
ಸುಧಾ ಚಿದಾನಂದ ಗೌಡ
ಬರಹಗಾರರು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಉಪನ್ಯಾಸಕರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ. ‘ಅವಧಿ’ಯಲ್ಲಿ ಈಗಾಗಲೇ ಇವರ ಹಲವು ಕವಿತೆ, ಲೇಖನಗಳು ಪ್ರಕಟಗೊಂಡಿವೆ.
ಬರವಣಿಗೆ ನನ್ನ ಕೈ ಹಿಡಿಯದಿದ್ದರೆ..?
ಸತ್ತೇನೂ ಹೋಗುತ್ತಿರಲಿಲ್ಲ ನಾನು, ನಿಜ.
ಆದರೆ ಆ ರೀತಿ.. ಮೆದುಳು ಸತ್ತವರಂತೆ ಬದುಕುವುದೂ ಒಂದು ಬದುಕಾ..?
“ಉಸಿರುಗಟ್ಟುತ್ತದೆ, ಬುದ್ಧಿ ಸಾಯುತ್ತಿದೆ..” ಎನಿಸಿದಾಗಲೆಲ್ಲಾ ನಾನು ಅಕ್ಷರಗಳೆದುರು ಸೆರಗೊಡ್ಡಿ ಬೌದ್ಧಿಕ ಬದುಕಿನ ಭಿಕ್ಷೆ ಬೇಡಿದ್ದೇನೆ ಮತ್ತು ಭರಪೂರ ಆನಂದವನ್ನೆ ಉಂಡಿದ್ದೇನೆ. .
“ಪ್ರಿಯಸಖಿ ಪಾತರಗಿತ್ತಿ”ಯಲ್ಲಿ ನಾನೇನು ಬರೆದಿದೇನೆ ಹೇಳಲಾರೆ ಆದರೆ ಈ ಪ್ರಬಂಧಗಳ ಪ್ರತಿಸಾಲಿನಲ್ಲೂ ನಾನು ಸುಮ್ಮಾನದಿಂದ ಜೀವಿಸಿದ್ದೇನೆ ಎಂದಷ್ಟೇ ಹೇಳಬಲ್ಲೆ..
ಹಾಗೆ ನನ್ನಲ್ಲಿ ಜೀವತುಂಬುವ ಅಂಶಗಳೆಂದರೆ ಹತ್ತಿರದಿಂದ ಕಂಡ, ಕಾಣುತ್ತಿರುವ ಹಿನ್ನೀರಿನ ರಮ್ಯ ಪ್ರಕೃತಿ, ರೈತಾಪಿ ಬದುಕು, ಬಾಲ್ಯ ಮತ್ತು ಸ್ವಲ್ಪ ಹೆಚ್ಚೆ ಇದೆ ಎನ್ನಬಹುದಾದ ಭಾವುಕತೆ, ಯಾವುದಕ್ಕೂ ಪಶ್ಚಾತ್ತಾಪ ಪಡಲೊಲ್ಲದ, ಭವಿಷ್ಯವು ದಯಪಾಲಿಸುವ ಪ್ರತಿಯೊಂದನ್ನೂ ಆಸೆಗಂಗಳಿಂದ ಎದುರು ನೋಡುವ ಮನಸು…
ಹಸಿರನ್ನು ಕಂಡರೆ ಕಳೆದುಹೋಗಿಬಿಡುವಷ್ಟು ಮರುಳಾಗುವ, ನೀರಿನ ನೀಲಿಯ ಕಡುಮೋಹಿಯಾದ ನಾನು ಅದನ್ನೇ ಅಲ್ಲದೆ ಇನ್ನೇನು ತಾನೇ ಬರೆಯಬಲ್ಲೆ..? ಪ್ರಶಸ್ತಿಗಳು ಬಂದಿದ್ದರೆ ಇದಕ್ಕೇ ಬರಬೇಕು..
“ಪ್ರಿಯಸಖಿ ಪಾತರಗಿತ್ತಿ”ಗೆ ಸಂದ ಮೊದಲ ಅವಾರ್ಡ್ ಎಂದರೆ ಪುರುಷೋತ್ತಮ ಬಿಳಿಮಲೆಯವರ ಮೆಚ್ಚುಗೆಯ ನುಡಿಗಳ ಮುನ್ನುಡಿ.
ನಾಡಿನ ಬಹುಮುಖ್ಯ ಪತ್ರಿಕೆಗಳೆನ್ನಬಹುದಾದ ಪ್ರಜಾವಾಣಿ, ಹೊಸತು, ಕನ್ನಡಪ್ರಭ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿನ ಪರಚಯಾತ್ಮಕ ವಿಮರ್ಶೆ ಎರಡನೆ ಅವಾರ್ಡು.
ಇದೀಗ ಮೂರನೆಯದೆಂದು ಹೇಳಬಹುದಾದ ಬಹುಮಾನ ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಲಕ್ಷ್ಮಣ ಕೊಡಸೆಯವರ ಮೂಲಕ ಸಾಂಬಶಿವಯ್ಯ ಅವಾರ್ಡು. ಎಂ.ಸಿ.ಲಲಿತಾ ಅವರು ತಮ್ಮ ಪತಿಯ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಇದುವರೆಗೆ ಏಳು ಜನ ಉದಯೋನ್ಮುಖರು, ಖ್ಯಾತನಾಮರು ಇದನ್ನು ಪಡೆದುಕೊಂಡಿದ್ದಾರೆ. ನಾನು ಎಂಟನೆಯವಳು. ಕೊಡಸೆಯವರು ಕೃತಿ ಕುರಿತು ಏನು ಮಾತಾಡುವರೆಂಬ ಕುತೂಹಲ.
“ಪ್ರಿಯಸಖಿ ಪಾತರಗಿತ್ತಿ” ಪ್ರಬಂಧ ಸಂಕಲನವು ಬೆಂಗಳೂರಿನ ಸಪ್ನಾ ಬುಕ್ ಹೌಸ್, ಆಕೃತಿ ಪುಸ್ತಕಮಳಿಗೆ ಮತ್ತು ಹೊಸಪೇಟೆಯ ಶಾರದಾ ಪುಸ್ತಕಾಲಯಗಳಲ್ಲಿ ಲಭ್ಯವಿದೆ. ಸುಯೋಧನ ಪ್ರಕಾಶನವನ್ನು ನೇರವಾಗಿಯೂ ಸಂಪರ್ಕಿಸಬಹುದು. (ಮೊಬೈಲ್:9480510512) ಅಂಚೆ ವೆಚ್ಚ ಉಚಿತ. ಕೊಂಡು ಓದಿ ಪ್ರೋತ್ಸಾಹಿಸಿ.





ಓಹ್….ಧನ್ಯವಾದ ಅವಧಿ