸಿ ಪದೇ ಪದೇ ಕೈ ಕೆಂಪು ಮಾಡುತ್ತಿದ್ದ ಮಿಸ್ಸುಗಳಿಂದ ಪಾರಾಗಲು ಪಡುತ್ತಿದ್ದ ಪ್ರಯಾಸ ನೆನೆದು ಮನಸ್ಸು ಅಗೋಚರ ಉಲ್ಲಾಸ ಅನುಭವಿಸಿತು.
ಅಕಾರಣವಾಗಿ ಹುಟ್ಟಿದ ಮೊದಲ ಪ್ರೀತಿ, ಅವಳು ಕಾಡಿದ ರೀತಿ, ಅವಳ ಒಲವಿನ ತೆಕ್ಕೆಯಲ್ಲಿ ನಾ ಬೆರೆಯಲು ಹಂಬಲಿಸಿ ಪಟ್ಟ ಪಜೀತಿ ವರ್ತಮಾನದ ಎದೆಗೂ ಜೀವ ದಯಪಾಲಿಸಿತು. ‘ಬಾಲ್ಯ’ ಅನುಭವಿಸಿದ ಮೇಲೆ ಕನಸಿನಂತೆ ಮಿನುಗುವ, ದೂರದಲ್ಲಿ ನಿಂತು ಮನಸ್ಸು ಬೆಳಗುವ ಚುಕ್ಕಿಯಂತೆ ಕಂಡಿತು.
ಬಾಲ್ಯದ ಬಾಗಿಲು ಮುಚ್ಚಿದ್ದು ಯಾವಾಗ? ನನ್ನೊಳಗೆ ನಾನು ಪ್ರಶ್ನಿಸಿಕೊಂಡೆ. ಕಾಲ ಎಲ್ಲರ ಗ್ರಹಿಕೆಯಿಂದಲೂ ಜಾರುವುದು ಹೀಗೆ… ಅರಿವಿಗೆ ಮರೆವಿನ ರೂಪ ಕರುಣಿಸಿ.
ವರ್ತಮಾನ ದೂಷಿಸುತ್ತ, ಭೂತಕಾಲ ಆರಾಧಿಸುವುದು ಮನಸ್ಸಿನ ದೌರ್ಬಲ್ಯವೆಂದುಕೊಂಡೆ. ದೌರ್ಬಲ್ಯದ ಮಡಿಲಿನ ತುಂಬ ಹಿತವಾದ ಭಾವದ ಪಕಳೆಗಳು ಹರಡಿಕೊಂಡಿದ್ದರೆ, ಸ್ಪಶರ್ಿಸುತ್ತ ಸುಖಿಸುವುದರಲ್ಲಿ ತಪ್ಪೇನಿದೆ? ಪ್ರಶ್ನೆಯನ್ನು ಪ್ರಶ್ನೆಯ ಪಾಡಿಗೆ ಬಿಟ್ಟು ನಿಟ್ಟುಸಿರಿನ ತೀರದಿಂದ ವರ್ತಮಾನದ ಊರಿಗೆ ಬಂದೆ. ಗದ್ದಲ, ಗೊಂದಲ, ಜನ, ಮನ, ಧನ… ಮನಸ್ಸಿನೊಳಗೆ ಮಾತು ಮರೆಯಾಗಿ ಮೌನ ಆವರಿಸಿತು.
 
 
 

‍ಲೇಖಕರು G

3 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading