ಮಳೆ, ಇಳೆ, ಅಭಿವೃದ್ಧಿ
ಜಯಶ್ರೀ ಬಿ
ಮಳೆಗಾಲ ಬಂತೆಂದರೆ ಸಾಕು ನಮ್ಮ ಅಜ್ಜಿ ಲಗುಬಗೆಯಿಂದ ತೋಟದ ಬದುವಿನಂಚಿನಲ್ಲಿನ ಕೆಸುಎಲೆಗಳನ್ನು ತಂದು ಬಾಯಿಯಲ್ಲಿ ನೀರೂರಿಸುವ ಪತ್ರೊಡೆ ಮಾಡಿ ಮೊಮ್ಮಕ್ಕಳನ್ನು ಕರೆದು ಬಿಸಿಬಿಸಿಯಾಗಿ ಬಡಿಸಿ ತೃಪ್ತಿ ಪಡುತ್ತಿದ್ದರು. ಕಾಡು ಮಾವು ತೊಟ್ಟು ಕಳಚಿಕೊಂಡು ಪಟಪಟನೆ ಉದುರುತ್ತಿದ್ದಂತೆ ನಮ್ಮ ಪ್ರೀತಿಯ ಅಜ್ಜಿ ಅದನ್ನೇ ಗೊಜ್ಜು ಮಾಡಿ ಘಂ ಎಂದು ಬೆಳ್ಳುಳ್ಳಿ ಒಗ್ಗರಣೆ ಕೊಟ್ಟು ನಗುನಗುತ್ತ ಬಡಿಸುತ್ತಿದ್ದರು. ಅಟ್ಟದಲ್ಲಿನ ಹಪ್ಪಳ, ಚಿಗುರೆಲೆಗಳ ತಂಬುಳಿ, ಆಕಳ ಹಾಲು, ಗದ್ದೆಯಲ್ಲಿನ ಗೆಣಸಿನ ಬಳ್ಳೀಗಳ ಹಸಿ ಪರಿಮಳ.. ಹೀಗೆ ಮಳೆಗಾಲವೆಂದರೆ ನಾಸ್ಟಾಲ್ಜಿಯಾ. ಕಳೆದು ಹೋದ ಬಾಲ್ಯದ ಹಸಿ ಹಸಿ ನೆನಪುಗಳು. ಅನ್ನ ಬೇಯುವ ಘಮಲು, ಹೂವು ಅರಳುವ ಸೊಬಗು, ಭತ್ತ ಬೆಂದು ಅಕ್ಕಿಯಾಗುವ ಸಂಭ್ರಮ, ಅಂಗಳದಲ್ಲಿನ ಅಡಿಕೆ ಮಳೆಗೆ ಒದ್ದೆಯಾದೀತೆಂದು ಓಡಿ ಹೋಗಿ ಅದನ್ನು ಬಾಚುವಾಗಿನ ಭರ, ಹಣ್ಣಡಿಕೆಯ ಚೊಗರು ಪರಿಮಳ, ಉದುರಿ ಬೀಳುವ ಹಸಿ ನೆಲ್ಲಿ ಕಾಯಿಗಳು, ಅಲ್ಲೆಲ್ಲೋ ತೇಲಿ ಬರುವ ಸುರಗಿ ಹೂವಿನ ಗಂಧ. ಹಸಿರು ಮಿಶ್ರಿತ ಹಳದಿ ಭತ್ತದ ಗದ್ದೆಗಳು, ಹಣ್ಣಡಿಕೆ ತೂಗಿ ತೊನೆಯುವ ಕಡು ಹಸಿರು ಅಡಿಕೆ ಮರಗಳು, ಬೆಳ್ನೊರೆಯ ಜಲಪಾತದಂತೆ ತುಂಬಿ ಹರಿಯುವ ಹಳ್ಳ ಕೊಳ್ಳಗಳು.. ಹೀಗೆ ಮಳೆಗಾಲದ ವೈಭವವೇ ಬೇರೆ. ಕೀಟ್ಸ್ ಕವಿಯ ಕವನಗಳಂತೆ ಕಣ್ಣು, ಮನಸ್ಸು ತಂಪಾಗುವ ಅಸದೃಶ ರಮ್ಯ ಕಾಲ. ಮರದ ಎಲೆಗಳಿಂದ ತೊಟ್ಟಿಕ್ಕುವ ಹನಿ ಹನಿ ಬಿಂದುಗಳು ಒಂದೊಂದಾಗಿ ಭೂಮಿಯ ಮಡಿಲು ಸೇರುತ್ತಿದ್ದಂತೆ ನಿರ್ಮಲವಾಗುವ ಇಳೆ. ಯಾವಾಗಲೋ ಮಣ್ಣಿನೊಡಲಿನಲ್ಲಿ ಹುದುಗಿದ್ದ ಬೀಜಗಳು ಫಳ್ಳನೆ ಮೊಳಕೆಯೊಡೆದಂತೆ, ನಿಡುಸುಯ್ಯಿತ್ತಿದ್ದ ಗಾಳಿ ಕೂಡ ತಣ್ಣನೆ ಮೌನವಾದಂತೆ, ಮಳೆಗಾಲವೆಂದರೆ ಭೂತ, ಭವಿಶ್ಯಕ್ಕೊಂದು ಬೆಳಕಿಂಡಿ. ಶಾಲಾ ಕಾಲೇಜುಗಳೂ ಕೂಡ ಈ ಸಮಯದಲ್ಲಿಯೇ ಶುರುವಾಗುವುದರಿಂದ ನಿಜವಾದ ಅರ್ಥದಲ್ಲಿ ವರ್ಷಾರಂಭ.
ಈ ವರ್ಷವೇಕೋ ಮಳೆರಾಯ ಮುನಿಸಿಕೊಂಡಂತಿದೆ. ಮಳೆಗಾಲದ ಜಲಧಾರೆಯಲ್ಲಿ ತೊಯ್ಯುವ, ಜಡಿಮಳೆಯ ಸದ್ದಿನಲ್ಲಿ ಮೈ ಮರೆಯುವ ಸೂಚನೆ ಹೆಚ್ಚೇನೂ ಇಲ್ಲ. ಗೊರಬು ಹೊತ್ತುಕೊಂಡು ನೇಜಿ ನೆಡುವ, ಆಟದ ಹೊಗೆ ತುಂಬಿದ ನಾಗಂದಿಗೆಯಿಂದ ತರಕಾರಿ ಬೀಜಗಳನ್ನು ತೆಗೆದು ಕೊಡುವ, ತೋಟದಿಂದ ಅಬ್ಬಲಿಗೆ, ದಾಸವಾಳ, ನಂದಿ ಬಟ್ಟಲು ಹೀಗೆ ಹೂಗಳನ್ನು ತಂದು ಮಾಲೆ ಮಾಡಿ ಮುಡಿಯುವ ಮಹಿಳೆಯರೂ ವಿರಳ.
ಒನಕೆ ಕುಟ್ಟುವ ಸದ್ದು, ಕಾಳು ಬೀಸುವ ಸದ್ದು, ಗೆರಸೆಯಲ್ಲಿ ಅಕ್ಕಿ ಗೇರುವ ಸದ್ದು, ಗೇರು ಬೀಜದ ಎಣ್ಣೆ ಕೊತ ಕೊತ ಕುದಿಯುವ ಸದ್ದು..ಹೀಗೆ ಮಹಿಳೆಯರು ನಮ್ಮ ಕೃಷಿ ಸಂಸ್ಕೃತಿಯ ಭಾಗವೇ ಆಗಿದ್ದು ಅದನ್ನು ರಕ್ಷಿಸುತ್ತಿದ್ದರು. ಇನ್ನು ‘ಅಡಿಗೆ’, ‘ಆಹಾರವೂ ಮಹಿಳೆಯರ ಸಕ್ರಿಯ ಪಾತ್ರವನ್ನೇ ಅಪೇಕ್ಷಿಸುತ್ತ ಅವರಿಗೊಂದು ಅನನ್ಯತೆಯನ್ನೂ ಕೊಟ್ಟಿತ್ತು.
ಅಂಗಳದಲ್ಲಿನ ತುಳಸಿ, ಹಿತ್ತಲಿನಲ್ಲಿನ ಕರಿಬೇವು, ಶುಂಠಿ, ಅರಿಸಿನ, ತೋಟದಲ್ಲಿನ ಹಲಸು, ಬಾಳೆಕಾಯಿ ಹೀಗೆ ‘ಕಿಚನ್ ಗಾರ್ಡನ್’ ಎಂಬ ಕಾನ್ಸೆಪ್ಟ್ ಇಲ್ಲದಿದ್ದರೂ ನಮ್ಮ ಹಳ್ಳಿಗಳಲ್ಲಿ ಸಂಪೂರ್ಣ ಸಾವಯವವಾದ, ಪರಿಶುದ್ಧವಾದ ಆಹಾರವನ್ನು ಉತ್ಪಾದಿಸಲಾಗುತ್ತಿತ್ತು. ಈಗ ನೋಡಿದರೆ ಹಳ್ಳಿಯವರು ಕೂಡ ಪೇಟೆಯಿಂದ ತರಕಾರಿ ಕೊಂಡೊಯ್ಯುತ್ತಾರೆ. ಅಭಿವೃದ್ಧಿ, ಸ್ಟೇಟಸ್ ಎಂದರೆ ಇಕ್ಕಟ್ಟಾದ ಫ್ಲಾಟ್ನಲ್ಲಿ ಆದರೂ ಸರಿಯೇ ಸಿಟಿಯಲ್ಲಿ, ಸಾಧ್ಯವಾದರೆ ಬೆಂಗಳೂರಿನಲ್ಲಿ ಇರುವುದೆಂಬ ಭಾವನೆ.

ತಮ್ಮ ಕೃತಿ ‘ಸ್ಟೇಯಿಂಗ್ ಅಲೈವ್: ವಿಮೆನ್ ,ಇಕಾನಮಿ ಅಂಡ್ ಡೆವಲಪ್ಮೆಂಟ್’ನಲ್ಲಿ ವಂದನಾ ಶಿವರವರು ಕೈಗಾರಿಕೀಕರಣದ ಹೆಸರಿನಲ್ಲಿ ಮಹಿಳೆಯ ಕೈಯಿಂದ ಕೃಷಿಯ ಸ್ವಾಯತ್ತತೆಯನ್ನು ಕಿತ್ತುಕೊಂಡಿತು ಎಂದು ಪ್ರತಿಪಾದಿಸುತ್ತಾರೆ. ಹಾಲು ಕರೆಯುವುದು, ಹಟ್ಟಿ ಗೊಬ್ಬರವನ್ನು ವಿಲೇವಾರಿ ಮಾಡುವುದು, ಅಡಿಕೆ ಹೆಕ್ಕುವುದು, ಗೇರುಬೀಜ ಕೊಯ್ಯುವುದು, ಅಗತ್ಯ ಬಿದ್ದರೆ ಗೊಬ್ಬರ ಹೊರಲೂ ಸೈ ಎನ್ನುವ, ಅಕ್ಕಿ ಮುಡಿ ಕಟ್ಟಲೂ ಹಿಂಜರಿಯದ ಗಟ್ಟಿಗತನ ಅವರಲ್ಲಿದೆ. (ಕಾರಂತರ ‘ಮರಳಿ ಮಣ್ಣಿಗೆ’ ಕೃತಿಯ ಸರಸೋತಿಯಂತೆ). ಈಗಿನ ಪರಿಸ್ಥಿತಿ ಮಾತ್ರ ಮಹಿಳೆಯರ ಸ್ವಾವಲಂಬನೆಯ ಹಕ್ಕನ್ನು ಕಿತ್ತುಕೊಳ್ಳುತ್ತಲಿದೆ. ತೃತೀಯ ಜಗತ್ತಿನ ಮೇಲೆ ಹೇರಲ್ಪಡುವ ಆಥರ್ಿಕ ನೀತಿಗಳಿಂದಾಗಿ ನಿಸರ್ಗದ, ಅದರಲ್ಲೂ ಮಹಿಳೆಯರ ಮೇಲಾಗುವ ದೌರ್ಜನ್ಯಗಳಿಗೆ ಎಣೆಯಿಲ್ಲ. ಈ ನಿಟ್ಟಿನಲ್ಲಿ ‘ಇಕೋ ಫೆಮಿನಿಸಮ್’ ಇದೀಗ ಚಾಲ್ತಿಯಲ್ಲಿರುವ ಶಬ್ದ.ಯಾವ ದೇಶದಲ್ಲಿ ಪ್ರಕೃತಿಯನ್ನು ಗೌರವಿಸುವುದಿಲ್ಲವೋ, ಅಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳಾಗುತ್ತದೆ ಎಂದು ಇಕೋ ಫೆಮಿನಿಸಮ್ ಪ್ರತಿಪಾದಿಸುತ್ತದೆ ಹಾಗೂ ಭಾರತದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಇದು ಅಕ್ಶರಶ ಸತ್ಯ.
ವ್ಯಾಪಕವಾದ ಅರಣ್ಯ ನಾಶ ಬ್ರಿಟಿಷರ ಕಾಲದಿಂದ ಆರಂಭವಾಯಿತೆನ್ನಬಹುದು. (ಸಿಮ್ಲಾದಂತಹ ತಂಪು ಪ್ರದೇಶಗಳಲ್ಲಿನ ಲಕ್ಸುರಿ ಬಂಗಲೆಗಳಿಗೆ, ಕುಸುರಿ ಕೆತ್ತನೆಯ ಫರ್ನೀಚರ್ಗಳಿಗೆ, ಹೀಗೆಲ್ಲ). ಕಾಡುತ್ಪನ್ನಗಳನ್ನು ಮಾರಿ ಹೊಟ್ಟೆ ಹೊರೆಯುವ ಆದಿವಾಸಿಗಳನ್ನು ಆಪಾದನೆಗೊಳಪಡಿಸುವ ಸರಕಾರ ಮರದ ದಿಮ್ಮಿಗಳನ್ನು ಸಾಗಿಸುವವರತ್ತ ಜಾಣ ಮೌನ ತೋರುವುದು, ಬಡ ರೈತರ ಭೂಮಿಗಳನ್ನು ಆರ್ಥಿಕ ವಲಯದ ಹೆಸರಿನಲ್ಲಿ , ಯಾವುದೋ ಪ್ರೊಜೆಕ್ಟ್ ಹೆಸರಿನಲ್ಲಿ ವಶ ಪಡಿಸಿಕೊಳ್ಳುವುದು ಒಂದು ರೀತಿಯ ಸ್ಟೇಟ್ ಟೆರರಿಸಂ ಎನ್ನದೆ ವಿಧಿಯಿಲ್ಲ. ನಮ್ಮ ದೇಶದ ಬಡ ಜನರ ನೆಲ, ಜಲ, ಭೂಮಿಯನ್ನು ಉದಾರವಾಗಿ ಕೊಟ್ಟು ಅಭಿವೃದ್ಧಿಯ ಹರಿಕಾರರೆಂದೆನಿಸಿಕೊಳ್ಳಲು ನಮ್ಮ ನೇತಾರರು ಸ್ಪರ್ಧೆಗಿಳಿದಿದ್ದಾರೇನೋ ಎನಿಸುವಂತಿದೆ ಸದ್ಯದ ಪರಿಸ್ಠಿತಿ.
ಹಾಗೆಂದು ಹಳ್ಳಿಗಳಲ್ಲೇ ನೆಲೆನಿಂತರೆ ಭವಿಷ್ಯವೇನು ಆಶಾದಾಯಕವಾಗಿಲ. ನಗರಗಳಲ್ಲಿ ಝಗಮಗಿಸುವ ಜಾಹೀರಾತು ಫಲಕಗಳು, ಹಳ್ಳಿಗಳಲ್ಲಿ ವೋಲ್ಟೇಜ್ ಇರದ ಮಿಣುಕು ಬಲ್ಬ್ಗಳು. ನಗರಗಳಲ್ಲಿ ವಾಹನ ದಟ್ಟಣೆಯ ಟ್ರಾಫಿಕ್ ಜಾಮ್ಗಳು, ಹಳ್ಳಿಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಸಲ ಬರುವ ಶಟಲ್ ಬಸ್ಸುಗಳು. ಹಳ್ಳಿಯಲ್ಲಿ ಲೀಲಾಜಾಲವಾಗಿ ಮರ ಹತ್ತಬಲ್ಲ ಹೈದ ಇಂಗ್ಲಿಷ್ನಲ್ಲಿ ಪಟಪಟ ಮಾತನಾಡುವ ಹುಡುಗನ ಮುಂದೆ ಕೀಳರಿಮೆಯಿಂದ ಕುಗ್ಗುತ್ತಾನೆ. ಲಂಗ ದಾವಣಿಯಲ್ಲಿ ಚೆಂದವಾಗಿಯೇ ಕಾಣುವ ಹುಡುಗಿ ಜೀನ್ಸ್ ಟಾಪ್ ಧರಿಸಿದ ಲಿಪ್ಸ್ಸ್ಟಿಕ್ಧಾರಿ ಹುಡುಗಿಯನ್ನು ನೋಡಿ ಕಕ್ಕಾಬಿಕ್ಕಿಯಾಗುತ್ತಳೆ. ಎಲ್ಲಿಯ ವರೆಗೆ ಅನ್ನ ಬೆಳೆವ ಬಡ ರೈತನ ಬೆವರಿನ ಬೆಲೆ, ಟೊಮೆಟೊ ರಸ್ತೆಗೆ ಸುರಿದು ಪ್ರತಿಭಟಿಸುವ ಹಳ್ಳಿಗರ ಆಕ್ರೋಶ, ವಿಷ ಕುಡಿದು ಆತ್ಮಹತ್ಯೆಗೈಯುವ ರೈತನ ಅಳಲನ್ನು, ಆರ್ತ ಆಕ್ರೋಶವನ್ನು ಸಮಾಜ, ಸರಕಾರ ಮನಗಂಡು ತಕ್ಕ ಪರಿಹಾರವನ್ನು ತಳಮಟ್ಟದಿಂದ ಕೈಗೊಳ್ಳುವುದಿಲ್ಲವೋ ಅಲ್ಲಿವರೆಗೆ ಅಭಿವೃದ್ಧಿಯೆನ್ನುವುದೊಂದು ಭ್ರಮೆ. ಅಭಿವೃದ್ಧಿಯೆನ್ನುವುದು ನೆಲದಲ್ಲಿ ಆಳವಾಗಿ ಬೇರೂರುವ ದೇವದಾರು ವೃಕ್ಷದಂತಿರಬೇಕು, ಕೃತಕವಾಗಿ ಬೆಳೆಸಿದ ಲಾನಿನಂತಲ್ಲ.






Superb! 🙂
Very true…well written.
ಅಭಿವೃದ್ಧಿಯೆನ್ನುವುದು ನೆಲದಲ್ಲಿ ಆಳವಾಗಿ ಬೇರೂರುವ ದೇವದಾರು ವೃಕ್ಷದಂತಿರಬೇಕು, ಕೃತಕವಾಗಿ ಬೆಳೆಸಿದ ಲಾನಿನಂತಲ್ಲ… ನಿಜ.