ಬದುಕು ಉಳಿಸಿಕೊಳ್ಳಲು ಚಡಪಡಿಸಿದ್ದಳಲ್ಲ, ಅವಳಿಗಾಗಿ…

venkatramana gowda

ವೆಂಕಟ್ರಮಣ ಗೌಡ 

ಹಾನಗರಿಯೊಂದರಲ್ಲಿನ ಸಂಜೆಯೊಂದು ಅದರ ನಿಗೂಢದ ಮಗ್ಗುಲೂ ಹೌದು. ಇಲ್ಲಿ ಸೂರ್ಯಾಸ್ತ, ಸೊಬಗಿಗಿಂತ ಹೆಚ್ಚಾಗಿ ನಿಷ್ಕರುಣಿ; ಮಾಧುರ್ಯಕ್ಕಿಂತ ಮಿಗಿಲಾಗಿ ದುಷ್ಟ ಪಿಪಾಸು. ಕಣ್ಣ ಕೋರೈಸುವ ಬೆಳಕಿನ ಅಂಚಿನಲ್ಲೆಲ್ಲೋ ಕ್ರೌರ್ಯವೊಂದು ಹೊಂಚಿರುವ, ಬಣ್ಣದಲ್ಲಿ ವಿಷವೊಸರುವ, ಆಮಿಷಗಳು ಫಳಫಳಿಸುವ, ಆಸೆಗೆ ಬಿದ್ದವರು ಎಂದೆಂದೂ ಬರಕತ್ತಾಗದ ಹಾಗೆ ಅವರ ಕನಸು ದೋಚುವ ಮಹಾ ಹರಾಮಿ. ಅದರ ನಗುವಿನಂಥ ನಗು ನಂಬಿದವರ ಪಾಲಿಗಲ್ಲವೇ ಅಲ್ಲ…

woman sculptureಹೀಗೆ ಕಪ್ಪು ಶೇಡ್ ನ ವಿವರಗಳಲ್ಲಿ ಉದ್ದಕ್ಕೆ ಸಿಗುವ ಬೆಂಗಳೂರಿನ ಸಂಜೆಯ ನರಕಕ್ಕೊಂದಿನ ಹೀಗೊಬ್ಬಳು ಬಂದು ಬಿದ್ದಳು. ಪರವೂರಿನವಳಾದ ಆ ಹೆಣ್ಣುಮಗಳ ಹೆಸರು ಕಾಣಿ.

ಅವಳು ನಿಮ್ಮ ಕಣ್ಣಿಗೆ ಬಿದ್ದಿರಬಹುದಾದ ಹುಡುಗಿ. ಮಾತು ಬರುತ್ತಿರಲಿಲ್ಲ ಅವಳಿಗೆ. ಈ ಹೆಸರು ಎಲ್ಲೋ ಕೇಳಿದಂತಿದೆಯಲ್ಲ ಎಂದೆನಿಸಿದರೆ ಅದೂ ನಿಜ. ನಿರಂಜನ ಅವರ ಕಥಾಜಗತ್ತಿನಲ್ಲಿ ನೀವು ಅವಳನ್ನು ಭೇಟಿಯಾಗಿರುತ್ತೀರಿ. ಅವರ “ಕೊನೆಯ ಗಿರಾಕಿ”ಯ ಕಥಾನಾಯಕಿ ಈ ಬಡ ಕಾಣಿ.

ಇನ್ನೂ ಹದಿನಾರರ ಆ ಹುಡುಗಿ ತಮಿಳುನಾಡಿನ ಊರೊಂದರಿಂದ ಇಲ್ಲಿಗೆ ಓಡಿ ಬರುವಾಗ ಜೊತೆಗೊಂದು ಆಸರೆ ಇದೆಯೆಂಬ ಧೈರ್ಯದಿಂದಿದ್ದಳು. ಜಮೀನ್ದಾರನೊಬ್ಬನ ಒಕ್ಕಲಾಗಿದ್ದ ಆಕೆಯ ತಾಯ್ತಂದೆಯರು ಹೆಚ್ಚು ಗೇಣಿ ಕೊಡಲಾರದ್ದಕ್ಕಾಗಿ ಹೊಲ ಕಳೆದುಕೊಂಡರು. ಕೆಲಸಕ್ಕಾಗಿ ಅಲೆದದ್ದು ವ್ಯರ್ಥವಾಗಿ, ಅನ್ನದ ಪ್ರಶ್ನೆ ಅವರನ್ನು ಭಿಕ್ಷೆ ಎತ್ತಲು ಹಚ್ಚಿತ್ತು. ಬೀದಿ ಬದುಕಿನ ಅಂಥದೊಂದು ರಾತ್ರಿಯಲ್ಲೇ ಒಂದು ಕೈ ಮೊಂಡಾಗಿದ್ದ ತಿರುಪೆಯವನೊಬ್ಬ ಆಕೆಯನ್ನು ಅನಾಮತ್ತಾಗಿ ಭೋಗಿಸಿದ್ದ. ಅದೇ ರಾತ್ರಿಯೇ ಇಬ್ಬರು ಊರು ಬಿಟ್ಟರು.

ಹೌದು. ಇದ್ದ ಬೇರುಗಳನ್ನು ಕಳಚಿಕೊಂದು ಬಂದಿದ್ದಳಾಕೆ. ಟಿಸಿಲುಗಳ ಭ್ರಮೆಯನ್ನು ತಲೆತುಂಬಿಕೊಂಡು. ಬೇರಿಲ್ಲದ ಬದುಕೆಷ್ಟು ದಿನ ನಿಂತೀತು? ಸರಿಯಾಗಿ ಹತ್ತೇ ದಿನಕ್ಕೆ ಭ್ರಮೆ ಕಳಚಿ ಬಿದ್ದಿತ್ತು. ಹನ್ನೊಂದನೆಯ ಬೆಳಗಿನಲ್ಲೆದ್ದು ನೋಡುತ್ತಾಳೆ. ಅವನಿರಲಿಲ್ಲ. ಮತ್ತೇನಾದರೂ ಇತ್ತೇ? ಏನೂ ಇರಲಿಲ್ಲ; ಆಸರೆಗೊಂದು ಹುಲ್ಲುಕಡ್ಡಿ ಕೂಡ.

ಮಾತು ಬಾರದ ಹುಡುಗಿ ತಣ್ಣಗೆ ರೋದಿಸಿದ್ದಳು. ಒಂದು ಜೀವಮಾನಕ್ಕೇ ಆಗುವಷ್ಟು ಭರಪೂರ ದುಃಖವಾಗಿತ್ತು. ಇದೆಲ್ಲ ನಿಧಾನವಾಗಿ, ಒಲಿಸಿಕೊಳ್ಳುವಂತೆ ಅವಳನ್ನು ಆಕ್ರಮಿಸತೊಡಗಿತ್ತು.

ಹಸಿದು ನಡೆಯುತ್ತಿದ್ದವಳಿಗೆ ಹಿಂಬಾಲಿಸಿ ಬಂದವನೊಬ್ಬ ಕೊಟ್ಟದ್ದಿಷ್ಟು ಚೌಚೌ. ಆದರೆ ತಾನು ಕೊಟ್ಟದ್ದಕ್ಕೆ ಪ್ರತಿಯಾಗಿ ಅವಳಿಂದ ಪಡೆಯುವ ವಾಂಛೆಯಿತ್ತಲ್ಲ ಅವನ ಕಣ್ಣಲ್ಲಿ? ಸನ್ನೆಯಲ್ಲೇ ಕರೆದವನನ್ನೇ ಹಿಂಬಾಲಿಸಿದಳು. ಎಲ್ಲೋ ಒಂದೆಡೆ ಅವನೊಟ್ಟಿಗೆ ಆ ರಾತ್ರಿ ಮುಗಿಯಿತು. ಹಾಗೆ ನಾಲ್ಕು ದಿನಗಳಾದ ಮೇಲೆ ಅವನ ಜೊತೆಗೆ ಹೊಸಬರು ಬಂದರು. ಜೀವ ಹಿಂಡತೊಡಗಿದರು. ಪ್ರತಿಭಟಿಸಿದ್ದಕ್ಕೆ ನಾಯಿ ಹೊಡೆಯಿಸಿಕೊಂಡ ಹಾಗೆ ಹೊಡೆಸಿಕೊಳ್ಳಬೇಕಾಯಿತು. ಮೊಟ್ಟ ಮೊದಲ ಸಲ ಮೊಂಡು ಕೈಯವನೊಂದಿಗೆ ಕೂಡಿದಾಗ ಕಂಡಿದ್ದ ಜಗತ್ತನ್ನು ನೆನೆದಳು. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ನಗರ ಧಾಟಿ ಯಾವುದೋ ಹಳ್ಳಿಗೆ ಹೋದವಳಿಗೆ ಅಲ್ಲಿ ನಿಲ್ಲಲಾಗಲೇ ಇಲ್ಲ. ರಾತ್ರಿಯಾಗುತ್ತಿದ್ದಂತೆ ಭಯವಾಗಿ ಮತ್ತೆ ನಗರಕ್ಕೇ ಧಾವಿಸಿದ್ದಳು.

ಆ ರಾತ್ರಿ ಮುಗಿದು ಮಾರನೆಯ ದಿನ ಸುತ್ತುತ್ತಿದ್ದಾಗ ಆ ಸರ್ಕಲ್ ಅದೇಕೋ ಅವಳನ್ನು ಅಲ್ಲೇ ಹಿಡಿದಿಟ್ಟಿತು. ಕತ್ತಲಾದ ಮೇಲೂ ಸರ್ಕಲ್ಲಿನ ಬಳಿಯೇ ಮಬ್ಬು ಬೆಳಕಿನಲ್ಲಿ ಕೂತಿದ್ದವಳನ್ನು ಲಂಪಟ ಕಣ್ಣುಗಳು ಹರಿದು ತಿನ್ನತೊಡಗಿದವು. ತುತ್ತಿನ ದಾರಿಯಲ್ಲಿ, ಆಗಷ್ಟೇ ಪರಿಚಯವಾಗಿ ಮುಂದಿನ ಕ್ಷಣಗಳಲ್ಲೇ ಗುರುತಿಲ್ಲದವಾಗಿ ಹೋಗಿಬಿಡುವ ಸಂಬಂಧಗಳ ಸುಲಿದಾಟದ ರಾತ್ರಿಗಳು ಅಲ್ಲಿಂದ ಮುಂದೆ ಶುರುವಾದವು.

black rainಸಿಟ್ಟನ್ನು ಕುಂಯ್ ಕುಂಯ್ ಎಂದು ಮಾತ್ರವೇ ವ್ಯಕ್ತಪಡಿಸಬಲ್ಲವಳಾಗಿದ್ದ, ನೋವಾದಾಗ ಗಂಟಲಿಂದ ವಿಕಾರ ಸ್ವರವನ್ನಷ್ಟೇ ಹೊರಡಿಸಬಲ್ಲವಳಾಗಿದ್ದ ಕಾಣಿಗೂ ವಂಚನೆಯಾಗುವುದು ತಪ್ಪಲಿಲ್ಲ. ಎಲ್ಲ ಬಗೆಯ ವಿಕೃತಿಗಳಿಗೆ, ಪೀಡನೆಗಳಿಗೆ, ಬಲಾತ್ಕಾರಕ್ಕೆ ಸಿಕ್ಕಿ ನಲುಗಬೇಕಾಯಿತು. ರೋಗವೂ ಅಂಟಿತು. ನೆರವಾದಂತೆ ಕಂಡವರು ಅವಳನ್ನು ಅನುಭವಿಸುವ ಉದ್ದೇಶ ತೀರಿಸಿಕೊಂಡರು.

ದೇಹ ಪೂರ್ತಿ ಸೋತು ಹೋಗಿದೆ ಎಂಬಂಥ ಸ್ಥಿತಿಯಲ್ಲೂ ಹೊಟ್ಟೆಯ ಹಸಿವು ಮಾತು ಕೇಳುತ್ತಿರಲಿಲ್ಲ. ಅದನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಸೆರಗು ಹಾಸುತ್ತಿದ್ದವಳನ್ನು ಅನುಭವಿಸಿದವರು ಪುಡಿಗಾಸೂ ಬಿಚ್ಚದೇ ಎದ್ದು ನಡೆದುಬಿಟ್ಟರೆ? ಅಂಥ ಧೂರ್ತತನವನ್ನು ವಿರೋಧಿಸಿದಾಗಲೇ ಅದಾವನದೋ ಬೂಟುಗಾಲಿನ ಒದೆತಕ್ಕೆ ಒದ್ದಾಡಿ ಬಿದ್ದಳು. ಎಲ್ಲಿಂದಲೋ ಏನನ್ನೋ ಹುಡುಕಿಕೊಂಡು ಬಂದವಳ ಬದುಕು ಏನೋ ಆಗಿ, ಯಾರೂ ಕೇಳದ ಸಾವಾಗಿ ಹೋದಳು ಕಾಣಿ.

ಅಮಾಯಕ ಪ್ರೀತಿಯಿಂದ ಬದುಕಿಗೆ ಮುಖ ಮಾಡಿದ್ದ ಕಾಣಿಯನ್ನು ಅವಳು ಮತ್ತೆದ್ದು ಬರಲಾರದ ಪ್ರಪಾತಕ್ಕೆ ಅತ್ಯಂತ ಸುಲಭವಾಗಿ ತಳ್ಳಿಬಿಟ್ಟ ಸಮಾಜ, ಅವಳನ್ನು ಮರಳಿ ಬದುಕಿಗೆ ಕರೆಯುವುದಿಲ್ಲ. ಅವಳ ದೇಹವನ್ನು ಇಂಚಿಂಚಾಗಿ ತಿಂದವರಾರನ್ನೂ ಅವಳ ಹೀನ ಸಾವು ಕಾಡುವುದೇ ಇಲ್ಲ. ನಿರಂಜನರು “ಕೊನೆಯ ಗಿರಾಕಿ” ಬರೆದದ್ದು ಪ್ರಗತಿಶೀಲ ಪಂಥ ಚಾಲ್ತಿಯಲ್ಲಿದ್ದ ಕಾಲದಲ್ಲಿ. ದಶಕಗಳ ಮೇಲೆ ದಶಕಗಳು ಆಮೇಲೆ ಬಂದು ಹೋಗಿವೆ. ಕಾಣಿಯಂಥ ಎಷ್ಟೋ ಕಾಣಿಯರು ಬೆಂಗಳೂರಿನಂಥ ಮಹಾನಗರಿಯ ನರಕವನ್ನು ಸೇರುತ್ತಲೇ ಇರುತ್ತಾರೆ ನಿತ್ಯವೂ. ಇವರ ಸಾವು ಯಾರಿಗೂ ಒಂದು ಪುಡಿ ಸುದ್ದಿಯೂ ಅಲ್ಲ. ಆದರೆ ಕಥೆ ಕಾಣಿಯ ದುಃಖಕ್ಕೆ ಕಿವಿಗೊಟ್ಟು ಕೂರುವ ವ್ಯವಧಾನಿ; ಆಕೆಯ ಕ್ರೂರ ಸಾವನ್ನು ಅವಳ ಕಟ್ಟಕಡೆಯ ಉಸಿರಿನವರೆಗೂ ಸಾಕ್ಷಿಯಾಗಿದ್ದುಕೊಂಡು ಕಾಣುವ, ಹೀಗಾಯಿತು ಎಂದು ದಾಖಲಿಸುವ ಆತ್ಮಸಾಕ್ಷಿ. ಕಟುವಾಸ್ತವದ ಎಷ್ಟೆಲ್ಲ ಒಳಸುಳಿಗಳನ್ನು ನಿರಾಡಂಬರದ ಭಾಷೆಯಲ್ಲಿ ಹೇಳುವ ಆ ಕಥೆ ಮುಕ್ತಾಯವಾಗುವುದು ಹೀಗೆ;

“ಕಾಣಿಯ ದೇಹದ ಮೇಲೆ ಎತ್ತರದಲ್ಲಿ ಗಿಡುಗವೊಂದು ಸುತ್ತ ಸುತ್ತು ಬರುತ್ತಿತ್ತು. ಅದನ್ನೇ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು. ಸುತ್ತು ಸುತ್ತು ಬರುತ್ತಲೇ ಇತ್ತು ಗಿಡುಗ; ಕೆಳಗೆ ನೋಡುತ್ತ.”

ಕಥೆಗಾಗಿ ಮಾತ್ರವಲ್ಲ; ಕೈ ತಪ್ಪುತ್ತಿರುವ ಬದುಕನ್ನು ಉಳಿಸಿಕೊಳ್ಳಲು ಚಡಪಡಿಸಿದ್ದಳಲ್ಲ, ಹೋರಾಡಿದ್ದಳಲ್ಲ, ಮಮಕಾರ ಹೀನ ಸ್ವಾರ್ಥಗಳಿದಿರಿನ ಅಸಹಾಯಕತೆಯ ಮೂಕ ಪ್ರತೀಕದಂತಿದ್ದಳಲ್ಲ, ಅಂಥ ಕಾಣಿಗಾಗಿಯೂ ಓದಬೇಕಾದ ಕಥೆ ಇದು. ಓದಿ ಮುಗಿಸಿದ ನಂತರ ಹೃದಯ ಕನಲಿದಂತಾದರೆ, ಕಂಬನಿಯ ಸೆಲೆಯೆಲ್ಲೋ ಕಲಕಿದಂತಾದರೆ ಅದಷ್ಟೇ ಆ ಕಾಣಿಯ ಭಾಗ್ಯ. ಅದನ್ನಾದರೂ ನೋಡಲು ಅವಳಿರಬೇಕಿತ್ತು ಎನಿಸುತ್ತದೆ.

ಅವಳಿಲ್ಲ.

‍ಲೇಖಕರು admin

November 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. padma bhat

    kaaniya badukina bagge odutta gottillade kannanchalli neeu jaari bittitu..sothaaga samaja badukige kareyuvudila annodantu houdu..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: