ಬಶೀರ್, ಅದು ನಿಮಗೆ ಗೊತ್ತಿರಲಾರದು!

heads

ಬಿ. ಎಂ. ಬಶೀರ್

b m basheerಕುಂವೀ ಆಡಿದ ಮಾತಿನ ಉದ್ದೇಶವನ್ನು ಅರ್ಥ ಮಾಡಿ ಕೊಳ್ಳದೆ ಅವರ ಬಾಯಿಂದ ಜಾರಿ ಬಿದ್ದ “ದೇವ ದಾಸಿ” ಪದವನ್ನು ಮುಂದಿಟ್ಟು ಕೊಂಡು ಕುಂವೀ ಅವರಿಗೆ ಉಪದೇಶ ನೀಡುತ್ತಿರುವ ಅಡ್ಡ ಗೋಡೆ ಯ ದೀಪಗಳಾಗಿರುವ ಹಿರಿಯ ಸಾಹಿತಿಗಳ ಬಗ್ಗೆ ಕನಿಕರ ಇದೆ. ನಿರ್ಣಾಯಕ ಹೊತ್ತಿನಲ್ಲಿ ತಮ್ಮ ಪ್ರಶಸ್ತಿಯನ್ನು ಮರಳಿಸಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿದ ಕುಂವೀ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ.

academy logo

 

 

ಪ್ರಿಯ ಬಶೀರ್

k v tirumaleshನೀವು ಯಾರನ್ನು ಅಡ್ಡಗೋಡೆಯ ಸಾಹಿತಿಗಳೆಂದು ಹೇಳುತ್ತೀರೋ ಅರ್ಥವಾಗುವುದಿಲ್ಲ! ಮಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವಾಗಿದ್ದಾಗ ಅಖಿಲಭಾರತೀ ಕವಿಗೋಷ್ಠಿಗೆ ನನ್ನನ್ನು ಕರೆದಿದ್ದರು. ಆದರೆ ಅದನ್ನು ಜೆ.ಎಚ್. ಪಟೇಲ್ ಉದ್ಘಾಟಿಸುತ್ತಾರಂದು ತಿಳಿದು ನಾನು ಬರುವುದಿಲ್ಲವೆಂದು ಪ್ರತಿಭಟಿಸಿದೆ: ಪಟೇಲರ ಸರ್ಕಾರ ಅಗತಾನೇ `ಧರ್ಮಕಾರಣ’ವನ್ನು ನಿಷೇಧಿಸಿತ್ತು. ಅಲ್ಲದೆ ಪಟೇಲರು ಸ್ತ್ಫ್ರೀಯರ ಕುರಿತಾಗಿ ಲಘುವಾಗಿ ಮಾತಾಡಿದ್ದರು.

ಈ ಕಾರಣಗಳನ್ನೂ ಸಾರ್ವಜನಿಕವಾಗಿ ನೀಡೆದ್ದೆ. ಆಗ ಯಾರೂ ನನ್ನ ಜತೆ ನಿಲ್ಲಲಿಲ್ಲ. ಬದಲು ಪತ್ರಿಕೆಗಳಲ್ಲಿ ನನ್ನನ್ನೇ ಗೇಲಿ ಮಾಡಿದರು. ಇಂಥ ಹಲವು ಕಹಿ ಅನುಭವಗಳು ನನ್ನಲ್ಲಿವೆ. ಪ್ರತಿಭಟನೆಗೆ ತಕ್ಕ ಘನತೆ ನನಗಿಲ್ಲ. ಹಲವು ಕಾಲದಿಂದ ಸಭೆ ಸಮಾರಂಭಗಳನ್ನೂ ತೊರೆದಿದ್ದೇನೆ.

ಅಲ್ಲದೆ ನಾನೊಬ್ಬ `ಸಾಹಿತಿ’ಯೂ ಅಲ್ಲ! ಇಡೀ ವೃತ್ತಿ ಜೀವನವನ್ನು ಅಧ್ಯಾಪಕನಾಗಿ ಕಳೆದುದು. ನನ್ನ ಬರಹಗಳು ಎರಡೂ ಕಡೆಗೆ (ಎಲ್ಲಾ ಕಡೆಗೆ) ಬೆಳಕು ಚೆಲ್ಲಿದರೆ ಸಂತೋಷವೇ! ಹಾಂ, ಬಶೀರರೇ! ಕುಂವೀಯವರ ಕೃತಿಗಳ ಕುರಿತಾಗಿ ಕೂಡ ನಾನು ಉತ್ಸಾಹದಿಂದ ಬರೆದದ್ದಿದೆ–ಅದು ನಿಮಗೆ ಗೊತ್ತಿರಲಾರದು!

ಕೆ.ವಿ. ತಿರುಮಲೇಶ್

‍ಲೇಖಕರು admin

October 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. bm basheer

    ಪ್ರಿಯ ಕವಿ ತಿರುಮಲೇಶರಿಗೆ,
    ನಾನು ಸಣ್ಣದಿನಿಂದಲೇ ನಿಮ್ಮ ಕವಿತೆಗಳನ್ನೂ, ಕುಂವೀ ಕತೆಗಳನ್ನು ಓದುತ್ತಾ ಬೆಳೆದವನು. ಅದು ನನ್ನೊಳಗಿನ ಬೆಂಕಿಯಾಗಿ ನನ್ನನ್ನು ಪೊರೆದಿದೆ. ನಾನು ಬೆಳೆದಂತೆ ನಾನು ಓದಿದ ಹಿರಿಯರನ್ನು ವಿಮರ್ಶೆಯ ಕಣ್ಣಲ್ಲಿ, ಒಂದಿಷ್ಟು ಎಚ್ಚರಿಕೆಯ ಕಣ್ಣಲ್ಲಿ ಗಮನಿಸುತ್ತಾ ಬಂದಿರುವೆ. ಅದು ವರ್ತಮಾನದ ಆಗತ್ಯ ಎಂದೂ ನನಗನಿಸಿದೆ. ವರ್ತಮಾನದಲ್ಲಿ ನನ್ನ ಸುತ್ತ ಮುತ್ತ ನಡೆಯುತ್ತಿರೂದು, ಅದು ನನ್ನ ಮನೆಯ ಅಂಗಳಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸುಮ್ಮನಿರೂದಂತೂ ಸಾಧ್ಯವಿಲ್ಲ. ಕಲಬುರ್ಗಿಯ ಹತ್ಯೆ ನನ್ನನ್ನು ದಂಗು ಬಡಿಸಿದ್ದು ನಿಜ. ಆ ಸುದ್ದಿ ಇಡೀ ಕರ್ನಾಟಕದ ಬರಹಗಾರರನ್ನು ಕಂಗೆಡಿಸುತ್ತದೆ ಎಂದು ಭಾವಿಸಿದ್ದೆ. ಅಂತಹದೇನು ಸಂಭವಿಸಲಿಲ್ಲ. ಇಂತಹ ಸಂಧರ್ಭಗಳಲ್ಲಿ ಕೆಲವು ಹಿರಿಯ ಬರಹ ಗಾರರು ಪದಗಳ ನಡುವೆ, ರೂಪಕಗಳ ನಡುವೆ ಬಚ್ಚಿಟ್ಟು ಕೊಂಡು ಎರಡೂ ಕಡೆ ಸಲ್ಲುವ ಮಾತುಗಳನ್ನಾಡುತ್ತ, ಬೀದಿಗಿಳಿದು ಪ್ರತಿಭಟಿಸಿದವರನ್ನೇ ಪ್ರಶ್ನಿಸುತ್ತ ಕಾಲ ಕಳೆಯುತ್ತಿರೋದು, ಹತ್ಯೆಯ ಸುದ್ದಿಗಿಂತಲೂ ಹೆಚ್ಚು ಆಘಾತ ತರುವಂಥಹದಾಗಿತ್ತು. ವಿಪರ್ಯಾಸ ಎಂದರೆ, ಕಲಬುರ್ಗಿ ಹತ್ಯೆಯನ್ನು ಮೊತ್ತ ಮೊದಲ ಬಾರಿ ಬಲವಾಗಿ ಖಂಡಿಸಿ ತನ್ನ ಅಕಾಡೆಮಿ ಪ್ರಶಸ್ತಿಯನ್ನು ಮರಳಿಸಿದ್ದು ಹಿಂದಿ ಲೇಖಕ ಉದಯ ಪ್ರಕಾಶ್. ಇದಾದ ಬೆನ್ನಿಗೆ ಕನ್ನಡಿಗರು ತಮ್ಮ ಪ್ರಶಸ್ತಿಯನ್ನು ಮರಳಿಸ ತೊಡಗಿದರು. ಕಂಬಾರ ರಂತಹ ಹಿರಿಯರು “ಅರೆ, ತಪ್ಪು ಗುರಿ ಇಟ್ಟಿದ್ದೀರಿ, ಅಕಾಡೆಮಿಗೂ … ಇದಕ್ಕೂ ಏನು ಸಂಬಂಧ” ಎಂದು ಮಾತನಾಡ ಹತ್ತಿದರು. ಸಿಎನ್ನಾರ್ ರಂಥವರು ಕೂಡ ಈ ವಿಷಯದಲ್ಲಿ ವಿಮರ್ಶೆಯ ಪರಿಭಾಷೆ ಗಳನ್ನ್ನು ಬಳಸಿ ಗೊಂದಲ ಮಾಯವಾಗಿ ಮಾತನಾಡ ತೊಡಗಿದರು. ಇಂತಹ ಸಂದರ್ಭದಲ್ಲಿ ಯಾವುದೇ ಪದಗಳನ್ನು ಬಳಸದೆ, ತಮ್ಮ ಪ್ರಶಸ್ತಿಯನ್ನು ವಾಪಾಸ್ ಮಾಡಿದ ಚಂಪಾ, ರಹಮತ್, ಕುಂವೀ, ಮಾಲಗತ್ತಿ… ಮೊದಲಾದ ಕನ್ನಡಿಗರು ವರ್ತಮಾನಕ್ಕೆ ಸಣ್ಣ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಮುಂದೆ ಇಡೀ ದೇಶದ ಬರಹಗಾರರು ಅದನ್ನು ಚಳುವಳಿ ರೂಪದಲ್ಲಿ ಮುಂದುವರಿಸಿದರು. ಮತ್ತು ಅದು ಅಂತಾರಾಷ್ಟ್ರೀಯ ಮಟ್ಟದ ಒತ್ತಡವನ್ನು ಕೇಂದ್ರ ಸರಕಾರಕ್ಕೂ, ರಾಜ್ಯ ಸರಕಾರಕ್ಕೂ ಹೇರಿದ್ದು ಗೊತ್ತೇ ಇದೆ. ಇಂತಹ ಹೊತ್ತಲ್ಲಿ ಕುಂವೀ ಅವರು ಸಾಹಿತಿಗಳಿಗೆ ತಮ್ಮ ಹೊಣೆಗಾರಿಕೆ ನೆನಪಿಸುವ ಸಂದರ್ಭದಲ್ಲಿ ತಪ್ಪು ಉದಾಹರಣೆ ಬಳಸಿದರು. ಆದರೆ ಕೆಲವು ಹಿರಿಯ ಸಾಹಿತಿಗಳು ಮುಖ್ಯ ವಿಷಯ ಬಿಟ್ಟು, ಆ ಉದಾಹರಣೆಯ ಕುರಿತಂತೆ ಚರ್ಚೆ ಗೆ ತೊಡಗಿದ್ದು, ಮತ್ತು ಮುಖ್ಯ ವಿಷಯದಿಂದ ಜಾಣತನದಿಂದ ಜಾರಿ ಕೊಂಡದ್ದನ್ನು ಸಹಿಸೋದಾದರೂ ಹೇಗೆ ? ಕುಂವೀಯವರ ಕೃತಿಗಳ ಕುರಿತಾಗಿ ನೀವು ಉತ್ಸಾಹದಿಂದ ಬರೆದದ್ದು ಖಂಡಿತಾ ಗೊತ್ತು. ಇದೆ ಸಂದರ್ಭದಲ್ಲಿ, ಕುಂವೀ ಅವರು ಅನಂತ ಮೂರ್ತಿಯ ಕುರಿತಂತೆ ಹೇಳಿಕೆ ನೀಡಿದ ಸಂದರ್ಭದಲ್ಲಿ, ಅನ್ನ ಭಾಗ್ಯದ ಬಗ್ಗೆ ಗೊಂದಲದ ಹೇಳಿಕೆ ನೀಡಿದಾಗ ನಾನು ಅದನ್ನು ಖಂಡಿಸಿ ಬರೆದಿದ್ದೆ ಎನೋದನ್ನು ತಮ್ಮ ಅವಗಾಹನೆಗೆ ತರಲು ಇಚ್ಚಿಸುವೆ. ಇವೆಲ್ಲವನ್ನೂ ನಿಮ್ಮ ಕವಿತೆಗಳ ಕುರಿತಂತೆ ಅಪಾರ ಪ್ರೀತಿ ಇಟ್ಟುಕೊಂಡೆ ಬರೆದಿದ್ದೇನೆ ಎನ್ನೋದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಲು ಇಚ್ಚಿಸುತ್ತೇನೆ.
    ಬಿ. ಎಂ. ಬಶೀರ್

    ಪ್ರತಿಕ್ರಿಯೆ
  2. KVTirumalesh

    ಪ್ರಿಯ ಬಶೀರ್
    ನಿಮ್ಮ ಪತ್ರ ಓದಿ ಸಂತೋಷವಾಯಿತು. ನಿಜದಲ್ಲಿ ನಾನು ಕುಂವೀ ಹೇಳಿಕೆ ಕುರಿತು ಪ್ರತಿಕ್ರಿಯಸಬಾರದಿತ್ತು—ಯಾಕೆಂದರೆ ನನಗಿದರ ಪೂರ್ತಿ ಹಿನ್ನೆಲೆ ಗೊತ್ತಿಲ್ಲ. ನಾನು ಪೇಸ್ ಬುಕ್, ಟ್ವಿಟರ್ ಇತ್ಯಾದಿ ತಾಣಗಳ ಕುರಿತು ಕೇಳಿದ್ದೇನೆಯೇ ವಿನಾ ಅವುಗಳಿಗೆ ಸೇರಿಲ್ಲ. ಻ಅಂತರ್ಜಾಲದಲ್ಲಿ ಕೆಲವು ಕನ್ನಡ ಪತ್ರಿಕೆಗಳನ್ನು ಅಷ್ಟಿಷ್ಟು ನೋಡುತ್ತೇನೆ. ಅವುಗಳ ಮಾಹಿತಿಯಿಂದ ನನ್ನ ತಿಳಿವಳಿಕೆಯನ್ನು ರೂಪಿಸುವುದು. ನನ್ನ ಆತುರವೂ ಕೆಲವು ಸಲ ನನ್ನಿಂದ ತಪ್ಪು ಮಾಡಿಸುತ್ತದೆ. ನೀವು ನಿಮ್ಮ ಪತ್ರದಲ್ಲಿ ಹೇಳುವುದನ್ನು ನಾನು ಒಪ್ಪುತ್ತೇನೆ.
    ನಾನೊಬ್ಬ ಒಂಟಿಜೀವಿ—ಆದರೆ ಲೋಕದ ದುಃಖ ಸಂತೋಷಗಳು (ಸಂತೋಷಕ್ಕಿಂತ ದುಃಖಗಳೇ) ನನ್ನನ್ನೂ ಬಾಧಿಸುತ್ತವೆ. ಕಲ್ಬುರ್ಗಿಯವರ ಹತ್ಯೆಗೆ ಮರುಗದವರು ಮನುಷ್ಯರೇ ಅಲ್ಲ. Any man’s death diminishes me ಎಂಬ ಡನ್ನ ಮಾತು ನನಗಿಷ್ಟ;
    ಕೆಲವು ಆದರ್ಶಗಳನ್ನು ನಾನೂ ಇಟ್ಟುಕೊಂಡಿದ್ದೇನೆ: ಅದನ್ನೆಲ್ಲ ಪೂರ್ಣವಾಗಿ ಪಾಲಿಸುವುದಕ್ಕೆ ಸಾಧ್ಯವಾಗದೆ ಇದ್ದರೂ. ಒಬ್ಬ ಅಧ್ಯಾಪಕನಾಗಿ (ಸು, 35 ವರ್ಷ!) ನಾನು ಹೇಗೆ ಯಾರಿಗಾದರೂ ಕಠೋರದ ಮಾತನ್ನಾಡಲಿ? ಅದನ್ನು ಕೇಳುವುದು ಕೂಡ ನನಗೆ ಕಳವಳ ಉಂಟುಮಾಡುತ್ತದೆ. ಕೆಲವೊಮ್ಮೆ ನಾನು ಅಪ್ಪಿತಪ್ಪಿ ಹಾಗೆ ಮಾಡಿದರೆ ರಾತ್ರಿ ನಿದ್ರಿಸಲು ಕಷ್ಟವಾಗುತ್ತದೆ!
    ಕುಂವೀಯ ಕೆಲವು ಬರಹಗಳನ್ನು ಓದಿ ಮಾನಸಿಕವಾಗಿ ಅವರ ಜತೆ ಆತ್ಮೀಯೆತೆ ಬೆಳೆಸಿಕೊಂಡಿದ್ದೇನೆ. ಅತಿ ಸೂಕ್ಷ್ಮ ವೀಕ್ಷಣೆಯ ಲೇಖಕರು ಅವರು. ಈ ಸಲಿಗೆ ಉಪಯೋಗಿಸಿ ನಾನು ಪ್ರತಿಕ್ರಿಯೆ ನೀಡಿದ್ದು. ಅವರು ಸಿಟ್ಟಿಗೇಳುವುದಿಲ್ಲ.
    ನೀವೂ ಏಳಬಾರದು. ಎಲ್ಲರನ್ನೂ ಜತೆಯಲ್ಲಿ ಒಯ್ಯಬೇಕು, ನಮ್ಮನ್ನು ವಿರೋಧಿಸುವವರ ಜತೆಯೂ ಮಾತಾಡಬೇಕು ಎನ್ನುವ ನನ್ನ ಇರಾದೆಯನ್ನು ನೀವು ತಪ್ಪಾಗಿ ತಿಳಿದಿರಿ. ನಾನು ಪಕ್ಷವಹಿಸಿ, ಪಾರ್ಟಿ ಕಟ್ಟಿ ಮಾತಾಡಲಿಲ್ಲ; ಹಾಗೆ ಮಾಡುವುದೂ ಇಲ್ಲ. ಆದ್ದರಿಂದಲೇ ಒಂಟಿಯಿದ್ದೇನೆ.
    ನನಗೆ ಗೊತ್ತಿರುವುದನ್ನು ಇತರರಿಗೆ ತಿಳಿಸಬೇಕು ಎನ್ನುವ ನನ್ನ ಆಸೆ ಹಲವು ಸಲ ನನ್ನನ್ನು ಮಾತಾಡಿಸುವಂತೆ ಮಾಡುತ್ತದೆ: ಇದನ್ನು ನೀವು ಉಪದೇಶ ಎಂದು ಅಂದುಕೊಂಡಿರಿ. ಆದರೆ ನಾನು ಮಾತಾಡುವುದಕ್ಕಿಂತಲೂ ಕೇಳುವುದೇ ಜಾಸ್ತಿ.
    ನನಗೆ ಹಲವಾರು ಸಂಗತಿಗಳಲ್ಲಿ ಆಸಕ್ತಿ: ಶಿಕ್ಷಣ ಒಂದು ಬಲವಾದ ಆಸಕ್ತಿ. ವಿಜ್ಞಾನ ಇನ್ನೊಂದು
    ಆಸಕ್ತಿ. ತತ್ವಜ್ಞಾನ ಮತ್ತೊಂದು. ಆದ್ದರಿಂದಲೂ ನನ್ನ ಮಾತು didactic ಎನಿಸಬಹುದು. ಏನು ಮಾಡಲಿ? ಕನ್ನಡ ಕಲಿತ ನಿಮಗೆ ಗೊತ್ತಿರಬಹುದು: `ವೃದ್ಧಸೇವಾನುರಾಗಂ’ ಕವಿತೆಗೆ ಒಂದು ಕಾರಣ ಎನ್ನುವುದು. ವಯಸ್ಸಿನ ರಿಯಾಯಿತಿಯನ್ನು ನಾನು ಬೇಡುವುದಿಲ್ಲ. ಬದಲು ವಯಸ್ಸಿನ ಜತೆ ಮತ್ತು ಓದಿನ ಜತೆ ಬರುವ ಅನುಭವಕ್ಕೆ ಸಲ್ಲಬೇಕಾದ ಅದೇನೋ ಒಂದನ್ನು—ಬಹುಶಃ ಸಹನೆ, ಸಹಿಷ್ಣುತೆ, ಕುತೂಹಲ. ನಾವು ಎಲ್ಲವನ್ನೂ ತಳ್ಳುತ್ತ, ಸವರುತ್ತ, ಕಡಿಯುತ್ತ ಹೋದರೆ ಇನ್ನೇನು ಉಳಿಯುವುದು? (ನೋಡಿ: ಅಡಿಗರ `ವರ್ಧಮಾನ’, ಅನಂತಮೂರ್ತಿಯವರ `ಸೂರ್ಯನ ಕುದುರೆ’.) ಬಹುಶಃ ವರ್ಧಮಾನ ವಯಸ್ಸಿನಲ್ಲಿ ಇದು ಸಹಜವೇ ಇರಬಹುದು.
    ಲೋಕ ಬದಲಾಗುತ್ತ ಇದೆ: ಕೆಲವು ಬದಲಾವಣೆಗಳು ಇಷ್ಟವಾಗುತ್ತವೆ, ಕೆಲವು ಆಗುವುದಿಲ್ಲ, ಕೆಲವರ ಕುರಿತು ಏನೂ ಹೇಳಲು ಸಾಧ್ಯವಾಗುವುದಿಲ್ಲ.
    ಇನ್ನು ಒಬ್ಬ ವ್ಯಕ್ತಿಯೂ ಒಂದು ದಿನದಲ್ಲಿ ಒಬ್ಬನೇ ಎಂದು ನಾನು ತಿಳಿಯುವುದಿಲ್ಲ—ಒಂದರ್ಥದಲ್ಲಿ. ಹೇಳುವುದಕ್ಕೆ ತುಂಬಾ ಇದೆ, ಆದರೆ ಕೆಲವು ಸ್ವಂತಕ್ಕೇ ಸ್ಪಷ್ಟವಾಗಿರುವುದಿಲ್ಲ. ಸೆ ಲ ವೀ!.
    ನೀವು ಮನಬಿಚ್ಚಿ ಮಾತಾಡಿದ್ದಕ್ಕೆ ಕೃತಜ್ಞತೆಗಳು.
    ಶುಭಾಶಯಗಳು.
    ನಿಮ್ಮ
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: