ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನವಾಸಿ ನೆನೆದು ಹೆಜ್ಜೆ ಹಾಕಿದರು ಡಾ. ವಿಜಯಲಕ್ಷ್ಮಿ

ನೆನೆವುದೆನ್ನ ಮನ ಬನವಾಸಿ ನಡಿಗೆಯ….

ಡಾ. ವಿಜಯಲಕ್ಷ್ಮಿ ಡಿ.

ಚಿತ್ರಗಳು: ಹರಿನಾಥ ಬಾಬು

ಕಳೆದ ವರ್ಷ ಪದವಿ ಪರೀಕ್ಷೆಗಳ ಮೌಲ್ಯಮಾಪನ ನಡೆಯುತ್ತಿತ್ತು. ದಿನದ ಕಾರ್ಯ ಮುಗಿಸಿದ ಮೇಲೆ ನಮ್ಮ ಗೆಳೆಯರ ಬಳಗ ಒಂದೆಡೆ ಕುಳಿತು ಅದೂ-ಇದೂ ಮಾತು ಹಾಡು ಹರಟೆಯಲ್ಲಿ ತೊಡಗುವುದು ಮಾಮೂಲು. ಆಗ ಶಿವಸ್ವಾಮಿಯವರು ‘ನಮ್ಮ ಸಮಾಜಮುಖಿ ಬಳಗದಿಂದ ಬನವಾಸಿ ನಡಿಗೆ ಇದೆಯಪ್ಪಾ’ ಯಾರು ಬರ‍್ತೀರಿ ಅಂತ ಬಾಣ ಎಸೆದರು.

ಇಂಥ ನಡಿಗೆಯ ಬಗ್ಗೆ ಕೇಳಿಯೇ ಇರದ ನಾನು ತಟಕ್ಕನೆ ‘ನಾನು ಬರ‍್ತೀನಿ’ ಅಂತಂದೆ. ಗುಂಪಿನ ಗೆಳೆಯರು ಬೇರೆ ಕೆಲಸ ಕಾರ್ಯಗಳನ್ನು ಮುಂದು ಮಾಡಿ, ತಪ್ಪಿಸಿಕೊಂಡರು. ನನಗೋ, ‘ನಾನೊಬ್ಬಳೇ ಆದರೆ ಏನಪ್ಪಾ ಕಥೆ? ಶಿವಸ್ವಾಮಿ ಹೇಳಿದಾಕ್ಷಣ ಒಪ್ಪಿಕೊಳ್ಳಬಾರದಿತ್ತು, ಒಪ್ಪಿಕೊಂಡು ಹಣಸಂದಾಯ ಮಾಡಿದ್ದೂ ಆಗಿತ್ತು, ಈಗ ಏನು ಮಾಡುವುದು’ ಎಂಬ ಪೇಚಾಟ. ಶಿವಸ್ವಾಮಿನ ಕೇಳಿದರೆ, ‘ಅದ್ಯಾಕ ತಾಯಿ, ನೀನೇ ಹಿಂಗಾದರೆ ಹೆಂಗವ್ವಾ” ಅಂತ ಆರಂಭಿಸಿ, “ಮೇಡಮ್ ಮಹಿಳೆಯರೂ ಇದ್ದಾರೆ. ನೀವೇನೂ ಮುಜುಗರಪಡುವ ಅಗತ್ಯವಿಲ್ಲ” ಎಂದು ಮಾತು ಮುಗಿಸುತ್ತಿದ್ದರು. ಕೊನೆಗೂ ಯಶೋಧಾ ಮೇಡಮ್‌ಗೆ ಗಂಟು ಬಿದ್ದೆ. ನಡಿಗೆಯ ಬಗ್ಗೆ ಗೊತ್ತಿಲ್ಲದಿದ್ದರೂ ಏನೇನೋ ಹೇಳಿ ಹುರಿದುಂಬಿಸಿ ಒಪ್ಪಿಸಿದೆ. ನಡಿಗೆ, ಟ್ರೆಕ್ಕಿಂಗ್ ಅಂದರೆ ಬಲು ಇಷ್ಟ ಅವರಿಗೆ. ಮಂಡಿ ನೋವಿನ ಅವರ ಕಷ್ಟ ನನಗೆ ತಿಳಿದದ್ದೇ. ಅವರ ಹಣ ಸಂದಾಯವಾಗಿ ಲಿಸ್ಟ್ನಲ್ಲಿ ಅವರ ಹೆಸರೂ ಸೇರಿದ ಮೇಲೆ ಒಂದಿಷ್ಟು ನಿರಾಳವಾಯಿತು.

ನಡಿಗೆಯ ಪಟ್ಟಿಯಲ್ಲಿ ಪುರುಷರ ಹೆಸರು ಬೆಳೆಯುತ್ತಲೇ ಇತ್ತು. ಮಹಿಳೆಯರು ಯಾರಾದರೂ ಸೇರಿದ್ದಾರಾ ಅಂತ ದಿನವೂ ಲಿಸ್ಟ್ ಚೆಕ್ ಮಾಡುವುದು, ಯಾವ ಹೆಸರೂ ಕಾಣದಾದಾಗ ಅವರು ನನ್ನನ್ನು ಬೈಯುವುದು ನಡೆದೇ ಇತ್ತು. ಅಂತು ಕೊನೆಗೆ ಮೀನಾಕ್ಷಿ ಮಹದೇವಸ್ವಾಮಿ ಮತ್ತು ಬೆಂಗಳೂರಿನ ಒಬ್ಬರ ಹೆಸರು ಸೇರಿಕೊಂಡಿತು. (ಬೆಂಗಳೂರಿನವರು ನಡಿಗೆಗೆ ಬರಲಿಲ್ಲ). ಮೇಡಮ್ ನನ್ನ ಕಂಡಾಗಲೆಲ್ಲ ‘ಏನು ವಿಜಯ, ಏನು ಮಾಡೋದು? ನಾವಿಬ್ಬರೇ ಆಗೋದ್ವಿ. ಮೀನಾಕ್ಷಿ ಅನ್ನುವವರು ಅವರ ಗಂಡನ ಜೊತೆ ಇರ‍್ತಾರೆ. ಅವರು ನಮ್ಮ ಜೊತೆ ಸೇರ‍್ತಾರೋ ಇಲ್ವೊ. ದುಡ್ಡು ಹೋದರೂ ಪರ‍್ವಾಗಿಲ್ಲ. ಹೋಗೋದು ಬೇಡ. ಶಿವಸ್ವಾಮಿಗೆ ಏನಾದರೂ ಹೇಳಿಕೊಳ್ಳೋಣ’ ಹೀಗೆ ದಿನಾ ದಿನಾ ನಮ್ಮ ಮಾತುಕತೆಯಲ್ಲಿ ಬನವಾಸಿ ನಡಿಗೆಯಿಂದ ತಪ್ಪಿಸಿಕೊಳ್ಳುವ ಆಲೋಚನೆಯೇ ದೊಡ್ಡ ಮಟ್ಟದಲ್ಲಿತ್ತು.

ಹಾವೇರಿಗೆ ರೈಲಲ್ಲಿ ಟಿಕೇಟು ಕಾದಿರಿಸಿದ್ದೂ ಆಗಿತ್ತು. ಎಲ್ಲಾ ಕ್ಯಾನ್ಸಲ್ ಮಾಡಿ ಬಿಡುವ ಎಂಬ ಮನಸ್ಸು. ಪರೀಕ್ಷೆ ಮೌಲ್ಯಮಾಪನದ ಕಾರ‍್ಯಗಳು ಮುಗಿದು ವಿರಾಮದಲ್ಲಿದ್ದೆವು. ಜೂನ್ ಐದರಂದು ಬೆಳಿಗ್ಗೆ ಯಶೋಧಾ ಮೇಡಮ್ ನಮ್ಮ ಮನೆಗೆ ಬಂದರು. ಅವರ ಕೈ ಕಾಲು ಊದಿಕೊಂಡಿತ್ತು. ಕುಟುಂಬದವರೊಂದಿಗೆ ವೈನಾಡಿಗೆ ಹೋಗುವಾಗ ಕಾರು ತಿರುವಿನಲ್ಲಿ ಪಲ್ಟಿ ಹೊಡೆದು ಹೇಗೋ ಬಚಾವಾಗಿ ಬಂದಿದ್ದರು. ಆ ಸಂಗತಿಯನ್ನು ನಿರೂಪಿಸುವಾಗ ಅವರ ಮುಖದಲ್ಲಿನ್ನೂ ಆ ಭಯ ಉಳಿದಿತ್ತು. ಅವರ ಪರಿಸ್ಥಿತಿ ನೋಡಿ ‘ವಿಶ್ರಾಂತಿ ತಗೊಳ್ಳಿ. ಯಾವ ನಡಿಗೆಯೂ ಬೇಡ. ನೆಮ್ಮದಿಯಾಗಿರಿ’ ಅಂತ ಹೇಳಿದೆ.

 

ಹೀಗೆ ಮಾತನಾಡುತ್ತಾ ಮಧ್ಯಾಹ್ನವಾಗಿತ್ತು. ಊಟ ಮಾಡುವಾಗ ಶಿವಸ್ವಾಮಿ ಏನೆಂದುಕೊಳ್ಳುತ್ತಾರೋ… ಏನು ಹೇಳೋದು? ನಾಳೆ ಒಳಗೆ ಯಾವುದನ್ನೂ ಇನ್ನೊಮ್ಮೆ ನಿಶ್ಚಯಿಸೋಣ. ಇನ್ನೂ ಒಂದು ದಿನ ಇದೆಯಲ್ಲಾ ಅಂತ ನಮ್ಮ ಮಾತು ಇದ್ದಕ್ಕಿದಂತೆ ವರಸೆ ಬದಲಾಯಿಸಲಾರಂಭಿಸಿತು. ಇಂಥ ವಿಚಾರಗಳಲ್ಲಿ ಮಹಿಳೆಯರದು ಯುಗಾಂತರದ ಮುಜುಗರ. ಗಂಡಸರ ಗುಂಪು ಗದ್ದಲದ ನಡುವೆ ಹೋಗಬಾರದೆಂದು ಬಿತ್ತಿ ಬೆಳೆದ ನಮ್ಮ ಮನಸ್ಥಿತಿಗೆ ಪರಂಪರೆಯೇ ಇದೆ. ಇಲ್ಲಿ ಬೇರೆಯಾಗಲು ಹೇಗೆ ಸಾಧ್ಯ? ಉಳಿದವರು ಹೇಗಿರುತ್ತಾರೋ ಎಂಬ ಆತಂಕವೇ ಹೆಚ್ಚಿತ್ತು. ಯಾವ ಓದು ಕೂಡ ನಮ್ಮನ್ನು ಈ ನಿಟ್ಟಿನಲ್ಲಿ ಪರಿಪೂರ್ಣವಾಗಿ ಪಳಗಿಸಲು ಸಾಧ್ಯವಿಲ್ಲದಂತೆ ರೂಢಿಗೆ ಆತುಕೊಂಡ ಜಾಯಮಾನ.

ಊಟ ಮಾಡ್ತಾ ಮಾತಾಡ್ತಾ, ನಾವು ಎಲ್ಲದಕ್ಕೂ ಎಲ್ಲಿಯವರೆಗೆ ಈ ರೀತಿ ಮುಜುಗರ ಪಡೋದು? ನಾಳೆ ರಾತ್ರಿ ರೈಲಿಗೆ ಹೊರಡೋಣ. ‘ಇಬ್ಬರು ಇದ್ದೀವಲ್ಲಾ’ ಅಂತ ಸಮಾಧಾನಿಸಿಕೊಂಡರೂ ಏನೋ ಅಳುಕು ಒಳಗೊಳಗೆ ಕಾಡುತ್ತಿತ್ತು. ‘ಸುಂಕ ತೆತ್ತಿದ್ದಕ್ಕೆ ದಂಡ ಒಪ್ಪಿಸುವಂತೆ’ ಕೊನೆಗೂ ತೊಯ್ದಾಡುತ್ತಲೇ ರೈಲು ಹತ್ತಿದ ಮೇಲೆಯೇ ನಡಿಗೆ ನಮಗೆ ಖಚಿತಗೊಂಡದ್ದು.

ಹಾವೇರಿಯಲ್ಲಿ ಸಭೆ ಇತ್ತು. ಶಿವಸ್ವಾಮಿ ಹೊರತು ಪಡಿಸಿ ಯಾರೊಬ್ಬರ ಪರಿಚಯವೂ ಇರಲಿಲ್ಲ. ಎಲ್ಲಿಯೋ ಸಿಲುಕಿಕೊಂಡು ಉಸಿರು ಬರದ ಸ್ಥಿತಿ. ಮೇಡಮ್‌ನ ಒಪ್ಪಿಸಿ ಕರೆತಂದ ನಾನು ನನ್ನ ದಿಗಿಲು ತೆರೆದುಕೊಳ್ಳುವಂತೆ ಇರಲಿಲ್ಲ. ಆ ಸಭೆಯಲ್ಲಿ ಪರಿಚಯಿಸಿಕೊಂಡ ಯಾರೊಬ್ಬರ ಹೆಸರೂ ನಮ್ಮ ಕಿವಿ ಮೇಲೆ ಬೀಳಲೇ ಇಲ್ಲ. ಇಬ್ಬರಿಗೂ ಕಸಿವಿಸಿ. ಬನವಾಸಿಗೆ ತೆರಳಲು ವ್ಯಾನ್‌ನಲ್ಲಿ ಲಗೇಜ್ ತಂದು ಇಡುವಾಗ ಅಬ್ಬೆಪಾರಿಗಳಂತೆ ಇದ್ದ ನಮ್ಮನ್ನು ನಾವೇ ಸಮಾಧಾನಿಸಿಕೊಂಡರೂ, ಒಳ ಮನಸ್ಸು ಇದು ಬೇಡವಾಗಿತ್ತು ಅಂತ ಕುಟುಕುತ್ತಲೇ ಇತ್ತು. ನಮ್ಮ ಏಕೈಕ ಪರಿಚಿತ ಶಿವಸ್ವಾಮಿ ಬೇರೊಂದು ವ್ಯಾನಲ್ಲಿ. ನಮ್ಮ ಜೊತೆ ಇದ್ದವರೆಲ್ಲ ಹಿರಿಯರು ಗಂಭೀರವಾಗಿದ್ದರು. ಮಾತೇ ಇಲ್ಲ. ‘ಈ ಹೆಣ್ಣುಮಕ್ಕಳಿಗೆ ನಡಿಗೆ ಬೇಕಿತ್ತಾ?’ ಎಂಬ ಪ್ರಶ್ನೆ ಅವರ ಮನದಲ್ಲಿ ಮೂಡುತ್ತಿರಬಹುದೆಂಬ ಗುಮಾನಿ ನಮಗೆ.

ಅಂತೂ ಬನವಾಸಿ ಬಂದ ಮೇಲೆ ಸ್ವಲ್ಪ ಜೀವ ಬಂದಿತು. ಕಾಲೇಜಿನ ಸಹೋದ್ಯೋಗಿ, ಬಹುಕಾಲದ ಮಿತ್ರರಾದ ಮೊಸಳೆ ಅಲ್ಲಿ ಸಿಕ್ಕರು. ಅದಕ್ಕಿಂತ ಖುಷಿ ಅನ್ನಿಸಿದ್ದು ಮೀನಾಕ್ಷಿಯವರನ್ನು ನೋಡಿ. ‘ಅಯ್ಯೊ! ನಾನೊಬ್ಬಳೇ ಆದೆನಲ್ಲಾ’ ಅಂತ ಪೇಚಾಡಿಕೊಂಡು, ಕರೆ ತಂದಿದ್ದ ಮಹದೇವಸ್ವಾಮಿಯವರನ್ನು ಬೈದಾಡಿಕೊಂಡು ಅವರೂ ನಮಗೆ ಕಾಯುತ್ತಿದ್ದಂತೆ ಇತ್ತು. ಆಪ್ತಗೆಳತಿ ಅನ್ನುವಂತೆ ಅವರಿಗೆ ಗಂಟುಬಿದ್ದೆವು. ‘ನೀವು, ನಮ್ಮ ಜೊತೆ ನಮ್ಮ ಕಾರಲ್ಲೇ ಬನ್ನಿ’ ಅಂತ ಅವರು ಕರೆಯುವುದನ್ನೇ ಕಾಯುತ್ತಿದ್ದೆವು. ನಡಿಗೆಯ ಕೊನೆಯ ದಿನದವರೆಗೂ ಅವರ ಕಾರಿನ ಹಿಂದಿನ ಸೀಟು ನಮ್ಮದೇ ಆಗಿತ್ತು. ಮೀನಾಕ್ಷಿ ಜೊತೆ ಸೇರಿದ್ದು ನಮ್ಮ ಬಲ ಹೆಚ್ಚಿಸಿತ್ತು. ನಾವೇನು ಕಡಿಮೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡೆವು. ಆವರೆಗೂ ಇದ್ದ ಅಳುಕನ್ನು ಜಾಡಿಸಿ, ಹೊಸ ಹುಮ್ಮಸ್ಸು ತುಂಬಿಕೊಂಡು ಗುಂಪಿನಲ್ಲಿ ಬೆರೆತುಹೋದೆವು.

ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ, ಅಲ್ಲಿನ ಕಂಬಗಳು, ನಂದಿ, ಕಲ್ಲಿನ ಮಂಟಪ, ಕಲ್ಲಿನ ಮಂಚದ ಕಲಾತ್ಮಕ ನೋಟದಲ್ಲಿ ಮಗ್ನವಾಗಿದ್ದರೂ ಪಂಪನ ಪದ್ಯಗಳ ಕಂಪಿನಲ್ಲಿ ತೇಲುತ್ತಿತ್ತು ಮನಸ್ಸು. ತೆಂಕಣ ಗಾಳಿಯ ತಂಪಿನ ಕೆರೆಯಂಗಣದಲ್ಲಿ ಸುತ್ತಣ ಜನರು ಅಲ್ಲಲ್ಲಿ ಗುಂಪುಗೂಡಿ ವನ ಭೋಜನ ನಡೆಸುತ್ತಿದ್ದರು. ಅಲ್ಲೇ ಪಕ್ಕದ ದಿಬ್ಬದಲ್ಲಿ ರಾಣಿ ಅರಮನೆಯ ಅವಶೇಷಗಳು ಹರಡಿಕೊಂಡಿದ್ದವು. ಗತಕಾಲದ ಕುರುಹುದೋರಲು ಹರಸಾಹಸಪಡುತ್ತಿದ್ದ ಅದರ ಮೇಲೆಲ್ಲಾ ಏನನ್ನೋ ಹುಡುಕಾಡುವಂತೆ ಅಡ್ಡಾಡಿದೆವು. ನೆನೆಯಲೇ ಬೇಕಾದ ಬನವಾಸಿಯನ್ನು ಕಣ್ಮನ ತುಂಬಿಕೊಂಡು ಶಿರಸಿಯ ಕಡೆ ಮುಖಮಾಡಿದೆವು.

ಸ್ತ್ರೀವಾದ, ಅದೂ ಇದೂ ಓದಿಯೋ ಗೊತ್ತಿಲ್ಲ. ಮಹಿಳೆಯರ ಬಗ್ಗೆ ಏನೂ ಹೇಳಿದರೂ ಅದರ ಒಳಗಿನ ಮರ್ಮವೇನೋ ಇದೆ ಎಂದು ಇಣುಕಿ ನೋಡುವ ಚಾಳಿ ನನ್ನದು. ಶಿರಸಿಯಲ್ಲಿ ಮಾರಿಕಾಂಭ ದೇವಾಲಯದ ಅಂಗಳದಿಂದ ಯಕ್ಷಗಾನ ನಡೆಯಬೇಕಿದ್ದ ಸಭಾಂಗಣಕ್ಕೆ ಕಾಲ್ನಡಿಗೆಯಲ್ಲಿ ತೆರಳಿದೆವು. ನಡಿಗೆಯಲ್ಲವೇ? ‘ಸಮಾಜಮುಖಿ’ಯ ಬ್ಯಾನರ್ ‌ಹಿಡಿದು ನಡೆಯಬೇಕೆಂದಾಯಿತು. ಗುಂಪಿನಲ್ಲಿ ಯಾರೋ ‘ಬ್ಯಾನರನ್ನು ಈ ಮೇಡಮ್‌ಗಳು ಹಿಡಿಯಲಿ’ ಎಂದದ್ದು ಕೇಳಿಸಿತು. ನಮಗಂತೂ ಅದು ದೊಡ್ಡ ಛಾಲೆಂಜ್ ತರಹ ಅನ್ನಿಸಿತು. ಬ್ಯಾನರ್ ಎಳೆದುಕೊಂಡು ಮುಂದೆ ಹಿಡಿದು ನಡೆದೆವು. ಸಿದ್ಧಲಿಂಗ ಪಟ್ಟಣಶೆಟ್ಟಿ, ಮಾಧವಿ ಭಂಡಾರಿ ಎಲ್ಲಾ ಸೇರಿ ಆ ತಿಂಗಳ ಸಮಾಜಮುಖಿ ಪತ್ರಿಕೆ ಬಿಡುಗಡೆ ಮಾಡಿದರು. ಸೊಗಸಾದ ಯಕ್ಷಗಾನ ಕಾರ‍್ಯಕ್ರಮ ಮುಗಿಸಿಕೊಂಡು ರಾತ್ರಿ ಯಲ್ಲಾಪುರದ ರಸ್ತೆಯ ಒಳಗೆ ಹುದುಗಿಕೊಂಡಿದ್ದ ‘ಬಕುಲಾ’ ಎಂಬ ರೆಸಾರ್ಟ್ ತಲುಪಿದೆವು.

ಜೂನ್ ೮ರಂದು ಬೆಳಿಗ್ಗೆ ಸಿದ್ಧಗೊಂಡು ಊಟದ ಮನೆಗೆ ಬರುವಷ್ಟರಲ್ಲಿ ಸದ್ದುಗದ್ದಲ ತುಂಬಿಕೊಂಡಿತ್ತು. ಹೆಂಚು ಹೊದಿಸಿದ್ದ ಪುಟ್ಟ ಪುಟ್ಟ ಕುಟೀರಗಳು, ಹೂಗಿಡಗಳು, ಊರಿನ ವಕ್ತಾರರು ನಾವೆಂದು ಸೇರಿ ಹೇಳುವಂತಿದ್ದ ಅಡಿಕೆ, ಮಾವಿನ ಮರಗಳು, ವಿವಿಧ ತರುಲತೆಗಳ ಸೊಬಗಿನೊಂದಿಗೆ ಅಲ್ಲಲ್ಲಿ ಹೊದಿಸಿದ್ದ ಹುಲ್ಲುಹಾಸು, ಅರಳಿನಿಂತ ಹೂಬನಗಳಿಂದ ‘ಬಕುಲಾ’ದ ಸುತ್ತಣ ಪರಿಸರ ಕಂಗೊಳಿಸುತ್ತಿತ್ತು. ಆ ಚಂದದ ಪರಿಸರದಲ್ಲಿ ಅಲ್ಲಲ್ಲಿ ನಿಂತು, ಹುಲ್ಲು ಹಾಸಿನ ಮೇಲೆ ಕುಳಿತು ನಮ್ಮ ಮೊಬೈಲಿನಲ್ಲಿ ಫೋಟೋ ಹಿಡಿದುಕೊಳ್ಳುತ್ತಿದ್ದೆವು.

ಕೊರಳಲ್ಲಿ ಕ್ಯಾಮೆರಾ ತಗುಲಿಸಿಕೊಂಡವರೊಬ್ಬರು ನಮ್ಮ ಬಳಿ ಬಂದು, ನಮ್ಮನ್ನು ಹೇಗೆ ಬೇಕೋ ಹಾಗೆ ನಿಲ್ಲಿಸಿ ಶಿಸ್ತಾಗಿ ಫೋಟೋ ತೆಗೆದುಕೊಟ್ಟರು. ಅವರ ಹೆಸರೇನೆಂದು ಗೊತ್ತಿರಲಿಲ್ಲ. ಬಹಳ ಕಾಲದ ಸ್ನೇಹಿತರಂತೆ ಆಪ್ತವಾಗಿ ಮಾತಾಡುತ್ತಾ, ನಾವು ಇಚ್ಛೆಪಟ್ಟಷ್ಟೂ ಫೋಟೋ ತೆಗೆದುಕೊಟ್ಟ ಆ ವ್ಯಕ್ತಿ ಹರಿನಾಥಬಾಬು ಆಗಿದ್ದರು. ‘ತಿಂಗಳು’, ‘ಗೌರಿ ಲಂಕೇಶ್’, ‘ಹೊಸತು’ ಪತ್ರಿಕೆಗಳಲ್ಲಿ ಹರಿನಾಥಬಾಬು ಅವರ ಕವಿತೆಯನ್ನು ಓದಿದ್ದೆ. ಅದೇ ಹರಿನಾಥಬಾಬು ಇವರೆಂದು ತಿಳಿದಿರಲಿಲ್ಲ. ಇಷ್ಟು ಸರಳವಾಗಿ ನಮ್ಮೊಡನೆ ಒಡನಾಡಿದ್ದು, ಅವರ ಪರಿಚಯವಾಗಿದ್ದು ಖುಷಿ ಎನ್ನಿಸಿತ್ತು. ಅವರು ಅಷ್ಟು ಬೇಗ ಆತ್ಮೀಯರಾಗಲು ಅವರ ಛಾಯಾಗ್ರಹಣದ ಆಸಕ್ತಿಯೂ ಕಾರಣವಾಗಿರಬಹುದು.

ಹಿಂದಿನ ದಿನ ಯಕ್ಷಗಾನ ನಡೀತಾ ಇದ್ದಾಗ ಜಾಜಿ ಮಾತನಾಡಿಸಿದ್ದರು. ನಾನು ಜಾಜಿ ದೇವೇಂದ್ರಪ್ಪ ಅಂತ ಅಂದಾಗ, ಅವರ ಲೇಖನಗಳನ್ನು ಓದಿದ್ದ ನನಗೆ ನಿಜಕ್ಕೂ ಆಶ್ಚರ್ಯ. ಓಹೋ ನಾನು ಓದಿನ ಮೂಲಕ ತಿಳಿದಿದ್ದ ಜಾಜಿ ಮಹಿಳೆಯಲ್ಲ! ಎಂಬುದು ಖಾತ್ರಿಯಾಯಿತು. ಜಾಜಿ ಎಂಬುದು ಅವರ ಮನೆತನದ ಹೆಸರೆಂದು ಮನದಟ್ಟುಮಾಡಿದರು.

ಆ ದಿನ ಉಪಾಹಾರದ ನಂತರ ಶಿರಸಿಯಿಂದ ಸ್ವಲ್ಪ ದೂರದಲ್ಲಿದ್ದ ಭೀಮವಾರೆ ಬೆಟ್ಟಕ್ಕೆ ಚಾರಣ ಹೋಗುವುದಿತ್ತು. ನಾವು ಬಹುತೇಕ ಬೆಟ್ಟದ ಎದೆಮಟ್ಟದವರೆಗೂ ವಾಹನದಲ್ಲಿ ಏರಿದ್ದೆವು. ಉಳಿದ ಅಂಚನ್ನು ಮುಟ್ಟಲು ಮಾತ್ರ ನಡಿಗೆ. ಬೆಟ್ಟದ ತುದಿಯಿಂದ ದೂರದ ಕಣಿವೆಯಲ್ಲಿ ಅಘನಾಶಿನಿ ಮಿಂಚುಕೋಲಿನಂತೆ ಹೊರಳುತ್ತಿರುವುದು ಕಾಣುತ್ತಿತ್ತು. ಅಕ್ಷರಶಃ ಭೂದೇವಿಯ ಮೂಗಿನ ತುದಿಯಲ್ಲಿ ನಿಂತಂತೆ ನಿಂತಿದ್ದೆವು. ಎತ್ತ ತಿರುಗಿ ನೋಡಿದರೂ ತುಂಬಿ ತುಳುಕಾಡುತ್ತಿದ್ದ ಹಸಿರು ಬೆಟ್ಟ ಸಾಲುಗಳು. ಕೊಂಚ ಯಾಮಾರಿದರೂ ಸುತ್ತುವರಿದಿದ್ದ ಕಂದರದೊಳಗೆ ಸಲೀಸಾಗಿ ಬೀಳಬಹುದಿತ್ತು. ನಿಸರ್ಗದ ಭವ್ಯತೆ ಬೆರಗು ಹುಟ್ಟಿಸುವಂತಿತ್ತು. ಬೆಟ್ಟದ ಇಕ್ಕಟ್ಟಾದ ತುದಿಯಲ್ಲಿ ಎಲ್ಲರನ್ನೂ ನಿಲ್ಲಿಸಿ, ಕೂರಿಸಿ ಲೋಕೇಶ್ ಮೊಸಳೆ ಗುಂಪು ಫೋಟೋ ಸೆರೆಹಿಡಿದರು. ಮೊಸಳೆ, ಕಲೀಮುಲ್ಲಾ, ನೂರ್‌ ಅಹಮ್ಮದ್, ಹರಿನಾಥ ಬಾಬು, ಮಹದೇವಸ್ವಾಮಿ ಹೀಗೆ ಕ್ಯಾಮರ ಆನಿಸಿಕೊಂಡವರ ಒಂದು ಪಡೆಯೇ ನಮ್ಮೊಂದಿಗೆ ಇತ್ತು.

ಮಳೆಗಾಲವಾಗಿದ್ದರೂ ಮಳೆಯ ಸುಳಿವಿರಲಿಲ್ಲ. ಬಿಸಿಲಿಗೆ ಬೆವರು ಸುರಿಯುತ್ತಿತ್ತು. ಕೈಯ್ಯಲ್ಲಿದ್ದ ನೀರು ಖಾಲಿಯಾಗಿತ್ತು. ಬಳ್ಳಾರಿಯವರು ತಂದಿಟ್ಟುಕೊಂಡು ಅಲ್ಲಿ ಹಂಚಿದ ಮಾವಿನಹಣ್ಣು ಆಯಾಸವನ್ನು ಸ್ವಲ್ಪ ನೀಗಿಸಿತ್ತು. ಕೆಳಗಿಳಿದು ಸಮಾಜಮುಖಿ ಬಳಗಕ್ಕೆ ಪರಿಚಿತರಾಗಿದ್ದವರೊಬ್ಬರ ಮನೆಗೆ ಬಂದು ರುಚಿಯಾದ ಹಲಸಿನ ಹಣ್ಣು ತಿಂದದ್ದು ಒಂದು ಸವಿಯಾದ ನೆನಪು. ಆ ಮನೆಯ ಅಂಗಳದಲ್ಲಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆದು ಹಳ್ಳದ ನಡಿಗೆಗೆ ಅಣಿಯಾದೆವು.

ಕಾಡು ಕಣಿವೆಯೊಳಗೆ ಅವಿತು ಕುಳಿತಂತೆ ಇದ್ದ ಆ ಹಳ್ಳದ ನಡಿಗೆ ಒಂದು ಅಪೂರ್ವ ಅನುಭವ. ಬಿಟ್ಟು ಬಿಟ್ಟು ಅಳುವ ಮಗುವಿನ ಕಣ್ಣೀರಂತೆ ತಣ್ಣನೆ ಹರಿಯುತ್ತಿತ್ತು ಆ ಹಳ್ಳ. ಬಹುಶಃ ಅದು ಅಘನಾಶಿನಿಗೆ ಸೇರುವ ತೊರೆ ಇರಬೇಕು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸರಾಗ ನೀರು. ಆ ಹಳ್ಳಕ್ಕೆ ಕಾವಲಿಟ್ಟಂತೆ ಇದ್ದ ಆಚೀಚೆ ದಡದಲ್ಲಿ ದಟ್ಟ ಮರಗಳ ಕಾಡು. ಮಣ್ಣಿನ ಬಣ್ಣ ಕಾಣದಂತೆ ಉದುರಿಬಿದ್ದ ರಾಶಿರಾಶಿ ತರಗೆಲೆಗಳು. ಮರದ ಬೊಡ್ಡೆ ಹೊಡೆದು ಹೊರಬಂದು ಮುಖ ತೋರುತ್ತಿದ್ದ ವಿವಿಧ ಗಾತ್ರ, ವಿನ್ಯಾಸದ ಬೇರುಗಳು. ಬಿಸಿಲಿಗೆ ಚಪ್ಪರವಾಗಿದ್ದ ಸುತ್ತಲಿನ ಮರದ ರೆಂಬೆಗಳು. ಬೇಸಿಗೆಯಲ್ಲೂ ನೀರಿನ ಒರತೆ ಬತ್ತದಂತೆ ತಡೆಯುವ ಕಟ್ಟಾಳುಗಳು ನಾವೆಂಬಂತೆ ಅಲ್ಲಲ್ಲಿ ವಿಧ ವಿಧ ಭಂಗಿಯಲ್ಲಿ, ಚಿತ್ರ ವಿಚಿತ್ರ ರೂಪದಲ್ಲಿ ಹಳ್ಳದ ಸುತ್ತ ಮುತ್ತೆಲ್ಲಾ ಹರಡಿಕೊಂಡಿದ್ದ ನಾನಾ ನಮೂನೆಯ ಬಳ್ಳಿಗಳು ಹೀಗೆ ಸಮೃದ್ಧಿಗೊಂಡಿದ್ದ ಆ ಹಳ್ಳದ ಹಾದಿ ಕಾಯಿಸಿ ತಣಿಸಿದ ಹಾಲಿನಂತೆ ತಂಪಾಗಿತ್ತು.

ಭೀಮವಾರೆ ಬೆಟ್ಟದ ಬಿಸಿಲಿನ ಝಳಕ್ಕೆ ಹೌಹಾರಿದ್ದ ನಮಗಾಗಿ ಮುಡಿಪಿಟ್ಟ ಶೀತಲ ಹಾದಿ ಅದಾಗಿತ್ತು. ಆ ಹಳ್ಳದ ಒಳಗೆ ಹೊರಗೆ, ಸುತ್ತಮುತ್ತಲೆಲ್ಲಾ ಇಂಬಳಗಳದೇ ಸಾಮ್ರಾಜ್ಯ, ಮೊದಮೊದಲು ಅವು ಎಲ್ಲಿ ಮೈಕೈಗೆ ಹತ್ತಿಬಿಡುತ್ತವೋ ಎಂದು ದಿಗಿಲುಗೊಂಡೆವು. ಹತ್ತಿದ್ದ ಒಂದೆರಡು ಇಂಬಳಗಳನ್ನು ಕಿತ್ತು ಎಸೆಯುವವರೆಗಷ್ಟೇ ಅವುಗಳ ಗೌಜಿ ಗದ್ದಲ. ಆ ಮೇಲೆ ಅದೇ ಒಂದು ವಿನೋದವಾಯಿತು. ಆ ಕಣಿವೆಯ ಹಾದಿಯಲ್ಲಿ ನಡೆಯುತ್ತಾ, ನೆಗೆಯುತ್ತಾ, ಜಾರುತ್ತಾ ಸಾಗುತ್ತಿದ್ದ ನಮ್ಮ ಕೈಗೆ ಒಂದೊಂದು ಕೋಲು ಕೊಟ್ಟರು. ಅದರ ಅಗತ್ಯ ಕಾಣಲಿಲ್ಲವಾದರೂ, ಅದು ನಮ್ಮ ಅಳತೆಗೆ ಮೀರಿದ್ದಾದರೂ ಒಂದಷ್ಟು ದೂರ ಅದನ್ನು ಹಿಡಿದು ನಡೆದೆವು. ನಾವು ನಡೆಯುವ ರೀತಿ ಗಬ್ಬೂರರಿಗೆ ತಮಾಷೆ ಅನ್ನಿಸಿರಬೇಕು. ಗಿಡಮರ ಹೂವು ಕಾಯಿ ಎಲ್ಲವನ್ನೂ ಮುಟ್ಟಿ ಮಾತಾಡಿಸಿ ತಮ್ಮ ಭಾವಕೋಶದ ಜೋಳಿಗೆ ತುಂಬಿಕೊಳ್ಳುತ್ತಾ, ಅವುಗಳ ಚಂದವನ್ನು ಕ್ಯಾಮರದ ಮಿಂಚುಗಣ್ಣೊಳಗೆ ಬಂಧಿಸುತ್ತಾ ಬರುತ್ತಿದ್ದ ಬಾಬುವನ್ನು ಕರೆದು “ಅಣ್ಣಾ ಪೋಟೋ ತೆಗೆಯಣ್ಣಾ, ಇಂಥ ಸೀನ್ ಸಿಗಲ್ಲ” ಅಂತ ನಮ್ಮನ್ನು ರೇಗಿಸುತ್ತಾ ಬಾಬುವಿನ ಕ್ಯಾಮರಕ್ಕೆ ಮತ್ತಷ್ಟು ಕೆಲಸ ಕೊಟ್ಟರು.

ಆ ಪರಿಸರ ಕಾಳಿಂಗ ಸರ್ಪದ ಆವಾಸಸ್ಥಾನ ಅಂತ ಭಯವೆಬ್ಬಿಸುವ ಪ್ರಕರಣವೂ ನಡೆಯಿತು. ದಟ್ಟಗೆ ಹಾಸಿಕೊಂಡಿದ್ದ ತರಗೆಲೆಗಳ ಅಡಿಯಲ್ಲಿ ಹಾವುಗಳು, ಚೇಳುಗಳು ಬೆಚ್ಚಗೆ ಮಲಗಿದ್ದಿರಬಹುದು. ಪಶ್ಚಿಮಘಟ್ಟದ ಆ ಕಾಡು ಅಪಾರವಾದ ಜೀವ ವೈವಿಧ್ಯವನ್ನು ಮಡಿಲಲ್ಲಿ ಇರಿಸಿಕೊಂಡಿತ್ತು. ಆವರೆಗೂ ನೋಡಿರದ ಸಸ್ಯ ಪ್ರಬೇಧಗಳು, ಹುಳು ಹುಪ್ಪಟೆಗಳನ್ನು ಅಲ್ಲಿ ಕಂಡಿದ್ದೆವು. ಆದರೆ ರಮಣೀಯ ನಿಸರ್ಗದ ಮಡಿಲ ಹಕ್ಕಿಗಳಂತೆ ಸ್ವಚ್ಛಂದವಾಗಿ ವಿಹರಿಸುವ ನಮ್ಮ ಉತ್ಸಾಹದ ಮುಂದೆ ಯಾವ ಭಯವೂ ಲೆಕ್ಕಕ್ಕೆ ಬಂದಿರಲಿಲ್ಲ. ಕಾಳಿಂಗಸರ್ಪಗಳು ತಲೆದೂಗುವಂತೆ ಶಿವಸ್ವಾಮಿಯ ಕಂಠಸಿರಿ ಅಲ್ಲಿ ಆಗಾಗ ಮೊಳಗುತ್ತಿತ್ತು. ಅಲ್ಲಲ್ಲಿ ಕಳಚಿ ಬೋರಲಾಗಿ ಬಿದ್ದ ಮರದ ಕಾಂಡಗಳು ನಮ್ಮ ಆಸನಗಳಾದವು. ಆ ಕೊಳ್ಳದಲ್ಲಿ ಬಿದ್ದಿದ್ದ ಮರದ ಗೆಲ್ಲುಗಳನ್ನು ಹಿಡಿದು ಜಾಜಿ, ಗಬ್ಬೂರರು ಕುಸ್ತಿಕಾಳಗವನ್ನು ಮೆರೆದರು. ನಾಟಕ ಪ್ರಹಸನಗಳ ತುಣುಕುಗಳು ಭಾವಾಭಿನಯದೊಂದಿಗೆ ನಲಿದಾಡಿದವು. ನಲವತ್ತು-ಐವತ್ತರ ವಯಸ್ಸಿನ ನಮಗೆ ಮತ್ತೆ ಬಾಲ್ಯ ಮರುಕಳಿಸಿದ ಅನುಭವವನ್ನು ಆ ಪರಿಸರ ಕಟ್ಟಿಕೊಟ್ಟಿತ್ತು.

ಮಳೆಗಾಲದಲ್ಲಿ ತನ್ನೆಲ್ಲಾ ಮೊರೆತದೊಂದಿಗೆ ಅಲೆದಲೆದು ಸಾಕಾಗಿ ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಂತೆ ಮೌನ ಹೊದ್ದು ಮಲಗಿದ್ದ ಆ ಹಳ್ಳದಲ್ಲಿ ಆ ದಿನ ನಮ್ಮದೇ ಕಲರವ. ಅಲ್ಲಿಯ ಮೌನವನ್ನು ಆಲಿಸುತ್ತಾ, ಏನನ್ನೋ ಹುಡುಕುತ್ತಾ, ಪ್ರಕೃತಿಯೊಂದಿಗೆ ಸಂವಾದಿಸುತ್ತ ಗಾಂಭೀರ‍್ಯದಲ್ಲಿ ನಡೆದ ನಮಗಿಂತ ಹಿರಿಯರಾದ ವಡ್ಡು ಸರ್, ಜಯರಾಮ ಸರ್, ಜಯಚಂದ್ರಗುಪ್ತ ಸರ್ ಮುಂತಾದವರ ಪಡೆ ನಮ್ಮ ಮುಂದಿತ್ತು. ಎಲ್ಲವನ್ನು ಮುಟ್ಟಿ ತಟ್ಟಿ ಕೀಟಲೆಯಾಡಿ ಗದ್ದಲವೆಬ್ಬಿಸುತ್ತಾ ಸಾಗಿದವರಲ್ಲಿ ಜಾಜಿ-ಗಬ್ಬೂರರೇ ಮೊದಲಿಗರು. ಪುಟ್ಟ ಮಕ್ಕಳ ಮುಗ್ಧತೆ ಲವಲವಿಕೆ ಆಪ್ತತೆ ಎಲ್ಲರನ್ನು ಆವರಿಸಿಕೊಂಡಿತ್ತು. ಗುಂಪಿನಲ್ಲಿ ಒಂದಾಗಿ ಹೆಜ್ಜೆ ಹಾಕಲು ಅವರೆಲ್ಲರೊಳಗಿದ್ದ ಸಹಜ ಸಹೃದಯತ್ವವೇ ಕಾರಣ. ನಾವಿಬ್ಬರು ಮಹಿಳೆಯರು ಜೊತೆಗಿದ್ದೆವೆಂಬ ಮುಜುಗರ ಅವರಿಗೂ ಇರಲಿಲ್ಲ. ನಮಗೂ ಅದು ಕಾಡಲಿಲ್ಲ. ನಮ್ಮ ಇಹ-ಪರಗಳನ್ನು ಮರೆತ ಸಮಯವದು. ಅಲ್ಲಿ ಚೇಷ್ಟೆಗಳಿಗೇನೂ ಕೊರತೆ ಇರಲಿಲ್ಲ. ಮನಸಾರೆ ನಕ್ಕು ನಲಿದ ಸಂಭ್ರಮದ ನಡೆಯಾಗಿತ್ತು. ನಮಗೆ ಹೇಗೆ ಬೇಕೋ ಹಾಗೆ ನಾವಿದ್ದೆವು. ಅವರುಗಳೂ ಅಷ್ಟೇ. ಅತ್ಯಂತ ಆತ್ಮೀಯತೆಯಿಂದ ನಮ್ಮ ಜನ್ಮಾಂತರದ ಬಂಧುಗಳೆಂಬಂತೆ ನಮ್ಮ ಜೊತೆ ನಡೆದ ಮಹೇಶ, ನಾರೀನಾಳ್, ಮಂಜುನಾಥ, ಮೌನೇಶ್, ಜಾಜಿ, ಗಬ್ಬೂರು, ಶಿವಸ್ವಾಮಿ, ಬಾಬು ಮನುಷ್ಯ ಸಹಜ ಬಾಂಧವ್ಯದ ಹೊಸಲೋಕವೊಂದನ್ನು ಕಾಣಿಸಿದ್ದರು.

ಆ ದಿನ ರಾತ್ರಿ ಬಕುಲಾದಲ್ಲಿ ಸಿದ್ಧಿ ಸಮುದಾಯದವರು ಪ್ರಸ್ತುತ ಪಡಿಸಿದ ಗುಮ್ಮಟೆ ನೃತ್ಯದ ಸೊಬಗು ಮರೆಯ¯ಸಾಧ್ಯ. ರಾತ್ರಿ ವಿಧವಿಧ ಭಕ್ಷ್ಯಗಳ ಅಪ್ಪೆ ಹುಳಿ ತರಕಾರಿ ಅಡಿಗೆ ಎಷ್ಟೇ ರುಚಿಕಟ್ಟಾಗಿದ್ದರೂ ಕೆಲವರಿಗೆ ನಾನ್‌ವೆಜ್ ಇಲ್ಲದೆ ಸಪ್ಪೆ ಎನ್ನಿಸಿತು. ಆ ದಿನ ಊಟ ಮುಗಿಸಿ ತೆರೆದ ಬಯಲ ಕಲ್ಲು ಬೆಂಚಿನಲ್ಲಿ ಕುಳಿತು ಶಿವಸ್ವಾಮಿಯವರ ಅವ್ಯಾಹತ ಗಾಯನ ಆಲಿಸಿದ್ದು ಅವಿಸ್ಮರಣೀಯ ನೆನಪು. ಗಾನರಾಣಿಯನ್ನು ಅವಾಹಿಸಿಕೊಂಡAತೆ ರಾತ್ರಿ ೧೧ ಗಂಟೆಯಿಂದ ಎರಡು ಗಂಟೆಯವರೆಗೂ ನಿರಂತರವಾಗಿ ಹಾಡಿದ್ದರು. ಕಾಡಿನ, ಕತ್ತಲೆಯ ನೀರವ ಮೌನದಲ್ಲಿ ಒಂದಾದ ಮೇಲೊಂದರಂತೆ ಹಾಡುಗಳ ಮೊರೆತ. ಅವರ ಸ್ಫೂರ್ತಿಗೆ, ಶಕ್ತಿಗೆ, ಹಾಡಿಗೆ ತಲೆದೂಗುತ್ತಾ ಬೆಳಿಗ್ಗಿನಿಂದ ಓಡಾಡಿದ ಆಯಾಸವನ್ನೂ ನಿದ್ದೆಯನ್ನೂ ಮರೆತಂತೆ ಕುಳಿತಿದ್ದೆವು.

ಮರುದಿನ ನಡಿಗೆಯ ಕೊನೆಯದಿನ. ಬೆಳಗ್ಗೆ ಆಘನಾಶಿನಿಯ ಉಗಮಸ್ಥಾನ ಶಂಕರಹೊಂಡವನ್ನು ವೀಕ್ಷಿಸಿದೆವು. ಅದನ್ನು ಆಪಾರ ಕಾಳಜಿಯಿಂದ ಸ್ವಚ್ಛವಾಗಿ ಸಂರಕ್ಷಿಸಿದ ಶಿರಸಿಯ ಜನರ ಪ್ರಜ್ಞಾವಂತಿಕೆ ಅನುಕರಣೀಯವಾದುದು. ಮುಂದೆ ಸಿದ್ಧಿ ಸಮುದಾಯದ ವಸತಿ ಸಮುಚ್ಛಯ ಮತ್ತು ಮಂಚಿನಕೊಪ್ಪಲು ಗೌಳಿಗರ ಕಾಲೋನಿಗೆ ಭೇಟಿ ನೀಡಿ, ಅವರ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡದ್ದು ಒಂದು ವಿಶೇಷ ಅನುಭವ. ಬಡತನ, ಮೌಢ್ಯ ತುಂಬಿಕೊಂಡಿದ್ದರೂ ತಮ್ಮ ವಾಸಸ್ಥಳವನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು ಅವರು. ಗೌಳಿಗರ ಕಾಲೋನಿಯಲ್ಲಿ ಗೃಹಪ್ರವೇಶದ ಆತಿಥ್ಯವನ್ನೂ ಪಡೆದೆವು. ಶಾಲೆಬಿಡಿಸಿ, ಹರಕೆಗೆ ಬಿಟ್ಟು ಜಡೆ ಬೆಳೆಸಿಕೊಂಡಿದ್ದ ಎಳೆಯ ಬಾಲೆಯ ತಾಯಿ ಮತ್ತು ಸಂಬಂಧಿಕರನ್ನು ಕೂರಿಸಿಕೊಂಡು ಉಪದೇಶ ಮಾಡಿದ್ದೂ ಆಯಿತು. ಕೊನೆಗೂ ಅವರಿಂದ ಪ್ರಮಾಣ ಮಾಡಿಸಿಕೊಂಡು ಆ ಮಗುವಿನ ಜಟೆ ತೆಗೆಸಿ ಶಾಲೆಗೆ ಕಳಿಸಲು ಒಪ್ಪಿಸಿದ್ದಾಯಿತು. ಅದೊಂದು ಆ ಕ್ಷಣದ ಸಮಾಧಾನ. ಈಗ ಆ ಮಗುವಿನ ಸ್ಥಿತಿ ಏನಾಗಿದೆಯೋ ಅರಿಯದ ಸಂಕಟ.

ಮುಂಡಗೋಡಿನ ಬುದ್ಧವಿಹಾರಗಳ ಒಳಹೊಕ್ಕು ನೋಡಿದೆವು. ಅಷ್ಟು ವೈಭೋಗದ ಬೌದ್ಧ ಮಂದಿರಗಳಲ್ಲಿ ನಾವು (ಮಹಿಳೆಯರು) ವಾಶ್‌ರೂಮಿಗಾಗಿ ಹುಡುಕಾಡಿದ್ದೇ ಬಂತು. ಕೊನೆಗೂ ಅದು ಕಣ್ಣಿಗೆ ಬೀಳಲಿಲ್ಲ. ವಿಸ್ತಾರದ ಪಾರ್ಕ್, ವಿಶಾಲ ಸಭಾಂಗಣ, ಗಜಗಾತ್ರದ ಕಂಬ, ಊರಗಲದ ಮೆಟ್ಟಿಲು ಎಲ್ಲಾ ಇದ್ದು ಪ್ರವಾಸಿಗರ ಅನುಕೂಲಕ್ಕಾದರೂ ವಾಶ್‌ರೂಮ್‌ಗಳ ಅಗತ್ಯದ ಅರಿವಿನ ಪ್ರಜ್ಞೆ ಇಲ್ಲದಿರುವುದು ವಿಪರ್ಯಾಸ. ಮುಂಡಗೋಡಿನಿಂದ ಹಾವೇರಿಗೆ ಬರುವ ದಾರಿಯಲ್ಲಿ ಬಾಡದ ಕನಕದಾಸರ ಅರಮನೆಯೊಳಗೆ ಕಾಲಿಟ್ಟೆವು.

ಕನಕದಾಸರ ಪ್ರತಿಮೆಯ ಮುಂದೆ ನಿಂತು ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎಂದು ಶಿವಸ್ವಾಮಿ ತನ್ಮಯರಾಗಿ ಹಾಡಿದ ಹಾಡು ಆ ಅರಮನೆಯ ಉಪ್ಪರಿಗೆಯಲೆಲ್ಲಾ ಮಾರ್ದನಿಸುತ್ತಿತ್ತು. ಹಾಡಿನ ಇಂಪಿನೊಂದಿಗೆ ಟೆರೇಸಿನಲ್ಲಿ ನಿಂತು ಸೂರ್ಯಾಸ್ತದ ಮೋಹಕ ದೃಶ್ಯವನ್ನು ಮನತುಂಬಿಕೊಂಡೆವು.

ಶಿವಸ್ವಾಮಿಯ ಹಾಡು, ಮಾತು, ಅವರ ಮಾತಿಗೆ ಜಾಜಿ, ಗಬ್ಬೂರರ ಪ್ರತಿಮಾತುಗಳು, ಬಿಡಲಾರೆ ನಿನ್ನ ಎನ್ನುವಂತೆ ಕ್ಯಾಮರಾದ ಕಣ್ಣಲ್ಲೇ ಕಣ್ಣಾಗಿದ್ದ ಬಾಬು, ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನಡೆಸುತ್ತಿದ್ದ ಚಂದ್ರಕಾಂತ ವಡ್ಡು ಅವರು-ಇವರೆಲ್ಲರ ಜೊತೆ ನಾವಿಬ್ಬರು. ಒಟ್ಟಾರೆ ಇಡೀ ದಿನ ಕಳೆದದ್ದೇ ತಿಳಿಯಲಿಲ್ಲ. ಗುಂಪಿನಲ್ಲಿ ಅತಿಹೆಚ್ಚು ಕೀಟಲೆ ಮಾಡುತ್ತಿದ್ದುದು ಜಾಜಿ, ಜಾಜಿಯ ಕೀಟಲೆಗಳನ್ನು ಜಗಜ್ಜಾಹೀರು ಮಾಡುತ್ತಿದ್ದವರು ಗಬ್ಬೂರರು. ಆ ಕೀಟಲೆಗಳಿಗೆಲ್ಲ ಚೌಕಟ್ಟು ಹಾಕಿ ಚಂದ ಮಾಡುತ್ತಿದ್ದುದು ಬಾಬು. ಮಹೇಶ್ ಮತ್ತು ನಾರಿನಾಳರು ನಮ್ಮ ಜೊತೆ ಇದ್ದಿದ್ದೇ ಗೊತ್ತಾಗಲಿಲ್ಲ.

ಸಂಜೆ ಹಾವೇರಿ ಅತಿಥಿಗೃಹದಲ್ಲಿ ಎಲ್ಲರೂ ಊರಿಗೆ ತೆರಳುವ ಗಡಿಬಿಡಿಯಲ್ಲಿದ್ದೆವು. ಮನಸ್ಸಿನಲ್ಲಿ ನಡಿಗೆಯದೇ ಗುಂಗು. ಮೂರು ದಿನದ ನಡಿಗೆ ಮುಗಿದೇ ಹೋಯಿತಲ್ಲ ಎಂಬ ಬೇಸರ. ನಡಿಗೆಗೆ ತೆರಳಲು ಮೀನ ಮೇಷ ಎಣಿಸುತ್ತಿದ್ದ ನನಗೆ ಯಾವ ಧ್ಯಾನದಿಂದಲೂ ಸಿಗದ ಪ್ರಶಾಂತತೆ ದಕ್ಕಿದ ಅನುಭವ. ಮೂರುದಿನ ಸಮಾಜಮುಖಿ ಬಳಗದ ಸಹೃದಯರ ಜೊತೆ ಬೆರೆತು, ನಮ್ಮನ್ನು ಮರೆತು ಹಕ್ಕಿಗಳಂತೆ ವಿಹರಿಸಿ ಹಗುರಾಗಿದ್ದೆವು. ಅಪರಿಚಿತರಾಗಿ ಕಂಡವರೆಲ್ಲ ಆಪ್ತ ಬಂಧುಗಳಾದರು. ನಡಿಗೆಯ ಮೂರುದಿನಗಳಲ್ಲಿ ತುಂಬಿದ ಕೊಡದಂತೆ ಇದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಡ್ಡು ಸರ್‌ಗೆ ಧನ್ಯವಾದ ಹೇಳಿ ಹಾವೇರಿಯಿಂದ ಹೊರಟೆವು.

‍ಲೇಖಕರು avadhi

22 July, 2020

1 Comment

  1. T S SHRAVANA KUMARI

    ತುಂಬಾ ದೀರ್ಘವಾದ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading