ವಿದ್ಯಾರಶ್ಮಿ ಪೆಲತಡ್ಕ ಮಾತಾಡಿಸಿದಾಗ ಸುಂದರರಾಜ್ ತಮ್ಮ ಗುರುಗಳ ನೆನಪು ಬಿಚ್ಚಿಟ್ಟದ್ದು ಹೀಗೆ
ಬದುಕು ರೂಪಿಸಿದ ಮಾರ್ಗದರ್ಶಿ
ವ್ಯಕ್ತಿಯೊಬ್ಬನ ಮಾತು, ಬುದ್ಧಿಯನ್ನೆಲ್ಲ ಶಾರ್ಪ್ ಮಾಡುವವನು ಗುರು. ನನಗೆ ಬಿ.ವಿ.ಕಾರಂತರು ಇಂತಹ ಗುರುಗಳಾಗಿ ಸಿಕ್ಕಿದರು. ಅವರ ಜತೆಗಿನ 30 ವರ್ಷಗಳ ಒಡನಾಟದಲ್ಲಿ ಅವರು ನನ್ನ ನಟನೆಯನ್ನಷ್ಟೇ ಅಲ್ಲ, ಬದುಕನ್ನೇ ರೂಪಿಸಿದರು, ಮಾರ್ಗದರ್ಶಿಸಿದರು.
ನಾನು ಹತ್ತೊಂಭತ್ತನೇ ವಯಸ್ಸಿನಲ್ಲಿ ಕಾಲೇಜಿನಿಂದ ಹೊರಬಂದು ಮುಂದೇನು ಮಾಡುವುದು ಎಂಬ ಡೈಲೆಮಾದಲ್ಲಿದ್ದಾಗ ಸಿಕ್ಕವರು ಬಿ.ವಿ.ಕಾರಂತರು. ಗೆಳೆಯ ಎಡಕಲ್ಲುಗುಡ್ಡ ಚಂದ್ರಶೇಖರ್ ಮೂಲಕ ಕಾರಂತರ ಪರಿಚಯವಾಯಿತು. ವಿಜ್ಞಾನ ವಿದ್ಯಾರ್ಥಿಯಾಗಿದ್ದುದರಿಂದ ಆಗ ಕಾರಂತ, ಕಾರ್ನಾಡ, ಕಂಬಾರ… ಹೀಗೆ ಸಾಹಿತ್ಯಿಕ, ಸಾಂಸ್ಕೃತಿಕ ಲೋಕದ ಯಾರ ಪರಿಚಯವೂ ನನಗಿರಲಿಲ್ಲ. ನಾನಾಗ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದೆ. ಕಾರಂತರನ್ನು ಭೇಟಿ ಮಾಡಲು ಯಾವ ತಯಾರಿಯನ್ನೂ ಮಾಡಲಿಲ್ಲ. ಹೇಗಿದ್ದೆನೋ ಹಾಗೇ ಅವರನ್ನು ಭೇಟಿ ಮಾಡಿದೆ. ಅವರಿಗೆ ನನ್ನನ್ನು ಇಷ್ಟವಾಯಿತು. ನನ್ನ ಬಾಡಿ ಲಾಂಗ್ವೇಜ್, ನನ್ನಲ್ಲಿದ್ದ ಕ್ವಾಲಿಟಿ ಅವರಿಗೆ ಇಷ್ಟವಾಯ್ತು ಅನ್ನಿಸುತ್ತೆ. `ನಟ ಅಂದರೆ ಜೇಡಿ ಮಣ್ಣು ಇದ್ದ ಹಾಗೆ ಇರಬೇಕು. ಅತಿ ಬುದ್ಧಿವಂತಿಕೆ ಇದ್ದರೆ ಪ್ರಯೋಜನ ಇಲ್ಲ. ಹಾಗಿದ್ದರೆ ನಿರ್ದೇಶಕ ಬೇಕಾದ ಹಾಗೆ ಆತನನ್ನು ದುಡಿಸಿಕೊಳ್ಳುವುದಕ್ಕಾಗುವುದಿಲ್ಲ’ ಅನ್ನುತ್ತಿದ್ದರು ಅವರು. ಬಹುಶಃ ಅವರಿಗೆ ಬೇಕಾದ ಹಾಗಿದ್ದೆ ನಾನು.
`ಹಯವದನ’ ನಾಟಕದಲ್ಲಿ ಕಪಿಲನ ಪಾತ್ರ ಮಾಡ್ತೀಯಾ ಅಂದರು, ಒಪ್ಪಿಕೊಂಡೆ. ಅಲ್ಲಿಂದ ಸರಿಯಾಗಿ ಒಂದೂವರೆ ತಿಂಗಳು ಸತತ ತರಬೇತಿ, ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ. 1972ರಲ್ಲಿ ಸೆಪ್ಟೆಂಬರ್ 5ರಂದು ಆ ನಾಟಕದ ಮೊದಲ ಪ್ರದರ್ಶನವಿತ್ತು. ಅವರಿಂದ ಸಿಕ್ಕ ತರಬೇತಿಯಿಂದಾಗಿಯೇ ನಾನೊಬ್ಬ ಸಂಗೀತಗಾರನಾದೆ, ನಟನಾದೆ, ರಂಗಕರ್ಮಿಯಾದೆ.
`ಹಯವದನ’ ನಾಟಕ ಹಾಗೂ ಅದರಲ್ಲಿ ನಾನು ನಿರ್ವಹಿಸಿದ ಪಾತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿತು. ಮುಂದೆ ಕಾರಂತರು ಎಲ್ಲೆಡೆಯೂ ನನ್ನನ್ನು ಸತತವಾಗಿ ರೆಕಮೆಂಡ್ ಮಾಡುತ್ತಾ ಹೋದರು. `ಕಾಡು’, `ಚೋಮನ ದುಡಿ’ ಚಿತ್ರಗಳಲ್ಲಿ ನನಗೆ ಪಾತ್ರ ಕೊಟ್ಟರು. `ಸಂಸ್ಕಾರ’ ಚಿತ್ರಕ್ಕೆ ನನ್ನನ್ನು ಸೂಚಿಸಿದರು. ತಮ್ಮ ಕಿರುಚಿತ್ರಕ್ಕೆ ನನ್ನನ್ನು ಸಹಾಯಕ ನಿರ್ದೇಶಕನನ್ನಾಗಿಯೂ ತೆಗೆದುಕೊಂಡರು. ಹೀಗೆ ಬೆಳೆಯುತ್ತಾ ಬೆಳೆಯುತ್ತಾ ನಾನು ಅವರನ್ನು ಪರಿಪೂರ್ಣ ಗುರುವಾಗಿ ಸ್ವೀಕರಿಸಿದೆ. ಅವರನ್ನು `ಮೇಷ್ಟ್ರೇ’ ಅಂತ ಮೊದಲು ಕರೆದವನು ನಾನು, ಬಳಿಕ ಎಲ್ಲರೂ ಹಾಗೇ ಕರೆಯಲಾರಂಭಿಸಿದರು.
ಅವರು ಆ ಕಾಲದಲ್ಲಿ ಮಕ್ಕಳ ನಾಟಕಗಳನ್ನೂ ಮಾಡುತ್ತಿದ್ದರು. ಆಗ ಅಲ್ಲಿ ಯಾವುದೋ ಮಗುವನ್ನು `ಪೀಟರ್’ ಅನ್ನುತ್ತಿದ್ದರು. ಅದೇ ನೆನಪಿನಲ್ಲಿಯೋ ಏನೋ, ನನ್ನನ್ನೂ ಪೀಟರ್ ಅಂತ ಕರೆಯುತ್ತಿದ್ದರು. ಇದೇನಪ್ಪ ನನ್ನ ಹೀಗೆ ಕರೀತಾರೆ ಅಂತ ನನಗನ್ನಿಸ್ತಿತ್ತು. ಅವರಿಗೆ ಮಕ್ಕಳಿರಲಿಲ್ಲ. ಬಳಿಕ ನಾನೇ ಅವರಿಗೆ ದತ್ತು ಪುತ್ರನಂತಾದೆ. ಅವರ ಅತ್ಯಂತ ಪ್ರೀತಿಯ ಶಿಷ್ಯನಾದೆ.
ಕಾರಂತರು ಬಾಲ್ಯದಲ್ಲೇ ಮನೆ ಬಿಟ್ಟು ಓಡಿ ಹೋಗಿ ಏಕಾಂಗಿಯಾಗಿ ತುಂಬಾ ಪರಿಶ್ರಮ ಪಟ್ಟಿದ್ದರು. ಅದಕ್ಕೇ ನನ್ನ ಕಷ್ಟಗಳೂ ಅವರಿಗೆ ಬಹುಬೇಗ ಅರ್ಥವಾಗುತ್ತಿತ್ತು. ನಾನು ನಾಟಕಕ್ಕೆ ಸೇರಿಕೊಂಡೆ ಎಂದು ಟೈರ್ ಬಿಸಿನೆಸ್ ಮಾಡುತ್ತಿದ್ದ ನಮ್ಮಪ್ಪ ಒಂದೂವರೆ ತಿಂಗಳು ನನ್ನ ಮನೆಯಿಂದ ಹೊರ ಹಾಕಿದರು. ಆಗ ಒಂದು ರೂಮ್ನ ವ್ಯವಸ್ಥೆ ಮಾಡಿ ನೋಡಿಕೊಂಡವರು ಕಾರಂತರು. ಮಿನರ್ವ ಸರ್ಕಲ್ನ ಆ ರೂಮ್ನಲ್ಲಿ ನಾನು ಆರು ತಿಂಗಳಿದ್ದೆ. ಆಗ ನನಗೆ ರೂಮ್ ಮೇಟ್ ಆಗಿದ್ದವರು ಗಿರೀಶ್ ಕಾಸರವಳ್ಳಿಯವರು. ಅಲ್ಲಿಂದ ಮತ್ತೆ ನನಗೆ ಕಷ್ಟವಾದಾಗಲೆಲ್ಲಾ ಕೈಹಿಡಿದು ಆಧರಿಸುತ್ತಾ ಹೋದರು ಕಾರಂತರು. ನಾನೂ ಅವರ ಬಳಿ ನನ್ನ ಬೇಕು, ಬೇಡಗಳನ್ನೆಲ್ಲ ಹೇಳಿಕೊಡುತ್ತಿದ್ದೆ. ನಾನು ಕೇಳಿದ್ದನ್ನು ಅವರು ಕೊಡಿಸುತ್ತಿದ್ದರು ಕೂಡ. ಒಮ್ಮೆ ನಾನು ಗಿಟಾರ್ ಕೇಳಿದ್ದೆ, ಅದು ತುಂಬಾ ದುಬಾರಿ, ತರಿಸಿಕೊಡೋದಕ್ಕಾಗೋದಿಲ್ಲ ಎಂದಿದ್ದರು. ಅವರಿಗೆ ಸಾಧ್ಯವಾದದ್ದನ್ನು ತರಿಸಿಕೊಡುತ್ತಿದ್ದರು.
ಒಮ್ಮೆ ನಾವು ನಾಟಕ ಪ್ರದರ್ಶನ ನೀಡುತ್ತಾ ಆಲ್ ಇಂಡಿಯಾ ಟೂರ್ ಮಾಡಿದ್ವಿ. ಆಗ ತಮ್ಮ ತಂಡಕ್ಕೆ ಇದ್ದ ಮೆಡಿಕಲ್ ಆಫೀಸರ್ ನನಗೊಮ್ಮೆ ಎಕ್ಸ್ಪೈರ್ ಆದ ಗುಳಿಗೆ ಕೊಟ್ಟಿದ್ದ. ಅದಕ್ಕೆ ನಾನು ಗಲಾಟೆ ಮಾಡಿದ್ದೆ. ಈ ಘಟನೆ ಗುಲ್ಬರ್ಗಾದಲ್ಲಿ ನಡೀತು. ಇದನ್ನು ತಿಳಿದ ಕಾರಂತರು, `ತಾವು ದೊಡ್ಡವರು. ದಯವಿಟ್ಟು ಬಂದು ನನ್ನ ಶೋ ಮುಗಿಸಿಕೊಡಿ’ ಎಂದು ವ್ಯಂಗ್ಯವಾಗಿ ಪತ್ರ ಬರೆದಿದ್ದರು. ಆಮೇಲೆ ಸಾರಿ ಕೇಳಿದಮೇಲೆ ಘಟನೆಯನ್ನು ಮರೆತು ಕ್ಷಮಿಸಿದರು.
ಕಾರಂತರಿಗೆ ಯಶಸ್ಸು ಸಿಕ್ಕ ಸಂದರ್ಭದಲ್ಲೆಲ್ಲ ನಾನು ಅವರ ಜತೆಗಿದ್ದೆ, ಖುಷಿಪಟ್ಟಿದ್ದೆ. ಅದೇ ರೀತಿ ಕಾರಂತರ ಕಷ್ಟದ ಸಮಯವನ್ನೂ ನಾನು ನೋಡಿದ್ದೇನೆ, ನೊಂದಿದ್ದೇನೆ. ವಿಭಾ ಪ್ರಕರಣದಿಂದಾಗಿ ಅವರನ್ನು ಜೈಲಿಗೆ ಹಾಕಿದ್ದಾಗ ನಾವು ಕೆಲವರು ಅವರನ್ನು ನೋಡಲು ಹೋಗಿದ್ದೆವು. ಅವರನ್ನು ನೋಡುತ್ತಾ ನನಗೆ ಕಣ್ಣೀರು ಬಂತು. ಅವರು `ಲೈಫ್’ ಮ್ಯಾಗಝಿನ್ ಹಿಡಿದುಕೊಂಡು, `ಲೈಫ್ ಅಂದರೆ ಇದೇ ನೋಡು’ ಅಂದಿದ್ದರು. ವಿಭಾ ಪ್ರಕರಣದ ಬಳಿಕ ಕಾರಂತರ ಸಂಸಾರದಲ್ಲಿ ಭಿನ್ನಾಭಿಪ್ರಾಯದ ಅಲೆಗಳೆದ್ದಾಗ, ಸಾಂಸಾರಿಕವಾಗಿ ಒಂಟಿತನ ಕಾಡಿದಾಗ ನಾನು ಜತೆಗಿದ್ದು ಸಂತೈಸಿದ್ದೇನೆ. ವಿಭಾ ಪ್ರಕರಣದ ನಂತರು ಅವರು ತುಂಬಾ ಕುಡಿಯುತ್ತಿದ್ದರು. ಆಗ ರಂಗ ಡೆಮಾನ್ಸ್ಟ್ರೇಷನ್ ಕೊಡಲು ಹೊರ ಊರಿಗೆ ಹೋದಾಗಲೆಲ್ಲ ಅವರ ಪತ್ನಿ ಪ್ರೇಮಾ ನನ್ನನ್ನೂ ಜೊತೆಗೆ ಹೋಗೆಂದು ಕಳಿಸುತ್ತಿದ್ದರು. ಆಗ ನಾನೇ ದುಡ್ಡು, ಆಲ್ಕೋಹಾಲ್ ಎಲ್ಲವನ್ನೂ ಅಳತೆ ಮಾಡಿ ಒಂದು ಮಿತಿಯಲ್ಲಿ ಅವರಿಗೆ ಕೊಡಬೇಕಿತ್ತು.
ಅವರು ಸಾಯಲು ಇನ್ನೂ ತಿಂಗಳಿರುವಾಗಲೇ ಅವರಿಗೆ ಮಾತು ನಿಂತು ಹೋಗಿತ್ತು. ಆಸ್ಪತ್ರೆಗೆ ಅವರನ್ನು ನೋಡ ಹೋದಾಗ ಜತೆಯಲ್ಲಿದ್ದ ಕಲಾವಿದೆ ಕಲ್ಪನಾ ನಾಗಾನಾಥ್, `ನಿನ್ನಲ್ಲೇ ಏನೋ ಹೇಳುವಂತಿದೆ ಅವರ ಕಣ್ಣು’ ಅಂದಿದ್ದರು. ಕೊನೆಗೆ ಅವರು ತೀರಿಕೊಂಡಾಗ ರಂಗಾಯಣ ರಘು ಮತ್ತು ನನ್ನಿಂದಲೇ ಸಂಸ್ಕಾರ ಮಾಡಿಸಿದರು ಪ್ರೇಮಾ ಕಾರಂತ.
ರಂಗಭೂಮಿ ಮೇಲೆ ಅಪಾರ ಪ್ರೀತಿ ಹೊಂದಿದ್ದ ಕಾರಂತರಿಗೆ ಕ್ಷಣಕ್ಷಣಕ್ಕೂ ತಿಳಿದುಕೊಳ್ಳುವ ಹಂಬಲ ಇದ್ದೇ ಇತ್ತು. ದೇಶವಿದೇಶಗಳ ರಂಗಭೂಮಿ ಪರಿಕರಗಳು, ಸಂಗೀತ ಉಪಕರಣಗಳ ಬಗೆಗೆ ತಿಳಿದುಕೊಂಡಿದ್ದರು. `ಹಯವದನ’, `ಸತ್ತವರ ನೆರಳು’, `ಜೋಕುಮಾರಸ್ವಾಮಿ’, `ಗೋಕುಲ ನಿರ್ಗಮನ’ ಎಂಬ ನಾಲ್ಕು ಅಪರೂಪದ ರತ್ನಗಳಂತಹ ನಾಟಕಗಳನ್ನು ಅವರು ರಂಗಭೂಮಿಗೆ ಕಾಣಿಕೆಯಾಗಿ ಕೊಟ್ಟರು. ಇವುಗಳಲ್ಲಿ `ಗೋಕುಲ ನಿರ್ಗಮನ’ ಅವರ ಅಟೊಬಯೋಗ್ರಫಿಯಂತಿದೆ.
ಕಾರಂತರ ತಂಡದಲ್ಲಿ ನಾಟಕ ಆಡಿ, ಕಲಿತವರೆಲ್ಲ ಇಂದು ಚೆನ್ನಾಗಿದ್ದೇವೆ. ಅದೆಷ್ಟೋ ಜನ ದೊಡ್ಡ ಸ್ಥಾನ ಮುಟ್ಟಿದ್ದಾರೆ. ಕಾರಂತರ ಅಭಯಹಸ್ತ ನಮ್ಮೆಲ್ಲರ ಮೇಲೆ ಇದೆ. ಇಂತಹ ಕಾರಂತರ ಹೆಸರಿನಲ್ಲಿ ಒಂದು ರಂಗಮಂದಿರ ಕಟ್ಟಬೇಕು, ಅಲ್ಲಿ ವರ್ಷವಿಡೀ ನಾಟಕವಾಡಬೇಕು ಅನ್ನೋ ಆಸೆ ಇದೆ. ನನ್ನಲ್ಲಿ ಪ್ರೀತಿ ಇಟ್ಟು, ಓದಿನ ರುಚಿ ಹತ್ತಿಸಿ, ಹಾಡುಗಾರಿಕೆ, ಮಾತುಗಾರಿಕೆ, ಅಭಿನಯ ಎಲ್ಲವನ್ನೂ ಕಲಿಸಿ, ಹಾಸ್ಯಪ್ರಜ್ಞೆ ಮೂಡಿಸಿ ಒಂದು ವ್ಯಕ್ತಿಯನ್ನಾಗಿ ಮಾಡಿದ ಮಹಾನ್ ಗುರು ಅವರು. ಇಂತಹ ಗುರುವನ್ನು, ಸಾಕುತಂದೆಯನ್ನು ನಾನು ಈಗಲೂ ತುಂಬಾ ಮಿಸ್ ಮಾಡುತ್ತಿದ್ದೇನೆ.










ಹೃದಯಂಗಮ ಬರಹ….ತುಂಬಾ ಚನ್ನಾಗಿದೆ
Karanthara bagge eshtu odidaaroo kushiyenisutte … Sundae raj mattu vidya rashmi ibrigoo thanks
tumba channagide sir innu mahiti yannu needi
Tumbaa hrudyavaagide. Karantharondigina Nimma dinagalannu viviaravaagi kantugLalli tarabahudeno…thanks for sharing.
ಚನ್ನಾಗಿದೆ
ಸು೦ದರ್ ರಾಜ್ ಸಹಜಾಭಿನಯದ ಗುಟ್ಟು ಈಗ ಗೊತ್ತಾಯಿತು.
ಆತ್ಮೀಯ ಬರಹ.
-ಸುನ೦ದಾ ಕಡಮೆ
uttama nirUpaNe… thanks
ಉತ್ತಮ ನಿರೂಪಣೆ. ಸುಂದರರಾಜ್ ಅವರ ಸಹಜ ಅಭಿನಯದ ಹಿಂದಿನ ಗುಟ್ಟು ಇದೀಗ ತಿಳಿಯಿತು.