ಎಚ್ ಆರ್ ನವೀನ್ ಕುಮಾರ್
ಅಂದು ಫೆಬ್ರವರಿ 13, 2015. ಹಿಂದಿನ ದಿನ ಬೆಂಗಳೂರಿನಲ್ಲಿ ನಡೆದ ಅಂಗನವಾಡಿ ನೌಕರರ ಐತಿಹಾಸಿಕ ಹೋರಾಟ ಮತ್ತು ಕನರ್ಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸಭೆಯನ್ನು ಮುಗಿಸಿ ಹಾಸನಕ್ಕೆ ಹಿಂದಿರುಗಿದಾಗ ತಡರಾತ್ರಿಯಾಗಿತ್ತು. ಬೆಳಗ್ಗಿನ ಜಾವ 7 ಗಂಟೆಗೆ ಬೇಲೂರು ತಾಲ್ಲೂಕಿನ ಅಡವಿ ಬಂಟೇನಹಳ್ಳಿಯಿಂದ ಪೋನ್ ಬಂತು. ಅತ್ತಕಡೆಯಿಂದ ಮಾತನಾಡುತ್ತಿದ್ದವರ ಧ್ವನಿಯಲ್ಲಿ ಏನೋ ಆತಂಕ, ದುಗುಡ, ಗಾಬರಿ ಮನೆಮಾಡಿತ್ತು. “..ಸರ್, ನಮ್ಮ ಜಮೀನುಗಳ ಮೇಲೆ ಅರಣ್ಯ ಇಲಾಖೆಯವರು ಜೆಸಿಬಿ ಯಂತ್ರವನ್ನು ತಂದು ದೌರ್ಜನ್ಯ ಮಾಡುತ್ತಿದ್ದಾರೆ. ನಾವು ಬೆಳೆದಿರುವ ಫಸಲು ಕೊಡುತ್ತಿರುವ ತೆಂಗಿನ ಗಿಡಗಳನ್ನು ಹಾಳುಮಾಡಿದ್ದಾರೆ, ಹೊಲದಲ್ಲಿರುವ ಜೋಳವನ್ನೆಲ್ಲ ನಾಶ ಮಾಡಿದ್ದಾರೆ. ದಯವಿಟ್ಟು ಕೂಡಲೇ ಊರಿಗೆ ಬನ್ನಿ” ಎಂದು ಹೇಳಿದರು. ತಕ್ಷಣ ಕೆಲವು ಸಂಗಾತಿಗಳ ಜೊತೆ ಮೋಟರ್ ಸೈಕಲ್ಲಿನಲ್ಲಿ ಬಂಟೇನಳ್ಳಿಗೆ ಹೊರಟೆವು. ಅಲ್ಲಿ ಭೂಮಿಯನ್ನು ತೆರವುಗೊಳಿಸಲು ತಯಾರಾಗಿ ನಿಂತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಬಡ ರೈತರು ಯಾವುದೇ ಕಾರಣಕ್ಕೂ ಸಾಗುವಳಿ ಮಾಡಿರುವ ಭೂಮಿಯನ್ನು ಬಿಟ್ಟುಕೊಡಲು ತಯಾರಿಲ್ಲ, ಎಂದು ಹೇಳಿ ಕೈಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ (ಕನರ್ಾಟಕ ಪ್ರಾಂತ ರೈತ ಸಂಘಕ್ಕೆ ಸಂಯೋಜನೆಗೊಂಡಿರುವ) ಕೆಂಬಾವುಟವನ್ನು ಹಿಡಿದು ಶಾಂತ ರೀತಿಯಲ್ಲಿ ಹೋರಾಟಕ್ಕೆ ಕುಳಿತೆವು.
ಜೆಸಿಬಿ ಯಂತ್ರಕ್ಕೆ ಎದೆಕೊಟ್ಟು ನಿಲ್ಲುವ ಕೆಚ್ಚು-
ಈ ಬೆಳವಣಿಗೆಯಿಂದ ವಿಚಲಿತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೋಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಮತ್ತೊಂದಷ್ಟು ಸಿಬ್ಬಂದಿಗಳನ್ನು ಕರೆಸಿಕೊಂಡರು. ಆದರೂ ಇದ್ಯಾವುದಕ್ಕೂ ಜಗ್ಗದ ರೈತರು ಸಕರ್ಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಹೊತ್ತು ಕಳೆದಂತೆಲ್ಲ ಅವರ ದೃಢತೆ ಹೆಚ್ಚುತ್ತಿತ್ತು. ಮಧ್ಯಾಹ್ನದ ಸಮಯ ಆದ ನಂತರ ಸ್ಥಳದಲ್ಲಿಯೇ ಒಲೆ ಹಚ್ಚಿ ಅಡುಗೆಯನ್ನು ತಯಾರಿಸಲು ಪ್ರಾರಂಭಿಸಿದ ಮೇಲೆ ಪರಿಸ್ಥಿತಿ ಸಂಪೂರ್ಣವಾಗಿ ಪ್ರತಿಭಟನಾಕಾರರ ಹಿಡಿತಕ್ಕೆ ಬಂತು. ಈ ಮಧ್ಯದಲ್ಲಿ ಜೆಸಿಬಿ ಯಂತ್ರವನ್ನು ಚಾಲೂ ಮಾಡಿ ತೆರವು ಕಾಯರ್ಾಚರಣೆಗೆ ಮುಂದಾದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ನಂತರ ಎಲ್ಲ ರೈತರು ಜೆಸಿಬಿ ಯಂತ್ರವನ್ನು ತಡೆದು ಅದರ ಮುಂದೆಯೇ ಪ್ರತಿಭಟನೆ ಮಾಡಲು ಮುಂದಾದರು. ಅನ್ಯಾಯದ ವಿರುದ್ಧ ಜೆಸಿಬಿ ಯಂತ್ರಕ್ಕೆ ಎದೆಕೊಟ್ಟು ನಿಲ್ಲುವ ಕೆಚ್ಚು-ನ್ಯಾಯಬದ್ಧ ಪ್ರತಿರೋಧ ಬಿಟ್ಟರೆ ಪ್ರತಿಭಟನಾಕಾರರಿಂದ ಯಾವುದೇ ರೀತಿಯ ಅಹಿತಕರ ಪ್ರತಿಕ್ರಿಯೆ ಇರಲಿಲ್ಲ. ಸಂಜೆ 6 ಗಂಟೆಯಾದ ನಂತರ ಅಸಹಾಯಕರಾಗಿದ್ದ ಅಧಿಕಾರಿಗಳು ಜೆಸಿಬಿ ಯಂತ್ರದ ಸಮೇತ ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ವಾಪಸ್ ಹೊರಟು ಹೋದರು.
ತಡರಾತ್ರಿ ಕತ್ತಲ ಹೊತ್ತಲ್ಲಿ ಬಂಧನ..
ನಾವುಗಳು ವಾಪಸ್ ಹಾಸನಕ್ಕೆ ಬಂದೆವು. ರಾತ್ರಿ 9 ಗಂಟೆಗೆ ರೈತಸಂಘದ ಕಛೇರಿಯಲ್ಲಿ ಸಭೆ ಮಾಡುತ್ತಿರುವಾಗ ಬಂಟೇನಹಳ್ಳಿಯಿಂದ ದೂರವಾಣಿಯೊಂದು ಬಂತು ‘ಸರ್ ನೀವು ಪ್ರತಿಭಟನೆ ಮುಗಿಸಿ ವಾಪಸ್ ಹೋದ ಮೇಲೆ ನಮ್ಮ ಊರಿನ ವಿರೂಪಾಕ್ಷನನ್ನು ಪೋಲೀಸರು ಕರೆದುಕೊಂಡು ಹೋಗಿದ್ದಾರೆ ಏನಾಗಿದೆ ಎಂದು ದಯವಿಟ್ಟು ವಿಚಾರಿಸಿ’ ಎಂದರು, ಕೂಡಲೇ ನಾನು ಹಾಸನ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್ಐ ಭಾನುರವರ ಮೋಬೈಲಿಗೆ ಸಂಪಕರ್ಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ, ತಕ್ಷಣ ಠಾಣೆಯ ಸ್ಥಿರ ದೂರವಾಣಿಗೆ ಸಂಪಕರ್ಿಸಿದಾಗ ಅವರು ಠಾಣೆಯಲ್ಲಿಲ್ಲ ಎಂಬ ಸುದ್ದಿ ತಿಳಿಯಿತು. ಸರಿ ಏನು ಮಾಡುವುದೆಂದು ಯೋಜಿಸುತ್ತಾ ಕುಳಿಸಿರುವಾಗ ಸಿನಿಮೀಯ ರೀತಿಯಲ್ಲಿ 8 ರಿಂದ 10 ಜನ ಪೋಲೀಸರು ನಮ್ಮ ಕಛೇರಿಯ ಸುತ್ತ ಇರುವ ಮೂರು ರಸ್ತೆಗಳ ಮೂಲಕ ಜೀಪು ಮತ್ತು ಬೈಕ್ಗಳಲ್ಲಿ ಬಂದು ದಡದಡನೆ ಕಛೇರಿಗೆ ಮುತ್ತಿಗೆ ಹಾಕಿದರು. ಇದರ ನೇತೃತ್ವವನ್ನು ಎಸ್ಐ ಭಾನು ವಹಿಸಿದ್ದರು. ಕಛೇರಿಗೆ ಬಂದವರೇ ಸ್ಟೇಷನ್ನಿಗೆ ನಡೆಯಿರಿ ಎಂದರು, ಕೂಡಲೇ ಕಛೇರಿಯಲ್ಲಿದ್ದ ಧಮರ್ೇಶ್ ಮೇಡಂ ಏನಿದು, ಏನು ವಿಷಯ ಎಂದು ಕೇಳಿದರೆ ಅರಣ್ಯ ಇಲಾಖೆಯವರು ನವೀನ್ಕುಮಾರ್ ಮತ್ತು ಅವರ ಜೊತೆಯಲ್ಲಿದ್ದವರ ಮೇಲೆ ದೂರು ನೀಡಿದ್ದಾರೆ, ಈಗಾಗಲೇ ಎಫ್ಐಆರ್ ಧಾಖಲಾಗಿದೆ ಬಂಧಿಸಲೇಬೇಕು ಎಂದು ಹೇಳಿ ನಮ್ಮನ್ನು ಬಂಧನಕ್ಕೊಳಪಡಿಸಿದರು. ಇವರಿಗೆ ನಮ್ಮನ್ನು ಮೋಸದಿಂದ ಬಂಧಿಸುವ ಉದ್ದೇಶವಿಲ್ಲದಿದ್ದರೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ಬಂಧಿಸಬೇಕಾಗಿತ್ತು ಅಥವ ಮರುದಿನ ಬೆಳಗ್ಗೆ ಬಂಧಿಸಬಹುದಿತ್ತು. ಆದರೆ ನಮ್ಮನ್ನು ಜೈಲಿಗೆ ಕಳುಗಿಸಲೇ ಬೇಕೆಂಬ ಉದ್ದೇಶ ಅವರದ್ದಾಗಿದ್ದರಿಂದ, ಕನಿಷ್ಟ ನಾಲ್ಕೈದು ದಿನ ಜೈಲಿನಲ್ಲಿರುವಂತೆ ರಜೆಗಳು ಹೆಚ್ಚಿರುವ ಅವಧಿ ನೋಡಿಕೊಂಡು ಯೋಜಿಸಿ ನಮ್ಮನ್ನು ಆ ದಿನ ತಡರಾತ್ರಿ ಕತ್ತಲ ಹೊತ್ತಲ್ಲಿ ಬಂಧಿಸಿದರು. ಬಂಧಿಸಿ ಠಾಣೆಗೆ ಕರೆದೊಯ್ದರು ಅಷ್ಟರೊಳಗಾಗಲೇ ವಿರೂಪಾಕ್ಷರನ್ನು ಬಂಧಿಸಿ ಕರೆತರಲಾಗಿತ್ತು. ನ್ಯಾಯಾಧೀಶರ ಬಳಿ ನಮ್ಮನ್ನು ಕರೆದೊಯ್ಯುವ ಮುನ್ನ ಠಾಣೆಯಲ್ಲಿ ಪೂರೈಸಬೇಕಾಗಿದ್ದ ಎಲ್ಲ ವಿಧಿ ವಿಧಾನಗಳನ್ನು ಪೂರೈಸಿ, ಆರೋಗ್ಯ ತಪಾಸಣೆಗೆ ಸಕರ್ಾರಿ ಆಸ್ಪತ್ರಗೆ ಕರೆದೊಯ್ಯಲು ನಮ್ಮಗಳ ಕೈಗೆ ಬೇಡಿ ತೊಡಿಸಲು ಮುಂದಾದರು ಆಗ ಅದನ್ನು ಪ್ರತಿಭಟಿಸಿದ ನಾವುಗಳು ನಾವು ರಾಜಕೀಯ ಕೈದಿಗಳು, ಯಾವುದೇ ಅಪರಾಧವನ್ನು ಮಾಡಿದವರಲ್ಲ ನವು ಬೇಡಿ ಹಾಕಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಾಗ ಇದರಿಂದ ವಿಚಲಿತರಾದ ಪೋಲೀಸರು ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಅಂತಿಮವಾಗಿ ನಮ್ಮನ್ನು ಬೇಡಿಯಾಕದೇ ಆಸ್ಪತ್ರೆಗು ಮತ್ತು ನ್ಯಾಯಾಧೀಶ ಮನೆಗು ಕರೆದೊಯ್ದರು.
ನಮ್ಮನ್ನು `ನ್ಯಾಯಾಂಗ ಬಂಧನ’ಕ್ಕೆ ಒಪ್ಪಿಸಿದ ಮೇಲೆ ಹಾಸನ ಜಿಲ್ಲಾ ಉಪ ಕಾರಾಗೃಹಕ್ಕೆ ರಾತ್ರಿ 11.30 ಕ್ಕೆ ಕರೆದುಕೊಂಡು ಹೋದರು. ನನಗೆ ವೈಯಕ್ತಿಕವಾಗಿ ಇದು ಎರಡನೇ ಭಾರಿಯ ಸೆರೆಮನೆವಾಸ. ಹತ್ತು ವರ್ಷಗಳ ಹಿಂದೆ ಹಾಸನದಲ್ಲಿಯೇ ರೈತರನ್ನು ಆತ್ಮಹತ್ಯೆಗೆ ದೂಡಿದ್ದ `ಸಿಕ್ಕಿಂ ಆನ್ಲೈನ್ ಲಾಟರಿ’ಯ ವಿರುದ್ದ ಹೋರಾಟವನ್ನು ನಡೆಸಿದಾಗ, 35 ಜನರೊಂದಿಗೆ ನಮ್ಮನ್ನು ಬಂಧಿಸಿ ಇದೇ ಜೈಲಿನಲ್ಲಿ ಮೂರು ದಿನಗಳ ಕಾಲ ಇಟ್ಟಿದ್ದರು. ಆ ಸಂದರ್ಭದಲ್ಲಿ ನಮ್ಮ ಸಂಖ್ಯೆ ಹೆಚ್ಚಿದ್ದಿದ್ದರಿಂದ ನಮ್ಮನ್ನೇ ಪ್ರತ್ಯೇಕವಾಗಿ ಇರಿಸಲಾಗಿತ್ತು. ಉಳಿದ ಜೈಲಿನ ಕೈದಿಗಳ ಜೊತೆ ಬೆರೆಯುವ ಅವಕಾಶ ಸಿಕ್ಕಿರಲಿಲ್ಲ, ಆದರೆ ಈಗ ನಾನು, ಪೃಥ್ವಿ, ರಾಘವೇಂದ್ರ ಮತ್ತು ವಿರೂಪಾಕ್ಷ ನಾಲ್ಕೇ ಜನ ಇದ್ದಿದ್ದರಿಂದ ನಮ್ಮನ್ನು ಇತರೆ ಕೈದಿಗಳ ಸೆಲ್ಲಿನಲ್ಲೆ 6 ದಿನಗಳ ಕಾಲ ಉಳಿಸಿದ್ದರು.

ಆಹಾ ! ಎಂತಹ ಮನಪರಿವರ್ತನೆ !!!
ಜೈಲುಗಳ ಕಲ್ಪನೆಯೇ ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸಿ ಆ ಸಮಯದಲ್ಲಿ ಅವರ ಮನಪರಿವರ್ತನೆ ಮಾಡಿ ಮತ್ತೆಂದೂ ಅವರು ಅಪರಾಧದ ಕಡೆಗೆ ಸುಳಿಯದಂತೆ ಮಾಡುವುದು. ಆದರೆ 6 ದಿನಗಳು ಈ ಜೈಲುವಾಸವನ್ನು ಅನುಭವಿಸಿದ ಮೇಲೆ ಇದೆಲ್ಲವು ಬರಿ ಮಾತಿಗಷ್ಟೆ. ಇಲ್ಲಿ ನಡೆಯುವುದೆಲ್ಲ ಅದಕ್ಕೆ ತದ್ವಿರುದ್ದವಾದದ್ದು, ಅಮಾಯಕರು ಜೈಲಿಗೆ ಪ್ರವೇಶಿಸಿ ಹೊರಹೋಗುವಾಗ ಹತ್ತಾರು `ವಿದ್ಯೆ’ಗಳನ್ನು ಕರಗತ ಮಾಡಿಕೊಂಡು ಅಪರಾಧಮಾಡಲು ಅಗತ್ಯವಿರುವ ಎಲ್ಲ `ಶಿಕ್ಷಣ’ವನ್ನು ಪಡೆದು ಜೈಲಿನಿಂದ ಪದವೀಧರರಾಗಿ ಹೊರಹೋಗುತ್ತಾರೆ. ಇಷ್ಟು ಕೇಳಿದ ಮೇಲೆ ನಿಮಗೆ ಈಗಾಗಲೇ ಜೈಲಿನ ಒಳಗಿನ ವ್ಯವಸ್ಥೆ ಮತ್ತು ವಾತಾವರಣದ ಬಗ್ಗೆ ಒಂದು ಕಲ್ಪನೆ ಮೂಡುತ್ತಿರಬಹುದೆಂದು ನಾನು ಭಾವಿಸಿದ್ದೇನೆ. ಜೈಲಿನ ಹೊರಗಿದ್ದು ನಾನು ಕಳೆದ 34 ವರ್ಷಗಳಲ್ಲಿ ನೋಡಿ ಅನುಭವಿಸಿದ ಪ್ರಪಂಚವೇ ಒಂದಾದರೆ-ನಾಲ್ಕು ಗೋಡೆಗಳ ಮಧ್ಯೆ ಇರುವ ಜೈಲಿನ ಒಳಗಡೆಯ ಪ್ರಪಂಚವೇ ಒಂದು. ಹೊರ ಜಗತ್ತಿನಲ್ಲಿ ನಡೆಯುವುದೆಲ್ಲವೂ ಇಲ್ಲಿಯೂ ನಡೆಯುತ್ತದೆ. ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಹೊರ ಜಗತ್ತಿನಲ್ಲಿ ನಡೆಯುವುದೆಲ್ಲ ಎಲ್ಲರಿಗೂ ಜಗಜ್ಜಾಹಿರವಾದರೆ ಎಲ್ಲರಿಗೂ ಗೊತ್ತಿರುತ್ತದೆಯಾದರೆ, ಜೈಲಿನ ಒಳಗಡೆಯ ಪ್ರಪಂಚದಲ್ಲಿ ನಡೆಯುವುದು ಹೆಚ್ಚಾಗಿ ಯಾರಿಗೂ ತಿಳಿಯುದಿಲ್ಲ, ಅಥವಾ ತಮಗೆ, ಯಾರಿಗೂ ಇದು ತಿಳಿದಿಲ್ಲ ಎಂಬಂತೆ ನಮ್ಮ ಆಡಳಿತ, ವ್ಯವಸ್ಥೆ ಹುಸಿ ನಾಟಕವಾಡುತ್ತದೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ !!
ಒಂದು `ಕರಿ ಚೆಂಡು’, ಇನ್ನೊಂದು `ಬಿಳಿ ಚೆಂಡು’
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳನ್ನಾಗಲಿ, ಆರೋಪಿಗಳನ್ನಾಗಲಿ ಅಥವಾ ಅಪರಾಧಿಗಳನ್ನಾಗಲಿ ಅವರನ್ನು ಮನುಷ್ಯರೆಂದು ಭಾವಿಸಿ ನಡೆಸಿಕೊಳ್ಳುವುದು ಅತ್ಯಂತ ಅಪರೂಪ. ಇಲ್ಲಿ ಕೊಡುವ ಊಟ, ತಿಂಡಿ ಇವುಗಳನ್ನು ತಿನ್ನುವ ಇವರು ದೈಹಿಕವಾಗಿ, ಮಾನಸಿಕವಾಗಿ ಅತ್ಯಂತ ದುರ್ಬಲರಾಗಿರುತ್ತಾರೆ. ಮಾತ್ರವಲ್ಲ ಇಲ್ಲಿ ಕೊಡುವ ಊಟ ಮತ್ತು ತಿಂಡಿಯ ಸಮಯವಿದೆಯಲ್ಲ ಅದು ಹೊರಗಿನ ಪ್ರಪಂಚಕ್ಕೆ ವ್ಯತಿರಿಕ್ತವಾಗಿರುತ್ತದೆ. ಯಾರಾದರೂ ವಿದೇಶದಲ್ಲಿದ್ದರೆ ಅವರ ಸಮಯ ಮತ್ತು ನಮ್ಮ ಸಮಯದಲ್ಲಿ ವ್ಯತ್ಯಾಸವಿರುತ್ತದಲ್ಲಾ ಹಾಗೆ. ಬೆಳಗ್ಗೆ 7 ಗಂಟೆಗೆ ತಿಂಡಿ ಕೊಡುತ್ತಾರೆ, ಬೆಳಗ್ಗೆ 10 ಗಂಟೆಗೆ ಮಧ್ಯಾಹ್ನದ ಊಟ ಕೊಡುತ್ತಾರೆ ಮತ್ತು ಸಂಜೆ 5 ಗಂಟೆಗೆ ರಾತ್ರಿಯ ಊಟವನ್ನು ಕೊಡುತ್ತಾರೆ. ಊಟ ಎಂದರೆ ಒಂದು `ಕರಿ ಚೆಂಡು’, ಇನ್ನೊಂದು `ಬಿಳಿ ಚೆಂಡು’. ಇದು ಆಟವಾಡುವ ಚೆಂಡಲ್ಲ. ಹೊಟ್ಟೆಯ ಹಸಿವಿನೊಂದಿಗೆ ಸಂಘರ್ಷ ಮಾಡುವ ಊಟದ ಚೆಂಡು. ಕಪ್ಪು ಚೆಂಡು- ರಾಗಿಯ ಮುದ್ದೆ, ಬಿಳಿಯ ಚೆಂಡು- ಅನ್ನದ ಮುದ್ದೆ. ಇದಕ್ಕೆ ಕೊಡುವ ಸಾಂಬಾರಿನಲ್ಲಿ ಅದರ ರುಚಿ-ಗಿಚಿ ಕೇಳುವಂತಿಲ್ಲ. ತರಕಾರಿಗಳು, ಎಣ್ಣೆ, ಬೇಳೆ ಇವೆಲ್ಲವನ್ನು ದುಬರ್ೀನು ಹಾಕಿಕೊಂಡು ಹುಡುಕಿದರೂ ಸಿಗುವುದಿಲ್ಲ. ಇಂಥ ಆಹಾರದಿಂದ ಮುಕ್ತಿ ಪಡೆಯಲೆಂದೆ ಸ್ವತಃ ಕೈದಿಗಳು ಜೈಲಿನ ಸೆಲ್ಲಿನೊಳಗೆಯೇ ಅಡುಗೆ ಮಾಡಿಕೊಳ್ಳುವ ಕೆಲವು ತಂತ್ರಗಳನ್ನು ಅವಿಷ್ಕಾರ ಮಾಡಿಕೊಂಡಿದ್ದಾರೆ. ಇಲ್ಲಿ ವಾಸವಿರುವ 347 ಕೈದಿಗಳಿಗೆ ಅಡುಗೆ ಮಾಡಲೆಂದು ಒಂದು ಅಡುಗೆ ಕೋಣೆ ಇದೆ. ಈ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುವವರ್ಯಾರು ಸಂಬಳ ಪಡೆಯುವ ಬಾಣಸಿಗರಲ್ಲ. ಬದಲಾಗಿ ಆರೋಪಿಗಳಾಗಿ ಬಂದು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳೇ ಇಲ್ಲಿ ಅಡುಗೆ ಭಟ್ಟರು. ಮಾತ್ರವಲ್ಲ, ಕಛೇರಿ ಕೆಲಸ, ಸ್ವಚ್ಚತೆಯ ಕೆಲಸ, ಉಳಿದ ಎಲ್ಲ ರೀತಿಯ ಕೆಲಸಗಳಿಗೂ ಕೈದಿಗಳೇ ಆಧಾರ. (ಅವರವರ ಅರ್ಹತೆ ಮತ್ತು ನಂಬಿಕೆಯ ಮೇಲೆ) ಇಲ್ಲಿ ಸಹಜವಾಗಿ ಒಂದು ಅನುಮಾನ ಮೂಡಿಯೇ ಮೂಡುತ್ತದೆ. ಹಾಗಾದರೆ ಜೈಲಿನಲ್ಲಿ ಇಂತಹ ಕೆಲಸಗಳಿಗೆ ಸಕರ್ಾರ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದಿಲ್ಲವೇ, ನೇಮಿಸಿಕೊಂಡರೆ ಅವರ ಕೆಲಸವೇನು. ಜೈಲಿನೊಳಗೆ ಅಡುಗೆ, ಸ್ವಚ್ಛತೆ ಇತ್ಯಾದಿ ಕೆಲಸಗಳ ಹೆಸರಿನಲ್ಲಿ ಈಗ ಯಾವುದೇ ಕೂಲಿ-ವೇತನ ಇತ್ಯಾದಿ ವೆಚ್ಚವನ್ನು ತೋರಿಸುತ್ತಿಲ್ಲವೇ ? ಸರಕಾರ ಈ ಬಾಬ್ತಿಗಾಗಿ ಹಣ ನೀಡುತ್ತಿಲ್ಲವೇ ? ನೀಡುತ್ತಿದ್ದರೆ ಅದು ಏನಾಗುತ್ತಿದೆ. ? ಇದರ ಕುರಿತು ಒಂದು ಅಧ್ಯಯನವೇ ನಡೆಯಬೇಕಿದೆ.
ದಿನದ 24 ಗಂಟೆಗಳಲ್ಲಿ ಒಟ್ಟು ಮೂರು ಗಂಟೆಗಳನ್ನು ಎರಡು ಭಾಗವನ್ನಾಗಿ ಮಾಡಿ ಕೈದಿಗಳನ್ನು ಸೆಲ್ಲಿನಿಂದ ಹೊರಕ್ಕೆ ಬಿಡುತ್ತಾರೆ. ಇನ್ನು ಉಳಿದ ಎಲ್ಲಾ ಸಮಯದಲ್ಲೂ ಎಲ್ಲರೂ ಸೆಲ್ಲಿನಲ್ಲಿಯೇ ಇರಬೇಕು. ಅದರ ಒಳಗಡೆಯಲ್ಲಿಯೇ ಶೌಚಾಲಯ, ಸ್ನಾನದ ವ್ಯವಸ್ಥೆ ಎಲ್ಲವೂ. ಬಳಕೆ ಮಾಡುವ ನೀರು, ಕುಡಿಯುವ ನೀರು ಎರಡೂ ಒಂದೇ ಪೈಪಿನಲ್ಲೇ ಬರುತ್ತದೆ. ಇವುಗಳಿಗೇನು ಪ್ರತ್ಯೇಕ ಕೊಠಡಿಗಳಿಲ್ಲ. 50 ಜನ ಮಲಗುವ ಒಂದು ಕೋಣೆಯಲ್ಲಿ ಸುಮಾರು 80 ಜನರಿರುತ್ತಾರೆ. ಈ ಜೈಲಿನ ಒಟ್ಟು ಸಾಮಥ್ರ್ಯ ಕೇವಲ 200 ಮಾತ್ರ. ಆದರೆ ಈ ಜೈಲಿನಲ್ಲಿ ನಾವುಗಳಿದ್ದಾಗ 347 ಜನ ಕೈದಿಗಳಿದ್ದರು. ಅಂದರೆ ಸಕರ್ಾರದ ಅಂದಾಜಿಗಿಂತಲೂ ಹೊರ ಪ್ರಪಂಚದಲ್ಲಿ ಅಪಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದರ್ಥ. ಇದಕ್ಕೆ ಪುಷ್ಟಿ ನೀಡುವಂತೆ ಜೈಲಿನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿ ಕಳೆದ 6 ತಿಂಗಳಿನಿಂದಲೂ ಅದೇ ಜೈಲಿನಲ್ಲಿ ವಾಸವಾಗಿರುವ ಒಬ್ಬನನ್ನು ಮಾತಿಗೆಳೆದರೆ ಅವನೆಂದ `’ಸರ್, ಕಳ್ಳತನ ನಮ್ಮ ಕಸುಬು ಅಲ್ಲ, ನಮಗೆ ವಿದ್ಯಾಭ್ಯಾಸ ಇಲ್ಲ, ನಮ್ಮ ಸ್ವಾಭಿಮಾನಕ್ಕೆ ತಕ್ಕಂತ ಕೆಲಸ ಎಲ್ಲಿಯೂ ಸಿಗಲಿಲ್ಲ, ದುಡಿದು ಬದುಕಲು ಒಂದು ತುಂಡು ಭೂಮಿಯೂ ಇಲ್ಲ. ಹೀಗಿರುವಾಗ ಬದುಕಿನ ಅನಿವಾರ್ಯತೆಗಾಗಿ ಕಳ್ಳತನದ ಕೆಲಸಕ್ಕೆ ಕೈಹಾಕಿದೆ. ಆದರೆ ನಾನು ಇದುವರೆಗೂ ಒಂದೇ ಬಾರಿ ಕಳ್ಳತನ ಮಾಡಿರುವುದು. ಜಿಲ್ಲೆಯಲ್ಲಿ ಬೇರೆ ಎಲ್ಲಿಯಾದರೂ ಕಳ್ಳತನ ನಡೆಯಲಿ ಪೋಲೀಸರು ಬಂದು ಮೊದಲು ನಮ್ಮನ್ನೇ ಅರೆಸ್ಟ್ ಮಾಡಿ ಜೈಲಿಗಟ್ಟುತ್ತಾರೆ. ನಾನು ಒಮ್ಮೆ ಕಳ್ಳನಾದ ಮೇಲೆ ಪೋಲೀಸರು ನನಗೆ ಶಾಶ್ವತ ಕಳ್ಳನ ಪಟ್ಟವನ್ನು ಕೊಟ್ಟು ಪದೇ ಪದೇ ಈ ಜೈಲಿಗೆ ವಿಶ್ರಾಂತಿಗೆಂದು ಕಳುಹಿಸುತ್ತಾರೆ.” ಎಂದನು.
ಕಾನೂನು ಬದ್ದ ಶುಲ್ಕ ಸಂಗ್ರಹವೋ ಎನ್ನುವಂತೆ…
ಈ ವ್ಯವಸ್ಥೆಯಲ್ಲಿ ಶೋಷಣೆ ಎಲ್ಲಿಯೂ ತಪ್ಪಿದ್ದಲ್ಲ. ಜೈಲಿನಲ್ಲಿ ನಾನಾ ರೀತಿಯ ಶೋಷಣೆ ನಡೆಯುತ್ತದೆ. ಜೈಲಿನೊಳಗೆ ಇಟ್ಟ ಮೊದಲನೇ ಹೆಜ್ಜೆಯಲ್ಲೇ ಇದರ ಅನುಭವವಾಗುತ್ತದೆ. ಜೈಲಿನ ಮುಖ್ಯ ಧ್ವಾರದ ಮೂಲಕ ಒಳ ಪ್ರವೇಶಿಸಿದ ಕೂಡಲೇ ಧ್ವಾರ ಪಾಲಕರಿಂದ ಹಿಡಿದು ಜೈಲಿನ ಒಳಗೆ ಕೆಲಸ ಮಾಡುವವವರೆಲ್ಲರೂ ಬರುವ ಕೈದಿಗಳಿಂದ ತಿಗಣೆಗಳು ರಕ್ತ ಹೀರಿದ ರೀತಿಯಲ್ಲಿ `ಲಂಚ’ವನ್ನು ಹೀರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಲಂಚದ ಹಣ ವಸೂಲಿ ಕೆಲಸವು ಇಲ್ಲಿ ಕಾನೂನು ಬದ್ದ ಶುಲ್ಕ ಸಂಗ್ರಹವೋ ಎನ್ನುವ ರೀತಿಯಲ್ಲಿ ನಡೆಯುತ್ತದೆ. ಅಷ್ಟು ನಿರ್ಲಜ್ಜೆಯಿಂದ ಇಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಅದೂ ಚಳುವಳಿಯಿಂದಾಗಿ ಜೈಲಿಗೆ ಬಂದಿರುವವರು ಎಂದು ಇವರು ಎಂಬುದು ಗೊತ್ತಿದ್ದೂ ಸಹ. ಇನ್ನೊಂದೆಡೆ ಸೆಲ್ಲಿನ ಒಳಗೆ ಸೇರಿಕೊಂಡರೆ ಅಲ್ಲಿರುವ ಹಿರಿಯ (ವಯಸ್ಸಿನಲ್ಲಿ, ಜೈಲುವಾಸದಲ್ಲಿ), ನಟೋರಿಯಸ್ ಮತ್ತು ಹೆಚ್ಚು ಅಪರಾಧ ಮಾಡಿರುವವರು ಪ್ರತಿ ಸೆಲ್ಲನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುತ್ತಾರೆ. ಅವರು ಹೇಳಿದ ಹಾಗೆ ಹೊಸಬರು ಮತ್ತು ಸಣ್ಣಪುಟ್ಟ ಅಪರಾಧ ಮಾಡಿದವರು, ಉಳಿದವರೆಲ್ಲ ಕೇಳಬೇಕು. ಇಲ್ಲದಿದ್ದರೆ ಅವರುಗಳು ಎಲ್ಲ ರೀತಿಯ ಶೋಷಣೆಯನ್ನು ಅನುಭವಿಸಬೇಕಾಗುತ್ತದೆ.
ಅನುಭವಗಳನ್ನು ಬಿಡಿಸಿಡುತ್ತಾ ಹೋದಂತೆಲ್ಲ ಎಳೆ ಎಳೆಯಾಗಿ ಸುರುಳಿ ಬಿಚ್ಚಿಕೊಳ್ಳುತ್ತಿದೆ.






ನಮಗೆ ಗೊತ್ತಿರದ ಲೋಕಗಳೆಷ್ಟೀ ಲೋಕದೊಳಗೆ!!