ಬಾಲ್ಯದ ಒಂದು ನೆನಪು
ಡಾ. ಎನ್.ಜಗದೀಶ್ ಕೊಪ್ಪ

ಚಕ್ಕು ಬುಕ್ಕು ಅಂತರ್ಜಾಲ ಪತ್ರಿಕೆಯಲ್ಲಿ ನನ್ನ ಕಿರಿಯ ಮಿತ್ರ ಸೃಜನ್ ಬರೆದ ಈ ಮೇಲಿನ ಸರಳ ಸುಂದರ ರೇಖೆಗಳ ಚಿತ್ರ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮನಸ್ಸು ಐವತ್ತು ವರ್ಷಗಳ ಹಿಂದಿನ ಬಾಲ್ಯದ ನೆನಪಿನತ್ತ ಓಡುತ್ತಿದೆ.
ಅವು 1963-64-65ರ ದಿನಗಳು. ಐದಾರು ವರ್ಷದ ನಮ್ಮ ಪಾಲಿಗೆ ಆ ಕಾಲದಲ್ಲಿ ಶಾಲೆಯೆಂದರೆ, ಒಂದು ರೀತಿ ಜೈಲು ವಾಸದ ಅನುಭವ. ಬೆಳಿಗ್ಗೆ ಶಾಲೆಯ ವೇಳೆ ಸಮೀಪಿಸುತಿದ್ದಂತೆ, ತಿಪ್ಪೆಗುಂಡಿಯಲ್ಲಿ ಚಿಟ್ಟೆ ಹಿಡಿಯುತ್ತಾ, ಇಲ್ಲವೇ ಮನೆಯ ಸಮೀಪದ ಮರಗಳ ಮೇಲೆ ಕುಳಿತು ಗೆಳೆಯರ ಜೊತೆ ಹರಟುತ್ತಾ ಕೂತಿರುತಿದ್ದ ನಮ್ಮನ್ನು ಅವ್ವಂದಿರು ಇಲ್ಲವೇ ಅಪ್ಪಂದಿರು ಮನೆಗೆ ಎಳೆತಂದು ಸೊಂಟಕ್ಕೆ ಚಡ್ಡಿ ಸಿಕ್ಕಿಸಿ ಸ್ಕೂಲಿಗೆ ಅಕ್ಷರಶಃ ಸತ್ತು ಹೋದ ಬೀದಿ ನಾಯಿಯನ್ನು ಎಳೆದುಕೊಂಡು ಹೋಗುವ ಹಾಗೆ ರಸ್ತೆಯಲ್ಲಿ ಎಳೆದೊಯ್ಯುತಿದ್ದರು.
ಶನಿವಾರ ಬಂತೆಂದರೆ, ನಮಗೆ ಇನ್ನಿಲ್ಲದೆ ಖುಷಿ. ರಜೆಯ ದಿನಗಳಲ್ಲಿ ಊರಾಚೆಗಿನ ಕೆರೆ ಅಥವಾ ಕೆರೆ ಕೆಳಗಿನ ಕಾನಿ ಹಳ್ಳದಲ್ಲಿ ಈಜುವುದು, ಏಡಿಯನ್ನು ಹಿಡಿದು ಬೇಯಿಸಿ ತಿನ್ನುವುದು, ಇಲ್ಲವೇ ಸೈಕಲ್ ಅಂಗಡಿಯ ಬಳಿ ಹೋಗಿ ಗೋಗೆರೆದು ಸಂಪಾದಿಸಿಕೊಂಡ ಹಳೆಯ ಟೈರ್ ತೆಗೆದುಕೊಂಡು ಬಂಡಿ ಹೂಡುತ್ತಾ ಊರಿನ ಸುತ್ತೆಲ್ಲಾ ಸುತ್ತುವುದು ಹೀಗೆ ನಮ್ಮ ಬಾಲ್ಯ ಸಾಗುತಿತ್ತು.
ಒಮ್ಮೊಮ್ಮೆ ಶಾಲೆಗಳಲ್ಲಿ ಅನಿರೀಕ್ಷಿತವಾಗಿ ರಜೆ ದೊರೆಯುತಿತ್ತು. ಅಂತಹ ದಿನಗಳಲ್ಲಿ ನಮ್ಮಗಳ ಸಂತೋಷಕ್ಕೆ ಮಿತಿಯೇ ಇರುತ್ತಿರಲಿಲ್ಲ. ಯಾರಾದರೂ ರಾಷ್ಟ್ರೀಯ ನಾಯಕರು ನಿಧನ ಹೊಂದಿದರೆ, ನಮ್ಮ ಮೇಷ್ಟ್ರುಗಳು ಅವರುಗಳ ಬಗ್ಗೆ ಒಂದಿಷ್ಟು ಗುಣಗಾನ ಮಾಡಿ, ನಂತರ ಸಂತಾಪ ಸೂಚಿಸಿ ರಜೆ ಘೋಷಿಸುತಿದ್ದರು. ನಾವುಗಳು ಸೊಂಟದ ಉಡುದಾರಕ್ಕೆ ಸಿಕ್ಕಿಸಿದ್ದ ಲಾಡಿ ದಾರವಿಲ್ಲದ ಚಡ್ಡಿ ಕೆಳಕ್ಕೆ ಉದುರಿಹೋಗದಂತೆ ಎಡಗೈಲಿ ಹಿಡಿದುಕೊಂಡು, ಒಡೆದ ಅಥವಾ ಬಿರುಕು ಬಿಟ್ಟ ಚೌಕಟ್ಟಿನ ಸ್ಲೇಟು ಮತ್ತು ಬಳಪ ಇದ್ದ ಕೈಚೀಲವನ್ನು ಬಲಗೈಲಿ ಕವಣೆ ಕಲ್ಲು ತೂರುವ ಹಾಗೆ ಬೀಸುತ್ತಾ ಶಾಲೆಯಿಂದ ಹೊರಬೀಳುತಿದ್ದವು. ಆ ದೃಶ್ಯ ಹೇಗಿರುತಿತ್ತು ಎಂದರೆ, ಬಂದೂಕಿನ ಗುಂಡಿನ ಶಬ್ಧಕ್ಕೆ ಮರದ ಮೇಲಿನ ಹಕ್ಕಿಗಳು ಚದುರಿ ಹಾರಿ ಹೋಗುವ ಹಾಗೆ ಇರುತಿತ್ತು.
ಒಂದು ಘಟನೆಯಂತೂ ನನಗಿನ್ನೂ ಚೆನ್ನಾಗಿ ನೆನಪಿದೆ. ಅದು 196 ನೇ ಇಸವಿ, ಆದರೆ ದಿನಾಂಕ ಮತ್ತು ತಿಂಗಳು ನೆನಪಿಲ್ಲ. ಅಮೇರಿಕಾದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಆಗುಂತಕನೊಬ್ಬನ ಗುಂಡಿಗೆ ಬಲಿಯಾಗಿದ್ದರು. ಅವರು ಭಾರತ ಜನತೆಯ ಅತ್ಯಂತ ಪ್ರೀತಿಗೆ ಪಾತ್ರರಾಗಿದ್ದರು. ಏಕೆಂದರೆ, ಬಡತನ, ಬರ ಮುಂತಾದ ವಿಷಯಗಳಲ್ಲಿ ಕಂಗೆಟ್ಟಿದ್ದ ಅಂದಿನ ಭಾರತಕ್ಕೆ ಅವರು ಅಮೇರಿಕಾದಿಂದ ಉಚಿತವಾಗಿ ಗೋಧಿ, ಹಾಲಿನ ಪೌಡರ್, ಪಾಮ್ ಆಯಿಲ್ ಇವುಗಳನ್ನು ನೀಡುತಿದ್ದರು. ಶಾಲೆಗಳಲ್ಲಿ ಮಕ್ಕಳಿಗೆ ಗೋಧಿ ಉಪ್ಪಿಟ್ಟು ಮತ್ತು ಹಾಲು ವಿತರಿಸಲಾಗುತಿತ್ತು.
ಶಿಕ್ಷಕರು ಕೆನಡಿಯವರ ಸಾವಿನ ಸುದ್ಧಿ ತಿಳಿಸಿ, ಶಾಲೆಗೆ ರಜೆ ಘೋಷಿಸಿದ ಮೇಲೆ ಓಡೋಡುತ್ತಾ ಮನೆಯತ್ತ ಬರುತಿದ್ದ ನನ್ನನ್ನು ಮತ್ತು ಗೆಳೆಯರನ್ನು ಊರಿನ ಮುಖ್ಯ ಬೀದಿಯ ಹೋಟೆಲ್ ಬಳಿ ಕುಳಿತಿದ್ದ ಕೆಲವು ಹಿರಿಯರು ಯಾಕ್ರಲಾ? ಇಸ್ಕೋಲು ಇಲ್ಲವೆ? ಎಂದು ಕೇಳಿದರು.
ನಾನು ಕನ್ನಡಿ ಸತ್ತು ಹೋಯ್ತಂತೆ ಅದಕ್ಕೆ ರಜಾ ಎಂದೆ. ನನ್ನ ಮಾತು ಕೇಳಿ ಅವರಿಗೆಲ್ಲಾ ಆಶ್ಚರ್ಯವಾಯಿತು.
ಏನ್ಲಾ ಮಗಾ? ಕನ್ನಡಿ ಬಿದ್ದು ಒಡೆದು ಹೋದುದಕ್ಕೆ ಇಸ್ಕೂಲ್ ಗೆ ರಜ ಕೊಟ್ರಾ? ಎಂದು ಮತ್ತೆ ಪ್ರಶ್ನೆ ಕೇಳಿದರು.
ಕನ್ನಡಿ ಒಡೆದು ಹೋದುದ್ದಕ್ಕಲ್ಲ ರಜ ಕೊಟ್ಟಿರೊದು, ಸತ್ತು ಹೋಗಿದ್ಕೆ ಕೊಟ್ಟಿರೋದು ಗೊತ್ತಾ? ಎಂದು ಅವರ ತಲೆಯೊಳಕ್ಕೆ ಹುಳ ಬಿಟ್ಟಿದ್ದೆ. ನನಗೆ ರಜೆಯ ಸಂಭ್ರಮದಲ್ಲಿ ಕನ್ನಡಿ ಮತ್ತು ಕೆನಡಿ ನಡುವಿನ ವೆತ್ಯಾಸ ತಿಳಿಯುವ ತಾಳ್ಮೆ ಮತ್ತು ಕುತೂಹಲ ಕೂಡ ಇರಲಿಲ್ಲ.
ರಜೆಯ ದಿನಗಳು ಎಂದರೆ, ನಮ್ಮ ಪಾಲಿಗೆ ಸ್ವರ್ಗದ ದಿನಗಳು. ಬೇಸಿಗೆಯ ರಜಾ ದಿನಗಳಲ್ಲಿ ನಾವು ಭೂಮಿಯ ಮೇಲಿರುವುದಕ್ಕಿಂತ ಹೆಚ್ಚಾಗಿ ಮರದಮೇಲೆ ಇಲ್ಲವೇ ನೀರಿನೊಳಗೆ ಇರುತಿದ್ದವು. ಮರಕೋತಿ ಆಟ ನಮ ್ಮಮೆಚ್ಚಿನ ಆಟವಾಗಿತ್ತು. ಅದು ಬೇಸರವಾದರೆ, ತೋಟಗಳಲ್ಲಿ ಗೊನೆ ಬಿಟ್ಟ ನಂತರ ಕಡಿದು ಹಾಕಿದ್ದ ಬಾಳೆಯ ಗಿಡಗಳನ್ನು ಹೊತ್ತುಕೊಂಡು ಹೋಗಿ ಕೆರೆಯ ನೀರಿಗೆ ಹಾಕಿ ಅದರ ಮೇಲೆ ಕೂರುತ್ತಾ ಇಲ್ಲವೇ ಅಡ್ಡಲಾಗಿ ತಬ್ಬಿ ಹಿಡಿದು ಈಜು ಕಲಿಯುತಿದ್ದವು. ನನ್ನ ಬಹುತೇಕ ಸಹಪಾಠಿಗಳು( ನಾನು ಸೇರಿದಂತೆ) ಈಜುವುದರಲ್ಲಿ ಪ್ರವೀಣರಾದದ್ದು ಬಾಳೆಕಂಬದ ಸಹಾಯದಿಂದ. ನನ್ನೂರು ಕೊಪ್ಪದ ಕೆರೆ ಇಡೀ ಮದ್ದೂರು ತಾಲೋಕಿನಲ್ಲಿ ಅತ್ಯಂತ ದೊಡ್ಡಕೆರೆಯಾಗಿತ್ತು. ಒಂದೂವರೆಯಿಂದ ಎರಡು ಕಿಲೋಮೀಟರ್ ದೂರ ನಿರಂತರ ಈಜುವುದು ನಮಗೆಲ್ಲಾ ಸಾಮಾನ್ಯವಾಗಿತ್ತು.
ಮರಕೋತಿ ಆಟ ಮತ್ತು ಈಜು ಬಿಟ್ಟರೆ,ನಮಗೆಲ್ಲಾ ಇದ್ದ ಇನ್ನೊಂದು ಮೆಚ್ಚಿನ ಹವ್ಯಾಸವೆಂದರೆ, ಸೈಕಲ್ ಬಂಡಿ ಹೂಡುವುದು. ಆಗಿನ ಕಾಲದಲ್ಲಿ ಸೈಕಲ್ ಎಲ್ಲರ ಮನೆಗಳಲ್ಲಿ ಪ್ರತಿಷ್ಟಿತ ವಾಹನವಾಗಿತ್ತು. ಬಹುತೇಕ ಗಂಡುಗಳಿಗೆ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಸೈಕಲ್ ನೀಡುತಿದ್ದರು. ಐನೂರು ರೂಪಾಯಿಗೆ ರ್ಯಾಲಿ ಸೈಕಲ್ ದೊರೆಯುತಿತ್ತು. ವೆಸ್ಪಾ ಸ್ಕೂಟರ್ ಬೆಲೆ 3 ಸಾವಿರ, ಯಜ್ಡಿ ಮೋಟಾರ್ ಬೈಕ್ ಬೆಲೆ 5 ಸಾವಿರ, ರಾಯಲ್ ಎನ್ ಫೀಲ್ಡ್ 7 ಸಾವಿರ ಹಾಗೂ ಅಂಬಾಸೆಡರ್ ಕಾರಿನ ಬೆಲೆ 19 ಸಾವಿರ ರೂಪಾಯಿ ಇದ್ದ ಆ ಕಾಲದಲ್ಲಿ ಊರಿನಲ್ಲಿ ಒಬ್ಬರು ಇಲ್ಲವೇ ಇಬ್ಬರ ಬಳಿ ಮಾತ್ರ ಸ್ಕೂಟರ್ ಇಲ್ಲವೇ ಬೈಕ್ ಇರುತಿದ್ದವು. ಕಾರು ಎಂಬುದು ಕನಸಿನ ಮಾತಾಗಿತ್ತು.
ನನ್ನೂರಿನಲ್ಲಿ ಇದ್ದ ಎರಡು ಸೈಕಲ್ ಶಾಪ್ ಗಳಲ್ಲಿ ಒಂದು ಮಹಮ್ಮದ್ ಪೀರ್ ಎಂಬ ಮಸಲ್ಮಾನನದು, ಇನ್ನೊಂದು ನನ್ನ ಸಂಬಂಧಿಕನಾದ ದೊಳ್ಳಣ್ಣ ಎಂಬ ವ್ಯಕ್ತಿಯದಾಗಿತ್ತು. ನನ್ನ ಮನೆಯಲ್ಲಿ ಸೈಕಲ್ ಇಲ್ಲದ ಕಾರಣ ಒಂದು ಹಳೆಯ ಸೈಕಲ್ ಟೈರ್ ಸಂಪಾದಿಸುವುದಕ್ಕಾಗಿ ಸಂಜೆ ವೇಳೆ ಶಾಲೆ ಬಿಟ್ಟ ನಂತರ ದೊಳ್ಳಣ್ಣನ ಅಂಗಡಿಗೆ ಹೋಗಿ ಅವನ ಬಳಿ ಇದ್ದ ಬಾಡಿಗೆ ಸೈಕಲ್ಗಳನ್ನು ಒರೆಸುವುದು ಇಲ್ಲವೇ ಅಂಗಡಿ ಬಾಗಿಲು ಮುಚ್ಚುವಾಗ ಸೈಕಲ್ ತೆಗೆದು ಅಂಗಡಿ ಒಳಗೆ ನಿಲ್ಲಿಸುವುದು ಮಾಡುತಿದ್ದೆ. ಇಂತಹ ವಿನಯದ ಕೆಲಸದಿಮದ ದೊಳ್ಳಣ್ಣನಿಂದ ಒಂದು ಹಳೆಯ ಟೈರ್ ಸಂಪಾದಿಸಿದ್ದೆ. ಆಗ ಅದು ನನ್ನ ಪಾಲಿಗೆ ಮಸರ್ಿಡಿಸ್ ಕಾರ್ ಇದ್ದಂತೆ. ನನ್ನ ಕೆಲ ಗೆಳೆಯರು ತಮ್ಮ ಮನೆಯ ಹಳೆಯ ಸೈಕಲ್ ಗಳ ಟೈರ್ ಬದಲು ಅದರ ಚಕ್ರವನ್ನೆ ತಂದು ನನ್ನೆದುರು ನಿಲ್ಲಿಸಿ ಹೊಟ್ಟೆ ಉರಿಸುತಿದ್ದರು.
ಊರಿನ ನಡುರಸ್ತೆಯಲ್ಲಿ ಕೈಯಲ್ಲಿ ಒಂದು ಮುರಿದ ಕಬ್ಬಿನ ತುಂಡು ಇಲ್ಲವೇ ಕೋಲು ಹಿಡಿದು ಕೊಂಡು ಟೈರಿನ ಚಕ್ರಕ್ಕೆ ಟಪ ಟಪ ಎಂದು ಹೊಡೆಯುತ್ತಾ ಓಡುತಿದ್ದರೆ, ಸೆವೆದು ಹೋಗಿ, ಟೈರಿನ ಎರಡು ಬದಿಯಲ್ಲಿ ಹೊಂದಿಸಿಲಾಗಿದ್ದ ಕಬ್ಬಿಣದ ತಂತಿಗಳು ತುಂಡಾದ ಕಾರಣ ಟೈರಿನ ಚಕ್ರ ನನ್ನ ಹೊಡೆತ ತಾಳಲಾರದೆ ಸೊಂಟ ಮುರಿದುಕೊಂಡ ಮುದುಕಿಯಂತೆ ಓಡುತಿತ್ತು. ಉಳಿದ ಗೆಳೆಯರ ಸೈಕಲ್ ರಿಮ್ ಇದ್ದ ಚಕ್ರಗಳು ವೇಗವಾಗಿ ಚಲಿಸುತಿದ್ದವು. ಈ ಕಾರಣಕ್ಕಾಗಿ ನನ್ನ ಬಂಡಿಗೆ ನನ್ನೂರು ಕೊಪ್ಪ ಮಾರ್ಗವಾಗಿ ಮಂಡ್ಯದಿಂದ ಬೆಂಗಳೂರಿಗೆ ಹೋಗುತಿದ್ದ ಪಂಚಲಿಂಗೇಶ್ವರ ಎಕ್ಸ್ಪ್ರಸ್ ಎಂಬ ಬಸ್ಸಿನ ಹೆಸರನ್ನು ಇಡಲು ಗೆಳೆಯರು ಬಿಡುತ್ತಿರಲಿಲ್ಲ.
ಆ ಕಾಲದಲ್ಲಿ ನನ್ನೂರಿಗೆ ಬರುತಿದ್ದದು ಕೇವಲ ನಾಲ್ಕೇ ಬಸ್ಸುಗಳು. ಒಂದು ಲಕ್ಷ್ಮೀ ನರಸಿಂಹ. ಎರಡು ಲಕ್ಷ್ಮೀವೆಂಕಟೇಶ್ವರ, ಮೂರನೆಯದು ವೀರಭದ್ರೇಶ್ವರ ಮತ್ತು ನಾಲ್ಕನೆಯದು ಮಹಾಲಕ್ಷ್ಮಿ ಎಂಬ ಲಡಾಸಿ ಬಸ್ಸು. ಆ ಕಾಲಕ್ಕೆ ಬಸ್ಸುಗಳ ವೇಗ ಹೇಗಿತ್ತೆಂದರೆ, ಕೊಪ್ಪ-ಮದ್ದೂರು ನಡುವಿನ 18 ಕಿ.ಮಿ.ದೂರಕ್ಕೆ ಒಂದೂವರೆ ಗಂಟೆ ಮತ್ತು ಕೊಪ್ಪ- ಮಂಡ್ಯ ನಡುವಿನ 28 ಕಿ.ಮಿ. ದೂರಕ್ಕೆ ಮೂರು ಗಂಟೆ ಸಮಯ ಹಿಡಿಯುತಿತ್ತು. ಕೊಪ್ಪ-ಕುಣಿಗಲ್ ನಡುವಿನ 42 ಕಿ,ಮಿ ದೂರ ಕ್ರಮಿಸಲು ಮಹಾ ಲಕ್ಷ್ಮಿ ಬಸ್ ಐದು ಗಂಟೆ ತೆಗೆದುಕೊಳ್ಳುತಿತ್ತು. ಪಂಚಲಿಂಗೇಶ್ವರ ಬಸ್ ಮಾತ್ರ ಮಂಡ್ಯ-ಬೆಂಗಳೂರಿನ ನಡುವಿನ 128 ಕಿ.ಮಿ.ಯನ್ನು ಕೇವಲ ನಾಲ್ಕು ಗಂಟೆಯಲ್ಲಿ ತಲುಪುತಿತ್ತು. ಹಾಗಾಗಿ ನನ್ನ ಸೈಕಲ್ ಬಂಡಿಗೆ ಮಹಾಲಕ್ಷ್ಮಿ ಬಸ್ ಎಂಬ ಹೆಸರೇ ಶಾಶ್ವತವಾಗಿ ಉಳಿದುಹೋಯಿತು.
ನನ್ನ ಬಾಲ್ಯದ ಬಹು ದೊಡ್ಡ ಕನಸೆಂದರೆ, ಒಂದು ಹೊಸ ಸೈಕಲ್ ಚಕ್ರ ಖರೀದಿಸುವದಾಗಿತ್ತು. ಈಗ ಸೈಕಲ್ ಏಕೆ? ಲಾರಿ ಚಕ್ರವನ್ನೇ ಖರೀದಿಸಬಹುದು. ಆದರೆ ಅವುಗಳನ್ನ ರಸ್ತೆಯಲ್ಲಿ ಹೇಗೆ ಹೂಡುವುದು? ಅದೇ ನನ್ನ ಪಾಲಿಗೆ ಯಕ್ಷ ಪ್ರಶ್ನೆ. ಒಮ್ಮೆ ಕತ್ತಲೆಯಲ್ಲಾದರೂ ಸೈಕಲ್ ಟೈರಿನ ಚಕ್ರ ಓಡಿಸಬೇಕೆಂಬ ಆಸೆಯಾಗುತ್ತಿದೆ.
ಊರಿಗೆ ಹೋದಾಗ ಬಾಲ್ಯದಲ್ಲಿ ನಡೆದಾಡಿದ ಜಾಗ, ಈಜಾಡಿದ ಕೆರೆ, ಮರಕೋತಿ ಆಟವಾಡಿದ ಮರಗಳು ಎಲ್ಲವನ್ನು ಒಮ್ಮೆ ಕಂಡು ಬರುತ್ತೀನಿ. ಇದರ ಬಗ್ಗೆ ಆ ಕಾಲದ ನನ್ನ ಬಾಲ್ಯದ ಒಡನಾಡಿ, ಇವೊತ್ತಿನ ಕನ್ನಡದ ಸೂಕ್ಷ್ಮ ಸಂವೇದನೆಯ ಹಿರಿಯ ಕಥೆಗಾರ, ಕಾದಂಬರಿಕಾರ ಕೆ. ಸತ್ಯನಾರಯಣ ಅವರಿಗೆ ವರದಿ ಒಪ್ಪಿಸುತ್ತೇನೆ. ನಾವಿಬ್ಬರೂ ಒಂದೇ ಬೀದಿಯ ಆಚೆ-ಈಚೆಗಿನ ಮನೆಗಳಲ್ಲಿ ಬೆಳೆದವರು. ಕೇಂದ್ರ ಆದಾಯ ತೆರಿಗೆ ಇಲಾಖೆಯ ಆಯುಕ್ತರಾಗಿರುವ ಕೆ.ಸತ್ಯನಾರಾಯಣ ದೂರದ ಮುಂಬೈನಲ್ಲಿರಲಿ, ಕೊಲ್ಲಾಪುರದಲ್ಲಿರಲಿ( ಈಗ ಬೆಂಗಳೂರಿನಲ್ಲಿದ್ದಾರೆ) ನಾನು ಊರಿಗೆ ಹೋಗಿ ಬಂದ ತಕ್ಷಣ ಪೋನ್ ಮಾಡಿ ಊರಿನ ಕೆರೆ, ಅದರ ಬಳಿ ಇದ್ದ ಕಾಲುವೆ, ಕಾಲುವೆ ಸೋಪಾನಗಳ ಎರಡು ಬದಿಗೆ ಕಟ್ಟಿದ್ದ ಇಳಿಜಾರಿನ ರಕಣಾಗೋಡೆ, ಈಶ್ವರನ ದೇವಸ್ಥಾನ, ಕೆರೆ ಕೆಳಗಿನ ಸೋಮೇಶ್ವರನ ದೇವಸ್ಥಾನ ಅವುಗಳ ಪಕ್ಕ ಇದ್ದ ಅಶ್ವತ ಕಟ್ಟೆ, ಬಿಲ್ವ ಪತ್ರೆ ಮರ, ಅರಳಿ ಮರದೊಳಗೆ ಗೂಡು ಕಟ್ಟಿಕೊಂಡು ವಾಸಿಸುತಿದ್ದ ಗಿಣಿಗಳು ಎಲ್ಲವನ್ನು ವಿಚಾರಿಸುತ್ತಾರೆ. ಅವುಗಳ ಬಗ್ಗೆ ಮಾತನಾಡುತ್ತಾ ನಾವಿಬ್ಬರೂ ಅರಿವಲ್ಲದಂತೆ ನಮ್ಮ ಹಳೆಯ ನೆನಪುಗಳಿಗೆ ಜಾರಿಬಿಡುತ್ತೇವೆ.
ಕಾಲದ ಹೊಡೆತ ಮತ್ತು ಆಧುನಿಕತೆಯ ರಕ್ಕಸನ ಮುಷ್ಟಿಗೆ ಸಿಲುಕಿದ ನನ್ನೂರಿನ ಚಹರೆ ಈಗ ಗುರುತು ಹಿಡಿಯಲಾರದಷ್ಟು ಬದಲಾಗಿ ಹೋಗಿದೆ. ಹುಟ್ಟಿದೂರಿಗೆ ಮತ್ತು ಈಗಿನ ನನ್ನೂರ ತಲೆಮಾರಿಗೆ ನಾವು ಗೆಳೆಯರೆಲ್ಲಾ ಅಪರಿಚಿತರಾಗಿದ್ದೇವೆ. ಆದರೆ, ಬಾಲ್ಯದಲ್ಲಿ ನಮ್ಮನ್ನು ಮೈದಡವಿ ಸಲುಹಿದ್ದ ಆ ಗಿಡ ಮರ, ರಸ್ತೆ, ಕಾಲುವೆ, ಕೆರೆ, ಕುಂಟೆ ಇವೆಲ್ಲಾ ಇನ್ನೂ ಜೀವಂತವಾಗಿವೆ. ಊರಿಗೆ ಹೋದಾಗ ಒಮ್ಮೆ ಅವುಗಳನ್ನು ಕಂಡು ಬಂದರೆ ಸಾಕು; ಉರಿವ ಎದೆಯ ಗಾಯಕ್ಕೆ ತಣ್ಣನೆಯ ಮುಲಾಮು ಹಚ್ಚಿದಂತಾಗುತ್ತದೆ. ಇದೊಂದೇ ನೆಮ್ಮದಿಯ ಸಂಗತಿ.








ಕನ್ನಡಿ ಒಡೆದು ಹೋದುದ್ದಕ್ಕಲ್ಲ ರಜ ಕೊಟ್ಟಿರೊದು, ಸತ್ತು ಹೋಗಿದ್ಕೆ ಕೊಟ್ಟಿರೋದು ಗೊತ್ತಾ? ಎಂದು ಅವರ ತಲೆಯೊಳಕ್ಕೆ ಹುಳ ಬಿಟ್ಟಿದ್ದೆ…..
ನಕ್ಕೂ ನಕ್ಕೂ ಸಾಕಾಯ್ತು ಸರ್.ಒಳ್ಳೆಯ ಲೇಖನ ಓದಲು ಕೊಟ್ಟಿದ್ದಕ್ಕೆ ಧನ್ಯವಾದ
srujan draws beautifully, but the illustration mentioned in the beginning of this article was drawn by me 🙂
apara,
ಅನಿಸಿತ್ತು.better indicate name somewhere, somehow in the drawings.
ಅಪಾರೆ ಅವರೇ, ತಪ್ಪು ತಿಳಿಯಬೇಡಿ. ನನ್ನ ಮಿರ್ಜಾ ಗಾಲಿಬ್ ಮತ್ತು ಉಮರ್ ಖಯಾಮನ ಕೃತಿಗಳಿಗೆ ಮತ್ತು ಅಲ್ಲಿನ ಎಲ್ಲಾ ಕವಿತೆಗಳಿಗೆ ಸೃಜನ್ ಚಿತ್ರ ಬರೆದಿದ್ದರು. ನನಗೆ ಅದೇ ಹೋಲಿಕೆ ಕಂಡುಬಂತು, ನಾನು ನಿಮ್ಮ ಮುಖಪುಟ ವಿನ್ಯಾಸಗಳನ್ನು ಗಮನಿಸಿದ್ದೇನೆ ಹೊರತು, ನಿಮ್ಮ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಲ್ಲ.
ಜಗದೀಶ್ ಕೊಪ್ಪ, ಧಾರವಾಡ.