ಬರೆಯದ ಮಗನ ಕವಿತೆಗಳಿಗೆ ಕಾಯುತ್ತಾ…

ಇದೊಂದು ಸೋಜಿಗ. ‘ಬಹುರೂಪಿ’ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ.

‘ಬಹುರೂಪಿ’ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ ಬಗ್ಗೆ ಪಿಸುನುಡಿಗಳನ್ನು ಆಡಿದರು. ಅದು ಇಲ್ಲಿದೆ.

ಇದಕ್ಕೆ ಉತ್ತರವಾಗಿ ಆಕರ್ಷ ‘ನಾ ಬರೆಯಲಾಗದ ಕವಿತೆ ‘ಅಮ್ಮ’ನಿಗೆ..’ ಬರೆದರು. ಅದು ಇಲ್ಲಿದೆ

ಖ್ಯಾತ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಈ ಎರಡಕ್ಕೂ ತಮ್ಮ ಮಾತನ್ನೂ ಜೋಡಿಸಿದ್ದಾರೆ. ಅದು ಇಲ್ಲಿದೆ

ಈಗ ಧಾರವಾಡದಿಂದ ಬರಹಗಾರ, ಚಿಂತಕ ಅಶೋಕ್ ಶೆಟ್ಟರ್ ತಮ್ಮ ದನಿಗೂಡಿಸಿದ್ದಾರೆ. ಅದು ಇಲ್ಲಿದೆ

ಅಂಕೋಲೆಯಿಂದ ಕವಯತ್ರಿ ರೇಣುಕಾ ರಮಾನಂದ ತಮ್ಮೊಳಗೆ ಕವಿತೆ ಉಕ್ಕುವ ಬಗೆಯನ್ನು ಬಿಡಿಸಿಟ್ಟರು. ಅದು ಇಲ್ಲಿದೆ

ಈಗ ‘ಬಕುಲದ ಬಾಗಿಲಿನಿಂದ’ ಅಂಕಣ ಬರೆದ ಹೆಸರಾಂತ ನಾಟಕಕಾರರಾದ ಸುಧಾ ಆಡುಕಳ ತಮ್ಮ ನೋಟವನ್ನು ಇದಕ್ಕೆ ಬೆಸುಗೆ ಹಾಕಿದ್ದಾರೆ. ಓದಿ

ನೀವೂ ಇದಕ್ಕೆ ಸೇರಿಸುವ ಪಿಸು ಮಾತುಗಳಿದ್ದರೆ [email protected] ಗೆ ಕಳಿಸಿ

ಸುಧಾ ಆಡುಕಳ

ನೋಡಲು ಒರಟೊರಟಾಗಿ ಕಾಣುವ ಆಕರ್ಷನೆಂಬ ಯುವಕನೊಬ್ಬನ ಕವನ ಸಂಕಲನ ಪ್ರಕಟವಾಗುತ್ತದೆಯೆಂಬುದನ್ನು ಆಸಕ್ತಿಯಿಂದಲೇ ‘ಅವಧಿ’ಯಲ್ಲಿ ಓದುತ್ತಿದ್ದ ನನಗೆ ಅವನು ನಗುಮೊಗದ, ಸುಂದರ ಕವಿತೆಗಳ ಒಡತಿ ಕಮಲಾ ಅವರ ಮಗ ಎಂಬುದನ್ನು ಓದುತ್ತಿದ್ದಂತೆಯೇ ಎಂದೋ ಮರೆತಿದ್ದ ಕನಸೊಂದು ಎದೆಯೊಳಗೆ ಮತ್ತೆ ಚಿಗುರೊಡೆಯತೊಡಗಿತು. ಪ್ರತಿಕ್ರಿಯಿಸದಿರಲಾರೆ ಎಂಬ ಒತ್ತಡ ನನ್ನನ್ನು ಇಲ್ಲಿ ಬರೆಸುತ್ತಿದೆ.

ಓದು ಮುಗಿದು ಪುಸ್ತಕವನ್ನಿನ್ನೂ ಕೆಳಗಿಡದ ಕಾಲದಲ್ಲೇ ಮಡಿಲಿಗೆ ಬಂದ ಮಗ ಓದಿನ ಮುಂದಿನ ಭಾಗವೇ ಆಗಿ ಹೋಗಿದ್ದ. ಅಂಬೆಗಾಲು ಇಡುವಾಗಲೇ ಹತ್ತಾರು ಕಥೆ ಪುಸ್ತಕಗಳನ್ನು ಅವನೆದುರು ಹರಡಿದರೆ ಯಾವುದನ್ನೂ ಹರಿಯದೇ ಆಚೀಚೆಗೆ ತೂರುತ್ತಿದ್ದ ಅವನಾಟವನ್ನು ನೋಡುವುದೇ ಒಂದು ಸೊಗಸಾಗಿತ್ತು.

ತೊದಲು ಮಾತನಾಡುವ ಕಂದನೆದುರು ಪುಸ್ತಕಗಳನ್ನಿಟ್ಟರೆ ಎಲ್ಲವನ್ನೂ ಕಚ್ಚಿ ರುಚಿ ನೋಡುತ್ತಿದ್ದ. ಜೋಗುಳವೆಂದರೆ ಬೇಂದ್ರೆ, ಕೆ. ಎಸ್. ನ., ಕುವೆಂಪು, ಜಿ. ಎಸ್. ಎಸ್. ಅವರ ಕವಿತೆಗಳು, ಮಲಗಿಸುವುದೆಂದರೆ ನಿತ್ಯವೂ ಹೊಚ್ಚಹೊಸದಾದ ಕಥೆಗಳು, ಉಡುಗೊರೆಯೆಂದರೆ ಚೆಂದದ ಪುಸ್ತಕಗಳು…

ಕನ್ನಡದ ಕಂದನಾಗಿಸಲು ದೂರದಲ್ಲಿದರುವ ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿ ಸುಖಿಸಿದ್ದಾಯ್ತು. ನಾನು ಬಾಲ್ಯದಲ್ಲಿ ಕಲಿಯಲಾಗದ ಸಂಗೀತ, ಮದ್ದಲೆ, ಚಿತ್ರಕಲೆ ಎಲ್ಲವನ್ನೂ ಅವನಿಗೆ ಕಲಿಸುವ ಧಾವಂತ. ಓದುವ ಹಂತಕ್ಕೆ ಬಂದಾಗ ಕಥೆಯ ಪುಸ್ತಕಗಳ ಚಿತ್ರಗಳಿಗೆಲ್ಲ ಬಣ್ಣ ಬಳಿಯತೊಡಗಿದ ಮಗ.

ಮನೆತುಂಬ ಹರಡಿರುವ ಪುಸ್ತಕಗಳನ್ನೆಲ್ಲ ಜೋಡಿಸಿ ಚೆಂದದ ಮನೆಗಳನ್ನು ಕಟ್ಟುವುದು ಹವ್ಯಾಸವಾಯಿತು. ‘ಒಂದೂರಿನಲ್ಲಿ ಒಬ್ಬ ರಾಜನಿದ್ದ’ ಎಂದು ಕಥೆ ಶುರುವಾದೊಡನೇ ‘ರಾಜ ಒಂದಿನ ಸತ್ತುಹೋದ’ ಎಂದು ಅಂಗಳಕ್ಕೆ ಓಡತೊಡಗಿದ. ನಮ್ಮ ಎಲ್ಲ ಬೇಲಿಗಳನ್ನು ಮೀರಲೋ ಎಂಬಂತೆ ಕ್ರೀಡಾಂಗಣವನ್ನೇ ತನ್ನ ಆಡುಂಬೊಲವಾಗಿಸಿಕೊಂಡ. ಅದರಲ್ಲೂ ತರಬೇತಿಯೆಂಬ ಚೌಕಟ್ಟಿನಲ್ಲಿ ಬಂಧಿಯಾಗದಿರಲು ಆಗಾಗ ತನ್ನ ಆಟಗಳನ್ನೇ ಬದಲಾಯಿಸುತ್ತಿದ್ದ. ಶಟ್ಲಕಾಕ್, ಕಬಡ್ಡಿ, ವಾಲಿಬಾಲ್, ಜಿಗಿತ, ಓಟ, ಅಡೆತಡೆ ಓಟ… ಹೀಗೆ ಮುಟ್ಟಿದ್ದರೆಲ್ಲ ಚಿನ್ನದ ಗಳಿಕೆ. ಒಂದನ್ನೇ ನೆಚ್ಚಿಕೊಳ್ಳದ ಜಿಗಿತ. ಸದಾ ಹೊಸದರೆಡೆಗೆ ಓಟ… ಕ್ರೀಡಾ ಮೀಸಲಾತಿಯಲ್ಲಿಯೇ ಬೇಕಾದ ಕೋರ್ಸಿಗೆ ಪ್ರವೇಶ ಪಡೆಯುತ್ತಾನೆಂದು ಎಲ್ಲರೂ ನಿರೀಕ್ಷಿಸುತ್ತಿರುವಾಗಲೇ ಮೈದಾನಕ್ಕೆ ಕಾಲಿಡದ ಹಠ…

ಇವನನ್ನು ಕಂಡಾಗಲೆಲ್ಲ ಅಚ್ಚರಿ ನನಗೆ! ತೊಟ್ಟಿಲನ್ನು ತೂಗುತ್ತ ಹಾಡಿದ ನೂರಾರು ಹಾಡುಗಳನ್ನಿವ ಎಲ್ಲಿ ಅಡಗಿಸಿಟ್ಟಿದ್ದಾನೆ? ದಿನವೂ ಮಲಗಿಸುವಾಗ ಹೇಳಿದ ಸಾವಿರಾರು ಕಥೆಗಳು ಹೋದವೆಲ್ಲಿಗೆ? ‘ಮೊಗ್ಗಿನ ಪ್ರಾರ್ಥನೆಗೆ ಸೂರ್ಯ ಉದಯಿಸುತ್ತಾನೆ’ ಎಂದರೆ, ‘ಭೂಮಿ ಸೂರ್ಯನ ಸುತ್ತಲೂ ತಿರುಗುತ್ತದೆ, ಸೂರ್ಯನೆಲ್ಲಿ ಉದಯಿಸುತ್ತಾನೆ?’ ಎಂದೂ, ‘ಹೃದಯ ಭಾರವಾಯಿತು’ ಎಂದರೆ, “ಸಾಧ್ಯವೇ ಇಲ್ಲ. ಶಕ್ತಿ ನಿತ್ಯತೆಯ ನಿಯಮದ ಪ್ರಕಾರ ಹೃದಯದ ತೂಕ ಸ್ಥಿರವಾಗಿರಲೇಬೇಕು” ಎಂದು ಎಲ್ಲವನ್ನೂ ವೈಜ್ಞಾನಿಕವಾಗಿ ವಾದಿಸುತ್ತ ನನ್ನೊಳಗೆ ಮತ್ತೊಂದಿಷ್ಟು ಕಳವಳಗಳನ್ನು ತುಂಬಿಸುತ್ತಿದ್ದ.

ಹದಿಹರೆಯದವರಿಗೆಂದೇ ನಾನು ಬರೆದ ಪುಸ್ತಕದ ಒಂದು ಸಾಲನ್ನೂ ಓದದೇ ನಿರಾಸೆಗೊಳಿಸಿದ ಚೆಲುವ ಅದೇಕೋ ಇದ್ದಕ್ಕಿದ್ದಂತೆ ‘ಪೂಚಂತೇ’ಯವರನ್ನು ಇಡಿಯಾಗಿ ಓದತೊಡಗಿದ. ಅವರ ಎಲ್ಲ ಪುಸ್ತಕಗಳನ್ನು ತನ್ನದೊಂದು ಕಪಾಟಿನಲ್ಲಿ ಜೋಡಿಸಿಟ್ಟು ಮತ್ತೆ ಮತ್ತೆ ಪುಟಗಳನ್ನು ತಿರುಗಿಸುತ್ತಿದ್ದ. ರಷ್ಯನ್ ಇತಿಹಾಸದ ಕಥೆಗಳನ್ನು, ಹಿಟ್ಲರನ ಆಡಳಿತದ ಅವಾಂತರಗಳನ್ನು, ಮೊಘಲರ ಇತಿಹಾಸದ ವೈಭವಗಳನ್ನು ಹುಡುಕಿ ಓದಿದ. ಜಗತ್ತಿನ ಇತಿಹಾಸದ ಬಗ್ಗೆ ತಾಸುಗಟ್ಟಲೇ ನನ್ನ ಸ್ನೇಹಿತರೊಂದಿಗೆ ಚರ್ಚಿಸತೊಡಗಿದ.

ನನ್ನೆಲ್ಲ ರಂಗಕೃತಿಗಳನ್ನು ಮೊದಲ ಸಾಲಿನಲ್ಲಿ ಕುಳಿತು ಹತ್ತಾರು ಸಲ ನೋಡಿದ ಮೇಲೆಯೂ ಒಂದೂ ಪ್ರತಿಕ್ರಿಯೆ ನೀಡದಿರಲು ಅವನಿಗೆ ಮನಸ್ಸಾದರೂ ಹೇಗೆ ಬರುತ್ತದೆಯೋ? ಪ್ರತಿವರ್ಷ ಉಡುಗೊರೆಯಾಗಿ ನೀಡುವ ಡೈರಿಯ ಕೊನೆ ಪುಟದಲ್ಲಿಯಾದರೂ ಒಂದರೆಡು ಸಾಲು ಗೀಚದಿರಲು ಹೇಗೆ ಸಾಧ್ಯ? ಡೈರಿಯ ಪುಟಗಳನ್ನೆಲ್ಲ ಬರಿಯ ಗಣಿತದ ಸಮಸ್ಯೆಗಳಿಂದಲೇ ತುಂಬಿಹೋಗುತ್ತಿದ್ದವು. ಘನಘೋರವಾದ ವಿಜ್ಞಾನದ ಪುಸ್ತಕಗಳನ್ನು ಕಾದಂಬರಿಯೆಂಬಂತೆ ಬಿಟ್ಟೂ ಬಿಡದೇ ಓದುವ ತನ್ಮಯತೆ ಅದು ಹೇಗೆ ಸಿದ್ಧಿಸಿತೋ? ಎಂದೆಲ್ಲ ಅಂದುಕೊಳ್ಳುತ್ತಿರುವಾಗಲೇ ಜಗಜಿತ್ ಸಿಂಗ್, ರಶೀದ್ ಖಾನ್, ಮಹಮ್ಮದ್ ರಫಿ, ಪ್ರವೀಣ ಗೋಡಕಿಂಡಿ ಅವನ ಕೋಣೆಯಲ್ಲಿ ಇಣುಕತೊಡಗಿದರು.

ತೀರಾ ಇತ್ತೀಚೆಗೆ ‘ಕೆಂಪು ಕಣಗಿಲೆ’ ನಾಟಕದ ಮೊದಲ ಶೋ ನೋಡಿದವನೇ ಓಡಿಬಂದು ನನ್ನನ್ನು ತಬ್ಬಿ, “ಅಮ್ಮಾ, ನಿಜಕ್ಕೂ ನೀನು ಚೆಂದ ಬರೆದಿರುವೆ” ಎಂದಾಗ ಸ್ವರ್ಗ ನನ್ನೆದುರು ಸುಳಿದು ಹೋಗಿತ್ತು. ಅದಾಗಿ ತಿಂಗಳವರೆಗೂ “ನನ್ನೆಚ್ಚರ ನೀನು, ನನ್ನೆದೆಯ ಹಾಡು, ನನ್ನ ನೋವಿನ ಆಳ, ನನ್ನ ಗಮ್ಯದ ಜಾಡು” ಎಂಬ ನಾಟಕದ ಹಾಡನ್ನು ಗುಣುಗುತ್ತಿರುವಾಗ ನಾನು ಅದರ ಅರ್ಥದ ಬಗೆಗೇನೋ ವಿವರಿಸತೊಡಗಿದರೆ ಮತ್ತದೇ ನಿರ್ಲಿಪ್ತತೆಯಲ್ಲಿ, “ನನಗದರ ಸಂಗೀತ ಇಷ್ಟ” ಎಂದಿದ್ದ.

ಇಷ್ಟೆಲ್ಲ ಹೇಳಿದ ಮಗ ಹಾಸ್ಟೆಲ್‌ಗೆಂದು ಹೊರಟು ತನ್ನ ಕೋಣೆಯನ್ನು ಖಾಲಿಯಾಗಿಸಿದಾಗ ನಾನು ಹೇಳಿದ್ದೆ. “ಇನ್ನಿದರಲ್ಲಿ ನಾನು ನಾಲ್ಕಾರು ವಿದ್ಯಾರ್ಥಿಗಳಿಗೆ ಮನೆಪಾಠ ಮಾಡುತ್ತೇನೆ” ಅದಕ್ಕವನು ತಕ್ಷಣ ಪ್ರತಿಕ್ರಿಯಿಸಿ, “ಅದನ್ನು ಮಾಡೋಕೆ ಬೇಕಾದಷ್ಟು ಜನರಿದ್ದಾರೆ. ನೀನು ನನ್ನ ಕೋಣೆಯಲ್ಲಿ ಕುಳಿತು ಬರೆಯಬೇಕು. ಅದನ್ನು ಮಾಡಲು ತುಂಬಾ ಕಡಿಮೆ ಜನರಿದ್ದಾರೆ” ಎಂದಿದ್ದ. ನಾನು ಅಚ್ಛರಿಯಿಂದ ಅವನ ಮುಖ ನೋಡಿದೆ.

ಬರಹವೆಂಬುದು ಒಡಲೊಳಗೆ ಮುಚ್ಚಿಟ್ಟ ಬೆಂಕಿ. ಅಡಗಿಸಿಕೊಂಡಷ್ಟೂ ಕಾವು ಏರಿ ಹೊಗೆಯಾಡುವುದು. ಇತ್ತೀಚೆಗೆ ಬಿಡುವಾದಾಗಲೆಲ್ಲ ಪುಸ್ತಕ ಹಿಡಿದು ಕೂರುವ ಮಗ ಖಂಡಿತವಾಗಿಯೂ ಬರೆಯದಿರಲಾರ. ಯಾಂತ್ರಿಕ ಶಿಕ್ಷಣ ಓದಿ ಯಂತ್ರಗಳೊಂದಿಗೆ ಒಡನಾಡಲು ಹೊರಟಿರುವ ಮಗ ಯಾಂತ್ರಿಕತೆಯನ್ನು ಕಳೆಯಲಾದರೂ ಖಂಡಿತ ಕವಿತೆಯ ಸೆರಗನ್ನು ಹಿಡಿದೇ ಹಿಡಿಯುತ್ತಾನೆ.

ನಾನೀಗ ಪ್ರೌಢ ತಾಯಿ. ನಿರೀಕ್ಷೆಗಳು ಹೆಚ್ಚಾದಷ್ಟೂ ಭಾವಗಳು ಇನ್ನಷ್ಟು ಮುದುಡಿಕೊಳ್ಳುವ ಸತ್ಯದ ಅರಿವಾಗಿದೆ ನನಗೆ. ಮೊಗ್ಗು ಸಹಜವಾಗಿ ಬಿರಿದಾಗ ಹೂವರಳುವ ಪ್ರಕೃತಿ ಸಹಜ ಕೌತುಕದ ಅರಿವು ನನ್ನಲ್ಲಿದೆ. ಹಾಗೇ ಪೋಣಿಸಲ್ಪಡುವ ಅವನ ಕವಿತೆಯ ಸಾಲಿನಲ್ಲಿ ಬಾಲ್ಯದ ಕಥೆಗಳು ಮತ್ತು ಕವಿತೆಗಳು ಬಳಿದುಕೊಳ್ಳುವ ಬಣ್ಣದ ಬಗೆಗೆ ಅತೀವ ಕುತೂಹಲ ನನಗೆ.

ಆಕರ್ಷನ ಕವನದ ಸಾಲುಗಳು ನನಗೆ ಬರೆಯದ ನನ್ನ ಮಗನ ಕವಿತೆಗಳನ್ನೂ ಓದುವಂತೆ ಮಾಡುತ್ತಿವೆ ಮತ್ತು ಮಗ ಖಂಡಿತವಾಗಿಯೂ ಬರೆಯುವನೆಂಬ ಹಳೆಯ ಕನಸನ್ನು ಮತ್ತೆ ಚಿಗುರಿಸುತ್ತಿವೆ.

‍ಲೇಖಕರು avadhi

April 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. guest

    ನನಗೆ ಬರೆಯದ ನನ್ನ ಮಗನ ಕವಿತೆಗಳನ್ನೂ ಓದುವಂತೆ ಮಾಡುತ್ತಿವೆ !!!

    ಪ್ರತಿಕ್ರಿಯೆ
  2. M R Kamala

    ತುಂಬಾ ಚೆನ್ನಾಗಿ ಬರೆದಿದ್ದೀರಿ ಸುಧಾ ..ಧನ್ಯವಾದ

    ಪ್ರತಿಕ್ರಿಯೆ
  3. Lalitha Siddabasavaiah

    ಬರೆಯದ ಮಗನ ಕವಿತೆಗೆ ಕಾಯುತ್ತಿರು ಸುಧಾ , ನಿಮ್ಮ ಮಗ‌ ಕವಿತೆ ಬರೆದಿದ್ದಾನೆ! ಇಂತಹ ಆರ್ದ್ರ ಲೇಖನ ಅಮ್ಮನಿಂದ ಬರೆಸಿದ್ದಾನೆಂದರೆ ಅವನು‌ ನಿಮ್ಮ ಓಡಾಡುವ‌ ಕವಿತೆ, ನೀವು ಅವನ ಮಾತಾಡದೆ ಮೆಚ್ಚುವ ಕವನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: