ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಅನುವಾದಿತ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸಿದೆ.
ಬಿ ಶಿವಾನಂದ ಅವರು ಬರೆದ ʼಬುಕರ್ ಬಾನುʼ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.
ಈ ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.
-ಪುರುಷೋತ್ತಮ ಬಿಳಿಮಲೆ
ಲಂಡನ್ ನಗರದ ಟೇಟ್ ಮಾಡರ್ನ್ (Tate Modern)ನಲ್ಲಿ, ಬಾನು ಮುಸ್ತಾಕ್ ಅವರಿಗೆ ಮೇ ೨೦, ೨೦೨೫ರಂದು ಅಂತಾರಾಷ್ಟ್ರೀಯ ಖ್ಯಾತಿಯ ಬೂಕರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಅನುವಾದಕಿ ದೀಪಾ ಭಾಸ್ತಿ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಿದ ಆನಂತರ ಮಾತಾಡಿದ ಬಾನು ಮುಷ್ತಾಕ್ ಅವರು ʼತಮ್ಮ ಗೆಲುವು ಭಾರತದ ವೈವಿಧ್ಯಗಳಿಗೆ ಸಂದ ಗೆಲುವುʼ ಎಂದು ಹೇಳಿದರು. ಪ್ರಶಸ್ತಿ ನೀಡಿದ ಬೂಕರ್ ಸಮಿತಿಯ ತೀರ್ಪುಗಾರರು ʼಬಾನು ಮುಸ್ತಾಕ್ ಅವರು ಸಮಾಜದ ಹೊರವಲಯದಲ್ಲಿರುವವರ ಜೀವನವನ್ನು ತಮ್ಮ ಬರಹಗಳಲ್ಲಿ ಶೋಧಿಸುತ್ತಾರೆ. ಹಾಗಾಗಿ ಸಹಜವಾಗಿಯೇ ಅವರ ಕತೆಗಳು ಕೊನೆಯಿಲ್ಲದ ಭಾವನಾತ್ಮಕ ಮತ್ತು ನೈತಿಕ ತೂಕವನ್ನು ಹೊಂದಿವೆʼ ಎಂದು ಬಣ್ಣಿಸಿದರು. ಇನ್ನೊಬ್ಬ ತೀರ್ಪುಗಾರರು ಬಾನು ಕತೆಗಳ ಪಾತ್ರಗಳನ್ನು ʼಬದುಕು ಮತ್ತು ಸ್ಥಿತಿಸ್ಥಾಪಕತ್ವದ ಅದ್ಭುತ ಭಾವಚಿತ್ರಗಳುʼ ಎಂದು ಕೊಂಡಾಡಿದರು.
ದೀಪಾ ಭಾಸ್ತಿಯವರ ಅನುವಾದದ ಬಗ್ಗೆ ಟಿಪ್ಪಣಿ ಮಂಡಿಸಿದ ಜ್ಯೂರಿ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್ ಅವರು ತಮ್ಮ ಅನುವಾದಕರ ಟಿಪ್ಪಣಿಯಲ್ಲಿ ಇಂಗ್ಲಿಷಿನ ಬಹುಳತೆಯ ಬಗ್ಗೆಯೂ ಬಹಳ ಒಳನೋಟಗಳುಳ್ಳ ಮಾತುಗಳನ್ನು ಆಡಿದರು. ಮೇಲಿನ ನಾಲ್ಕು ಜನರ ಹೇಳಿಕೆಗಳು ವರ್ತಮಾನದ ಭಾರತದ ಸಾಂಸ್ಕೃತಿಕ ಸಂದರ್ಭಗಳನ್ನು ಅತ್ಯಂತ ನಿಖರವಾಗಿ ವ್ಯಾಖ್ಯಾನಿಸುತ್ತವೆ.
ಬಾನು ಅವರು ಅರ್ಪಿಸಿದ ʼಭಾರತದ ವೈವಿಧ್ಯಗಳಿಗೆʼ ಎರಡು ಆಯಾಮಗಳಿವೆ. ಮೊದಲನೆಯದು, ಭಾರತದ ಬಹುತ್ವವನ್ನು ಆಗು ಮಾಡುತ್ತಿರುವ ಅಸಂಖ್ಯಾತ ಧರ್ಮಗಳು, ಭಾಷೆಗಳು, ಜಾತಿಗಳು, ಬುಡಕಟ್ಟುಗಳು, ಸಂಪ್ರದಾಯಗಳು, ಆಹಾರ ಪದ್ಧತಿಗಳು, ಭೌಗೋಳಿಕ ವಿನ್ಯಾಸಗಳು ಇತ್ಯಾದಿಗಳನ್ನು ಗುರುತಿಸಿ ಗೌರವಿಸುವ ಮನೋಭಾವವನ್ನು ಬೆಳೆಸಲು ಆಶಿಸುವುದು. ವೈವಿಧ್ಯಗಳನ್ನು ನಿರಾಕರಿಸುವ ಪ್ರವೃತ್ತಿ ಹೆಚ್ಚು ಹೆಚ್ಚು ಕಾಣುತ್ತಿರುವ ಇಂದಿನ ಸಂದರ್ಭದಲ್ಲಿ ಬಾನು ಕೊಟ್ಟಿರುವ ಸಂದೇಶಕ್ಕೆ ಬಹಳ ಮಹತ್ವವಿದೆ. ಎರಡನೆಯ ಅಂಶವೆಂದರೆ, ಭಾರತದ ವೈವಿಧ್ಯಮಯ ಲೋಕವು ನಿಧಾನವಾಗಿಯಾದರೂ ಅಕ್ಷರ ಲೋಕಕ್ಕೆ ಪ್ರವೇಶ ಪಡೆಯುತ್ತಿರುವ ರೀತಿ. ಸಾವಿರಾರು ವರ್ಷಗಳಿಂದ ಇದೇ ಮಣ್ಣಲ್ಲಿ ವಾಸಿಸುತ್ತಿರುವ ದಲಿತರು, ಮಹಿಳೆಯರು, ಮತ್ತು ಕೆಲವು ಹಿಂದುಳಿದ ಸಮುದಾಯಗಳು ಈಗಷ್ಟೇ ಅಕ್ಷರ ಲೋಕಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಹಾಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮೊದಲ ಬಾರಿಗೆ ನಾವು ಇದುವರೆಗೆ ಕೇಳಿರದ ಕಥನಗಳಿಗೆ ಕಿವಿಯಾಗುತ್ತಿದ್ದೇವೆ.
ಮೇಲಿನ ಮಾತುಗಳು ಭಾರತದ ಮುಸ್ಲಿಂ ಲೇಖಕರಿಗೂ ಅನ್ವಯವಾಗುತ್ತದೆ. ಸುಮಾರು ೧೩೦೦ ವರ್ಷಗಳಿಂದ ಭಾರತದಲ್ಲಿಯೇ ವಾಸಿಸುತ್ತಿರುವ ಮುಸ್ಲಿಮರು ಭಾರತೀಯ ಬಹುಳತೆಯ ಭಾಗವೇ ಆಗಿದ್ದರೂ ಅದನ್ನು ಒಪ್ಪಿಕೊಳ್ಳಲು ಬಹಳ ಜನ ಇಂದಿಗೂ ಸಿದ್ಧರಿಲ್ಲ. ಭಾರತದ ಸಂವಿಧಾನವು ಇಲ್ಲಿಯ ಬಹುಳತೆಯನ್ನು ಒಪ್ಪಿಕೊಳ್ಳುತ್ತದೆ. ಇಷ್ಟಿದ್ದರೂ ಭಾರತೀಯ ಮುಸ್ಲಿಮರು ಇವತ್ತು ಅತ್ಯಂತ ಗಂಭೀರವಾದ ಸವಾಲುಗಳಿಗೆ ಮುಖಾಮುಖಿಯಾಗುತ್ತಿದ್ದಾರೆ. ಅವರನ್ನು ʼಅನ್ಯʼರೆಂದು ಕಾಣಲು ಜನರನ್ನು ಪ್ರಚೋದಿಸಲಾಗುತ್ತಿದೆ. ಹೀಗಾಗಿ ಸಂವಿಧಾನದ ರಕ್ಷಣೆಯಿದ್ದರೂ ಇವತ್ತು ಭಾರತದಲ್ಲಿ ಮುಸ್ಲಿಮನಾಗಿ ಬದುಕುವುದು ಸವಾಲಿನ ಸಂಗತಿಯಾಗಿದೆ. ಅವರು ಪ್ರತಿದಿನವೂ ಆರೋಪ, ಅನುಮಾನ, ಮತ್ತು ಬೆದರಿಕೆಗಳ ನಡುವೆ ಬದುಕಬೇಕಾಗಿದೆ.
ಹಲವಾರು ಸ್ಥಳಗಳಲ್ಲಿ, ಮುಸ್ಲಿಮರು ಬಹುಸಂಖ್ಯಾತ ಸಮುದಾಯಗಳ ಆದ್ಯತೆಗಳಿಗೆ ಬದ್ಧರಾಗಿ ಬದುಕಬೇಕೆಂಬ ಅಪ್ರಜಾಸತ್ತಾತ್ಮಕ ಉಪದೇಶಗಳನ್ನು ನೀಡಲಾಗುತ್ತಿದೆ. ಮುಸ್ಲಿಮರ ಉಡುಗೆ ತೊಡುಗೆ, ಭಾಷೆ ಮತ್ತು ಸಂಸ್ಕೃತಿಯ ಮೇಲೆ ನಿರಂತರ ಧಾಳಿಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಣೆ, ಮತದಾರರ ಪಟ್ಟಿಯಿಂದ ಅವರ ಹೆಸರುಗಳು ಕಾಣೆಯಾಗುವುದು, ಕ್ರಿಸ್ತಶಕ 1206 ರಿಂದ 1857 ರವರೆಗಿನ ಅವಧಿಯ ಮಧ್ಯಕಾಲೀನ ಭಾರತದ ಇತಿಹಾಸವನ್ನು ಅಳಿಸಿಹಾಕುವುದು- ಇತ್ಯಾದಿ ಘಟನೆಗಳನ್ನು ನಾವು ನಿತ್ಯವೂ ಓದುತ್ತಿದ್ದೇವೆ. ಇಂಥ ಗಂಭೀರ ಸವಾಲುಗಳ ನಡುವೆ ಇವತ್ತು ಮುಸ್ಲಿಂ ಲೇಖಕರು ಬರೆಯಬೇಕಾಗಿದೆ.

ಈ ಸಮಸ್ಯೆ ಮುಸ್ಲಿಂ ಮಹಿಳೆಯರ ವಿಷಯಕ್ಕೆ ಬಂದಾಗ ದ್ವಿಗುಣಗೊಳ್ಳುತ್ತದೆ. ಅವರು ಮನೆಯೊಳಗೆ ಗಂಡಸರಿಂದಲೂ, ಮನೆಯ ಹೊರಗಡೆಗೆ ಸಮಾಜದಿಂದಲೂ ಬಗೆ ಬಗೆಯ ಒತ್ತಡಗಳನ್ನು ಇದಿರಿಸಬೇಕಾಗುತ್ತದೆ. ಇಂಥ ದಯನೀಯ ಸಂದರ್ಭದಲ್ಲಿ ಮುಸ್ಲಿಂ ಲೇಖಕಿಯರ ಕಣ್ಮುಂದೆ ನಾವ್ಯಾರೂ ಊಹಿಸಲಾಗದಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಸ್ತ್ರೀದ್ವೇಷವು ಮುಸ್ಲಿಂ ಸಮುದಾಯದೊಳಗೂ ಕಾಣಸಿಗುತ್ತದೆ.
ಬಹುಸಂಖ್ಯಾತರು ಇಡೀ ಮುಸ್ಲಿಂ ಸಮುದಾಯವನ್ನು ʼಶತ್ರುʼ ಎಂದು ಪರಿಗಣಿಸಿದಾಗ ಮುಸ್ಲಿಂ ಮಹಿಳೆಯರು ಇನ್ನಷ್ಟು ಅಂಚಿಗೆ ಸರಿಯುತ್ತಾರೆ. ಇದರಿಂದ ಹೊರಬರುವ ಹಾದಿಗಳನ್ನು ಮುಸ್ಲಿಂ ಮಹಿಳೆಯರು ನಿಧಾನವಾಗಿಯಾದರೂ ಕಂಡುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಬಾನು ಮುಸ್ತಾಕ್ ಅವರ ಕತೆಗಳೇ ಸಾಕ್ಷಿ. ಹೊರಗಿನಿಂದ ಮತ್ತು ಒಳಗಿನಿಂದ ಬರುತ್ತಿರುವ ಅಸಾಮಾನ್ಯ ಒತ್ತಡಗಳನ್ನು ಅವರು ಹೋರಾಟ ಮತ್ತು ಬರವಣಿಗೆಗಳ ಮೂಲಕ ಎದುರಿಸುತ್ತಿದ್ದಾರೆ.
ಧಾರ್ಮಿಕ ಸಂಪ್ರದಾಯವಾದ ಮತ್ತು ಆಳವಾದ ಪಿತೃಪ್ರಧಾನ ಚಿಂತನಾಕ್ರಮದ ಮಿತಿಗಳನ್ನೂ ಅವು ದಿಟ್ಟವಾಗಿ ಓದುಗರ ಮುಂದಿಡುತ್ತವೆ. ಅವರ ಕತೆಗಳಲ್ಲಿ ಸಹೋದರರನ್ನು ನೋಡಿಕೊಳ್ಳಲು ಮತ್ತು ತಾಯಿಗೆ ಸಹಾಯ ಮಾಡಲು ಓದಿಗೆ ವಿದಾಯ ಹೇಳುವ ಅಮಾಯಕ ಹೆಣ್ಣು ಮಕ್ಕಳಿದ್ದಾರೆ, ಮಕ್ಕಳನ್ನು ಮತ್ತು ತಮ್ಮನ್ನು ಉಳಿಸಿಕೊಳ್ಳಲು ಹೆಣಗಾಡುವ ಅಮ್ಮಂದಿರಿದ್ದಾರೆ, ಅತಿಯಾಗಿ ಕೆಲಸ ಮಾಡುವ ಹೆಂಗುಸರಿದ್ದಾರೆ, ಅಭ್ಯಾಸಕ್ಕಿಂತ ಹೆಚ್ಚು ಬೋಧನೆಯನ್ನೇ ಬಯಸುವ ಮೌಲ್ವಿಗಳಿದ್ದಾರೆ.
ಒಂದು ಕತೆಯಲ್ಲಂತೂ ಹೆರಿಗೆಯ ನಂತರ ಸುಸ್ತಾಗಿರುವ ನಿರೂಪಕಿ ದೇವರಲ್ಲಿ ʼ ನೀನು ಒಮ್ಮೆಯಾದರೂ ಹೆಣ್ಣಾಗು ಪ್ರಭುವೇʼ ಎಂದು ಬೇಡಿಕೊಳ್ಳುತ್ತಾಳೆ. ನಿಷ್ಕ್ರಿಯವಾಗಿ ಬಲಿಪಶುಗಳಾಗುವ ಬದಲು ಶಾಂತಿಯುತ ನಾಗರಿಕ ಪ್ರತಿರೋಧಗಳನ್ನು ದಾಖಲಿಸುವುದು ಅವರ ಉದ್ದೇಶ. ಲಂಡನ್ನಲ್ಲಿ ಬಾನು ಹೇಳಿದ ಒಂದು ಮಾತು ವಿಶ್ವದಾದ್ಯಂತ ಪ್ರತಿಧ್ವನಿಸಿತು. ಅದೆಂದರೆ- ʼನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಈ ಲೋಕದಲ್ಲಿ ಸಾಹಿತ್ಯವು ನಾವು ಪರಸ್ಪರರ ಮನಸ್ಸಿನಲ್ಲಿ ಬದುಕಬಹುದಾದ ಕೊನೆಯ ಪವಿತ್ರ ಸ್ಥಳಗಳಲ್ಲಿ ಒಂದನ್ನು ನಿರ್ಮಿಸುತ್ತದೆʼ. ಇದು ದಣಿದ ಜನರಲ್ಲಿ ಭರವಸೆಯ ಹಾದಿಯೊಂದನ್ನು ತೆರೆದಿದೆ.
ಕೇಳಲಾಗದ ಕತೆಗಳನ್ನು ಹೇಳಿದ್ದು ಮತ್ತು ಹೇಳಲಾಗದ ಕತೆಗಳನ್ನು ಬರೆದದ್ದು, ಇವರೆಡೂ ಬಾನು ಕನ್ನಡಕ್ಕೆ ಕೊಟ್ಟ ಅತಿ ದೊಡ್ಡ ಕೊಡುಗೆ.






ಧನ್ಯವಾದಗಳು