
ಪ್ರವರ ಕೊಟ್ಟೂರು
ಎಂಟನೇ ಕ್ಲಾಸು ಓದುತ್ತಿದ್ದಾಗ ಮಿಕ್ಕೆಲ್ಲಾ ವಿಷಯಗಳಿಗೆ ಹೋಲಿಸಿದ್ರೆ ವಿಜ್ಞಾನದ ಮೇಲೆ ಭಾರಿ ಪ್ರೀತಿ ಮತ್ತು ಅಷ್ಟೇ ಕುತೂಹಲ. ನಮ್ಮ ಸ್ಕೂಲಿನ ಲೈಬ್ರರಿಯಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಂದು ಇಡೀ ರಾತ್ರಿ ಓದಿ ಓದಿ ಬೆರಗಾಗುತ್ತಿದ್ದೆ.
ಖಾಸಗಿ ಬಸ್ಸುಗಳ ಬ್ರೋಕರ್ ಕೆಂಚಪ್ಪ ಅನ್ನೋರು ತಮಗೆ ಬರುತ್ತಿದ್ದ ಕಮಿಷನ್ನಿನಲ್ಲಿ ಒಂದಷ್ಟು ಭಾಗವನ್ನು ಉಳಿಸಿ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ ಟೆಲಿಸ್ಕೋಪನ್ನು ತಂದಿದ್ದರು. ರಾತ್ರಿಯ ವೇಳೆಯಲ್ಲಿ ಕೊಟ್ಟೂರೇಶ್ವರ ಕಾಲೇಜಿನ ಕ್ರೀಡಾಂಗಣದಲ್ಲಿ ನಮ್ಮಂಥಾ ಆಸಕ್ತ ಹುಡುಗರನ್ನೆಲ್ಲಾ ಕಲೆಹಾಕಿಕೊಂಡು ಗುರು ಗ್ರಹ ಮತ್ತದರ ಮುಖ್ಯ ನಾಲ್ಕುಉಪಗ್ರಹಗಳು, ಶನಿಗ್ರಹ ಅದರ ಬಳೆ, ಮತ್ತು ಮುಖ್ಯ ನಕ್ಷತ್ರಗಳ ಹೆಸರುಗಳು ಅವುಗಳ ಸ್ಥಾನಗಳನ್ನು ಗುರುತಿಸುವ ರೀತಿ, ಭೂಮಿಯಿಂದ ಮಿಕ್ಕ ಗ್ರಹಗಳಿಗೆ ಇರಬಹುದಾದ ಅಂತರ, ಸೌರ ಮಂಡಲಕ್ಕೆ ಹತ್ತಿರದ ನಕ್ಷತ್ರಗಳು, ನಾವಿರುವ ಗ್ಯಾಲಕ್ಸಿ ಹೀಗೆ ಬಾಹ್ಯಾಕಾಶದ ಬಗ್ಗೆ ಸಾವಿರಾರು ವಿಷಯಗಳನ್ನು ನಮಗೆ ಹೇಳುತ್ತಾ ನಮ್ಮೊಳಗಿನ ಆಸಕ್ತಿ ಮಟ್ಟವನ್ನು ಹಿಗ್ಗಿಸಿದವರು.
ಕ್ಲಾಸಿನಲ್ಲಿ ಅಷ್ಟೇನೂ ಜಾಣನಲ್ಲದ ವಿದ್ಯಾರ್ಥಿ ನಾನು. ಗಣಿತವಂತೂ ಕಬ್ಬಿಣದ ಕಡಲೆ. ಭೌತಶಾಸ್ತ್ರವಂತೂ ನನ್ನ ಬಹು ಅಚ್ಚುಮೆಚ್ಚಿನ ವಿಷಯವಾಗಿ ಹೋಗಿತ್ತು. ಮೇಸ್ಟ್ರುಗಳು ಆಗಾಗ ಕ್ಲಾಸಿನಲ್ಲಿ ನಿಮಗೆ ಏನೇ ಡೌಟ್ ಬಂದ್ರೂ ಸಂಕೋಚ ಇಲ್ದೆ ಕೇಳ್ಬೇಕು, ಪ್ರಶ್ನಿಸುವ ಗುಣ ನಿಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುತ್ತದೆ ಅಂತೆಲ್ಲಾ ಹೇಳಿದ್ದರಿಂದಲೋ ಏನೋ ಅವರು ಪಾಠ ಮಾಡುವಾಗ ಒಂದಷ್ಟು ಪ್ರಶ್ನೆಗಳನ್ನು ಸಂಕೋಚದಿಂದಲೇ ಕೇಳಿಬಿಡುತ್ತಿದ್ದೆ.
ಉದಾಹರಣೆಗೆ: ಕಪ್ಪುರಂದ್ರಗಳು ನಕ್ಷತ್ರದ ಕೊನೆ ಹಂತ ಎನ್ನುತ್ತೀರಿ, ಬೆಳಕನ್ನೂ ತನ್ನತ್ತ ಸೆಳೆದುಕೊಳ್ಳಬಲ್ಲ ಗುರುತ್ವ ಬಲ ಇದೆ ಎನ್ನುತ್ತೀರಿ. ಆದರೆ ಒಂದು ವಸ್ತುವಿನ ಗುರುತ್ವ ಶಕ್ತಿ ಹೆಚ್ಚಾಗಿ ಇರಬೇಕಾದರೆ ಅದು ಘನ ರೂಪದಲ್ಲಿ ಇರಬೇಕಲ್ಲವಾ? ನಕ್ಷತ್ರಗಳು ಬರೀ ಅನಿಲಗಳಿಂದ ಆದಂಥಹವು. ಅವುಗಳಿಗೆ ಅಷ್ಟೊಂದು ಗುರುತ್ವ ಶಕ್ತಿ ಬಂದುದಾದರೂ ಎಲ್ಲಿಂದ?
ಶುಕ್ರಗ್ರಹ ನಕ್ಷತ್ರದಂತೆ ಹೊಳೆಯುತ್ತದೆ. ಹೆಚ್ಚು ಕಡಿಮೆ ಬೆಂಕಿಯ ಉಂಡೆಯಂತೆಯೇ ಕಾಣುತ್ತದೆ. ಬೇರೆಲ್ಲಾ ಗ್ರಹಗಳಿಗೆ ಹೋಲಿಸಿದರೆ ಇದು ಹೆಚ್ಚು ಹೊಳೆಯುತ್ತೆ ಹೇಗೆ. ಸೂರ್ಯನಿಗೆ ಹತ್ತಿರವಿರುವುದನ್ನು ಹೊರತುಪಡಿಸಿ ಬೇರೇನಾದರೂ ಕಾರಣವಿದೆಯಾ?
ಪ್ಲೂಟೊವನ್ನು ನಮ್ಮ ನವಗ್ರಹಗಳಲ್ಲಿ ಒಂದು ಎಂದು ಹೇಳುತ್ತೀರಿ. ಅದರ ಭ್ರಮಣಾವಧಿ 248 ವರ್ಷಗಳು ಅಂತ ಇದೆ, ಆ ಗ್ರಹವನ್ನು ಕಂಡು ಹಿಡಿದಿದ್ದು ಫೆಬ್ರವರಿ 18, 1930 ರಲ್ಲಿ. ಅದು ಸೂರ್ಯನನ್ನು ಸುತ್ತು ಹಾಕಿದರೆ ಮಾತ್ರ ಸೌರಮಂಡಲದ ಗ್ರಹವೆಂದು ಹೇಳಬಲ್ಲೆವು, ಇನ್ನೂ ಒಂದು ಸುತ್ತು ಹಾಕಿಲ್ಲ ಅವರು ಹೇಗೆ ಗ್ರಹವೆಂದು ಒಪ್ಪಿಕೊಂಡರು?
ಧೂಮಕೇತುಗಳ ಬಾಲ ಸೂರ್ಯನ ಹತ್ತಿರ ಬರುತ್ತಾ ದೊಡ್ಡದಾಗುತ್ತಾ, ಸೂರ್ಯನಿಂದ ದೂರ ಹೋಗುತ್ತಲೇ ಕಿರಿದಾಗಿತ್ತಾ ಹೋಗುತ್ತದೆ. ಕಾರಣವೇನು?
ನಮ್ಮ ಭೂಮಿಯಲ್ಲಿನ ಜೀವಿಗಳಂತೆಯೇ ಬೇರೆ ಗ್ರಹದಲ್ಲಿ ಜೀವಿಗಳು ಇದ್ದಾವ? ಇದ್ದರೂ ತಂತ್ರಜ್ಞಾನ ಹೇಗಿದೆ.
ಹೀಗೆ ತಲೆಯಲ್ಲಿ ನೂರಾರು ಥರಹದ ಪ್ರಶ್ನೆಗಳು, ಅವುಗಳನ್ನು ವಿಜ್ಞಾನ ಮೇಸ್ಟ್ರಲ್ಲಿ ಕ್ಲಾಸಿನಲ್ಲೇ ಕೇಳುತ್ತಿದ್ದೆ. ಅವರು ಪ್ರಶ್ನೆಗಳನ್ನು ಅಧಿಕ ಪ್ರಸಂಗವೆಂದು ಕರೆದು, ಸಿಲ್ಯಾಬಸ್ಸಲ್ಲಿ ಇರೋದು ಓದು ಸಾಕು, ಜಾಸ್ತಿ ಓದಿ ನೀನೇನು ಸೈಂಟಿಸ್ಟು ಆಗ್ತೀಯೇನೊ. ಮಾರ್ಕ್ಸ್ ತೆಗಿಯೋದ್ ನೋಡು. ಅಂತ ಹೇಳಿ ಗೆಳೆಯರ ಮುಂದೆ ಅವಮಾನ ಮಾಡಿ ಬಾಯಿ ಮುಚ್ಚಿಸಿಬಿಡುತ್ತಿದ್ದರು.
ಶಿಕ್ಷಣ ನಮಗೆ ಪ್ರಶ್ನಿಸುವುದನ್ನು ಕಲಿಸುತ್ತದೆ. ಯಾವುದೇ ವಿದ್ಯಾರ್ಥಿಯ ಬಾಯಿ ಮುಚ್ಚಿಸುವುದು ಆ ವ್ಯವಸ್ಥೆಯ ಕೊರತೆಯನ್ನು ಹೇಳುತ್ತದೆ. ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾ ಸಮಾಜ ದೇಶ ಸ್ವಾಸ್ಥ್ಯವಾಗುತ್ತಾ ಹೋಗಬಲ್ಲುದು.
ಇದನ್ನು ಯಾಕೆ ಹೇಳಬೇಕಾಗಿಬಂತೆಂದರೆ. ದೇಶದ ಪ್ರತಿಷ್ಠೆಯ ವಿಶ್ವವಿದ್ಯಾನಿಲಯ JNU ನಲ್ಲಿ ವಿದ್ಯಾರ್ಥಿಗಳು ಸಹಜವಾಗಿಯೇ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದಾರೆ. ಅದು ಅವರ ಹಕ್ಕೂ ಕೂಡ. ಉತ್ತರಿಸುವ ಗೋಜಿಗೆ ಹೋಗದೇ ಸರ್ಕಾರ ನೀನು ದೇಶದ್ರೋಹಿ ಅಂತೆಲ್ಲಾ ಹಣೆಪಟ್ಟಿ ಕಟ್ಟಿ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ.





0 Comments