ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರುವೆಯಾ ನನ್ನ ಜೊತೆ ಕಾಶ್ಮೀರಕೆ?

ಮೂಲ ಹಿಂದಿ: ಮಹಾರಾಜ ಕೃಷ್ಣಸಂತೋಷಿ, ಜಮ್ಮುತಾವಿ
ಕನ್ನಡಕ್ಕೆ: ಗಿರೀಶ ಚಂದ್ರಕಾಂತ ಜಕಾಪುರೆ, ಮೈಂದರ್ಗಿ

ಆಮಂತ್ರಣ

ಹೇ ಬುದ್ಧ..
ಇಂದು ವೈಶಾಖ ಪೂರ್ಣಿಮೆಯ ನಿಮಿತ್ತ
ನೀಡುತ್ತಿರುವೆ ನಿನಗೆ ಆಮಂತ್ರಣ
ಬರುವೆಯಾ ನನ್ನ ಜೊತೆ ಕಾಶ್ಮೀರಕೆ?

ಕಾಶ್ಮೀರದಲ್ಲಿ
ನಮ್ಮ ಪುರಾತನ ವಾಡೆಯಿದೆ
ಈಗ ಯಾರೂ ಇರುವುದಿಲ್ಲ ಅಲ್ಲಿ
ದ್ವಾರಫಲಕದ ಮೇಲೆ ಇಂದೂ ಮಸುಕಾಗಿ
ಕಾಣಬಹುದು ಶರದ್‌ಲಿಪಿಯ ಅಕ್ಷರಗಳು

ಕೇಳಿದ್ದೇನೆ
ನಮ್ಮ ಪೂರ್ವಜರ ಬಳಿ ಇದ್ದವಂತೆ
ಅಗಣಿತ ಪಾಂಡುಲಿಪಿಗಳು
ಕೆಲವನ್ನು ಬೆಂಕಿ ಉರಿಸಿದೆ, ಕೆಲವನ್ನು ನೀರು ನುಂಗಿದೆ
ಕೆಲವನ್ನು ಗಾಳಿ ಗುಡಿಸಿದೆ ತರಗೆಲೆಗಳಂತೆ

ಹೇಳುವುದು ಮರೆತಿದ್ದೆ
ಶೀತ ಸುರಿಯುವ ನಾಡು ಅದು
ಈ ನಿನ್ನ ಚೀವರ ಕೆಲಸಕ್ಕೆ ಬಾರದು ಅಲ್ಲಿ
ನಿನಗಾಗಿಯೂ ಒಂದು ಫಿರನ್ ಹೊಲಿಸುತ್ತೇನೆ
ಅದನ್ನು ಧರಿಸಿದರೆ ನೀನೂ ಕಾಣುವೆ
ಥೇಟ್ ನನ್ನ ಪೂರ್ವಜರಂತೆ

ಪೂರ್ವಜ ಎಂದ ಕೂಡಲೇ ನೆನಪಾಯ್ತು
ನಮ್ಮ ರಕ್ತರಂಜಿತ ಇತಿಹಾಸ
ನಾವು ಅದೇ ಇತಿಹಾಸದ ಸಂತಾನಗಳು
ಆದರೆ ಭೂಗೋಳಹೀನರಾಗಿದ್ದೇವೆ ಇಂದು
ನಾವು ಎಲ್ಲಿಯೇ ವಾಸವಿದ್ದರೂ ನಮ್ಮ ಸಂಕಲ್ಪ
ಆಕಾರ ಪಡೆಯುತ್ತದೆ ಆಲದಂತೆ
ಅದೇ ವೃಕ್ಷದ ಕೆಳಗೆ ನಿಟ್ಟುಸಿರುಗಳಿಂದ
ಕಟ್ಟುತ್ತೇವೆ ನಾವು ನಮ್ಮ ಗುಡಿಸಲುಗಳನು

ಕಳೆದುದ ನೆನೆದು ಉದಾಸೀನತೆಯಲ್ಲಿ
ಆಯ್ದುಕೊಳ್ಳುತ್ತೇವೆ ಒಬ್ಬ ಹೊಸ ಈಶ್ವರನನ್ನು
ಅವನ ಚರಣಗಳಲ್ಲಿ ಇಡುತ್ತೇವೆ ನಮ್ಮ
ದುಃಖ, ಭಾವ, ಸಂಕಲ್ಪಗಳ ಮೂಟೆ
ಭಯ ಬೇಡ ನಿನ್ನ ಮುಂದೆ ಬಿಟ್ಟುವುದಿಲ್ಲ
ಎಳೆ ಕನಸುಗಳ ಆಸೆಯ ಗಂಟು

ಬುದ್ಧ, ನಿನಗೆ ಸ್ವೀಕೃತವಿದೆಯೇ ಆಮಂತ್ರಣ?
ಜೊತೆಗೂಡಿ ತಿರುಗಾಡೋಣ ಹಿಂದಿನ
ದಿನಗಳಲ್ಲಿ ಸ್ವರ್ಗದಂತಿದ್ದ ನನ್ನೂರಲಿ
ಇಂದು ಬದಲಾಗಿದೆ ಕಾಲದ ಸ್ವಭಾವ, ಗಾಳಿಯ ವರ್ತನೆ
ಬರ್ಫಿನ ಶುಭ್ರ ಗುಡ್ಡಗಳಿಂದ ದೇವದಾರುಗಳ
ದಟ್ಟಕಾಡಿನಿಂದ ಇಳಿದು ಬರುತ್ತವೆ ಕಪ್ಪುನೆರಳುಗಳು
ಅಟ್ಟಹಾಸ ಮೆರೆದು, ನಮ್ಮ ರಕ್ತ ಕುಡಿದು
ನಮ್ಮ ಮನೆಯಲ್ಲಿ ಬಿಟ್ಟುಹೋಗುತ್ತವೆ ತಮ್ಮ ಗುಪ್ತಚರರನು
ಅವರಿಗೆ ಹೆದರಿ ನಂದಿಸಿಕೊಳ್ಳುತ್ತಾರೆ ನನ್ನ ಜನ
ತಮ್ಮ ಆತ್ಮದ ಬೆಳಕನ್ನೂ
ಅವರ ಸಂಚುಗಳಿಗೆ ಬೆಚ್ಚಿ ಕಪಕಪನೆ ಕಂಪಿಸುತ್ತದೆ
ಝೇಲಂನ ಜೀವಜಲವೂ

ನೀನು ಜೊತೆಗೆ ಬಂದರೆ, ಇಬ್ಬರೂ ಸೇರಿ
ಝೇಲಂನ ನೀರಿನ ಮೈದಡವಿ ತುಸು ಸಂತೈಸೋಣ
ಕಾಲ ಎಷ್ಟೇ ಕೆಟ್ಟರೂ ನೀರು ಎಂದಿಗೂ
ಸೋಲುವುದಿಲ್ಲ ಎಂದು ಧೈರ್ಯ ತುಂಬೋಣ

ನಂತರ ಬೇಕಿದ್ದರೆ ನೀನು ಹಿಂದಿರುಗಿ ಹೋಗು
ಕುಶಿನಗರಕ್ಕೋ ಸಾರಾನಾಥಕ್ಕೋ ಇನ್ನೆಲ್ಲಿಗೋ
ನಾನೂ ಝೇಲಂನ ಒಂದು ಹನಿ ತೆಗೆದುಕೊಂಡು
ಮರಳುವೆ.. ವಿಧಿ ಎಳೆದೊಯ್ದತ್ತ ಹೋಗುವೆ
ನನ್ನ ನೆಲದ ಹಣೆಬರಹಕ್ಕೆ ರೋಧಿಸುತ್ತ
ಬದುಕನು ಎಲ್ಲಿಯೋ ಕಳೆದು ಬಿಡುವೆ

ಹೇ ದೇವ.. ಬರುವೆಯಾ ನನ್ನ ಜೊತೆ
ಅಳಿಯುವ ಮೊದಲು ತುಸು ಉಳಿಯೋಣ

‍ಲೇಖಕರು avadhi

30 August, 2019

2 Comments

  1. D.M.NADAF

    ಬುದ್ಧನ ಜೊತೆ ಝೇಲಂ ನ ದಡದಲ್ಲಿ ತಿರುಗಾಡಬಲ್ಲ ಆತ್ಮ ವಿಶ್ವಾಸದ ಕಲ್ಪನೆಯ ಅತ್ಯದ್ಭುತ…,..
    ಅಳಿಯುವ ಮೊದಲು ತುಸು ಉಳಿಯೋಣ…..ಆಶಾದಾಯಕ.
    ಅಭಿನಂದನೆಗಳು
    *ಡಿ.ಎಮ್ ನದಾಫ್ ,
    ಅಫಜಲಪುರ.

  2. T S SHRAVANA KUMARI

    ಇಷ್ಟವಾಯಿತು ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading