ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಡಿ ಬರ್ತಾ ಇದೆ..

ರೋಗ, ಸಾವು ಹಾಗೂ ವ್ಯಾವಹಾರಿಕತೆ..

ನೂತನ ದೋಶೆಟ್ಟಿ

ಸುಖವನ್ನು ಮಾತ್ರ ಬಯಸುವ ನಮ್ಮ ಮನಸ್ಸಿಗೆ ದುಃಖವಾಗಲೀ, ದುಃಖದ ಮೂಲಗಳಾಗಲೀ ಸುಲಭದಲ್ಲಿ ಒಗ್ಗುವುದಿಲ್ಲ. ವೈದ್ಯರು, ಆಸ್ಪತ್ರೆ  ಅಂದರೆ ಅದೇನೋ ಹೇಳಲಾರದ ನೋವು, ಸಂಕಟ, ಭಯ, ಕಾತರ.

ಆಸ್ಪತ್ರೆಯ ಒಳಗಿನ ಸನ್ನಿವೇಶವನ್ನೊಮ್ಮೆ ನೆನಪಿಸಿಕೊಳ್ಳಿ.

ರೋಗಿಗಳ ಕಡೆಯವರ ತಗ್ಗಿದ ದನಿಯ ಸಂಭಾಷಣೆ, ದುಗುಡ ಹೊತ್ತ ಮುಖಗಳು, ಆಸ್ಪತ್ರೆಯ ಸಿಬ್ಬಂದಿಗಳ ಸರಬರ ಸರಿದಾಟ ಅಲ್ಲಿಯ ಸಾಮಾನ್ಯ ನೋಟವಷ್ಟೇ ಅಲ್ಲ. ಅಲ್ಲಿಯ ಸಂಸ್ಕೃತಿಯೂ ಹೌದು. ನಾವು ದುಡ್ಡು ತೆತ್ತು ಆರೋಗ್ಯವನ್ನು ಆ ಮೂಲಕ ಸುಖವನ್ನು ಕೊಂಡುಕೊಂಡರೂ  ಆಸ್ಪತ್ರೆಯಲ್ಲಿ ಅಲ್ಲಿನ ಸಿಬ್ಬಂದಿಗಳದೇ ಜೋರು, ಜಬರದಸ್ತು. ಅವರು ನಿಲ್ಲು ಎಂದರೆ ನಿಲ್ಲಬೇಕು. ಕುಳಿತುಕೊ ಎಂದರೆ ಕುಳಿತುಕೊಳ್ಳಬೇಕು.

ಸಿಡುಕ ವೈದ್ಯರಿದ್ದರಂತೂ ಬೈಯಿಸಿಕೊಳ್ಳಲೂ ಸಿದ್ಧರಿರಬೇಕು. ಇದು ಒಂದು ರೀತಿಯಲ್ಲಿ ದುಡ್ಡು ಕೊಟ್ಟು ಉಪದ್ರ ಕೊಂಡಂತೆಯೇ ಸರಿ. ಒಂದು ಕಾಲದಲ್ಲಿ ಹೀಗಿದ್ದ ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ ಬಂದ ಮೇಲೆ ಅವು ಭರವಸೆ, ನಿರೀಕ್ಷೆ, ಸಮಾಧಾನ, ನೋವು ನಿವಾರಣೆ ಮೊದಲಾದ ಧನಾತ್ಮಕ ಅಂಶಗಳ ಪ್ರತಿನಿಧಿಗಳಾಗಿವೆ.

ವೈದ್ಯಕೀಯ ಕ್ಷೇತ್ರದಲ್ಲಿ 20 ನೇ ಶತಮಾನದಿಂದ ಆರಂಭವಾದ  ಕ್ರಾಂತಿಯಿಂದ  ಆಸ್ಪತ್ರೆಗಳು ಅಂತಹ ಹೊಸ ಆಶಯವನ್ನು ಹುಟ್ಟಿಸುವ ‘ಜೀವದಾನ ದೇಗುಲ’ಗಳೆಂದೇ ಪರಿಗಣಿಸಲ್ಪಟ್ಟಿವೆ. ಕ್ಷಯ ರೋಗಕ್ಕೆ  ವೈದ್ಯಕೀಯ ಪರಿಹಾರ  ಕಂಡುಕೊಳ್ಳಲು ಸಾಧ್ಯವಾದದ್ದು 20 ನೇ ಶತಮಾನದ ಅಪೂರ್ವ ಯಶಸ್ಸು. ಆನಂತರ  ಮಾನವ ಸಂಕುಲವನ್ನು ತತ್ತರಗೊಳಿಸಿದ್ದು ಕ್ಯಾನ್ಸರ್ ರೋಗ. ಅದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿದ ವೈದ್ಯಕೀಯ ಕ್ಷೇತ್ರ ಅದನ್ನೂ ಜೀವಹಾನಿ ಕಾಯಿಲೆಯ ಸ್ಥಾನದಿಂದ ಕದಲಿಸಿದೆ.

ಇಂದು ಯಾವ ರೋಗವೂ ಮಾರಕ ಎಂದು ಪರಿಗಣಿತವಾಗದೇ ಎಲ್ಲವೂ ‘ಕ್ಯೂರೆಬಲ್’ ಆಗಿರುವುದು ವೈದ್ಯಕೀಯ  ಕ್ಷೇತ್ರದ ಸಾಧನೆ. ಹೀಗೆ ಬಲಾಢ್ಯವಾಗಿ ಬೆಳೆದ ವೈದ್ಯಕೀಯ ಕ್ಷೇತ್ರ ಸೇವೆಯಿಂದ ದೂರವಾಗುತ್ತ ಒಂದು ಪರಿಪೂರ್ಣ ವ್ಯಾಪಾರವಾಗಿ, ಬೃಹತ್ ಉದ್ದಿಮೆಯಾಗಿ ಬೆಳೆದಿದೆ. ಭಾರತದ ವೈದ್ಯಕೀಯ ಉದ್ಯಮ 2017  ರಲ್ಲಿ ಸುಮಾರು 11000 ಬಿಲಿಯನ್ ಇದ್ದದ್ದು 2022 ರ ಹೊತ್ತಿಗೆ  ದ್ವಿಗುಣಗೊಳ್ಳುತ್ತದೆ ಎಂದು ವ್ಯದ್ಯಕೀಯ ಕ್ಷೇತ್ರದ ಲೆಕ್ಕಚಾರ ಹೇಳುತ್ತದೆ !!

 

20ನೇ ಶತಮಾನದ ಕೊನೆಯ ಭಾಗದವರೆಗೂ ಮನೆಗೊಬ್ಬ ‘ಫ್ಯಾಮಿಲಿ ಡಾಕ್ಟರ್’ ಎಂಬ ಹೆಮ್ಮೆಯ ಸ್ಟೇಟಸ್ ಹೊಂದಿದ್ದ ವೈದ್ಯೋ ನಾರಾಯಣೋ ಹರಿ ತನ್ನ ಕಾರುಬಾರನ್ನು ಪ್ರೈವೇಟ್ ಕ್ಲಿನಿಕ್ಕುಗಳಿಗೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸೀಮಿತವಾಗಿಸಿದ್ದು ಸೇವಾ ಮನೋಭಾವನೆಯಿಂದಂತೂ ಅಲ್ಲವೇ ಅಲ್ಲ

‘ಪ್ರೈವೇಟ್ ವೈದ್ಯಕೀಯತೆ/ ಮಲ್ಟಿಸ್ಪೆಷಾಲಿಟಿ ಕಲ್ಚರ್ ‘ನಿಂದಾಗಿ  ಅದುವರೆಗೂ ಆಸ್ಪತ್ರೆಯೊಂದಿಗೆ ತಳುಕು ಹಾಕಿಕೊಂಡಿದ್ದ ಅನಾರೋಗ್ಯದ ಸಂಬಂಧ ವಿಸ್ತರಿಸುತ್ತಾ ಹೋಯಿತು. ಅದು ಎಳೆನೀರಿನ ಅಂಗಡಿ, ಹಣ್ಣಿನ ಅಂಗಡಿ, ಲಾಂಡ್ರಿ , ಇಸ್ತ್ರೀ , ಮೆಡಿಕಲ್ ಸ್ಟೋರ್ಸ್, ಡಯಗ್ನೋಸ್ಟಿಕ್ ಸೆಂಟರ್, ಆಟೋರಿಕ್ಷಾ, ಟ್ಯಾಕ್ಸಿ, ಆಂಬುಲೆನ್ಸ್  ಮೊದಲಾದ ಹತ್ತು ಹಲವು ಸಣ್ಣ ದೊಡ್ಡ ಉಪ ಉದ್ಯೋಗಗಳಿಗೆ ದಾರಿ ಮಾಡಿ ಕೊಟ್ಟ ಮೇಲೆ  ಸೇವೆ, ಸೇವಾಮನೋಭಾವಗಳು ಇತಿಹಾಸ ಸೇರಿದವು.

ಆಸ್ಪತ್ರೆಯಿಂದ ಮೃತ ವ್ಯಕ್ತಿಯನ್ನು ತರುವಾಗ ‘ಬಾಡಿ ಬರ್ತಾ ಇದೆ’ ಎಂಬ ಮಾತು ಈ ಉದ್ಯೋಗ ಜಾಲದ ದ ಉಪಸೃಷ್ಟಿ. ತೀರಿ ಹೋದರು, ತೀರಿಕೊಂಡರು, ದಯಮಾಡಿಸಿದರು, ಶಿವನ ಪಾದ ಸೇರಿದರು, ದೇವರಿಗೆ ಮೆಚ್ಚುಗೆಯಾದರು ಮೊದಲಾಗಿ ಶವವನ್ನು ಬಹಳ ಭಯ ಭಕ್ತಿಯಿಂದ ನೋಡುತ್ತಿದ್ದದ್ದು ಮಾಯವಾಗಿ ಉಸಿರು ನಿಂತ ಕ್ಷಣದಿಂದ ಆ ದೇಹ ಸಂಬಂಧಿತರ  ಮನೆ ತಲುಪುವವರೆಗೆ ಬೆಸೆದುಕೊಳ್ಳುವ ಸಾಲು ಸಾಲು ಉದ್ಯೋಗಗಳ ಭಾಷೆಯೂ ಇದರಲ್ಲಿ ಇಂದು ಸೇರಿಕೊಂಡಿದೆ.

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ರೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ‘ಬೆಡ್ ನಂಬರು’ಗಳಿಂದ ಗುರುತಿಸಲ್ಪಡುತ್ತಾನೆ. ಅಲ್ಲಿ ಏನು ನಡೆಯುತ್ತದೆ ಎನ್ನುವುದು ಆ ರೋಗಿಯ ಸಂಬಂಧಿಗಳಾದವರಿಗೇ ತಿಳಿಯುವುದಿಲ್ಲ.  ಸಿಬ್ಬಂದಿ ಹೇಳುವ  ಔಷಧಗಳನ್ನು ಅವರು ಕೇಳಿದಾಗಲೆಲ್ಲ ತಂದು ಕೊಡುವುದಷ್ಟೇ ಅವರ  ಕೆಲಸ. ಸಂಬಂಧಗಳ ಭಾವಪೂರ್ಣ ತಾಣಗಳಾಗಬೇಕಿದ್ದ ಆಸ್ಪತ್ರೆಗಳನ್ನು ನರಕಕ್ಕೆ  ಹೋಲಿಸುವುದು ಸಾಮಾನ್ಯ.

ಸಾವು ನೋವಿನ ತಾಣವಾಗಿರುವುದರಿಂದ ಅದನ್ನು ಹಾಗೆ ಕರೆಯುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು. ಆದರೆ ನಿಜದಲ್ಲಿ ಅನೇಕ ಉಪ ಉದ್ದಿಮೆಗಳು ಸೇರಿ  ಆಗುವ ಒಟ್ಟೂ ಆಸ್ಪತ್ರೆ ವ್ಯವಸ್ಥೆ ಅದನ್ನು ನರಕ ಸದೃಶವಾಗಿಸುತ್ತಿದೆ. ಏಕೆಂದರೆ ಇಲ್ಲಿ ಹಣ, ಲಾಬಿ, ಟೆಂಡರ್ ಮೊದಲಾದವುಗಳೇ ಮುಖ್ಯವಾಗುತ್ತಿವೆ.

 

ಆಂಬುಲೆನ್ಸಿನ ಚಾಲಕ ರೋಗಿಯನ್ನು ಆಸ್ಪತ್ರೆಗೆ  ಅಥವಾ ಶವವನ್ನು ಸಂಬಂಧಿಗಳಿಗೆ ಸಾಗಿಸುವಾಗ ‘ಬಾಡಿಗೆ ಸಿಕ್ಕಿತು’ ಎಂದು ಪರಿಗಣಿಸುತ್ತಾನೆ

ಹೀಗೆ ಒಟ್ಟಾರೆ ಆಸ್ಪತ್ರೆ ವ್ಯವಸ್ಥೆ ಇಂದು ಮಾನವೀಯ ತಂತುಗಳ ಮಿಡಿತವನ್ನು ಕಳೆದುಕೊಂಡು ಬೃಹತ್ ಉದ್ಯಮವಾಗಿ ಬೆಳೆದಿದೆ. ಸಾಕಷ್ಟು ದೊಡ್ಡ ಸಣ್ಣ ಕೈಗಾರಿಕೆಗಳನ್ನು ಬೆಳೆಸಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ರಾಷ್ಟ್ರವಾಗಿರುವ  ಭಾರತ ವೈದ್ಯಕೀಯ ಪ್ರಯೋಗಗಳಿಗೆ ದೊಡ್ಡ ಮಾರುಕಟ್ಟೆಯೂ ಆಗಿದೆ. ಹಿಂದೊಂದು ಕಾಲದಲ್ಲಿ ಆಸ್ಪತ್ರೆಯ ಮೆಟ್ಟಿಲು ಹತ್ತಿದರೆ  ಅಪವಿತ್ರವಾಗುತ್ತದೆ ಎಂಬ ಕಾರಣದಿಂದ ವೈದ್ಯರ ಬಳಿ ಹೋಗದೇ ಜೀವ ಬಿಡುತ್ತಿದ್ದ ಜನ ಇದ್ದ ದೇಶವೇ ಇದು ಎಂದು ಆಶ್ಚರ್ಯ ಹುಟ್ಟಿಸುವಷ್ಟು  ಈ ‘ಆಸ್ಪತ್ರೆ ಕಲ್ಚರ್ ‘ ಬದಲಾಗಿದೆ. ಕೊನೆಯ ಉಸಿರಿಗೆಂದು ಹಿಂದೂಗಳ ಮನೆ ಮನೆಗಳಲ್ಲಿ ಕಾದು ಕುಳಿತುಕೊಳ್ಳುತ್ತಿದ್ದ ಗಂಗೆಯ ಗಿಂಡಿಗಳು ತಲೆಮರೆಸಿಕೊಂಡಿವೆ.

ಆಸ್ಪತ್ರೆಯಿಂದ  ದೇಹವನ್ನು ಮನೆಗೆ ತಂದ ಮೇಲಿನ  ವ್ಯವಹಾರವೇ ಬೇರೆ. ಹೂಳುವ ಸಂಸ್ಕ್ರತಿಯಾದರೆ ಗುಂಡಿ ತೆಗೆಯುವವರನ್ನು ಗೊತ್ತು ಪಡಿಸಬೇಕು. ಅವಸರವಿದ್ದರೆ ಜೆಸಿಬಿಗಳನ್ನು ಕರೆಸಬೇಕು. ಶಹರಗಳಲ್ಲಿ ಅದಕ್ಕೂ ಕ್ಯೂ ಇರುತ್ತದೆ. ಇನ್ನು ಸುಡುವುದಾದರೆ  ಕಟ್ಟಿಗೆ, ಸೀಮೆ ಎಣ್ಣೆ ಇತ್ಯಾದಿಗಳನ್ನು ಶೇಖರಿಸಬೇಕು. ಈ ಕೆಲಸಗಳಿಗೆ ಜನರನ್ನು ಗೊತ್ತು ಮಾಡಬೇಕು. ಶಹರಗಳಲ್ಲಿ ಸುಡುವ ಕ್ರಿಮೆಟೋರಿಯಂಗಳಲ್ಲಿ ಸರದಿಯಲ್ಲಿ ಕಾಯಬೇಕು ! ಆನಂತರದ ವಿಧಿ ವಿಧಾನಗಳನ್ನು ನೆರವೇರಿಸಲು ಅವರವರ ಧರ್ಮ, ಜಾತಿಗಳಿಗೆ ಅನುಗುಣವಾಗಿ ಅವುಗಳನ್ನು ನೆರವೇರಿಸುವವರನ್ನು ಕರೆ ತರಬೇಕು.  ಒಟ್ಟಿನಲ್ಲಿ ಎಲ್ಲ ಕಡೆಯೂ ಒಂದಿಲ್ಲೊಂದು ವ್ಯವಹಾರವೇ ಇದೆ.

ರೋಗ  ಎಂಬ ಪರಿಸ್ಥಿತಿ ಹಾಗೂ  ಸಾವು ಎಂಬ ಕ್ರಿಯೆ ಇಷ್ಟೊಂದು ದೊಡ್ಡ ಉದ್ದಿಮೆಯನ್ನು ಬೆಳೆಸಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇವುಗಳಲ್ಲಿ ಅಗತ್ಯಗಳಿಗಿಂತ ಅನಿವಾರ್ಯತೆಗಳೇ ಹೆಚ್ಚಾಗಿವೆ.

‍ಲೇಖಕರು avadhi

26 June, 2018

2 Comments

  1. Narayana Pr

    ಪ್ರಬಂಧ ಅದೆಷ್ಟು ನೈಜವಾಗಿ ಮೂಡಿ ಬಂದಿದೆ ! ಪರಿಸ್ಥಿತಿ ಕಣ್ಣಿಗೆ ಕಟ್ಟುತ್ತೆ . Great !!

    • nutana doshetty

      Dhanyavadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading