-ಜಿ ಎನ್ ಮೋಹನ್
‘ಬಾದಲ್ ಸರ್ಕಾರ್ ಇನ್ನಿಲ್ಲ’ ಎಂಬ ಸುದ್ದಿ ಬರುವ ವೇಳೆಗೆ ನಾವಾಗಲೇ ಎ ಡಿ ಎ ರಂಗಮಂದಿರದ ಒಳಗೆ ಇದ್ದೆವು. ಬಾದಲ್ ಸರ್ಕಾರ್ ಗೆ ಸಾಕಷ್ಟು ಹೆಸರು ತಂದುಕೊಟ್ಟ ‘ಹತ್ತಮಲ ಕೇ ಅಸ್ ಪಾರ್’ ನಾಟಕವನ್ನ ಡಾ ಎಸ್ ವಿ ಕಶ್ಯಪ್ ‘ಹಂಬಲ್ಪುರ’ ಹೆಸರಿನಲ್ಲಿ ರಂಗವೇರಿಸಲು ಸಜ್ಜಾಗಿದ್ದರು. ‘ಹಂಬಲ್ಪುರ’ ಎನ್ನುವ ಹೆಸರೇ ನನ್ನ ಕುತೂಹಲ ಕೆರಳಿಸಿತು. ಆದರೆ ಆ ವೇಳೆಗಾಗಲೇ ನಾನು ಕಶ್ಯಪ್ ಬರೆದ ‘ಅರ್ಬುಧ ಕಾಡು’ ನಾಟಕವನ್ನು ನೋಡಿದ್ದೆ. ಆ ನಾಟಕದ ಬಿಗಿ ಸ್ಕ್ರಿಪ್ಟ್, ಇದ್ದ ಕಾಮಿಕ್ ಗುಣ, ಸರಳ ಸಂವಹನ ಶಕ್ತಿ ಇವು ‘ಹಂಬಲ್ಪುರ’ದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳುವಂತೆ ಮಾಡಿತ್ತು.
‘ಬಾದಲ್ ಸರ್ಕಾರ್ ಅವರನ್ನು ಅನುವಾದಿಸುತ್ತಾ, ಅನುವಾದಿಸುತ್ತಾ ನಾನು ಅವರ ಪ್ರೀತಿಗೆ ಬಿದ್ದೆ’ ಎಂದು ಕಶ್ಯಪ್ ಗದ್ಗಧಿತನಾಗಿ ಬಣ್ಣಿಸುತ್ತಿದ್ದಾಗ ನನಗೆ ನಾವು ಪುಸ್ತಕವನ್ನು ನೇವರಿಸುತ್ತಾ ನೇವರಿಸುತ್ತಾ ಪುಸ್ತಕದ ಹುಚ್ಚಿಗೆ ಬೀಳುತ್ತೇವಲ್ಲಾ ಹಾಗೆ ಅನಿಸಿಬಿಟ್ಟಿತು. ಬಾದಲ್ ಸರ್ಕಾರ್ ಅವರಿಗಿದ್ದ ಪ್ರಾಮಾಣಿಕ ಮನಸ್ಸು, ಅವರು ಹಂಬಲಿಸುತ್ತಿದ್ದ ಆದರ್ಶಕ್ಕೆ ‘ಹಂಬಲ್ಪುರ’ದಲ್ಲಿ ಮಾತು ಸಿಕ್ಕಿತ್ತು
ಹಂಬಲ್ಪುರದ ಕಥೆ ತೀರಾ ತೀರಾ ಸರಳ. ಮೂವರು ಕಳ್ಳರಿಗೆ ಕದಿಯುವುದೇ ಕೆಲಸ. ಕಂಡಿದ್ದೆಲ್ಲಾ ಹಾರಿಸಿಕೊಂಡು ಹೋಗುವ ಚಿಂತೆ. ಮೈ ಬಗ್ಗಿಸದೆ ಹೊಟ್ಟೆ ತುಂಬಾ ತಿನ್ನುತ್ತಾ ಸಾಕಷ್ಟು ಶ್ರೀಮಂತರಾಗಬೇಕು ಎನ್ನುವುದೇ ಯೋಚನೆ. ಹಾಗೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದು ಪಾರಾಗಿ ಅವರು ತಲುಪಿದ್ದೇ ಹಂಬಲ್ಪುರ. ಅರೆ! ಇಲ್ಲಿ ಊಟಕ್ಕೆ ದುಡ್ಡಿಲ್ಲ, ಬೇಕಾದ ನಗನಾಣ್ಯ, ಬೇಕಾದವರು, ಬೇಕಾದಷ್ಟು ದಿನ ಹಾಕಿಕೊಂಡು ವಾಪಸ್ ಕೊಡಬಹುದು, ಎಳನೀರು ಕುಡಿದರೂ ದುಡ್ಡಿಲ್ಲ, ಹಣ್ಣು ತಿಂದರೂ ದುಡ್ಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಊರಿನವರಿಗೆ ದುಡ್ಡು ಎನ್ನುವ ಹೆಸರೇ ಗೊತ್ತಿಲ್ಲ, ಕಳ್ಳತನ ಎಂದರೆ ಏನು ಎಂದು ಬಿಡಿಸಿ ಹೇಳಬೇಕಾದೀತು.
ಅಂತಹ ಊರಿಗೆ ಬಂದು ಬಿದ್ದ ಕಳ್ಳರಂತೂ ಕಕ್ಕಾಬಿಕ್ಕಿ. ಎಲ್ಲಿ ಹೋದರೂ ದುಡ್ಡು ಕೇಳುವವರಿಲ್ಲ, ಬಿಟ್ಟಿ ಊಟ ಮಾಡಬೇಡಿ ಎನ್ನುವವರಿಲ್ಲ. ಊಟದ ಮನೆಯ ಬೆಳ್ಳಿ ತಟ್ಟೆ ಕದಿಯಲು ಹೋದಾಗ, ಸಂಗ್ರಹಿಸಿಟ್ಟ ಆಭರಣ ದೋಚಲು ಹೋದಾಗ ಕಳ್ಳರು ಕೊರೆದ ಕಿಂಡಿಯ ಬಗ್ಗೆಯೂ ಜನರ ತಕರಾರಿಲ್ಲ. ಹೀಗೇಕೆ ಎಂದು ತಲೆಕೆಡಿಸಿಕೊಂಡವರಿಗೆ ಕೊನೆಗೆ ಉತ್ತರ ಸಿಗುತ್ತದೆ. ಅಲ್ಲಿರುವ ಎಲ್ಲರೂ ತಮಗೆ ಬೇಕಾದ ಸೌಲಭ್ಯಕ್ಕೆ ಬದಲಾಗಿ ತಮ್ಮ ‘ಶ್ರಮ’ ನೀಡುತ್ತಾರೆ. ಹಾಗಾಗಿ ಕದಿಯುವ ಪ್ರಮೇಯವಿಲ್ಲ, ದುಡ್ಡು ಎಂದರೆ ಗೊತ್ತಿಲ್ಲ. ಇದೇ ನಾವು ನೀವೆಲ್ಲರೂ ಹಂಬಲಿಸುವ ಪುರ- ಹಂಬಲ್ಪುರ
ಬಾದಲ್ ಸರ್ಕಾರ್ ಬಯಸಿದ್ದ ಆದರ್ಶ ರಾಜ್ಯದ ಕಲ್ಪನೆಯನ್ನು ಕಶ್ಯಪ್ ರಂಗಕ್ಕೆ ತಂದ ರೀತಿಯಂತೂ ನೋಡುಗರನ್ನು ಹಿಡಿದು ನಿಲ್ಲಿಸುವಂತಿತ್ತು. ದನದ ಕೊಟ್ಟಿಗೆಯಲ್ಲಿ ಅಡಗಿ ಕೂರುವ, ನದಿಯಲ್ಲಿ ಈಜಿ ಪಾರಾಗುವ, ಊಟದ ಮನೆಗೆ ಕನ್ನ ಹಾಕುವ ದೃಶ್ಯವಂತೂ ಕಶ್ಯಪ್ ಅವರಿಗೆ ಗೌರವ ತಂದು ಕೊಡುವ ರೀತಿಯಲ್ಲಿತ್ತು. ಮಕ್ಕಳಂತೂ ನಾ ಮೇಲು ತಾ ಮೇಲು ಎನ್ನುವಂತೆ ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಅಭಿನಯಿಸಿದರು.
ಇದಲ್ಲದೆ ವಿಜಯನಗರ ಬಿಂಬ ಎಸ್ ವಿ ಸುಷ್ಮಾ ನಿರ್ದೇಶನದಲ್ಲಿ ‘ರಂಗಾವತಾರ’ ಬ್ಯಾಲೆಯನ್ನು , ಪ್ರಶಾಂತ ಹಾಲ್ದೊಡ್ಡೆರಿ ನಿರ್ದೇಶನದಲ್ಲಿ ‘ಹೋರಾಟದ ಹಾದಿಯಲ್ಲಿ’ ನಾಟಕ ಹಾಗೂ ಅಪ್ಪು ರಾಮದುರ್ಗ ನಿರ್ದೇಶಿಸಿದ ವ್ಯವಸ್ಥೆ ಮೂಕಾಭಿನಯವನ್ನು ಪ್ರದರ್ಶಿಸಿತು. ‘ವಿಜಯನಗರ ಬಿಂಬ’ದ ಮುಖ್ಯಸ್ಥರಾದ ಶೋಭಾ ವೆಂಕಟೇಶ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಈ ಬಾರಿಯ ಜೀವಮಾನ ರಂಗ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಳೆದ ೧೫ ವರ್ಷಗಳಿಂದ ಇನ್ನಿಲ್ಲದಂತೆ ಮಕ್ಕಳ ಮನದಲ್ಲಿ ರಂಗ ಪ್ರೀತಿಯನ್ನು ತುಂಬುತ್ತಿರುವ ಶೋಭಾ ಅವರ ಉತ್ಸಾಹಕ್ಕೆ ಈ ಉತ್ಸವ ಕನ್ನಡಿ ಹಿಡಿದಿತ್ತು. ಮಕ್ಕಳೇ ಅಭಿನಯಿಸಿದ ಈ ಎಲ್ಲವನ್ನೂ ‘ವಿಜಯನಗರ ಬಿಂಬ’ ಬಾದಲ್ ಸರ್ಕಾರ್ ನೆನಪಿಗೆ ಅರ್ಪಿಸಿತು. ಬಾದಲ್ ಸರ್ಕಾರ್ ಇಲ್ಲದ ನೋವಿನ ಮಧ್ಯೆಯೇ ಬಾದಲ್ ಸರ್ಕಾರ್ ಅವರ ನಾಟಕದ ಮೌಲ್ಯವನ್ನು ಹಂಚಲಾಯಿತು.
ವಿಜಯನಗರ ಬಿಂಬ ಸಂಪರ್ಕ:
ಶೋಭಾ ವೆಂಕಟೇಶ್ 98452 65967







ಮೋಹನ್ ಜಿ. ಬಾದಲ್ ಸಕಾ೯ರ ಬಗ್ಗೆ ನಿಮ್ಮ ಲೇಖನ ಓದಿದೆ. ಸರಳವಾಗಿ ಆದರೆ ಪರಿಣಾಮಕಾರಿಯಾಗಿ ಪರಿಚಯಿಸಿದ್ದೀರಿ. ನಾನು ಶಿವಮೊಗ್ಗೆಯಲ್ಲಿ ಕೆಲಸ ಮಾಡಬೇಕಾದರೆ ಬ್ರೆಕ್ಟ್, ಶೇಕ್ಸ್ ಪಿಯರ್ ರಂತಹ ದೊಡ್ಡ ನಾಟಕಕಾರರನ್ನು ಸತ್ಯಜಿತ್ ರೇ ರಂತಹ ದೊಡ್ಡ ಸಿನಿಮಾ ನಿದೇ೯ಶಕರನ್ನು ಆರಾಧಿಸುವ ಹೊತ್ತಲ್ಲೇ ಬಾದಲ್ ಸಕಾ೯ರ ಬಗ್ಗೆ ಕೇಳಿ ತಿಳಿದಿದ್ದೆ. ಅಲ್ಲದೇ ತಿಪಟೂರಿನ `ಪ್ರೊಥಿಯೂ’ ಟೆಪಟ೯ರಿ ನಡೆಸುತ್ತಿದ್ದ ರಂಗನಿದೇ೯ಶಕ ನಟರಾಜ್ ಹೊನ್ನವಳ್ಳಿ ಅವರ ನಿದೇ೯ಶನದಲ್ಲಿ ನಾವು ಲಂಕೇಶ ರ `ಗುಣಮುಖ’ದಲ್ಲಿ ಅಭಿನಯಿಸುತ್ತಿದ್ಗಾಗ ನಟರಾಜ್ ಅವರು ಬಾದಲ್ ಬಗ್ಗೆ ಹೇಳುತ್ತಿದ್ದರು. ನನಗೆ ಅವರ ಸಾವಿನ ಸುದ್ದಿ ತಿಳಿದಿದ್ದೇ `ಅವಧಿ’ ಮೂಲಕ. ಇರಲಿ. ಸದ್ಯವೇ ನಮ್ಮ ಝೆನ್ ಟೀಮ್ ವತಿಯಿಂದ ಬಾದಲ್ ಸಕಾ೯ರ್ ನೆನಪಿನ ಕಾರ್ಯಕ್ರಮ ಮಾಡಲು ಯೋಚಿಸುತ್ತಿದ್ದೇವೆ. ನಟರಾಜ್ ಹೊನ್ನವಳ್ಳಿ ಮಾತನಾಡಲು ಒಪ್ಪಿಕೊಂಡಿದ್ದಾರೆ.
ಉಗಮ ಶ್ರೀನಿವಾಸ್
ಥ್ಯಾಂಕ್ ಯು. ಇವತ್ತಿನ ಹಿಂದುವಿನಲ್ಲಿ ಹೊನ್ನವಳ್ಳಿ ಬಾದಲ್ ಸರ್ಕಾರ್ ಬಗ್ಗೆ ಒಳ್ಳೆಯ ಲೇಖನ ಬರೆದಿದ್ದಾರೆ.
ಮೋಹನ್ ಸರ್,
ನಾನು ಈ ನಾಟಕವನ್ನು ನೋಡಲು ಸಿಕ್ಕಾಪಟ್ಟೆ ಪ್ಲಾನ್ ಮಾಡಿದ್ದೆ. ಆದ್ರೆ ಸಿಕ್ಕಾಪಟ್ಟೆ ಕೆಲಸದ ಒತ್ತಡ ನಿಮಗೆ ಗೊತ್ತು ನನ್ನ ಕೆಲಸ ಏನು ಅಂತ. ತಪ್ಪಿಸಿಕೊಂಡೆ. ಮುಂದಿನ ಬಾರಿ ಖಂಡಿತ ನೋಡುತ್ತೇನೆ. ನಿಮ್ಮ ಲೇಖನವನ್ನು ಪತ್ರಿಕೆಯಲ್ಲಿ ಓದಿ..ಖುಷಿಯಾಯ್ತು..
ತೇಜಸ್ವಿ ಲೇಖನ ಅವಧಿಯಲ್ಲಿ ನನ್ನ ಫೇವರೇಟ್.