ಸ್ವರ್ಣ ಎನ್ ಪಿ
ಆಪ್ತಸಮಾಲೋಚನೆ ಅಥವಾ ಕೌನ್ಸೆಲ್ಲಿಂಗ್ ಏಕೆ ಬೇಕು ? ಯಾರಿಗೆ ಬೇಕು ? ತಿಂದುಂಡು ಹಾಯಾಗಿರುವ ಬಾಲ್ಯಕ್ಕೂ ಸಮಸ್ಯೆಯೇ ? ಮಕ್ಕಳಿಗೆ ಆಪ್ತ ಸಮಾಲೋಚಕರ ಅಗತ್ಯವಿದೆಯೇ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೇನೆ. ಪ್ರಯತ್ನದ ಭಾಗವಾಗಿ ನಾನು ಕಂಡ ,ಕೇಳಿದ ಕೆಲವು ಘಟನೆಗಳು ನೆನಪಾದವು , ಈ ಘಟನೆಗಳಲ್ಲಿ ಉತ್ತರ ಅವಿತು ಕುಳಿತಿರಬಹುದಾದ್ದರಿಂದ ಅವುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ .
ಒಂದು : ಒಂದು ಹುಡುಗಿ. ವಯಸ್ಸು ಹದಿಮೂರು ಅಂತಿಟ್ಟುಕೊಳ್ಳಿ.ಕೆಳ ಮಧ್ಯಮವರ್ಗದ ಕುಟುಂಬ.ಪ್ರತಿಷ್ಟಿತ ಶಾಲೆಗೆ ಸೇರಿಸಿದ ತಾಯಿ ತನ್ನ ಬಡತನದ ಕಾರಣ ಕೊಟ್ಟು ಅಲ್ಲಿನ ಫೀಸಿನಲ್ಲಿ ರಿಯಾಯಿತಿ ಕೇಳುತ್ತಾಳೆ. ಬಣ್ಣ ಮಾಸಿದ ಸೀರೆಯುಟ್ಟು , ಸ್ಕೂಲಿನ ಮುಖ್ಯಸ್ಥರ ಮುಂದೆ ಸೆರಗೊಡ್ಡಿ ದೈನ್ಯದಿಂದ ಬೇಡುವ ತಾಯಿಯ ಚಿತ್ರ ಮಗುವಿನ ಮನಸ್ಸನ್ನು ಕಲಕುತ್ತದೆ . ವ್ಯವಹಾರಜ್ಞಾನ ಉಳ್ಳ ತಾಯಿ ನಾಲ್ಕಾರು ಒಳ್ಳೆಯ ಸೀರೆಗಳಿದ್ದರೂ ಮಗುವಿನ ಸ್ಕೂಲಿಗೆ ಮಾತ್ರ ಮಾಸಲು ಸೀರೆಗಳನ್ನೇ ಉಟ್ಟು ಬರುತ್ತಾಳೆ , ಕಾಣದ ಬಡತನವನ್ನು ಲೋಕ ನಂಬಲ್ಲ ! ಚಂದಗೆ ಅಲಂಕರಿಸಿಕೊಂಡು ಬರುವ ಗೆಳತಿಯರ ತಾಯಂದಿರ ನಡುವೆ ತನ್ನಮ್ಮ ಸಪ್ಪೆ ಎಂದು ಹುಡುಗಿ ನಿರ್ಧರಿಸುತ್ತಾಳೆ . “ಅಮ್ಮಾ ನೀ ಶಾಲೆಗೆ ಬರಬೇಡ “ ಎಂದು ತಾಕೀತು ಮಾಡುತ್ತಾಳೆ . ಕೆಲ ಕಾಲ ಸುಮ್ಮನಿದ್ದ ತಾಯಿ ಒಮ್ಮೆ ಶಾಲೆಗೆ ಹೋಗಲೇ ಬೇಕಾಗಿ ಬಂದಾಗ ಶಿಕ್ಷಕರೊಬ್ಬರ ಬಳಿ ಮಗಳ ಬಗ್ಗೆ ದೂರುತ್ತಾಳೆ . ಹುಡುಗಿಯನ್ನು ಕರೆದ ಶಿಕ್ಷಕಿ ತಾಯಿಯ ಮಹತ್ವದ ಬಗ್ಗೆ ತಿಳಿಸಿ ಮಗಳದ್ದು ಸರ್ವಥಾ ತಪ್ಪು ಎಂದು ಬೈದು ಬುಧ್ಧಿ ಹೇಳುತ್ತಾರೆ . ಕನಸು ಕಟ್ಟುತ್ತಿದ್ದ ಕಂಗಳಲ್ಲಿ ನೂರಾರು ಪ್ರಶ್ನೆಗಳು, ಸಂಬಂಧಗಳನ್ನು ಒಪ್ಪಿಕೊಳ್ಳಲಾಗದ ಹಿಂಸೆ ಒಂದು ಕಡೆ, ಒಪ್ಪಿಕೊಂಡರೆ ಲೋಕ ಏನಂದೀತು ಎಂಬ ಪ್ರಶ್ನೆ ಮತ್ತೊಂದು ಕಡೆ .

ಇಲ್ಲಿ ಯಾರದ್ದೂ ತಪ್ಪಲ್ಲ . ತಾಯಿಗೆ ಮಗಳ ಬಗ್ಗೆ ಕಾಳಜಿ ಇದೆ , ಅದಕ್ಕಾಗಿ ಆಕೆ ಏನು ಮಾಡಬಹುದೋ ಅದನ್ನು ಚಾಚೂ ತಪ್ಪದೇ ಮಾಡುತ್ತಿದ್ದಾಳೆ , ಒಂದು ರೀತಿಯಲ್ಲಿ ಬುಧ್ಧಿ ಹೇಳಿದ ಶಿಕ್ಷಕರೂ ಸರಿಯೇ . ಹಾಗಿದ್ದರೆ ಹುಡುಗಿಯದ್ದು ತಪ್ಪೇ ? ನನ್ನ ಮಟ್ಟಿಗೆ ಖಂಡಿತಾ ಅಲ್ಲ. ಸದಾ ಕಾಲ ಮಕ್ಕಳೊಂದಿಗೆ ಬೆರೆಯುವ ಶಿಕ್ಷಕಿ ಆ ಮಗುವಿಗಷ್ಟೇ ಅಲ್ಲ ತಾಯಿಗೂ ಕೆಲವು ಮಾತುಗಳನ್ನು ಹೇಳಬೇಕಾಗಿತ್ತು. “ಮಗೂ ಆಕೆ ನಿನ್ನ ತಾಯಿ , ಆಕೆ ಎಷ್ಟು ಕಷ್ಟ ಪಡುತ್ತಿದ್ದಾಳೆ ನೋಡು … “ ಅಂತ ತಾಯಿಯ ಕಷ್ಟ ಕೋಟಲೆಗಳನ್ನು ವಿವರಿಸಿದಂತೆಯೇ , ಆ ಹುಡುಗಿಗೆ ಸಮಾಜದ ಎದುರು ಎಲ್ಲವನ್ನೂ ಒಪ್ಪಿಕೊಳ್ಳುವ ಧೈರ್ಯ ಬರುವವರೆಗೂ ಆಕೆಯೊಂದಿಗೆ ನಿಲ್ಲಬೇಕಿತ್ತು . ಆದರೆ ಹಾಗಾಗಲಿಲ್ಲ ಅಂದಿನಿಂದ ಆ ಹುಡುಗಿ ಚಿಪ್ಪಿನ ಹನಿಯಾದಳು ವರ್ಷ ವರ್ಷ ಕಳೆದರೂ ಮುತ್ತಾಗಲಿಲ್ಲ .
ಕೆಲ ವಾರಗಳ ಹಿಂದೆ ಕುಸುಮಬಾಲೆ ಬರೆದ ಬರಹವೂ , ಒಂದಷ್ಟು ಸಹಾಯ ಮಾಡಿ ಮಕ್ಕಳಲ್ಲಿ ಸಮಾಜ ತುಂಬುವ ಈ ಅನವಶ್ಯಕ ದೈನ್ಯದ ಬಗ್ಗೆ ಇತ್ತು .
ಎರಡು: ತಂದೆ ಇಲ್ಲದ ಮನೆಯಲ್ಲಿ ಸಾಲಾಗಿ ಹೆಣ್ಣುಮಕ್ಕಳು. ಬದುಕನ್ನು ಕಟ್ಟಿಕೊಳ್ಳಲು ತಾಯಿಯೊಂದಿಗೆ ಇನ್ನಿಲ್ಲದಂತೆ ಶ್ರಮಿಸುತ್ತಿದ್ದರು . ಮಧ್ಯೆ ಪರಸ್ಪರ ಪ್ರೀತಿಸುವುದನ್ನು , ನಂಬುವುದನ್ನು ಮರೆತಿದ್ದರು. ಹೈಸ್ಕೂಲ್ ಓದುವ ಹುಡುಗಿಯರು ಯಕಶ್ಚಿತ್ ಲಂಗದ ಲಾಡಿಗೆ ಜಗಳವಾಡಿ ವರ್ಷಗಟ್ಟಳೆ ಮಾತು ಬಿಟ್ಟಿದ್ದರು. ಒಬ್ಬರ ಏಳಿಗೆಯನ್ನು ಮತ್ತೊಬ್ಬರು ಸಹಿಸದೇ ಇರುವುದು ಬಾಲ್ಯದಲ್ಲಿಯೇ ಆರಂಭವಾದ ಗುಣ. ಕಂಡ ಎಲ್ಲರಿಗೂ ಮೂಡುತ್ತಿದ್ದ ಒಂದು ಪ್ರಶ್ನೆ , ಇವರು ನಿಜವಾಗಿಯೂ ಒಟ್ಟಿಗೆ ಹುಟ್ಟಿದ್ದು ಹೌದಾ ?
ಕೂಡಿ ಬಾಳುವ ಬಂಧಗಳ ಬಗ್ಗೆ ಮೊದಲು ತಿಳಿಯುವುದು ತಾಯಿ ತಂದೆಯರಿಂದ ಆ ಮನೆಯಲ್ಲಿ ತಂದೆ ಇರಲಿಲ್ಲ ತಾಯಿಗೆ ಬಾಳಿನ ಹೋರಾಟಗಳಿಂದ ಪುರುಸೊತ್ತು ಸಿಗುತ್ತಿರಲಿಲ್ಲ . ಅಕ್ಕ ತಂಗಿಯರು ಬೇರೆ ಬೇರೆ ದಿಕ್ಕುಗಳಲ್ಲೇ ಬೆಳೆದು ಬಾಳುತ್ತಿದ್ದಾರೆ.
ಆ ಹುಡುಗಿಯರಿಗೆ ಬೇಕಿದ್ದು ಬದುಕಿನ ಬಗ್ಗೆ ಒಂದಷ್ಟು ಭರವಸೆ , ಪರಸ್ಪರ ಪ್ರೀತಿ ಎಂಬುದು ಬದುಕಿನ ತಳಹದಿ ಎಂಬ ತಿಳುವಳಿಕೆ . ಅದನ್ನು ಯಾರೂ ಕೊಡಬಹುದಿತ್ತು . ಸಂಬಂಧಿಗಳು , ನೆರೆಹೊರೆಯವರು , ಶಿಕ್ಷಕರು ಸುತ್ತಲಿನ ಸಮಾಜದ ಯಾವುದೇ ವ್ಯಕ್ತಿ , ಹಾಗಲಿಲ್ಲ . ಒಂದಷ್ಟು ಬದುಕುಗಳು ಪ್ರೀತಿ ಕಾಣಲಿಲ್ಲ .
ಮೂರು: ತೆಂಗಿನ ಮರದಂತೆ ಬೆಳೆದ ಸುಂದರ ಹುಡುಗಿ . ಕನಸು ಕಾಣುವ ವಯಸ್ಸು . ರಜೆಗೆ ಅಜ್ಜಿಯ ಊರಿಗೆ ಹೋದಾಗ ಸಿಕ್ಕ ಮನೆ ಮಾಲಿಕರ ಮಗ , ಶ್ರೀಮಂತ ಸೊಗಸುಗಾರ . ದಿನವೂ ಯಾವುದೋ ನೆಪ ಹೇಳಿ ಹುಡುಗಿ ಮನೆ ಮಾಲಿಕರ ಮನೆಗೆ ಓಡುತ್ತಿದ್ದಳು . ಹುಡುಗ ಮತ್ತು ಹುಡುಗಿ ದೊಡ್ಡ ಮನೆಯ ಮೂಲೆಯಲ್ಲೆಲ್ಲೋ ಇದ್ದ ಕೋಣೆಯಲ್ಲಿ ಕಾಣೆಯಾಗುತ್ತಿದ್ದರು. ಇದು ಬಹುಬೇಗ ಅಜ್ಜಿಯ ಅನುಭವಿ ಕಣ್ಣಿಗೆ ಬಿದ್ದಿತು . ರೇಗಾಡಿ , ರಂಪ ಮಾಡಿದ ಅಜ್ಜಿ ಹಾಗೆ ಓಡುವುದೇಕೆ ತಪ್ಪು ಎಂಬುದನ್ನು ಮೊಮ್ಮಗಳಿಗೆ ತಿಳಿಸಿಕೊಡುವುದರಲ್ಲಿ ಸೋತಳು .
ಮೊಮ್ಮಗಳೂ ಅದನ್ನು ಮರೆತು ಮುನ್ನಡೆದಳು ಆದರೆ ಅವಳಲ್ಲಿ ಹೆಣ್ಣು ಗಂಡಿನ ಸಂಬಂಧದ ಬಗೆಗೆ ತಪ್ಪು ತಿಳುವಳಿಕೆಯೊಂದು ಮೊಳೆತಿತ್ತು . ಗಂಡು ಹೆಣ್ಣಿನ ಸ್ನೇಹವನ್ನು ಅವಳು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈಗ ಅವಳಿಗೊಬ್ಬ ಚಂದನೆಯ ಮಗಳು. ಅವಳಿನ್ನೂ ಅದೇ ಅನುಮಾನದ ಬಂಧಿ.
“ಮಗು ದೇಹದ ಆಸೆಗಳಿಗೆ ಕಿವಿಕೊಡುವ ಸಮಯವೂ ಬರುತ್ತದೆ , ಅಲ್ಲಿಯವರೆ ತಾಳ್ಮೆಯಿಂದಿರು. “ ಎಂದು ಸ್ವಲ್ಪ ಅಜ್ಜಿ ಅಥವಾ ಯಾರೇ ಹಿರಿಯರು ತಿಳಿಸಿಕೊಟ್ಟಿದ್ದರೆ ಅವಳಲ್ಲಿ ಅನುಮಾನದ ಭೂತ ಮನೆ ಮಾಡುತ್ತಿರಲಿಲ್ಲ. ಅದು ಅವಳ ಮಗಳನ್ನೂ ಕಾಡುವ ಮಟ್ಟಕ್ಕೆ ಹೋಗುತ್ತಿರಲಿಲ್ಲ .
ನಾಲ್ಕು: ಮನೆಯಲ್ಲಿ ಕೊನೆಯ ಮಗನೆಂಬ ಮುದ್ದಿನಿಂದಲೇ ಹಾಳಾದ ಹುಡುಗನೊಬ್ಬ. ಪ್ರತೀ ಬಾರಿ ಪರೀಕ್ಷೆ ಫೇಲಾದಾಗ, ಇಲ್ಲ ಸಲ್ಲದ ಯಡವಟ್ಟುಗಳೊಂದಿಗೆ ಮನೆಗೆ ಬಂದಾಗ ತಾಯಿ ಇಲ್ಲವೇ ತಂದೆ “ಸಣ್ಣವನು , ಅವನಿಗೇನೂ ತಿಳಿಯದು” ಎಂಬ ಪೊಳ್ಳು ಸಮಜಾಯಿಷಿ ಕೊಟ್ಟು, ಕಡೆಗೆ ಹುಡುಗ ಎಲ್ಲಿಯೂ ಸಲ್ಲದವನಾದ .
“ಮಗನೇ ನಿನ್ನನ್ನು ಪ್ರೀತಿಸುತ್ತೇವೆ ನಿಜ ಆದರೆ ನಿನ್ನೆಲ್ಲಾ ಉಡಾಫೆಯ ವರ್ತನೆಗಳನ್ನು ಸಹಿಸುವುದಿಲ್ಲ “ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದರೆ ? ತಂದೆ ತಾಯಿಗೆ ಮಗನ ಮುಂದಿನ ಬದುಕಿನ ಚಿಂತೆ ತಪ್ಪುತ್ತಿತ್ತು .
ಕೊಂಚ ಕಣ್ಣು ಕಿವಿ ತೆರೆದು ಕೊಂಡರೆ ಇಂತಹ ಎಷ್ಟೋ ಮಕ್ಕಳು ನಮ್ಮ ಸುತ್ತ ಕಾಣಬಹುದು. (ಹಾಗೆ ಕಾಣದಿರಲಿ ಎಂಬುದು ನನ್ನ ಪ್ರಾರ್ಥನೆ) ಇಂತಹ ಮಕ್ಕಳಿಗೆ ಕೌನ್ಸೆಲ್ಲಿಂಗ್ ಓದಿಕೊಂಡ ವೃತ್ತಿಪರ ಕೌನ್ಸೆಲ್ಲರ್ಗಳೇ ಬೇಕಿಲ್ಲ . ಬದುಕನ್ನು ಕಂಡ , ಅವರ ಮಾತನ್ನು ತಾಳ್ಮೆಯಿಂದ ಆಲಿಸಬಲ್ಲ, ಅವರಿಗರ್ಥವಾಗುವಂತೆ ವಿವರಿಸಬಲ್ಲ ಎಲ್ಲರೂ ಅವರ ಬಾಲ್ಯವನ್ನು ,ತಾರುಣ್ಯವನ್ನು ಸುಂದರವಾಗಿಸಬಹುದು. ಈದೀಗ ತಾನೇ ಚಿಗುರುತ್ತಿರುವ ಗಿಡಕ್ಕೆ ಪೋಷಣೆಯ ಅಗತ್ಯ ಹೆಚ್ಚು .
ತಮ್ಮನೋ ತಂಗಿಯೋ ಹುಟ್ಟಿದ ಮೇಲೆ ಅಮ್ಮನಲ್ಲಾಗುವ ಬದಲಾವಣೆಯಿಂದ ಅಣ್ಣ, ಅಂಕಲ್ಲು ಎಂಬೆಷ್ಟೋ ವೇಷದಲ್ಲಿ ಕಾಡುವ ಮೃಗಗಳ ತನಕ ಮಕ್ಕಳಿಗೆ ಹೇಳಿಕೊಳ್ಳಲು ಬಾರದ ನೋವುಗಳಿವೆ . ಅವುಗಳಿಗೆ ಸರಿಯಾದ ಸಮಯಕ್ಕೆ ಒಂದಷ್ಟು ಮುಲಾಮು ಸಿಕ್ಕರೆ ಆರೋಗ್ಯವಂತ ಸಮಾಜವೊಂದು ನಿರ್ಮಾಣವಾದೀತು. ಹಿಂದೆ ಮಕ್ಕಳಿಗೆ ಮನೆಯಲ್ಲಿ ಅಜ್ಜ , ಅಜ್ಜಿಯರಿದ್ದರು ಅವರು ಸಮಾಲೋಚಕರ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ . ಬಹು ಮಟ್ಟಿಗೆ ಇದು ಸತ್ಯವೂ ಆಗಿರಬಹುದು . ಇಂತಹ ಪಾತ್ರಗಳು ಮರೆಯಾದ / ಮರೆಯಾಗುತ್ತಿರುವ ಈಗಿನ ಸನ್ನಿವೇಶದಲ್ಲಿ ಬೇರೊಬ್ಬರು ಆ ಪಾತ್ರದ ಹೊಣೆಹೊರಲು ಬೇಗ ತಯಾರಾದರೆ ನಾವು ಕಂಡ ನಾಳಿನ ಕನಸುಗಳಿಗೆ ಒಂದಷ್ಟು ಕಸುವು ಸಿಕ್ಕುತ್ತದೆ.






ಲೇಖನದಲ್ಲಿನ ಅನುಮಾನಗಳು, ಪ್ರಶ್ನೆಗಳು ಸಮಂಜಸವಾಗಿವೆ. ನನಗೆ ಅನಿಸುವಂತೆ ಅದು ಬಾಲ್ಯವಿರಲಿ, ಹದಿಹರೆಯ ಅಥವಾ ಮಧ್ಯವಯಸ್ಸಿರಲಿ- ಬಹುತೇಕ ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಒಬ್ಬ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ನ ಅವಶ್ಯಕತೆ ಬರಬಹುದು. ಬರುತ್ತದೆ. ಆದರೆ ನಾನು ನೋಡಿದ ಹಾಗೆ ಭಾರತೀಯ ಕೌಟುಂಬಿಕ ವಾತಾವರಣದಲ್ಲಿ ಒಂದು ಕೆಟ್ಟ ಸಂಪ್ರದಾಯವಿದೆ. ಅದು ಕೌನ್ಸೆಲಿಂಗ್ ಗೆ ಸಂಬಂಧಪಟ್ಟಿದ್ದು. ಅದು ತಾಯಿ-ಮಗಳ ಗುಪ್ತ ಮಾತುಕತೆ ಆಗಿರಬಹುದು, ತಂದೆ-ಮಗನ ಮಂತ್ರಾಲೋಚನೆ ಇರಬಹುದು ಅಥವಾ ಅಜ್ಜಿ-ಮೊಮ್ಮಗಳ ಮಾತುಕತೆ ಇರಬಹುದು. ಸಮಸ್ಯೆಯೊಂದರ ಪರಿಹಾರಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟವರೊಂದಿಗೆ ನಮ್ಮ ಮಾತುಕತೆ ಅಥವಾ ಪರಿಹಾರ ಅಥವಾ ‘ತೋಡ್’ ಯಾವತ್ತೂ ನೇರವಾಗಿರುವದಿಲ್ಲ. ನಿರ್ದಿಷ್ಟವಾಗಿರುವದಿಲ್ಲ. ಅದು ಬಹಳಷ್ಟು ಸಲ ಬೀಟಿಂಗ್ ಅರೌಂಡ್ ದಿ ಬುಶ್ ಅನ್ನುವ ರೀತಿಯಲ್ಲಿರುತ್ತದೆ..
ವಯಸ್ಸಿನ ಕುತೂಹಲಕ್ಕೋ ಅಥವಾ ಹುಡುಗಾಟದ ಬುದ್ಧಿಯಿಂದಲೋ ವಿರುದ್ಧ ಲಿಂಗದೊಂದಿಗೆ ಬೆರೆಯುವ ಮಕ್ಕಳನ್ನು ಎದುರಿಗೆ ಕೂಡಿಸಿಕೊಂಡು ನಾವು ಯಾವತ್ತಾದರೂ ಮಾತನಾಡಿದ್ದುಂಟಾ? ಗೆಳೆತನ, ಪ್ರೀತಿ, ಮೋಹ ಮತ್ತು ಕಾಮಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಅವರಿಗೆ ಅರ್ಥವಾಗುವ ಹಾಗೆ ಅವರದೇ ಶೈಲಿಯಲ್ಲಿ ಬಿಡಿಸಿ ಹೇಳಿದ್ದುಂಟಾ? ಹುಡುಗಾಟದಲ್ಲಿ ಅವಧಿಗೆ ಮುನ್ನವೇ ಗರ್ಭಿಣಿಯಾದರೆ ವಿದ್ಯಾಭ್ಯಾಸದ ಗತಿ ಏನು, ಶಾರೀರಿಕ ಸಮಸ್ಯೆಗಳೇನು ಮತ್ತು ಸಾಮಾಜಿಕ ಪರಿಣಾಮಗಳೇನು ಎಂಬುದರ ಬಗ್ಗೆ ನೇರಾನೇರವಾಗಿ ಯಾವಾತ್ತಾದರೂ ವಿವರಿಸಿದ್ದುಂಟಾ?
ಊರಲ್ಲಿನ ಹುಡುಗ ಇಂಜಿನೀರಿಂಗ್ ಕಲಿಯಲು ಬೆಂಗಳೂರಿಗೆ ಕಾಲಿಟ್ಟಿದ್ದ. ಒಂದಿನ ಯಾವುದೋ ರಸ್ತೆಯ ಫುಟ್ ಪಾತ್ ನಲ್ಲಿ ಸ್ನೇಹಿತರೊಂದಿಗೆ ಸಿಗರೇಟು ಸೇದುತ್ತಿರುವಾಗ ನನ್ನ ಕೈಗೆ ಸಿಕ್ಕುಬಿದ್ದ. ಗಾಬರಿಯಿಂದ ತಡಬಡಿಸುತ್ತಿದ್ದಾಗ ನಾನೇ ನಿರಾಳಮಾಡಿದೆ. ಸಿಗರೇಟು ಸೇದಲು ನಿನಗಿನ್ನೂ ಸಾಕಷ್ಟು ಆಯಸ್ಸಿದೆ. ಆದರೆ ನಿನ್ನ ಹಣದಲ್ಲಿ ಸೇದುವಂತಾಗು. ಅಪ್ಪ ಕಳಿಸುವ ಹಣದಲ್ಲಿ ಸೇದಬೇಡ, ನಾನೇನೂ ನಿನ್ನ ಮನೆಗೆ ಫೋನು ಮಾಡಿ ಈ ವಿಚಾರ ಹೇಳುವದಿಲ್ಲ ಅಂತ ನಗಾಡಿದೆ. ನಿಜಹೇಳಬೇಕೆಂದರೆ, ಆತನಿನ್ನೂ ಸಿಗರೇಟನ್ನು ಆಡಿಕ್ಟ್ ಮಾಡಿಕೊಂಡಿರಲಿಲ್ಲ. ಇವತ್ತು ಆತ ಒಬ್ಬ ಆರ್ಕಿಟೆಕ್ಟ್. ಸಿಗರೇಟು ಸೇದುತ್ತಾನೋ ಇಲ್ಲವೋ ಗೊತ್ತಿಲ್ಲ. ಸೇದಿದರೂ ಅವನ ದುಡ್ಡಿನಲ್ಲಿ ಸೇದುತ್ತಾನೆ ಅನ್ನುವ ಖಾತ್ರಿಯಿದೆ.
-Rj
ಲೇಖನ ಚೆನ್ನಾಗಿದೆ. ಈ “ಕೌನ್ಸೆಲಿಂಗ್” ನ ಬಗ್ಗೆ ……. ಇನ್ನೂ ಎಷ್ಟೋ ಜನರಲ್ಲಿ ತಪ್ಪು ಕಲ್ಪನೆ ಇರುವಂತೆ ಕಂಡುಬರುತ್ತದೆ. ಉಪದೇಶ ಅಂತ ತಿಳಿದವರೇ ಹೆಚ್ಚು. ಮನುಷ್ಯನ ಸ್ವಭಾವದಲ್ಲೇ ….ಉಪದೇಶವನ್ನು ಸ್ವ್ವೀಕರಿಸುವ ಗುಣ ಇದ್ದಂತಿಲ್ಲ….. “ಹೀಗೆ ಮಾಡು…” ಅಂದರೆ …”ಯಾಕೆ ಮಾಡಬೇಕು….?? “……”ಮಾಡಬೇಡ ….” ಅಂದರೆ …..”ಮಾಡಿದರೆ ಏನಾಗ್ತದೆ….?? ” ಎನ್ನುವ ಪ್ರಶ್ನೆಗಳು ಹುಟ್ಟಿಯೇ ಹುಟ್ಟುತ್ತವೆಯೋ ಏನೋ ….!! ಎಷ್ಟೋ ಸಂದರ್ಭದಲ್ಲಿ ….ಕೆಲವು ” ಕೌನ್ಸೆಲಿಂಗ್ ತಜ್ಞ ” ರನ್ನು ನೋಡಿದಾಗ …..”ಇವರಿಗೆ ಕೌನ್ಸೆಲಿಂಗ್ ಯಾರು ಮಾಡುವುದಪ್ಪಾ ….!!” ಎನ್ನುವ ಭಾವನೆ ನಮ್ಮಲ್ಲಿ ಮೂಡುವುದನ್ನೂ ಕಾಣುತ್ತೇವೆ……….ಕೌನ್ಸೆಲಿಂಗ್ ಅಂದರೆ …. … “ಸ್ವ ವಿಶ್ಲೇಷಣೆ ” ಎನ್ನುವ ಅರಿವು ಇದ್ದಂತಿಲ್ಲ …..ಆದರೆ ಅದಕ್ಕೆ ದಾರಿ ತೋರಿಸುವ ಇನ್ನೊಂದು “ಕೈಕಂಬ” ಅನಿವಾರ್ಯ…. … ಮತ್ತೆ ಕೌನ್ಸೆಲಿಂಗ್ ಬೇಕಾದ್ದು ಮಕ್ಕಳಿಗಂತೂ ಅಲ್ಲವೇ ಅಲ್ಲ ….. ” ನಾವು ಹಿರಿಯರು, ….ತಿಳಿದವರು, ಮಕ್ಕಳಿಗೆ ಕಲಿಸಿಕೊಡುವವರು ….. ಎನ್ನುವುದೇ ಪರಮ ಸತ್ಯ ….” ಎಂದು ತಿಳಿದ ನಮಗೆ …. ಅಂತ ……. ಒಂದು ಅನಿಸಿಕೆ ಅಷ್ಟೆ ….. “
Good one.. 🙂