ಬೂಕರ್ ಪ್ರಶಸ್ತಿ ವಿಜೇತೆ ಅರು೦ಧತಿ ರಾಯ್ ಅವರ ಆತ್ಮಚರಿತ್ರೆ ‘Mother Mary Comes to Me’
‘ಪೆಂಗ್ವಿನ್’ ಈ ಕೃತಿಯನ್ನು ಪ್ರಕಟಿಸಿದೆ.
ಗುರುಪ್ರಸಾದ ಕಾಗಿನೆಲೆ ಅವರ ನೋಟ ಇಲ್ಲಿದೆ.
-ಗುರುಪ್ರಸಾದ ಕಾಗಿನೆಲೆ
’ಒಂದು ರಾತ್ರಿ ಮಲಗಿದ್ದ ನನ್ನನ್ನು ಎಬ್ಬಿಸಿ ಆಕೆಯ ಕೋಣೆಗೆ ಬಾ ಎಂದು ಕರೆಸಲಾಯಿತು. ಆಕೆ ತನ್ನ ಹಾಸಿಗೆಯ ಮೇಲೆ ಕಣ್ಣು ಬಿಟ್ಟುಕೊಂಡು ಮಲಗಿದ್ದಳು. ನಾನು ಅಲ್ಲಿ ಇದ್ದದ್ದು ಕೂಡ ಆಕೆಗೆ ಗೊತ್ತಾಗಲಿಲ್ಲ. ಆಕೆಗೆ ನನ್ನಿಂದ ಏನೂ ಬೇಕಿರಲಿಲ್ಲ, ಏನೂ ಮಾಡದೇ ಸುಮ್ಮನೇ ಆಕೆಯ ಕಣ್ಣಮುಂದೆ ನಾನು ನಿಂತಿರಬೇಕಿತ್ತು. ನನ್ನ ಸಹನೆ ಮಿತಿ ಮೀರಿತ್ತು. ಆಗ ಏಕ್‍ದಂ ದೊಡ್ಡ ಧ್ವನಿಯಲ್ಲಿ ‘ ಆ ’ಪರಾಯ’ (Paraya, Pariah ಎಂಬ ಪದದ ಅಪಭ್ರಂಶ- ಅಸ್ಪೃಶ್ಯ ಎಂದು ಅರ್ಥ) ಗಳಿಗೆ ಬಂದು ನನ್ನನ್ನು ಕ್ಲೀನ್ ಮಾಡಲು ಹೇಳು’ ಎಂದು ಕೂಗಿದಳು.
ಒಂದು ಕ್ಷಣ ನಾನೇನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೇ ಆಕೆಯ ಮಂಚದ ಬಳಿಯಿದ್ದ ಒಂದು ಕುರ್ಚಿಯನ್ನು್ ಎತ್ತಿ ನೆಲಕ್ಕೆ ಅಪ್ಪಳಿಸಿದೆ. ಆಕೆಯ ಇಡೀ ದೇಹ ಒಮ್ಮೆ ಅಲುಗಿತು. ಆಕೆಯ ಆತ್ಮವೇ ಆಕೆಯ ದೇಹದ ಮೂಲಕ ಹರಿದು ಹೋದಂತೆ ನನಗೆ ಕಂಡಿತು. ನಾನು ಮತ್ತು ನನ್ನಮ್ಮ ಯಾವುದಾದರೂ ವಿಷಯಕ್ಕೆ ಹೀಗೆ ಏಕ್‍ದಂ ರಿಯಾಕ್ಟ್ ಮಾಡಿದ್ದು ಅದೇ ಮೊದಲು, ಅದೊಂದೇ ಬಾರಿ ಕೂಡ. ಅಬ್ಬಾ, ಅದೆಂಥ ಪ್ರತಿಕ್ರಿಯೆ. ನನಗೆ ನಾನು ಆಕೆಯನ್ನು ಕೊಂದೇಬಿಟ್ಟನೇ ಎಂದು ಅನುಮಾನವಾಗಿತ್ತು. ಹಾಗೇನೂ ಆಗಿರಲಿಲ್ಲ. ನನ್ನಲ್ಲಿನ ’ಏನೋ ಒಂದನ್ನು’ ಅಂದು ನಾನು ಕೊಂದಿದ್ದೆ.
ಜನರನ್ನು ಗುಲಾಮರಂತೆ ನಡೆಸಿಕೊಳ್ಳುವುದು ಆಕೆಯ ರೂಢಿ. ಯಾರೂ ಆಕೆಯ ಬಳಿ ನನ್ನ ಹಾಗೆ ನಡೆದುಕೊಂಡಿರಲಿಲ್ಲ. ಆ ಶಾಕ್ ಆಕೆಯನ್ನು ಒಂದು ಕ್ಷಣಕ್ಕಾದರೂ ಆಕೆಯನ್ನು ’ಎಚ್ಚರ’ಕ್ಕೆ ಕರೆತಂದಿತ್ತು.
ನನ್ನ ಮತ್ತು ಮಿಸೆಸ್ ರಾಯ್ ನಡುವಿನ ಚಕಮಕಿಯನ್ನು ಆದಷ್ಟು ಕಡಿಮೆ ಮಾಡಲು ನಾನು ಕಂಡುಕೊಂಡ ದಾರಿಯೆಂದರೆ ಆಕೆಯನ್ನು ಆಗಾಗ್ಗೆ ಭೇಟಿ ಮಾಡುವುದು, ಆದರೆ ಪ್ರತಿ ಭೇಟಿಯಲ್ಲೂ ಆದಷ್ಟು ಕಡಿಮೆ ದಿನ ಮಾತ್ರ ಜತೆಗಿರುವುದು. ಜೇಡರ ಬಲೆಯೊಳಗೆ ತನ್ನ ಸಣ್ಣ ರೆಕ್ಕೆಗಳನ್ನು ಆದಷ್ಟು ಸಣ್ಣದಾಗಿ ಮಡಿಸಿ, ಮೈಯಳತೆಯನ್ನೇ ಕುಗ್ಗಿಸಿ ಅನುಸರಿಸಿಕೊಂಡು ತೆವಳುತ್ತಾ, ಒಳಸರಿಯುವ ಸಣ್ಣ ಕೀಟದಂತೆ ನಾನು ಆಕೆಯ ಕಕ್ಷೆಯನ್ನು ಪ್ರವೇಶಿಸುತ್ತಿದ್ದೆ. ಹೊರಬರುವಾಗ ಕೂಡ ಒಳಬಂದ ದಾರಿಯಲ್ಲಿಯೇ ನನ್ನ ರೆಕ್ಕೆಗಳ ಯಾವ ಭಾಗಗಳೂ ಆಕೆಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಹುಷಾರಾಗಿರುತ್ತಿದ್ದೆ.
ನಾನು ಆಕೆಯ ಎತ್ತರದ ಹಾಸಿಗೆಯ ಮೇಲೆ ಆಕೆಯ ಪಕ್ಕದಲ್ಲಿ ಕೂತಿದ್ದೆ. ಆಕೆ ತನ್ನ ಮೂಗಿಗೆ ಆಕ್ಸಿಜನ್ ನಳಿಕೆಯನ್ನು ಸಿಗಿಸಿಕೊಂಡು, ಕಿವಿಯಲ್ಲಿ ವಜ್ರದ ಲೋಲಾಕುಗಳನ್ನು ತೊಟ್ಟುಕೊಂಡು, 44 DD ಲೈಲಾಕು ಲೇಸಿನ ಬ್ರಾ ಹಾಕಿಕೊಂಡು, ವಯಸ್ಕರ ಡಯಾಪರನ್ನು ಧರಿಸಿ, ’ಬ್ಯಾಲೆನ್ಸಿ’ಗಾಗಿ ಒಂದು ಜತೆ ಹೈ ಟಾಪ್ ನೈಕಿ ಬ್ಯಾಸ್ಕೆಟ್ ಬಾಲು ಬೂಟುಗಳನ್ನು ಹಾಕಿಕೊಂಡು ಎರಡೂ ಕಾಲುಗಳನ್ನು ಥ್ರಿಲ್ಲಾಗಿ ಅಲ್ಲಾಡಿಸುತ್ತಿರುವ ಸ್ಕೂಲು ಹುಡುಗಿಯಂತೆ ಕೂತಿದ್ದಳು.
ಅಂದು ನನ್ನ ಮನಸ್ಸಿನಲ್ಲಿ ಏನು ಆಲೋಚನೆ ಬಂತೆಂದು ನನಗೆ ಇನ್ನೂ ನೆನಪಿದೆ. ’ ಸಹಜತೆ ಅನ್ನುವ ಯಾವುದಕ್ಕೆ ನನ್ನಂತವಳಿಗೆ ಇಲ್ಲಿ ಅವಕಾಶವುಂಟು?’

ಆಕೆ ತನ್ನನ್ನು, ತನ್ನ ಬಗೆಗಿನ ಎಲ್ಲವನ್ನೂ ಇಷ್ಟಪಡುತ್ತಿದ್ದಳು. ನನಗೆ ಆ ಕಾರಣ ಅವಳು ಅಂದರೆ ಇಷ್ಟ.
ಅರುಂಧತಿ ರಾಯ್ ಆಕೆಯ ಅಮ್ಮನ ಬಗ್ಗೆ ಬರೆದಿರುವ ’Mother Mary Comes to Me’ ಪುಸ್ತಕದ ಕೆಲ ಸಾಲುಗಳಿವು. ಓದುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿಸುವ ಗದ್ಯ ಅರುಂಧತಿಗೆ ಒದಗಿದೆ. ಈ ಸಾಲುಗಳನ್ನು ನಾನು ನನ್ನದಾಗಿ ಮಾಡಿಕೊಳ್ಳುವುದಕ್ಕೆ ಅದನ್ನು ಕನ್ನಡೀಕರಿಸಿಕೊಂಡೆ. ಇವುಗಳನ್ನು ಮೂಲ ಇಂಗ್ಲಿಷಿನಲ್ಲಿ ಓದುವುದರ ಸೊಗಸೇ ಬೇರೆ.
ಅಮ್ಮನಿಗೆ ಬ್ರಾ ಕೊಂಡ ಕತೆಯನ್ನು ಅರುಂಧತಿ ವಿವರಿಸುತ್ತಾ ಹೋಗುತ್ತಾಳೆ. ಅಮ್ಮ ’ಬ್ರಾ ಹೀಗೇ ಇರಬೇಕು’ ಎಂದು ಕುಸುಪಷ್ಟಿ ಮಾಡುತ್ತಾಳೆಂದು ಅರುಂಧತಿ ಇಟಲಿಗೆ ಹೋಗಿದ್ದಾಗ ಫೆರಾರ ಎಂಬ ಸಣ್ಣ ಪಟ್ಟಣದಲ್ಲಿ ಬ್ರಾ ಶಾಪಿಂಗಿಗೆಂದು ಹೋಗುತ್ತಾಳೆ. ಫೆರಾರ ಎಂಬ ಇಟಲಿಯ ಈ ಸಣ್ಣ ಪಟ್ಟಣಕ್ಕೆ ಯಾವುದೋ ಕಾರ್ಯಕ್ರಮಕ್ಕೆ ಅರುಂಧತಿ ಹೋಗಿದ್ದಳಂತೆ. ಆಕೆಯ ನೆಚ್ಚಿನ ಲೇಖಕ ಜಾನ್ ಬರ್ಗರ್ ಎಂಬಾತ ಕೂಡ ಅಲ್ಲಿ ಇದ್ದಾನೆಂಬುದು ಆಕೆಗೆ ಆ ಪುಟ್ಟ ಪಟ್ಟಣಕ್ಕೆ ಹೋಗಲು ಸಿಕ್ಕ ಇನ್ನೊಂದು ದೊಡ್ಡ ನೆಪ.
ಊರಿನ ಕಾರ್ಯಕ್ರಮವಾದನಂತರ ಫ್ರೆಂಚ್ ಆಲ್ಪ್ಸ್ ನಲ್ಲಿರುವ ಆತನ ಸಣ್ಣ ಹಳ್ಳಿಯಲ್ಲಿ ಆತನ ಜತೆ ಕೊಂಚ ಕಾಲ ಕಳೆಯಬೇಕೆಂಬ ಪ್ಲಾನಿತ್ತು. ಹೋಗುವ ಮುನ್ನ ಫೆರಾರದಲ್ಲಿ ಮಿಸೆಸ್ ರಾಯ್ (ಅಮ್ಮನಿಗೆ ಇಡೀ ಪುಸ್ತಕದ ಪೂರ ಹಾಗೇ ಸಂಭೋಧಿಸಿದ್ದಾಳೆ, ಅರುಂಧತಿ) ಗೆ ಬ್ರಾ ಖರೀದಿಸಲು ಇಡೀ ದಿನ ಬರ್ಗರ್ ನನ್ನು ಕರೆದುಕೊಂಡು ಹೋದಳಂತೆ. ಅಮ್ಮನಿಗೆ ಬ್ರಾ ಖರೀದಿ ಮಾಡಲು ಅರುಂಧತಿಗೆ ಈತ ಸಹಾಯ ಮಾಡಿದನಂತೆ. ಪ್ರತಿ ಅಂಗಡಿಗೆ ಹೋದಾಗಲೂ ಈ ಎಂಬತ್ತೂ ಚಿಲ್ಲರೆ ವಯಸ್ಸಿನ ಬ್ರಿಟಿಷ್ ಉಚ್ಚಾರದಲ್ಲಿ ಇಟ್ಲಾಲಿಯನ್ ಮಾತಾಡುವ ಅತಿ ಸುಂದರ ವ್ಯಕ್ತಿ ’ನಿಮ್ಮ ಹತ್ತಿರ 44 DD ಸೈಜಿನಲ್ಲಿ ಇರುವ ಬ್ರಾಗಳನ್ನು ತೋರಿಸುತ್ತೀರಾ’ ಎಂದು ಬ್ರಾ ವ್ಯಾಪಾರ ಮಾಡುವುದನ್ನು ನೋಡಲಿಕ್ಕೇ ಮಜಾ ಬರುತ್ತಿತ್ತಂತೆ. ಕೆಲವೊಮ್ಮೆ ನನ್ನಷ್ಟಕ್ಕೆ ನಾನೇ ಇಂತಹ ರಹಸ್ಯವಾದ ಆಟಕ್ಕೆ ನನ್ನನ್ನು ಒಡ್ಡಿಕೊಳ್ಳುತ್ತಿದ್ದೆ ಎನ್ನುತ್ತಾಳೆ, ಕೀಟಲೆಯಿಂದ ಅರುಂಧತಿ.
ಅಂದು ರಾತ್ರಿ ಆಕೆ ಫ್ರೆಂಚ್ ಆಲ್ಪ್ಸ್ ನಲ್ಲಿರುವ ಆತನ ಸಣ್ಣ ಮನೆಯಲ್ಲಿ ಆತ ತಾನೇ ಅರುಂಧತಿಗೆಂದು ಮಾಡಿದ ಅಡುಗೆಯನ್ನು ಇಬ್ಬರೂ ಉಂಡು, ಒಟ್ಟಿಗೇ ಪಾತ್ರೆ ತೊಳೆದಮೇಲೆ ಕೇಳಿದನಂತೆ.’ ಅರುಂಧತೀ, ನಿನ್ನನ್ನು ನೋಡಿದರೆ ನೀನೇನೋ ಹೊಸದನ್ನು ಬರೆಯುತ್ತಿರುವಂತೆ ಕಾಣುತ್ತಿದೆ. ನೀನು ನನಗಾಗಿ ಅದನ್ನು ದಯವಿಟ್ಟು ಓದು’
ಆ ಎತ್ತರದ ಪರ್ವತದ ಮೌನದಲ್ಲಿ ಆಕೆ ಬರೆಯುತ್ತಿದ್ದ ’The Ministry of Utmost Happiness’ ಪುಸ್ತಕದ ಕೆಲಸಾಲುಗಳನ್ನು ಆತನಿಗಾಗಿ ಆಕೆ ಓದಿದಳಂತೆ.
ನಂತರ ಅರುಂಧತಿ ಬರೆಯುತ್ತಾಳೆ.
’ಜಾನ್ ಬರ್ಗರ್ ಅಂದು Ways of Listening ಎಂಬ ಪುಸ್ತಕವನ್ನೇ ಬರೆದುಬಿಡಬಹುದಾಗಿತ್ತು. ಆತ ಅಂದು ತನ್ನ ಇಡೀ ಶರೀರದಿಂದ ಆಲಿಸಿದ. ನನ್ನ ಪದಗಳೆಲ್ಲ ಮಳೆಹನಿಗಳಂತೆ. ಆತ ಭೂಮಿಯಂತೆ. ಆತ ಎಲ್ಲವನ್ನೂ ಹೀರಿಕೊಂಡ, ಹನಿಹನಿಯನ್ನೂ, ಏನನ್ನೂ ಬಿಡಲಿಲ್ಲ, ಏನೇನನ್ನೂ. ಆತನ ಕೇಳುವ ಕಣ್ಣುಗಳು ಆ ಪರ್ವತದ ಸರೋವರಗಳಾಗಿದ್ದವು. ಅದು ಪ್ರೀತಿ, ಅಷ್ಟೇ. ಅದಕ್ಕೆ ಬೇರೆ ಯಾವುದೇ ಬೇರೆ ಪದವಿಲ್ಲ.
ಓದುಗರು ಒಮ್ಮೆ ಕನಲಿಹೋಗುವ, ನಿಶ್ಯಬ್ದವಾಗಿ ಕೂರುವ, ಮುಗುಳ್ನಗುವ, ಕಣ್ಣಾಲಿಗಳನ್ನು ಒದ್ದೆ ಮಾಡಿಕೊಳ್ಳುವ ಇಂತ ಅನೇಕ ಸಾಲುಗಳಿವೆ, ಈ ಪುಸ್ತಕದಲ್ಲಿ.
ಅರುಂಧತಿ ಮಾಯಕದ ಬರಹಗಾರ್ತಿ. ಓದುತ್ತಿದ್ದಾಗ ಮತ್ತು ಬರುವಂತೆ ಓದಿಸಿಕೊಂಡು ಹೋಗುವಂತ ಶಕ್ತಿ ಆಕೆಯ ಗದ್ಯಕ್ಕಿದ್ದೆ. ಅನುವಾದಕ್ಕೆ ಎಷ್ಟು ಸಿಗುತ್ತದೋ ಗೊತ್ತಿಲ್ಲ- ನಮ್ಮದಾಗಿಸಿಕೊಳ್ಳಬಹುದಷ್ಟೇ.
ಇಂಥ ಮಾಂತ್ರಿಕ ಭಾಷೆಯಲ್ಲಿ ಚರಿತ್ರೆ, ಆತ್ಮಚರಿತ್ರೆಯನ್ನು ಬರೆಯಲಾದೀತೇ? ಒಬ್ಬ ಕತೆಗಾರ್ತಿ ಏನೇ ಬರೆಯಲಿ ಅದರಲ್ಲಿ ಫಿಕ್ಷನ್ ಇಲ್ಲದಿರುತ್ತದೆಯೇ? ಭಾಷೆಯ ಅಮಲಿನಲ್ಲಿ ಸಿಕ್ಕ ಓದುಗರಿಗೆ ಸತ್ಯ ಸಿಗಬಹುದೇ? ಕತೆಗಾರ್ತಿಗೆ ದೊರಕಿದ ಸತ್ಯದ ಒಂದು ಪರಿಪ್ರೇಕ್ಷ್ಯ ಮಾತ್ರ ದೊರಕಬಹುದು
ಅಮ್ಮನ ಬಯಾಗ್ರಫಿ ಎಂದು ಬರೆಯಿಸಿಕೊಂಡಿರುವ ಪುಸ್ತಕವಿದು. ಮೇರಿ ರಾಯ್ ಎಂಬ ಕೇರಳದ ಶಕ್ತಿಶಾಲಿ ಮಹಿಳೆಯ ಮಗಳಾಗಿ ಅರುಂಧತಿ ತನ್ನ ಜೀವನವನ್ನು ಕಟ್ಟಿಕೊಂಡ, ಜತೆಯಲ್ಲಿಯೇ ಅಮ್ಮನನ್ನು ’ಬರೇ ಪ್ರೀತಿಸುವುದಕ್ಕಾಗಿ ಅಲ್ಲ, ಪ್ರೀತಿಸುತ್ತಲೇ ಇರಲು’ ಅಮ್ಮನ ಪ್ರೀತಿಯ ಸಾತತ್ಯವನ್ನ ಉಳಿಸಿಕೊಳ್ಳಲು ತಾನು ಬಿಟ್ಟುಹೋದ ಅಮ್ಮನನ್ನು ಕಡೆತನಕ ಆಕೆಯ ಎಲ್ಲ ತಕರಾರುಗಳ, ಕಿರಿಕಿರಿಯ ಜತೆಜತೆಗೂ ಪ್ರೀತಿಸಿದ್ದು ಹೇಗೆ ಎಂಬುದನ್ನು ಅರುಂಧತಿ ಬಿಡಿಬಿಡಿಯಾಗಿ ಹೇಳಿಕೊಂಡಿರುವ ಕಥನವಿದು. ಅಮ್ಮ ಇಲ್ಲಿ ’ಗ್ಯಾಂಗ್‍ಸ್ಟರ್’ ಆಗಿ ’ಅತಿ ಆಸಕ್ತಿಕರ ವಿಷಯವಾಗಿ’ ಅರುಂಧತಿಗೆ ಕಾಣಿಸುತ್ತಾಳೆ. ಕೆಲವೊಮ್ಮ ರಾಕ್ಷಸಿಯಾಗಿ ಅಬ್ಬರಿಸುತ್ತಾಳೆ. ಆಕೆಯ ಜತೆಗಿರಲಾಗದೇ ಅಮ್ಮನನ್ನು ಬಿಟ್ಟು ದೂರದ ದೆಹಲಿಗೆ ಮನೆಬಿಟ್ಟು ಹೋಗಿಬಿಡುತ್ತಾಳೆ. ಆದರೆ ಎಷ್ಟೇ ದಿನ ಅಮ್ಮನಿಂದ ದೂರವಿದ್ದಾಗಲೂ ಅಮ್ಮನ ಪ್ರಬಾವದಿಂದ ದೂರವಿರಲು ಆಕೆಗೆ ಸಾಧ್ಯವಾಗುವುದಿಲ್ಲ.
ಇದು ಅಮ್ಮನ ಬಗ್ಗೆ ಮಗಳು ಬರೆದ ಕೇವಲ ವ್ಯಕ್ತಿಚಿತ್ರವಲ್ಲ. ಮೇರಿ ರಾಯ್ ಎಂಬ ವ್ಯಕ್ತಿಯಿಂದ ಪ್ರೇರಿತಗೊಂಡು ಮಿಸೆಸ್ ರಾಯ್ ಎಂಬ ಪಾತ್ರ ವನ್ನು ಅರುಂಧತಿ ಸೃಷ್ಟಿಸಿದ್ದಾಳೆ. ಈ ಪಾತ್ರ ಬೆಳೆಯುತ್ತಾ ಹೋದಹಾಗೆ ಅರುಂಧತಿಯ ಬದುಕು, ಬರೆಹ, ಹೋರಾಟ ಎಲ್ಲವೂ ಅರಳುತ್ತಾ ಹೋಗುತ್ತದೆ. ಕೆಲವೊಮ್ಮೆ ಮಿಸೆಸ್ ರಾಯ್ ಅ ಬದುಕು ಮತ್ತು ಅಮ್ಮನದೇ ಹೋರಾಟಗಳು ಅರುಂಧತಿಯ ಬದುಕು ಮತ್ತು ಹೋರಾಟಗಳಿಗೂ ಪ್ರಸ್ತುತ. ಕೆಲವೊಮ್ಮೆ ಅಪ್ರಸ್ತುತ.
ಮೇರಿ ರಾಯ್ ಅರವತ್ತರ ದಶಕದಲ್ಲಿ ಬದುಕಿದ ಅಸಾಧಾರಣ ಹೆಂಗಸು. ತನ್ನ ಕುಡುಕ ಗಂಡನನ್ನು ಬಿಟ್ಟು ಇಬ್ಬರೇ ಮಕ್ಕಳನ್ನು ಕರಕೊಂಡು ಊಟಿಗೆ ಹೋಗಿ, ಅಲ್ಲಿ ಒದ್ದಾಡಿ ನಂತರ ವಾಪಸ್ಸು ಕೊಟ್ಟಾಯಮ್‍ಗೆ ಬಂದು ಕೇರಳದ ಶಿಕ್ಷಣ ಕ್ಷೇತ್ರದಲ್ಲಿಯೇ ಕ್ರಾಂತಿಕಾರಿ ಎನ್ನಬಹುದಾದ ಮಾದರಿ ಶಾಲೆಯನ್ನು ಸ್ಥಾಪಿಸಿದವಳು. ಮಗಳಿಗೆ ಶೇಕ್ಸ್ ಪಿಯರನನ್ನು ಹಾಗೂ ಮೊದಲ ಟೈಪ್‍ರೈಟರನ್ನು ಪರಿಚಯಿಸಿದವಳು. ಕ್ರಿಶ್ಚಿಯನ್ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿಲ್ಲ ಎಂದು ವಾದಿಸುವ ಟ್ರಾವಂಕೂರ್ ಕ್ರಿಶ್ಚಿಯನ್ ಸಕ್ಸೆಷನ್ ಆಕ್ಟ್ ವಿರುದ್ದ ಸುಪ್ರೀಮ್ ಕೋರ್ಟಿನಲ್ಲಿ ದಾವಾ ಹಾಕಿ ಗೆದ್ದಾಕೆ.
ಇಲ್ಲಿ ಅರುಂಧತಿ ಮತ್ತು ಆಕೆಯ ಅಣ್ಣ ಇದ್ದಾರೆ. ರೋಡ್ಸ್ ಸ್ಕಾಲರ್ ಸೋದರ ಮಾವ ಜಿ. ಐಸಾಕ್ (ಚಾಕೋ), ಏನೂ ಅಲ್ಲದ “ನಥಿಂಗ್ ಮ್ಯಾನ್” ಅಪ್ಪ ಮಿಕಿ ರಾಯ್ ಇದ್ದಾರೆ. ಈಕೆಯ ಜತೆ ಒಟ್ಟಿಗೇ ಬಾಳ್ವೆ ನಡೆಸಿದ ಗಂಡ ಪ್ರದೀಪ್ ಕಿಶನ್ ಇದ್ದಾರೆ. ಆತನ ಡಾಕ್ಯುಮೆಂಟರಿ ಚಿತ್ರಗಳಿವೆ. ನನಗೆ ಗೊತ್ತೇ ಇಲ್ಲದ ’ಮಾಥೀ ಸಾಹೀಬ್’ ನ ನಟಿ ಅರುಂಧತಿ ಕೂಡ ಇದ್ದಾಳೆ.
ಜತೆಗೆ ಅಮ್ಮನ ಆಸ್ತಮಾ ಇದೆ. ಅಸ್ತಮಾ ಉಸಿರುಗಟ್ಟಿಸುವ ಕಾಯಿಲೆ. ಉಸಿರುಗಟ್ಟಿಸುವುದೆಂದರೆ ಉಸಿರಾಡಲು ಕಷ್ಟವಾಗುವುದೆಂದಲ್ಲ. ಶ್ವಾಸಕೋಶದಲ್ಲಿ ಸಿಕ್ಕ ಉಸಿರು ಹೊರಬರಲಾರದೆ ನಮ್ಮ ಉಸಿರೇ ನಮಗೆ ಭಾರವಾಗುವುದು. ಇಷ್ಟೆಲ್ಲ ವೈದ್ಯಕೀಯ ಸೂಕ್ಷ್ಮಗಳು ಗೊತ್ತಾಗದಿದ್ದರೂ ಮೇರಿ ರಾಯ್ ಗೆ ಇದ್ದ ಆಸ್ತಮಾ ’ಉಸಿರೇ ಭಾರವೆನಿಸುವ’ ‘Air trapper’ ಆಗಿ ಅನಪೇಕ್ಷಿತ ರೂಪಕವಾಗಿಯೂ ಸಲ್ಲುತ್ತದೆ. ಕೆಲವೊಮ್ಮೆ ಅಕ್ಷರಗಳ ಶಕ್ತಿಯೇ ಹಾಗೆ. ಬರೆಯುತ್ತಾ ಹೋದಹಾಗೆ ನಾವೆಣಿಸದಿದ್ದ ಶಕ್ತಿಗಳೂ ಅವಕ್ಕೆ ಬಂದುಬಿಡುತ್ತವೆ. ಅಂಥ ರೂಪಕ ಬರವಣಿಗೆ ಅರುಂಧತಿಗೆ ಒದಗಿದೆ.
ಈ ಬರವಣಿಗೆಗೆ ಸತ್ಯ ಹೇಳುವ ಶಕ್ತಿ ಇದೆಯೇ?
ನಾನು ಅರುಂಧತಿ ಪ್ರಯತ್ನಪೂರ್ವಕವಾಗಿ ಸತ್ಯವನ್ನು ಮುಚ್ಚಿಡುತ್ತಿದ್ದಾಳೆ ಎಂದು ಹೇಳುತ್ತಿಲ್ಲ. ಆದರೆ ನಾನು ಮೊದಲೇ ಹೇಳಿದಂತೆ ಕತೆಗಾರ/ರ್ತಿ ಏನನ್ನು ಬರೆದರೂ ಅದು ಕತೆಯೇ ಆಗಿರುತ್ತದೆ. ಈಕೆ ನೋಡುವ ಮೇರಿ ರಾಯ್ ಮಿಸೆಸ್ ರಾಯ್ ಆಗಿ ತನ್ನದೇ ಕತೆಯೊಂದರ ಪಾತ್ರವಾಗಿ ಮಾತ್ರ ಅರುಂಧತಿಗೆ ದಕ್ಕಬಲ್ಲಳು. ’ಅಮ್ಮ ಬಂದಳು’ ಎಂದು ಹೇಳುವ ಬದಲು Mrs. Roy arrived with her usual cavalcade ಎಂದು ಹೇಳುವಾಗ ಆ ಗ್ರಹಿಕೆಯಲ್ಲಿಯೇ ಒಂದು ದೊಡ್ಡ ವ್ಯತ್ಯಾಸವಿದೆ. ಮೊದಲನೆಯದು ’ಪಳ್ಳಿಕೂಡಮ್ ಶಾಲೆಯ’ ಯಾವೊಬ್ಬ ಆಯಾಳಿಗೂ ಆಗಬಲ್ಲ ಅಮ್ಮ. ಎರಡನೆಯದು ಅರುಂಧತಿ ರಾಯ್‍ಗೆ ಮಾತ್ರ ದಕ್ಕಬಲ್ಲ ಮಿಸೆಸ್ ರಾಯ್. ಒಂದು ಸಾರ್ವತ್ರಿಕ ಭಾವ. ಇನ್ನೊಂದು ದೃಷ್ಟಿಕೋನ. ಆಕೆ ಅಮ್ಮನ ಬಗ್ಗೆ ಬರೆಯುವ ಏಕೈಕ ಪುಸ್ತಕದಲ್ಲಿಯೂ ಆಕೆ ಪ್ರಯತ್ನಪೂರ್ವಕವಾಗಿ ಬರೆಯಬಾರದೆಂದರೂ ಫಿಕ್ಷನ್ ಇರದೇ ಇರಲು ಅಸಾಧ್ಯ. ಹಾಗಾಗಿಯೇ ಈಕೆಯ ಒಂದು ಸಾವಿರ ಪುಟಗಳಷ್ಟಿರುವ ‘My Seditious Heart’ ಒಂದು ಮಹಾಕಾದಂಬರಿಯಂತೆ ಓದಿಸಿಕೊಂಡು ಹೋಗಲು ಸಾಧ್ಯ.
ಇದ್ದದ್ದನ್ನು ಇದ್ದಂತೆ ಹೇಳಿದರೂ ಹೇಳುವ ಧ್ವನಿಗೇ ಕತೆ ಹೇಳುವ ಗುಣವಿದ್ದರೆ? ಅದೊಂದು ಶಾಪವಲ್ಲವೇ? (ಕುಂವೀಯವರ ’ಗಾಂಧಿಕ್ಲಾಸು’ ಓದಿದಾಗಲೂ ನನಗೆ ಹೀಗೆ ಅನ್ನಿಸಿತ್ತು).
ಇಂಥ ಬರವಣಿಗೆ ಅರುಂಧತಿಯ ಗರ್ಭಸ್ರಾವಕ್ಕೆ ‘ಈ ಜಗತ್ತಿನ ಸಂಕಷ್ಟಗಳಿಗೆ ಇನ್ನೊಂದು ಜೀವವನ್ನು ಒಡ್ಡಲಾರದ’ ನೊಬಿಲಿಟಿ ಕೊಡಿಸುತ್ತದೆ. ಆದರೆ, ಅರುಂಧತಿಯ ಅಮ್ಮ ಅರುಂಧತಿ ಗರ್ಭದಲ್ಲಿದ್ದಾಗ ಇನ್ನೊಂದು ಮಗು ಬೇಡವೆಂದು ಗರ್ಭಸ್ರಾವಕ್ಕೆಂದು ಮಾಡಿದ ’ಸಿಕ್ಕಾಪಟ್ಟೆ ಹಸೀ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಹ್ಯಾಂಗರಿನವರೆಗಿನ’ ಪ್ರಯತ್ನಗಳು ರಾಕ್ಷಸೀ ಪ್ರವೃತ್ತಿಯಾಗಿ ಕಾಣುತ್ತವೆ. ಅಪ್ಪ ’ಮಿಕೀ ರಾಯ್’ ಆಸ್ಥಾನ ವಿದೂಷಕನಂತೆ ಅಲ್ಲಲ್ಲಿ ಕಾಮಿಕ್ ರಿಲೀಫ್ ಕೊಡುತ್ತಾನೆ (ಆದರೂ ಅಪ್ಪನ ಜತೆಗಿನ ಕೊನೆಯ ಕೆಲವು ದೃಶ್ಯಗಳು ಬಹಳ ಹೃದಯಸ್ಪರ್ಶಿಯಾಗಿವೆ.
ನಾನು ಹೇಳಬೇಕೆಂದುಕೊಳ್ಳುತ್ತಿರುವುದಿಷ್ಟೇ. ಈ ಪುಸ್ತಕ ಒಂದು ಒಳ್ಳೆಯ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ಇಲ್ಲಿ ನಮಗೆ ಪರಿಚಯವಾಗುವುದು ಮೇರಿ ರಾಯ್ ಎಂಬ ದಕ್ಷ ಆಡಳಿತಾಧಿಕಾರಿಯೂ ಅಲ್ಲ. ಅರುಂಧತಿ ರಾಯಳ, ಅಮ್ಮನೂ ಅಲ್ಲ. ಮಿಸೆಸ್ ರಾಯ್ ಎಂಬ ಎರಡೂ ವ್ಯಕ್ತಿಯ ವ್ಯಕ್ತಿತ್ವವೂ ಮೇಳೈಸಿದ ಪಾತ್ರ. ಇದು ಅರುಂಧತಿ ರಾಯ್‍ಗೆ ದಕ್ಕಿದ ಸತ್ಯ.
ಕತೆಗಾರ ಸತ್ಯವನ್ನೂ ಕತೆಯಂತೇ ಗ್ರಹಿಸುವುದು, ಹೇಳುವುದು.
ಇನ್ನೊಂದು ಮಜಾ ಕೊಡುವ ವಿಷಯವೆಂದರೆ ‘The God of Small Things’ ಅನ್ನು ಅರ್ಪಿಸಿರುವುದು ಆಕೆಯ ಅಮ್ಮ ಮೇರಿ ರಾಯ್ ಗೆ. ಅದನ್ನು ನೋಡಿ ಆಕೆಯ ಅಣ್ಣ ಹೇಳಿದನಂತೆ. ’ಇಡೀ ಪುಸ್ತಕದಲ್ಲಿ ಇರುವ ಫಿಕ್ಷನ್ ಅದೊಂದೇ ನೋಡು’ ಎಂದು






0 Comments