ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನ್ನಿ ಆ ‘ಓಲ್ಡ್ ಮ್ಯಾನ್’ ಜೊತೆ ಮಾತನಾಡೋಣ..

ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದವು.

ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಬರೆದಿರುವ ಟಿಪ್ಪಣಿ ಇಲ್ಲಿದೆ.

ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ, ಹೆಮ್ಮಿಂಗ್ವೆಯಂತೆಯೇ Old man and the sea ಕೂಡಾ ಇನ್ನಿಲ್ಲದಂತೆ ಓದುಗರನ್ನು ಕಾದಿರುವುದು ನಿಜ.

ಸರಿ ಹೀಗೆ ಮಾಡೋಣ- ನಿಮ್ಮ ಮನದೊಳಗಿರುವ ಆ ‘ಓಲ್ಡ್ ಮ್ಯಾನ್’ ನೆನಪನ್ನು ಹೊರತನ್ನಿ.

ನಿಮ್ಮ ಆ ಕೃತಿಯ ಓದಿನ ಮೆಲುಕನ್ನು avadhimag@gmail.com ಗೆ ಕಳಿಸಿಕೊಡಿ 

  ಅಹಲ್ಯಾ ಬಲ್ಲಾಳ್

ಮೊನ್ನೆ ಕಿರಣ್ ಭಟ್ ಅವರ ‘ರಂಗ ಕೈರಳಿ’ ಅಂಕಣದಲ್ಲಿ ಹೆಮಿಂಗ್ವೇ ಕೃತಿಯಾಧಾರಿತ ರಂಗಪ್ರಯೋಗದ ವಿವರ ಓದಿದಾಗ … ಕಾಕತಾಳೀಯ! ನನ್ನ ಕೈಯಲ್ಲಿದ್ದದ್ದೂ ಅರ್ನೆಸ್ಟ್ ಹೆಮಿಂಗ್ವೇಯ ಅದೇ ಕಾದಂಬರಿ.

ಧೋ ಧೋ ಎನ್ನುವಷ್ಟಲ್ಲದಿದ್ದರೂ ಎರಡು ದಿನಗಳಿಂದ ಸುಮಾರು ಮಳೆ ಇಲ್ಲಿ. ಜೊತೆಗೆ ಬಿಟ್ಟು ಬಿಟ್ಟು ಬಿಸಿಲು, ಮಳೆ ಬಂದದ್ದೇ ಸುಳ್ಳು ಎನ್ನುವಂತೆ. ಮತ್ತೆ ಮಳೆ ಸುರಿದಾಗ ಚೆಂದದ ಬಿಸಿಲು ಹರಡಿಕೊಂಡಿದ್ದು ಇಂದೋ ನಿನ್ನೆಯೋ ಎಂಬ ಗೊಂದಲ.

ಗಡಿಯಾರ ನೋಡದಿದ್ದರೆ ಸಮಯದ ವಿಷಯದಲ್ಲಿ ಮೋಸ ಹೋಗುವ ಸಂಭವವೇ ಹೆಚ್ಚು. ಸುತ್ತಮುತ್ತ ನಡೆಯುತ್ತಿರುವುದು ಕನಸೋ ನನಸೋ? ಈ ಪ್ರಶ್ನೆಯನ್ನು ಪರಿಹರಿಸಿಕೊಳ್ಳಬೇಕೆಂದೂ ಅನಿಸದ ಮತ್ತು ಆ ವೇಳೆಯಲ್ಲಿ ಪರಿಹರಿಸುವ ಪ್ರಮೇಯವೇ ಇರದ ಮಾಹೋಲ್. ಇದಕ್ಕೇನನ್ನುವರೋ ಗೊತ್ತಿಲ್ಲ; ಈಗ ಬುದ್ಧಿಗೆ ಹೊಳೆಯುವ ಪದಪುಂಜವೆಂದರೆ -ಇಂದ್ರಿಯಗಳಿಗೆ ದಕ್ಕುವ ಜಗತ್ತೇ ಅಪರಿಚಿತ ಎನಿಸುವ ಪರಿಯ ಸರ್ರಿಯಲಿಸ್ಮ್.

ಅಂಕಣದ ಓದು ಒಂದು ರೀತಿಯ ಹೊಟ್ಟೆಕಿಚ್ಚು ಮತ್ತು ಅಚ್ಚರಿಯನ್ನು ತರಿಸಿದ್ದು ಮಾತ್ರ ದಿಟವೇ! ತುಂಬಾ ಕಡಿಮೆ ಮಾತುಗಳಿರುವ ಈ ಕಿರುಕಾದಂಬರಿಯನ್ನು ರಂಗಕ್ಕೆ ಹೇಗೆ ಅಳವಡಿಸಿರಬಹುದು? ಹೇಳಿ ಕೇಳಿ ರಂಗಕುಶಲಿಗಳಾದ ಕೇರಳದವರ ನಾಟಕ. ಎಲ್ಲೆಲ್ಲಿ ಕತ್ತರಿ ಪ್ರಯೋಗ ಮಾಡಿರಬಹುದು? ಅಥವಾ (ಇತ್ತೀಚೆಗೆ ನೋಡಿದ ಒಂದು ಕಾದಂಬರಿಯಾಧಾರಿತ ನಾಟಕದ ಹಾಗೆ) ಮಾಡಲೇ ಇಲ್ಲವೇ? ತಾಂತ್ರಿಕವಾಗಿ ಅದ್ಭುತವಾಗಿತ್ತಂತೆ. ಧ್ವನಿ-ಬೆಳಕು-ವಿಧವಿಧದ ರಂಗಪರಿಕರಗಳನ್ನು ಯಾವ ರೀತಿಯಲ್ಲಿ ಬಳಸಿಕೊಂಡು ಯಾವ ಪರಿಣಾಮವನ್ನು ಉಂಟುಮಾಡಿರಬಹುದು ಮತ್ತು ಎಷ್ಟು?

ಇಷ್ಟರೊಳಗೆ ಆಗಲೇ The Old Man and the Sea-ಯ ಮುದುಕ ಸ್ಯಾಂಟಿಯಾಗೋ, ಅವನ ದೋಣಿ, ಮೀನುಗಾರಿಕೆಯ ತಂತ್ರಗಳು; ಕಡಲ ಮೇಲೆ ಹಾರುವ ಹಕ್ಕಿಗಳು; ಬೃಹತ್ ಗಾತ್ರದ ಮಾರ್ಲಿನ್ ಮೀನು, ಮುದುಕ ಮತ್ತು ಅದರ ನಡುವಿನ ಮೌನ ಸಂಭಾಷಣೆ ಎಲ್ಲವೂ ನಿಜವೆನಿಸತೊಡಗಿ ಪುಟಗಳೇ ಆಗಿ ಹೋಗಿದ್ದವು.

ಕ್ಯೂಬಾ ದೇಶದ ಈ ಬಡ ಮೀನುಗಾರ ಪಳಗಿದವನೇ ಆದರೂ ಎಂಬತ್ತನಾಲ್ಕು ದಿನಗಳಿಂದ ಕಡಲಿನಿಂದ ಬರಿಗೈಯಲ್ಲೇ ಬರುತ್ತಿದ್ದ. ಆದರೂ ಅವನ ಕನಸಲ್ಲಿ ಸಿಂಹಗಳು ಆಡುತ್ತಿದ್ದವು. ಅವನ ಶಿಷ್ಯ ಯುವಕ ಮ್ಯಾನೋಲಿನ್ ಗೆ ಅವನನ್ನು ಕಂಡರೆ ಅಕ್ಕರೆ ಮತ್ತು ಕಾಳಜಿ. ಎಂದೂ ಸೋಲೊಪ್ಪದ ಮುದುಕ ಮರುದಿನ ತನ್ನ ದೋಣಿಯನ್ನು ಇನ್ನಷ್ಟು ದೂರ ಒಯ್ಯುವ ನಿರ್ಧಾರ ಮಾಡಿ ತನ್ನ ಮೇಲಿನ ನಂಬಿಕೆಯಿಂದ ಅದೃಷ್ಟವನ್ನರಸಿಕೊಂಡು ಕತ್ತಲಲ್ಲೇ ಹೊರಡುತ್ತಾನೆ.

ಮುಂದೆ ಉದ್ದಕ್ಕೂ ಮುದುಕನ ಆಲೋಚನಾ ಕ್ರಮ, ಕಡಲಲ್ಲಿ ಏಕಾಂಗಿ ಪಯಣ, ನಿಸರ್ಗ, ಮಾರ್ಲಿನ್ ಮೀನನ್ನು ಹಿಡಿಯಲು ಹೋರಾಟ, ಜೊತೆಜೊತೆಗೇ ಸಾಗಿಕೊಂಡು ಬರುವ ಅನುಬಂಧ, ಶಾರ್ಕ್ ಮೀನುಗಳು, ಅವು ಉಂಟುಮಾಡುವ ಹಾವಳಿ, ತಾಳ್ಮೆಯ ಸಾಕಾರ ರೂಪದಂತೆ ಮಾರ್ಲಿನಿನ ಅಸ್ಥಿಪಂಜರದೊಂದಿಗೆ ಆತ ಮರಳಿ ದಡ ಸೇರಿ ಕುಸಿಯುವ ಪರಿ, ಮುದುಕನ ಜೀವನಧರ್ಮವಾದ ಮೀನುಗಾರಿಕೆಯನ್ನು ಶಿಷ್ಯ ಮುಂದುವರಿಸಿಕೊಂಡು ಹೋಗುವ ಸ್ಪಷ್ಟ ಸೂಚನೆ. ಮೀನುಗಾರಿಕೆಯ ಗಂಧಗಾಳಿಯೂ ಇಲ್ಲದ ನನ್ನಂತಹ ಓದುಗರನ್ನೂ ಸೆರೆಹಿಡಿದಿಡುವ ಭಾಗವೇ ಕೊನೆಯವರೆಗೂ.

ಕಥೆಯ ನಿರೂಪಕ ಇಲ್ಲಿ ಪಾತ್ರವಲ್ಲ; ಆದರೂ ಆತನಿಗೆ ಮುದುಕನ ಒಳಗೂ ಗೊತ್ತು, ಮುದುಕನ ಹೊರಗಿರುವ ಲೋಕದ ಘಟನೆಗಳೂ ಗೊತ್ತು. ಒಮ್ಮೆ ಅದು ಒಮ್ಮೆ ಇದು ಎಂಬಂತೆ ಸಾಗುವ ಓದು ಸರಳ ವಾಕ್ಯಗಳಲ್ಲೇ ಎಷ್ಟೆಲ್ಲಾ ಹೇಳುತ್ತದೆ…

“ಪ್ರತಿ ದಿನವೂ ಒಂದು ಹೊಸ ದಿನ. ಅದೃಷ್ಟವಂತರಾಗುವುದು ಒಳ್ಳೆಯದೇ. ಆದರೆ ನನಗೆ ಖಚಿತವಾಗಿರುವುದೇ ಹೆಚ್ಚು ಇಷ್ಟ. ಹೀಗಿದ್ದರೆ ಅದೃಷ್ಟ ಬಂದಾಗ ಸಿದ್ಧರಾಗಿರುತ್ತೇವೆ.”

“ಆದರೆ ಮಾನವ ಸೋಲಲು ಇರುವುದಲ್ಲ,” ಎಂದನು. “ಮಾನವನನ್ನು ನಾಶಮಾಡಬಹುದೇ ಹೊರತು ಸೋಲಿಸಲಾಗದು.”

“ನಿನ್ನ ಬಳಿ ಇಲ್ಲದಿರುವುದರ ಬಗ್ಗೆ ಯೋಚಿಸಲು ಇದು ಸಮಯವಲ್ಲ. ಏನಿದೆಯೋ ಅದನ್ನೇನು ಮಾಡಬಹುದು ಎಂದು ಯೋಚಿಸು.”

“ನಾನು ಜೋರಾಗಿ ಮಾತಾಡಿಕೊಳ್ಳುವುದನ್ನು ಅವರು ಕೇಳಿಸಿಕೊಂಡರೆ ನನಗೆ ಹುಚ್ಚು ಎಂದಾರು. ಆದರೆ ನಾನು ಹುಚ್ಚನಲ್ಲ. ಆದ್ದರಿಂದ ನನಗದರ ಪರಿವೆ ಇಲ್ಲ.”

“ಅದೃಷ್ಟ ಎನ್ನುವುದು ಅನೇಕ ರೂಪಗಳಲ್ಲಿ ಬರಬಹುದು, ಅವಳನ್ನು ಗುರುತಿಸುವವರು ಯಾರು?”

“ನಾನು ಮೀನುಗಾರನಾಗಬಾರದಿತ್ತೋ ಏನೋ,” ಎಂದುಕೊಂಡ. ಆದರೆ ನಾನು ಹುಟ್ಟಿದ್ದೇ ಅದಕ್ಕಾಗಿ.”

“ಮೀನೇ, ನೀನಂತೂ ಹೇಗಿದ್ದರೂ ಸಾಯಲೇಬೇಕು. ನನ್ನನ್ನೂ ಸಾಯಿಸಬೇಕೇನು ನಿನಗೆ?”

ಆಗ ಅವನಿಗೆ ಆ ಡೊಡ್ಡ ಮೀನಿನ ಬಗ್ಗೆ ಮರುಕ ಉಂಟಾಯಿತು. ಅವನಿಂದ ಎಷ್ಟು ಜನರಿಗೆ ಆಹಾರ ಸಿಗಬಹುದು? ಅವರಿಗೆ ಅವನನ್ನು ತಿನ್ನುವ ಯೋಗ್ಯತೆ ಇದೆಯೇ? ಇಲ್ಲ, ಖಂಡಿತ ಇಲ್ಲ. ಅವನ ವರ್ತನೆ ಮತ್ತು ಗಾಂಭೀರ್ಯವನ್ನು ಪರಿಗಣಿಸಿದರೆ ಅವನನ್ನು ತಿನ್ನುವ ಅರ್ಹತೆ ಯಾರಿಗೂ ಇಲ್ಲ.

** ನೀನು ನನ್ನನ್ನು ಕೊಲ್ಲುತ್ತಿದ್ದೀಯ, ಮೀನೇ, ಎಂದುಕೊಂಡ ಮುದುಕ. ಆದರೆ ನಿನಗೆ ಆ ಹಕ್ಕಿದೆ. ನಿನಗಿಂತ ಶ್ರೇಷ್ಠ, ಸುಂದರ ಅಥವಾ ಶಾಂತ ಯಾ ಉದಾತ್ತವಾದ ವಸ್ತುವನ್ನು ನಾನು ಹಿಂದೆಂದೂ ಕಂಡಿಲ್ಲ, ಸೋದರ. ಬಾ, ನನ್ನನ್ನು ಕೊಲ್ಲು. ಯಾರು ಯಾರನ್ನು ಕೊಲ್ಲುತ್ತಾರೆ ಎಂಬ ಚಿಂತೆ ಇಲ್ಲ ನನಗೆ.

ಇದು ಆಳದ ಕಡಲು. ಓದಿದಷ್ಟೂ ಸಲ ಅದರ ಒಡಲಿನಲ್ಲಿರಬಹುದಾದ ಮುತ್ತುರತ್ನಗಳು ತಮ್ಮ ಹೊಳಪನ್ನು ಬಿಟ್ಟುಕೊಟ್ಟಾವು. ಸಾಹಿತ್ಯ ಮತ್ತು ಇತರ ಕಲೆಗಳಲ್ಲಿ ಹೆಚ್ಚಾಗಿ ಸಮುದ್ರ ಮತ್ತು ಅದರಲ್ಲಿ ದೋಣಿಯ ಪಯಣವೆಂದರೆ ಈ ಜಗತ್ತಿನಲ್ಲಿ ಮನುಷ್ಯ ಜೀವನಕ್ಕೆ ಸಂಕೇತ.

ಬದುಕು-ಸಾವು, ಇತರ ಜೀವಿಗಳ ಜೊತೆಗಿನ ಸಂಬಂಧ, ಭಿನ್ನ ಮನೋಧರ್ಮಗಳು, ಪ್ರಕೃತಿ ವ್ಯವಸ್ಥೆ, ಅದೃಷ್ಟ, ಹಣ, ಪೈಪೋಟಿ, ಒಳ್ಳೆಯವರಿಗೂ ಒದಗಿ ಬರುವ ಕಷ್ಟಗಳು, ಹೋರಾಟ , ಸಹನೆ- ಹೀಗೆ ಜೀವನ ಪಯಣದಲ್ಲಿ ಸಾರ್ವಕಾಲಿಕವೂ ಸಾರ್ವತ್ರಿಕವೂ ಆದ ಎಷ್ಟೆಲ್ಲ (ಉತ್ತರಿಸಲಾಗದ) ಪ್ರಶ್ನೆಗಳು. ಹೆಮಿಂಗ್ವೇಯ ಈ ಕೃತಿಯಲ್ಲಿ ಪಾತ್ರದೊಂದಿಗೆ ಗುರುತಿಸಿಕೊಳ್ಳುವಿಕೆ ತುಂಬಾ ಸಹಜ ಮತ್ತು ಸರಳ.

ಓದಿದಾಗ ನಿಮ್ಮನ್ನು ನೀವು ಅಷ್ಟಿಷ್ಟಾದರೂ ಕಂಡುಕೊಳ್ಳದಿದ್ದರೆ, ನಿಮ್ಮ ಅರಿವು ಕೊಂಚವಾದರೂ ವಿಸ್ತಾರಗೊಳ್ಳದಿದ್ದರೆ ಹೇಳಿ!

‍ಲೇಖಕರು avadhi

14 August, 2018

13 Comments

  1. ರಘುನಾಥ

    ಚಂದದ ಬರಹ ಅಹಲ್ಯಾ ನನ್ನ ಮೆಚ್ಚಿನ ಕಾದಂಬರಿಯ ಅನಾವರಣ.

    • Ahalya Ballal

      ಸರ್, ನಿಮ್ಮ ಪ್ರೋತ್ಸಾಹವೇ ಬೆಂಬಲ.

  2. Ahalya Ballal

    ನನ್ನ ಅನಿಸಿಕೆಯ ದೋಣಿಗೆ ಚಾಲನೆ ಕೊಟ್ಟಿರಿ. ಧನ್ಯವಾದ, ಅವಧಿ!

  3. Kiran Bhat

    Started a good chain….
    Thank you.

    • Ahalya Ballal

      ನಾನು ನಿಮಗೆ ಥ್ಯಾಂಕ್ಸ್ ಹೇಳ್ಬೇಕು.

  4. Sudha Hegde

    ಓದಬೇಕೆನಿಸಿದೆ. ಧನ್ಯವಾದಗಳು ಪರಿಚಯಿಸಿದ್ದಕ್ಕೆ..

    • Ahalya Ballal

      ಓದಿ, ಓದಿ ಸುಧಾ.

  5. Aparna Rao

    ಸಿಗದೇ ಹೋಗಬಹುದಾದ ಎಷ್ಟೋ ವಿಶಿಷ್ಟ ಪ್ರಕಾರ ಓದುಗಳ ಪರಿಚಯವನ್ನ ಮಾಡಿಸುವ ನಿನ್ನ ಕಳಕಳಿ ಸದಾ ವಿಶೇಷವೇ.

    • Ahalya Ballal

      ಥ್ಯಾಂಕ್ಯೂ ಅಪರ್ಣಾ. ಇದು ಎಲ್ಲೆಡೆ ಸಿಗಬಹುದಾದ ಓದು. ಕ್ಲಾಸಿಕ್

  6. ಸಂಧ್ಯಾರಾಣಿ

    ಸ್ಯಾಂಟಿಯಾಗೋ ನಮ್ಮೆಲ್ಲರ ಬದುಕುವ ಛಲಕ್ಕೆ ರೂಪಕ. ನನಗೆ ಸಮುದ್ರ ಇಷ್ಟ, ಸ್ಯಾಂಟಿಯಾಗೋ ಇಷ್ಟ, ಹೆಮ್ಮಿಂಗ್ವೆ ಇಷ್ಟ, ಅವನು ಪ್ರೀತಿಯಿಂದ ನೆಲೆಸಿದ ಕ್ಯೂಬಾ ಇಷ್ಟ….ನೋಡುತ್ತಿದ್ದಂತೆ ಕಡಲು ವಿಶಾಲವಾಗುತ್ತಾ ಹೋಗುತ್ತದೆ! ಚೆಂದದೆ ಬರಹ ಅಹಲ್ಯಾ, ಮತ್ತೆ ಅದನ್ನೇ ಹೇಳುತ್ತೇನೆ, ಪ್ಲೀಸ್, ಇನ್ನೂ ಹೆಚ್ಚು ಹೆಚ್ಚು ಬರೆಯಿರಿ!

    • Ahalya Ballal

      ನಿಮ್ಮ ಸಹೃದಯತೆಗೆ ಏನೆನ್ನಲಿ, ಸಂಧ್ಯಾ!

  7. ಜಯಶ್ರೀ ದೇಶಪಾಂಡೆ

    ನಿಮ್ಮ ಬರಹ ಮೂಲಕೃತಿ ಮತ್ತು ಅದರ ನಾಟ್ಯರೂಪಾಂತರ ಎರಡರ ಸತ್ವಕ್ಕೂ ಕಳೆ ಕೊಟ್ಟಿದೆ. ಅಭಿನಂದನೆ.

    • Ahalya Ballal

      ಜಯಶ್ರೀ, thanks ಓದಿದ್ದಕ್ಕೆ, ಸ್ಪಂದಿಸಿದ್ದಕ್ಕೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading