ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬದಲಾದಳಾ ನಮ್ಮವ್ವ!?’ – ರೇಣುಕಾ ಹೆಳವರ

ಪ್ರೀತಿ, ವಾತ್ಸಲ್ಯವೇ ಇಲ್ಲದ ಬಾಳ ಹಾದಿಯಲಿ…

ರೇಣುಕಾ ಹೆಳವರ

ಅಮ್ಮನೆಂದರೆ ನಮ್ಮನ್ನು ನವ ಮಾಸಗಳು ಹೆತ್ತು ಹೊತ್ತು ನೋವನ್ನೆಲ್ಲ ಸಹಿಸಿಕೊಂಡು ಜನ್ಮ ನೀಡುವ ಮೂರ್ತ ರೂಪ. ನಮ್ಮನ್ನು ಜೋಗುಳದಲ್ಲಿಟ್ಟು ಲಾಲಿ ಹಾಡುವ ಮೂಲಕ ಎದೆ ಹಾಲು ಕುಡಿಸಿ ಸಂತೈಸುತ್ತಾಳೆ. ಚೆಂದಿರನನ್ನು ತೋರಿಸಿ ತುತ್ತು ನೀಡುತ್ತಾಳೆ. ಚೆಂದ ಮಾಮನನ್ನು ತಂದುಕೊಂಡು ಎಂದು ಹಠ ಮಾಡಿದಾಗ ತಂದು ಕೊಡದೆ ನೂರೆಂಟು ನೆಪಗಳನ್ನು ಹೇಳಿ, ಸುಂದರ ಸೊಗಸಾದ, ನವಿರಾದ ಕಥೆಗಳಲ್ಲಿ ಮುಳುಗಿಸಿ, ತಪ್ಪು ಮಾಡಿದಾಗ ತಿದ್ದಿ ಹೇಳುತ್ತಾ, ನಮ್ಮ ಬೆಳವಣಿಗೆ ಕಂಡು ಸಂತಸಪಡುತ್ತಾಳೆ…

ಏನೆಲ್ಲ ಭರವಸೆಯ ನುಡಿಗಳು ಈ ಅಮ್ಮನ ಬಗ್ಗೆ! ನಿಜ, ಆ ಅವ್ಯಕ್ತ ಭರವಸೆಯ ವಾತ್ಸಲ್ಯದ ಪ್ರತಿರೂಪವೇ ತಾಯಿ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಈ ಅಮ್ಮ ಬದಲಾಗಿದ್ದಾಳೆ ಎನಿಸುತ್ತದೆ. ಏಕೆಂದರೆ ಹೆತ್ತ ತಾಯಿ ತನ್ನ ಹಸುಗೂಸನ್ನು ಯಾವುದೋ ಪೊದೆಯಲ್ಲಿ ಬಿಸಾಕಿ ಹೋಗುತ್ತಿದ್ದಾಳೆ. ತಾಯಿ ಅಪ್ಪುಗೆಯೊಂದು ಬಿಟ್ಟು ಜಗತ್ತಿನ ಯಾವ ಪರಿವೆಯೂ ಇರದ ಆ ಮಗು ನಾಯಿ ನರಿಗಳ ಪಾಲಾಗುತ್ತಿದೆ. ಸುತ್ತಲಿನ ಜನ ಅಪ್ಪಿತಪ್ಪಿ ಅದನ್ನು ನೋಡಿದರೆ ಅದು ಬದುಕಿ ಶಿಶುಗೃಹದಲ್ಲಿ ಬೆಳೆಯುತ್ತದೆ. ಹಾಗೆ ಬೆಳೆದ ಮಗು ಕರುಳ ಬಳ್ಳಿಯನ್ನೇ ಕಡಿದು ಬಿಸಾಡಿದ ಅಮ್ಮನ ಬಗ್ಗೆ ಯಾವ ಪ್ರೀತಿ, ಪ್ರೇಮ, ವಾತ್ಸಲ್ಯದ ಭಾವನೆ ಇಟ್ಟುಕೊಳ್ಳಲು ಸಾಧ್ಯ? ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುತ್ತಾರಲ್ಲ… ಎಷ್ಟರ ಮಟ್ಟಿಗೆ ಸತ್ಯ?

ಅಮ್ಮ ಎನ್ನುವುದು ಅದ್ಭುತವಾದ ಪದ. ಅವಳ ವರ್ಣಿಸಲು ಪದ ಪುಂಚಗಳೇ ಇಲ್ಲ. ಅವಳಿಗೂ ನಮಗೂ ಹೊಕ್ಕಳು ಬಳ್ಳಿಯ ಅವಿನಾಭಾವ ಸಂಬಂಧ. ತಾಯಿಯೇ ದೇವರು, ಅವಳು ಕರುಣೆಯ ಕಡಲು. ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು ಎನ್ನುತ್ತಾರೆ. ಆದರೆ ತಾನು ಮಾಡಿದ ತಪ್ಪಿಗೋ ಅದರ ಜನ್ಮಕ್ಕೆ ಕಾರಣೀಭೂತನಾದ ಪಾಪಿ ಅಪ್ಪ ಮಾಡಿದ ತಪ್ಪಿಗೋ ಮಗು ಜನ್ಮ ಪಡೆಯುತ್ತದೆ. ಇನ್ನೂ ಎಷ್ಟೋ ಬಾರಿ ಹೆಣ್ಣು ಮಗುವಾದರಂತೂ ಮುಗಿದೇ ಹೋಯಿತು. ತನ್ನದಲ್ಲದ ತಪ್ಪಿಗೆ ಭೂಮಿಗೆ ಬಂದ ಮೊದಲದಿನವೇ ಬೀದಿಗೆ ಬೀಳುತ್ತದೆ. ಅನಾಥವಾಗಿ ಹೀಗೆ ಬೆಳೆಯುತ್ತಿರುವ ನೂರಾರು ಮಕ್ಕಳು ಶಿಶುಗೃಹದಲ್ಲಿ ಅಮ್ಮನ ಬಗ್ಗೆ ಅದ್ಯಾವ ಪ್ರಜ್ಞೆಯಿಂದ ಬೆಳೆಯಬೇಕು? ಯಾವ ತಪ್ಪಿಗೆ ಈ ಶಿಕ್ಷೆ?

ಯಾವ ಕಾರಣಕ್ಕಾಗಿ ಅಮ್ಮ ನನ್ನನ್ನು ಬಿಟ್ಟು ಹೋಗಿದ್ದೀಯಾ? ಪ್ರತಿ ಕ್ಷಣ ಪ್ರತಿ ದಿನ ನಕ್ಕಾಗ, ಅತ್ತಾಗ ಹೊಟ್ಟೆ ಹಸಿದಾಗಲೆಲ್ಲ ನಿನ್ನ ನೆನಪು ಬರುತ್ತದೆ. ನೀ ಹೀಗೆ ಇರಬಹುದಾ? ಹಾಗೆ ಇರಬಹುದಾ ಎನ್ನುವ ಕಲ್ಪನೆ ಮಾಡಿಕೊಳ್ಳುತ್ತೇನೆ… ದಾರಿಯಲ್ಲಿ ಸಾಗುವಾಗ ಆ ಕಡೆ ಈ ಕಡೆ ರಸ್ತೆ ಮೇಲೆ ಓಡಾಡುವ ಹೆಣ್ಣು ಮಕ್ಕಳ ಗುಂಪುಗಳಲ್ಲಿ ಅವಳೇ ನನ್ನ ಅಮ್ಮ ಇರಬಹುದಾ ಎನ್ನುವ ಭರವಸೆಯ ಹುಡುಕಾಡುತ್ತೇನೆ. ನಿನ್ನ ನೆನಪಿಸಿಕೊಂಡ ದಿನಗಳೆಷ್ಟೋ. ನಿದ್ದೆ ಮಾಡದೆ ನಿನಗೋಸ್ಕರ ಕಾದ ರಾತ್ರಿಗಳೆಷ್ಟೋ ಇವೆ ಎನ್ನುವ ಮಕ್ಕಳಿಗೆ ಇನ್ನೂ ಉತ್ತರ ಮರೀಚಿಕೆಯಾಗಿದೆ ತಾಯಿಯ ವಾತ್ಸಲ್ಯ.

ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರತಿ ಪಾಣಿ, ಪಕ್ಷಿಗಳಲ್ಲೂ ತಾಯಿ ಮಕ್ಕಳ ಸಂಬಂಧವನ್ನು ನೋಡಬಹುದು. ಆದರೆ ನಾನು ಆ ಪ್ರಾಣಿ ಪಕ್ಷಿಗಳಿಗಿಂತ ಕೀಳಾದೆನಾ? ಎನ್ನುವ ತೀವ್ರವಾದ ನೋವಿನ ಹೋಯ್ದಟ ಎಷ್ಟೋ ಮಕ್ಕಳಲ್ಲಿ ಹಸಿಯಾಗಿಯೇ ಇದೆ. ಆ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಪ್ರತಿಯೊಬ್ಬ ತಾಯಿಯೂ ತಮ್ಮ ಮಕ್ಕಳಿಗೆ ಸ್ನಾನ ಮಾಡಿಸಿ, ತಲೆ ಬಾಚಿ, ಬಟ್ಟೆ ತೊಡಿಸಿ, ಕೈ ತುತ್ತು ಕೊಟ್ಟು ಪ್ರೀತಿ ಮಾಡುತ್ತಾರೆ. ಆದರೆ ಇಂಥ ಮಕ್ಕಳಲ್ಲಿ ಅದ್ಯಾವುದೂ ಇಲ್ಲ, ಅಂಥ ಮಕ್ಕಳ ಹೃದಯಾಂತರಾಳದ ನೋವು ಯಾರಿಗೆ ತಾನೆ ಅರ್ಥವಾಗಲು ಸಾಧ್ಯ?

ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಕಥೆ ಹೇಳುತ್ತಾ ಮಲಗಿಸುವ ಅಮ್ಮ ನನಗೂ ಇಲ್ಲ. ಅಮ್ಮ ಬದಲಾಗಿದ್ದಾಳಾ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡಾಗ ಹೌದು ಅಮ್ಮ ಬದಲಾಗಿದ್ದಾಳೆ ಎನ್ನದೆ ವಿಧಿಯಿಲ್ಲ. ಈ ಜಾಗತೀಕರಣದ ನಾಡಿನಲ್ಲಿ ಅಮ್ಮನೂ ಬದಲಾಗಿದ್ದಾಳೆ. ನಮ್ಮನ್ನು ಹೆರುವ ಗರ್ಭ ದುಡ್ಡಿಗೆ ಮಾರಾಟವಾಗಿ ಬಾಡಿಗೆ ತಾಯಂದಿರ ರೂಪ ಪಡೆದುಕೊಂಡಿದೆ. ತನ್ನ ಗರ್ಭವನ್ನು ಮಾರಾಟದ ವಸ್ತುವನ್ನಾಗಿ ಮಾಡಿಕೊಂಡು ವ್ಯಾಪಾರಕ್ಕೆ ಇಳಿದಿದ್ದಾಳೆ ಅವ್ವ. ಸಮಾಜಕ್ಕೆ ಹೆದರಿ ಹಸುಗೂಸುಗಳನ್ನು ಬಿಸಾಡುವುದು ಒಂದೆಡೆಯಾದರೆ, ಕಮಿಟ್‌ಮೆಂಟ್‌ಗಳಿಗಾಗಿ ಒಂಬತ್ತು ತಿಂಗಳು ಹೆತ್ತು ಹೊತ್ತು ಕಮಿಟ್‌ಮೆಂಟ್ ಮುಗಿದ ಮೇಲೆ ತನ್ನ ದಾರಿ ತನಗೆ ಎನ್ನುವ ಕವಲು ಹಾದಿಯಲ್ಲಿದ್ದಾಳೆ ನನ್ನವ್ವ. ಇದೆಲ್ಲದರ ನಡುವೆ ಹೆತ್ತ ಮಕ್ಕಳನ್ನು ಮಾರುವ, ಮೊಲೆ ಹಾಲು ಕುಡಿಸದೆ ಸಾಯಿಸುವ, ಹರೆಯದ ಹೆಣ್ಣು ಮಕ್ಕಳನ್ನು ಬೇರೆ ರಾಜ್ಯಕ್ಕೆ ಮಾರುವ, ವೇಶ್ಯಾ ವೃತ್ತಿಗೆ ದೂಡುವ, ತಾನೇ ಹೆತ್ತ ಮಕ್ಕಳಿಗೆ ವಿಷ ಉಣ್ಣಿಸುವ ತಾಯಿಯಾಗಿಯೂ ಅವ್ವ ಮಾರ್ಪಾಡಾಗಿದ್ದಾಳೆ.

ಕಾಲ ಬದಲಾಗುತ್ತಿದೆ. ಎಲ್ಲವೂ ಅದರ ಜತೆ ಬದಲಾಗುತ್ತಿವೆ. ಮತ್ತೆ ಅದೇ ಅಮ್ಮಂದಿರ ದಿನ ಎದುರಾಗಿದೆ. ಆದರೆ ಅವ್ವ ಬದಲಾಗುವುದಿಲ್ಲ ಎನ್ನುವ ನಂಬಿಕೆ ಕೂಡ ಬದಲಾಗಿದೆ. ಕಾಲನ ಕರೆಗೆ ಓಗೊಟ್ಟ ಅವ್ವ ಕೂಡ ಬದಲಾಗುತ್ತಿದ್ದಾಳೆ. ಹಾಗೆ ಬದಲಾಗುತ್ತಲೇ ಅಂಥಕ್ಕರಣವನ್ನು ಹನನ ಮಾಡುತ್ತಿದ್ದಾಳೆ. ಹಸುಳೆಗಳ ಹೃದಯದಲ್ಲಿ ಪ್ರೀತಿ, ವಾತ್ಸಲ್ಯವನ್ನು ತುಂಬಬೇಕಿದ್ದ ಅವಳು ಬರೀ ಖಾಲಿ ಹೃದಯ ಬಿಡುತ್ತಿದ್ದಾಳೆ. ಹೀಗಾದರೆ ಮುಂದೆ ನಮ್ಮಂಥ ಮಕ್ಕಳ ಗತಿಯೇನು? ಛೇ… ಅಮ್ಮ ಬದಲಾಗದಿರಲಿ, ಅಮ್ಮನ ಪ್ರೀತಿ ವಾತ್ಸಲ್ಯ ಎಲ್ಲ ಮಕ್ಕಳಿಗೆ ಸಿಗುವಂತಾಗಲಿ.

 

‍ಲೇಖಕರು avadhi

12 May, 2013

5 Comments

  1. ಜಿ.ಎನ್ ನಾಗರಾಜ್

    ಅಮ್ಮ, ಮಾನವ ಜೀವಿಗಳಲ್ಲಿ ಗರಿಷ್ಠ ಮಟ್ಟದ ಮಾನವೀಯತೆಯನ್ನು ಮೈಗೂಡಿಸಿಕೊಂಡ ಮಾನವಿ.ಆದೇ ಸಮಯದಲ್ಲಿ ಆಕೆಯೂ ಒಬ್ಬ ಜೀವಿ-ತನ್ನದೇ ಬದುಕನ್ನು ಬದುಕಬೇಕಾದ ವ್ಯಕ್ತಿ ಇತರೆಲ್ಲ ವ್ಯಕ್ತಿಗಳಂತೆ ತನ್ನದೇ ಸ್ವಾರ್ಥದೊಂದಿಗೆ.ಸಮಾಜ ಬದಲಾದಂತೆ, ಸಮಾಜದಲ್ಲಿ ವಿವಿಧ ಸ್ತರಗಳಿಗೆ ಅನುಗುಣವವಾಗಿ ಅಮ್ಮ ಬದಲಾಗಿದ್ದಾಳೆ,ಬದಲಾಗುತ್ತಲೇ ಇರುತ್ತಾಳೆ. ಇತರ ಎಲ್ಲ ವ್ಯಕ್ತಿಗಳಿಗೂ ಇರುವ ಬದಲಾಗುವ ಒತ್ತಡ ಅಮ್ಮನ ಮೇಲೂ ಇದೆ.ಆದರೆ ಬದಲಾಗುವ ಸ್ವಾತಂತ್ರ್ಯ ಮಾತ್ರ ಬಹಳ ಮಿತಿಗೊಳಿಸಲ್ಪಟ್ಟಿದೆ. ಅಮ್ಮ ಅಮ್ಮನಾಗಿಲ್ಲದೇ ಹೋದರೆ ಅದರಲ್ಲಿ ಅವಳ ಸಾಮಾಜಿಕ ಪರಿಸ್ಥಿತಿಯ ಒತ್ತಡವೇ ಪ್ರಧಾನ ಕಾರಣವಾಗಿರುತ್ತದೆ. ಅವಳ ಸ್ವಾರ್ಥದ ಪಾತ್ರವೂ ಇರುತ್ತದೆ ಸೀಮಿತ ಸಂದರ್ಭಗಳಲ್ಲಿ. ಅಮ್ಮನನ್ನು ಅಮ್ಮನಾಗಲು ಬಿಡದ ಸಾಮಾಜಿಕ ಪರಿಸ್ಥಿತಿಯನ್ನು ನಾವೆಲ್ಲರೂ ಬದಲಾಯಿಸಬಾಕಾಗಿದೆ.

  2. ರಮೇಶ್ ಹಿರೇಜಂಬೂರು

    ಅವ್ವ ಮಕ್ಕಳ ವಿಚಾರದಲ್ಲಿ ಯಾವತ್ತೂ ಬದಲಾಗುವುದಿಲ್ಲ. ಅವಳಿಗೇನಿದ್ದರೂ ತನಗಿಂತ ತನ್ನ ಮಕ್ಕಳ ಬದುಕೇ ಪ್ರಮುಖ ಎನಿಸಿಕೊಳ್ಳುತ್ತದೆ. ಅಂಥ ತ್ಯಾಗಮಯದ ಹೃದಯ ಅದು. ಆದರೆ ಕಾಲ ಬದಲಾದಂತೆ ಅವಳ ಅಂತಕ್ಕರಣ, ಭಾವನೆಗಳು, ಪ್ರೀತಿ, ವಾತ್ಸಲ್ಯವೂ ಪರಿಸ್ಥಿತಿ ಹಾಗೂ ಜಾಗತೀಕರಣದ ಸೆಳೆತದಲ್ಲಿ ಕೊಚ್ಚಿ ಹೋಗುತ್ತಿರುವುದು ನಿಜ. ರೇಣುಕಾ ಹೆಳವರ ಬರೆದ ಲೇಖನ ತುಂಬಾ ಚೆನ್ನಾಗಿದೆ. ಅವರು ಹೇಳಿದಂತೆ ಅವ್ವ ಬದಲಾಗದಿರಲಿ…
    -ರಮೇಶ್ ಹಿರೇಜಂಬೂರು

  3. rashmi

    nija anstide nimma maatugalu….. simply superb….

  4. nagraj harapanahalli

    ಜಾಗತೀಕರಣದ ಸಂದರ್ಭದಲ್ಲಿ ಅವ್ವನ ಬದಲಾದ ರೂಪ ವಿವರಿಸುವ ಲೇಖನ .ಚೆನ್ನಾಗಿ ಬಂದಿದೆ.

  5. Renuka

    Thanku

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading