
ಬಿ ವಿ ಭಾರತಿ
ನನಗೆ ಮತ್ತು ನನ್ನ ಮಗನಿಗೆ ಕನ್ನಡ ಸಿನೆಮಾಗಳ ಯಾವ್ಯಾವುದೋ ಕಾಮೆಡಿ ಸೀನ್ ಗಳನ್ನು ನಮ್ಮದೇ ಬದುಕಿನ ಘಟನೆಗಳಿಗೆ, ಸಂದರ್ಭಗಳಿಗೆ ಸಮೀಕರಿಸಿ ನಗುವ ಅಭ್ಯಾಸ. ಉದಾಹರಣೆಗೆ –
ಮಿಕ್ಕ ಇಡ್ಲಿ ವಡೆ ದೋಸೆ ಪೂರಿ ಇವನ್ನೆಲ್ಲ ಸೇರಿಸಿ ಇವದೋಪು ಮಾಡುವ ದೊಡ್ಡಣ್ಣನ ಕತೆಯನ್ನು ಮನೆಯಲ್ಲಿ ಉಳಿದಪಳಿದ ಯಾವುದನ್ನೋ ಸೇರಿಸಿ ಒಂದು ಖಾದ್ಯವಾಗಿಸಿದಾಗೆಲ್ಲ ‘ಇವತ್ತೇನೋ ಇವದೋಪು ಇದ್ದಂಗಿದೆ. ಏನು ಮಿಕ್ಕಿತ್ತು’ ಅನ್ನುವುದು,
ದೊಡ್ಡಣ್ಣ ಕೆಲಸದವನ ಪತ್ರ ಬರೆಯುವಾಗ ಮೊದಲು ಎಲ್ಲ ಕ್ಸೇಮ ಅಂದವನು ಸಾಲಾಗಿ ಸಮಸ್ಯೆ ಹೇಳುತ್ತಾ ಐದನೆ ಬೆಡ್ಡು, ಆರನೆ ಬೆಡ್ಡಿಗೆ ಅಡ್ಮಿಟ್ ಮಾಡಿದ ಸೀನನ್ನು ಸರಣಿ ಸಮಸ್ಯೆಗಳು ಎದುರಾಗಿ ಬಿಟ್ಟಾಗ ಅದಕ್ಕೆ ಸಮೀಕರಿಸಿ ನಕ್ಕು ಹಗುರಾಗುವುದು,
ಪುಕ್ಕಲು ಸಾಧು ಕೋಕಿಲ ತಾನು ಶೂರ ಅಂತ ಜಂಭ ಕೊಚ್ಚಿಕೊಳ್ಳುವಾಗ ವಿಲನ್ ತಂಡ ಎದುರಾಗಿ ಹೋರಾಡಲು ಆಹ್ವಾನಿಸುತ್ತಾರೆ. ಅವನು ಹಿಂಬಾಲಕರು ಹೋರಾಡುತ್ತಾರೆ ಅನ್ನುವ ನಂಬಿಕೆಯಲ್ಲಿ ಹಿಂತಿರುಗಿ ನೋಡಿದರೆ ಜೊತೆಗಾರರೆಲ್ಲ ಮಾಯ! ‘ಅಣ್ಣ ಬುಟ್ಬುಡಣ್ಣ’ ಅಂತ ಕಾಲಿಗೆ ಬೀಳುವವನನ್ನು ಲೇವಡಿ ಮಾಡುತ್ತಾ ‘ಮತ್ತೆ ಜಂಭ ಕೊಚ್ಕೊತಿದ್ದೆ. ಅದೆಷ್ಟೋ ಜನನ್ನ ಕೊಚ್ಚಾಕ್ದೆ ಅಂದೆ’ ಅಂದರೆ, ಬಿದ್ದ ಮೀಸೆ ಮಣ್ಣಾಗದಂತೆ ‘ಅದು ಓದ ತಿಂಗ್ಳು’ ಅನ್ನುವುದು!
ಕ್ರೂರಿ ವಿಲನ್ ಒಬ್ಬ ಕೊಲೆ ಮಾಡಿ ಮುಗಿಸಿ ಇದ್ದಕ್ಕಿದ್ದಂತೆ ಕೊಳಲು ನುಡಿಸುವ, ಗೋಲಿಯಾಡುವ ಸೀನು …
ಇಂಥವನ್ನೆಲ್ಲ ಬದುಕಿನ ಘಟನೆಗಳಿಗೆ ಹೋಲಿಸಿ ನಗುತ್ತಲೇ ಇರುತ್ತೇವೆ.
ಮೊನ್ನೆ ಹೀಗಾಯ್ತು …
ನಮ್ಮ ಮನೆ ಬೇಸ್ಮೆಂಟಿನಲ್ಲೊಂದು ಟಿಟಿ ರೂಮ್ ಅನ್ನುವ ಉದಾತ್ತ ಉದ್ದೇಶದೊಡನೆ ಕಟ್ಟಿ, ಈಗ ಕಚಡಾ ತುಂಬಲು ಉಪಯೋಗವಾಗುತ್ತಿರುವ ರೂಮ್ ಇದೆ. ಅದು ಆಗೀಗ ಬೆಕ್ಕಿನ ಬಾಣಂತನದ ಕೋಣೆಯೂ ಆಗುತ್ತದೆ. ಸಣ್ಣವಳಿರುವಾಗ ಸ್ಟೋರ್ ರೂಮಿನಲ್ಲಿ ಮರಿಯನ್ನೇ ಕೊಂದು ಹರಡಿದ ರಕ್ತದ ನೆನಪು ಮಾಸದ ಹಾಗೆ ಉಳಿದಿರುವುದರಿಂದ, ಈ ಬೆಕ್ಕಿನ ಬಾಣಂತನ ನಮ್ಮ ಮನೆಯಲ್ಲಿ ಆಗದಿರುವಂತೆ ಸಕಲ ಪ್ರಯತ್ನಗಳನ್ನೂ ಮಾಡುತ್ತಿರುತ್ತೇನೆ. ಆ ಕಳ್ಳ ಫಟಿಂಗ ಬೆಕ್ಕುಗಳು ನನ್ನ ಕಣ್ಣು ತಪ್ಪಿಸಿ ಮರಿ ಹಾಕೇ ಬಿಡುತ್ತವೆ.
ಮೊದಲೊಮ್ಮೆ ಹೊಟ್ಟೆ ಡುಬ್ಬಕ್ಕಿದ್ದ ಬಾಣಂತಿ ಬೆಕ್ಕನ್ನು ಬಸುರಿ ಅಂತ ಭ್ರಮಿಸಿದ ನಾವು, ಬಾಣಂತನಕ್ಕೆ ಒಳಗೆ ಬಿಡಬಾರದು ಅಂತ ಕಿಟಕಿ ಎಲ್ಲ ಮುಚ್ಚಿಟ್ಟು ಬಿಟ್ಟೆವು. ಮರಿ ಇಟ್ಟೇ ಬಿಟ್ಟಿದೆಯೇನೋ ನೋಡು ಅಂತ ಕೆಲಸದ ಮಂಜುವನ್ನು ಹುಡುಕು ಅಂದರೆ, ಆರು ತಿಂಗಳಿಗೆ ಹುಟ್ಟಿದ ಅವಳು ಹುಡುಕಿ ಮರಿ ಯಾವುದೂ ಇಲ್ಲವೆಂದಳು. ನಾವು ನೆಮ್ಮದಿಯಾಗಿ ‘ಓ ಇನ್ನೂ ಬಸುರಿ ಅನ್ಸತ್ತೆ’ ಅಂತ ನೆಮ್ಮದಿಯಾದೆವು. ಅಮ್ಮ ಕಾಯುತ್ತ ಹೊಂಚು ಹಾಕುತ್ತಲೇ ಇದ್ದು, ಎರಡು ದಿನವಾದ ಮೇಲೆ ಹೊರಟುಹೋಯಿತು. ‘ಹೆಂಗೆ ನಾವು!’ ಅಂತ ಬೆನ್ನು ತಟ್ಟಿಕೊಂಡೆವು.
ಎರಡೇ ದಿನಕ್ಕೆ ಮನೆಯೆಲ್ಲ ಕೆಟ್ಟ ವಾಸನೆ. ಹುಡುಕಿದರೆ ರಟ್ಟಿನ ಡಬ್ಬಿಯಲ್ಲಿ ಸತ್ತ ಮೂರು ಮರಿಗಳು! ಅಯ್ಯೋ ಹಸಿವಿನಿಂದ ಕಂಗಾಲಾಗಿ ಸತ್ತ ಮರಿಗಳು ಮೂರು ತಿಂಗಳು ನನ್ನನ್ನು haunt ಮಾಡಿಬಿಟ್ಟಿದ್ದವು. ಈ ಬಾರಿಯೂ ಹಾಗೇ ಹೊಂಚು ಹಾಕುತ್ತಾ ಕೂತ ಬೆಕ್ಕಿನ ಹೊಟ್ಟೆ ನೋಡಿದರೆ ತೆಳ್ಳಗಿತ್ತು. ಓ ಹಾಗಿದ್ದರೆ ಡೆಲಿವರಿ ಆಗಿಹೋಗಿದೆ ಅಂತ ತೀರ್ಮಾನವಾಯಿತು. ಹಳೆಯ ಅನುಭವದ ಆದಾರದ ಮೇಲೆ ಡಬ್ಬ ತಡಕಾಡಿದರೆ ಒಂದು ಡಬ್ಬದಲ್ಲಿ ಐದಾರು ಮರಿಗಳು! ಈ ಸಲದ ಡೆಲಿವರಿ ಮುಗಿಸಿ ಮರಿಗಳನ್ನೆತ್ತಿಕೊಂಡು ಹೋದ ಮೇಲೆ ಆ ರೂಮನ್ನು ಮುಚ್ಚಿ ಇಡಬೇಕು ಅಂತ ತೀರ್ಮಾನಿಸಿ ಸುಮ್ಮನಾದೆವು.
ಮೊನ್ನೆ ಮಗ ಸಿಟ್ಟಿನಲ್ಲಿ ‘ಇನ್ನು ಬಿಡಲ್ಲ ಇದನ್ನ … ನೋ’ ಅಂತ ಕೂಗಾಡುತ್ತಿದ್ದ. ಯಾರನ್ನ ಬಿಡಲ್ಲ ಅಂತ ಅರ್ಥವೇ ಆಗದೇ ನೋಡುವಾಗಲೇ ‘ದರಿದ್ರ ಬೆಕ್ಕು ನೀನು ತಂದ ಧಾರವಾಡ ಫೇಡಾಗೆ ಬಾಯಿ ಹಾಕಿದೆ. ಇನ್ನು ಸುಮ್ನೆ ಬಿಡಲ್ಲ ಇದನ್ನ. ಎಹ್ ಎಷ್ಟು ಕೊಬ್ಬಿರಬೇಕು! ಮೊದಲನೇ ಫ್ಲೋರ್ ಗೆ .. ನನ್ನ ರೂಮಿಗೆ .. ನನ್ನ ರೂಮಿಗೆ ಬರತ್ತಾ ನನ್ಮಗಂದ್…’ ಅಂತ ರೋಷಾವಿಷ್ಟನಾಗಿ ‘ಇದಕ್ಕೊಂದು ಗತಿ ಕಾಣಿಸಲೇಬೇಕು’ ಅಂತ ಕೆಳಗೆ ಹೋದ.
ಒಂದಿಷ್ಟು ಹೊತ್ತು ದಬದಬ ಸದ್ದು … ಏನು ಮಾಡ್ತಿದೆ ಈ ಪ್ರಾಣಿ ಅಂತ ಯೋಚಿಸುವಾಗಲೇ ಮತ್ತೆ ಹಾಜರಾದವನೇ ‘ಡಬ್ಬದೊಳಗೆ ಕುಕ್ಕರಿಸಿದೆ. ಮೇಲೆ ಇನ್ನೊಂದು ಡಬ್ಬ ಕವುಚಿ ಹಾಕಿ ಹೊರಗಿನಿಂದ ಕೋಲಲ್ಲಿ ಜೋರಾಗಿ ಸದ್ದು ಮಾಡಿದೆ. ಚೆನ್ನಾಗಿ ಭಯಬಿದ್ದಿದೆ. ಇನ್ನು ಎದ್ದುಬಿದ್ದು ಓಡಿಹೋಗಬೇಕು ಮೇಲಿನ ಡಬ್ಬ ತೆಗೆದ ಕೂಡಲೇ. ಹುಂ! ಫೇಡಾ ತಿನ್ನೋಷ್ಟು ಧೈರ್ಯ!’ ಅಂತ ಬಯ್ಯುತ್ತಾ ರೂಮಿಗೆ ಹೋದ.
ಸ್ವಲ್ಪ ಹೊತ್ತು ಕೆಳಗೆ ಹೋಗಿ ನೋಡುವುದು, ಬಂದು ಕುರುಕ್ಷೇತ್ರದ ಸಂಜಯನ ಥರ ‘ಈಗ ಡಬ್ಬ ಚೂರು ಸರಿಸಿ ನೋಡಿದೆ. ಕಣ್ಣು attacking mode ನಲ್ಲಿಲ್ಲದೇ ಗುಂಡಾಗಿದೆ. ಅದು ಕರುಣೆ ಬರಿಸೋ ಮೋಡ್. ನನಗ್ಗೊತ್ತಿಲ್ವಾ ಇದರ ಅವತಾರ… ಬರೀ ಡ್ರಾಮಾ’ ಅಂತ ಬಯ್ದ. ಇನ್ನೊಂದು ಸಲ ಬಂದು ‘ತೆರೆದರೆ ಮಕ್ಕಳನ್ನೂ abandon ಮಾಡಿ ಓಡೋಗತ್ತೇನೋ ಸ್ವಾರ್ಥಿ’ ಅಂದ. ಮತ್ತೊಂದು ಸಲ ಬಂದು ‘ಡಬ್ಬವನ್ನೇ ಎತ್ತಿ ಆಚೆ ಇಟ್ಟರೆ ಹೇಗೆ’ ಅಂದ. ‘ಕೆಳಗಿನ flap ತೆರೆದುಬಿಟ್ಟರೆ ಮರಿಗಳಿಗೆ ಏನಾದರೂ ಆಗಬಹುದು, ಬೇಡ ಸುಮ್ನಿರು’ ಅಂತ ಸುಮ್ಮನಾಗಿಸಿದೆ. ನಾಲ್ಕನೆಯ ಸಲ ಬಂದವನು ಸದ್ದಿಲ್ಲದೇ ಕೂತ. ‘ಏನಪ್ಪಾ latest development’ ಅಂತ ರೇಗಿಸಿದೆ. ಸಣ್ಣದಾಗಿ ನಗುತ್ತಾ ‘ಥು ಹೇಗೂ ಬಾಯಿ ಹಾಕಿ ಆಗಿತ್ತಲ್ಲ. ಪೇಡಾ ಯಾಕೆ ವೇಸ್ಟ್ ಮಾಡೋದು ಅಂತ ಬೆಕ್ಕಿನ ಪಕ್ಕವೇ ಇಟ್ಟು ಬಂದೆ’ ಅಂದ!!
ಮುಂದಿನ ಹದಿನೈದು ನಿಮಿಷ ನಮ್ಮ ಸ್ಟೋರಿ ಟೆಲ್ಲಿಂಗ್ ಪ್ರತಿಭೆಗೆ ಮೀಸಲಾಯಿತು! ‘ಅಲ್ಲಾ ಅದಕ್ಕೆ ಈಗ ನೀನು ಹೇಗೆ ಕಂಡಿರಬೇಕು! ಕೊಲೆ ಮಾಡಿ, ಕೊಳಲೂದುವ ವಿಲನ್ ಥರವಾ’ ಅಂತ ನಾನೂ, ‘ಅದು ಜೊತೆಯ ಬೆಕ್ಕುಗಳ ಹತ್ತಿರ ಆ ಮನೆಲೊಬ್ಬ ಲೂಸ್ ಇದಾನೆ ಕಲಾ. ಡಬ್ಬ ಕವುಚಾಕಿ ಆಮೇಲೆ ಪೇಡಾ ಮಡಗ್ತಾನೆ ಅಂತ ಮಾತಾಡಿಕೊಳ್ಳುತ್ತಿರಬಹುದಾ!’ ಅಂತ ಅವನೂ ಶಕ್ತ್ಯಾನುಸಾರ ಕತೆ ಕಟ್ಟಿ ನಕ್ಕು ನಕ್ಕು ಇಟ್ಟಿದ್ದಾಯ್ತು.
ಒಟ್ಟಿನಲ್ಲಿ ಬೆಕ್ಕಿನ ಬಾಣಂತನವಿನ್ನೂ ಮುಗಿದಿಲ್ಲ. ಕಾಯುತ್ತಿದ್ದೇವೆ ಹೊರಟ ನಂತರ ಬಾಗಿಲು ಹಾಕಲು. ಆದರೆ ಅನ್ವೇಷಣೆ ಸಿನೆಮಾದಲ್ಲಿ ಅನಂತ್ ನಾಗ್, ಸ್ಮಿತಾ ಪಾಟೀಲ್ ಕೆಲಸಕ್ಕೆ ಹೊರಟ ನಂತರ ಮನೆ ಹೊಕ್ಕುವ ಸುಂದರ್ ರಾಜ್ ಅಂದುಕೊಳ್ಳುತ್ತಾನಲ್ಲ ‘ಕೆಲವರಿಗೆ ಮನೆ, ಕೆಲವರಿಗೆ ಮನೆಯಿಲ್ಲ. ನಾನೇನು ಇವರ ಜೊತೆನಾ ಸಂಸಾರ ಮಾಡಕ್ಕೆ ಅವಕಾಶ ಕೇಳ್ತಿದೀನಿ! ಇವರಿಲ್ಲದಾಗ ನಾನು ಉಪಯೋಗಿಸ್ತೀನಷ್ಟೇ. ಖಾಲಿ ಬಿಡೋದು ಎಂಥ national waste!’ ಎಂದು … (ಓಹ್ ನೋಡಿ! ಮತ್ತೆ ಒಂದು ಸಿನೆಮಾ ಕನೆಕ್ಷನ್ನು!!)
ಹಾಗೆಯೇ ನಮ್ಮ ಮನೆಯ ಬೆಕ್ಕೂ ಅಂದುಕೊಳ್ಳುತ್ತಿರಬಹುದಾ?! ಪಾಪ ಅದೇನು ಮೆಣಸಿನ ಸಾರು, ಬಿಸಿ ಅನ್ನ, ಸಾಂಬ್ರಾಣಿ ಹೊಗೆ ಏನೂ ಕೇಳ್ತಿಲ್ವಲ್ಲಾ, ಕೇಳ್ತಿರೋದೆಲ್ಲಾ ಒಂದು ಖಾಲಿ ರಟ್ಟಿನ ಡಬ್ಬಾ ಅಷ್ಟೇ! ಬಾಗಿಲು ತೆರೆದೇ ಇಟ್ಟು ಬಿ..ಟ್ಟ..ರೆ ಹೇ..ಗೆ..






anthoo peda waste agalilla.Nammalli anukampavoo iruttalla.Sooper narration
ಹಹಹಹಹಹಹಹ …. ಥ್ಯಾಂಕ್ಸ್ ಅಣ್ಣ
ಬಹಳ ಸ್ವಾರಸ್ಯವಾಗಿದೆ…
Thank you!
Nice Ma’am 🙂
Thanks Bhavya 🙂
ಬಹಳ ಚೆಂದದ ನಿರೂಪಣೆ…. ಕೊನೆಗೂ ಭಾರತಿಯವರಿಗೆ ಐಡಿಯಾ ಸಿಕ್ತು… ಇಲ್ಲಂದ್ರೆ ಬೆಕ್ಕಿನ ಕಥೆ ಅಷ್ಟೆ…
😀 thanks sir
Chandada Niroopane. Sannavariddaga bekkugaladde ondu prapancha namage
ಥ್ಯಾಂಕ್ಸ್ ಸರ್
ಎಷ್ಟು ಚೆನ್ನಾಗಿ ಬರೀತೀರಾ ರೀ!
ಬಾಗಿಲು ತೆರದೇ ಇರಲಿ. ಹುಟ್ಟಬೇಕಾದವುಗಳು ಹೀಗೆ ಕಾವಲಿನಲ್ಲಿ ಭಯದಲ್ಲಿ ಎಷ್ಟೋ ಇದ್ದರೆ ಭರವಸೆಯಲ್ಲಿ ಬಹಳಷ್ಟು ಇವೆ. ಬೆಕ್ಕಿನ ಮರಿಗಳನ್ನು ಹಾಗೆ ಸತ್ತ ಮತ್ತೆ ಮತ್ತೆ ಹುಟ್ಟುವ ಎಷ್ಟೊಂದು ಯೋಚನೆಗಳು ನನ್ನ ಮನಸ್ಸಿನಲ್ಲಿವೆ. ಆ ಎಲ್ಲವನ್ನೂ ನೆನಪಿಸಿರುವ ಈ ಬರಹ.
ಮನದ ಬಾಗಿಲನ್ನು ಮುಚ್ಚಿಬಿಟ್ಟರೆ
ಮರಿಗಳೇ ಹುಟ್ಟದಿದ್ದರೆ
ಧಾರವಾಡ ಪೇಡಾ ತಿನ್ನುವವರು ಯಾರು