ಬರೆದಿಟ್ಟುಕೊಳ್ಳಿ, ನಾನೊಬ್ಬ ಭಾರತೀಯ, ನನ್ನ ಹೆಸರು ಅಜ್ಮಲ್

ಇದು ಪ್ಯಾಲೆಸ್ತೀನಿನ ಮಹೌದ್  ದರ್ವಿಶ್ ಬರೆದ “ಬರೆದಿಟ್ಟುಕೊಳ್ಳಿ! ನಾನೊಬ್ಬ ಅರಬ್” ಎನ್ನುವ ಕವನ  ಮತ್ತು ಅಸಾಮಿನ ಹಫೀಸ್ ಅಹ್ಮದ್ ಬರೆದ “ಬರೆದಿಟ್ಟುಕೊಳ್ಳಿ! ನಾನೊಬ್ಬ ಮಿಯಾ” ಎನ್ನುವ ಕವನಗಳನ್ನು ಅನುಸರಿಸಿ ಬರೆದ ಕವನ.

ಅಜ್ಮಲ್ ಖಾನ್ ಅಶೋಕಾ ವಿಶ್ವವಿದ್ಯಾಲಯದಲ್ಲಿ ಮತ್ತು ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದಾರೆ.

ಮೂಲ: ಅಜ್ಮಲ್ ಖಾನ್ ಎ ಟಿ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಬರೆದಿಟ್ಟುಕೊಳ್ಳಿ

ನಾನೊಬ್ಬ ಭಾರತೀಯ

ಬರೆದಿಟ್ಟುಕೊಳ್ಳಿ

ನನ್ನ ಹೆಸರು ಅಜ್ಮಲ್

ನಾನೊಬ್ಬ ಮುಸಲ್ಮಾನ

ಮತ್ತು ಭಾರತೀಯ ನಾಗರೀಕ

ನಮ್ಮ ಕುಟುಂಬದಲ್ಲಿ ಏಳು ಮಂದಿ ನಾವು

ನಾವೆಲ್ಲರೂ ಹುಟ್ಟಿಯಿಂದ ಭಾರತೀಯರು

ದಾಖಲೆಗಳು ಬೇಕೇ ನಿಮಗೆ?

 

ಬರೆದಿಟ್ಟುಕೊಳ್ಳಿ

ನಾನೊಬ್ಬ ಭಾರತೀಯನೆಂದು

ನಾನೊಬ್ಬ ಮಾಪ್ಲೇ

ನನ್ನ ಪೂರ್ವಜರು ಅಸ್ಪೃಶ್ಯರು

ನಿಮ್ಮ ಭಾಷೆಯಲ್ಲಿ ಹಿಂದೂ

ಮನುವಿನ ಮುಖಕ್ಕೆ ಕಳಂಕ

ನಿಮ್ಮ ಸನಾತನವಾದಿ ಪೂರ್ವಿಕರು  ಹುಟ್ಟುವ ಮೊದಲೇ

ಶತಮಾನಗಳ ಹಿಂದೆ ಅವರಿಗೊಂದು ಘನತೆ ಒದಗಿಬಂದಾಗ

ಅವರು ತಮ್ಮ ಹೆಸರು ಬದಲಿಸಿಕೊಂಡರು.

ನಿಮಗಿನ್ನೂ ಸಂಶಯವೇ?

ಬರೆದಿಟ್ಟುಕೊಳ್ಳಿ

ನಾನೊಬ್ಬ ಭಾರತೀಯ

ನನ್ನ ಪೂರ್ವಜರು ಇಲ್ಲಿ ನೆಲ ಉತ್ತಿದರು.

ಇಲ್ಲೇ ಬದುಕಿದ್ದರು

ಇಲ್ಲೇ ತೀರಿಕೊಂಡರು

ಈ ಆಲ ಮತ್ತು ತೆಂಗಿನ ಮರಗಳ ಬೇರುಗಳಿಗಿಂತ

ಆಳ ಅವರ ಬೇರು

ಅವರು ನೆಲದೊಡೆಯರಾಗಿರಲಿಲ್ಲ

ಬರಿ ರೈತಾಪಿ ಜನರಾಗಿದ್ದರು.

ಈ ನೆಲವೇ ಅವರ ಬೇರು

ಅವರ ಬೇರುಗಳ ಪರಿಮಳ ಈ ನೆಲದ ಪರಿಮಳ

ಅವರ ಮೈತೊಗಲಿನ ಬಣ್ಣ

ಈ ನೆಲದ ಬಣ್ಣ

ಬೇಕೇ ನಿಮಗೆ ದಾಖಲೆಗಳು?

 

ಬರೆದಿಟ್ಟುಕೊಳ್ಳಿ

ನಾನೊಬ್ಬ ಭಾರತೀಯ

ನಿಮಗಿನ್ನೂ ದಾಖಲೆಗಳು ಬೇಕೇ?

ಹಾಗಿದ್ದರೆ ನಾನು ಮಲಬಾರಿನ ಗೋರಿಗಳನ್ನು

ಅಗೆದು ತೆಗೆಯುತ್ತೇನೆ

ಜೊತೆಗೆ ಇನ್ನಷ್ಟು

ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ ಬಿದ್ದ ಅವರ ಎದೆಯಲ್ಲಿ

ಬೂಟುಗಳು ಮತ್ತು ಬುಲೆಟುಗಳನ್ನು ನಿಮಗೆ ತೋರಿಸಬೇಕು ನಾನು.

ನಿಮಗಿನ್ನೂ ಬೇಕೇ ದಾಖಲೆಗಳು?

ನನಗೆ ಗೊತ್ತು

ನಿಮ್ಮ ಬಳಿ ಇರುವ ದಾಖಲೆಗಳು ಯಾವುವೆಂದು

ಸೆಲ್ಯುಲರ್ ಜೈಲಿನಲ್ಲಿ ಬರೆದುಕೊಟ್ಟ ತಪ್ಪೊಪ್ಪಿಗೆಯ ನಕಲು

ಮತ್ತು

ನಿಮ್ಮ ಕೈಗಳ ಮೇಲೆ ಗಾಂಧಿಯ ರಕ್ತದ ಕಲೆಗಳು.

ಇಂತಹ ಇನ್ನಷ್ಟನ್ನು ನಿಮಗೆ ನೆನಪಿಸಬೇಕೇ ನಾನು?

ನನಗೆ ದಾಖಲೆಗಳನ್ನು ಕೇಳಿದರೆ

ನಾನನ್ನುತ್ತೇನೆ

ಮುಚ್ಚಲೋ ಮಗನೆ.

 

ಬರೆದಿಟ್ಟುಕೊಳ್ಳಿ

ನಾನೊಬ್ಬ ಭಾರತೀಯ

ನೆನಪಿಡಿ

ನಾನು ಮರೆತಿಲ್ಲ

ಮಸೀದಿಯನ್ನು ಕೆಡವಲು ನೀವು ಜನರನ್ನು ಕಳಿಸಿದಿರಿ

ಮತ್ತು ಈಗ

ನೀವು ಸಂವಿಧಾನವನ್ನು ಕೆಡವಿದ್ದೀರಿ

ಈ ದೇಶದ ಆತ್ಮ ಅದು

ನಾನು ಕೆರಳಿದ್ದೇನೆ

ಎಷ್ಟು ಧೈರ್ಯ!

ಎಷ್ಟು ಧೈರ್ಯ!

 

ಬರೆದಿಟ್ಟುಕೊಳ್ಳಿ

ನಾನೊಬ್ಬ ಭಾರತೀಯ

ಇದು ನನ್ನ ದೇಶ

ನಾನು ಹುಟ್ಟಿದ್ದು ಇಲ್ಲಿ

ನಾನು ಸಾಯುವುದೂ ಇಲ್ಲೇ

ಅದಕ್ಕೇ

ಬರೆದಿಟ್ಟುಕೊಳ್ಳಿ

ಸ್ಪಷ್ಟವಾಗಿ

ದಪ್ಪಕ್ಷರಗಳಲ್ಲಿ ಸ್ಫುಟವಾಗಿ

ನಿಮ್ಮ ಎನ್ ಆರ್ ಸಿ ಯಲ್ಲಿ

ಮೇಲುಗಡೆ

ನಾನೊಬ್ಬ ಭಾರತೀಯನೆಂದು

ಬರೆದಿಟ್ಟುಕೊಳ್ಳಿ.

 

‍ಲೇಖಕರು avadhi

December 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: