ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಲ ಮತ್ತು ಎಡಗಳ ನಡುವಿನ ಮಾರ್ಗ

udayakumar habbuಉದಯಕುಮಾರ ಹಬ್ಬು

ಬುದ್ಧರ ಕಾಲದಲ್ಲಿ ಭಾರತದಲ್ಲಿ ಎರಡು ತಾತ್ವಿಕ ಚಿಂತನೆಗಳು ಅಧಿಪತ್ಯವನ್ನು ಹೊಂದಿದ್ದವು. ಅವು ಯಾವವೆಂದರೆ ಅಸ್ತಿತ್ವವಾದ ಸತ್- ಈ ವಿಚಾರವನ್ನು ತತ್ವಶಾಸ್ತ್ರಜ್ಞರು ವೇದಕಾಲದಿದಲೂ ಪ್ರೋತ್ಸಾಹಿಸಿದರು ಮತ್ತು ಬೆಳೆಸಿದರು. ಎರಡನೆಯದು ನಾಸ್ತಿತ್ವ- ಅಸತ್ ಈ ಸಿದ್ಧಾಂತವನ್ನು ಭೌತಿಕವಾದಿಗಳು ಸಾಂಪ್ರದಾಯಿಕ ತತ್ವಗಳಿಗೆ ವಿರೋಧದ ಪ್ರತಿಕ್ರಿಯೆಯಾಗಿ ಪ್ರಸ್ತುತ ಪಡಿಸಿದರು. ಅಸ್ತಿತ್ವ ಸಿದ್ಧಾಂತವು ಸಾಮಾನ್ಯ ಅನುಭವಜನ್ಯ ವಿಷಯವಾಗಿರಲಿಲ್ಲ. ಆದರೆ ಮನುಷ್ಯನಲ್ಲಿ ಮತ್ತು ನಿಸರ್ಗದ ಎಲ್ಲ ಅಂಶಗಳಲ್ಲಿ ಒಂದು ಶಾಶ್ವತ ಮತ್ತು ಅಮರ ದ್ರವ್ಯದ ಅಸ್ತಿತ್ವವೆಂದು ಪ್ರಸ್ತುತಪಡಿಸಲಾಯಿತು.

buddha2ಮನುಷ್ಯನಲ್ಲಿ ಅದು ಬದಲಾವಣೆ ಹೊಂದದ ಆತ್ಮ ಎಂದಾಗಿತ್ತು. ಅದು ಅಶಾಶ್ವತ ಮನೋದೈಹಿಕ ವ್ಯಕ್ತಿತ್ವದಲ್ಲಿ ಬಂಧಿಯಾಗಿರುತ್ತದೆ. ಒಮ್ಮೆ ಈ ಬಂಧನದಿಂದ ಬಿಡಿಸಿಕೊಂಡ ಮೇಲೆ ತನ್ನ ಅಂತಿಮ ನೈತಿಕ ಸ್ಥಾನವಾದ `ಬ್ರಹ್ಮನ್’ ಅನ್ನು ಸೇರಿಕೊಳ್ಳುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಅಂತೆಯೆ ನಿಸರ್ಗದಲ್ಲಿ ಇರುವ ಈ ವಾಸ್ತವತೆಯನ್ನು ವಿವರಿಸಲು ಕೆಲವು ಸಾಂಪ್ರದಾಯಿಕ ತತ್ವಶಾಸ್ತ್ರಜ್ಞರು ಒಬ್ಬ ಸೃಷ್ಟಿಕರ್ತ ಅಥವಾ ದೇವರು ಎಂಬ ಕಲ್ಪನೆಯನ್ನು ಪ್ರಸ್ತುತಪಡಿಸಿದರು.

ಪ್ರಾರಂಭದ ಹಂತದಲ್ಲಿಯೇ ಆತ್ಮವು ದೇವರಿಂದ ಅಥವಾ ದೇವತೆಗಳಿಂದ ಸೃಷ್ಟಿಲ್ಪಟ್ಟಿದೆ, ಆ ದೇವರುಗಳು ಈ ಆತ್ಮನ್ ಇದು ಒಂದಲ್ಲ ಒಂದು ಸಾಮಾಜಿಕ ವರ್ಗಗಳಿಗೆ ಸಂಬಂಧಿಸಿದೆ ಎಂದು ನಿರ್ಧರಿಸಿದರು. 1 ಅರ್ಚಕ ಅಥವಾ ಬ್ರಾಹ್ಮಣ ವರ್ಗ 2. ಕ್ಷತ್ರಿಯ ವರ್ಗ 3. ವೈಶ್ಯ ವರ್ಗ 4. ಸೇವಕರಾದ ಶೂದ್ರ ವರ್ಗ. ಈ ರೀತಿಯಲ್ಲಿ ಪ್ರತಿಯೊಬ್ಬ ಸ್ಥಾನಮಾನವು ಮೊದಲೇ ನಿರ್ಧರಿತವಾಗಿದ್ದು ಬದಲಾಯಿಸಲು ಸಾಧ್ಯವಿಲ್ಲವಾಗಿದೆ. ಸೃಷ್ಟಿಯ ಈ ಅಂಶವು ಭೌತಿಕವಾದಿಗಳ ಮತ್ತು ಬುದ್ಧರ ತೀವ್ರ ಟೀಕೆಗೊಳಗಾಗಿತ್ತು.

ಅಧ್ಯಾತ್ಮಿಕ ಆತ್ಮವನ್ನು ನಿರಾಕರಿಸುತ್ತ ಭೌತಿಕವಾದಿಗಳು ಇನ್ನೊಂದು ಅತಿಗೆ ಅಂದರೆ ಸಾವಿನ ನಂತರ ಮನುಷ್ಯನ ವ್ಯಕ್ತಿತ್ವದ ಸಂಪೂರ್ಣ ನಾಶ ಸಿದ್ಧಾಂತವನ್ನು ಪ್ರತಿಪಾದಿಸಿದರು. ಮತ್ತು ಯಾವುದೇ ನೈತಿಕ ಹೊಣೆಗಾರಿಕೆಯನ್ನು ನಿರಾಕರಿಸಿದರು. ಈ ಕುರಿತು ಬುದ್ಧರು ವಿವರಣೆ ನೀಡಿದರು. ಅವರು ಇವೆರಡರ ನಡುವಿನ ಮಧ್ಯಮ ಮಾರ್ಗವನ್ನು ಪ್ರತಿಪಾದಿಸಿದರು. ಅದನ್ನು ಪ್ರತೀತ್ಯ ಸಮುತ್ಪಾದವೆಂತಲೂ, ಸ್ವಭಾವ-ಶೂನ್ಯತಾ ಎಂತಲೂ ಹೆಸರಿಸಲಾಯಿತು. ಎರಡು ಅತಿರೇಕಗಳಾದ ಶಾಶ್ವತತೆ ಮತ್ತು ಸಂಪೂರ್ಣ ವಿನಾಶದ ನಡುವೆ, ಕಟ್ಟುನಿಟ್ಟಾದ ನಿಯಂತ್ರಣವಾದ ಮತ್ತು ಅವ್ಯವಸ್ಥೆಯ ಅನಿಯಂತ್ರಣವಾದದ ನಡುವೆ, ದೇವರ ಸರ್ವ-ಸ್ವತಂತ್ರ ಅಧಿಕಾರದ ವಾಸ್ತವತೆ ಮತ್ತು ನಿರಾಕರಣವಾದ ಅಥವಾ ಸಂದೇಹವಾದದ ಅತಿರೇಕದ ನಡುವೆ ಒಂದು ಮಧ್ಯಮ ಮಾರ್ಗವನ್ನು ಪ್ರಸ್ತುತ ಪಡಿಸಿದರು.

ಬುದ್ಧರು ‘ಸಮ್ಯಕ್ ದೃಷ್ಟಿ’ ಸ್ವಭಾವದ ಬಗ್ಗೆ ಕಾತ್ಯಾಯನ ಎಂಬ ಹೆಸರಿನ ಸನ್ಯಾಸಿಗೆ ವಿವರಿಸುವ ಸಂದರ್ಭದಲ್ಲಿ ಹೀಗೆ ಹೇಳುತ್ತಾರೆ: ‘ಕಾತ್ಯಾಯನ, ಪ್ರತಿ ನಿತ್ಯದ ಅನುಭವವು’  ಅದು ಇದೆ ಅದು ಇರುವುದಿಲ್ಲ ಎಂಬ ದ್ವಯತ್ವದ ಮೇಲೆ ಅವಲಂಬಿಸಿರುತ್ತದೆ. ಆದರೆ ಯಾರು ಧರ್ಮದ ಮೇಲೆ ಮತ್ತು ವಿವೇಕದ ಮೇಲೆ ಅವಲಂಬಿಸಿರುವರೊ, ಆ ಮೂಲಕ ಜಗತ್ತಿನ ವಸ್ತುಗಳು ಹೇಗೆ ಉಂಟಾಗುತ್ತವೆ ಮತ್ತು ಸಾಯುತ್ತವೆ ಎಂಬುದನ್ನು ನೇರವಾಗಿ ಗ್ರಹಿಸುತ್ತಾನೆಯೊ ಅವನಿಗೆ `ಇದೆ’ ಎಂಬುದೂ ಇಲ್ಲ, `ಇಲ್ಲ’ ಎಂಬುದೂ ಇಲ್ಲ. `ಎಲ್ಲವೂ ಅಸ್ತಿತ್ವದಲ್ಲಿದೆ’ ಎನ್ನುವುದು ಒಂದು ಅತಿರೇಕವಾಗಿದೆ. ಕಾತ್ಯಾಯನ, `ಯಾವುದೂ ಅಸ್ತಿತ್ವದಲ್ಲಿಲ್ಲ’ ಎನ್ನುವುದೂ ಇನ್ನೊಂದು ಅತಿರೇಕವಾಗುತ್ತದೆ. ತಥಾಗತರು ಈ ಯಾವ ಎರಡು ಅತಿರೇಕಗಳ ಮೇಲೆ ಅವಲಂಬಿಸಿರುವುದಿಲ್ಲ. ಕಾತ್ಯಾಯನ, ಅವರು ಧರ್ಮವನ್ನು ಮಧ್ಯಮ ಮಾರ್ಗವಾಗಿ ಬೋಧಿಸುತ್ತಾರೆ.

`ಯಾರಿಗೆ ಸಮ್ಯಕ್ ದೃಷ್ಟಿಯಿರುತ್ತದೋ ಆತನು ಉದಯಿಸುವ ಲೋಕವನ್ನು ಅದು ಇರುವಂತೆ ನೋಡುತ್ತಾನೆ. ಹೀಗಾಗಿ `ಅಸ್ತಿತ್ವವಿಲ್ಲ’ ಎಂಬ ದೃಷ್ಟಿಕೋನಕ್ಕೆ ಅಂಟಿಕೊಳ್ಳಲಾರ. ಮತ್ತು ಯಾರು ಸಮ್ಯಕ್ ದೃಷ್ಟಿಯಿಂದ ಲೋಕವು ಅಳಿಯುವುದನ್ನು ಮರೆಯಾಗುವುದನ್ನು ಕಾಣುತ್ತಾನೋ ಆತನು`ಅಸ್ತಿತ್ವವಿದೆ’ ಎಂಬ ದೃಷ್ಟಿಕೋನಕ್ಕೆ ಅಂಟಿಕೊಳ್ಳಲಾರ.’

`ಹೀಗೆ ಸಿದ್ಧಾಂತಗಳಿಗೆ ಅಂಟಿಕೊಂಡು ಅದಕ್ಕೆ ಬಂಧಿತರಾಗುತ್ತಾರೆ. ಮತ್ತು ಯಾರು ಸಿದ್ಧಾಂತಗಳಿಗೆ ಅಂಟುವುದಿಲ್ಲವೋ, ಪೂರ್ವಗ್ರಹ ಪೀಡಿತರಾಗುವುದಿಲ್ಲವೋ, ಪಕ್ಷರಹಿತರೋ ಅವರು `ಇದು ನನ್ನ ಆತ್ಮ’ ಎಂದು ತೀರ್ಮಾನಿಸುವುದಿಲ್ಲ. ಅವರು `ದುಃಖವು ಉದಯಿಸುತ್ತಿದೆ’ ಮತ್ತು`ದುಃಖವು ಅಳಿಯುತ್ತಿದೆ’ ಎಂದು ವೀಕ್ಷಿಸುತ್ತಾರೆ. ಅಂಥ ವ್ಯಕ್ತಿಗಳು ಸಂಶಯಗಳಿಗೆ ಬೀಳಲಾರರು, ದ್ವಂದ್ವಕ್ಕೆ ಸಿಲುಕಲಾರರು.ಇಲ್ಲಿಯವರೆಗೆ, ಕಾತ್ಯಾಯನ. ಸಮ್ಮಾದೃಷ್ಟಿ.’

ಮಧ್ಯಮ ಮಾರ್ಗವು ತನ್ನ ಸಾಪೇಕ್ಷ ಸಿದ್ಧಾಂತವಾದ ಪ್ರತೀತ್ಯ ಸಮುತ್ಪಾದ ಸಿದ್ಧಾಂತದಿಂದ ಜಗತ್ತು ಹೇಗಿದೆಯೊ ಹಾಗೆ ದೃಷ್ಟಿಸುವ ನೋಟದ ಶಕ್ತಿಯನ್ನು ಎಲ್ಲ ದೃಷ್ಟಿವಾದಗಳಿಂದ ವಿಸರ್ಜಿತ ನಿಲುವಿನ ಬಲವನ್ನು ನಮಗೆ ಕೊಡುತ್ತದೆ. ಜಗತ್ತಿನ ಎಲ್ಲ ದುಃಖಗಳಿಗೆ ಕಾರಣವೇ ಒಂದು ದೃಷ್ಟಿಕೋನಕ್ಕೆ ಅಂಟಿಕೊಳ್ಳುವುದಾಗಿದೆ. ಈ ದೃಷ್ಟಿಕೋನಕ್ಕೆ ಅಂಟಿಕೊಳ್ಳುವ ಕಳಂಕವು ambedkar posterನಮ್ಮ ಬದುಕಿನ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಮತ್ತು ದ್ವೇಷ, ಅಸೂಯೆ, ಹಿಂಸೆ ಯುದ್ಧ ಕೊಲೆಗಳಿಗೆ ಜಾಗತಿಕ ನಾಶಕ್ಕೆ ಕಾರಣವಾಗುತ್ತದೆ.ಈ ದೃಷ್ಟಿದೋಷವು ಇಂದಿನ ಧಾರ್ಮಿಕ, ರಾಜಕೀಯ ಮೂಲಭೂತವಾದದ ಮೆರಗನ್ನು ಪಡೆದು ಜನಸಾಮಾನ್ಯರ ಬದುಕಕು ಮೂಢನಂಬಿಕೆ, ಜಾತಿ ತಾರತಮ್ಯ, ಅಸ್ಪ್ರಶ್ಯತೆ, ಶೋಷಣೆ ಮತ್ತು ಸ್ತ್ರೀ ಶೋಷಣೆಗೆ ಮೂಲವಾಗಿ ತನ್ನ ಕ್ರೂರ ದವಡೆಗಳಿಂದ ಜನಸಾಮಾನ್ಯರನ್ನು ಕಬಳಿಸುತ್ತಿದೆ.

ದೃಷ್ಟಿವಾದವು ಕಬಂಧಬಾಹುವಿನಂತೆ ಮೂಲಭೂತವಾದ, ಉಗ್ರಗಾಮಿವಾದ, ಜಾತಿವಾದ ಮುಂತಾದ ಮಾರಕ ಸಮಾಜಘಾತುಕ ಅನಾರೋಗ್ಯ ಅನಾಹುತಗಳಿಗೆ ಕಾರಣವಾಗುತ್ತದೆ. ನಿತ್ಯದ ಬದುಕಿನಲ್ಲಿ ಶೂನ್ಯತಾವಾದವನ್ನು ಅಳವಡಿಸಿಕೊಂಡಲ್ಲಿ ಮನುಷ್ಯನಿಗೆ ಸುಖ, ಶಾಂತಿ, ಮತ್ತು ನೆಮ್ಮದಿ ಖಂಡಿತಕ್ಕೂ ದೊರೆಯಲು ಸಾಧ್ಯ. ದೃಷ್ಟಿವಾದಕ್ಕೆ ಅಂಟಿಕೊಂಡವನು ಮೂಲಭೂತವಾದಿಯಾಗುತ್ತಾನೆ, ಜಾತಿವಾದಿಯಾಗುತ್ತಾನೆ. ಯಾವುದನ್ನೂ ವಿವೇಚಿಸದೆ ನಂಬಿಬಿಡುವ ಮೂರ್ಖತನಕ್ಕೆ ಮಧ್ಯಮಮಾರ್ಗವು ಒಂದು ದಿವ್ಯೌಷದಂತೆ ಫಲಕೊಡುತ್ತದೆ. ಎಲ್ಲ ದೃಷ್ಟಿಕೋನಗಳ ಅನುಪಸ್ಥಿತಿಯು ವಾಸ್ತವವಾಗಿ ದೃಷ್ಟಿಕೋನವೇ ಅಲ್ಲ. ಅದುವೆ ಮಧ್ಯಮಮಾರ್ಗ ಅಥವಾ ಶೂನ್ಯತಾವಾಗಿದೆ.

ಬುದ್ಧರು ಮೋಕ್ಷ, ಪಾಪಪರಿಹಾರ, ಯಜ್ಞಗಳಲ್ಲಿ ಪ್ರಾಣಿಬಲಿ ಬ್ರಾಹ್ಮಣರ ಶ್ರೇಷ್ಠತೆ ಈ ವಿಚಾರಗಳೆಲ್ಲವೂ `ಇದೆ’ ಎಂಬ ಅಸ್ತಿತ್ವವಾದದಿಂದ ಮೂಡಿಬಂದ ಮಿಥ್ಯಾದೃಷ್ಟಿಕೋನಗಳೆಂದು ಹೇಳುತ್ತಾರೆ. ಅನಾತ್ಮ, ಅನಿತ್ಯ ದುಃಖ ಇವಿಷ್ಟೆ ಈ ಲೋಕ ಗ್ರಹಿಕೆಗೆ ಸಹಾಯ ಮಾಡುವ ಕಲ್ಪನೆಗಳಾಗಿವೆ. ಲೌಕಿಕ ಬದುಕಿನಲ್ಲಿಯೆ ಪರಮಾರ್ಥವಿದೆ. ಸಂಸಾರಕ್ಕೂ ನಿರ್ವಾಣಕ್ಕೂ ಯಾವ ವ್ಯತ್ಯಾಸವೂ ಇಲ್ಲ. ನೈತಿಕವಾಗಿ ಬದುಕಿದವನಿಗೆ ನಿರ್ವಾಣ ಅವನ ಕೈಯ ತುದಿಯಲ್ಲಿಯೇ ಇದೆ. ಪ್ರಪಂಚದ ಎಲ್ಲ ವಸ್ತುಗಳೂ ಸ್ವಭಾವಶೂನ್ಯವಾಗಿವೆ. ಯಾವ ವಸ್ತುವೂ ತನ್ನದೆ ಆದ ಸ್ವ-ಭಾವವನ್ನು ಹೊಂದಿರುವುದಿಲ್ಲ. ಅದು ತನ್ನ ಅಸ್ತಿತ್ವಕ್ಕಾಗಿ ಇನ್ನೊಂದನ್ನು ಅವಲಂಬಿಸಿರುತ್ತದೆ. ಇದುವೆ ನಾಗಾರ್ಜುನ ಮುನಿಯು ಬೋಧಿಸಿದ ಶೂನ್ಯತಾ ವಾದ. ಎಲ್ಲ ವಸ್ತುಗಳೂ ಒಂದು ಕಾರಣ ಮತ್ತು ಪರಿಸ್ಥಿತಿಯಿಂದಾಗಿ ಉಂಟಾಗುತ್ತವೆ ಮತ್ತು ಲಯಗೊಳ್ಳತ್ತವೆ. ಹಾಗಾಗಿ `ಇದೆ’ ಎಂಬ ವಾದ `ಇಲ್ಲ’ ಎಂಬ ವಾದ ಮಿಥ್ಯಾದೃಷ್ಟಿ ಎನ್ನುತ್ತಾನೆ ಬುದ್ಧ ಹಾಗೂ ನಾಗಾರ್ಜುನ.

ನಾಗಾರ್ಜುನ ಅಥವಾ ಬುದ್ಧರ ಈ ವಿಚಾರಗಳನ್ನು ನಾವು ಕಾರಂತರಲ್ಲಿ ಮತ್ತು ಏ ಎನ್ ಮೂರ್ತಿರಾವ ಅವರ ಬರಹಗಳಲ್ಲಿ ವಿಶೇಷವಾಗಿ ಕಾರಂತರ `ಬಾಳ್ವೆಯೇ ಬೆಳಕು’ ನಲ್ಲಿ ಮೂರ್ತಿರಾಯರ `ದೇವರು’ ಗ್ರಂಥಗಳಲ್ಲಿ ಕಾಣಲು ಸಾಧ್ಯ. ಕಾರಂತರು ಒಂದೆಡೆ ಹೇಳಿದ್ದಾರೆ. `ನನಗೆ ದೇವರು ಅಂದರೆ ಏನೂ ಅಂತ ಗೊತ್ತಿಲ್ಲ. ಗೊತ್ತಿಲ್ಲದ ವಿಷಯವನ್ನು ಗೊತ್ತಿದೆ ನಂಬಿದ್ದೇನೆ ಎಂದರೆ ಆಗದ ವಿಷಯ. ಮೂರ್ತಿರಾಯರು `ದೇವರು’ ಪುಸ್ತಕದಲ್ಲಿ ಬರೆಯುತ್ತಾರೆ. `ಇದೆ ಎಂಬ ವಸ್ತುವಿನ ಯಾವ ಪರಿಚಯವೂ ಇಲ್ಲದ ನಂಬಿಕೆ ಏನು ಮಾಡೀತು?’ ಮನುಕುಲಕ್ಕೆ ನನ್ನಂಥ ನಿರೀಶ್ವರವಾದಿಗಳೂ ಸೇರಿದಂತೆ ಮನುಕುಲಕ್ಕೆ ಕರುಣಾದ್ರ ಹೃದಯವಂತನೂ ಪ್ರೇಮಯಿಯೂ ಆದ ದೇವರು ಬೇಕು. ಆದರೆ ಅವನಿಲ್ಲ ಇದು ನಮ್ಮ ಕರುಣಾಜನಕ ಐರನಿ.’

ಎಡ ಪಂಥೀಯ ಕಮ್ಯುನಿಷ್ಟ್ ಪಕ್ಷದ ಅತಿರೇಕವನ್ನು ನಾವು ಚೈನಾದ ಸರ್ವಾಧಿಕಾರ ದಮನ ಪ್ರವೃತ್ತಿಯಲ್ಲಿ ಕಾಣಬಹುದು. ಬಲಪಂಥೀಯ ಅತಿರೇಕಗಳನ್ನು ನಾವು ಅಮೇರಿಕಾದ ಅಪಾರ್ಥೈಡ್ ನಿಗ್ರೋವಿರೊಧಿ ಸಿದ್ಧಾಂತಗಳಲ್ಲಿ ಕಾಣಬಹುದ. ನಮ್ಮ ದೇಶದಲ್ಲಿ ಪುರೋಹಿತಶಾಹಿ ವೇದಪ್ರಣೀತ ವರ್ಣವ್ಯವಸ್ಥೆ ಮತ್ತು ಜಾತಿ ತಾರತಮ್ಯದ ಆಚರಣೆಯಲ್ಲಿ ಕಾಣಬಹುದಾಗಿದೆ. ಸಮಾಜವಾದಿ ಸಿದ್ಧಾಂತದ ಅತಿರೇಕವನ್ನು ನಾವು ನಕ್ಸಲ್ ಚಳುವಳಿಯಲ್ಲಿ ಕಾಣಬಹುದಾಗಿದೆ. ಈ ಎಡ-ಬಲ ಪಂಥೀಯರ ಜನವಿರೋಧಿ ತತ್ವಗಳನ್ನು ಸೋಸಿ ಬಹುಜನ ಹಿತಾಯ ಮತ್ತು ಬಹುಜನ ಸುಖಾಯ ಸಿದ್ಧಾಂತವನ್ನು ಬುದ್ಧರು ಮಧ್ಯಮಮಾರ್ಗವೆಂದು ಕರೆಯುತ್ತಾರೆ.

‍ಲೇಖಕರು admin

8 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading