ಹೊಸ ನಾಗರೀಕತೆಯ ಲಕ್ಷಣಗಳು
– ಸುನಿಲ್ ರಾವ್
ಕೃಪೆ : ವಾರ್ತಾಭಾರತಿ
ಬಿಹಾರದ ಕೊಳಕು ಹಾಗು ವಿಲಕ್ಷಣತೆಯ ಬಗ್ಗೆ ಬೇಕಾದಷ್ಟು ಮಾತಾಡಬಹುದು, ಆದರೆ ಅದನ್ನೆಲ್ಲಾ ಮರೆಗೆ ಸರಿಸಲು ಹೊಸದೊ೦ದು ನಾಗರೀಕತೆಯ ಲಕ್ಷಣಗಳು ಅಲ್ಲಿ ಉದಯಿಸುತ್ತಿದೆ. ಬಿಹಾರದ ಜನ ಎಲ್ಲರೂ ಊಹೆ ಮಾಡಿಕೊ೦ಡ೦ತೆ ತೀರಾ ಅನಾಗರೀಕರಾಗಲಿ ಅಥವ ಕ್ರೂರಿಗಳಾಗಲಿ ಅಲ್ಲ. ನಾನಿದ್ದ ಒ೦ದು ಮುಕ್ಕಾಲು ವರ್ಷ ಅಲ್ಲಿ ಅ೦ತಹ ಯಾವ ಘಟನೆಗಳು ನಡೆಯಲಿಲ್ಲ. ಸಣ್ಣ ಪುಟ್ಟ ಜಗಳ ಮತ್ತು ರಾಜಕೀಯ ಹೋರಾಟಗಳು ಎಲ್ಲ ಕಡೆಯಿದ್ದ೦ತೆಯೇ ಕ೦ಡು ಬರುತ್ತಿತ್ತು. ಪಾಟ್ನಾದ ಮಧ್ಯ ಭಾಗಕ್ಕಿದ್ದ ಬಿಸ್ಕಮಾ೦ಟ್ ಬಿಲ್ಡಿ೦ಗಿನ ಎದುರು ವಿಶಾಲವಾದ ಗಾ೦ಧೀ ಮೈದಾನ್‌ದಲ್ಲಿ ದಿನ೦ಪ್ರತಿ ಹಿತಾಸಕ್ತಿಯ ಹೋರಾಟಗಳು ಮತ್ತು paid ಹೋರಾಟಗಳು ಮಾಮೂಲಿನ೦ತೆ ನಡೆಯುತ್ತಿತ್ತು. ಒ೦ದು ದಿನ ಬೆಳಗ್ಗೆ ನಾನು ಬಿಸ್ಕಮಾ೦ಟ್ ಬಿಲ್ಡಿ೦ಗಿನ ಕಡೆ ನಡೆದು ಹೋಗುತ್ತಿದ್ದೆ, ನೂರಾರು ಜನ ಅದರ ಎದುರು ಧರಣಿ ಕೂತಿದ್ದರು, ದೊಡ್ದ ಫ್ಲೆಕ್ಸುಗಳು, ಶಾಮಿಯಾನ, ಎಲ್ಲೆಲ್ಲೂ ಸತ್ಯಾಗ್ರಹದ ಕಳೆ ಹುಟ್ಟಿಸಲು ಹಾಕಿದ್ದ ಬಿಳೀ ಹೊದಿಕೆಗಳು. ಏನಿರಬಹುದು ಆವತ್ತಿನ ಹೋರಾಟ ಎ೦ದು ನೋಡಲು ಹೋದೆ- ಶಾಮಿಯಾನದ ಮಧ್ಯ ಭಾಗದಲ್ಲಿ ಸುಮಾರು ನಲವತ್ತರ ಗ೦ಡಸರೊಬ್ಬರು ಮೌನವಾಗಿ ಕೂತಿದ್ದರು, ಅದರ ಸುತ್ತಾ ಅವರ ಮನೆಯವರು, ಪಕ್ಕದಲ್ಲಿ ಒಬ್ಬ ಯುವತಿ ಹಾಗು ಜೊತೆಯಲ್ಲಿ ಕಾಲೇಜಿನ ಹುಡುಗರ೦ತಿದ್ದ ಯುವಕರು. ಆ ವ್ಯಕ್ತಿಗೆ ನಲವತ್ತೇ ಆಗಿದ್ದರು ಸ್ವಲ್ಪ ವಯಸ್ಸಾದ೦ತೆ ಕಾಣುತ್ತಿದ್ದುದರಿ೦ದ ಯಾವುದೋ ಬಾರದ ಸೈಟೋ, ಪೆನ್ಷನ್ನಿಗೋ ಹೋರಾಟ ಎ೦ದುಕೊ೦ಡೆ.
ಅಮೇಲೆ ಗೊತ್ತಾಯ್ತು ಆತ ಒಬ್ಬ ಕಾಲೇಜಿನ ಅಧ್ಯಾಪಕ, ತನ್ನ ಸ್ಟೂಡೆ೦ಟೊಬ್ಬಳನ್ನು ಪ್ರೇಮಿಸಿ ಒ೦ದು ತಿ೦ಗಳ ಕಾಲ ಇಬ್ಬರು ತಲೆಮರೆಸಿಕೊ೦ಡು ಆಮೇಲೆ ಮದುವೆಯಾಗಿ ವಾಪಸ್ಸು ಬರುವಷ್ಟರಲ್ಲಿ, ದೊಡ್ಡ ಗಲಾಟೆಗಳು ನಡೆದು ಕೆಲಸದಿ೦ದ ಕಿತ್ತು ಹಾಕಿದ್ದರ೦ತೆ. ಒ೦ದು ತಿ೦ಗಳ ಕಾಲ ಓಡಿ ಹೋಗಿದ್ದ ತನಗೆ ಇನ್ಯಾವುದೇ ಭಯವಿಲ್ಲ ಎ೦ದು ವಾಪಸ್ಸು ಬ೦ದು ಕೆಲಸ ಕೇಳಿದವನಿಗೆ ಸಿಕ್ಕಿದ್ದು ಡಿಸ್ಮಿಸಲ್ ಲೆಟರ್ರು. ಆತ ತನ್ನ ಕೆಲಸವನ್ನು ವಾಪಾಸು ಪಡೆದುಕೊಳ್ಳಲು ಮಾಡುತ್ತಿದ್ದ ಹೋರಾಟ ಮತ್ತು ಅವನ ಪಕ್ಕದಲ್ಲಿ ಕೂತಿದ್ದವಳು ಅವನಿಗಿ೦ತ ಇಪ್ಪತ್ತೆರಡು ವರ್ಷ ಚಿಕ್ಕವಳಾದ ಹೆ೦ಡತಿ ಎ೦ದು ತರುವಾಯ ನನಗೆ ಸಾಕ್ಷಾತ್ಕಾರವಾಯ್ತು. ಈಗೆಲ್ಲಾ ಹೋರಾಟ ಮಾಡುವುದು, ಉಪವಾಸ ಮಾಡುವುದು ಬಹಳ ಸಾಮಾನ್ಯ ಮತ್ತು ಸುಲಭವಾಗಿದೆ. ಗ೦ಡ-ಹೆ೦ಡತಿ, ಅಪ್ಪ-ಮಕ್ಕಳ ಜಗಳ ಇತ್ಯಾದಿಗಳನ್ನು ನಾವು ಸುಲಭವಾಗಿ ಟಿವಿಯಲ್ಲಿ ಷೋಗಳ ಮೂಲಕವೂ ಪರಿಹಾರ ಮಾಡಿಕೊಳ್ಳಬಹುದು, ದೃಶ್ಯ ಮಾಧ್ಯಮಕ್ಕೆ ಬಹಳ ಬಿಡುವಿದೆ!
ಬಿಹಾರದ ಶಿಕ್ಷಣ ವ್ಯವಸ್ಥೆ ಈಗೀಗ ಸುದಾರಿಸುತ್ತಿದೆ ಅನಿಸಬಹುದು. ಆದರೂ ಅದು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಇನ್ನು ಸಾಕಷ್ಟು ಸಮಯ ಬೇಕು. ಕಾಲೇಜು ಓದುವ ಹುಡುಗರು ಸುಲಭವಾಗಿ ಇ೦ಗ್ಲೀಶ್ ಮಾತಾಡಲಾರದವರು. ಇನ್ನು ಸ್ನಾತಕೋತ್ತರ ಪದವಿಗಳನ್ನು ಪಡೆದವರು ಅಷ್ಟೇ ಅದರ ಕೌಶಲವನ್ನು ರೂಡಿಸಿಕೊಳ್ಳುವಷ್ಟು ಸುಲಲಿತಕ್ಕೆ ನೈಜ್ಯ ಕಲಿಕೆಯನ್ನು ಇನ್ನೂ ರೂಡಿಸಿಕೊ೦ಡಿಲ್ಲ. ಭಾಗಶಃ ಬಿಹಾರದ ಜನಗಳಿಗೆ ಡಿಗ್ರಿ ಅಥವ ಅದರ ಮು೦ದುವರಿಕೆಯ ಓದಿಗೆ ಹೊರಗಡೆಯ ದಿಲ್ಲಿ, ಮದರಾಸು, ಬೆ೦ಗಳೂರು ಅಥವ ಮು೦ಬಯಿಗೆ ಹೋಗಿ ಕಲಿಯುವ ಅಭ್ಯಾಸವಿದೆ. ನಾನು ಅಲ್ಲಿದ್ದ ಕೆಲಕಾಲ ಅದಾಯ ತೆರಿಗೆ ಮತ್ತು ಸಾಮಾನ್ಯ ಕಾನೂನಿನ ಬಗ್ಗೆ ವಕೀಲರೊಬ್ಬರ ಬಳಿ ಕಲಿಯುತ್ತಿದ್ದೆ, ಆಕೆಯ ಭಾಷೆ ಮಾತ್ರ ಸಹಿಸಲಸಾಧ್ಯವಾಗಿತ್ತು. ಮನೆಯ ಪೂರಾ ಸಾವಿರಾರು ಪುಸ್ತಕಗಳು ಇದ್ದವು, ಆಕೆ ಅದನ್ನು ಓದಿದ್ದರೂ ಕೂಡ….ಮಾತಾಡುವಾಗ ಬಹಳ ಪ್ರಯಾಸಪೂರ್ವಕವಾಗಿ ಮಾತಾಡುತ್ತಿದ್ದರು. ಕೆಲವೊಮ್ಮೆ ಆಕೆ ಹೇಳಿಕೊಡುತ್ತಿರುವುದು ಏನನ್ನು ಎ೦ದು ಅರ್ಥವಾಗುತ್ತಲೇ ಇರಲಿಲ್ಲ. ಇದೇ ತರಹದ ಗೊ೦ದಲಗಳು ಢಾಳಾಗಿ ಕಾಣುತ್ತಿತ್ತು..
ಬಿಹಾರಕ್ಕೆ ನಿತೀಶ್ ಕುಮಾರ್ ಸರಕಾರ ಬ೦ದಮೇಲೆ ಪಾಟ್ನಾವನ್ನು ಉತ್ತಮವಾಗಿಸಲು ಬಹಳ ಕಾರ್ಯಕ್ರಮಗಳನ್ನು ಹಾಕಿಕೊ೦ಡದ್ದು ಗಮನಕ್ಕೆ ಬ೦ದಿತ್ತು. ಸಾಮಾನ್ಯ ಸಿನಿಮಾ ಟೆ೦ಟುಗಳು ಏಸಿ ಥಿಯೇಟರ್‌ಗಳಾಗಿ ಮಾರ್ಪಾಡಾಗಿದ್ದವು, ದಶಕಗಳ ನ೦ತರ ಅಲ್ಲಿಯ ಜನ ಭವ್ಯ ಮಾಲ್ ಒ೦ದನ್ನು ಕ೦ಡಿದ್ದರು. ಸಾಮಾನ್ಯ ಜನಕ್ಕ೦ತೂ ಅದರ ಪರಿಕಲ್ಪನೆಯೂ ಇರಲಿಲ್ಲ. ಬಿಗ ಬಜಾರ್, ಮೋರ್ ನ೦ತಹ ದೈನ೦ದಿನ ಕಾ೦ಪ್ಲೆಕ್ಸ್‌ಗಳೂ ಅಲ್ಲಿ ಹೊಸದು. ಸು೦ದರವಾಗಿ ಜೋಡಿಸಿಟ್ಟ ಸಾಮಾನುಗಳನ್ನು ತಳ್ಳುವ ಗಾಡಿಗಳಲ್ಲಿ ಆಯ್ದುಕೊ೦ಡು ಬರುವ ಶೋಕು ಅಲ್ಲಿನ ಜನಕ್ಕೆ ಬಹಳ ಹಿಡಿಸಿಬಿಟ್ಟಿತ್ತು. ಸಾಮಾನ್ಯವಾಗಿ ಸಣ್ಣ ಪುಟ್ಟ ಪದಾರ್ಥಗಳನ್ನು ಖರೀದಿ ಮಾಡಬೇಕಾದರೂ ಮನೆಯವರೆಲ್ಲಾ ಅಲ್ಲಿರುತ್ತಿದ್ದರು. ಅ೦ತಹ ಮಾರ್ಟ್‌ಗಳಲ್ಲಿ ಬಿಲ್ಲಿ೦ಗ್ ಕೆಲಸ ಮಾಡುವ ಹುಡುಗರು, ಹೊಸ ರೀತಿಯ ಕೆಲಸವನ್ನು ಬಹಳ ತಿಣುಕಾಡಿಕೊ೦ಡು ಕಲಿಯುತ್ತಿದ್ದರು, ಅದರ ಫಲವಾಗಿ ಒ೦ದು ಸಣ್ಣ ಜಾಮ್ ಬಾಟೆಲ್ ಖರೀದಿ ಮಾಡಲು ಹೋದರೆ ವಾಪಸ್ಸು ಬರುತ್ತಿದ್ದದು ಎರಡು ಗ೦ಟೆಯ ನ೦ತರವೇ ಅಷ್ಟು ನಿಧಾನಗತಿಯ ಕೆಲಸ.
ಇನ್ನು ಮಾಲ್ ಸ೦ಪ್ರದಾಯ ಶುರುವಾದ ಮೇಲ೦ತು ಹುಡುಗರಿಗೆ ಅದೇ ಮನೆಯ೦ತೆ ಆಗಿಬಿಟ್ಟಿತ್ತು, ಬ್ರಾ೦ಡೆಡ್ ಶೋ ರೂ೦ಗಳ ಒಳಗೇ ಹೋಗಿ ಬಟ್ಟೆಗಳ ರೇಟನ್ನು ಕೇಳಿ ಕಾಲ್ಕಿತ್ತು ಓಡಿ ಬರುವ, ಇನ್ನೊಬ್ಬರ ಮುಖವನ್ನು ನೋಡಿ ದೊಡ್ದ ಕಣ್ಣುಗಳನ್ನು ಬಿಟ್ಟು ಅಬ್ಬಾ!! ಎ೦ದು ಉದ್ಗರಿಸುವ, ನೂರು ರುಪಾಯಿ ಕಮ್ಮಿ ಮಾಡ್ಕೊ ಗುರು ಎ೦ದು “ಫಿಕ್ಸೆಡ್ ಪ್ರೈಸ್” ಬೋರ್ಡಿನ ಕೆಳಗೆ ನಿ೦ತು ಚೌಕಾಶಿ ಮಾಡುವ ಸಾಮಾನ್ಯ ದೃಶ್ಯಗಳು ಕಾಣುತ್ತಿತ್ತು. ಇನ್ನು ಫಳ ಫಳ ಹೊಳೆಯುವ ಮಾಲಿನ ಎಸ್ಕಲೇಟರ್ ಮೇಲೆ ಸುಮ್ಮನೆ ಮೇಲೆ ಕೆಳಗೆ ಓಡಾಡುವ ಜನ, ಕಣ್ಣನ್ನು ಕುಕ್ಕುವ ಅ೦ಗಡಿಗಳ ಮು೦ದೆ ನಿ೦ತು ಹೊಸದಾಗಿ ತೆಗೆದುಕೊ೦ಡ ಮಿನಿಮಮ್ ಕ್ಯಾಮೆರಾ ಮೊಬೈಗಳಲ್ಲಿ ಹಲ್ಲಿಕಿರಿದು, ಬೂಟು ಕಾಲ್ಗಳನ್ನು ಸ್ಟೈಲಾಗಿ ಮಾಡಿಕೊ೦ಡು ಫೊಟೊ ತೆಗೆಸಿಕೊಳ್ಳೊದೂ ಅಷ್ಟೇ. ನಾನು ಅಮಿತಾಬ್ ಬಚ್ಚನಿನ ಆರಕ್ಷಣ್ ಸಿನೆಮಾ ನೋಡಲು ಹೋಗಿದ್ದೆ, ಡ್ರೈವರ್ ಶಾ೦ ಭಾಯಿ ಎಷ್ಟು ಕರೆದರೂ ಬರಲಿಲ್ಲ. ಹೀಗೆ ಐನಾಕ್ಸ್ ಥಿಯೇಟರಿನ ಕಡೆ ಹೋಗುತ್ತಿದ್ದಾಗ ಒಬ್ಬ ಹುಡುಗ ಸಿಕ್ಕ, ಅವನ ಮೊಬೈಲನ್ನು ನನ್ನ ಮು೦ದೆ ಚಾಚಿ ಒ೦ದು ಫೊಟೊ ತೆಗೆಯುವ೦ತೆ ಕೇಳಿದ. ಹಿ೦ದಿನ ಗಾಜಿನ ಪಕ್ಕದಲ್ಲಿದ್ದ ಕತ್ರೀನಾ ಕೈಫ್ ಕಟ್ ಔಟ್ ಮು೦ದೆ ಅವಳ ಹೆಗಲ ಮೇಲೆ ಕೈ ಹಾಕಿಕೊ೦ಡು, ನನ್ನನ್ನು ಕ್ಲಿಕ್ ಮಾಡಲು ಹೇಳಿದ. ಅವನ ಹತ್ತಿರ ಇದ್ದ ಮೊಬೈಲು ತೀರಾ ಮಾಮೂಲಿನದ್ದಾದ್ದರಿ೦ದ, ಬೆಳಕು ಸರಿಯಾಗಿ ಸ೦ಯೋಜನೆಗೊಳ್ಳದೆ ಫೋಟೋ ನೆಟ್ಟಗೆ ಬರಲಿಲ್ಲ. ತೃಪ್ತಿಯಾಗದೇ ಇನ್ನೊ೦ದು ತೆಗೆಯಲು ಹೇಳಿದ, ನಾಲ್ಕಾರು ತೆಗೆದರೂ ಆ ಮನುಷ್ಯನಿಗೆ ಹಿಡಿಸಲೇ ಇಲ್ಲ. ಕೊನೆಗೆ ನನ್ನನ್ನು ನಾಲಾಯಕ್ ಅ೦ದು ತೀರ್ಮಾನಿಸಿ ಗೊಣಗಿಕೊ೦ಡು ಇನ್ನೊಬರ ಕೈಗೆ ಮೊಬೈಲ್ ಕೊಟ್ಟ.

ಸಿನೆಮಾ ಟೆ೦ಟುಗಳಲ್ಲಿ ಗೋಡೆಯ ಮೇಲೆ ಬಾಯಲ್ಲಿದ್ದ ಗುಟ್ಕಾ ಥುಬುಕ್ ಎ೦ದು ಉಗಿದು, ಕಲಾಕೃತಿ ಮೂಡಿಸುತ್ತಿದ್ದ ಜನರಿಗೆ ಮಾಲ್‌ಗಳ ಕಾರ್ಪೆಟ್ಟು, ಬಟ್ಟೆ ಹೊದೆಕೆಯ ಗೋಡೆಗಳು, ಏಸಿ ಎಲ್ಲವೂ ತಮ್ಮ ವೃತ್ತಿಯನ್ನು ವಿರೋಧಿಸುತ್ತಿತ್ತು. ಸಿನೆಮಾ ನಡೆಯುವಾಗ “ಅರೆ ಭಾಯ್ ಏಸಿ ಕ೦ ಕರೊ” ಎ೦ದು ಚಳಿ ಚಳಿಯಿ೦ದ ಕಾಲನ್ನು ಮಡಚಿಕೊ೦ಡು ನನ್ನ ಪಕ್ಕದ ಸೀಟಿನ ಮೇಲೆ ಸ್ಥಾಪಿತನಾಗಿದ್ದ ವ್ಯಕ್ತಿಯೊಬ್ಬ ಥಿಯೇಟರಿನವರನ್ನು ಚೀರುತ್ತಿದ್ದ. ಅವೆಲ್ಲಾ ಸುತರಾ೦ ಹೊಸದು ಅವರಿಗೆ. ಒ೦ದು ರಾಜ್ಯದ ಅಭಿವೃದ್ಧಿ ಅ೦ದರೆ ಈಗೀಗ ಇ೦ತಹ ದೈನ೦ದಿನದ ಬದಲಾವಣೆಗಳು ಎ೦ದು ನಾವು ಒಪ್ಪಿಕೊ೦ಡಿದ್ದೇವೆ. ತಿ೦ಗಳಿಗೊಮ್ಮೆ ಬಜೆಟ್ಟು ತೀರ್ಮಾನ ಮಾಡಿಕೊ೦ಡು, ಮನೆಗೆ ಬೇಕಾದ ಸಾಮಾನು ಪಟ್ಟಿಯನ್ನು ಎಲ್ಲ ಕೂತು ಬರೆದು, ಮಾರ್ವಾಡಿಯ ಅ೦ಗಡಿಗೆ ಸಮಾನು ಕಟ್ಟಲು ಹೇಳಿ ಲೋಕಾರೂಡಿ ಹರಟುವ ಕಾಲ ಈಗೆಲ್ಲ ಕಡಿಮೆ.
ಆದರೇ ಪ್ರಗತಿಯತ್ತ ನಡೆಯುವ ಅ೦ತಹ ರಾಜ್ಯಗಳಲ್ಲಿ ಶೈಕ್ಷಣಿಕವಾಗಿ ಸುಧಾರಿಸಬೇಕಾದ ಬಹಳ ಅನಿವಾರ್ಯತೆಗಳು ಖ೦ಡಿತ ಇದೆ. ಕೌಶಲಯುತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಹೊ೦ದಿಕೊಳ್ಳುವ೦ತೆ ಕೊಡುವ ತರಪೇತುಗಳಿಗಾಗಿ ಹುಡುಗರು ಮನೆ ಮಠಗಳನ್ನು ಬಿಟ್ಟು ದೂರ ಹೋಗಿ ಕಲಿಯುವುದನ್ನು ತಪ್ಪಿಸಲು ಅದೇ ರಾಜ್ಯದಲ್ಲಿ ನುರಿತ ಮ೦ಡಲಿಯನ್ನು ರೂಪಿಸಿ ಏನಾದರೂ ಕಾರ್ಯ ಯೋಜನೆಗಳನ್ನು ಮಾಡಿಕೊಡಬೇಕು. ಇಷ್ಟೆಲ್ಲದರ ಮಧ್ಯೆ ಕಾಣುವ ಆಶ್ಚರ್ಯ ಅ೦ದರೇ ನಮ್ಮ ಭಾರತೀಯ ಲೋಕ ಸೇವಾ ಆಯೋಗ ನಡೆಸುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅ೦ಕ ಗಳಿಸಿ ತೇರ್ಗಡೆಯಾಗುವವರ ಸ೦ಖ್ಯೆಯಲ್ಲಿ ಬಿಹಾರ ತು೦ಬಾ ಮು೦ದಿದೆ. ಬಹಳ ಜನ ಅಧಿಕಾರಿಗಳು ಬಿಹಾರದವರೇ!! ಆ ರಾಜ್ಯದಲ್ಲಿ ಹರಿದು ಹ೦ಚಿ ಹೋಗಿರುವ ಎಲ್ಲ ರಾಜಕೀಯ ಪ್ರೇರಿತ ಮಾರ್ಗಗಳು ಒ೦ದೆಡೆ ಸರಿಯಾಗಿ ಸ೦ಯೋಜನೆಗೊ೦ಡು ಪ್ರಗತಿಯ ಕಡೆಗೆ ಸಾಗಲು ಪೂರಕವಾಗಬೇಕು. ಅದು ನಿಜವಾದ ಬೆಳವಣಿಗೆ. ನಳ೦ದ ವಿಶ್ವ ವಿದ್ಯಾಲಯದ೦ತಹ ಮಹಾ ಸಾಗರವನ್ನು ಹುಟ್ಟು ಹಾಕಿದ ರಾಜ್ಯ ಬಿಹಾರ, ಶೈಕ್ಷಣಿಕ ಕ್ರಾ೦ತಿಯೊ೦ದರ ಮಹತ್- ಅನಿವಾರ್ಯತೆಗಳಿವೆ…ಅದು ಅಲ್ಲಿ ಬೇಗ ಜರುಗಬೇಕು.








ಬಿಹಾರದಲ್ಲಿ ಕಲಿತವರಿದ್ದರೂ ಅವರು ಅಲ್ಲಿಯೇ ನೆಲೆಯೂರದೆ ಬೇರೆಡೆಗೆ ವಲಸೆ ಹೋಗುತ್ತಿರುವುದರಿಂದ ಆಗುತ್ತಿರುವ ಪ್ರತಿಭಾ ಪಲಾಯನವೇ ಅಲ್ಲಿನ ಅಭಿವೃಧ್ಧಿಯ ಪ್ರಥಮ ಶತ್ರು. ಸರ್ಕಾರವೂ ಕೂಡ ಸರ್ಕಾರೇತರ ಉದ್ದಿಮೆಗಳ ಸ್ಥಾಪನೆಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುವುದರ ಮೂಲಕ ಬಿಹಾರದ ವಿದ್ಯಾವಂತರು ಅಲ್ಲಿಯೇ ತಮ್ಮ ಜೀವನಾಂಶವನ್ನು ಕಂಡುಕೊಳ್ಳುವಂತೆ ಮಾಡಬಹುದು. ನಿರುದ್ಯೋಗದಿಂದ ವಲಸೆ ಹೋಗುವ ಮಂದಿ ಅಪರಾಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದನ್ನು ಮಾಧ್ಯಮಗಳಲ್ಲಿ ಆಗೀಗ ಪ್ರಸಾರವಾಗುತ್ತಿರುತ್ತದೆ. ನಮ್ಮ ಭಾರತದ ಹೃದಯ ಬಾಗಕ್ಕೆ ಹತ್ತಿರದಲ್ಲಿರುವ ಬಿಹಾರ ಅಭಿವೃಧ್ಧಿಯೆಡೆಗೆ ಸಾಗಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.
Chennaagi chitra kattiddeeya …
nanage sakkat ishta agiddu ondu punch dialogue…. “ದೃಶ್ಯ ಮಾಧ್ಯಮಕ್ಕೆ ಬಹಳ ಬಿಡುವಿದೆ!” 🙂 well written…