ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಯೋಮೆಟ್ರಿಕ್ಕು "ಬಯ್ಯೋ"ಮೆಟ್ರಿಕ್ಕಾದಾಗ!

ಪ್ರಸಾದ್ ಕೆ

“ಸಾರ್ ಸಾರ್…” ಎನ್ನುತ್ತಾ ಇಂಜಿನಿಯರ್ ಸಾಹೇಬರ ರೂಮಿನೆಡೆಗೆ ಏದುಸಿರು ಬಿಡುತ್ತಾ ಒಂದು ಪೇಪರಿನೊಂದಿಗೆ ಒಳನುಗ್ಗಿದ ಮಂಗೇಶ. ಮಂಗೇಶ ಬೈ ಪ್ರೊಫೆಷನ್ನು ಚಪರಾಸಿ. ಟಿಪಿಕಲ್ ಕೇಂದ್ರ ಸರಕಾರಿ ನೌಕರ. ಬೆಣ್ಣೆ ಮಾತುಗಳೇ ಇವನ ಡಿಗ್ರಿಗಳು. ಭಟ್ಟಂಗಿತನವೇ ಇವನ ಪಫರ್ಾಮೆನ್ಸು. ಕಳೆದ ಹದಿನೈದು ವರುಷಗಳಿಂದ ಇಂಜಿನಿಯರ್ ಸಾಹೇಬ್ರು ಭೀಮರಾಯರೊಂದಿಗೆ ಅವರ ಬಲಗೈ ಬಂಟನಂತೆ ಸರಕಾರಿ ಸೇವೆ ಮಾಡುತ್ತಿದ್ದಾನೆ. ಸರಕಾರಿ ಸೇವೆ ಅನ್ನೋದಕ್ಕಿಂತಲೂ ರಾಮನ ಬಂಟ ಹನುಮನಂತೆ ನಿಷ್ಠನಾಗಿ ಭೀಮರಾಯರ ಸೇವೆ ಮಾಡುತ್ತಿದ್ದಾನೆ. ಹಾಗಾಗಿ ಸಾಹೇಬ್ರ ಕೃಪಾಕಟಾಕ್ಷದಿಂದ ಸುಖವಾಗಿದ್ದಾನೆ ಕೂಡ. ಇನ್ನೇನು ಬೇಕು ಹೇಳಿ ಮಂಗೇಶನಂಥಾ ಹುಲುಮಾನವನಿಗೆ ಬದುಕಲು!
ಭೀಮರಾಯರು ಕಳೆದ ಮೂವತೈದು ವರ್ಷಗಳಿಂದ ಕೇಂದ್ರ ಸರಕಾರಿ ಇಲಾಖೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವವರು. ಸದ್ಯಕ್ಕಿವರು ಸೂಪರಿಂಟೆಂಡೆಂಟು ಎಂಜಿನಿಯರು. ವಾರಕ್ಕೆ ಮೂರು ದಿನ ಸಮಯ ಮಾಡಿಕೊಂಡು ಆಫೀಸಿಗೆ ಹೋದರೆ ಮುಗಿಯಿತು. ಕಡತಗಳನ್ನು ಮುಂದಿನ ಟೇಬಲ್ಲಿಗೆ ತನ್ನ ಅತ್ಯಮೂಲ್ಯ ಹಸ್ತಾಕ್ಷರದೊಂದಿಗೆ ಕಳಿಸುವುದೇ ಇವರ ಮಹಾ ಕೆಲಸ. ಕಳೆದ ಹತ್ತು ವರ್ಷಗಳಿಂದ ಇನ್ನೆಲ್ಲೂ ವರ್ಗವಾಗದಂತೆ ಮೇಲಿನವರಿಗೂ, ಕೆಳಗಿನವರಿಗೂ ತನ್ನ ಕೈಲಾದಷ್ಟು ಮೇಲಿನಿಂದಲೂ, ಕೆಳಗಿನಿಂದಲೂ ಕೊಟ್ಟು ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸಿದ್ದಾರೆ. “ನಾವು ದುಡಿಯುವುದೆಲ್ಲಾ ಮುಗಿಯಿತಪ್ಪಾ, ಇನ್ನೆಲ್ಲಾ ನಿಮ್ಮ ಕಾರುಬಾರು” ಎಂದು ತಮ್ಮ ಕಿರಿ ಮತ್ತು ಕಿರಿ-ಕಿರಿ ಸಹೋದ್ಯೋಗಿಗಳಿಗೆ ಹೇಳುತ್ತಾ ತಮ್ಮ ಸೀಟಿನಲ್ಲಿ ಆರಾಮಾಗಿ ಕೂತು ಘಂಟೆಗೊಂದು ಟೀ ಹೀರುತ್ತಾರೆ. ಸಿಗರೇಟು ಬ್ರೇಕುಗಳಿಗೆ ಲೆಕ್ಕವಿಟ್ಟವರಿಲ್ಲ. ಅಂತೂ ಇಂತೂ ರಾಯರು ಸರಕಾರಿ ಕೆಲಸ, ದೇವರ ಕೆಲಸ ಎಂಬ ಬೋಡರ್ೊಂದನ್ನು ತನ್ನ ಪಕ್ಕದ ಗೋಡೆಗೆ ರಾಷ್ಟ್ರಪಿತನ ಫೋಟೋದ ಪಕ್ಕದಲ್ಲೇ ತಗುಲಿಸಿ ಹಾಯಾಗಿದ್ದಾರೆ. ಪೂರಿಯಂತೆ ಉಬ್ಬಿಕೊಂಡು, ರಾಯರಿಗಿಂತ ಒಂದು ಹೆಜ್ಜೆ ಮುಂದೆಯೇ ನಡೆದು ಬೀಗುತ್ತಿರುವ ಅವರ ಹೊಟ್ಟೆಯೇ ಇದಕ್ಕೆ ಸಾಕ್ಷಿ. ಇವರಿಗೆ ಡಯಾಬಿಟೀಸು ಕೂಡ ಬಂದಿದೆಯೆಂಬ ಗುಸುಗುಸು ಸುದ್ದಿ. ಇರಲಿ. ನಮಗ್ಯಾಕೆ ಬಿಡಿ ಅವರಿವರ ವಿಷಯ!

ಹಾಗೆ ನಮ್ಮ ಮಂಗೇಶ ಅದೇನೋ ಸಕ್ಯರ್ುಲಾರು ಅಂತ ಒಂದು ಕಾಗದ ಹಿಡಿದುಕೊಂಡು ಬಂದು ಭೀಮರಾಯರಿಗೆ ಕೊಟ್ಟ. ರಾಯರು ಅವನ ಕೈಯಿಂದಲೇ ಪೇಪರಿನ ಮೇಲೆ ಸರಸರ ಕಣ್ಣಾಡಿಸಿ ಅಲ್ಲೇ ಪಕ್ಕದಲ್ಲಿಡು ಎಂದು ಕಣ್ಣಲ್ಲೇ ಸಂಜ್ಞೆಯನ್ನಿತ್ತರು. ಆ ಕಾಗದವೇನು ಅಸ್ಪೃಷ್ಯವಾದದ್ದೇನೋ ಎಂಬಂತೆ. ಏನೋ ಯೋಚನೆಗೆ ಬಿದ್ದವರಂತೆ ತಮ್ಮ ಬೆನ್ನನ್ನು ಕುಚರ್ಿಗಾನಿಸುತ್ತಾ ತಮ್ಮ ಅರ್ಧಬೋಳು ನೆತ್ತಿಯ ಮೇಲೆ ತಿರುಗುತ್ತಿದ್ದ ಫ್ಯಾನನ್ನೇ ದಿಟ್ಟಿಸತೊಡಗಿದರು ರಾಯರು. ಮಂಗೇಶ ಕೈ ಕಟ್ಟಿ ನಿಂತ ಮುಂದಿನ ಅಪ್ಪಣೆಯ ನಿರೀಕ್ಷೆಯಲ್ಲಿ. ರಾಯರ ಹಣೆಯಲ್ಲಿ ಮೂಡುತ್ತಿದ್ದ ಚಿಂತೆಯ ಗೆರೆಗಳಿಗೆ ಎಂದಿನಂತೆ ಇಂದೂ ಮಂಗೇಶನ ಹದ್ದುಗಣ್ಣಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
ನಿಮಿಷಗಳೆರಡಾದವು. ಮೂರು, ನಾಲ್ಕುಗಳೂ ಉರುಳಿಹೋದವು. ಮಂಗೇಶನಿಗೆ ರಾಯರಿಂದ ಯಾವ ಅಪ್ಪಣೆಯೂ ಬರಲಿಲ್ಲ. ಮಂಗೇಶನ ಕಟ್ಟಿದ ಕೈಗಳು ನಿಧಾನವಾಗಿ ಸಡಿಲವಾದವು. “ಏನ್ಸಾರ್ ವಿಷ್ಯ?”, ಮಾತಾಡಿಸದೆ ವಿಧಿಯಿರಲಿಲ್ಲ ಈ ಬಾರಿ ಮಂಗೇಶನಿಗೆ.
“ಬಯೋ ಮೆಟ್ರಿಕ್ಕು ಬಂದೇ ಬಿಡ್ತು ಮಂಗ್ಯಾ”, ರಾಯರಿಂದ ಒಂದು ದೀರ್ಘ ನಿಟ್ಟುಸಿರು.
“ಅದೇನದು ಸಾರ್? ಎಬೋಲಾ ಒಬೋಲಾ ಅಂತಿದ್ರಲ್ಲಾ, ಆ ಥರಾ ಹೊಸ ಖಾಯಿಲೆನಾ?”
“ಅಲ್ಲಪ್ಪಾ! ವಾರದ ಆರು ದಿನವೂ ಒಂಭತ್ತರಿಂದ ಐದು ಕಛೇರಿಯಲ್ಲೇ ಕೆಲಸ ಮಾಡಬೇಕಂತೆ. ಲೇಟಾಗಿ ಬರೋ ಹಾಗಿಲ್ಲ, ಬೇಗ ಜಾರಿಕೊಳ್ಳೋ ಹಾಗಿಲ್ಲ”
“ನಿಮ್ಮನ್ಯಾರು ಕೇಳ್ತಾರೆ ಸಾರ್ ಇಲ್ಲಿ? ನೀವೇ ನಮ್ ಬಾಸು, ನಮ್ ದೇವ್ರು”. ಹೊಗಳಿಕೆಯಲ್ಲಿ ಮಂಗೇಶ ಎತ್ತಿದ ಕೈ. ಅದಕ್ಕೇ ಕಳೆದ ವರ್ಷ ಅವನಿಗೆ ಡಬಲ್ಲು ಇನ್ಕ್ರಿಮೆಂಟು ಸಿಕ್ಕಿದ್ದು.
ರಾಯರೂ ಒಳಗೊಳಗೇ ಖುಷಿಯಾದರು. ಆಹಾ ಎಂಥಾ ಮಾತು! ಮನವೆಲ್ಲಾ ಕಲ್ಲುಸಕ್ಕರೆ. “ಅದ್ಹಾಗಲ್ಲ ಕಣಲೇ, ಪಂಚಿಂಗ್ ಮಷೀನು ಅಂತ ಇಡ್ತಾರೆ. ಅದೇ ಎಲ್ಲಾ ನೋಡಿಕೊಳ್ಳುತ್ತೆ.”
“ಏನ್ಸಾರ್ ಪಂಚಿಂಗು-ಗಿಂಚಿಂಗು ಅಂತೆಲ್ಲಾ ಹೇಳ್ತೀರಾ? ಲೇಟಾಗ್ ಬಂದ್ರೆ ಮೂತಿಗೆ ಪಂಚು ಮಾಡುತ್ತಾ ಸಾರ್ ಅದು?”
“ಥೂ ನಿನ್ನ ಜನ್ಮಕ್ಕಿಷ್ಟು! ಏನೋ ಒಂದು ಯಂತ್ರ. ನಿನಗೆ ಅರ್ಥವಾಗೋದೂ ಇಲ್ಲ ಬಿಡು. ದಿನಕ್ಕೆ ಇಷ್ಟು ಘಂಟೆ ಅಂತ ಕೆಲಸ ಮಾಡೋದು ಕಡ್ಡಾಯ. ನಮ್ಮ ಚೀಫನ್ನ ಯಾಮಾರಿಸಿದಂತೆ ಈ ಯಂತ್ರಾನ ಯಾಮಾರಿಸಕ್ಕಾಗಕ್ಕಿಲ್ಲ ನೋಡು. ಅಂತೂ ಇಂತೂ ಜೀವನಾನೇ ನರಕ ಮಾಡ್ತಿದ್ದಾರಲ್ಲಯ್ಯಾ”
“ಹೂಂ ಸಾರ್. ನೀವೇ ಇಷ್ಟು ಚಿಂತೆ ಮಾಡ್ಕಂಬಿಟ್ರೆ ಹೇಗೆ ಸಾರ್. ಚಿಂತೆ ಮಾಡ್ಬೇಕಾಗಿರೋದು ನಾನು.”
“ಅದ್ಯಾಕಯ್ಯಾ?”
“ದಿನ ಇಡೀ ಇಲ್ಲಿ ಕೆಲ್ಸ ಮಾಡ್ಕಂಡಿದ್ರೆ ನಿಮ್ಮ ಮನೆ ಕೆಲ್ಸ ಯಾವನ್ಮಾಡ್ತಾನೆ ಸಾರ್. ಬಟ್ಟೆ ಒಗೆಯೋದು, ಇಸ್ತ್ರಿ ಮಾಡೋದು, ತರಕಾರಿ ತರೋದು, ನಿಮಗೆ ಎಣ್ಣೆ-ಸೋಡ-ಮಿಕ್ಷ್ಚರು-ಸಿಗರೇಟು ಅಂತ ಏನೇನೋ ತರೋದು…ಅಯ್ಯಯ್ಯೋ ಎಷ್ಟೆಲ್ಲಾ ಇದೆ! ಮಲಗೋದಕ್ಕೂ ಟೈಮು ಎಲ್ಲುಳಿಯುತ್ತೆ ಸಾರ್ ನನ್ಗೆ? ಅಮ್ಮಾವ್ರಿಗೆ ಏನು ಅಂತ ಹೇಳೋದು?”
“ನಿಮ್ಮ ಅಮ್ಮಾವ್ರದ್ದೇ ದೊಡ್ಡ ಚಿಂತೆ ಮಂಗ್ಯಾ. ಮುಖ ಊದಿಸ್ಕೊಂಡು ಅದು-ಇದು ಅಂತ ಏನೇನೋ ಬಡ್ಕೊಳ್ತಾ ಇರ್ತಾಳೆ ಇವಳು. ಮನೆಯಲ್ಲಂತೂ ಇರೋದೇ ಇಲ್ಲ. ಇದ್ದಾಗ ಟೀವಿ ಮುಂದೆ ಕೂತ್ಕೊಂಡ್ರಾಯ್ತು. ನಾವಿಬ್ರೂ ಆಫೀಸಲ್ಲೇ ಕೆಲ್ಸ ಕೆಲ್ಸ ಅಂತ ಮೂರ್ಹೊತ್ತು ಮಾಡ್ಕೊಂಡಿದ್ರೆ ಊಟ ಏನು ಪಾಲರ್ಿಮೆಂಟಿಂದ ಬರ್ತದೇನಯ್ಯಾ?”
“ಅದೇ ಸಾರ್. ಹೀಗೇ ಆಗ್ಬಿಟ್ರೆ ನಿಮ್ ಹೊಟ್ಟೆ ಎರಡು ತಿಂಗಳಲ್ಲೇ ಇಳಿದು ಬಿಡುತ್ತೆ ಸಾರ್”
“ಹೊಟ್ಟೆ ಅಂತೆ ಹೊಟ್ಟೆ. ಆಫೀಸಿನಲ್ಲಿ ಕೆಲಸ ಅನ್ನೋದು ಎಷ್ಟು ಮಾಡ್ಬೇಕು ಅಂದ್ರೆ ಸಂಬಳಾನೂ ಜಾಸ್ತಿ ಅಂತ ಅನ್ನಿಸ್ಬೇಕು ಅಂತ ಯಾವನೋ ಮಹಾಪುರುಷ ಹೇಳಿದ್ದಾನಯ್ಯಾ. ಗೊತ್ತಾ ನಿಂಗೆ?”
“ಏನೋ ಗೊತ್ತಿಲ್ಲಾ ಸಾರ್. ಆದ್ರೆ ನೀವದನ್ನು ತುಂಬಾ ಚೆನ್ನಾಗಿ ಪಾಲಿಸ್ತಾ ಇದೀರಾ ಅನ್ನೋದು ಗೊತ್ತಾಯ್ತು ಸಾರ್. ತುಂಬಾ ಓದ್ಕಂಡಿರೋರು ಸಾರ್ ನೀವು. ನನ್ನಂಥೋರ್ಗೆ ಇದೆಲ್ಲಾ ಗೊತ್ತಾಗುತ್ತಾ? ಕೆಲ್ಸನೂ ಹೆಚ್ಚಾಗುತ್ತಲ್ಲಾ ಸಾರ್ ಇಂಥಾ ಮನೆಹಾಳು ಮಷೀನುಗಳನ್ನು ಹಾಕ್ಕೊಂಡ್ರೆ?”
“ಕೆಲ್ಸಾನ? ಅದರ ಯೋಚನೆ ಮಾಡೋವಾಗ್ಲೇ ಸುಸ್ತಾಗುತ್ತಿದೆಯಪ್ಪಾ! ಫುಲ್ ಡೇ ಇಲ್ಲೇ ಕೂರೋ ದುಸ್ಥಿತಿ ಬೇರೆ. ಅದ್ಯಾವನಯ್ಯಾ ಹೊರಗ್ಹೋಗೋದಕ್ಕೂ, ಒಳ ಬರೋದಕ್ಕೂ ಆ ಹಾಳು ಮಷೀನಿನ ಮೂತಿಗೆ ಆ ಕಾಡರ್ು ತುರುಕುತ್ತಾನೆ. ಒಳ್ಳೆ ಹೌಸ್ ಅರೆಸ್ಟ್ ಆದಂತಾಯಿತು ಇದು”
“ಹೌಸಾ? ಅರೆಸ್ಟಾ? ಏನ್ಸಾರ್, ಏನೇನೋ ಹೇಳ್ತಾ ಇದೀರಾ?”
“ಅಯ್ಯೋ, ನಿನ್ನ ಮುಂದೆ ಹೇಳ್ಕೋತಾ ಇದೀನಲ್ಲಾ, ಕೋಣನ ಮುಂದೆ ಕಿನ್ನರಿ ಬಾರಿಸ್ದಂಗೆ… ನನ್ನ ಕರ್ಮ”
“ಟೀ ತರ್ಲಾ ಸಾರ್?”
“ಹೂಂನಪ್ಪಾ. ಅದನ್ನೂ ಬ್ಯಾನ್ ಮಾಡಿ ಬಿಟ್ರೆ ಕಷ್ಟ. ಇದ್ದಷ್ಟು ದಿನ ಕುಡಿಯೋವಂತೆ”
“ಹೂಂ ಸರ್”. ನಿಂತಲ್ಲೇ ನಿಂತು ಬಾಗಿಲಿನೆಡೆ ಮುಖಮಾಡಿ “ಯೋ ಇವನೇ, ಸಾಹೇಬ್ರಿಗೆ ಚಾ ತರಪ್ಪಾ” ಎಂದು ಕೂಗಿದ ಮಂಗೇಶಿ. ಸರಕಾರಿ ಆಫೀಸುಗಳಲ್ಲಿ ಚಪರಾಸಿಗೂ ಮತ್ತೊಬ್ಬ ಚಪರಾಸಿ. ದೇವರಿಗಿಂತ ಹೆಚ್ಚಿನ ದರ್ಪ ಯಾವಾಗಲೂ ಅರ್ಚಕನಿಗಲ್ಲವೇ.
“ಸಾರ್. ತುಂಬಾನೇ ಕಷ್ಟ ಆಗ್ಬಿಡುತ್ತೆ ಸಾರ್. ಏನೂ ಪರಿಹಾರಾನೇ ಇಲ್ವಾ ಇದ್ಕೆ?”
“ಅಯ್ಯೋ ಕಡ್ಡಾಯ ಅಂತೆ ಮಂಗ್ಯಾ. ನಾಳೆ, ನಾಡಿದ್ದು ಅಂತ ಸ್ವಲ್ಪ ದಿನ ದೂಡಬಹುದು ಅಷ್ಟೇ. ತಿಂಗಳೊಳಗಾಗಿ ಬರಬಹುದು ಅನ್ಸುತ್ತೆ”
“ನೀವು ಹೇಗೂ ಇತರ್ೀರಲ್ಲಾ ಸಾರ್. ಅದೇ ಧೈರ್ಯ ಸಾರ್ ನಂಗೆ. ಏನೋ ಬಡಪಾಯೀನ ನಡುನೀರಲ್ಲಿ ಬಿಟ್ಬಿಡಲ್ಲಾ ಅಂತಾ”, ಮತ್ತೆ ಎಸೆದ ಮಂಗೇಶ ಮುಖಸ್ತುತಿಯ ಬಾಣ.
“ಹುಂ. ಅದೂ ಸರೀನೇ ಅನ್ನು. ನನ್ನ ವರ್ಗ ಆಗ್ಬಿಟ್ರೆ ಏನೋ ಮಾಡ್ತೀಯ ನೀನು?”
“ಅಯ್ಯೋ ಹಾಗೆಲ್ಲಾ ಅಪಶಕುನ ನುಡೀಬೇಡ್ರೀ ಸಾರ್. ಹಾಗೇನಾದ್ರೂ ಹೋಗ್ಲೇ ಬೇಕಾಗಿ ಬಂದ್ರೆ ಒಂದು ಪ್ರಮೋಸನ್ನು ಕೊಟ್ಟು ಹೋಗ್ಬಿಡಿ ಸಾರ್. ನಿಮ್ದೇ ನಾಮಸ್ಮರಣೆ ಮಾಡ್ಕೊಂಡಿರ್ತೀನಿ ಜೀವನಪೂರ್ತಿ”
“ಪ್ರಮೋಷನ್ನು, ಇನ್ಕ್ರಿಮೆಂಟು… ಇಂಥಾ ಒಂದೆರಡು ಒಣ ಶಬ್ದ ಬಿಟ್ರೆ ಇನ್ನೇನು ಗೊತ್ತಿದ್ಯೋ ನಿನ್ಗೆ? ಅಲ್ಪಸ್ವಲ್ಪನಾದ್ರೂ ಇಂಗ್ಲೀಷು ಬಬರ್ೇಕು ಕಣಲೇ. ರಾಷ್ಟ್ರಭಾಷೆ ಹಿಂದೀನೂ ಬೇಕಂತೆ ಈಗೀಗ.”
“ಅದ್ಯಾವ ಇಂಗ್ಲೀಷು ಜಡಿದೆ ಅಂತ ಪ್ರಮೋಸನ್ನು ಸಿಕ್ತು ಸಾರ್ ನಂಗೆ ಕಳೆದ ವರ್ಷ. ಏನೋ ನಿಮ್ಮ ಸೇವೆ ಮಾಡ್ಕೊಂಡಿದ್ದೆ ನಾನು, ಮನೆ ಮಗನ್ಹಾಗೆ”
“ನನ್ನ ಸೇವೆ ಮಾಡಿ ಹೇಗೂ ಇಷ್ಟು ದಿನ ನಡೆದಿದ್ದಾಯ್ತು ನೀನು. ನಾನೂ ಆರಾಮಾಗಿದ್ದೆ. ಜನ ಸೇವೆ ಮಾಡ್ಬೇಕಂತಯ್ಯಾ ಈಗ”
“ಛೇ… ಆ ಮಷೀನು ಮಾಡಿದವ್ನು ಏನು ಸುಖವಾಗಿತರ್ಾನೆ ಸಾರ್. ನಮ್ಮಂಥವ್ರ ಶಾಪಾನೇ ಸಾಕು ಅವ್ನು ನೆಗೆದ್ ಬೀಳಕ್ಕೆ.”
“ಏನ್ಮಾಡೋದು, ಎಲ್ಲಾ ಪಡ್ಕೊಂಡು ಬಂದಿದ್ದು! ಆಫೀಸಿಂದು ಕಾರು ರೆಡಿ ಮಾಡ್ಸು, ಡ್ರೈವರ್ ರವಿ ಬೀಡಿ ಸೇದ್ತಾ ಇರ್ಬೋದು ಆ ಮೂಲೆಯಲ್ಲಿ. ಕಲೆಕ್ಟರ್ ಆಫೀಸಿನಲ್ಲಿ ಒಂದು ಮೀಟಿಂಗ್ ಇದೆ. ಹಾಗೇ ಬರ್ತಾ ಮಾರ್ಕೆಟ್ ಗೆ ಹೋಗ್ಬರ್ತೀನಿ”
“ಅದು ಸಾರ್…ಅದು…ಕಾರು…ಕಾರು… ಅಮ್ಮಾವ್ರು…”
“ಏನಾಯ್ತೋ??”
“ಅದು ಸಾರ್… ಅಮ್ಮಾವ್ರು ಅದೇನೋ ಮಹಿಳಾ ಮಂಡಳಿ ಮೀಟಿಂಗು ಅಂತ ಕಾರು ಕರ್ಸಿದ್ರು ಸಾರ್ ಮಧ್ಯಾಹ್ನ ಒಂದು ಘಂಟೆಗೆ. ಘಂಟೆ ನಾಲಕ್ಕಾಯಿತು ಸಾರ್. ಇನ್ನೂ ಬರಲಿಲ್ಲ. ಕಾರೂ ಮತ್ತು ಅಮ್ಮಾವ್ರೂ!”
“ಬುದ್ಧಿ ಇಲ್ವೇನಯ್ಯಾ ನಿಂಗೆ? ಅದೆಷ್ಟು ಸಲ ಹೇಳಿದ್ದೀನಿ ನಾನು. ಆಫೀಸಿನ ಕಾರು ಮನೆಗೆ ಕಳ್ಸೋದಿದ್ರೆ ಹೇಳಿ ಮಾಡ್ಸಪ್ಪಾ ಅಂತ. ಈ ವಿಷ್ಯ ಚೀಫು ಎಂಜಿನ್ನಿಯರ್ ಸಾಹೇಬ್ರಿಗೆ ಗೊತ್ತಾದ್ರೆ ಏನಾಗುತ್ತಯ್ಯಾ? ಅವ್ರೂ ಮೀಟಿಂಗಿಗೆ ಬರ್ತಾರೆ ಅನ್ಸುತ್ತೆ. ಅಮ್ಮಾವ್ರಿಗೆ ಫೋನು ಮಾಡಿ ಈಗ್ಲೇ ಕಾರು ಕಳ್ಸಕ್ಕೆ ಹೇಳು”
“ಚಿಂತೆ ಮಾಡ್ಬೇಡಿ ಸಾರ್. ಚೀಫು ಸಾಹೇಬ್ರ ಹೆಂಡ್ತಿನೂ ಅದೇ ಮಹಿಳಾ ಮಂಡಳಿಯಲ್ಲಿ ಅದೇನೋ ಪ್ರೆಸಿಟೆಂಟೋ, ವೈಸು ಪ್ರೆಸಿಟೆಂಟೋ ಆಗಿದ್ದಾರೆ ಅಂತ ಕೇಳಿದ್ದೀನಿ”
“ಓ ಹೌದೇನು ?! ಒಳ್ಳೇದೇ ಆಯ್ತು ಬಿಡು ಮತ್ತೆ. ಇನ್ನೊಮ್ಮೆ ನಿನ್ನ ಮಹಾ ಇಂಗ್ಲೀಷು ನನ್ನ ಮುಂದೆ ಒದರಿದ್ರೆ ಹಲ್ಲು ಉದುರಿಸಿ ಬಿಡ್ತೀನಿ ನೋಡು”
“ಕ್ಷಮಿಸಿ ಸಾರ್. ಅದೋ ಟೀ ಬಂತು”, ಮಂಗೇಶ ಚಹಾದ ಕಪ್ಪನ್ನು ರಾಯರ ಟೇಬಲ್ಲಿನಲ್ಲಿರಿಸಿದ. ಚಹಾದ ಮೇಲ್ಮೈ ಸಣ್ಣಗೆ ಹೊಗೆಬಿಡುತ್ತಿದ್ದರೂ ರಾಯರು ತಣ್ಣಗೆ ಚಹಾ ಕುಡಿಯತೊಡಗಿದರು. ಮನಸ್ಸು ಸ್ವಲ್ಪ ನಿರಾಳವಾದಂತಾಯಿತು.
“ಲೋ ಮಂಗ್ಯಾ, ಮೀಟಿಂಗು ಹೋಗಕ್ಕೇನೂ ಮೂಡಿಲ್ಲ ನಂಗೆ. ನಾಲ್ಕೂವರೆ ದಾಟಿಯಾಯಿತು. ನಾನು ಸೀದಾ ಮನೆಗೆ ಹೋಗ್ತೇನೆ. ಚೀಫು ಸಾಹೇಬ್ರ ಫೋನು ಬಂದ್ರೆ ಅಜರ್ೆಂಟಾಗಿ ಸೈಟಿಗೆ ಹೋಗ್ಬೇಕು ಅಂದು ಹೊರಟ್ಹೋದ್ರು ಅನ್ನು. ಇನ್ಯಾರು ಫೋನು ಮಾಡಿದ್ರೂ ಸಾಹೇಬ್ರು ಹೆಡ್ಡಾಫೀಸಿಗೆ ಮೀಟಿಂಗಿಗೆ ಹೋಗಿದ್ದಾರೆ ಅನ್ನು”, ಖಾಲಿ ಕಪ್ಪನ್ನು ಪಕ್ಕಕ್ಕೆ ಇಡುತ್ತಾ ಭೀಮರಾಯರು ಮೇಲಕ್ಕೆದ್ದರು. ಮಂಗೇಶ ‘ಆಯ್ತು ಸಾರ್, ಆಯ್ತು ಸಾರ್’ ಎನ್ನುತ್ತಾ ರಾಯರ ಬ್ರೀಫ್ ಕೇಸನ್ನು ಎತ್ತಿ ಮುಂದಕ್ಕೆ ನಡೆದ.
ಆಫೀಸಿನ ಕಾರು ಅಮ್ಮಾವ್ರು ಕೊಂಡ್ಹೋದ ಪರಿಣಾಮ ಜೂನಿಯರ್ ಎಂಜಿನಿಯರ್ ನ ಸೆಮಿ-ಡಕೋಟ ಜೀಪಿನಲ್ಲಿ ಭೀಮರಾಯರು ತಮ್ಮ ಬ್ರೀಫ್ ಕೇಸಿನೊಂದಿಗೆ ವಿರಾಜಮಾನರಾದರು. ದೊಡ್ಡ ಸಾಹೇಬ್ರು ಎಂದು ಅನಿವಾರ್ಯದ ಒಣ ಸೆಲ್ಯೂಟ್ ಹೊಡೆದ ಡ್ರೈವರ್ ಜೀಪನ್ನು ಮುನ್ನಡೆಸಿದ. ಹೊಗೆಯುಗುಳುತ್ತಾ ಜೀಪು ನಿಮಿಷಾರ್ಧದೊಳಗೆ ಆಫೀಸಿನ ಅಂಗಣದಿಂದ ಮರೆಯಾಯಿತು.

————-

ಘಂಟೆ ಐದಾಗಲು ಐದೇ ನಿಮಿಷ ಉಳಿದಿದೆ. ಭೀಮರಾಯರ ಆಫೀಸಿನ ಲ್ಯಾಂಡ್ ಲೈನ್ ಫೋನು ಬಡಿದುಕೊಳ್ಳಲಾರಂಭಿಸಿತು. ಅದ್ಯಾವನೋ ಬಂದ ಮನೆಗೆ ಹೋಗೋ ಟೈಮಲ್ಲಿ ಎಂದು ಗೊಣಗುತ್ತಾ ಫೋನೆತ್ತಿದ ಮಂಗೇಶ.
“ಹಲೋ”
“ಮಂಗೇಶನಾ, ಸಾಹೇಬ್ರಿಗೆ ಫೋನು ಕೊಡಯ್ಯಾ”
“ಯಾರು ಮಾತಾಡ್ತಾ ಇರೋದು?”
“ಇನ್ಯಾರು? ಚೀಫು ಎಂಜಿನಿಯರು. ಕೊಡಯ್ಯಾ ನಿಮ್ಮ ಸಾಹೇಬ್ರಿಗೆ ಫೋನು”
“ಓಹ್, ನೀವಾ ಸಾರ್. ಏನೋ ಅಜರ್ೆಂಟು ಅಂತ ಸೈಟಿಗೆ ಹೋಗವ್ರೆ ಸಾರ್”
“ಅವ್ರ ಮೊಬೈಲು ಸ್ವಿಚ್ ಆಫ್ ಬತರ್ಾ ಇದೆ. ಆಫೀಸಿನ ಕಾರಲ್ಲಿ ಸೈಟಿಗೆ ಹೋಗಿ ವಿಷ್ಯ ತಿಳ್ಸಿ. ಸೀದಾ ಹೆಡ್ಡಾಫೀಸಿಗೆ ಬರಕ್ಕೆ ಹೇಳಿ. ಅಲ್ಲೇ ಸಿಗ್ತೀನಿ ನಾನು ಅವ್ರಿಗೆ. ಐದೂವರೆಗೆ ಮೀಟಿಂಗಿದೆ.”
“ಅದೂ… ಅದೂ… ಆಗ್ಲಿ ಸಾರ್. ವಿಷ್ಯ ತಿಳಿಸ್ತೀನಿ ಸಾಹೇಬ್ರಿಗೆ”
“ಹಾಂ! ನೀವೂ ಮನೆಗ್ಹೋಗ್ಬೇಡಿ ಮತ್ತೆ! ನಿಮ್ಮ ಸಾಹೇಬ್ರಿಗೆ ನೀವಿಲ್ದೇ ಇದ್ರೆ ಕೈ-ಕಾಲು ಓಡೋಲ್ಲಾ. ಅದೇನು ಫೈಲು ತಬರ್ೇಕು ಅಂತ ಅವ್ರೇ ಹೇಳ್ತಾರೆ ನಿಮ್ಗೆ”
“ಅದೂ… ಅದೂ… ಐದೂವರೆ ಆಯ್ತಲ್ಲಾ ಸಾರ್. ಆಫೀಸು ಟೈಮು ಮುಗೀತಲ್ಲಾ ಸಾರ್? ಸಾಹೇಬ್ರಿಗೆ ವಿಷ್ಯ ತಿಳಿಸ್ತೇನೆ. ನಾ ಬರಲೇಬೇಕಾ ಸಾರ್?”, ಮನದಲ್ಲೇ ಚೀಫಿಗೆ ಬೈಯ್ಯುತ್ತಾ ಹಾಕುತ್ತಾ ತೊದಲಿದ ಮಂಗೇಶ.
“ತಲೆಹರಟೆ ಮಾಡ್ಬೇಡ್ರೀ. ನಮ್ಮ ಕೇಂದ್ರ ಮಂತ್ರಿಗಳಿಗೇನೇ ರಜಾ ಸಿಕ್ತಾ ಇಲ್ವಂತೆ. ನಾವೂ ತಲೆ ಕೆರ್ಕೊಳ್ಳೋಕೇ ಟೈಮಿಲ್ಲಾ ಅಂತ ಒದ್ದಾಡ್ತಾ ಇದೀವಿ. ಸುಮ್ನೆ ಹೇಳ್ದಷ್ಟು ಮಾಡ್ರೀ”, ಈ ಬಾರಿ ದನಿ ಜೋರಾಗಿತ್ತು.
“ಆಗ್ಲಿ ಸಾರ್”
“ಅಂದ ಹಾಗೆ. ಮೀಟಿಂಗು ತುಂಬಾ ಅಜರ್ೆಂಟು. ಸರಿಯಾಗಿ ಐದೂವರೆಗೆ ಶುರುವಾಗುತ್ತೆ. ಬಯೋಮೆಟ್ರಿಕ್ ಮತ್ತೆ ಪಂಚಿಂಗ್ ಮಷೀನ್ ಅಳವಡಿಕೆ ಬಗ್ಗೆ ಅನ್ನಿ. ನಿಮ್ಮ ಸಾಹೇಬ್ರಿಗೆ ಗೊತ್ತಾಗುತ್ತೆ”
“ಯಾವುದ್ರ ಬಗ್ಗೆ ಅಂದ್ರಿ ಸಾರ್?”
“ಬಯೋಮೆಟ್ರಿಕ್ಕು ಕಣ್ರೀ ಬಯೋಮೆಟ್ರಿಕ್ಕು”
ಮಂಗೇಶ ಇನ್ನೇನಾದರೂ ಹೇಳೋ ಮುನ್ನವೇ ಲೈನು ಕಟ್ಟಾಯಿತು. ಈ ಬಾರಿ ಟೆಲಿಫೋನಿನ ರಿಸೀವರು ಸ್ವಲ್ಪ ಜೋರಾಗಿಯೇ ಸದ್ದು ಮಾಡುತ್ತಾ ತನ್ನ ಸ್ವಸ್ಥಾನವನ್ನು ಸೇರಿತು. ಲ್ಯಾಂಡ್ ಲೈನು ಫೋನಿನಲ್ಲಿ ಮಾತನಾಡುವ ವ್ಯಕ್ತಿಯ ಸಿಟ್ಟು ಅದರ ರಿಸೀವರಿನ ಮೂತಿಗೆ ಮೂಲ.

———-

ಬಯ್ಯೋಮೆಟ್ರಿಕ್ಕು… ಬಯ್ಯೋಮೆಟ್ರಿಕ್ಕು… ಹಿಡಿಶಾಪ ಹಾಕುತ್ತಲೇ, ತನ್ನಷ್ಟಕ್ಕೇ ಗೊಣಗುತ್ತಲೇ ಚಪರಾಸಿ ಮಂಗೇಶ ತನ್ನ ಸಾಹೇಬ್ರು ಭೀಮರಾಯರ ಮನೆಗೆ ಫೋನಾಯಿಸತೊಡಗಿದ.
 

‍ಲೇಖಕರು G

21 January, 2015

3 Comments

  1. ಅಕ್ಕಿಮಂಗಲ ಮಂಜುನಾಥ

    ಕತೆ ಚೆನ್ನಾಗಿದೆ. ಆಫೀಸಿನಲ್ಲಿನ ಸೋಮಾರಿತನ, ಅಕ್ರಮ, ಭ್ರಷ್ಟಾಚಾರ, ಹಿರಿಯ ಅಧಿಕಾರಿ ವರ್ಗ ಕೆಳ ವರ್ಗದ ನೌ ಕರರನ್ನು ಸ್ವಾರ್ಥಕ್ಕೆ ಬಳಸಿ ಕೊಳ್ಳುವ ರೀತಿ , ಕೆಳಗಿನ ವರು ಸಮಯ ಸಾಧನೆಗಾಗಿ ಹಿರಿಯರ ಮತ್ತು ಅವರ ಮನೆಯವರಿಗೆ ಏನು ಬೇಕಾದರೂ ಮಾಡಿಕೊಡುವ ಸ್ವಾರ್ಥ ತನವನ್ನು ಪ್ರಸಾದ್ ರವರು ಬಹಳ ಅಚ್ಚುಕಟ್ಟಾಗಿ ರೂಪಿಸಿದ್ದಾರೆ .

  2. Sudhindra rao

    ಆಫೀಸುಗಳಲ್ಲಿ ನಡಿಯೋದನ್ನ ಸ್ವಾರಸ್ಯವಾಗಿ
    ಬರೆದಿದ್ದೀರ .ಇದರ ಅನುಭವ ನನಗು ಸ್ವಲ್ಪ ಆಗಿದೆ

  3. ಡಾ. ಸೌಮ್ಯ ಪಲಿಮಾರ್

    ತುಂಬಾ ಚೆನ್ನಾಗಿದೆ…
    ಹಾಸ್ಯದೊಂದಿಗೆ ಸತ್ಯವನ್ನು ಹೇಳುವ ಕಥೆ…
    “ಲ್ಯಾಂಡ್ ಲೈನು ಫೋನಿನಲ್ಲಿ ಮಾತನಾಡುವ ವ್ಯಕ್ತಿಯ ಸಿಟ್ಟು ಅದರ ರಿಸೀವರಿನ ಮೂತಿಗೆ ಮೂಲ…” ಹೊಸ ಗಾದೆ ಖುಷಿಯಾಯಿತು…
    ಸರಕಾರಿ ಕಡತಗಳ ನಡುವೆಯೂ ನಿಮ್ಮಒಳಗಿರುವ ಕಥೆಗಾರನ್ನು ಜೀವಂತವಾಗಿ ನಗುನಗುವಂತೆ ಇಟ್ಟಿರುವುದೇ ಒಂದು ಸಾಧನೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading