![]()
ನಿನ್ನೆ ನಮಗೆ ಕಾದು ಕೂತಿದ್ದ ಟಪಾಲುಗಳಲ್ಲಿ ಬಣ್ಣಗಳೇ ತುಂಬಿದ್ದ ಟಪಾಲೂ ಒಂದಿತ್ತು. ಓಹ್ ಅನ್ನಿಸಿತು. ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣ ಅನ್ನಿಸಿತು. ಇಲ್ಲಿದೆ ಆ ಬಣ್ಣದ ಹುಡಿ.
*
ಬ್ರೌಸ್ ಮಾಡ್ತಿದ್ದಾಗ ಅಕಸ್ಮಾತ್ತಾಗಿ ಅವಧಿ ನೋಡಿದೆ. ಜರ್ಮನಿಯ ಛಾಯಾಗ್ರಹಕ ಲಿಯೋ ರೆಗ್ನಿಯರ್ ಸೆರೆಹಿಡಿದ ಕಪ್ಪು ಬಿಳುಪು ಚಿತ್ರಗಳನ್ನು ಅವಧಿಯಲ್ಲಿ ನೋಡಿ ಆನಂದಪಟ್ಟೆ. ತಮ್ಮ ಕ್ಷಣಗಳಲ್ಲಿ ವಿಶಿಷ್ಟ ಕಲಾತ್ಮಕತೆಯನ್ನು ಧರಿಸಿಕೊಂಡು ಕಂಡವರ ಮನಸ್ಸಿಗೆ ನಿಲುಕುವ ಇಂಥ ಚಿತ್ರಗಳ ಹೆಚ್ಚುಗಾರಿಕೆಯೆಂದರೆ, ಆ ಛಾಯಗ್ರಾಹಕನ ಹೆಸರಿನ ಹಂಗಿಲ್ಲದೆಯೂ ಇವು ನಮ್ಮೊಳಗೆ ಇಳಿಯುತ್ತವೆ ಎಂಬುದು. ನೀವೆ ಹೇಳಿದಂತೆ ಬಣ್ಣಗಳ ಮಾಯೆಯ ಮಧ್ಯೆಯೂ ಇವು ತಮ್ಮದೇ ಆದ ಜಾದೂ ಮಾಡಬಲ್ಲ ಶಕ್ತಿ ಹೊಂದಿವೆ.
![]()
ನೀವು ಪ್ರಕಟಿಸಿದ ಚಿತ್ರಗಳ ಬಗ್ಗೆಯೇ ಯೋಚಿಸುತ್ತ, ರೆಗ್ನಿಯರನ ಬಗ್ಗೆ ಮೋಹಪಡುತ್ತ ಇರಬೇಕಾದರೇ ಒಂದಿಷ್ಟು ಬಣ್ಣದ ಚಿತ್ರಗಳು ಸಿಕ್ಕಿದವು. ಅರೆ, ಬಣ್ಣದ ಆಡಂಬರವನ್ನೂ ಮೀರಿದ ಮತ್ತೇನೋ ಇವುಗಳಲ್ಲಿದೆಯಲ್ಲ ಎನ್ನಿಸಿತು. ಅಷ್ಟಕ್ಕೂ ಸೂರ್ಯಕಿರಣ ಮತ್ತು ನೀರ ಬಿಂದುವಿನ ಒಂದು ಕೋನದಲ್ಲಿನ ಸಂಗಮದಲ್ಲಿ ಸಿಗುವ ಕಾಮನಬಿಲ್ಲಿಗೆ ಮನಸೂರೆಹೋಗುವ ನನ್ನಂಥವಳನ್ನು ಇವು ರೆಗ್ನಿಯರನ ನಿರಾಭರಣೆಯರಿಗಿಂತ ತುಸು ಜಾಸ್ತಿಯೇ ಕಾಡುತ್ತವೆಯೇನೋ ಎಂದುಕೊಂಡೆ. ನಿಮಗೂ ಇಷ್ಟವಾದಾವು ಎಂದು ಕಳುಹಿಸಿಕೊಡುತ್ತಿದ್ದೇನೆ.
ಮಾಧವಿ ಭಟ್





0 Comments