
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.
ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.
ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.
ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.
ಶಹರಗಳಲ್ಲಿ ಬ್ಯೂಟಿ ಪಾರ್ಲರ್ ಗಳೂ ಒಂದು ಜಗತ್ತೇ. ಅಲ್ಲಿ ಇಣುಕಿ ನೋಡಿದಾಗಲೇ ಅಲ್ಲಿನ ವಿಭಿನ್ನತೆ ಅರ್ಥವಾಗುವುದು. ಹೊರ ಜಗತ್ತಿನ ನಂಟೇ ಇಲ್ಲದ ಹಾಗೆ ಹೊಸ ನಂಟನ್ನು ಬೆಸೆದುಕೊಳ್ಳುವ. ಸೌಂದರ್ಯದ ನೆಪದಲ್ಲಿ ತಮ್ಮನ್ನು ಕಂಡುಕೊಳ್ಳುವ ಎಲ್ಲ ಪ್ರಯತ್ನಗಳೂ ಅಲ್ಲಿ ಆಗುತ್ತಲೇ ಇರುತ್ತದೆ.
ಈ ಉದ್ಯಮದ ಒಳಕೋಣೆಯಲ್ಲಿ ಹೆಂಗಳೆಯರ ಭಿನ್ನ ಮನಸ್ಸಿನ ಆವೃತ್ತಿಗಳಿವೆ. ಇಲ್ಲಿ ಬೆಸೆದುಕೊಳ್ಳುವ ಕೊಂಡಿ ಪ್ರಮೀಳಾ ನಮ್ಮನ್ನು ಕನ್ನಡಿಯ ಮುಂದೆ ಕೂರಿಸಿ ‘ಏನು ಮಾಡಲಿ’ ಎಂದು ಕೇಳಿದಲ್ಲಿಂದಲೇ ಶುರುವಾಗುತ್ತದೆ.
“ಆ ಕಡೆಯ ಹುಬ್ಬಿಗಿಂತ ಈ ಕಡೆಯ ಹುಬ್ಬು ತೆಳ್ಳಗಾಗಿ ಬಿಟ್ಟಿದೆಯಲ್ಲ. ನಿನ್ನ ಕಣ್ಣು ತಲೆ ಮೇಲೆ ಇಟ್ಟುಕೊಂಡಿದ್ದೀಯಾ ಹೇಗೆ?” ಅಂತ ಗ್ರಾಹಕಳು ತನ್ನ ಹಿಂದಿ ಮಿಶ್ರಿತ ಇಂಗ್ಲಿಷ್ ನಲ್ಲಿ ಕನ್ನಡಿಯ ಕಡೆಗೆ ಮುಖ ಮಾಡಿಕೊಂಡೇ ಪ್ರಮೀಳಾ ಮೇಲೆ ರೇಗುತ್ತಿದ್ದಳು. ಅವಳ ಮಾತಿನ ಹೊಡೆತಕ್ಕೆ ಅಲ್ಲೇ ಇದ್ದ ನಾನು ದಂಗಾಗಿ ಕೂತು ಬಿಟ್ಟಿದ್ದೆ.
“ಅಲ್ಲ ಮೇಡಂ ಎರಡು ಸರಿಯಾಗಿಯೇ ಇದೆ. ನಿಮಗೆ ಸರಿ ಅನ್ನಿಸದಿದ್ದರೆ ಈಗಲೇ ಎಡ ಹುಬ್ಬನ್ನೂ ತಿದ್ದಿ ಸರಿ ಮಾಡುತ್ತೇನೆ” ಎಂದರೂ, “ನನಗೆ ದಪ್ಪ ಹುಬ್ಬೇ ಬೇಕಿತ್ತು. ಈಗೇನು ಮಾಡಲಿಕ್ಕಿದೆ ” ಅಂತ ಇನ್ನೂ ಜೋರು ಬೈದಳು. ಇವಳು ಮಾತ್ರ ಮುಂದೇನು ಮಾತನಾಡುವುದಂತ ತೋಚದೆ ಪ್ರತಿ ಬಾರಿಯಂತೆ ತಲೆ ಕೆಳಗೆ ಹಾಕಿ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತು ಬಿಟ್ಟಳು.
ಪ್ರಮೀಳಾ ನಾನು ಖಾಯಂ ಆಗಿ ಹೋಗುವ ಬ್ಯೂಟಿ ಪಾರ್ಲರ್ ನಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ಯಾರೇ ಹೋಗಿ ಅವಳ ಮುಂದೆ ಕೂತರೂ ಹಿಂದೆ ಮುಂದೆ ಯೋಚನೆ ಮಾಡದೆ ಅವರು ಯಾವ ಸೌಂದರ್ಯ ಸಂಬಂಧಿ ಕೆಲಸ ಹೇಳಿದರೂ ನಿಷ್ಠೆಯಿಂದ ಮಾಡುವವಳು. ಬ್ಯೂಟಿ ಪಾರ್ಲರ್ ಗಳಲ್ಲಿ ಕೆಲಸಗಿಟ್ಟಿಸಿಕೊಳ್ಳಲು ಇರಲೇ ಬೇಕಾದ ಯಾವುದೇ ತರಹದ ನಿಲುವು, ನಾಜೂಕುತನ ಇಲ್ಲದೆ ಇದ್ದರೂ ಸುಮಾರು ವರ್ಷದಿಂದ ಇದೇ ಜಾಗದಲ್ಲಿ ತನ್ನ ನಿಷ್ಠೆ ಮತ್ತು ಸಂಭಾಳಿಸಿಕೊಂಡು ಹೋಗುವ ರೂಢಿಯಿಂದ ಉಳಿದುಕೊಂಡಿದ್ದಾಳೆ.
ಈ ಸೌಂದರ್ಯ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸದ ಬಗ್ಗೆಯೂ ಗಂಧ ಗಾಳಿಯೂ ಇಲ್ಲದ ಇವಳು ಇಲ್ಲಿ ಬಂದು ತಲುಪಿರುವುದರ ಹಿಂದೆ ವಿಶೇಷವಾದ ಕಥೆ ಏನೂ ಇಲ್ಲ. ಬಡತನ ಇದ್ದದ್ದಕ್ಕೆ ಹೊರಗೆಲ್ಲಾದರೂ ಹೋಗಿ ದುಡಿಯುವ ಎಂದು ಯೋಚಿಸುತ್ತಿರುವ ಹೊತ್ತಲ್ಲೇ ಮಣಿಪಾಲದ ಒಂದು ಮೂಲೆಯಲ್ಲಿರುವ ಈ ಪಾರ್ಲರ್ ನ ಓನರ್ ಕೂಡ ಯಾರಾದರೂ ಸಹಾಯಕ್ಕೆ ಸಿಕ್ಕಿಯಾರ ಅಂತ ಹುಡುಕುತ್ತಿದ್ದಳು. ಇಬ್ಬರ ಅವಶ್ಯಕತೆಗಳೂ ಹೀಗೆ ಸಂಧಿಸಿ ಒಬ್ಬರಿಗೊಬ್ಬರು ಗಂಟು ಬಿದ್ದರು. ಅವತ್ತಿನಿಂದ ಹತ್ತು ಅಡಿ ಸುತ್ತಳತೆಯ ಪಾರ್ಲರ್ ‘ಪ್ರಮೀಳಾ ರಾಜ್ಯ’ ಆದದ್ದು.

ಬೆಳೆಯುತ್ತಿರುವ ಊರಲ್ಲಿ ಸೌಂದರ್ಯ ಚಿಕಿತ್ಸೆಗಳೂ ಇಲ್ಲಿನ ಜನರ ಬದುಕಿನ ದೊಡ್ಡ ಭಾಗವಾಗಿದೆ. ಹೇಗೆ ಬದುಕುತ್ತೇವೆ ಅನ್ನುವುದಕ್ಕಿಂತಲೂ ಇಲ್ಲಿ ಹೇಗೆ ಕಾಣುತ್ತೇವೆ ಅನ್ನೋದಕ್ಕೆ ಮಹತ್ವ ಹೆಚ್ಚು. ತಿಂಗಳಿನ ಸಾಮಾನ್ಯ ವ್ಯಾಕ್ಸಿಂಗ್, ಥ್ರೆಡ್ಡಿಂಗ್ ಇಂದ ಹಿಡಿದು ಇನ್ನೊಂದಿಷ್ಟು ಸೌಂದರ್ಯದ ಚಿಕಿತ್ಸೆಗಳನ್ನು ಮಾಡಿಸಿ ಇಂತಹದೇ ರೀತಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಒಂದು ಪಟ್ಟಿಯೂ ಇದೇ.
ಈ ಬೆಳವಣಿಗೆಯ ಜೊತೆಗೆ ದೊಡ್ಡ ಐಷಾರಾಮಿ ಸ್ಪಾ ಮತ್ತು ಪಾರ್ಲರ್ ಗಳೂ ಮಣಿಪಾಲದಲ್ಲಿ ಮಾಮೂಲು. ಸ್ಥಿತಿವಂತರು ಅಲ್ಲಿಗೆ ಹೋಗಿ ಬರುವುದು ದೊಡ್ಡ ವಿಷಯವೇನು ಅಲ್ಲ. ಆದರೆ ಕಡಿಮೆ ಖರ್ಚಿಗೆ ತಕ್ಕಷ್ಟು ಸೇವೆ ಒದಗಿಸಿಕೊಡುವ ಇಂತಹ ಪಾರ್ಲರ್ಗಳಿಗೂ ಗ್ರಾಹಕರೇನೂ ಕಡಿಮೆ ಇಲ್ಲ.
ಇವೆಲ್ಲದರ ಎಡೆಯಲ್ಲಿಯೇ ತಮ್ಮೂರಿನ ಬ್ಯೂಟಿ ಪಾರ್ಲರ್ ನಲ್ಲಿಯೇ ಕಲಿತು ಸ್ವಂತ ಉದ್ಯಮ ಶುರು ಮಾಡಿದ ಅಕ್ಕಪಕ್ಕದವರ ಸಾಹಸ ಗಾಥೆಗಳು, ಬ್ಯೂಟಿ ಪಾರ್ಲರ್ ಹೇಗಾದರೂ ಮಹಿಳೆಯರ ಅಡ್ಡ ತಾನೇ. ಒಂದಿಷ್ಟು ಹಣ ಸಂಪಾದನೆಯೂ ಆಗುತ್ತದೆ ಜೊತೆಗೆ ತಾವೇ ಸಿಂಗರಿಸಿಕೊಳ್ಳೋಕೆ ಕಲಿಯುತ್ತಾರೆ ಎಂಬ ಮನೆಯವರ ಧಾರಾಳತನ ಹೊರ ಬಂದು ದುಡಿಯುವ ಹೆಣ್ಣು ಮಕ್ಕಳಿಗೆ ಇದನ್ನು ಸುಲಭವಾದ ಆಯ್ಕೆಯಾಗಿಸಿದೆ.
ಎಸ್. ಎಸ್. ಎಲ್. ಸಿ. ಗೆ ಓದು ಮುಗಿಸಿ, ಹೇಳಿಕೊಳ್ಳುವಂತಹ ಆರ್ಥಿಕ ಪರಿಸ್ಥಿತಿ ಇಲ್ಲದೆ ಇರುವ ಮನೆಯಿಂದ ಹೊರ ಬಂದು ದುಡಿಯುವ ಎನ್ನುವಾಗ ಎಲ್ಲರೂ ಒಪ್ಪಿಕೊಳ್ಳುವಂತಹ ಕೆಲಸ ಅಂತ ಅವಳಿಗೆ ತೋಚಿದ್ದು ಇದೊಂದೇ.
ಮನೆಯಲ್ಲಿ ರಾಶಿ ಹಾಕಿದ ಪಾತ್ರೆಗಳನ್ನು, ಬೂದಿ ಮತ್ತು ಸೋಪು ಒಟ್ಟು ಮಾಡಿ ಹತ್ತು ಹದಿನೈದು ನಿಮಿಷದಲ್ಲಿ ಪಳ ಪಳಗುಟ್ಟಿಸುವ ಒರಟು ಕೈ ಇಲ್ಲಿ ಹೆಂಗಳೆಯರ ಮುಖದ ಮೇಲೆ ಕ್ರೀಮ್ ಆಡಿಸುತ್ತಿರುತ್ತದೆ. ಬೇರೆ ದುಡಿಮೆಗಳ ಬಿರುಸು, ಬೇಗನೆ ಮಾಡಿ ಮುಗಿಸುವ ಅಭ್ಯಾಸಕ್ಕೆ ವಿರುದ್ಧವಾದ ನಾಜೂಕು, ನಿಧಾನ, ಸಮಯದ ಜೊತೆಗಿನ ಹೊಂದಾಣಿಕೆ ಎಲ್ಲವನ್ನೂ ಅವಳು ಹೊಸ ಹೊಸತಾಗಿಯೇ ಕಲಿತದ್ದು. ಕಲಿತದ್ದರಲ್ಲಿ ಒಂದು ಮರೆತರೂ ಗ್ರಾಹಕರ ಮುಖದಲ್ಲಿ ವ್ಯಕ್ತ ಆಗಿಯೇ ಬಿಡುತ್ತದೆ.
ಚಿಕ್ಕ ವಯಸ್ಸಿಂದ ಮನೆಗೆಲಸಗಳಿಗೆ ರೂಢಿಸಿಕೊಂಡಿದ್ದ ಅದಕ್ಕೆ ಪ್ರಮೀಳಗೆ ಬಿರುಸು ಮತ್ತು ಸೊಗಸಿಗೆ ಹೊಂದಿಕೊಳ್ಳುವುದಕ್ಕೆ ವರ್ಷಗಳು ತಾಗಿವೆ. ಮೊದಲು ಇದ್ದದ್ದಕ್ಕಿಂತ ಹದ ಕಲಿತರೂ ಈ ಉದ್ಯಮದಲ್ಲಿ ಪಳಗಿದವರ ಕಣ್ಣಲ್ಲಿ ಅವಳಿನ್ನೂ ಎಳಸು.

ಮಾಲಕಿ ಬೇರೆ ಕೆಲಸಗಾರರ ದಿಕ್ಕಿಲ್ಲ ಅಂತ ಪ್ರಮೀಳಾಗೆ ಅಂಟಿಕೊಂಡಿದ್ದರೂ ಗ್ರಾಹಕರು ಅತೃಪ್ತಿ ತೋರಿಸಿದ ಕೂಡಲೇ, ಅವರನ್ನು ಉಳಿಸಿಕೊಳ್ಳುವುದಕ್ಕಾದರೂ ಅಲ್ಲಿಯೇ ಜೋರು ಮಾಡಿ ಬಿಡುತ್ತಾಳೆ. ಮೊದಲೆಲ್ಲ ಕೆನ್ನೆ ಕೆಳಗಿನವರೆಗೂ ಸರಾಗವಾಗಿ ಹರಿಯುತ್ತಿದ್ದ ನೀರು ಈಗ ಕಣ್ಣಿನ ಒಳಗೆ ನಿಲ್ಲುವಷ್ಟು ಬೈಗುಳಗಳು ಅಭ್ಯಾಸವಾಗಿ ಬಿಟ್ಟಿದೆ.
ಅವಳ ಓನರ್ ಪ್ರಕಾರ ತನ್ನ ಕೋಲು ಮುಖಕ್ಕೆ ಹೊಂದುವಂತೆ ಕಾಡಿಗೆ, ಲಿಪ್ಸ್ಟಿಕ್ ಮತ್ತು ಕಾಲು ಇಂಚು ಫೌಂಡೇಶನ್ ಹಾಕಿ ತಾನು ಈ ಜಗತ್ತಿಗೆ ಸೇರಿದವಳೇ ಎಂಬಂತೆ ಅವಳು ಕಾಣುವುದು ಮೊದಲಿಗೆ ಹೋಲಿಸಿದರೆ, ಅವಳ ಸುಧಾರಣೆಯಂತೆ.
ಮೊದಲೆಲ್ಲ ಓರೆಕೋರೆಯಾಗಿ ಹಾಕುತ್ತಿದ್ದ ಮೆಹಂದಿಯ ಚಿತ್ರ, ಐ ಲೈನರ್ ನ ಗೆರೆ ಈಗ ಸಲೀಸಾಗಿ ಬೀಳುವ ಹಾಗೆ ಮಾಡೋದರಲ್ಲಿ ತನ್ನ ಪಾತ್ರ ಏನಿದೆ ಎಂಬುದನ್ನೂ ಸವಿವರವಾಗಿ ಹೇಳಿ ಮುಗಿಸುತ್ತಾಳೆ.
ಈ ಇಬ್ಬರೇ ಹೆಂಗಸರಿರುವ ಜಗತ್ತಿಗೆ, ಸೌಂದರ್ಯವನ್ನ ಅರಸಿ ಮತ್ತಷ್ಟು ಹೆಂಗಸರು ಬಂದು ಹೋಗುತ್ತಾರೆ. ಅಲ್ಲಿ ಆಚೀಚೆಯಾಗುವ ಮಾತು, ಕತೆ, ನಗು, ಜಗಳ ಎಲ್ಲವೂ ಇದೇ ಹತ್ತು ಅಡಿ ಸುತ್ತಳತೆಯ ಕೋಣೆಯ ಒಳಗಡೆಯೇ ಉಳಿಯುತ್ತದೆ.
ಪಾರ್ಲರ್ ಗಳಲ್ಲಿ ಕೆಲಸ ಕಲಿತು ತಮ್ಮದೇ ಪಾರ್ಲರ್ ಹಾಕುವ ಕನಸು ಕಾಣುವ ಹೆಂಗಳೆಯರ ಮಧ್ಯ ಪ್ರಮೀಳಗೆ ಅದೆಲ್ಲ ಆಲೋಚನೆಗಳಿಲ್ಲ. ಬದಲಾಗಿ “ಆದಷ್ಟು ದಿನ ಇಲ್ಲಿ ದುಡಿಯುವುದು. ನಮ್ಮದೇ ವ್ಯವಹಾರ ಅಂದರೆ ಬಂಡವಾಳ ಬೇಕು, ಧೈರ್ಯ ಬೇಕು, ನಾನು ನಿಷ್ಠೆಯಿಂದ ಎಲ್ಲ ಚತುರತೆ ಹಾಕಿ ಸೇವೆ ಕೊಟ್ಟರೂ ‘ನೀ ಮಾಡಿದ್ದೂ ಸರಿಯಾಗಿಲ್ಲ’ ಎಂದಾಗೆಲ್ಲ ನಾನು ಬ್ಯೂಟಿ ಪಾರ್ಲರ್ ಜಗತ್ತಿಗೆ ಸೇರಿದವಳು ಅಲ್ಲವೇನೋ ಅನ್ನಿಸಿ ಬಿಡುತ್ತದೆ” ಎಂದಳು.
ಬೆಳಿಗ್ಗಿನಿಂದ ಸಂಜೆ ಆಗುವ ಹೊತ್ತಿಗೆ ಪ್ರಮೀಳಾಳ ಕೈ ಸೋತಿರುತ್ತದೆ. ಇಲ್ಲಿಂದ ನಡೆದು ಉಡುಪಿಯಲ್ಲಿರುವ ಮನೆ ತಲುಪುವವರೆಗೆ ಕಾಲು ಸೋತಿರುತ್ತದೆ. ಏನಾದ್ರೂ ಬ್ರೈಡಲ್ ಮೇಕ್ ಅಪ್, ಸ್ಪಾ ಅಂತೆಲ್ಲ ಸ್ವಲ್ಪ ಹೊತ್ತು ತಡ ಆದರೂ ಮನೇಲಿ ಗಲಾಟೆಯೇ ಬಿದ್ದಿರುತ್ತದೆ.
“ಕೆಲವೊಮ್ಮೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋದೇ ಗೊತ್ತಾಗುವುದಿಲ್ಲ. ಮನೇಲಿ ಮದುವೆಗೆ ಹುಡುಗ ಹುಡುಕ್ತಾ ಇದ್ದಾರೆ. ಅಲ್ಲಿವರೆಗಷ್ಟೇ ದುಡಿಯುವುದು ಅಂತೆ” ಎನ್ನುತ್ತಾ ಯಾವುದೇ ಭಾವನೆಗಳನ್ನೂ ತೋರಗೊಡದೆ ನುಡಿಯುತ್ತಾಳೆ.






ಚೆಂದಕ್ಕೆ ಓದಿಸಿಕೊಳ್ತು ವಾಸ್ತವಗಳನ್ನು ತುಂಬಿಕೊಂಡು….
“ಬಿರುಸು ಮತ್ತು ಸೊಗಸಿಗೆ ಹೊಂದಿಕೊಳ್ಳಲು ವರ್ಷಗಳು ಸಾಗಿವೆ”
ಇಂತಹ ಎಷ್ಟೊಂದು ಅನುಭವಕ್ಕೆ ತಾಗಿದ ಸಾಲುಗಳು ನಿಮ್ಮ ಲೇಖನದಲ್ಲಿ ಹೆಚ್ಚು ಕಾಡಿದವು…