ಕವಿತೆ ಎಂಬುದು ಎದೆಯಲ್ಲಿನ ಕೆಂಡ..

ಬಹುರೂಪಿ ಸದ್ಯದಲ್ಲೇ ಆಕರ್ಷ ಕಮಲ ಅವರ ಕವನ ಸಂಕಲನವನ್ನು ಪ್ರಕಟಣೆಗೆ ಕೈಗೆತ್ತಿಕೊಂಡಿದೆ. ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ಈ ನೆಪದಲ್ಲಿ ಕವಿತೆಯನ್ನು ಬಗಲಲ್ಲಿಟ್ಟುಕೊಳ್ಳುವವರ ಒಳಗುದಿಯನ್ನು ಬಣ್ಣಿಸಿದ್ದಾರೆ.

ಎಲ್ಲಾ ಯುವ ಕವಿಗಳಿಗೆ ಬರೆದ ಪತ್ರದಂತಿದೆ ಇದು-

ಎಂ ಆರ್ ಕಮಲ

ಎಂ ಆರ್ ಕಮಲ

ಎಂ ಆರ್ ಕಮಲ

ಪ್ರೀತಿಯ ಪುಟ್ಟು,

ಸದ್ಯದಲ್ಲೇ ನಿನ್ನ ಕವನ ಸಂಕಲನ ಬರುತ್ತಿದೆ. ತಾಯಿಯಾಗಿ ಒಂದೆರಡು ಮಾತುಗಳನ್ನು ಹೇಳಬೇಕು ಅನ್ನಿಸಿತು.

ನೀನು ಕವಿಯಾಗಬೇಕು ಎಂದು ನಾನೆಂದೂ ಆಸೆಪಟ್ಟಿರಲಿಲ್ಲ. ಬರೆದುದದನ್ನು ತಿದ್ದುವುದಕ್ಕಾಗಲಿ, ಕವಿತೆಯ ಬಗ್ಗೆ ತಿಳಿ ಹೇಳುವುದಕ್ಕಾಗಲಿ ಇದುವರೆಗೂ ಹೋದವಳಲ್ಲ.

`ಕವಿಯೆಂದು ಯಾರು ಕರೆದರು ಗೆಳೆಯ? ವಂದನೆಗಳು ನಿನಗೆ ‘ ಅನ್ನುವ ಸ್ಥಿತಿಯಲ್ಲಿ ನಾನೇ ಇದ್ದೇನೆ. ಚಿಕ್ಕ ವಯಸ್ಸಿನಿಂದಲೇ ಕಾವ್ಯ ಓದಿನ ವ್ಯಾಮೋಹಿಯಾಗಿದ್ದ ನಾನು, ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಕವನಗಳ ಬಗ್ಗೆ ಮಾತ್ರವಲ್ಲ, ಇತರ ನೂರಾರು ಕವನಗಳ ಬಗ್ಗೆ ನಿನ್ನ ಮತ್ತು ಅಮ್ಮಿಯ ಎದುರು ಮಾತಾಡಿದ್ದೇನೆ. ಪುಸ್ತಕಗಳನ್ನು ತಂದು ಸುರಿದಿದ್ದೇನೆ. ಪ್ರತಿ ತರಗತಿಯಲ್ಲೂ ಹೊಸದಾಗಿ ಏನಾದರೂ ಹೇಳಬೇಕೆಂಬ ತುಡಿತದಿಂದ ಓದಿದ್ದೆಲ್ಲವನ್ನು ಮನದಟ್ಟು ಮಾಡಿಕೊಳ್ಳುವುದಕ್ಕೆ ಹೇಳಿಕೊಂಡು ಹೋಗುತ್ತಿದ್ದೆ ಅಷ್ಟೇ.

ಹಾಗೆ ನೋಡಿದರೆ ನಾನು ಹೇಳಿದ್ದನ್ನು ನೀನು ಕೇಳುತ್ತಿದ್ದೆ ಎನ್ನುವುದಕ್ಕೆ ನನ್ನಲ್ಲಿ ಯಾವ ಪುರಾವೆಯಿಲ್ಲ. ಫ್ರಾನ್ಸ್ ದೇಶಕ್ಕೆ ಹೋಗಿದ್ದಾಗ ಇದ್ದಕ್ಕಿದ್ದಂತೆ ನೀನು ಕವಿತೆ ಬರೆಯತೊಡಗಿದೆ, ನಾನದನ್ನು ಗಮನಿಸುತ್ತಾ ಹೋದೆ. ಕಾವ್ಯಭಾಷೆ, ತಂತ್ರವನ್ನು ಶ್ರಮಪಟ್ಟು ಒಲಿಸಿಕೊಳ್ಳಬೇಕು, ಪರಂಪರೆಯ ಬಗ್ಗೆ ಶ್ರದ್ಧೆ ಇರಬೇಕು ಅನ್ನಿಸಿದ್ದು ನಿಜ. ಆದರೆ ಇಷ್ಟು ಹೊಸರೀತಿಯಲ್ಲಿ ಆಲೋಚನೆ ಮಾಡುವುದನ್ನು ನೋಡಿ ಕನ್ನಡದಲ್ಲಿ ನೀನೊಬ್ಬ ವಿಶಿಷ್ಟ ಕವಿಯಾಗಬಲ್ಲೆ ಅನ್ನಿಸಿತು.

ನಾನಿಲ್ಲಿ ನಿನ್ನ ಕವಿತೆಗಳ ಬಗ್ಗೆ ಮಾತನಾಡುವುದಿಲ್ಲ. ನೀನೆ ಹೇಳಿದಂತೆ `ನಿರಾಶ್ರಿತ ಕವಿ’ ಗಳ ಪಟ್ಟಿಯಲ್ಲಿ ನಾನೇ ಇದ್ದೇನೆ. ನಿನ್ನ ಸಂಕಲನವನ್ನು `ಬಹುರೂಪಿ’ ಪ್ರಕಟಿಸುತ್ತಿದೆ. ಅದಕ್ಕಾಗಿ ನನ್ನ ಕಡೆಯಿಂದಲೂ ಜಿ ಎನ್ ಮೋಹನ್ ಅವರಿಗೆ ವಂದನೆಗಳು. ಈ ಅರ್ಥದಲ್ಲಿ ನೀನು ಅದೃಷ್ಟವಂತ. ಸರಿಯಾದ ಸಮಯದಲ್ಲಿ ನಿನಗೆ ಬೆನ್ನು ತಟ್ಟುವವರಿದ್ದಾರೆ ಎನ್ನುವುದು ಖುಷಿಯ ವಿಷಯ

ನಾನು ಕವಿತೆ ಬರೆಯಲು ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಯಾವುದೇ ಪ್ರಸಿದ್ಧ ಪ್ರಕಾಶನದವರು ನನ್ನ ಪುಸ್ತಕಗಳನ್ನು ಪ್ರಕಟಿಸಲಿಲ್ಲ. (ತೀರ ಇತ್ತೀಚಿಗೆ ಒಂದಿಬ್ಬರು ಕೇಳಿದರು) ಯಾರನ್ನು ಇದುವರೆಗೂ ಏನನ್ನು ಕೇಳದ ನಾನು ನಮ್ಮದೇ ಗೆಳೆಯರ ಪ್ರಕಾಶನದಲ್ಲಿ ಪುಸ್ತಕಗಳನ್ನು ಪ್ರಕಟಿಸಿದೆ.

ಇದು ಲೌಕಿಕ ವಿಷಯ. ಆದರೆ ಕವಿಯಾಗುವುದು ಸುಲಭವಲ್ಲ. ಅದೊಂದು ಸುಡುಬೆಂಕಿಯ ಹಾದಿ. ಇನ್ನೊಬ್ಬರ ಅಂತರಂಗವನ್ನು ಹೊಕ್ಕು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳುತ್ತ ಹೋದಂತೆಲ್ಲ ನಮ್ಮ ತಲ್ಲಣಗಳು ಹೆಚ್ಚುತ್ತ ಹೋಗುತ್ತವೆ. ನಿರಾಳವಾಗಿದ್ದಂತೆ ಕಂಡರೂ ಎದೆಯಲ್ಲಿ ಕೆಂಡವನ್ನು ಕಟ್ಟಿಕೊಂಡು ನಡೆಯಬೇಕಾಗುತ್ತದೆ.

ಹೊರಗಿನ ಅಸೂಕ್ಷ್ಮತೆ, ಅನ್ಯಾಯ, ಅಸಮಾನತೆ, ತಾರತಮ್ಯ, ಸೋಗಲಾಡಿತನಗಳು, ಕೆಲಸಗಳ್ಳತನ, ಗುಂಪುಗಾರಿಕೆ, ನಿರ್ಭಾವುಕ ಮಂದ ಮನಃ ಸ್ಥಿತಿ…. ಎಲ್ಲವು ಸೂಕ್ಷ್ಮವಾದ ವ್ಯಕ್ತಿಯಲ್ಲಿ ತಳಮಳಗಳನ್ನು ಸೃಷ್ಟಿಸುತ್ತವೆ. ಸಂಕಟಕ್ಕೆ ಈಡುಮಾಡುತ್ತವೆ. ಕೆಲವೊಮ್ಮೆ ಏಕಾಂತದಲ್ಲಿ ಕೂತು ಬಿಕ್ಕಿಬಿಕ್ಕಿ ಅಳಬೇಕಾಗುತ್ತದೆ. ಅವಮಾನ, ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಕಾವ್ಯದ ಮೂಲಕ ಅದನ್ನು ಪ್ರಕಟಿಸುತ್ತೀಯೋ ಬಿಡುತ್ತೀಯೋ ಸಂವೇದನಾಶೀಲ ಕವಿಯಾಗುವುದೆಂದರೆ ವಿಚಿತ್ರ ವೇದನೆಗೆ ಒಳಗಾಗುವುದಂತೂ ಸತ್ಯ ಅದೆಲ್ಲವನ್ನು ಈಗಾಗಲೇ ನಿನ್ನ ಮುಖದಲ್ಲಿ ಗಮನಿಸುತ್ತಿದ್ದೇನೆ.

ಹೊರಗಿನ ಖ್ಯಾತಿ, ಪ್ರಶಸ್ತಿ ಇತ್ಯಾದಿಗಳಿಗೆ ಸಂಪೂರ್ಣ ಮೊಗದಿರುಹಿ ನೀನು ಮಾತ್ರ ಬರೆಯಬಲ್ಲ ಕವನಗಳನ್ನು ಬರಿ. ಹೆಚ್ಚೇನೂ ಹೇಳಲಾರೆ
ಅಮ್ಮ

‍ಲೇಖಕರು avadhi

April 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Museums patel

    ಎಷ್ಟು ಚೆನ್ನಾಗಿ ಬರೆದಿದ್ದೀರಿ ಕಮಲಾ ಅವರೆ. ಬರೆಯುವವರ ತಲ್ಲಣಗಳನ್ನು ಬಿಡಿ ಬಿಡಿ ಯಾಗಿ ಬಿಚ್ಚಿ ಟ್ಟಿದ್ದೀರಿ. ನಿಮಗೂ, ನಿಮ್ಮ ಮಗನಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
  2. Girijashastry

    ಇದು ಪ್ರಾಮಾಣಿಕವಾಗಿ ಬರೆಯುವವರೆಲ್ಲರ ಸಂಕಟ ಸಂತಸ ಕೊರಗು

    ಪ್ರತಿಕ್ರಿಯೆ
  3. Lalitha Siddabasavaiah

    ಪ್ರಿಯ ಕಮಲಾ ,

    ಮಗ ಕವಿಯಾಗಿದ್ದಾನೆ. ಇಗೋ ಅಮ್ಮನಿಗೆ ನನ್ನ ಮೊದಲ ಅಭಿನಂದನೆಗಳು. ಆಕರ್ಷ್, ನಿಮಗೆ ಅಭಿನಂದನೆ ಹೇಳುವ ಮೊದಲು ಒಂದು‌ ಮಾತು ” ನಿಮ್ಮಮ್ಮನಂತಹ ಅಮ್ಮ ನಿಮಗೆ ಸಿಕ್ಕಿದ್ದು ನಿಮ್ಮ‌ ಭಾಗ್ಯ. ಉಳಿದೆಲ್ಲವನೂ ಮರೆತು ಬಿಡಿ.”

    ಕಾವ್ಯದ ದಾರಿ ಆರಿಸಿಕೊಂಡು , ಅರಸಿಕೊಂಡು ಹೊರಟಿದ್ದೀರಿ. ನಿಮಗೆ ಒಳ್ಳೆಯದೇ ಆಗುತ್ತದೆ. ಒಳ್ಳೆಯದು ಬಿಟ್ಟು ಬೇರೇನೂ ಆಗುವುದಿಲ್ಲ ಎನ್ನಲಾರೆ. ಆದರೆ ಕಾವ್ಯದ ದಾರಿ ಇದೆಯಲ್ಲ , ಆ ದಾರಿಯೇ ಚೆಂದ ಆಕರ್ಷ್. ಗಮ್ಯದ ಬಗ್ಗೆ ಇಷ್ಟೂ ಚಿಂತಿಸಬೇಡಿ. ದಾರಿಯ ಸಣ್ಣಸಣ್ಣ ಬೇಲಿಯ ಹೂವನ್ನೂ ಬಿಡದೆ ಆನಂದಿಸಿ. ಅಲ್ಲೊಂದು ಕೆಂಜಿಗ , ಇಲ್ಲೊಂದು ಜಗಳಗಂಟಿ ಮೈನಾ , ಅಗೋ ಹದ್ದು , ಹರಿವ ಹಾವೂ ,,, ಸಣ್ಣ ತೊರೆ, ಯಾರೋ ಪುಣ್ಯಾತ್ಮರು ತೋಡಿ ಹೋದ ಸೀನೀರ ಚಿಲುಮೆ, ಇನ್ನಾರೋ ಕುಣಿಕೆಗೆ ಕಟ್ಟಿ ಮರೆತು ಬಿಟ್ಟ ಬಿಂದಿಗೆ , ಯಾರು ಬಂದರೂ ತಣ್ಣಗೆ ಮಾಡುವ ಹೊಂಗೆಮರ, ಮುಳ್ಳೇ ನನ್ನ ಘನಒಡವೆ ಎನ್ನುವ ಸೀಮೇಜಾಲಿ,,, ಎಲ್ಲವನ್ನೂ ಆನಂದಿಸಿ. ಹಾಗೆ ಆನಂದಿಸಬೇಕಾದರೆ ಮೊದಲು ಬೆಳೆಸಿಕೊಳ್ಳ ಬೇಕಾದುದು ದಪ್ಪ ಚರ್ಮ. ಅದಕ್ಕೆ‌ ಬೇರಾರೂ‌ ಬೇಡ , ಕಮಲರಿಗಿಂತ ದೊಡ್ಡ ‌ಗುರು. ಅವರಿಂದ ಕಲಿಯಿರಿ. ಹತ್ತಿದ್ದು
    ಅಲ್ಲೆ ಕೊಡವಿಕೊಂಡು ಹೋಗಿ.

    ನಿಮ್ಮಮ್ಮ ಹೇಳಿರುವ ಒಂದು ಮಾತು ” ನಿರಾಳವಾಗಿ ಕಂಡರೂ ಕೆಂಡ ಒಳಗೆ” ಅದು ಅಮ್ಮನಷ್ಟೇ ನಮ್ಮೆಲ್ಲರದೂ. ನಿಮ್ಮಮ್ಮನ ಮುಖ ಸದಾ ಅರಳಿದ ತಾವರೆ. ನೋಡಿದರೆ ಈ ರಾಜಕುಮಾರಿಗೆ ಕಷ್ಟವೇ ಇಲ್ಲವೇನೋ ಎನಿಸುವ ಹಾಗೆ . ಅದಕ್ಕಿಂತ ಜೀವಂತ ಆದರ್ಶ ಬೇಕಿಲ್ಲ ಆಕರ್ಷ್,,, ಸುಮ್ಮನೆ‌ ನಡೆಯುತ್ತಿರಿ ಬರೆಯುತ್ತಿರಿ.

    ಕಮಲಾ, ಈ ಬರಹ‌ಲೋಕದಲ್ಲಿ ನಿರಾಶ್ರಿತರಾಗಿರುವುದಷ್ಟು ಸುಖ ಬೇರೊಂದಿಲ್ಲ. ನಮ್ಮ ಅವಮಾನ ನಮ್ಮ ಸನ್ಮಾನ ಎರಡಕ್ಕೂ‌ ಹಂಗಿಲ್ಲ. ಎರಡೂ ನಮದೇ ಗಳಿಕೆ. ನನಗೆ‌ ಅದೇ ಇಷ್ಟ. ನಿಮಗೂ‌ ಕೂಡಾ ಅಂದುಕೊಂಡಿರುವೆ . ಏಕಾಂತದಲ್ಲೇಕೆ ? ಯಾರ ಖಾನೇಷುಮಾರಿಯೂ ಅಲ್ಲ, ನಮ್ಮ ಕಣ್ಣು , ನಮ್ಮ ಬಾಯಿ. ಅಳು ಬಂದಾಗ‌ ನಮ್ನಮ್ಮ‌ ಮನೆ‌ ಕದದ‌‌ ಮುಂದೆ ನಿಂತೇ ಅಳೋಣ ಬನ್ನಿ.

    ಪ್ರತಿಕ್ರಿಯೆ
    • Vasundhara k m

      ಸ್ವತಃ ಕವಿಯಾಗಿ, ಕವಿಯಾಗುತ್ತಿರುವ ಮಗನಿಗೆ ಸರಿಯಾದ ಕಿವಿ ಮಾತನ್ನೇ ಹೇಳಿದ್ದೀರಿ ಮೇಡಂ…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: