ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕೇ ಬದುಕಲು ಕಾರಣವಾಗಿರಬೇಕು – ನಳಿನ

– ನಳಿನ ಡಿ

ಶತ ಶತಮಾನಗಳು ಕಳೆದರೂ, ನಾಗರೀಕತೆಯ ಡೌಲಿನೊಳಗೆ ನಾವು ಏನೇನೋ ಹಣೆಪಟ್ಟಿ ಎಳೆದುಕೊಂಡರೂ, ಮೂಲಭೂತ ಅವಶ್ಯಕತೆಗಳಾದ ನೀರು, ಗಾಳಿ, ಆಹಾರದಂತೆ ಎಲ್ಲರಿಗೂ ಬೇಕಾದರೆ, ಈ ಬದುಕುವುದು ಮಾತ್ರ ಅವರವರ ಪಾಲಿಗೆ ಬಿಟ್ಟದ್ದೇ ಆಗಿದೆ. ಬದುಕಿದರೆ ತಾನೇ ಎಲ್ಲಾ ಅವಶ್ಯಕತೆಗಳನ್ನು ಓರ್ವ ವ್ಯಕ್ತಿ ಪೂರೈಸಿಕೊಳ್ಳಬಲ್ಲ. ಆದರೂ ಬದುಕಿನ ಮೂಲಭೂತ ಅವಶ್ಯಕತೆ ಏನೆಂದರೆ ಜೀವದೊಳು ಮುಂದುವರೆಯುವುದು’ ಎಂದು ಯಾರೂ ಸಹ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಬೇಕಾಗಿಲ್ಲ. ಮನುಷ್ಯ ಸಂಘಜೀವಿ, ಆತನ ಭಯ, ಚಡಪಡಿಕೆಗಳಿಗೆಲ್ಲಾ ಸ್ನೇಹ, ಸಮೂಹ ಬೇಕಾಗಿದೆ. ಆದರೆ ಇವತ್ತಿಗೆ ಬೆಳೆದಿರುವ ಮಾನವನವ ವ್ಯಾಪ್ತಿಯಲ್ಲಿ ಆತ ಏನನ್ನು ತನ್ನೊಳಗೊಳಗೆ ಆಲಕ್ಷಿಸುತ್ತಾನೆಂದರೆ, ಈ ’ಬದುಕುವ ಪರಿ’ಯನ್ನು. ಜೀವದೊಳು ಮುಂದುವರೆಯುವುದಕ್ಕೆ ಅಗತ್ಯವಾದ ಸ್ಥಿತ್ಯಂತಗಳನ್ನು ಯಾರೂ ಒದಗಿಸುವುದಿಲ್ಲ, ಅಥವಾ ಸಮಾಜ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಕ್ಕೆ ಅಧಿಕೃತವಾಗಿ ಆಸಕ್ತಿ ವಹಿಸುವುದು ಕಂಡುಬಂದಿಲ್ಲ.

ಇತರರ ಬದುಕಿನ ಹೋರಾಟ ಮತ್ತೂಬ್ಬರಿಗೆ ಉದಾಹರಣೆ ಅಥವಾ ಮಾದರಿಯಾಗಿ ಕಾಣದೇ ಹೋಗುವುದು ನಮ್ಮ ಸಮೂಹ ಜೀವದೊಡನೆ ಮುಂದುವರೆಯುವ ಪ್ರಕ್ರಿಯೆಯಲ್ಲಿ ಇರಿಸಿಕೊಂಡಿರುವ ಸಡಿಲತೆಯನ್ನು ಸ್ಪಷ್ಟಪಡಿಸುತ್ತದೆ. ಒಂದು ಕುಟುಂಬದಲ್ಲಿ ಅತಿಹೆಚ್ಚು ಜೀವದ ತುಡಿತಕ್ಕೆ ಒಳಗಾಗಿರುವವಳೆಂದರೆ ಹೆಣ್ಣು, ಅದು ಯಾವುದೇ ಪಾತ್ರದಲ್ಲಾಗಿರಬಹುದು. ಗಂಡನಿಗಾಗಿ, ಮಕ್ಕಳಿಗಾಗಿ, ಮುಪ್ಪಿನವರಿಗಾಗಿ ಹೀಗೆ ಆಕೆ ತುಡಿಯಲೇಬೇಕಾದವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದು ಸಹಜ ಕೂಡ. ಹೀಗೆ ತುಡಿಯುವ ಲೆಕ್ಕಾಚಾರಗಳೆಲ್ಲದರ ನಡುವೆ, ಅದು ಯಾವ ಪಾತ್ರ ಎಂಬುದು ಅತ್ಯಂತ ಪ್ರಧಾನ ವಿಷಯ, ಏಕೆಂದರೆ ಹೆಣ್ಣು ಬಳ್ಳಿಯಂತೆ ಆಸರೆಯಾಗಿ ಬೆಳೆದರೂ, ಅಂಟಿಕೊಂಡ ಜೀವಕ್ಕೆ ಬೇಕಾದ ನೈತಿಕ, ಸಾತ್ವಿಕ ಶಕ್ತಿಯನ್ನು ತುಂಬಬಲ್ಲ ಅಮೃತವರ್ಶಿಣಿ. ಅದು ಯಾವ ಕಾರ್ಯಕ್ಕೆ ಎಂಬುದು ಇಲ್ಲಿ ಮುಖ್ಯವಲ್ಲ. ಏಕೆಂದರೆ, ಉದ್ದೇಶಗಳು ಎಷ್ಟು ಒಳ್ಳೆಯದ್ದೋ ಕೆಟ್ಟದ್ದೋ, ಆದರೆ ಗುರಿಯನ್ನು ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ. ಪುರುಷನ ಬೆನ್ನ ಹಿಂದೆ ಇರುವ ಸ್ತ್ರೀ, ತೆರೆಮರೆಯಲ್ಲಿರುವ ನಿರ್ದೇಶಕನಂತೆ ಕ್ರಿಯೆಯ ಸೂತ್ರಧಾರಿಣಿಯಾಗಿ ಹೊಮ್ಮಿರುತ್ತಾಳೆ. ಡಿ.ಕೆ ರವಿಯವರ ಬದುಕಿನಲ್ಲಿ ಆಕೆಯ ಆಪ್ತಗೆಳತೆ ಸಾಧನೆಯ ಶಿಖರದತ್ತ ಕೊಂಡೊಯ್ಯಬಲ್ಲ ಅಧ್ವಿತೀಯ ಶಕ್ತಿಯಾಗಿದ್ದರು. ಮನುಷ್ಯನ ಬದುಕಿನ ಘಟನೆಗಳು ಹೇಗೋ ಘಟಿಸಿಬಿಡುತ್ತವೆ ಎಂದು ಸುಮ್ಮನಾಗದೆ ಹೋದ ಗೆಳೆಯ, ದಕ್ಷ ಅಧಿಕಾರಿಗೆ ಆಕೆಯಿಂದ ದೂರವಿರುವುದು ದೊಡ್ಡ ದುರ್ಘಟನೆಯನ್ನು ಮೈಮೇಲೆ ಎಳೆದುಕೊಂಡು ಸಾವಾಗಿಯೇ ಹೋಗುವ ನಿರ್ಧಾರ ತೆಗೆದುಕೊಳ್ಳುವುದು ಆತನ ಒಂದು ಆಲೋಚನಾ ಲಹರಿಯಲ್ಲಿ ಸರಿಕಂಡಿರುವುದರಲ್ಲಿ ಆಶ್ಚರ್ಯವೇ ಇಲ್ಲ.
ಸಾಹಿತ್ಯಶಕೆಯಲ್ಲಿ ಜಯಭೇರಿ ಭಾರಿಸುತ್ತಲೇ ಇರುವ ಷೇಕ್ಸ್ ಪಿಯರನ ದುಃಖಾಂತ್ಯ ನಾಟಕಗಳಲ್ಲೊಂದಾದ ಮ್ಯಾಕ್ ಬೆತ್ ನೊಳಗೆ ಈಜಾಡುವ ಓದುಗರು ಮ್ಯಾಕ್ ಬೆತ್ ನ ಹೆಂಡತಿಯನ್ನೇ ಪರಮ ಪಾಪಿ ಎನ್ನುವಂತೆ ದೂಷಿಸುತ್ತಾರೆ. ತನ್ನೊಡಲ ಮೊಲೆಹೀರುವ ಶಿಶುವನ್ನ ಸೆಳೆದು ಅದರ ಮಸ್ತಿಷ್ಕವನ್ನು ಹೊರಗೆಳೆದು ಕೊಲೆಮಾಡುವವಂತಹ ತಾಯಿ ನಾನು ಎಂದು ಆಕೆ ಗಂಡನ ಮನಸ್ಸಿನಲ್ಲಿ ಕ್ರೌರ್ಯದ ಬೀಜಗಳನ್ನು ಇನ್ನಷ್ಟು ಸುಭದ್ರವಾಗಿ ನೆಟ್ಟು ಬೆಳೆಸುತ್ತಾಳೆ. ಕ್ರೌರ್ಯದ ವಿಜೃಂಭಣೆಯಂತೆ, ಕರ್ತುವಿನ ಉದ್ದೇಶಿತ ಗುರಿಯ ನೈತಿಕ ಪಾಲಕಿಯಂತೆ ತನ್ನ ಪಾತ್ರವನ್ನು ನಿಭಾಯಿಸುವ ಲೇಡಿ ಮ್ಯಾಕ್ ಬೆತ್ ಎಂಬ ಸ್ತ್ರೀ ಪಾತ್ರ ಮಾತ್ರ ಎಲ್ಲರ ನಿರಾಕರಣೆ, ಸೇಡು, ಕಿಚ್ಚಿನೊಳಗೆ ವಿಹರಿಸುತ್ತದೆ. ಜಗತ್ತಿಗೆ ಆಕೆ ಓರ್ವ ಪರೋಕ್ಷ ಕೊಲೆಪಾತಕಿಯಂತೆ ಕಂಡರೂ, ಆಕೆಯೊಳಗಿನ ಆತ್ಮದ ಕೂಗನ್ನು ಷೇಕ್ಸ್ ಪಿಯರ್ ಒಮ್ಮೆಕೇಳಿಸಿಕೊಂಡಿಲ್ಲ ಎನ್ನುವುದು ಸೂಕ್ಷ್ಮಗ್ರಾಹಿಗೆ ಅರಿವಿಗೆ ಬರುತ್ತದೆ. ಆಕೆ ಬಯಸಿದ್ದು ತನ್ನ ಪತಿ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆಯುವ ಕಾಲಗಳನ್ನ, ಬದಲಿಗೆ ಆಗಿದ್ದೆಲ್ಲಾ ಆಕೆಗೂ ಬೇಕಾಗಿದ್ದ ದುಗುಮಾನಗಳಲ್ಲ.
ಜಗತ್ತು ಕಣ್ಣೀರು ಸುರಿಸುವುದು ಬದುಕಿದ್ದವರಿಗಾಗಿ ಅಲ್ಲ. ಬದುಕಿನಿಂದ ದೂರವಾಗಿ ಹೋದ ಜೀವಗಳಿಗೆ. ಜಗತ್ತು ಸತ್ತವ ಗಂಡೋ ಅಥವಾ ಹೆಣ್ಣೋ ಎಂದು ಖಂಡಿತ ತಲೆಕೆಡಿಸಿಕೊಳ್ಳುವುದಿಲ್ಲ, ಡಿ.ಕೆ. ರವಿ ಯವರು ಅನೇಕಾನೇಕ ಸಾಧನೆಗಳನ್ನು ಮಾಡಿದಾಗ ಶ್ಲಾಘಿಸದ ರಾಜಕಾರಣಿಗಳು, ಮಾಧ್ಯಮಗಳು, ಸಮಾಜ, ಆತನ ಸಾವಿನ ನಂತರ ದಿಕ್ಕನೆ ಎದ್ದು ನಿಂತು ಆತನನ್ನು ಸಾಮಾಜಿಕ ನಾಯಕನಾಗಿ, ಜಾತಿ ಸಮೂಹವೂ ಸೇರಿದಂತೆ ವಿವಿಧ ಸ್ತರದ ಸಮೂಹ ಇವರ ಸಾವನ್ನು ತಕ್ಷಣಕ್ಕೆ
ದಕ್ಕದಿದ್ದ ಉನ್ನತ ತನಿಖೆಗೆ ಒಪ್ಪಿಸುವ ಪುಕಾರು ಹೊತ್ತು ಮಮ್ಮಲ ಮರುಗುವುದನ್ನು ಒಂದು ಕಾರ್ಯಕಾರಣ ಸಂಬಂಧದಂತೆ ರೂಪಿಸಿಕೊಂಡವು. ಗೊತ್ತಿದ್ದ ಜನರೊಂದಿಗೆ ಗೊತ್ತಿಲ್ಲದವರೂ ಸೇರಿಕೊಂಡು ’ಆ ಅಧಿಕಾರಿ ಹೆಣ್ಣುಮಗಳ’ ಮೇಲೆ ಗೂಬೆ ಕೂರಿಸಿಕೊಳ್ಳುತ್ತಾ, ಆಕೆಯ ಸಂಸಾರದಲ್ಲಾಗಬಹುದಾದ ಸಮಸ್ಯೆಗಳನ್ನು ನಿರ್ಲಕ್ಷಿಸಿದಂತೆ ಕಂಡುಬಂದರು.
ಸಾವಿನಿಂದ ಯಾರೂ ಗ್ರೇಟ್ ಆಗುವುದಿಲ್ಲ, ಅದೇ ರೀತಿಯಲ್ಲಿ ಬದುಕಿದ್ದ ಮಾತ್ರಕ್ಕೇ ಗ್ರೇಟ್ ಆಗಿಬಿಡುತ್ತೇವೆ ಎಂದು ಬೀಗಲೂ ಆಗದು. ಆದರೆ ಎಂಥಾ ಮನುಷ್ಯನೇ ಆದರೂ ಸಾವಿಗೆ ಮರುಗದಿದ್ದರೆ, ಆತನನ್ನು ಹ್ಯುಮನ್ ಮೈಂಡೆಡ್ ಅನ್ನುವುದಕ್ಕಿಂತ ಡೆಡ್ ಅನ್ನಬಹುದು. ಕೆಲವರ ಬುದುಕು ಸಾವಿನಿಂದಷ್ಟೇ ಹೆಚ್ಚು ಪ್ರಚಾರಕ್ಕೆ ಒಳಗಾದದ್ದನ್ನು ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ನಾವು ಕಂಡಿದ್ದೇವೆ. ಕಲ್ಪನಾ, ಮಂಜುಳಾ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಹಾಡಿನಲ್ಲಿ ಮಿಂಚಿ ಮರೆಯಾದ ನಟಿ .. ನಿಶ್ಯಬ್ಧ ಸಿನೆಮಾದ ಯುವ ನಟಿ… ಹೀಗೆ ಕಣ್ಣಲ್ಲಿ ಹೊತ್ತಿರುವ ಕನಸುಗಳು ನೂರಾರು, ಆದರೆ ಅದನ್ನೆಲ್ಲಾ ಸಾಕಾರ ಮಾಡುವ ಛಲವಿದ್ದವರು ಹೀಗೆ ಏಕಾಏಕಿ ಇಲ್ಲವಾದಾಗ, ಅದೊಂದು ಕೊಲೆ, ಇತ್ಯಾಧಿ ಅನುಮಾನಗಳು ಎಡೆಮಾಡಿಕೊಡುತ್ತವೆ. ಏಕೆಂದರೆ, ಎಲ್ಲಾ ಇಲ್ಲದವರು, ಅರೆ ಹೊಟ್ಟೆಗೆ ಗತಿ ಇಲ್ಲದವರು ಬದುಕಿ ತೋರಿಸುವ ಹಂತದಲ್ಲಿದ್ದಾಗ, ಎಲ್ಲಾ ಇದ್ದವರು, ಹೆಂಡ್ರು, ಮಕ್ಕಳು, ಸಂಸಾರ ಇತ್ಯಾಧಿ ಬೇಸಿಕ್ ನಂತೆ ಇದ್ದರೂ ಸಹ..! ಹೀಗೆ ಜನರು ಮಾತನಾಡುವ ವಿಚಾರಧಾರೆಗಳು ಹೆಚ್ಚುತ್ತಲೇ ಹೋಗುತ್ತದೆ.
ಜನರು ಹೆಣ್ಣನ್ನು ದೂಷಿಸುತ್ತಾರೆ ಅನ್ನುವುದಕ್ಕಿಂತಲೂ, ಸಾವಿಗೀಡಾದವರ ಮೇಲೆ ಅತಿಯಾಗಿ ಶೋಕ ವ್ಯಕ್ತಪಡಿಸುತ್ತಾರೆ. ಏಕೆಂದರೆ ಇನ್ನು ಮರಳಿ ಭೂಮಿಗೆ ಬರಲಾರದವರು. ಯಾರ ಮೇಲಾದರೂ ಆ ವಿಚಿತ್ರ ಭಾರವನ್ನು ಗೂಬೆ ಕೂರಿಸುವಂತೆ ಕೂರಿಸಲು ಯತ್ನಿಸುತ್ತಾರೆ, ಇಲ್ಲಿ ಎಲ್ಲಾ ಸರಿಹೋಗಿದ್ದರೆ, ಅವನು ಬದುಕಿರುತ್ತಿದ್ದ, ಇನ್ನಷ್ಟು ತೆರಿಗೆಯನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಿಸಿರುತ್ತಿದ್ದ, ಬಡಜನರಿಗಾಗಿ ದುಡಿಯುತ್ತಿದ್ದ ಎಂಬಿತ್ಯಾಧಿ ಬೋಪರಾಕ್, ಕೇಳಿಬರುತ್ತಿದ್ದರೂ, ಆತನೆಷ್ಟು ಮಾನಸಿಕ ಗೊಂದಲದಲ್ಲಿದ್ದು ಬದುಕಿಯೂ ಬದುಕಿರದ ಪರಿಸ್ಥಿತಿಯಲ್ಲಿ ಇಷ್ಟೆಲ್ಲಾ ಸಾಧನೆಯನ್ನು ಮಾಡಿದ್ದ ಎಂಬುದನ್ನು ಎಲ್ಲರೂ ಯೋಚಿಸಬೇಕು. ಹೆಂಡತಿಗಾಗಿ ಟ್ಯಾಕ್ಸ್ ಕಟ್ಟಿದ್ದರೂ, ಎರಡೆರಡು ದಾರಿ, ಎರಡೆರಡು ಮನಸ್ಸುಗಳು ಆತನನ್ನು ತೀವ್ರ ಆತ್ಮಶೋಧಕ್ಕೀಡುಮಾಡಿರಬಹುದು. ಆವರ ದುಃಖದ ಎಳೆಯೊಳಗೊಂದು ಹೊಳೆ ಹರಿದದ್ದು ಎಲ್ಲರಿಗೂ ಕಂಡಾಗ ಅದರ ಪಾವಿತ್ರ್ಯತೆಯನ್ನು ಪರಿಗಣಿಸುವ ಮನಸ್ಸು ಎಲ್ಲರಿಗೂ /ಮಾಧ್ಯಮಕ್ಕೆ ಬಾರದೇ ಹೋದದ್ದು ಅಸಹಜ ಎನಿಸುವುದು. ಎಲ್ಲಕ್ಕೂ ಕತೆ ಕಟ್ಟುವ ಮುಖಾಂತರ ಸಾವಿಗೆ ಮಿಡಿಯುತ್ತಲೇ ಮತ್ತೊಂದು ಹೆಣ್ಣಿನ ತಲೆಗೊಂದು ಪಟ್ಟಿಹಾಕುವುದು ನ್ಯಾಯಯುತ ತೀರ್ಮಾನವಲ್ಲ.
ಯಾರಿಗೇ ಆಗಲಿ, ಸಾವೇ ತೀರ್ಮಾನವಾಗಿದ್ದರೂ, ಇದರಿಂದ ಯಾರಿಗೆ ಲಾಭಗಳಾಗಿದೆ? ಜನಕ್ಕೋ, ಕುಟುಂಬಕ್ಕೋ, ಸಮುದಾಯಕ್ಕೋ, ವೃತ್ತಿಗೋ? ಕಾಲದೊಂದಿಗೆ ಪ್ರವಹಿಸುವ ಶಕ್ತಿಯನ್ನು ಸಮಯ ಎಲ್ಲರಿಗೂ ಕೊಡಬೇಕು ಎನ್ನುವುದಕ್ಕಿಂತ, ಆ ಶಕ್ತಿ ಎಲ್ಲರಲ್ಲಿಯೂ ಇದೆ, ಗುರುತಿಸಿಕೊಳ್ಳಬೇಕು ಅಲ್ಲವೇ? ಒಂದು ಸುವ್ಯವಸ್ಥಿತ ಹಂತದಲ್ಲಿ ಜೀವನ ಸಾಗಿಸಬಹುದಾದ ಅಧಿಕಾರಿ, ಹಲವು ವಿಷ ಘಳಿಗೆಗಳನ್ನು ಜನರಿಗೆ ಹುಟ್ಟುಹಾಕಿಹೋಗಿದ್ದು ಒಂದು ವಿಪರ್ಯಾಸ. ಇನ್ನು ಒಂದು ಮಾತಿನಲ್ಲಿ ಹೇಳಬೇಕೆಂದರೆ ಜಗತ್ತಿನ ಸಾತ್ವಿಕ ಶಕ್ತಿಗೆ ಬಾಯಿ ಬರುವುದು, ಜೀವ ಶವವಾದಾಗ. ಇದಕ್ಕೆ ಪಕ್ಕಾ ಲೋಕಲ್ ಉದಾಹರಣೆ, ರಾಜ್ಯಾದ್ಯಂತ ಹಾಗೂ ಸ್ಥಳೀಯವಾಗಿಯೂ ಕಂಡುಬಂದ ಶ್ರೀಯುತ ಡಿ.ಕೆ. ರವಿಯವರ ಸಾವಿಗೆ ಕಂಡುಬಂದ ಪ್ರತಿಕ್ರಿಯೆ.
 

‍ಲೇಖಕರು G

21 May, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading