ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಕಲಬುರಗಿ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

3

ಕಲಬುರಗಿ ಜಿಲ್ಲೆಯಲ್ಲಿ ಕನ್ನಡ ಅತಿದೊಡ್ಡ ಬಾಶೆಯಾಗಿದೆ, ಕನ್ನಡ ಮಾತಾಡುವವರು ಸುಮಾರು 66%. ಅದರೊಟ್ಟಿಗೆ ಸುಮಾರು ಅಯ್ದು ಲಕ್ಶದಶ್ಟು ಉ‌ರ‌್ದು ಮಾತುಗರು ಇದ್ದಾರೆ. ಬಾಶೆಯ ಸ್ತಾನಮಾನವಿಲ್ಲದ ಲಂಬಾಣಿಯ ಸುಮಾರು ಎರಡು ಲಕ್ಶದಶ್ಟು ಮಂದಿ ಜಿಲ್ಲೆಯಲ್ಲಿ ಇದ್ದಾರೆ. ತೆಲುಗು ಇನ್ನೊಂದು ಇಲ್ಲಿಯ ದೊಡ್ಡ ಬಾಶೆ. ಕಲಬುರಗಿಯಲ್ಲಿ ಕನಿಶ್ಟ ಮೂವತ್ತಾರು ಬಾಶೆಗಳು ಮತ್ತು ಅರ‍್ವತ್ತಾರು ತಾಯ್ಮಾತುಗಳು ಇವೆ. ಕನ್ನಡದ ಜೊತೆಗೆ ಉ‌ರ‌್ದು, ತೆಲುಗು ಮತ್ತು ಮುಕ್ಯವಾಗಿ ಲಂಬಾಣಿ ಮಾದ್ಯಮದ ಶಾಲೆಗಳನ್ನು ಜಿಲ್ಲೆಯಲ್ಲಿ ತೆರೆಯಬಹುದು. ಮರಾಟಿ, ಹಿಂದಿ ಮಾದ್ಯಮಗಳ ಶಾಲೆಗಳನ್ನು ತೆರೆಯಬಹುದು. ಈ ಬಾಶೆಗಳನ್ನು ಸರಕಾರದ ಮತ್ತು ಇತರ ಸಾಮಾಜಿಕ ವಲಯಗಳಲ್ಲಿ ಬಳಸಬಹುದು. ಸ್ತಳೀಯ ಮಾರುಕಟ್ಟೆಯ ಬಾಶೆಗಳಾಗಿ ಕನ್ನಡದ ಜೊತೆಗೆ ಉ‌ರ‌್ದು ಮತ್ತು ಮರಾಟಿ ಇಲ್ಲಿ ಹೆಚ್ಚು ಬಳಕೆಯಲ್ಲಿರುವುದು ಗಮನೀಯ. ಕಲಬುರಗಿ ಪ್ರದೇಶದಲ್ಲಿ ಜನಗಣತಿ ಹೆಸರಿಸಿಲ್ಲದ ಮತ್ತು ಗುರುತಿಸಿಲ್ಲದ ಇನ್ನೂ ಹಲವು ಬಾಶೆಗಳು ಬಳಕೆಯಲ್ಲಿವೆ. ಮುಕ್ಯವಾಗಿ ಕೊರಚ, ಪಾರ್‍ದಿ ಮತ್ತು ಮದ್ಯಬಾರತದ ಹಲವಾರು ಬುಡಕಟ್ಟುಗಳು ಇಲ್ಲಿ ಬದುಕಿವೆ.

ಜನಗಣತಿ ಕೊಟ್ಟಿರುವ ಕಲಬುರಗಿ ಜಿಲ್ಲೆಯ ಮಾಹಿತಿಯನ್ನು ಕೆಳಗೆ ಅಟ್ಟದಲ್ಲಿ ಕೊಟ್ಟಿದೆ.

ಕಲಬುರಗಿ ಜಿಲ್ಲೆಯಲ್ಲಿ ಜನಗಣತಿ ಕೊಡುವ ಮಾಹಿತಿ ಪ್ರಕಾರ ಒಟ್ಟು ಮೂವತ್ತು ಬಾಶೆಗಳು ಬಳಕೆಯಲ್ಲಿವೆ. ಅದರೊಂದಿಗೆ ಇತರ ಎಂಬ ಗುಂಪಿನಲ್ಲಿ 843 ಮಂದಿ ಮಾತುಗರು ಇದ್ದಾರೆ. ಇದು ಸಣ್ಣ ಸಂಕೆ ಎಂದು ಪರಿಗಣಿಸಿ ಇದು ಒಂದು ಬಾಶೆ ಎಂದು ಪರಿಗಣಿಸಿ ಕಲಬುರಗಿ ಜಿಲ್ಲೆಯ ಜನಗಣತಿ ಕೊಡುವ ಬಾಶೆಗಳು ಒಟ್ಟು ಮೂವತ್ತೊಂದು ಎಂದು ಹೇಳಬಹುದು. ಈ ಬಾಶೆಗಳಲ್ಲಿ ಒಟ್ಟು ಅರವತ್ತಯ್ದು ತಾಯ್ಮಾತುಗಳು ಇವೆ. ಇತರ ಎಂಬುದನ್ನ ಇಲ್ಲಿಯೂ ಒಂದು ಎಂದು ಪರಿಗಣಿಸಿದರೆ ಅರವತ್ತಾರು ತಾಯ್ಮಾತುಗಳು ಬಳಕೆಯಲ್ಲಿವೆ. ಇವುಗಳಲ್ಲಿ ಇತರ ಎಂಬ ಗುಂಪನ್ನು ಹೊಂದಿರುವ ಬಾಶೆಗಳು ಹದಿಮೂರು ಇವೆ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಸಿಂದಿ, ತೆಲುಗು, ಉ‌ರ‌್ದು, ಬಿಲಿ/ಬಿಲೋಡಿ, ಕೊರ‍್ವ, ಲಹಂದ, ಟಿಬೇಟನ್ ಮತ್ತು ತುಳು. ಜನಗಣತಿಯಲ್ಲಿ ಹೆಸರಿಸಲಾದ ತಾಯ್ಮಾತುಗಳು ಅಯ್ವತ್ನಾಲ್ಕು

ಕಲಬುರಗಿ ಜಿಲ್ಲೆಯ ಜನಸಂಕೆ 25,66,326. ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತನಾಡುವ ಬಾಶೆ ಕನ್ನಡವಾಗಿದೆ. ಕನ್ನಡ ಮಾತುಗರು 16,86,158. ಅಂದರೆ ಒಟ್ಟು ಜಿಲ್ಲೆಯ ಜನಸಂಕೆಯ 65.703% ಇದ್ದಾರೆ. ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತನಾಡುವ ಒಂದೆ ಬಾಶೆ ಕನ್ನಡವಾಗಿದೆ. ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಒಟ್ಟು ಮೂರು ಬಾಶೆಗಳು ಇವೆ, ಉ‌ರ‌್ದು – 4,65,855 (18.152%), ಹಿಂದಿ – 2,37,035 (9.236%) ಮತ್ತು ತೆಲುಗು 1,04,776 (4.082%). ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆ ಮರಾಟಿ ಮಾತ್ರ ಆಗಿದೆ. ಮರಾಟಿಗೆ 63,324 (2.467%) ಮಾತುಗರು ಇದ್ದಾರೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರಿರುವ ಬಾಶೆಗಳು ಗುಜರಾತಿ – 3,830 (0.149%) ಮತ್ತು ತಮಿಳು – 1,836 (0.071%) ಆಗಿವೆ. ಒಂದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಒಂಬತ್ತು ಬಾಶೆಗಳು ಇವೆ, ಬಿಲಿ/ಬಿಲೋಡಿ, ಮಲಯಾಳಂ, ಬೆಂಗಾಲಿ, ಕೊಂಕಣಿ, ಓಡಿಯಾ, ಪಂಜಾಬಿ, ಇಂಗ್ಲೀಶು, ತುಳು ಮತ್ತು ಸಿಂದಿ. ಇವುಗಳ ಜೊತೆಗೆ ಇತರ ಎಂಬ ಗುಂಪಿನಲ್ಲಿಯೂ 834 ಮಂದಿ ದಾಕಲಾಗಿದ್ದಾರೆ. ನೂರಕ್ಕೂ ಕಮ್ಮಿ ಮಾತುಗರು ಇರುವ ಬಾಶೆಗಳು ಹದಿನಾಲ್ಕು ಇವೆ.

ಇಲ್ಲಿ ಬಾಶೆಗಳ ಮಾತುಗರ ಸಂಕೆಯನ್ನಾದರಿಸಿ ಪಟ್ಟಿ ತಯಾರಿಸಿ ಕೊಟ್ಟಿದೆ.

ಇನ್ನು ತಾಯ್ಮಾತುಗಳ ಚರ‍್ಚೆಯನ್ನು ಎತ್ತಿಕೊಳ್ಳಬಹುದು. ಕಲಬುರಗಿ ಜಿಲ್ಲೆಯ ಹಿಂದಿಯ ಒಳಗೆ ಕೊಟ್ಟಿರುವ ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವೆನಿಸುವ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ. ಜಿಲ್ಲೆಯ ಹಿಂದಿಯ ಬಹುದೊಡ್ಡ ಬಾಗ ಲಂಬಾಣಿಯೆ ಆಗಿರುವುದನ್ನು ಗಮನಿಸಬಹುದು.

ಹಿಂದಿ 2,37,035

ಬಂಜಾರಿ 2,635

ಬೋಜ್ಪುರಿ 103

ಹಿಂದಿ 52,516

ಕಡಿ ಬೋಲಿ 8

ಲಮಾಣಿ/ಲಂಬಾಡಿ 1,79,212

ಮಾರ‍್ವಾರಿ 1,656

ರಾಜಸ್ತಾನಿ 390

ಜಿಲ್ಲೆಯಲ್ಲಿ ಜನಗಣತಿ ತೋರಿಸಿರುವ ಒಟ್ಟು ಹಿಂದಿ ಮಾತುಗರ ಸಂಕೆ 2,37,035 ಆಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ 1,79,212 ಲಂಬಾಣಿ ಮಾತುಗರು ಇದ್ದಾರೆ. ಲಮಾಣಿ ಹೆಸರಿನಲ್ಲಿ 1,79,212 ಮಂದಿ ಮತ್ತು ಬಂಜಾರಿ ಹೆಸರಿನಲ್ಲಿ 2,635 ಮಂದಿ ದಾಕಲಾಗಿದ್ದು ಒಟ್ಟು ಜಿಲ್ಲೆಯ ಲಂಬಾಣಿ ಮಾತುಗರ ಸಂಕೆ 1,81,847 ಆಗಿದೆ. ಇದು ಒಟ್ಟು ಜಿಲ್ಲೆಯ ಲಂಬಾಣಿಯ 76.717% ಮತ್ತು ಜಿಲ್ಲೆಯ 6.983% ಆಗುತ್ತದೆ. ಹಿಂದಿ ಮಾತುಗರ ಸಂಕೆ 52,516 ಮಾತ್ರ ಇದೆ. ಇದು ಜಿಲ್ಲೆಯ ಲಂಬಾಣಿಯ 22.155% ಮತ್ತು ಜಿಲ್ಲೆಯ 2.046% ಆಗುತ್ತದೆ. ಈಗ ಲಂಬಾಣಿ ಜಿಲ್ಲೆಯ ಮೂರನೆ ಅತಿದೊಡ್ಡ ಬಾಶೆಯಾಗುತ್ತದೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಬಾಶೆಗಳ ಪಟ್ಟಿಗೆ ಸೇರುತ್ತದೆ. ಇನ್ನುಳಿದಂತೆ ಮಾರ‍್ವಾರಿಗೆ ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಅಂದರೆ 1,656 (0.064%) ಮಾತುಗರು ಇದ್ದಾರೆ. 

ತಾಯ್ಮಾತುಗಳ ಅಂಕಿಸಂಕೆಗಳನ್ನು ಬಳಸಿಕೊಂಡು ಜನಗಣತಿ ಒದಗಿಸಿದ ಮಾಹಿತಿಯನ್ನು ಪುನಾರೂಪಿಸಿ ಹೀಗೆ ಕೊಡಬಹುದು. ಇದು ಮೇಲಿನ ಜನಗಣತಿ ಆದಾರದ ಅಟ್ಟ ಒದಗಿಸುವ ಮಾಹಿತಿಗಿಂತ ತುಂಬಾ ಬಿನ್ನವಾಗಿದ್ದು ಹೆಚ್ಚು ವಯಿವಿದ್ಯತೆಯನ್ನು ತೋರಿಸುತ್ತದೆ.

ಇಲ್ಲಿ ಕಲಬುರಗಿ ಜಿಲ್ಲೆಯ ಹತ್ತು ದೊಡ್ಡ ಬಾಶೆಗಳನ್ನು ಅವುಗಳ ಪ್ರತಿಶತತೆಯನ್ನು ತೋರಿಸಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

10 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading