ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಜಿ ಹಳ್ಳಿ ನಾಗರಾಜ್ ಕಂಡಂತೆ ಬಿ ಎನ್ ಮಲ್ಲೇಶ್..

ಆರ್ ಜಿ ಹಳ್ಳಿ ನಾಗರಾಜ

ದಾವಣಗೆರೆಯಲ್ಲಿ ನಿನ್ನೆ ಜರುಗಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಬಿ ಎನ್ ಮಲ್ಲೇಶ್.

ಅವರ ಪ್ರೀತಿಯ ಒಡನಾಡಿ ದಾವಣಗೆರೆಯವರೇ ಆಗಿದ್ದ, ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ್ ಅವರು ಮಿತ್ರನ ಬಗ್ಗೆ ಬರೆದ ಆತ್ಮೀಯ ಚಿತ್ರಣ ಇಲ್ಲಿದೆ.

“ಕನಸುಗಳು ಮತ್ತು ವಾಸ್ತವಗಳು, ಪ್ರೀತಿ ಹಾಗೂ ಪ್ರತಿಭಟನೆಗಳು, ಹೂಗಳು ಮತ್ತು ಮುಳ್ಳುಗಳು, ವಿಸ್ಮಯಗಳು ಮತ್ತು ಭಯಗಳು, ಮೂರ್ತಗಳು – ಅಮೂರ್ತಗಳು, ನಿಂತ ನೆಲದ ಗುಟ್ಟು, ಒಗಟುಗಳು ಅದರ ಹಿಂದು ಮುಂದು, ಆಳ ಅಗಲಗಳು ಇತ್ಯಾದಿ ಹಿಡಿದು ದಕ್ಕಿಸಿಕೊಳ್ಳುವ ಪ್ರಯತ್ನವೊಂದು ತರುಣ ಕವಿ ಬಿ.ಎನ್. ಮಲ್ಲೇಶ್ ಕವಿತೆಗಳಲ್ಲಿ ಕ್ರಿಯಾಶೀಲವಾಗಿ ಮೈ ಪಡೆದುಕೊಳ್ಳುವ ಕ್ರಮ ತೀರ ವಿಶಿಷ್ಟವಾಗಿದೆ” ಎಂದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಂದ ಮೊದಲ ಕವನ ಸಂಕಲನ “ಬೇರು ಒಣಗಿದೆ ಪ್ರೀತಿ” (1990)ಯಲ್ಲಿ ಮೆಚ್ಚುಗೆಯ ಸರ್ಟಿಫಿಕೇಟ್ ಪಡೆದ ಕವಿ ಮಲ್ಲೇಶ್, ಪತ್ರಕರ್ತನಾಗಿ “ದಾವಣಗೆರೆ ನಗರವಾಣಿ” ಸಹ ಸಂಪಾದಕನಾಗಿ, “ಪ್ರಜಾವಾಣಿ” ದೈನಿಕದಲ್ಲಿ ರಾಜಕೀಯ ವಿಡಂಬನೆಯ ಬರಹಗಳ ಅಂಕಣಕಾರನಾಗಿ, ಇಪ್ಪತ್ತು ವರ್ಷ “ಉದಯ ಟಿವಿ”ಯ ವರದಿಗಾರನಾಗಿ ಹೆಸರಾಗಿರುವ ಇವನು ನನ್ನ ಕಿರಿಯ ಆತ್ಮೀಯ ಗೆಳೆಯ. ಮೂರೂವರೆ ದಶಕಗಳಿಂದ ಏಕವಚನದ ಗೆಣೆಕಾರರಾದ್ದರಿಂದ ಬಹುವಚನ ಇಬ್ಬರಿಗೂ ಸಂಕೋಚ ಉಂಟು ಮಾಡುವುದು ಬೇಡ!

ಮಲ್ಲೇಶ್ ಪದವಿ ಶಿಕ್ಷಣ ಮುಗಿಸಿದಾಗ ಕಂಡ ಕನಸು ಕವಿಯಾಗಬೇಕು, ಪತ್ರಕರ್ತನಾಗಬೇಕು, ಹೋರಾಟಗಾರನಾಗಬೇಕು ಎಂಬುದಲ್ಲ. ಅಪ್ಪ ಅಮ್ಮನ ಆಸೆಯೂ ಇದ್ದದ್ದು ಮಗ ಪೊಲೀಸ್ ಇಲಾಖೆಗೆ ಸೇರಿ ಇನ್ಸ್‌ಪೆಕ್ಟರ್ ಆಗಬೇಕು ಎಂಬುದಾಗಿತ್ತು. ಅದಕ್ಕೆ ಸಂಬಂಧಿಸಿದ ತಯಾರಿಯೂ ನಡೆದಿತ್ತು. ಅದೃಷ್ಟ ಒಲಿಯದೆ ಇನ್ಸ್‌ಪೆಕ್ಟರ್ ಹುದ್ದೆ ತಪ್ಪಿ, ಪತ್ರಕರ್ತ – ಕವಿ ಆಗಬೇಕಾಯ್ತು! ಇದರಿಂದ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಮಾಜಕ್ಕೂ ಉಪಕಾರ ಆಯಿತು.

ದಾವಣಗೆರೆಯಲ್ಲಿ 50 ವರ್ಷ ದಾಟಿದ ದೈನಿಕಗಳಲ್ಲಿ “ನಗರವಾಣಿ”, “ಜನತಾವಾಣಿ” ಪ್ರಮುಖವಾದವು. ದಾವಣಗೆರೆಯ ಪತ್ರಿಕೋದ್ಯಮ, ರಾಜಕೀಯ ಹಾಗೂ ಸಾಂಸ್ಕೃತಿಕ ಹೆಜ್ಜೆ ಗುರುತಿಗೆ ಈ ಎರಡು ಪತ್ರಿಕೆಗಳ ಕೊಡುಗೆ ಮಹತ್ವದ್ದಾಗಿದೆ. ವಿದ್ಯಾರ್ಥಿಯಾಗಿದ್ದಾಗಲೇ, ಕವಿತೆ ಬರೆಯುತ್ತ, ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ ಮಲ್ಲೇಶ, ವಿಜ್ಞಾನ ವಿದ್ಯಾರ್ಥಿ! ಸಾಹಿತ್ಯಕ್ಕು ವಿಜ್ಞಾನಕ್ಕು ಎಲ್ಲಿಯ ಸಂಬಂಧ ಎಂಬ ಪ್ರಶ್ನೆ ಮೂಡಬಹುದು. ಹಾಗೆ ನೋಡಿದರೆ ವಿಜ್ಞಾನ ಓದಿದವರಿಂದಲೇ ಕನ್ನಡ ಸಾಹಿತ್ಯ ಶ್ರೀಮಂತವಾಗಿರುವ ಹತ್ತಾರು ಉದಾಹರಣೆ ಇವೆ. ಪ್ರೊ. ಬಿ.ಜಿ.ಎಲ್. ಸ್ವಾಮಿ, ಪ್ರೊ. ಕೆ.ಎಸ್. ನಿಸಾರ್ ಅಹಮದ್, ಡಾ. ನಾಗಲೋಟಿಮಠ, ಡಾ. ಸಿ.ಆರ್. ಚಂದ್ರಶೇಖರ, ದಾವಣಗೆರೆಯವರೇ ಆಗಿದ್ದ ಡಾ. ಎಚ್. ಗಿರಿಜಮ್ಮ ಮೊದಲಾದವರ ದೊಡ್ಡ ಪರಂಪರೆಯೇ ಇದೆ.

ಬಿ.ಎನ್. ಮಲ್ಲೇಶನಿಗೆ ಡಿ.ಆರ್.ಎಂ. ಕಾಲೇಜಿನಲ್ಲಿ ಬಿ.ಎಸ್ಸಿ, ಓದುವಾಗಲೇ ಪ್ರೊ. ಬಿ.ಜಿ. ನಾಗರಾಜರಂಥ ವಿಜ್ಞಾನ (ಗಣಿತ) ಬೋಧನೆಯ ಪ್ರಾಂಶುಪಾಲರ ಸಖ್ಯ ಬೆಳೆಯಿತು. ಅವರು ಕನ್ನಡ ಸಾಹಿತ್ಯದ ಗಂಭೀರ ವಿದ್ಯಾರ್ಥಿ. ಕವಿ ಬೇಂದ್ರೆ, ಜಿ.ಎಸ್.ಎಸ್ ಅವರ ಕವಿತೆಗಳ ಸಾಲುಗಳನ್ನು ನಿರರ್ಗಳವಾಗಿ ಉದ್ಧರಿಸುತ್ತ, ಹಾಸ್ಯ ಚಟಾಕಿ ಹಾರಿಸುತ್ತ ಪಾಠ, ಪ್ರವಚನ ನೀಡುತ್ತಿದ್ದರು. ಬಹುಶಃ ಆ ಗಾಳಿ ಮಲ್ಲೇಶನಿಗೂ ಬಡಿದಿರಬಹುದು. ಹೀಗಾಗಿ ವಿಜ್ಞಾನ ಓದುತ್ತಲೇ ಕಾಲೇಜು ಮೆಟ್ಟಿಲಲ್ಲಿ ಕವಿತೆ ಬರೆದು ತನ್ನ ಸಾಹಿತ್ಯ ಗುರು ಡಾ. ಎಂ.ಜಿ. ಈಶ್ವರಪ್ಪ ಅವರ ಕೈಲಿ ಕೊಟ್ಟರೆ, ಅವರು ತತ್ ಕ್ಷಣಕ್ಕೆ ಪ್ರತಿಕ್ರಿಯೆ ನೀಡದೆ, “ವಾರ, ಎರಡುವಾರ ಬಿಟ್ಟು ಬಾ!” ಎನ್ನುತ್ತಿದ್ದರು. ಅಷ್ಟೂ ದಿನ ಕುತೂಹಲದಿಂದ ಕಾದ ಕವಿಯ ಕಾವ್ಯದಲ್ಲಿ ಸಣ್ಣ ಬದಲಾವಣಿ ಆಗಿದ್ದನ್ನು ಅವರು ಗಮನಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಇದು ಕವಿತೆಯನ್ನು ಮರು ಕಟ್ಟುವಲ್ಲಿ ಸಹಾಯಕವಾಗುತ್ತಿತ್ತು. ಮುಂದೆ ವಿಚಾರವಾದಿ, ಪ್ರಾಧ್ಯಾಪಕ ಪ್ರೊ. ಬಿ.ವಿ. ವೀರಭದ್ರಪ್ಪ, ಪ್ರೊ. ಎಸ್. ಎಚ್. ಪಟೇಲ್, ಡಾ. ಪಂಚಾಕ್ಷರಪ್ಪ ಹಂಪೋಳಿ ಅವರಂಥವರ ಒಡನಾಟದಲ್ಲಿ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ ಬೆಳೆದು ನಿಂತದ್ದು – ದಾವಣಗೆರೆಯೆಂಬ ವ್ಯಾಪಾರಿ ಹಾಗೂ ವಿದ್ಯಾನಗರಿಯಲ್ಲಿ ಅಚ್ಚರಿಯ ವಿಚಾರವೇ ಆಗಿತ್ತು.

ದಾವಣಗೆರೆ ಒಂದು ಕಾಲದಲ್ಲಿ ಕಾರ್ಮಿಕ ಹೋರಾಟದ ನೆಲೆ. ಆ ಸಂದರ್ಭ ಬಟ್ಟೆ ಗಿರಣಿ, ಎಣ್ಣಿ ಗಿರಣಿಗಳು ದೇಶಾದ್ಯಂತ ಖ್ಯಾತಿ ಹೊಂದಿದ್ದವು. ಎಡಪಂಥೀಯ ಚಿಂತನೆಯ ಬೆಳೆಗೆ ಅದು ಪಕ್ವವಾಗಿದ್ದ ಭೂಮಿ, ಕಾರ್ಮಿಕ ಹೋರಾಟದ ಅನೇಕ ಹೋರಾಟಗಳಲ್ಲಿ ಸರಳ – ಸಜ್ಜನ ಪಂಪಾಪತಿಯ ಪರಿಚಯ. ಅವರ ಮನೆಯ ಮುಂದಿನ ರಸ್ತೆಯಲ್ಲೇ (ಕೆ.ಟಿ.ಜೆ. ನಗರ) ಮಲ್ಲೇಶನ ಅಪ್ಪ, ಅಮ್ಮ ವಾಸವಿದ್ದ ಮನೆ ಇದ್ದುದರಿಂದ ಅವರ ಜೊತೆ ಆತ್ಮೀಯತೆ ಬೆಳೆಯಿತು. ಅವರ ಜನಪರ ಕೆಲಸಗಳಿಗೆ ಸಾಥ್ ನೀಡಿದ. ಮುಂದೆ ಈ ನೆಲದ ಅನಿವಾರ್ಯತೆಯಿಂದ ಹುಟ್ಟಿ ಬೆಳೆದ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಪ್ರಮುಖನಾಗಿ, ಜಿಲ್ಲಾ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದು ಮಹತ್ವದ ಸಾಧನೆ.

1992ರಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯದಾದ್ಯಂತ ಪುಸ್ತಕ ಜಾಥ ಹಮ್ಮಿಕೊಂಡಿತ್ತು. ಮೇ 1ರಂದು “ವಿಶ್ವ ಕಾರ್ಮಿಕರ ದಿನ”ದಂದು ರಾಜ್ಯದ ಮಧ್ಯಭಾಗವಾದ ದಾವಣಗೆರೆಯಿಂದಲೇ “ಪುಸ್ತಕ ಜಾಥಾ” ಉದ್ಘಾಟನೆ ಆಯಿತು. ಈ ಮಹತ್ವದ ಜಾಥಾ ಕಾರ್ಯಕ್ರಮವನ್ನು ಕನ್ನಡದ ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಚಾಲನೆ ನೀಡಿದರು. ಈ ಜಾಥಾದ ನೇತೃತ್ವವನ್ನು ಹರಪನಹಳ್ಳಿ ಎಡಿಬಿ ಕಾಲೇಜಿನ ಪ್ರೊ. ಎಸ್.ಎಸ್. ಹಿರೇಮಠ ಅವರು ವಹಿಸಿದ್ದರು. ಕನ್ನಡ ನಾಡಿನಲ್ಲಿ ಪ್ರಥಮಬಾರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕನ್ನಡ ಪುಸ್ತಕ ಜಾಥ ಹೊರಟು ಪುಸ್ತಕ ಓದು ಸಂಸ್ಕೃತಿಯನ್ನು ಬೆಳೆಸಿದ ಹೆಮ್ಮೆ ಇದೆ. ಇದನ್ನು ದಾವಣಗೆರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದು ಅವತ್ತಿನ ಜಿಲ್ಲಾ ಸಂಚಾಲಕ ಬಿ.ಎನ್. ಮಲ್ಲೇಶ. ಬಂಡಾಯ ವಿಭಿನ್ನ ಕಾರ್ಯಕ್ರಮದ ಮೂಲಕ ಜನರ ಬಳಿಗೆ ಹೋಗಿದ್ದು ಸ್ಮರಣೀಯ. ಬದುಕಿನ ಯೌವನದ ದಿನಗಳಲ್ಲಿ ಮಹತ್ವದ ಜವಾಬ್ದಾರಿಯನ್ನು ಮಲ್ಲೇಶ್‌ ನಿರ್ವಹಿಸಿ ಎಲ್ಲರಿಂದ “ಶಹಬ್ಬಾಶ್” ಅನ್ನಿಸಿಕೊಂಡ. ಮುಂದೆ ಹಲವಾರು ರಾಜ್ಯ ಸಮ್ಮೇಳನಗಳಲ್ಲೂ ಮಲ್ಲೇಶ್ ಪಾತ್ರ ಇತ್ತು. ಸಾಮಾಜಿಕ ಕಾಳಜಿ ಹೊಂದಿ, ಬದ್ದತೆಯ ಸಾಹಿತ್ಯ ನೀಡಿ, ಜಾತ್ಯತೀತ ಭಾವನೆಯಿಂದ
ಸಮಸಮಾಜ ನಿರ್ಮಾಣ ಮಾಡುವುದು ಬರಹಗಾರನ ಕರ್ತವ್ಯ. ಇದನ್ನು ರೂಢಿಸಿಕೊಂಡಿರುವ ಮಲ್ಲೇಶನಿಗೆ ಸಾಹಿತ್ಯ, ಪತ್ರಿಕೋದ್ಯಮ, ಸಂಘಟನೆ ಬೇರೆಬೇರೆಯಾಗಿ ಕಂಡಿಲ್ಲ.

ತೀರಾ ಈಚೆಗೆ ಅಂದರೆ 2022 ಜುಲೈ ತಿಂಗಳಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಬಂಡಾಯ ಸಂಗಾತಿಯೊಳಗೂಡಿ ಭಾರೀ ಯಶಸ್ವಿಯಾಗಿ ನೆರವೇರಿಸಿ, ಪ್ರಾಮಾಣಿಕತೆ ಮೆರೆದು ರೂ. 80,000/- ಹಣ ಉಳಿತಾಯ ಮಾಡಿ ರಾಜ್ಯಕ್ಕೆ ಮಾದರಿಯಾದ ಉದಾಹರಣೆ ಇದೆ.

ಮಲ್ಲೇಶ ಪತ್ರಕರ್ತನಾಗಿ ಯಶಸ್ವಿ ಆಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅರ್ಹನಾಗಿದ್ದಾನೆ. ಬಹಳ ಮುಖ್ಯವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕವಿ ಮಹಾಲಿಂಗರಂಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2023 ಫೆಬ್ರವರಿಯಲ್ಲಿ ಗುಂಬಜ್ ನಗರ ವಿಜಯಪುರದಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರತಿಷ್ಠಿತ ಪ್ರಶಸ್ತಿ ರಾಜ್ಯ ಪ್ರಶಸ್ತಿ ಪಡೆದದ್ದು ಗಮನಾರ್ಹ. (ಮಲ್ಲೇಶ ಜೊತೆ ಈ ಪ್ರಶಸ್ತಿ ಪುರಸ್ಕೃತರಲ್ಲಿ ನಾನೂ ಒಬ್ಬನಿದ್ದೆ ಎಂಬ ಹೆಮ್ಮೆ‌ ಇದೆ.) ದಾವಣಗೆರೆಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಲ್ಲೇಶನ ಪಾತ್ರ ಮಹತ್ವದ್ದು.

ರಾಜ್ಯಮಟ್ಟದ ಅನೇಕ ಪತ್ರಿಕೆಗಳ ಹಾಗೂ ಮಿತ್ರರ ನಂಟು ಇದ್ದರೂ, ನಾಲ್ಕು ದಶಕಗಳ ಕಾಲ – ಆರಂಭದಿಂದ ಇಲ್ಲಿಯವರೆಗೂ ಒಂದೇ ಪತ್ರಿಕೆಯಲ್ಲಿ ಕಾಯಕ ನಡೆಸುತ್ತಾ ಬಂದಿರುವುದು ಅವನ ಬದ್ಧತೆಯನ್ನು ತೋರಿಸುತ್ತದೆ. “ದಾವಣಗೆರೆ ನಗರವಾಣಿ” ಆರಂಭಿಸಿದ ದಾವಣಗೆರೆಯ ಅಭಿವೃದ್ಧಿಯ ಕನಸುಗಾರ ಕೇಶವಮೂರ್ತಿ, ಮಾಜಿ ಸಚಿವೆ ನಾಗಮ್ಮ ಕೇಶಮೂರ್ತಿ ಹಾಗೂ ಕುಟುಂಬದ ನಂಬಿಕೆಯನ್ನು ನಿರಂತರ ಉಳಿಸಿಕೊಂಡು ಬಂದ ಮಲ್ಲೇಶ, ಎಲ್ಲರಿಗೂ ಬೇಕಾಗಿರುವ, ಮನುಷ್ಯ ಸಂಬಂಧ ಇಟ್ಟುಕೊಂಡ ಸಾಧಕ. ತನ್ನ ಕೌಟುಂಬಿಕ ವಿಚಾರದಲ್ಲಿ ಸುಖಿ ಜೀವನ ನಡೆಸುತ್ತಿರುವ ಮಲ್ಲೇಶನ ಪತ್ನಿ ಶ್ರೀಮತಿ ಅನಸೂಯ ಪದವೀಧರೆ. ಚಿಕ್ಕಮಗಳೂರಿನ ಮಲೆನಾಡಿನವರು. ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ತುಷಾರ ವೈದ್ಯ. ಎರಡನೇ ಮಗ ಸನತ್ ಈಗಷ್ಟೇ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಸೇರಿದ್ದಾನೆ.

ಈಗ ಹೊಸ ಬೆಳವನೂರಿನಲ್ಲಿ ನಡೆಯುವ ದಾವಣಗೆರೆ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷನಾಗಿ ಆಯ್ಕೆಯಾದ ಗೆಳೆಯ ಬಿ.ಎನ್. ಮಲ್ಲೇಶನನ್ನು ಈ ಮೂಲಕ ಹೃದಯತುಂಬಿ ಅಭಿನಂದಿಸುತ್ತೇನೆ. ಈ ಸಮ್ಮೇಳನಾಧ್ಯಕ್ಷತೆಯಲ್ಲಿ ಕೆಲವು ವಿಶೇಷಗಳಿವೆ. ದಾವಣಗೆರೆ ತಾ. 8ನೇ ಕಸಾಪ ಸಾಹಿತ್ಯ ಸಮ್ಮೇಳನ ಆನಗೋಡಿನಲ್ಲಿ ನಡೆದಾಗ ನಾನು ಸಮ್ಮೇಳನಾಧ್ಯಕ್ಷ ಆಗಿದ್ದೆ. ಕರೋನ ಕಾರಣಕ್ಕೆ ಮೂರು ವರ್ಷ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ನನ್ನ ನಂತರದ ಸ್ಥಾನ ಮಲ್ಲೇಶನನ್ನು ಹುಡುಕಿ ಬಂದದ್ದು ಅವನ ಸಾಹಿತ್ಯ, ಪತ್ರಿಕೋದ್ಯಮಕ್ಕೆ ಸಂದ ಗೌರವ.

ಮಲ್ಲೇಶ್, ಸಮ್ಮೇಳನಾಧ್ಯಕ್ಷ ಆಗುತ್ತಿದ್ದಂತೆ ಸಮ್ಮೇಳನದ ಮೆರವಣಿಗೆಗೆ ಸಂಬಂಧಿಸಿದಂತೆ ಕೆಲವು ಆದರ್ಶ ಹೊರಹಾಕಿದ. ಇದು ನನಗೆ ಖುಷಿ ಹಾಗೂ ಹೆಮ್ಮೆ ತಂದಿತು. ನಾನು ಸಮ್ಮೇಳನಾಧ್ಯಕ್ಷ ಆಗಿ ತುಳಿದ ಹಾದಿಯನ್ನು ಅವನೂ ಅನುಸರಿಸುತ್ತಿದ್ದಾನೆ. ರಥದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಿರಾಕರಿಸಿ, ರಥದಲ್ಲಿ ಭುವನೇಶ್ವರಿ ಭಾವಚಿತ್ರ, ಶರಣರ ವಚನ ಸಾಹಿತ್ಯ, ಕುವೆಂಪು ವಿಶ್ವಮಾನವ ಸಂದೇಶ, ಡಾ. ಬಿ.ಆರ್. ಅಂಬೇಡ್ಕರ್ ರಚನೆಯ ಭಾರತ ಸಂವಿಧಾನದ ಪ್ರತಿಯ ಮೆರವಣಿಗೆ ಮಾಡಬೇಕೆಂಬುದು ಅವನ ಆದರ್ಶನೀಯ ನಡೆ. ಮುಂದಿನ ಪೀಳಿಗೆಗೆ ಇದು ಮಾರ್ಗದರ್ಶಿ.

ಇಷ್ಟಾಗ್ಯೂ ಮಲ್ಲೇಶನ ಸಾಹಿತ್ಯದ ಕೆಲವು ಮಾತು ದಾಖಲಿಸಲೇಬೇಕು. ಎಂಬತ್ತರ ದಶಕದಲ್ಲೇ ಜಿ.ಎಸ್. ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ನಾಗತಿಹಳ್ಳಿ ಚಂದ್ರಶೇಖರ, ಕುಂ. ವೀರಭದ್ರಪ್ಪ ಮೊದಲಾದ ದಿಗ್ಗಜರ ಸಂಪರ್ಕ ಬಂದಿತ್ತು. ಅವರ ಕೃತಿಗಳನ್ನು ಓದುತ್ತ, ಅವರ ವಿಚಾರ ಪ್ರಚಾರ ಮಾಡುತ್ತ, ಕಾವ್ಯಕುಸುರಿ ನಡೆಸಿದ ಮಲ್ಲೇಶನ ಮೊದಲ ಕವನ ಸಂಕಲನ ನಮ್ಮ “ಅನ್ವೇಷಣೆ ಪ್ರಕಾಶನ”ದ್ದು. ಈ ಸಂಕಲನಕ್ಕೆ ಕುಂ.ವೀ. ಮುನ್ನುಡಿ, ಜಿಎಸ್ಸೆಸ್ ಬೆನ್ನುಡಿ ಇದೆ. ಮೊದಲ ಸಂಕಲನವೇ ಕಾವ್ಯಾಸಕ್ತರ, ವಿಮರ್ಶಕರ ಗಮನ ಸೆಳೆಯಿತು. ಈ ಸಂಕಲನ ಬರುವ ಮುನ್ನವೇ ರಾಜ್ಯದ ಅನೇಕ ದೈನಿಕಗಳ ಸಾಪ್ತಾಹಿಕದಲ್ಲಿ, ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಕವಿತೆ, ಲೇಖನಗಳು ಬೆಳಕು ಕಂಡಿದ್ದವು. ಬೆನ್ನಲ್ಲೇ ಸಂಕ್ರಮಣ, ಅನ್ವೇಷಣೆಯಂಥ ಸಾಹಿತ್ಯ ‌ಪತ್ರಿಕೆಗಳಲ್ಲೂ ಕವಿತೆಗಳು ಪ್ರಕಟವಾದವು. ಕವಿಯಾಗಿ ಎರಡನೇ ಸಂಕಲನವನ್ನು “ಟ್ರ್ಯಾಕುಗಳ ಮೇಲೆ ಹುಣ್ಣಿಮೆ” ಎಂಬ ಹೆಸರಿನಿಂದ ಹೊರತಂದ.

ಈಚಿನ ವರ್ಷಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರತಿವಾರ ಪ್ರಕಟವಾಗುವ ವಿಡಂಬನೆಯ ಬರಹದ ಒಂದು ಕೃತಿಗೆ “ಬ್ರೇಕಿಂಗ್ ನ್ಯೂಸ್” ಎಂದು, ಪ್ರಸ್ತುತ ಪ್ರಕಟಣೆಯ ಬರಹಕ್ಕೆ “ತೆಪರೇಸಿ ರಿಟರ್ನ್ಸ” ಎಂಬ ಹೆಸರಿಟ್ಟು ಪತ್ರಕರ್ತ, ಕವಿ ಜಿ.ಎನ್. ಮೋಹನ್ ತನ್ನ “ಬಹುರೂಪಿ” ಪ್ರಕಾಶನದ ಮೂಲಕ ಹೊರತಂದಿರುವುದು ಸಂತೋಷ..

ತನ್ನ ಕಾವ್ಯ ಕಟ್ಟುವಿಕೆ ಬಗ್ಗೆ ಮಲ್ಲೇಶ್ ಹೇಳುವ ಈ ಮಾತುಗಳು ಮಹತ್ವವಾದವು. “ಮನುಷ್ಯ ಪ್ರೀತಿಯನ್ನು ಎದೆಯಲ್ಲಿ ಕಟ್ಟಿಕೊಂಡೇ ಬದುಕಿನ ನೂರೆಂಟು ವೈರುಧ್ಯಗಳ ನಡುವೆ ಜೀವಿಸುವುದು ಅನಿವಾರ್ಯವಾಗಿರುವ ಇವತ್ತಿನ ಸಂದರ್ಭದಲ್ಲಿ ಕಾವ್ಯ ನನಗೆ ಸಮಾಧಾನ ತಂದಿದೆ. ಹೀಗಾಗಿ ಬದುಕಿನ ಕ್ರೌರ್ಯಗಳಿಗೆ ಎಷ್ಟೇ ಒಪ್ಪಿಸಿಕೊಂಡರೂ ಅವುಗಳೆಲ್ಲದರಿಂದ ಆಚೆ ನಿಂತು ನೋಡುವ ಪ್ರಜ್ಞೆ ಯಾವುದೇ ಉದ್ದೇಶದ ವೈಭವೀಕರಣಕ್ಕೆ ಮಾರು ಹೋಗದೆ ಸಾಮಾಜಿಕ ಅಸಮಾನತೆಗೆ, ಶೋಷಣೆಯ ಬಿಕ್ಕಟ್ಟುಗಳಿಗೆ ಇದಿರು ನಿಲ್ಲುವ ಧ್ವನಿಗಳ ಕೂಡ ನನ್ನ ದನಿಯೂ ಸೇರಿದೆ”.

ಕಾವ್ಯ, ಬದುಕು ಮತ್ತು ವ್ಯವಸ್ಥೆ ಬಗ್ಗೆ ಹೀಗೆ ಖಚಿತವಾಗಿ ಅಭಿಪ್ರಾಯಿಸುವ ಮಲ್ಲೇಶನ ಒಳಗೆ ಕವಿ ಮನಸ್ಸು ಸದಾ ತುಡಿಯುತ್ತಿರುತ್ತದೆ. ಸಾಮಾಜಿಕ ವ್ಯವಸ್ಥೆಗೆ ಮುಖಾಮುಖಿ ಆಗುವ ಬರಹಗಳನ್ನು ‌ವಿಡಂಬನೆಯ ಮೂಲಕವೂ ಕಟ್ಟುವ ಕಲೆಗಾರಿಕೆ ಈ ಗೆಳೆಯನಿಗೆ ಇರುವುದರಿಂದಲೇ ನನಗೆ ಅವನ ಬಗ್ಗೆ ಪ್ರೀತಿ ಮತ್ತು ಅಸೂಯೆ.

‍ಲೇಖಕರು avadhi

28 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading